Tag: Pregnant

  • ಮಂಡ್ಯ: ವೈದ್ಯರು, ದಾದಿಯರಿಲ್ಲದೇ ಆಸ್ಪತ್ರೆ ಮುಂದೆಯೇ ಕಣ್ಣೀರು ಹಾಕುತ್ತಾ ನರಳಾಡಿದ ತುಂಬುಗರ್ಭಿಣಿ !

    ಮಂಡ್ಯ: ವೈದ್ಯರು, ದಾದಿಯರಿಲ್ಲದೇ ಆಸ್ಪತ್ರೆ ಮುಂದೆಯೇ ಕಣ್ಣೀರು ಹಾಕುತ್ತಾ ನರಳಾಡಿದ ತುಂಬುಗರ್ಭಿಣಿ !

    ಮಂಡ್ಯ: ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರಿಲ್ಲದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಅರ್ಧಗಂಟೆಗೂ ಹೆಚ್ಚು ಕಾಲ ಆಸ್ಪತ್ರೆ ಮುಂದೆ ನರಳಾಡಿದ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಳವಳ್ಳಿ ತಾಲೂಕಿನ, ಬೆಳಕವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಂಭಾಗ ಚಿಕ್ಕಗಾಣಿಗರ ಬೀದಿ ನಿವಾಸಿ ಮಂಜು ಎಂಬವರ ಪತ್ನಿ 22 ವರ್ಷದ ದಿವ್ಯ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರಾಗಲೀ, ದಾದಿಯರಾಗಲೀ ಇರದ ಕಾರಣ ಗರ್ಭಿಣಿ ನೋವಿನಿಂದ ಕಣ್ಣೀರು ಹಾಕುತ್ತಾ ನರಳಾಡಿದ್ದಾರೆ.

    ಗರ್ಭಿಣಿಯ ಸಂಕಟ ನೋಡಿ ಜೊತೆಯಲ್ಲಿದ್ದ ಸಂಬಂಧಿಕರು ಹಾಗೂ ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ. ತಕ್ಷಣ ಆಂಬುಲೆನ್ಸ್ ವ್ಯವಸ್ಥೆಯೂ ಆಗಿಲ್ಲ. ಕೊನೆಗೆ ಮಳವಳ್ಳಿಯಿಂದ ಆಂಬುಲೆನ್ಸ್ ಕರೆಸಿ ಗರ್ಭಿಣಿಯನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗರ್ಭಿಣಿ ನರಳಾಡುವ ದೃಶ್ಯವನ್ನ ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಬೆಳಕವಾಡಿ ಪ್ರಾಥಮಿಕ ಆರೋಗ್ಯಕೇಂದ್ರದ ನೂತನ ಕಟ್ಟಡ ಈಗಾಗಲೇ ಉದ್ಘಾಟನೆಯಾಗಿದ್ದರೂ ತಾತ್ಕಾಲಿಕವಾಗಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸಕಾಲಕ್ಕೆ ವೈದ್ಯರು, ದಾದಿಯರು ಸಿಗದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಸದ್ಯ ದಿವ್ಯ ಅವರು ಮಳವಳ್ಳಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

    https://youtu.be/hRtYZaDX28s

  • ಟಾಯ್ಲೆಟ್‍ನಲ್ಲಿ ಗರ್ಭಿಣಿಯರಿಗೂ ನೀರಿಲ್ಲ-ಗಬ್ಬೆದ್ದು ನಾರುತ್ತಿದ್ದೆ ಇಂದಿರಾ ನಗರದ ಇಎಸ್‍ಐ ಆಸ್ಪತ್ರೆ

    ಟಾಯ್ಲೆಟ್‍ನಲ್ಲಿ ಗರ್ಭಿಣಿಯರಿಗೂ ನೀರಿಲ್ಲ-ಗಬ್ಬೆದ್ದು ನಾರುತ್ತಿದ್ದೆ ಇಂದಿರಾ ನಗರದ ಇಎಸ್‍ಐ ಆಸ್ಪತ್ರೆ

    ಬೆಂಗಳೂರು: ಕಾಯಿಲೆ ವಾಸಿಯಾಗಲಿ ಎಂದು ಜನ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಈ ಆಸ್ಪತ್ರೆಗೆ ಹೋದರೆ ರೋಗ ವಾಸಿಯಾಗೋದು ಇರಲಿ ಇನ್ನೂ ಹೊಸ ರೋಗ ಬರೋದು ಗ್ಯಾರೆಂಟಿ.

    ಹೌದು. ಬೆಂಗಳೂರಿನ ಇಂದಿರಾ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಕಳೆದ ರಾತ್ರಿಯಿಂದ ಬಾತ್ ರೂಂಗಳಲ್ಲಿ ನೀರು ಬರುತ್ತಿಲ್ಲ ಅಂತಾ ಪಬ್ಲಿಕ್ ಟಿವಿಗೆ ಕರೆ ಬಂದಿತ್ತು. ಯಾಕೆ ಅಂತಾ ಚೆಕ್ ಮಾಡಲು ಹೋದ ಪಬ್ಲಿಕ್ ಟಿವಿಯ ಪ್ರತಿನಿಧಿಯನ್ನು ಅಲ್ಲಿನ ಸೆಕ್ಯುರಿಟಿ ಆಸ್ಪತ್ರೆಯ ಒಳಗಡೆ ಹೋಗಲು ಬಿಡದೆ ಪರ್ಮಿಶನ್ ತಗೆದುಕೊಂಡು ಬನ್ನಿ ಅಂತಾ ಆವಾಜ್ ಹಾಕಿದ್ದಾನೆ. ಕೊನೆಗೆ ಒಳಗೆ ಹೋಗಿ ನೋಡಿದಾಗ ಅಲ್ಲಿನ ನಿಜ ಬಣ್ಣ ಹೊರಬಂದಿದೆ.

    ಇಎಸ್‍ಐ ಆಸ್ಪತ್ರೆಗೆ ಹೆರಿಗೆಗೆ ಬಂದಿರೋ ಮಹಿಳೆಯರು ಅಕ್ಷರಶಃ ನರಕವನ್ನು ಅನುಭವಿಸಿದ್ದಾರೆ. ಯಾಕೆಂದರೆ ಶನಿವಾರ ರಾತ್ರಿಯಿಂದ ಆಸ್ಪತ್ರೆಯ ಶೌಚಾಲಯಗಳಲ್ಲಿ ನೀರು ಬರುತ್ತಿಲ್ಲ. ನೀರಿಲ್ಲದೆ ಗರ್ಭಿಣಿಯರು ಮೂತ್ರ ವಿಸರ್ಜನೆ ಮಾಡದೆ ನರಕ ಅನುಭವಿಸಿದ್ದಾರೆ. ಜೊತೆಗೆ ಟಾಯ್ಲೆಟ್ ನಿಂದ ಬರುತ್ತಿರುವ ದುರ್ನಾತದಿಂದ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ.

    ಯಾಕೆ ಅಂತಾ ಅಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಬಿಬಿಎಂಪಿ ಅವರು ನೀರು ಬಿಟ್ಟಿಲ್ಲ ನಾವೇನು ಮಾಡೋದು ಅಂತಾರೆ. ನಿಮ್ಮ ಮನೆಯಲ್ಲೂ ಹಿಂಗ್ ಆದರೆ ಏನು ಮಾಡುತ್ತಿರಾ? ಅಂದರೆ ನಮ್ಮ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಅಂತಾ ಹೇಳಿ ಜಾರಿಕೊಳ್ಳುತ್ತಾರೆ.

    ಇನ್ನು ಡ್ಯೂಟಿ ಡಾಕ್ಟರ್ಸ್ ಕೇಳಿದರೆ ಯಾವುದೋ ಪೈಪ್ ಒಡೆದಿದೆ. ಯಾವುದು ಅಂತಾ ಗೊತ್ತಾಗುತ್ತಿಲ್ಲ. ಈಗ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಾರೆ.

    ಒಟ್ಟಿನಲ್ಲಿ ಆರೋಗ್ಯದಲ್ಲಿ ಏನಾದರು ಸಮಸ್ಯೆ ಆದರೆ ಒಂದೇ ಸರಿ ದುಡ್ಡು ಹೊಂದಿಸೋದು ಕಷ್ಟ ಆಗುತ್ತೆ ಅಂತಾ ಪ್ರತಿ ತಿಂಗಳ ಸಂಬಳದಲ್ಲಿ ಕಾರ್ಮಿಕರು ಇಎಸ್‍ಐ ಕಟ್ಟಿ ಈಗ ಉಪಯೋಗಕ್ಕೆ ಬರುತ್ತದೆ ಅಂತಾ ಆಸ್ಪತ್ರೆಗೆ ಹೋದರೆ ಅಲ್ಲಿನ ಸ್ಥಿತಿ ಹೀಗಿದೆ.

  • ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆಯೆಂದು ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ಕೊಟ್ರು

    ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆಯೆಂದು ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ಕೊಟ್ರು

    ತುಮಕೂರು: ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆ ಅಂತಾ ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ನೀಡಿ ಆಕೆಯನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    2015ರ ಡಿಸೆಂಬರ್ ತಿಂಗಳಿನಲ್ಲಿ ಗರ್ಭಿಣಯೊಬ್ಬರು ಆರೋಗ್ಯ ತಪಾಸಣೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆಕೆ ಗರ್ಭಿಣಿಯಾದ ಕಾರಣದಿಂದ ವೈದ್ಯರು ಎಚ್‍ಐವಿ ಪರೀಕ್ಷೆಯನ್ನು ಮಾಡಿದ್ದರು. ಬಳಿಕ ರಿಸಲ್ಟ್ ಪಾಸಿಟೀವ್ ಬಂದಿದೆ. ನಿಮಗೆ ಏಡ್ಸ್ ಕಾಯಿಲೆ ಬಂದಿದೆ. ಹಾಗಾಗಿ ಸೂಕ್ತ ಔಷಧಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

    ಅದರಂತೆ ಮಹಿಳೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ನಿರಂತರವಾಗಿ ಔಷಧಿಯನ್ನೂ ತೆಗೆದುಕೊಂಡಿದ್ದಾರೆ. ಆದರೆ ಏಡ್ಸ್ ಎಂಬ ಭಯಾನಕ ಕಾಯಿಲೆಗೆ ತುತ್ತಾದೆನಲ್ಲಾ ಎಂಬ ಕೊರಗಿನಲ್ಲಿ ತನ್ನ ಚೊಚ್ಚಲ ಮಗುವನ್ನು ಕಳೆದುಕೊಂಡಿದ್ದಾರೆ.

    ಇದೀಗ 2 ನೇ ಮಗುವಿಗೆ ಆಕೆ ಗರ್ಭಿಣಿಯಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಎಚ್‍ಐವಿ ಪರೀಕ್ಷೆ ಮಾಡಿಸಿದ್ದಾರೆ. ಆಶ್ಚರ್ಯ ಎಂಬಂತೆ ಆಕೆಗೆ ಎಚ್‍ಐವಿ ನೆಗೆಟೀವ್ ರಿಸಲ್ಟ್ ಬಂದಿದೆ. ಅಂದರೆ ಆಕೆಗೆ ಏಡ್ಸ್ ಕಾಯಿಲೆ ಇಲ್ಲ ಅಂತಾ ವೈದ್ಯರು ದೃಢಪಡಿಸಿದ್ದಾರೆ.

    ಇದರಿಂದ ವಿಚಲಿತರಾದ ಮಹಿಳೆ ಮೂರ್ನಾಲ್ಕು ಖಾಸಗಿ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯಲ್ಲೂ ಮತ್ತೊಮ್ಮೆ ಪರೀಕ್ಷೆ ಮಾಡಿಸಿದ್ದಾರೆ. ಎಲ್ಲಾ ಕಡೆಯೂ ಆಕೆಗೆ ಏಡ್ಸ್ ಕಾಯಿಲೆ ಇಲ್ಲಾ ಎಂಬ ರಿಸಲ್ಟ್ ಬಂದಿದೆ. ಆಗಲೇ ಆಕೆಗೂ ಗೊತ್ತಾಗಿರೋದು ತನಗೆ ಎಚ್‍ಐವಿ ಇಲ್ಲ ಎಂಬ ಸತ್ಯ. ಆದರೆ ಶಿರಾದ ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ತಪ್ಪು ಫಲಿತಾಂಶ ಈ ಮಹಿಳೆಯ ಜೀವನದ ಖುಷಿಯ ಕ್ಷಣಗಳನ್ನು ಬಲಿತೆಗೆದುಕೊಂಡಿದೆ.

  • ಮೊಬೈಲ್ ಟಾರ್ಚ್ ಲೈಟ್‍ನಲ್ಲೇ ಚಿಕಿತ್ಸೆ- ಗರ್ಭಿಣಿಯರ ಪಾಲಿಗೆ ನರಕವಾದ ಆಸ್ಪತ್ರೆ

    ಮೊಬೈಲ್ ಟಾರ್ಚ್ ಲೈಟ್‍ನಲ್ಲೇ ಚಿಕಿತ್ಸೆ- ಗರ್ಭಿಣಿಯರ ಪಾಲಿಗೆ ನರಕವಾದ ಆಸ್ಪತ್ರೆ

    ದಾವಣಗೆರೆ: ಜಿಲ್ಲೆಯ ಇಎಸ್‍ಐ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಅವ್ಯವಸ್ಥೆಗಳ ಆಗರವಾದ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳು ಇಲ್ಲ.

    ಮಂಗಳವಾರ ಸಂಜೆಯಿಂದ ಅಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿತ್ತು. ಅದರಲ್ಲೂ ಹೆರಿಗೆ ಮಾಡಿಸಲು ದಾಖಲಾಗಿದ್ದ ಗರ್ಭಿಣಿಯರು ನಾವು ಆಸ್ಪತ್ರೆಯಲ್ಲಿದ್ದೇವೋ ಇಲ್ಲ ನರಕದಲ್ಲಿ ಇದ್ದೇವೋ ಎನ್ನುವಂತೆ ಭಾಸವಾಗ್ತಿದೆ ಎನ್ನುತ್ತಿದ್ರು.

    ಇದ್ರಿಂದ ಬೇಸತ್ತ ಕೆಲವು ಗರ್ಭಿಣಿಯರು ಬೇರೆ ಆಸ್ಪತ್ರೆಗೆ ಹೋದ್ರೆ, ಇನ್ನುಳಿದ ಕೆಲವು ಬಡ ಮಹಿಳೆಯರು ಕತ್ತಲಿನಲ್ಲೇ ಕೂರುವಂತಾಗಿದೆ.

    ವಿಚಿತ್ರ ಅಂದ್ರೆ ವೈದ್ಯರು ಹಾಗೂ ಅಸ್ಪತ್ರೆ ಸಿಬ್ಬಂದಿಗಳು ಮೊಬೈಲ್ ಲೈಟ್ ಹಾಗೂ ಟಾರ್ಚ್ ಹಿಡಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಕಂಡುಬಂತು. ಅಸ್ಪತ್ರೆಯ ಪಕ್ಕದಲ್ಲಿರುವ ಕ್ವಾಟ್ರಸ್‍ನಲ್ಲಿ ದಿನದ 24 ಗಂಟೆ ಕರೆಂಟ್ ಇರುತ್ತೆ. ಆದ್ರೆ ಅಸ್ಪತ್ರೆಯಲ್ಲಿ ಮಾತ್ರ ಕರೆಂಟ್ ಇರೋದಿಲ್ಲ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎನ್ನುತ್ತಾರೆ ರೋಗಿಗಳು.

  • ಬಸ್ ನಲ್ಲಿ ಗರ್ಭಿಣಿಯ ಪರಿಚಯ ಮಾಡ್ಕೊಂಡು ಬ್ಯಾಗ್ ಕದ್ದು ಹಣ ದೋಚಿದ್ಳು!

    ಬಸ್ ನಲ್ಲಿ ಗರ್ಭಿಣಿಯ ಪರಿಚಯ ಮಾಡ್ಕೊಂಡು ಬ್ಯಾಗ್ ಕದ್ದು ಹಣ ದೋಚಿದ್ಳು!

    ಬೆಂಗಳೂರು: ಗಮನ ಬೇರೆಡೆಗೆ ಸೆಳೆದು ಗರ್ಭಿಣಿಯ ಪರ್ಸನ್ನು ಕದ್ದು ಅದರಲ್ಲಿದ್ದ ಡೆಬಿಟ್ ಕಾರ್ಡ್‍ನ ಸಂಪೂರ್ಣ ಹಣ ದೋಚಿದ ಘಟನೆ ಕಳೆದ ಕೆಆರ್ ಪುರಂನಲ್ಲಿ ನಡೆದಿದೆ.

    ಬುಧವಾರ ಸೆಪ್ಟಂಬರ್ 6ರಂದು ಲಕ್ಷ್ಮಿ ಪ್ರಿಯಾ ಎಂಬವರು ಬಸ್ ನಲ್ಲಿ ಸಂಜೆ 6 ಗಂಟೆಗೆ ಭಟರಹಳ್ಳಿಯಿಂದ ಕೆಆರ್‍ಪುರಂಗೆ ತೆರಳುತಿದ್ದರು. ಈ ವೇಳೆ ಮಹಿಳೆಯೊಬ್ಬಳು ಲಕ್ಷ್ಮಿ ಅವರನ್ನು ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದಾಳೆ.

    ನಂತರ ಮಾತಿನ ನಡುವೆಯೇ ಲಕ್ಷ್ಮೀಪ್ರಿಯಾ ಅವರು ಎಡಗೈನಲ್ಲಿ ಹಾಕಿಕೊಂಡಿದ್ದ ಬ್ಯಾಗ್ ಪರ್ಸ್ ಕಳ್ಳತನ ಮಾಡಿ ಮುಂದಿನ ನಿಲ್ದಾಣ ಟಿಸಿ ಪಾಳ್ಯದಲ್ಲಿ ಇಳಿದುಕೊಂಡಿದ್ದಾಳೆ. ನಂತರ ಭಟ್ಟರಹಳ್ಳಿ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಿಂದ 40 ಸಾವಿರ ಹಣವನ್ನು ಡ್ರಾ ಮಾಡಿದ್ದಳು.

    ಬಸ್ಸಿನಿಂದ ಇಳಿಯಬೇಕಾದರೆ ಲಕ್ಷ್ಮೀ ಪ್ರಿಯಾಗೆ ಬ್ಯಾಗ್ ನಾಪತ್ತೆಯಾಗಿರುವ ವಿಚಾರ ತಿಳಿದಿದೆ. ನಂತರ ಕಾರ್ಡ್ ಬ್ಲಾಕ್ ಮಾಡಿಸಲು ಬ್ಯಾಂಕಿಗೆ ತೆರೆಳಿದ್ದಾಗ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.

    ಹಣ ಡ್ರಾ ಮಾಡಿದ ಎಟಿಎಮ್‍ನ ಸಿಸಿಟಿವಿಯಲ್ಲಿ ಮಹಿಳೆಯ ಕೃತ್ಯ ಸೆರೆಯಾಗಿದ್ದು ಸಿಸಿಟಿವಿ ಆಧರಿಸಿ ಲಕ್ಷ್ಮಿ ಪ್ರಿಯಾ ಅವರು ದೂರನ್ನು ನೀಡಿದ್ದು ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆಲಿವರಿಗೆಂದು ಲಕ್ಷ್ಮೀ ಹಣವನ್ನು ಕೂಡಿಟ್ಟಿದ್ದರು.

  • ವಿಡಿಯೋ: ಮನೆಗೆ ನುಗ್ಗಿದ ನೀರಿನಿಂದ ಗರ್ಭಿಣಿಯನ್ನು ಟ್ರಾಕ್ಟರ್ ಸಹಾಯದಿಂದ ರಕ್ಷಿಸಿದ್ರು!

    ವಿಡಿಯೋ: ಮನೆಗೆ ನುಗ್ಗಿದ ನೀರಿನಿಂದ ಗರ್ಭಿಣಿಯನ್ನು ಟ್ರಾಕ್ಟರ್ ಸಹಾಯದಿಂದ ರಕ್ಷಿಸಿದ್ರು!

    ರಾಮನಗರ: ರಾತ್ರಿ ಜೋರು ಸುರಿದ ಮಳೆಯಿಂದ ಮನೆಗೆ ನುಗ್ಗಿದ ನೀರಿನಿಂದ 8 ತಿಂಗಳ ಗರ್ಭಿಣಿ ಪರದಾಟ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ನಡೆದಿದೆ.

    ಕಗ್ಗಲೀಪುರದ ಅಂಗನವಾಡಿ ರಸ್ತೆಯಲ್ಲಿನ 8 ತಿಂಗಳ ಗರ್ಭಿಣಿ ಸಾರಾ ಮಳೆಯ ನೀರಿನಿಂದ ಸಂಕಷ್ಟ ಅನುಭವಿಸಿದ್ದಾರೆ. ರಾತ್ರಿ ಸುರಿದ ಮಳೆಯಿಂದ ಮಳೆಯ ನೀರು ಮನೆಯ ಒಳಗೆಲ್ಲ ನುಗ್ಗಿದೆ. ಮನೆಯ ಹೊರಗೂ ಸಹ ಮೂರು ಅಡಿಗಳಷ್ಟು ನೀರು ನಿಂತಿದೆ. ಇದರಿಂದ ಮನೆಯ ಒಳಗೂ ಇರಲಾಗದೇ, ಹೊರಗೂ ಬರಲಾಗದ ಸಂಕಷ್ಟಕ್ಕೆ ಸಿಲುಕಿದರು.

    ಈ ವೇಳೆ ಸಹಾಯಕ್ಕೆ ಬಂದ ಸ್ಥಳೀಯರು ಟ್ರಾಕ್ಟರ್ ಸಹಾಯದಿಂದ ಸಾರಾರನ್ನು ಹೊರಗೆ ಕರೆತಂದಿದ್ದಾರೆ. ಮನೆಯ ಮುಂಭಾಗ ಟ್ರಾಕ್ಟರ್ ನಿಲ್ಲಿಸಿದ್ದರೂ ಸಹ ಅದನ್ನು ಹತ್ತಲಾಗದ ಪರಿಸ್ಥಿತಿಯನ್ನು ಮಳೆಯ ನೀರು ತಂದೊಡ್ಡಿತ್ತು. ಈ ವೇಳೆ ಟ್ರಾಕ್ಟರ್ ಬಳಿ ಚೇರ್ ಹಾಕಿ ಅದರ ಮೇಲೆ ಗರ್ಭಿಣಿ ಸಾರಾ ಅವರನ್ನು ಹತ್ತಿಸಿ ಹೊರಗೆ ಕರೆತಂದಿದ್ದಾರೆ.

    https://youtu.be/MHSHSLR7NQo

  • ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

    ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

    ಚಿತ್ರದುರ್ಗ: ಹಳೆ ದ್ವೇಷ ವೈಷಮ್ಯ ಹಿನ್ನಲೆಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹೊರವಲಯದ ಬಬ್ಬೂರು ಬೋವಿ ಕಾಲೋನಿಯಲ್ಲಿ ನಡೆದಿದೆ.

    ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಎರಡು ಕಾರುಗಳ ಗಾಜು ಜಖಂ ಆಗಿದೆ. ಗಲಾಟೆಯನ್ನು ನೋಡಲು ಬಂದ ಮಹಿಳೆಯ ಮೇಲೆ ಅಕಸ್ಮಾತ್ ಆಗಿ ಕಲ್ಲು ಬಂದು ಬಿದಿದ್ದು, ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಎರಡು ತಿಂಗಳ ಭ್ರೂಣ ಹತ್ಯೆಯಾಗಿ ಗರ್ಭಪಾತವಾಗಿದೆ.

    ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಮಣಿ, ಮಂಜುನಾಥ್, ಹರೀಶ್ ನನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

     

  • ಸಂತೆಗೆ ಬಂದಿದ್ದ ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆ

    ಸಂತೆಗೆ ಬಂದಿದ್ದ ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆ

    ಯಾದಗಿರಿ: ಏಳು ತಿಂಗಳ ಗರ್ಭಿಣಿಗೆ ನಡುರಸ್ತೆಯಲ್ಲಿ ಹೆರಿಗೆಯಾಗಿರುವ ಘಟನೆ ಜಿಲ್ಲೆಯ ಕಕ್ಕೇರಾ ಪಟ್ಟಣದ ಹೊರ ಭಾಗದಲ್ಲಿ ನಡೆದಿದೆ.

    ಬುಧವಾರ ಮಧ್ಯಾಹ್ನ ಬೆಂಚಿಗಡ್ಡಿ ಗ್ರಾಮದಿಂದ ಕಕ್ಕೇರಾದ ಸಂತೆಗೆ ಬಂದಿದ್ದ ಮರಿಯಮ್ಮ ವಾಪಸ್ ತೆರಳುವಾಗ ನಡುರಸ್ತೆಯಲ್ಲಿ ಅವಳಿ ಮಕ್ಕಳಗೆ ಜನ್ಮ ನೀಡಿದ್ದಾರೆ. ಎರಡು ಮಕ್ಕಳಲ್ಲಿ ಒಂದು ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

    ಮರಿಯಮ್ಮ ಅವರ ನೋವು ನೋಡದೆ ಅಲ್ಲಿಯ ಮಹಿಳೆಯರು ಟಂಟಂನಲ್ಲಿ ಹೆರಿಗೆಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಂದು ಹೆಣ್ಣು ಮಗು ಹಾಗೂ ತಾಯಿಯನ್ನು ಕಕ್ಕೇರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

  • ಯುವತಿಯನ್ನ ಗರ್ಭಿಣಿಯನ್ನಾಗಿಸಿ ಕೈ ಕೊಟ್ಟ ಪ್ರೇಮಿಯ ಬಂಧನ

    ಯುವತಿಯನ್ನ ಗರ್ಭಿಣಿಯನ್ನಾಗಿಸಿ ಕೈ ಕೊಟ್ಟ ಪ್ರೇಮಿಯ ಬಂಧನ

    ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿ ಕೈ ಕೊಟ್ಟ ಯುವಕನನ್ನು ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.

    22 ವರ್ಷದ ಸೋಮನಿಂಗ ಭಡಂಗಿ ಬಂಧಿತ ಯುವಕ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿ ಗ್ರಾಮದ ನಿವಾಸಿಯಾಗಿರೋ ಸೋಮನಿಂಗ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದ 20 ವರ್ಷದ ಯುವತಿಗೆ ಮೋಸ ಮಾಡಿದ್ದಾನೆ.

    ಈತ ಆರು ತಿಂಗಳು ಹಿಂದೆ ಸಂಗಮೇಶ್ವರ ಗ್ರಾಮದ ಅಯ್ಯಪ್ಪ ಸ್ವಾಮಿ ಜಾತ್ರೆಗೆಂದು ಬಂದಾಗ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಯುವತಿಯ ಜೊತೆ ಸ್ನೇಹ ಬೆಳೆಸಿ, ಪ್ರೀತಿಸಿ, ಮದುವೆಯಾಗುವದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸದ್ಯ ಯುವತಿ 5 ತಿಂಗಳು ಗರ್ಭಿಣಿಯಾಗಿದ್ದು, ವಿಷಯ ತಿಳಿದ ಬಳಿಕ ಸೋಮಲಿಂಗ ಪರಾರಿಯಾಗಿದ್ದ.

    ಸದ್ಯ ಯುವತಿಗೆ ವಂಚನೆಗೈದ ಪ್ರಿಯಕರನ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಆಂಬುಲೆನ್ಸ್ ಸಿಗದೆ 20 ಕಿ.ಮೀ ನಡೆದ ಗರ್ಭಿಣಿ – ರಸ್ತೆಯಲ್ಲೇ ಹೆರಿಗೆ, ಮಗು ಕೆಳಗೆ ಬಿದ್ದು ಸಾವು

    ಆಂಬುಲೆನ್ಸ್ ಸಿಗದೆ 20 ಕಿ.ಮೀ ನಡೆದ ಗರ್ಭಿಣಿ – ರಸ್ತೆಯಲ್ಲೇ ಹೆರಿಗೆ, ಮಗು ಕೆಳಗೆ ಬಿದ್ದು ಸಾವು

    ಭೋಪಾಲ್: ಆಂಬುಲೆನ್ಸ್ ಲಭ್ಯವಿರದ ಹಿನ್ನೆಲೆಯಲ್ಲಿ ಗರ್ಭಿಣಿಯೊಬ್ಬರು 20 ಕಿಲೋಮೀಟರ್ ದೂರದ ಆಸ್ಪತ್ರೆಗೆ ನಡೆದುಕೊಂಡು ಹೋಗ್ತಿದ್ದ ವೇಳೆ ಪ್ರಸವ ವೇದನೆ ತಾಳದೇ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ.

    ಆದ್ರೆ ದುರಾದೃಷ್ವವೆಂಬಂತೆ ನವಜಾತ ಹೆಣ್ಣು ಮಗು ಸಾವನ್ನಪ್ಪಿದೆ. ಇಲ್ಲಿನ ಬರ್ಮಾನಿ ಗ್ರಾಮದ ನಿವಾಸಿ ಬೀನಾ ಅವರಿಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಆದ್ರೆ ಸಕಾಲಕ್ಕೆ ಆಂಬುಲೆನ್ಸ್ ಬರದ ಕಾರಣ 20 ಕಿ.ಮೀ ದೂರದಲ್ಲಿದ್ದ ಬಾರ್ಹಿ ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಗಂಡನ ಜೊತೆಯಲ್ಲಿ ನಡೆದುಕೊಂಡೇ ಹೋಗಲು ನಿರ್ಧರಿಸಿದ್ರು.

    ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಆಂಬುಲೆನ್ಸ್ ಗಾಗಿ ಕರೆ ಮಾಡಲಾಗಿತ್ತು. ಆದ್ರೆ ಆಂಬುಲೆನ್ಸ್ ಬರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ಧಾರೆ.

    ಇದನ್ನೂ ಓದಿ:  ಗರ್ಭಿಣಿಯನ್ನ ಜೋಳಿಗೆಯಲ್ಲೇ 16 ಕಿ.ಮೀ ಹೊತ್ತೊಯ್ದರು!

    ಗರ್ಭೀಣಿ ಬೀನಾ ಬಾರ್ಹಿ ನಗರ ತಲುಪುತ್ತಿದ್ದಂತೆ ಪೊಲೀಸ್ ಠಾಣೆಯೊಂದರ ಬಳಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಮಗು ನೆಲದ ಮೇಲೆ ಬಿದ್ದ ಕಾರಣ ಅಲ್ಲೇ ಸಾವನ್ನಪ್ಪಿತು ಎಂದು ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆದರೂ ಮಗು ಅವಧಿಗೂ ಮುನ್ನ ಅಂದ್ರೆ 7 ತಿಂಗಳಿಗೆ ಜನಿಸಿರುವ ಕಾರಣ ಅದು ಬದುಕುಳಿಯುವ ಸಂಭವ ಇರಲಿಲ್ಲ ಎಂದು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಅಶೋಕ್ ಅವಾಧಿಯಾ ಹೇಳಿದ್ದಾರೆ.

    ಆಂಬುಲೆನ್ಸ್ ಯಾಕೆ ಕಳಿಸಿರಲಿಲ್ಲ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಬಾರ್ಹಿ ಕಮ್ಯುನಿಟಿ ಹಲ್ತ್ ಸೆಂಟರ್‍ನಲ್ಲಿ ಅಂಬುಲೆನ್ಸ್ ಲಭ್ಯವಿಲ್ಲ ಅಂದ್ರು. ಜನನಿ ಎಕ್ಸ್ ಪ್ರೆಸ್(ಗರ್ಭಿಣಿಯರಿಗಾಗಿ ಆಂಬುಲೆನ್ಸ್ ಸೇವೆ) ನಮ್ಮ ನಿಯಂತ್ರಣದಡಿ ಇಲ್ಲ. ಭೋಪಾಲ್ ಮೂಲಕ ಲಭ್ಯವಿರುತ್ತದೆ ಅಂದ್ರು. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಅಂತ ಅವರು ಹೇಳಿದ್ರು.