Tag: Pregnant

  • ಮದ್ವೆಯಾಗೋದಾಗಿ ನಂಬಿಸಿ 2ವರ್ಷ ಪ್ರೀತಿ ಮಾಡಿ ಗರ್ಭಿಣಿ ಮಾಡ್ದ – ಈಗ ನಾನವನಲ್ಲ ಎಂದು ಎಸ್ಕೇಪ್

    ಮದ್ವೆಯಾಗೋದಾಗಿ ನಂಬಿಸಿ 2ವರ್ಷ ಪ್ರೀತಿ ಮಾಡಿ ಗರ್ಭಿಣಿ ಮಾಡ್ದ – ಈಗ ನಾನವನಲ್ಲ ಎಂದು ಎಸ್ಕೇಪ್

    ತುಮಕೂರು: ಎರಡು ವರ್ಷಗಳಿಂದ ಪ್ರೀತಿ ಮಾಡಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದು, ಈಗ ಯುವತಿಗೆ ಮೋಸ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ನಿವಾಸಿ ಸೌಮ್ಯಾ(ಹೆಸರು ಬದಲಾಯಿಸಲಾಗಿದೆ)ಗೆ ಅದೇ ಊರಿನ ಟಾಟಾ ಏಸ್ ಚಾಲಕ ಸೋಮಲಿಂಗಯ್ಯ ಮೋಸ ಮಾಡಿ ಪರಾರಿಯಾಗಿದ್ದಾನೆ. ಜೆಡಿಎಸ್ ಕಾರ್ಯಕರ್ತನೂ ಆದ ಸೋಮಲಿಂಗಯ್ಯ ಮದುವೆಯಾಗುದಾಗಿ ನಂಬಿಸಿ, ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ ಯುವತಿ ಈಗ 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ಯುವತಿ ಗರ್ಭಿಣಿಯಾದ ವಿಚಾರ ತಿಳಿಯುತ್ತಿದ್ದಂತೆಯೇ ಸೋಮಲಿಂಗಯ್ಯ ನಾನವನಲ್ಲ ಎಂದು ಹೇಳಿ ಪರಾರಿಯಾಗಿದ್ದಾನೆ. ಈ ವಿಚಾರದ ಬಗ್ಗೆ ಊರ ಹಿರಿಯರು ಪಂಚಾಯತಿ ಮಾಡಿ ಸೌಮ್ಯಾ ಹಾಗೂ ಸೋಮಲಿಂಗಯ್ಯರಿಗೆ ಮದುವೆ ಮಾಡಲು ಹೊರಟಿದ್ದಾರೆ. ಆದರೆ ಹಂದನಕೆರೆ ಜಿಲ್ಲಾಪಂಚಾಯತ್ ಜೆಡಿಎಎಸ್ ಸದಸ್ಯ ರಾಮಚಂದ್ರಯ್ಯ ಇದಕ್ಕೆ ಅಡ್ಡಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಈ ಸಂಬಂಧ ಹಂದನಕೆರೆ ಠಾಣೆಯಲ್ಲಿ ಸೋಮಲಿಂಗಯ್ಯ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

  • ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡ, ಪ್ರೇಯಸಿ, ಆಕೆಯ ಕುಟುಂಬ ಸೇರಿ ಗರ್ಭಿಣಿಯನ್ನ ಕೊಂದು ಗೋಣಿಚೀಲದಲ್ಲಿ ತುಂಬಿ ಎಸೆದ್ರು

    ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡ, ಪ್ರೇಯಸಿ, ಆಕೆಯ ಕುಟುಂಬ ಸೇರಿ ಗರ್ಭಿಣಿಯನ್ನ ಕೊಂದು ಗೋಣಿಚೀಲದಲ್ಲಿ ತುಂಬಿ ಎಸೆದ್ರು

    ಹೈದರಾಬಾದ್: ಗರ್ಭಿಣಿಯನ್ನ ಕೊಲೆ ಮಾಡಿ ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನ ಮಂಗಳವಾರದಂದು ಮಾಧ್ಯಮಗಳ ಮುಂದೆ ಹಾಜರುಪಡಿಸಿದ್ರು.

    ಆರೋಪಿಗಳೆಲ್ಲರೂ ಬಿಹಾರ ಮೂಲದವರಾಗಿದ್ದು, ಗರ್ಭಿಣಿಯನ್ನ ಕೊಲೆ ಮಾಡಿದ ನಂತರ ಶವವನ್ನ ಭಾಗಗಳಾಗಿ ಮಾಡಿ ಗೋಣಿಚೀಲದಲ್ಲಿ ತುಂಬಿ ಕೊಂಡಾಪುರ ಬೊಟಾನಿಕಲ್ ಗಾರ್ಡನ್ ಬಳಿ ಎಸೆದಿದ್ದರು. ಆರೋಪಿಗಳನ್ನ ಮಮತಾ ಜಾ, ಅನಿಲ್ ಜಾ, ಅಮರ್‍ಕಾಂತ್ ಜಾ ಹಾಗೂ ವಿಕಾಸ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ವಿಕಾಸ್ ಹಾಗೂ ಅಮರ್‍ಕಾಂತ್ ತಲೆಮರೆಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಕಾಸ್‍ನ ಮಗ ಎನ್ನಲಾದ 7 ವರ್ಷದ ಬಾಲಕನನ್ನು ಕೂಡ ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.

    ಜನವರಿ 31ರಂದು ಗೋಣಿಚೀಲದಲ್ಲಿ ತುಂಬಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆರೋಪಿಗಳು ಯಾವುದೇ ಸುಳಿವು ಉಳಿಸದ ಕಾರಣ ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಆರೋಪಿಗಳು ಶವವನ್ನ ಎಸೆದಿದ್ದ ಸ್ಥಳದಲ್ಲಿ ಪೊಲೀಸರು 150 ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದರು. ಆಗ ಇಬ್ಬರು ಬೈಕ್‍ನಲ್ಲಿ ಭಾರವಾದ ಬ್ಯಾಗ್ ಹೊತ್ತೊಯ್ಯುತ್ತಿದ್ದುದು ಕಂಡುಬಂದಿತ್ತು. ಮಹಿಳೆ ಬ್ಯಾಗ್ ಹಿಡಿದುಕೊಂಡಿದ್ದು, ಮತ್ತೊಬ್ಬ ಬೈಕ್ ಓಡಿಸುತ್ತಿದ್ದ. ಶವ ಪತ್ತೆಯಾದ ಸ್ಥಳದಲ್ಲಿ ಈ ಇಬ್ಬರೂ ಕೆಲ ಕಾಲ ಬೈಕ್ ನಿಲ್ಲಿಸಿ ಮುಂದೆ ಸಾಗಿದ್ದರಿಂದ ಶಂಕೆ ಮೂಡಿ ಪೊಲೀಸರು ಆ ಬೈಕ್ ಟ್ರೇಸ್ ಮಾಡಿ ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ, ಮೃತ ಮಹಿಳೆಯನ್ನ ಪಿಂಕಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದವರಾಗಿದ್ದು, 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ತನ್ನ ಗಂಡನಿಂದ ದೂರವಾಗಿ ಬಳಿಕ ವಿಕಾಸ್ ಜೊತೆ ಜೀವನ ನಡೆಸುತ್ತಿದ್ದರು. ವಿಕಾಸ್ ಕೂಡ ಬಿಹಾರ ಮೂಲದವನಾಗಿದ್ದು, ಮಮತಾ ಎಂಬ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಮಮತಾ, ಆಕೆಯ ಗಂಡ ಅನಿಲ್ ಜಾ ಹಾಗೂ ಮಗ ಅಮರ್‍ಕಾಂತ್ ಜಾ ಕೆಲವು ವರ್ಷಗಳ ಹಿಂದೆ ಹೈದರಾಬಾದ್‍ಗೆ ವಲಸೆ ಬಂದಿದ್ದರು. ವಿಕಾಸ್ ಕೂಡ ಹೈದರಾಬಾದ್‍ಗೆ ಬಂದು ಮಮತಾ ಕುಟುಂಬದ ಜೊತೆ ನೆಲೆಸಿದ್ದ. ವಿಕಾಸ್ ಎಲ್ಲಿದ್ದಾನೆಂಬ ಮಾಹಿತಿ ತಿಳಿದ ಪಿಂಕಿ ಕೂಡ ಹೈದರಾಬಾದ್‍ಗೆ ಶಿಫ್ಟ್ ಆಗಿದ್ದರು. ವಿಕಾಸ್ ಮಾಧಪುರ ಬಳಿಯ ಸಿದ್ದೀಕ್‍ನಗರದಲ್ಲಿ ಮಮತಾ ಜೊತೆ ವಾಸವಿರುವುದು ಪಿಂಕಿಗೆ ಗೊತ್ತಾಗಿತ್ತು. ವಿಕಾಸ್ ಮತ್ತು ಮಮತಾ ಸಂಬಂಧದ ಬಗ್ಗೆ ಪಿಂಕಿ ಪ್ರಶ್ನೆ ಮಾಡಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಜನವರಿ 28 ಹಾಗೂ 29ರ ಮಧ್ಯರಾತ್ರಿ ಮಮತಾ, ಆಕೆಯ ಪ್ರಿಯಕರ ವಿಕಾಸ್, ಗಂಡ ಅನಿಲ್, ಮಗ ಅಮರ್‍ಕಾಂತ್ ಸೇರಿ ಸಿದ್ದೀಕ್‍ನಗರದ ಮನೆಯಲ್ಲಿ ಪಿಂಕಿ ಮೇಲೆ ದಾಳಿ ಮಾಡಿ ಕೊಂದಿದ್ದರು. ಬಳಿಕ ಸ್ಟೋನ್ ಕಟ್ಟರ್ ಬಳಸಿ ದೇಹವನ್ನ ಪೀಸ್ ಪೀಸ್ ಮಾಡಿ ಗೋಣಿಚೀಲದಲ್ಲಿ ತುಂಬಿದ್ದರು.

    ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದು, ಕೊಲೆಗೂ ಮುನ್ನ ಆಕೆಯ ಮೇಲೆ ಹಲ್ಲೆ ನಡೆದಿದೆ. ಪಕ್ಕೆಲುಬು, ಸೊಂಟದ ಭಾಗ ಹಾಗೂ ಗರ್ಭಕೋಶಕ್ಕೆ ಹಾನಿಯಾಗಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

    ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

  • ಗರ್ಭಿಣಿಯ ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಗ್ಯಾಂಗ್‍ರೇಪ್

    ಗರ್ಭಿಣಿಯ ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಗ್ಯಾಂಗ್‍ರೇಪ್

    ಲಕ್ನೋ: 32 ವರ್ಷದ ಗರ್ಭಿಣಿ ಮೇಲೆ ಅಪರಿಚಿತ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಬದೌನ್ ನ ಕಾಚುಲಾ ಗ್ರಾಮದಲ್ಲಿ ನಡೆದಿದೆ.

    ಶುಕ್ರವಾರ ಬೆಳಗ್ಗೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದ್ದು, ಗರ್ಭಿಣಿಯ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಾಮುಕರು ಈ ದುಷ್ಕೃತ್ಯವೆಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಚಂದ್ರಪ್ರಕಾಶ್ ತಿಳಿಸಿದ್ದಾರೆ.

    ಮಹಿಳೆ ಎಷ್ಟು ಹೊತ್ತಾದರೂ ಮನೆಗೆ ಬರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಬಳಿಕ ಪಕ್ಕದ ಅರಣ್ಯ ಪ್ರದೇಶದಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಂಡುಬಂದಿದೆ. ನಂತರ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸುವುದಾಗಿ ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನ ಬರೇಲಿಗೆ ರವಾನಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ಚಂದ್ರಪ್ರಕಾಶ್ ಹೇಳಿದ್ದಾರೆ.

  • ಯುವತಿಯ ಮೇಲೆ ದೊಡ್ಡಪ್ಪನಿಂದಲೇ ರೇಪ್ – 8 ತಿಂಗ್ಳ ಗರ್ಭಿಣಿಯಾದ ಮೇಲೆ ಪೋಷಕರಿಗೆ ಗೊತ್ತಾಯ್ತು

    ಯುವತಿಯ ಮೇಲೆ ದೊಡ್ಡಪ್ಪನಿಂದಲೇ ರೇಪ್ – 8 ತಿಂಗ್ಳ ಗರ್ಭಿಣಿಯಾದ ಮೇಲೆ ಪೋಷಕರಿಗೆ ಗೊತ್ತಾಯ್ತು

    ಬೆಂಗಳೂರು: ಬುದ್ಧಿಮಾಂದ್ಯ ಯುವತಿಯೊಬ್ಬಳ ಮೇಲೆ ಸ್ವಂತಃ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರು ಹೊರವಲಯ ಹೊಸಕೋಟೆ ತಾಲೂಕಿನ ನೀಡಘಟ್ಟ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಈಜಾಜ್ ಪಾಷ (51) 21 ವರ್ಷದ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಈಗ ಯುವತಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ಬುದ್ಧಿಮಾಂದ್ಯ ಯುವತಿಯ ಪೋಷಕರು ಕೂಲಿ ಕೆಲಸಕ್ಕೆ ಹೋದ ನಂತರ ಪಕ್ಕದ ಮನೆಯಲ್ಲಿದ್ದ ದೊಡ್ಡಪ್ಪನೇ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬುದ್ಧಿಮಾಂದ್ಯ ಯುವತಿ ಹೊಟ್ಟೆನೋವು ಎನ್ನುತ್ತಿದ್ದ ಪರಿಣಾಮ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಆರೋಪಿ ಈಜಾಜ್ ಪಾಷನ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಪೋಷಕರು 8 ತಿಂಗಳ ಗರ್ಭಿಣಿಯಾದ ಬುದ್ಧಿಮಾಂದ್ಯ ಮಗಳನ್ನ ಕಂಡು ಗೋಳಾಡುತ್ತಿದ್ದಾರೆ. ಪ್ರತಿನಿತ್ಯ ಮಗಳನ್ನ ಕಂಡು ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಬಡ ದಂಪತಿಯ ಪರದಾಟ ನಡೆಸುತ್ತಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಗರ್ಭಿಣಿಯ ಕುತ್ತಿಗೆ ಬಳಿ ಕಚ್ಚಿ ಕೊಂದ ಕರಡಿ

    ಗರ್ಭಿಣಿಯ ಕುತ್ತಿಗೆ ಬಳಿ ಕಚ್ಚಿ ಕೊಂದ ಕರಡಿ

    ರಾಮನಗರ: ಬಹಿರ್ದೆಸೆಗೆ ಹೋಗಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚೌಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಚೌಕಸಂದ್ರ ಗ್ರಾಮದ ಪ್ರದೀಪ್ ಕುಮಾರ್ ನಾಯಕ್ ಎಂಬವರ ಪತ್ನಿ ಸುಮಾಭಾಯಿ(25) ಮೃತ ದುರ್ದೈವಿ. ಇಂದು ಬೆಳಿಗ್ಗೆ ಸುಮಾರು 5 ಗಂಟೆಯ ವೇಳೆ ಬಹಿರ್ದೆಸೆಗೆ ಸುಮಾಭಾಯಿ ಮನೆಯ ಹಿಂಬದಿ ಹೋಗಿದ್ದರು. ಈ ವೇಳೆ ಕರಡಿ ದಾಳಿ ನಡೆಸಿದ್ದು ಕುತ್ತಿಗೆ ಭಾಗದಲ್ಲಿ ಕಚ್ಚಿ, ಕೊರಳನ್ನು ಪರಚಿದೆ.

    ಕರಡಿ ಕುತ್ತಿಗೆ ಭಾಗ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸುಮಾಭಾಯಿ ಸಾವನ್ನಪ್ಪಿದ್ದಾರೆ. ಸುಮಭಾಯಿಗೆ ಗಂಡು ಮಗುವಿದ್ದು, ಮತ್ತೊಂದು ಮಗುವಿಗೆ ಗರ್ಭಿಣಿಯಾಗಿದ್ದರು. ಗ್ರಾಮಸ್ಥರು ಚಿರತೆ ದಾಳಿಯಿಂದ ಸುಮಭಾಯಿ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದರು. ಆದ್ರೆ ಕರಡಿ ಕುತ್ತಿಗೆ ಭಾಗದಲ್ಲಿ ಕಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಕನಕಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಡಿ ದಾಳಿಯಿಂದ ಆಗಿರುವ ಸಾವು ಎಂದು ದೃಢಪಡಿಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ತಾಯಿಯೆದುರೇ ಪ್ರಿಯತಮನಿಂದ ಬೆಂಕಿಗಾಹುತಿಯಾಗಿದ್ದ ಮಹಿಳೆ ಸಾವು

    ತಾಯಿಯೆದುರೇ ಪ್ರಿಯತಮನಿಂದ ಬೆಂಕಿಗಾಹುತಿಯಾಗಿದ್ದ ಮಹಿಳೆ ಸಾವು

    ಗದಗ: ಪ್ರೀತಿಯ ನಾಟಕವಾಡಿ ಮಹಿಳೆಯನ್ನು ಗರ್ಭಿಣಿ ಮಾಡಿದ ನಂತರ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ ಘಟನೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆ ಕೊನೆಗೂ ಇಂದು ಸಾವನ್ನಪ್ಪಿದ್ದಾರೆ.

    ಸತತ ಐದು ವರ್ಷಗಳಿಂದ ಮಹಿಳೆಯ ಜೊತೆ ಪ್ರೀತಿಯ ನಾಟಕವಾಡಿದ್ದ ಯುವಕ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಣಿ ಮಾಡಿದ್ದ, ಆದರೆ ಮಹಿಳೆ ಮದುವೆ ಮಾಡಿಕೊಳ್ಳಲು ಕೇಳಿದ ಸಂದರ್ಭದಲ್ಲಿ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಸಾವನ್ನಪ್ಪಿದ್ದಾರೆ.

    ಏನಿದು ಘಟನೆ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದ ಮಹಿಳೆ ಶಾಂತವ್ವ ಮತ್ತು ಪ್ರಕಾಶ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿದ ಮೇಲೆ ಎರಡು ವರ್ಷಗಳ ಹಿಂದೆ ಶಾಂತವ್ವನಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ಮೇಲೂ ಪ್ರಕಾಶ್ ನಿನ್ನ ಬಿಟ್ಟು ಇರುವುದಿಲ್ಲ ಎಂದು ಶಾಂತವ್ವಗೆ ಹೇಳಿದ್ದಾನೆ. ಹೀಗಾಗಿ ಸಂತ್ರಸ್ತೆ ಗಂಡನನ್ನ ಬಿಟ್ಟು ತವರಿಗೆ ಬಂದಿದ್ದರು.

    ಇವರಿಬ್ಬರು ಮತ್ತೆ ಪ್ರೀತಿ ಶುರು ಮಾಡಿ ಅನೈತಿಕ ಸಂಬಂಧ ಹೊಂದಿದ್ದರು. ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗುವಂತೆ ಪ್ರಕಾಶ್‍ನನ್ನು ಕೇಳಿದ್ದರು. ಆದರೆ ಪ್ರಕಾಶ್ ಬೇರೆ ಬೇರೆ ಜಾತಿ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ. ಇದರಿಂದ ನೊಂದ ಸಂತ್ರಸ್ತೆ ನ್ಯಾಯ ಕೇಳಲು ಶುಕ್ರವಾರ ಸಂಜೆ ತಾಯಿಯ ಜೊತೆ ಪ್ರಕಾಶ್ ಮನೆಗೆ ಹೋಗಿದ್ದರು. ನಾನು ಗಂಡನನ್ನು ಬಿಟ್ಟು ಬಂದೆ. ನನ್ನ ಜೀವನ ಹಾಳಾಗಿದೆ, ಮದುವೆಯಾಗು ಎಂದು ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ್ ಮತ್ತು ಕುಟುಂಬಸ್ಥರು ಸೇರಿ ಶಾಂತವ್ವ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

    ಈ ವೇಳೆ ಮೃತರ ಪೋಷಕರು ಆಕೆಯನ್ನು ಗದಗ ಜಿಲ್ಲಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಶಾಂತವ್ವ ಮೃತ ಪಟ್ಟಿದ್ದಾರೆ.

  • ಪ್ರೀತಿಸಿ ಗರ್ಭಿಣಿ ಮಾಡ್ದ, ನ್ಯಾಯ ಕೇಳಲು ಹೋದ್ರೆ ತಾಯಿ ಎದುರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    ಪ್ರೀತಿಸಿ ಗರ್ಭಿಣಿ ಮಾಡ್ದ, ನ್ಯಾಯ ಕೇಳಲು ಹೋದ್ರೆ ತಾಯಿ ಎದುರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

    ಗದಗ: ಪ್ರಿಯತಮನೇ ಪ್ರೇಯಸಿಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನ ಮಾಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ನಡೆದಿದೆ.

    ದಾಳಿಗೊಳಗಾದ ಮಹಿಳೆ ಶಾಂತವ್ವ ಮಾದರ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಶುಕ್ರವಾರ ಸಾಯಂಕಾಲ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿಂಗಟಾಲೂರ ಗ್ರಾಮದ ಪ್ರಕಾಶ ಮುಂಡವಾಡ ಹಾಗೂ ಕುಟುಂಬಸ್ಥರು ಈ ಹೀನ ಕೃತ್ಯ ಮಾಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸುತ್ತಿದ್ದಾರೆ.

    ಪ್ರಕಾಶ ಹಾಗೂ ಶಾಂತವ್ವ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿದ ಮೇಲೆ ಎರಡು ವರ್ಷಗಳ ಹಿಂದೆ ಶಾಂತವ್ವನಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ಮೇಲೂ ಪ್ರಕಾಶ ನಿನ್ನ ಬಿಟ್ಟು ಇರುವುದಿಲ್ಲ ಎಂದು ಶಾಂತವ್ವಗೆ ಹೇಳಿದ್ದಾನೆ. ಹೀಗಾಗಿ ಸಂತ್ರಸ್ತೆ ಗಂಡನನ್ನ ಬಿಟ್ಟು ತವರಿಗೆ ಬಂದಿದ್ದಾರೆ.

    ಇವರಿಬ್ಬರು ಮತ್ತೆ ಪ್ರೀತಿ ಶುರು ಮಾಡಿ ಅನೈತಿಕ ಸಂಬಂಧ ಹೊಂದಿದ್ದರು. ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗುವಂತೆ ಪ್ರಕಾಶನನ್ನು ಕೇಳಿದ್ದರು. ಆದರೆ ಪ್ರಕಾಶ ಬೇರೆ ಬೇರೆ ಜಾತಿ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ. ಇದರಿಂದ ನೊಂದ ಸಂತ್ರಸ್ತೆ ನ್ಯಾಯ ಕೇಳಲು ಶುಕ್ರವಾರ ಸಂಜೆ ತಾಯಿಯ ಜೊತೆ ಪ್ರಕಾಶನ ಮನೆಗೆ ಹೋಗಿದ್ದರು. ನಾನು ಗಂಡನನ್ನು ಬಿಟ್ಟು ಬಂದೆ. ನನ್ನ ಜೀವನ ಹಾಳಾಗಿದೆ, ಮದುವೆಯಾಗು ಎಂದು ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ ಮತ್ತು ಕುಟುಂಬಸ್ಥರು ಸೇರಿ ಶಾಂತವ್ವ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

    ಸ್ಥಳದಲ್ಲಿದ್ದ ತಾಯಿ ಭಯಗೊಂಡು ಓಡಿ ಹೋಗಿ ತಮ್ಮ ಸಹೋದರರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅವರು ಬಂದು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಗದಗ ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಪ್ರಕಾಶ ಹಾಗೂ ಆತನ ಕುಟುಂಬದವರು ಊರು ಬಿಟ್ಟು ಪರಾರಿಯಾಗಿದ್ದಾರೆ. ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಮರ ಕಡಿಯುವಾಗ ಕೈಕೊಟ್ಟ ಮಿಷನ್- ಆಂಬುಲೆನ್ಸ್ ನಲ್ಲೇ 1 ಗಂಟೆ ನರಳಾಡಿದ ಗರ್ಭಿಣಿ

    ಮರ ಕಡಿಯುವಾಗ ಕೈಕೊಟ್ಟ ಮಿಷನ್- ಆಂಬುಲೆನ್ಸ್ ನಲ್ಲೇ 1 ಗಂಟೆ ನರಳಾಡಿದ ಗರ್ಭಿಣಿ

    ಬೀದರ್: ಮರ ಕಡಿಯುವಾಗ ಮಿಷನ್ ಕೈಕೊಟ್ಟಿದ್ದರಿಂದ ಸುಮಾರು 1 ಗಂಟೆಗಳ ಕಾಲ ಗರ್ಭಿಣಿ ಆಂಬುಲೆನ್ಸ್ ನಲ್ಲೇ ನರಳಾಟ ಅನುಭವಿಸಿರುವ ಘಟನೆ ಬೀದರ್ ತಾಲೂಕಿನ ಕೌಠೌ ಗ್ರಾಮದ ಬಳಿ ನಡೆದಿದೆ.

    ಕೌಠೌ ಗ್ರಾಮದ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ಗಂಟೆಗಳ ಕಾಲ ಆಂಬುಲೇನ್ಸ್ ನಲ್ಲಿ ಗರ್ಭಿಣಿಯ ನರಳಾಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.

    ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಯುವ ಮುನ್ನ ಮುನ್ನೆಚ್ಚರಿಕೆಯಾಗಿ ಜೆಸಿಬಿ ತರದೆ ಮರ ಕಡಿಯಲು ಹೋಗಿದ್ದಾರೆ. ಆದರೆ ಮರ ಕಡಿಯುತ್ತಿದ್ದಂತೆ ಮಿಷನ್ ಕೈಕೊಟ್ಟಿದೆ. ಇದರಿಂದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೇ ಮಾರ್ಗವಾಗಿ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬೀದರ್ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದರು. ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧ ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಗರ್ಭಿಣಿ ನರಳಾಟ ಅನುಭವಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಗರ್ಭಿಣಿಯ ನರಳಾಟ ನೋಡಿ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಕೈ ಜೋಡಿಸಿ ರಸ್ತೆಯಲ್ಲಿದ್ದ ಮರವನ್ನು ಪಕಕ್ಕೆ ಸರಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು  ಜೆಸಿಬಿ ತರಿಸಿ ರಸ್ತೆ ಕ್ಲೀನ್ ಮಾಡಿದ್ದಾರೆ.

     

     

     

  • ಸೆಲ್ಫಿ ವಿಡಿಯೋ ಮಾಡಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಸೆಲ್ಫಿ ವಿಡಿಯೋ ಮಾಡಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಹೈದರಾಬಾದ್: ನವವಿವಾಹಿತೆ 3 ತಿಂಗಳ ಗರ್ಭಿಣಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಮ್ ನಗರದಲ್ಲಿ ನಡೆದಿದೆ.

    ಮೌನಿಕ ಆತ್ಯಹತ್ಯೆ ಮಾಡಿಕೊಂಡ 3 ತಿಂಗಳ ಗರ್ಭಿಣಿ. ಈಕೆ ಉದ್ದಂಡಿ ನಾಗೇಶ್ವರ ರಾವ್ ಮಗಳಾಗಿದ್ದು, ಹೈದರಾಬಾದ್‍ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರ ಎಂಬುವವರ ಜೊತೆ ಆಗಸ್ಟ್ ತಿಂಗಳಿನಲ್ಲಿ ಮದುವೆಯಾಗಿತ್ತು.

    ಮೌನಿಕಗೆ ಪತಿಯ ಗುಣ ನಡತೆ ಇಷ್ಟವಾಗಿರಲಿಲ್ಲ. ಆದ್ದರಿಂದ ತನ್ನ ಪೋಷಕರಿಗೆ ಪತಿ ಬಳಿ ಇರುವ ಹಣ, ಚಿನ್ನವನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ದರೆ ಕಳೆದ ವಾರ ಮೌನಿಕ ಸಂಕ್ರಾಂತಿ ಹಬ್ಬದ ವರೆಗೂ ಇರಲು ತನ್ನ ತವರು ಮನೆಗೆ ಬಂದಿದ್ದಾರೆ.

    ಸೋಮವಾರ ಬೆಳಿಗ್ಗೆ ಪೋಷಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಫೋನಿನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಪತಿ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

     

  • ಕತಾರ್ ಟು ಕುವೈತ್ ಇದೊಂದು ರಕ್ತದ ಕಥೆ: ಕನ್ನಡಿಗ ದಂಪತಿಯ ಮನಗೆದ್ದ ಕೇರಳಿಗ!

    ಕತಾರ್ ಟು ಕುವೈತ್ ಇದೊಂದು ರಕ್ತದ ಕಥೆ: ಕನ್ನಡಿಗ ದಂಪತಿಯ ಮನಗೆದ್ದ ಕೇರಳಿಗ!

    ಬೆಂಗಳೂರು: “ಪತ್ನಿಗೆ ಬಾಂಬೆ ಬ್ಲಡ್ ಗ್ರೂಪಿನ ರಕ್ತ ಬೇಕು ಎಂದು ಕೇಳಿದಾಗ ನನಗೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಎಷ್ಟು ಹುಡುಕಿದರೂ ರಕ್ತ ಸಿಗದೇ ಇದ್ದಾಗ ಚಿಂತೆಯಾಗಿತ್ತು. ಆದರೆ ಕೊನೆಗೆ ಎಲ್ಲರ ಸಹಕಾರದಿಂದಾಗಿ ರಕ್ತ ಸಿಕ್ಕಿತು” ಇದು ವಿನುತಾ ಗೌಡ ಅವರ ಪತಿ ದಯಾನಂದ ಗೌಡ ಅವರ ಸಂತೋಷದ ಮಾತುಗಳು.

    ಮೂಲತಃ ಉಡುಪಿ ಮೂಲದ ಗರ್ಭಿಣಿ ವಿನುತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು. ಆಸ್ಪತ್ರೆಗೆ ದಾಖಲಾಗಿ ದಿನ ಕಳೆದರೂ ರಕ್ತ ದಾನಿಗಳು ಸಿಗಲೇ ಇಲ್ಲ. ಕೊನೆಗೆ ಕತಾರ್‍ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ಸಮಸ್ಯೆಯನ್ನು ನಿವಾರಿಸಿದರು.

    ಪತ್ನಿಯ ರಕ್ತಕ್ಕಾಗಿ ಏನೆಲ್ಲ ಕಷ್ಟ ಆಗಿತ್ತು? ಬಳಿಕ ಸಿಕ್ಕಿದ್ದು ಹೇಗೆ ಎನ್ನುವುದನ್ನು ದಯಾನಂದ ಗೌಡ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪತಿ ವಿವರಿಸಿದ್ದು ಹೀಗೆ:
    ನವೆಂಬರ್ 25 ರಂದು ಪತ್ನಿ ಕುವೈತ್ ಆಸ್ಪತ್ರೆಗೆ ದಾಖಲಾಗಿದ್ದಳು. ಮೆಡಿಕಲ್ ಚೆಕಪ್ ವೇಳೆ ನಾರ್ಮಲ್ ಡೆಲಿವರಿ ಕಷ್ಟ ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ತಿಳಿಸಿದರು. ಈ ವೇಳೆ ಬಾಂಬೆ ಬ್ಲಡ್ ಬೇಕು ಎಂದು ಹೇಳಿದರು. ರಕ್ತದ ಗುಂಪುಗಳ ಬಗ್ಗೆ ತಿಳಿದಿದ್ದರೂ ಈ ರಕ್ತದ ಗುಂಪು ನನಗೆ ಗೊತ್ತಿರಲಿಲ್ಲ. ಬ್ಲಡ್ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಅಲ್ಲೂ ಸಿಗಲಿಲ್ಲ. ಪರಿಚಯಸ್ಥರಿಗೆ ತಿಳಿಸಿ, ಫೇಸ್‍ಬುಕ್, ವಾಟ್ಸಪ್ ನಲ್ಲಿ ಈ ವಿಚಾರವನ್ನು ಶೇರ್ ಮಾಡಲಾಯಿತು. ಆದರೂ ಈ ರಕ್ತ ಇರುವ ವ್ಯಕ್ತಿಗಳು ಸಿಗಲೇ ಇಲ್ಲ.

    ನಾವು ಬಹಳ ಬೇಸರದಲ್ಲಿದ್ದಾಗ ಪಾಸ್ಟರ್ ಒಬ್ಬರಿಗೆ ವಿಚಾರ ತಿಳಿದು ನಾನು ರಕ್ತದಾನಿಗಳನ್ನು ಸಂಪರ್ಕಿಸುತ್ತೇನೆ. ನೀವು ಚಿಂತೆ ಮಾಡಬೇಡಿ ಎಂದು ಹೇಳಿದರು. ಬಳಿಕ ಈ ವಿಚಾರವನ್ನು ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಆನ್‍ಲೈನ್ ಗ್ರೂಪಿಗೆ ತಿಳಿಸಿದರು. ಈ ಗ್ರೂಪಿನಲ್ಲಿ ಮೆಸೇಜ್ ಶೇರ್ ಆಗಿ ನಿಧೀಶ್ ಅವರಿಗೆ ಗುರುವಾರ ಈ ವಿಚಾರ ತಿಳಿಯಿತು. ಕೂಡಲೇ ನಿಧೀಶ್ ಕತಾರ್‍ನಿಂದ ಬರುವುದಾಗಿ ತಿಳಿಸಿದರು. ಈ ವೇಳೆ ಅಲ್ಲೇ ಒಂದು ವೈದ್ಯಕೀಯ ರಕ್ತ ಪರೀಕ್ಷೆ ನಡೆಯಿತು. ಈ ವೇಳೆ ಮೆಡಿಕಲ್ ಅಗತ್ಯಕ್ಕಾಗಿ ತುರ್ತು ವೀಸಾ ಬೇಕೆಂದು ಮನವಿ ಮಾಡಲಾಯಿತು. ಮರುದಿನ ಅಂದರೆ ಶುಕ್ರವಾರ ಕಚೇರಿಗೆ ರಜೆ ಪಡೆದು ತುರ್ತು ವಿಮಾನದ ಮೂಲಕ ನಿಧೀಶ್ ಕುವೈತ್‍ಗೆ ಆಗಮಿಸಿದರು.

    ನಿಧೀಶ್ ಬಂದವರೇ ಜಾಬಿರಿಯಾ ಬ್ಲಡ್ ಬ್ಯಾಂಕಿನಲ್ಲಿ ಪರೀಕ್ಷೆ ಮಾಡಿ ಬಳಿಕ ರಕ್ತದಾನ ಮಾಡಿದರು. ಇಲ್ಲಿ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿ ಒಂದು ದಿನ ಬಳಿಕ ವೈದ್ಯರು ಸಿಸೇರಿಯನ್ ಮಾಡಿ ಡೆಲಿವರಿ ಮಾಡಿದರು. ಗಂಡು ಮಗುವಿಗೆ ಜನ್ಮ ನೀಡಿದ್ದು, ಪತ್ನಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

    ನಿಧೀಶ್ ಅವರು ವಿನುತಾಗೆ ರಕ್ತ ಕೊಟ್ಟ ಬಳಿಕ ನನ್ನ ಕಣ್ಣಲ್ಲಿ ನೀರು ಬಂತು. ಕಷ್ಟ ಕಾಲದಲ್ಲಿ ಸುಮಾರು ಒಂದೂವರೆ ಗಂಟೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಇಲ್ಲಿಗೆ ಬಂದು ರಕ್ತ ಕೊಟ್ಟದ್ದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ತಿಳಿಸಿದರು.

    ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ಕೇರಳದ ಕಣ್ಣೂರಿನ ಇರಿಟ್ಟಿ ಮೂಲದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ. ಕೇರಳ ಕುವೈತ್ ನಲ್ಲಿರುವ ರಕ್ತದಾನಿಗಳ ಸಂಘ ಸಹ ನಿಧೀಶ್ ಅವರನ್ನು ಸನ್ಮಾನಿಸಿದೆ.

    ಮಂಗಳೂರು ದೇರಳಕಟ್ಟೆ ದಯಾನಂದ ಗೌಡ ಅವರು ಕಳೆದ 10 ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ.

    ರಸ್ತೆ ಅಪಘಾತವಾದಾಗ ಗಾಯಾಳುಗಳು ರಕ್ಷಿಸಿ ಎಂದು ಕಣ್ಣೀರಿಟ್ಟರೂ ಜನ ನರಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅಲ್ಲಿಂದ ತೆರಳುವುದನ್ನು ನಾವು ನೋಡಿದ್ದೇನೆ. ಈ ಪ್ರಕರಣಗಳು ನಮ್ಮ ಕಣ್ಣಿನ ಮುಂದೆ ಇರುವಾರಗ ಆಸ್ಪತ್ರೆಗೆ ದಾಖಲಾಗಿದ್ದ ವಿನುತಾ ಅವರಿಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತುರ್ತಾಗಿ ವಿಮಾನದಲ್ಲಿ ಆಗಮಿಸಿ ರಕ್ತ ನೀಡುವ ಮೂಲಕ ವಿನೀಶ್ ಈಗ ಭಾರತೀಯರ ಮನಗೆದ್ದಿದ್ದಾರೆ.

    ಏನಿದು ‘ಬಾಂಬೆ ಗ್ರೂಪ್’ ರಕ್ತ?
    ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.

    ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.