Tag: Pregnant

  • ಗರ್ಭಿಣಿಯರಿಗೆ ಗ್ರಹಣ ಭಯ – ವೈದ್ಯರಿಗೆ ಧರ್ಮ ಸಂಕಟ

    ಗರ್ಭಿಣಿಯರಿಗೆ ಗ್ರಹಣ ಭಯ – ವೈದ್ಯರಿಗೆ ಧರ್ಮ ಸಂಕಟ

    ಬೆಂಗಳೂರು: ಜುಲೈ 27ಕ್ಕೆ ನಡೆಯವ ಚಂದ್ರ ಗ್ರಹಣಕ್ಕೆ ದಿನಗಣನೆ ಶುರುವಾಗಿದೆ. ನಭೋಮಂಡಲದಲ್ಲಿ ಉಂಟಾಗುವ ಕೌತುಕವನ್ನು ವೀಕ್ಷಿಸಲು ಪ್ರಪಂಚದ ಜನರೆಲ್ಲಾ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ತುಂಬು ಗರ್ಭಿಣಿಯರಿಗೆ ಗ್ರಹಣದ ಭಯ ಶುರುವಾಗಿದೆ.

    ಜುಲೈ 27 ರ ರಕ್ತಚಂದ್ರ ಗ್ರಹಣಕ್ಕೆ ಬೆದರಿರುವ ಗರ್ಭಿಣಿಯರು ಡೆಲಿವರಿ ದಿನಾಂಕವನ್ನು ಬೇರೆ ದಿನಾಂಕಕ್ಕೆ ಬದಲಿ ಮಾಡಿಕೊಡುವಂತೆ ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿ ಲಭ್ಯವಾಗಿವೆ. ಇದನ್ನೂ ಓದಿ: ಶುಕ್ರವಾರ ಕೇತುಗ್ರಸ್ಥ ಚಂದ್ರಗ್ರಹಣ – ಭಕ್ತರಿಗೆ ದೇಗುಲಗಳಿಂದಲೇ ನೋಟಿಸ್

    ಗ್ರಹಣದ ಮುನ್ನಾ ದಿನ, ಗ್ರಹಣದ ದಿನ ಅಥವಾ ಗ್ರಹಣ ನಂತರದ ಒಂದು ದಿನ ಅಷ್ಟು ದಿನವೂ ಡೆಲಿವರಿ ಮಾಡಿಸದಂತೆ ವೈದ್ಯರಿಗೆ ಗರ್ಭಿಣಿಯರು ಮತ್ತು ಕುಟುಂಬದವರು ಮನವಿ ಮಾಡಿಕೊಳ್ಳುತ್ತಿದ್ದಾರಂತೆ. ವೈದ್ಯರಿಗೆ ಗ್ರಹಣದ ಧರ್ಮಸಂಕಟ ಶುರುವಾಗಿದ್ದು, ನಾರ್ಮಲ್ ಡೆಲಿವರಿಯಾದ್ರೇ ಏನು ಮಾಡೋದಕ್ಕೆ ಸಾಧ್ಯವಿಲ್ಲ. ಆದರೆ ಸಿಸೇರಿಯನ್ ಕೇಸ್‍ನಲ್ಲಿ ಎರಡು ಮೂರು ದಿನ ಕಾಯಬಹುದು ಅಂತಾ ವೈದ್ಯರು ಕುಟುಂಬಳಿಗಳಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?

    ಗ್ರಹಣದ ದಿನ ಮಕ್ಕಳು ಹುಟ್ಟಿದರೆ ಮಗುವಿಗೆ ಕಾಯಿಲೆ ಬರುತ್ತೆ, ಅಂಗವೈಕಲ್ಯ ಇರಬಹುದು ಅನ್ನೋ ಭಯದಿಂದ ಜನರು ಹೀಗೆ ಮಾಡುತ್ತಿದ್ದಾರೆ. ಇದೆಲ್ಲ ವೈಜ್ಞಾನಿಕವಾಗಿ ಸಾಬೀತಾಗದೇ ಇದ್ದರೂ, ಇದೊಂದು ಭಾವನ್ಮಾತಕ ವಿಚಾರವಾಗಿದ್ದು ನಾವು ಸ್ಪಂದಿಸಲೇಬೇಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಯಾರಿಗೆ ಹಿಡಿಯಲಿದೆ ಗ್ರಹಣ?

  • ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ರ್ಭಿಣಿಯರಿಗೆ ತಮ್ಮ ಡಯಟ್‍ನಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದೇ ಇರುತ್ತೆ. ತಾಯ್ತನದ ಖುಷಿಯನ್ನು ಸವಿಯಲು ನಾವು ನಿಮಗೆ ಸಹಾಯ ಮಾಡ್ತಿವಿ. ಹೌದು, ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ರೀತಿ ಸಸ್ಯಹಾರಿ ಆಹಾರವನ್ನು ಸೇವಿಸಿದರೇ ಒಳ್ಳೆಯದು ಎನ್ನುವ ಒಂದೊಳ್ಳೆ ಸಸ್ಯಹಾರಿ ಆಹಾರಗಳ ಪಟ್ಟಿ ಇಲ್ಲಿದೆ. ಇದನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

    ಉತ್ತಮ ಪೌಷ್ಠಿಕಾಂಶವನ್ನು ಸಸ್ಯಹಾರ ಆಹಾರಗಳು ಹೊಂದಿರುತ್ತದೆ. ಅದರಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಗಿರುತ್ತದೆ. ಸಸ್ಯಹಾರಿ ಆಹಾರವನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಈ ರೀತಿಯ ಆಹಾರಗಳು ಸಹಾಯಕಾರಿ.

    ಸಸ್ಯಹಾರಿ ಆಹಾರಗಳ ಪಟ್ಟಿ ಈ ಕೆಳಗಿನಂತಿದೆ:

    1. ಒಣ ಹಣ್ಣು:
    ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ವಾಲ್‍ನಟ್, ಬಾದಾಮಿ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಕವಾಗಿರುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ವಿಟಮಿನ್-ಇ ಅಂಶ ಸಿಗುತ್ತದೆ. ಹಾಗೆಯೇ ನಿಮ್ಮ ತೂಕವನ್ನು ಹೆಚ್ಚಿಸಿ ಉತ್ತಮ ಆರೋಗ್ಯ ನೀಡುತ್ತದೆ.

    2. ತೆಂಗಿನಕಾಯಿ:
    ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಹೇರಳವಾಗಿರುತ್ತದೆ. ದೇಹಕ್ಕೆ ಬೇಕಾಗುವ ಶಕ್ತಿಯನ್ನು ತೆಂಗಿನಕಾಯಿ ತಿನ್ನುವುದರಿಂದ ಪಡೆಯಬಹುದು. ಇದನ್ನು ನೀವು ನೇರವಾಗಿಯು ತಿನ್ನಬಹುದು, ಇಲ್ಲದಿದ್ದರೆ ಇದರಿಂದ ಚಟ್ನಿ ತಯಾರಿಸಿ ಬೇರೆ ಡಿಶ್ ಗಳ ಜೊತೆಗೆ ಸವಿಯಬಹುದು.

    3. ಧಾನ್ಯಗಳು:
    ಧಾನ್ಯಗಳು ಹಾಗೂ ಬೇಳೆಕಾಳುಗಳಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ. ಇವುಗಳನ್ನು ತಾವು ಸೇವಿಸುವ ಆಹಾರಗಳಲ್ಲಿ ಬಳಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ದೊರೆಯುತ್ತದೆ.

    4. ಬೀನ್ಸ್:
    ಬೀನ್ಸ್ ಪ್ರೊಟೀನ್ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಬೀನ್ಸ್ ಸೇವನೆಯಿಂದ ನಮಗೆ ಉತ್ತಮ ಫೈಬರ್ ಅಂಶ ದೊರೆಯುತ್ತದೆ. ಸ್ಟ್ರಿಂಗ್ ಬೀನ್ಸ್, ಹಸಿರು ಬೀನ್ಸ್, ಫಾವಾ ಬೀನ್ಸ್ ಮುಂತಾದ ವಿವಿಧ ಬಗೆಯ ಬೀನ್ಸ್‍ಗಳನ್ನು ಸೇವಿಸಬಹುದು.

    5. ಕ್ಯಾರೆಟ್ (ಗಜ್ಜರಿ):
    ಕ್ಯಾರೆಟ್ ವಿಟಮಿನ್-ಎ ಅಂಶವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿಯರು ತಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದು. ಕ್ಯಾರೇಟ್ ಸೇವನೆಯಿಂದ ನಿಮ್ಮ ಕಣ್ಣುಗಳ ದೃಷ್ಟಿ ಮಾತ್ರವಲ್ಲದೆ ಮಗುವಿನ ದೃಷ್ಟಿಯು ಉತ್ತಮವಾಗುತ್ತದೆ.

    6. ಸೋಯಾ:
    ಗರ್ಭಿಣಿಯರಿಗೆ ಅವಶ್ಯಕವಾಗಿರುವ ಪ್ರೊಟೀನ್ ಅಂಶವನ್ನು ಸೋಯಾ ಹೊಂದಿರುತ್ತದೆ. ಸೋಯಾದಲ್ಲಿ ವಿಟಮಿನ್-ಡಿ ಪೂರಕವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

    7. ಮೊಸರು:
    ಮೊಸರು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾ ಹಾಗೂ ಕ್ಯಾಲ್ಸಿಯಂನ ಒಂದೊಳ್ಳೆ ಮಿಶ್ರಣ ಎಂದರೆ ಮೊಸರು. ಗರ್ಭಿಣಿಯರಲ್ಲಿ ಹೆಚ್ಚಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ. ಮೊಸರು ಸೇವಿಸುವುದರಿಂದ ಎದೆಯುರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

    8. ಕಿಡ್ನಿ ಬೀನ್ಸ್:
    ಸಸ್ಯಹಾರಿ ಮೂಲವಾದ ಕಿಡ್ನಿ ಬೀನ್ಸ್ ನಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯಕಾರಿ. ಅಲ್ಲದೇ ಇದು ಗರ್ಭಿಣಿಯರಿಗೆ ಉತ್ತಮ ಆಹಾರವಾಗಿರುತ್ತದೆ.

    9. ಹಸಿರು ತರಕಾರಿಗಳು:
    ಶೂನ್ಯ ಕ್ಯಾಲರಿ ಹಾಗೂ ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ಅದ್ಭುತ ಆಹಾರವೆಂದರೆ ಅದು ಹಸಿರು ತರಕಾರಿಗಳು. ಪಾಲಕ್, ಬ್ರೊಕಲಿ, ಸೊಪ್ಪು ಇತ್ಯಾದಿಗಳನ್ನು ಅವಶ್ಯವಾಗಿ ಗರ್ಭಿಣಿಯರು ಸೇವಿಸಬೇಕು.

    10. ಪನ್ನೀರ್:
    ಪನ್ನೀರ್ ಹೆಚ್ಚಿನ ಪ್ರೋಟಿನ್ ಹೊಂದಿರುತ್ತದೆ. ಇದರಲ್ಲಿ ಹಾಲಿನ ಅಂಶ ಹಾಗೂ ಕ್ಯಾಲ್ಸಿಯಂ ಅಡಕವಾಗಿರುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆಗೆ ಪನ್ನೀರ್ ಸಹಕಾರಿ.

    ತಾಯ್ತನ ಎಂಬುದು ಮಹಿಳೆಯ ಜೀವನದಲ್ಲಿ ಬರುವ ಒಂದು ಅತ್ಯಮೂಲ್ಯವಾದ ಒಂದು ಭಾಗ. ತಾನು ನೋವು ತಿಂದು ಮತ್ತೊಂದು ಜೀವಕ್ಕೆ ಜನ್ಮಕೊಡುವ ಮೂಲಕ ತಾನು ಹೊಸ ಜನ್ಮ ಪಡೆಯುತ್ತಾಳೆ ತಾಯಿ. ಈ ವಿಶೇಷ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಉತ್ತಮ ಆರೈಕೆ ಹಾಗೂ ಪೌಷ್ಠಿಕ ಆಹಾರವನ್ನು ನೀಡಬೇಕು.

  • ಎಚ್‍ಡಿಕೆ ಮಾತನ್ನು ನಂಬಿ ಗರ್ಭಿಣಿಯಾಗಿದ್ರೆ ಬೀದಿಗೆ ಬರುತ್ತಿದ್ದರು: ಆಯನೂರು ಮಂಜುನಾಥ್

    ಎಚ್‍ಡಿಕೆ ಮಾತನ್ನು ನಂಬಿ ಗರ್ಭಿಣಿಯಾಗಿದ್ರೆ ಬೀದಿಗೆ ಬರುತ್ತಿದ್ದರು: ಆಯನೂರು ಮಂಜುನಾಥ್

    ಬೆಂಗಳೂರು: ಮಹಿಳೆಯರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಕೇಳಿ ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರವರು ಜೆಡಿಎಸ್ ಪ್ರಣಾಳಿಕೆಗೆ ಟಾಂಗ್ ನೀಡಿದ್ದಾರೆ.

    ಇಂದು ಮಧ್ಯಾಹ್ನದ ವೇಳೆ ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ಅಯನೂರು ಮಂಜುನಾಥ್ ಜೆಡಿಎಸ್ ಪ್ರಣಾಳಿಕೆಯ ಬಗ್ಗೆ ಮಾತನಾಡುತ್ತಾ, ಸಿಎಂ ಕುಮಾರಸ್ವಾಮಿಯವರು ತಮ್ಮ ಜೆಡಿಎಸ್ ಪ್ರಣಾಳಿಕೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಪ್ರತಿ ತಿಂಗಳು 6 ಸಾವಿರ ರುಪಾಯಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಆದರೆ ತಮ್ಮ ಬಜೆಟ್ ನಲ್ಲಿ ಇದಕ್ಕೆ ಮಾತು ತಪ್ಪಿದ್ದಾರೆ. ಒಂದು ವೇಳೆ ಸಿಎಂ ಅವರ ಮಾತನ್ನು ನಂಬಿ ಮಹಿಳೆಯರು ಗರ್ಭಿಣಿಯಾಗಿದ್ದರೆ ಅವರ ಸ್ಥಿತಿ ಹರೋಹರ ಆಗುತಿತ್ತು ಎಂದು ಹೇಳಿದರು.

    ಆಯನೂರು ಬಳಸಿದ ಪದಕ್ಕೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಹಿಳಾ ಮತ್ತು ಕಲ್ಯಾಣ ಖಾತೆಯ ಸಚಿವೆ ಜಯಮಾಲಾ, ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಜಯಮ್ಮ ಬಾಲರಾಜು, ವೀಣಾ ಅಚ್ಚಯ್ಯ ಅವರು ಮಂಜುನಾಥ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಯಾರು ಯಾರನ್ನು ಕೇಳಿ ಗರ್ಭಿಣಿಯಾಗುವುದಿಲ್ಲ. ನಿಮ್ಮನ್ನು ಹೆರುವಾಗ ನಿಮ್ಮ ತಾಯಿ ಯಾರನ್ನಾದರೂ ಕೇಳಿ ಗರ್ಭಿಣಿಯಾಗಿದ್ದರೆ ಎಂದು ಪ್ರಶ್ನಿಸಿದರು. ಇದರಿಂದ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೆ ಉಂಟಾಯಿತು.

    ಈ ವೇಳೆ ಮಧ್ಯ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ ಅವರು, ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ, ನಿಮ್ಮಲ್ಲೂ ಹೆಣ್ಮಕ್ಕಳು ಇದ್ದಾರೆ ಹೀಗೆಲ್ಲಾ ಮಾತನಾಡಬೇಡಿ ಎಂದು ಆಯನೂರು ಮಂಜುನಾಥ್ ಅವರಿಗೆ ತಿರುಗೇಟು ನೀಡಿದರು.

  • 13 ವರ್ಷದ ಬಾಲಕಿಯನ್ನ ಮೂರು ತಿಂಗಳ ಗರ್ಭಿಣಿಯನ್ನಾಗಿಸಿದ 45ರ ಕಾಮುಕ

    13 ವರ್ಷದ ಬಾಲಕಿಯನ್ನ ಮೂರು ತಿಂಗಳ ಗರ್ಭಿಣಿಯನ್ನಾಗಿಸಿದ 45ರ ಕಾಮುಕ

    ಕೋಲಾರ: 45 ವರ್ಷದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    45 ವರ್ಷದ ಗೋವಿಂದಪ್ಪ ಅತ್ಯಾಚಾರಗೈದ ಆರೋಪಿ. ಬಾಲಕಿಯ ಮೇಲೆ ಮೂರು ತಿಂಗಳ ಹಿಂದೆಯೇ ಅತ್ಯಾಚಾರ ನಡೆದಿದೆ. ಆದರೆ ಮನೆಯಲ್ಲಿ ಯಾರಿಗಾದ್ರೂ ಅತ್ಯಾಚಾರದ ವಿಷಯ ತಿಳಿಸಿದ್ರೆ ನಿನ್ನನ್ನು ಹಾಗು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಶುಕ್ರವಾರ ಅನಾರೋಗ್ಯವೆಂದು ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ರು.

    ಬಾಲಕಿಯನ್ನು ತಪಾಸಣೆ ನಡೆಸಿದಾಗ ಆಕೆ ಮೂರು ತಿಂಗಳು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ರಾತ್ರಿಯೇ ಬಾಲಕಿಯ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ರೂ, ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ನಾವು ದಲಿತರೆಂದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗ್ತಿದೆ ಎಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ – 5 ತಿಂಗಳ ಗರ್ಭಿಣಿ ಮೇಲೆ ಹಲ್ಲೆ, ಗರ್ಭಪಾತ

    ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ – 5 ತಿಂಗಳ ಗರ್ಭಿಣಿ ಮೇಲೆ ಹಲ್ಲೆ, ಗರ್ಭಪಾತ

    ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಐದು ತಿಂಗಳ ಗರ್ಭಿಣಿ ಹಲ್ಲೆಯಾದ ಪರಿಣಾಮ ಗರ್ಭಪಾತವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲೂಕು ನೆರ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವರಲಕ್ಷ್ಮಿ ಹಲ್ಲೆಗೊಳಗಾಗಿ ಗರ್ಭಪಾತವಾದ ಗರ್ಭಿಣಿ. ಗ್ರಾಮದಲ್ಲಿ ನಡೆದ ಗಲಾಟೆಯಲ್ಲಿ ತಮ್ಮ ಮನೆ ಬಳಿ ಇದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯ ಐದು ಜನರು ಎರಡು ದಿನಗಳ ಹಿಂದೆ ಹಲ್ಲೆ ಮಾಡಿದ್ದಾರೆ.

    ಹಲ್ಲೆ ಮಾಡಿದ ಪರಿಣಾಮ ವರಲಕ್ಷ್ಮಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಐದು ತಿಂಗಳ ಮಗು ಹೊರ ಪ್ರಪಂಚ ನೋಡದೆ ಹೊಟ್ಟೆಯಲ್ಲೆ ಪ್ರಾಣ ಬಿಟ್ಟಿದೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಕೋರರಾದ ಪಾಪಣ್ಣ, ಆನಂದ್, ಹರೀಶ್ ಸೇರಿದಂತೆ ಇತರೆ ಐದು ಜನರನ್ನ ಬಂಧಿಸಿದ್ದಾರೆ.

  • ಸ್ನೇಹಿತರ ಜೊತೆಗೂಡಿ ಗರ್ಭಿಣಿ ಮೇಲೆ ಆಟೋ ಚಾಲಕನಿಂದ ಗ್ಯಾಂಗ್ ರೇಪ್!

    ಸ್ನೇಹಿತರ ಜೊತೆಗೂಡಿ ಗರ್ಭಿಣಿ ಮೇಲೆ ಆಟೋ ಚಾಲಕನಿಂದ ಗ್ಯಾಂಗ್ ರೇಪ್!

    ಚಂಡೀಗಢ : ಆಟೋ ಚಾಲಕ ಹಾಗೂ ಆತನ ಇಬ್ಬರು ಸಹಚರರು 23 ವರ್ಷದ ಗರ್ಭಿಣಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಹರಿಯಾಣದ ಮನೇಸರ್‍ನಲ್ಲಿ ಶನಿವಾರ ಬೆಳಕಿಗೆ ಬಂದಿದೆ.

    ಮೇ 21ರಂದು ಗರ್ಭಿಣಿ ವೈದ್ಯಕೀಯ ಪರೀಕ್ಷೆ ಮುಗಿಸಿಕೊಂಡು ಬರುವ ವೇಳೆ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಒಳಗಾದ ಗರ್ಭಿಣಿಯ ಪತಿ ಶುಕ್ರವಾರ ಮನೇಸರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನಡೆದಿದ್ದು ಏನು?
    ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯು 6 ತಿಂಗಳ ಗರ್ಭಿಣಿಯಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಪತಿಯೊಂದಿಗೆ ಬೈಕಿನಲ್ಲಿ ತೆರಳಿದ್ದಾರೆ. ವೈದ್ಯಕೀಯ ತಪಾಸಣೆ ನಂತರ ತನಗೆ ಬೈಕ್‍ನಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಕ್ಕೆ ಪತಿ ಆಟೋದಲ್ಲಿ ಕಳುಹಿಸಿದ್ದಾರೆ.

    ಬಾಯಾರಿಕೆ ಆಗಿದ್ದರಿಂದ ಆಟೋ ಚಾಲಕನ ಬಳಿ ನೀರು ಕೇಳಿ ಕುಡಿದಿದ್ದಾಳೆ. ಈ ವೇಳೆ ಆಕೆಗೆ ಪ್ರಜ್ಞೆ ತಪ್ಪಿದ್ದು, ಆಟೋ ಚಾಲಕ ಹಾಗೂ ಆತನ ಸಹಚರರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯು ಮೂಲತಃ ಬಿಹಾರದವರು, ಮನೇಸರ್‍ನಲ್ಲಿ ಗಂಡ ಹಾಗೂ ಮಗುನೊಂದಿಗೆ ಇದ್ದಾರೆ.

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೇಯ ನಂತರ ಭ್ರೂಣ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

  • ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!

    ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!

    ಬೆಂಗಳೂರು: ಮತದಾನಕ್ಕೆ ಅವಕಾಶ ನೀಡದ್ದಕ್ಕೆ ತುಂಬು ಗರ್ಭಿಣಿಯೊಬ್ಬರು ಬಿಕ್ಕಿ ಬಿಕ್ಕಿ ಅತ್ತ ಘಟನೆ ಬನಶಂಕರಿಯ ಬಿಎನ್ ಎಂ ಕಾಲೇಜಿನ 142 ರ ಮತಗಟ್ಟೆಯಲ್ಲಿ ನಡೆದಿದೆ.

    ಬನಶಂಕರಿಯ ಎರಡನೇ ಹಂತದಲ್ಲಿ ವಾಸವಾಗಿರುವ ಚೈತ್ರ ಅವರು ಇಂದು ಬೆಳಗ್ಗೆ ಮತದಾನಕ್ಕೆ ಆಗಮಿಸಿದ್ದರು. ಈ ವೇಳೆ ಇವರ ವೋಟರ್ ಐಡಿ ಫೋಟೊ ಕಾಪಿ ಮಾನ್ಯ ಮಾಡುತ್ತಿಲ್ಲ ಅಂತ ಸಿಬ್ಬಂದಿ ತಿಳಿಸಿದ್ದಾರೆ.

    ಚೈತ್ರ ಧಾರವಾಡ ಮೂಲದವರಾಗಿದ್ದು, ವೋಟರ್ ಐಡಿ ಜೆರಾಕ್ಸ್ ಬಿಟ್ಟು ಬೇರೆ ಯಾವುದೇ ದಾಖಲೆ ಇರಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಪತ್ರಕರ್ತರೊಬ್ಬರ ಮಧ್ಯಪ್ರವೇಶದಿಂದ ಮತದಾನಕ್ಕೆ ಅವಕಾಶ ಪಡೆದು ಚೈತ್ರ ಸಂತಸಗೊಂಡಿದ್ದಾರೆ.

  • 4 ವರ್ಷದ ಮಗುವಿಗೆ ಬುದ್ಧಿ ಕಲಿಸಲು ಗರ್ಭಿಣಿಯಿಂದ ನೀಚ ಕೃತ್ಯ- ವಿಡಿಯೋ

    4 ವರ್ಷದ ಮಗುವಿಗೆ ಬುದ್ಧಿ ಕಲಿಸಲು ಗರ್ಭಿಣಿಯಿಂದ ನೀಚ ಕೃತ್ಯ- ವಿಡಿಯೋ

    ಬೀಜಿಂಗ್: 7 ತಿಂಗಳ ಗರ್ಭಿಣಿ ಬಾಲಕನೊಬ್ಬನಿಗೆ ಬುದ್ಧಿ ಕಲಿಸಲು ಕಾಲನ್ನು ಅಡ್ಡವಿಟ್ಟು ಆತನನ್ನು ಬೀಳಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ ಜನರು ಗರ್ಭಿಣಿಯನ್ನು ಟೀಕಿಸಿದ್ದಾರೆ.

    4 ವರ್ಷದ ಅಪರಿಚಿತ ಬಾಲಕ ರೆಸ್ಟೋರೆಂಟ್ ಬಳಿ ಓಡಿ ಬರುತ್ತಿದ್ದ. ಓಡಿ ಬಂದು ಬಾಗಿಲಿಗೆ ಹಾಕಿದ ಪ್ಲಾಸ್ಟಿಕ್ ಕರ್ಟ್‍ನ್ ನನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ ಅಲ್ಲಿಯೇ ತನ್ನ ಪತಿ ಜೊತೆ ಕುಳಿತ್ತಿದ್ದ ಗರ್ಭಿಣಿಗೆ ತಾಗಿ ಆಕೆಯ ಊಟ ಮೈಮೇಲೆ ಚೆಲ್ಲಿತ್ತು. ಆದರೆ ಬಾಲಕನಿಗೆ ಇದರ ಬಗ್ಗೆ ಅರಿವಿರಲಿಲ್ಲ.

    ಬಾಲಕ ಓಡಿ ಹೋಗುವಾಗ ಆತನನ್ನು ಮಹಿಳೆ ಹಾಗೂ ಆಕೆಯ ಪತಿ ಗಮನಿಸುತ್ತಿದ್ದರು. ನಂತರ ಮತ್ತೆ ಬಾಲಕ ರೆಸ್ಟೋರೆಂಟ್‍ನಿಂದ ಹೊರ ಹೋಗುವಾಗ ಮಹಿಳೆ ತನ್ನ ಬಲಗಾಲನ್ನು ಅಡ್ಡವಿಟ್ಟು ಆತನನ್ನು ಬೀಳಿಸಿದ್ದಾಳೆ. ಮಹಿಳೆ ಕಾಲನ್ನು ಅಡ್ಡವಿಟ್ಟಿದ್ದನ್ನು ಬಾಲಕ ಗಮನಿಸದೇ ಓಡಿ ಹೋಗುವಾಗ ಬಿದ್ದಿದ್ದಾನೆ.

    ಬಾಲಕ ಬಿದ್ದಿದ್ದರೂ ಮಹಿಳೆ ಹಾಗೂ ಆಕೆಯ ಪತಿ ಆತನಿಗೆ ಸಹಾಯ ಮಾಡದೇ ಊಟ ಮಾಡಿದ್ದಾರೆ. ನಂತರ ಬಾಲಕನ ಕಿರುಚಿದ ಧ್ವನಿ ಕೇಳಿ ತಾಯಿ ಓಡಿ ಬಂದು ಆತನನ್ನು ಎತ್ತಿದ್ದಾರೆ.

    ಮಾಧ್ಯಮಗಳ ಪ್ರಕಾರ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ರೆಸ್ಟೋರೆಂಟ್‍ನಲ್ಲಿ ಬಿದ್ದ ಮೇಲೆ ಆಸ್ಪತ್ರೆಯಲ್ಲಿ ಎರಡು ದಿನ ದಾಖಲಾಗಿದ್ದನು. ಘಟನೆ ಹೇಗಾಯ್ತು ಎಂದು ಕೇಳಿದಾಗ, ಬಾಲಕ ಕಾಲನ್ನು ಅಡ್ಡ ಇರಿಸಿ ಬೀಳಿಸಿದ ವಿಚಾರವನ್ನು ತಿಳಿಸಿದ್ದಾನೆ.

    ಮಗನ ಮಾತು ಕೇಳಿ ತಾಯಿ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾಗ ವಿಡಿಯೋ ನೋಡಿ ದಂಗಾಗಿ ಹೋಗಿದ್ದಾರೆ. ಸತ್ಯಾಂಶ ತಿಳಿದಾಗ ಬಾಲಕನ ತಾಯಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.

    ಪೊಲೀಸರು 7 ತಿಂಗಳ ಗರ್ಭಿಣಿಯನ್ನು 10 ದಿನ ಬಂಧಿಸಿ 1000 ಯುವಾನ್ (10,500 ರೂ)ದಂಡ ವಿಧಿಸಿದ್ದಾರೆ. ಮಹಿಳೆ ಗರ್ಭಿಣಿಯಾಗಿದ್ದ ವಿಚಾರ ಮೊದಲೇ ತಿಳಿದಿದ್ದರೆ, ನಾನು ದೂರು ದಾಖಲಿಸುತ್ತಿರಲಿಲ್ಲ. ನನಗೂ ಮಕ್ಕಳಿದ್ದು, ಆಕೆಯ ಮಗುವಿಗೆ ನೋವು ಮಾಡಲು ಇಷ್ಟಪಡುತ್ತಿರಲಿಲ್ಲ ಎಂದು ಬಾಲಕನ ತಾಯಿ ತಿಳಿಸಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ವಿರುದ್ಧ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮಹಿಳೆ ಬಾಲಕನ ತಾಯಿಯ ಹತ್ತಿರ ಕ್ಷಮೆ ಕೇಳಿ, ಆಸ್ಪತ್ರೆಯ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ತಿಳಿಸಿದ್ದಾಳೆ.

  • ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕ ಎಸ್ಕೇಪ್!

    ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕ ಎಸ್ಕೇಪ್!

    ಬೆಂಗಳೂರು: ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕನೊಬ್ಬ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ನಡೆದಿದೆ.

    ಇಂಜಾಮಮ್ ಉಲ್ ಹಕ್ ಎಂಬ ಯುವಕ ಮುಂಬೈ ಮೂಲದ ಯುವತಿಗೆ ಪ್ರೀತಿಸಿ ವಂಚನೆ ಮಾಡಿದ್ದಾನೆ. ಈತ ಬೆಂಗಳೂರಿನ ಕೆ.ಜಿ. ಹಳ್ಳಿಯವನಾಗಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ.

    ಇಂಜಾಮಾಮ್ ಉಲ್ ಹಕ್ ಗೆ ಸ್ನೇಹಿತರಿಂದಾಗಿ ಮುಂಬೈ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಪರಿಚಯವಾಗುತ್ತದೆ. ಪರಿಚಯ ಇಬ್ಬರ ನಡುವೆ ಪ್ರೀತಿ ಆಗುತ್ತದೆ. ಬಳಿಕ ಒಂದು ವರ್ಷಗಳ ಕಾಲ ಇಬ್ಬರು ಸಿನಿಮಾ, ಪಾರ್ಕ್ ಮತ್ತು ಪಬ್ ಅಂತೆಲ್ಲ ಸುತ್ತಾಡಿದ್ದಾರೆ. ಅಷ್ಟೇ ಅಲ್ಲದೇ ಇಂಜಾಮಾಮ್ ಉಲ್ ಹಕ್ ಯುವತಿಯನ್ನ ಮದುವೆ ಆಗುವುದಾಗಿ ನಂಬಿಸಿ ಒಂದು ವರ್ಷಗಳ ಕಾಲ ಆಕೆಯೊಂದಿಗೆ ಜೆಪಿ ನಗರದಲ್ಲಿ ಲಿವಿಂಗ್ ಟುಗೇದರ್ ನಲ್ಲಿ ಇದ್ದನು.

    ಯುವತಿ ತಾನು ಗರ್ಭಿಣಿ ಆಗಿರುವ ವಿಷಯವನ್ನು ಇಂಜಾಮಾಮ್ ಉಲ್ ಹಕ್‍ಗೆ ತಿಳಿಸಿದ್ದಾರೆ. ನಂತರ ಯುವತಿಯನ್ನ ಕೆ.ಜಿ. ಹಳ್ಳಿಯಲ್ಲಿರುವ ಯುವಕನ ಮನೆಗೆ ಕರಿಸಿ ಆರೋಪಿ ಇಂಜಾಮಾಮ್ ಕುಟುಂಬದವರು ಯುವತಿಯ ಹಲ್ಲೆ ಮಾಡಿ ಬೆದರಿಸಿದ್ದಾರೆ. ನಂತರ ಈ ಘಟನೆ ಬಗ್ಗೆ ನೊಂದ ಯುವತಿ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆ ಮಾಡಿದ್ದ ಪ್ರೀಯಕರ ಹಾಗೂ ಕುಟುಂಬದವರು ಕೆ.ಜಿ ಹಳ್ಳಿಯಲ್ಲಿರುವ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.

    ಕೆ.ಜಿ. ಹಳ್ಳಿ ಪೊಲೀಸರು ಒಂದು ತಿಂಗಳ ಹಿಂದೆ ದೂರು ದಾಖಲಿಸಿಕೊಂಡಿದ್ದರೂ ಯುವಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪೊಲೀಸರ ಬಳಿ ಕೇಳಲು ಹೋದರೆ ಸರಿಯಾಗಿ ಸಹಕರಿಸುತ್ತಿಲ್ಲ ಅಂತ ನೊಂದ ಯುವತಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಬುಧವಾರ ಹೆರಿಗೆ, ಆದ್ರೆ ಮಂಗಳವಾರ ಆಸ್ಪತ್ರೆಯಿಂದಲೇ ಗರ್ಭಿಣಿ ನಾಪತ್ತೆ- ಮಹಿಳೆಯ ಹೈಡ್ರಾಮಕ್ಕೆ ಪೊಲೀಸರು ಸುಸ್ತು!

    ಬುಧವಾರ ಹೆರಿಗೆ, ಆದ್ರೆ ಮಂಗಳವಾರ ಆಸ್ಪತ್ರೆಯಿಂದಲೇ ಗರ್ಭಿಣಿ ನಾಪತ್ತೆ- ಮಹಿಳೆಯ ಹೈಡ್ರಾಮಕ್ಕೆ ಪೊಲೀಸರು ಸುಸ್ತು!

    ತಿರುವನಂತಪುರಂ: ಗರ್ಭಿಣಿಯಾಗದೇ ಪತಿಯ ಮನೆಯವರನ್ನು ನಂಬಿಸಿ, ಹೆರಿಗೆಂದು ಆಸ್ಪತ್ರೆಗೆ ಬಂದು ನಂತರ ನಾಪತ್ತೆಯಾಗಿ ಹೈಡ್ರಾಮ ಮಾಡಿದ್ದ ಮಹಿಳೆಯನ್ನು ಕೊನೆಗೂ ಪತ್ತೆಹಚ್ಚುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮದವೂರ್ ಸಮೀಪದ ಪಲ್ಲಿಕಲ್ ನ ನಿವಾಸಿ ಅನ್ಶಾದ್ ಪತ್ನಿ ಶಾಮ್ನಾ ಹೈಡ್ರಾಮ ಸೃಷ್ಟಿಸಿದ್ದ ಮಹಿಳೆ. ಈಕೆ ಗರ್ಭಿಣಿ ಆಗದಿದ್ದರೂ ಪತಿಯ ಮನೆಯವರಿಗೆ ತಾನು ಗರ್ಭಿಣಿ ಎಂದು ನಂಬಿಸಿದ್ದಾಳೆ. ನಂತರ ಅವರು ಬುಧವಾರ ನಗರದ ಎಸ್‍ಎಟಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಕುರಿತು ವೈದ್ಯರು ಸೂಚಿಸಿದ್ದರು.

    ಇದರಂತೆ ಮಂಗಳವಾರ ಶಾಮ್ನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಾಮ್ನಾ ತಾನು ಗರ್ಭಿಣಿ ಆಗಿಲ್ಲ ಎನ್ನುವುದು ಕುಟುಂಬದವರಿಗೆ ತಿಳಿಯುತ್ತದೆ ಎಂದು ಭಯಗೊಂಡು ಮಂಗಳವಾರ ಮಧ್ಯಾಹ್ನದ ವೇಳೆಗೆ ಇದ್ದಕ್ಕಿದಂತೆ ಆಸ್ಪತ್ರೆಯಿಂದ ಕಣ್ಮರೆಯಾಗಿದ್ದಾಳೆ.

    ಈ ಬಗ್ಗೆ ಕುಟುಂಬದವರು ಮೆಡಿಕಲ್ ಕಾಲೇಜ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕಾಟವನ್ನು ಆರಂಭಿಸಿದ್ದಾರೆ. ಶಾಮ್ನಾ ಮಂಗಳವಾರ ಬೆಳಿಗ್ಗೆ ಪರೀಕ್ಷೆಗಾಗಿ ಹೊರ ರೋಗಿ ವಿಭಾಗಕ್ಕೆ ಬಂದಿದ್ದಾಳೆ. ಆದರೆ ಮಧ್ಯಾಹ್ನ 1.30 ರ ವೇಳೆಗೆ ಆಕೆ ಅಲ್ಲಿಂದ ಕಾಣೆಯಾಗಿದ್ದಳು.

    ಆಸ್ಪತ್ರೆಯ ಸಿಬ್ಬಂದಿ, ಪತಿ, ಅವರ ಮನೆಯವರು ಸೇರಿ ಇಡೀ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದರೂ ಆಕೆ ಮಾತ್ರ ಪತ್ತೆಯಾಗಿರಲಿಲ್ಲ. ಪೊಲೀಸರು ಆಕೆ ಮೊಬೈಲ್ ಫೋನ್ ಟವರ್ ಟ್ರೇಸ್ ಮಾಡಿದ್ದಾರೆ. ಮಂಗಳವಾರ ರಾತ್ರಿ ಆಕೆ ಕೇರಳದ ಎರ್ನಾಕುಲಂ ನಲ್ಲಿ ಇರುವುದು ಗೊತ್ತಾಗಿದೆ. ನಂತರ ಅಲ್ಲಿದ್ದ ಎಲ್ಲಾ ಆಸ್ಪತ್ರೆಯಲ್ಲಿ ಹುಡಕಾಟ ನಡೆಸಿದ್ದಾರೆ. ಅಲ್ಲೂ ಪತ್ತೆಯಾಗಿಲ್ಲ.

    ಪೊಲೀಸರು, ಪೋಷಕರು ಹುಡುಕುತ್ತಿದ್ದರೂ ಶಾಮ್ನಾ, ಸಂಬಂಧಿಗೆ ಕರೆ ಮಾಡಿ ನಾನು ಸೇಫಾಗಿ ಇದ್ದೀನಿ. ಭಯಪಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ.

    ಪೊಲೀಸರು ಮತ್ತೆ ಆಕೆಯ ಫೋನ್ ಟ್ರೇಸ್ ಮಾಡಿ ನೋಡಿದಾಗ ವೆಲ್ಲೂರಿನಲ್ಲಿ ಪತ್ತೆಯಾಗಿದೆ. ಸದ್ಯ ಶಾಮ್ನಾ ಮೊಬೈಲ್ ಕರೆ ಆಧರಿಸಿ ಪೊಲೀಸರು ಪತ್ತೆಕಾರ್ಯ ನಡೆಸಿದ್ದಾರೆ. ಕೊನೆಗೆ ಕರುಣಗಪ್ಪಲ್ಲಿಯಲ್ಲಿ ಪತ್ತೆಯಾಗಿದ್ದಾಳೆ.

    ಪೊಲೀಸರು ಮಹಿಳೆಯನ್ನ ವೈದ್ಯರ ಬಳಿ ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿಲ್ಲ ಎಂಬ ಸತ್ಯ ಹೊರಬಂದಿದೆ. ಬಳಿಕ ಆಕೆಯನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ಮಾಡಿದಾಗ ತಾನು ಗರ್ಭಿಣಿಯಲ್ಲ ಅದಕ್ಕಾಗಿ ಈ ರೀತಿ ನಾಟಕ ಮಾಡಿದೆ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.