Tag: Pregnant

  • ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಬೀದರ್: ನಗರದ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ತುಂಬು ಗರ್ಭಿಣಿಯನ್ನು ನಿರ್ಲಕ್ಷಿಸಿದ ಘಟನೆ ಇಂದು ನಡೆದಿದೆ.

    ಮಹಿಳೆ ತಾಂಡದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ನೀಡದೆ ಬ್ರಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಇದೀಗ ಆಸ್ಪತ್ರೆ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ.

    ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ತಾಂಡದಿಂದ ಹೆರಿಗೆಗಾಗಿ ಬಂದಿದ್ದ ತುಂಬು ಗರ್ಭಿಣಿಗೆ ಸ್ಟ್ರೆಚರ್ ನೀಡಿ ಸಿಬ್ಬಂದಿ ವಾರ್ಡಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಗರ್ಭಿಣಿ ಗಂಟೆಗಟ್ಟಲೆ ಕಾದು ಕಾದು ಸುಸ್ತಾದರೂ ಬ್ರಿಮ್ಸ್ ಸಿಬ್ಬಂದಿ ಸ್ಟ್ರೆಚರ್ ನೀಡದ ಕಾರಣ ನಡೆದುಕೊಂಡೇ ಹೋಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಸಿಬ್ಬಂದಿ ಸ್ಟ್ರೆಚರ್ ನೀಡದಿರುವುದರಿಂದ ಹೈರಾಣಾದ ಗರ್ಭಿಣಿ ಭಾಗ್ಯಶಿರಾ ಅಕ್ಷರಃ ನರಕಯಾತನೆ ಅನುಭವಿಸಿದ್ದು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

    ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

    – ಗುಂಡಿಗೆ ಹೆದರಿ ಮನೆಯಲ್ಲಿ ಕೂತ ಗರ್ಭಿಣಿ

    ಬೆಂಗಳೂರು: ಸಿಲಿಕಾನ್ ಸಿಟಿಯ ದೊಡ್ಡನಕುಂದಿಯ ಕುಂದೇನಹಳ್ಳಿ ರಸ್ತೆಯಲ್ಲಿ ಯಮರೂಪಿ ಗುಂಡಿಗಳು ಗರ್ಭಿಣಿಯರನ್ನು ರಸ್ತೆಗೆ ಬಾರದಂತೆ ಹೆದರಿಸಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಗರ್ಭಪಾತವಾಗುವುದು ಎಂದು ವೈದ್ಯರ ಎಚ್ಚರಿಕೆ ನೀಡಿದ್ದಾರೆ.

    ಮಗು ಪ್ರತಿ ತಾಯಿ ಕನಸು. ಮಗುವಿಗೆ ಕೊಂಚ ನೋವಾದರು ತಾಯಿ ಜೀವ ಸಹಿಸಲ್ಲ. ಅದರಲ್ಲೂ ಹೊಟ್ಟೆಯಲ್ಲಿರುವ ಮಗುವನ್ನ ತಾಯಿ ಕಣ್ಣಿನ ರೆಪ್ಪೆಯಂತೆ ಕಾಯ್ತಾಳೆ. ಹೀಗಿರುವಾಗ ಮಾರತಹಳ್ಳಿ ಸಮೀಪದ ದೊಡ್ಡನೆಕುಂದಿ ವಾರ್ಡ್‍ನ ಕುಂದೇನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಓಡಾಡಿದರೆ ನಿಮ್ಮ ಮಗು ಶಾಶ್ವತವಾಗಿ ಕಣ್ಣು ಬಿಡಲ್ಲ ಎಂದು ವೈದ್ಯರು ಬ್ಯಾಂಕ್ ಉದ್ಯೋಗಿ ಕಲ್ಯಾಣಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಗರ್ಭದಲ್ಲಿರೋ ಕಂದಮ್ಮನಿಗಾಗಿ ತಾಯಿ ಈಗ ಈ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟು ಮನೆಯಲ್ಲಿಯೇ ಇದ್ದಾರೆ. ಇದನ್ನೂ ಓದಿ:ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ಕಲ್ಯಾಣಿ ಅವರು ಸದ್ಯ 7 ತಿಂಗಳ ಗರ್ಭಿಣಿ. ಇವರಿಗೆ 2 ತಿಂಗಳು ಇರುವಾಗ ಈ ರಸ್ತೆಯಲ್ಲಿ ಓಡಾಡಿದ್ದರು. ಸಂಚರಿಸುವಾಗ ಗುಂಡಿಯಲ್ಲಿ ವಾಹನ ಇಳಿದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರ ಬಳಿ ಹೋದಾಗ ಇಂಥ ಗುಂಡಿಯಲ್ಲಿ ವಾಹನ ಇಳಿಸಿದ್ದರಿಂದಲೇ ಈ ಅನಾಹುತವಾಗಿದೆ. ಮಗುವಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಅಂತ ಕೈಚೆಲ್ಲಿದ್ದರು. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಿಂದ ಮಗು ಬದುಕಿದೆ. ಅಂದಿನಿಂದ ಈ ರಸ್ತೆಯಲ್ಲಿ ಕಲ್ಯಾಣಿ ಅವರು ಓಡಾಡೋದನ್ನೇ ಬಿಟ್ಟಿದ್ದಾರೆ. ಇದನ್ನೂ ಓದಿ:ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಈ ರಸ್ತೆಯಲ್ಲಿ 2 ಸಾವಿರ ಅರ್ಪಾರ್ಟ್ ಮೆಂಟ್ ನಿವಾಸಿಗಳಿದ್ದು, 2 ಖಾಸಗಿ ಶಾಲೆಗಳಿವೆ. ಈ ರಸ್ತೆಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಆದರೆ ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ, ಕಾರ್ಪೋರೇಟರ್ ಶ್ವೇತಾ ವಿಜಯಕುಮಾರ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ ಈ ರಸ್ತೆಯ ಒಂದು ಭಾಗ ಖಾಸಗಿಯವರಿಗೆ ಸೇರಿರುವುದರಿಂದ ಈ ರೀತಿ ರಸ್ತೆ ಸರಿಪಡಿಸಲು ಬಿಬಿಎಂಪಿ ವಿಳಂಬನೀತಿ ಮಾಡುತ್ತಿದೆ ಅನ್ನೋದು ಸ್ಥಳೀಯರ ಆಕ್ರೋಶವಾಗಿದೆ. ಇದನ್ನೂ ಓದಿ: ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಖಾಸಗಿ ಹಾಗೂ ಸರ್ಕಾರಿ ಸಿಬ್ಬಂದಿಯ ಕಿತ್ತಾಟದ ಮಧ್ಯೆ ಜನ ಈ ಗುಂಡಿಗೆ ಭಯಬಿದ್ದು ಬದುಕು ಸಾಗಿಸುವಂತಾಗಿದೆ. ಹೊಟ್ಟೆಯೊಳಗಿನ ಕಂದಮ್ಮನಿಗೆ ಯಮನಂತೆ ಕಾಡುವ ಈ ಗುಂಡಿಗೆ ಬಿಬಿಎಂಪಿ ಇನ್ನಾದರೂ ಮುಕ್ತಿ ಕೊಡುತ್ತಾ ನೋಡಬೇಕಿದೆ.

  • ನಟಿ ಐಶ್ವರ್ಯಾ ರೈ ಗರ್ಭಿಣಿ?: ಫೋಟೋ ವೈರಲ್

    ನಟಿ ಐಶ್ವರ್ಯಾ ರೈ ಗರ್ಭಿಣಿ?: ಫೋಟೋ ವೈರಲ್

    ಮುಂಬೈ: ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ.

    ಇತ್ತೀಚೆಗೆ ನಟಿ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಜೊತೆ ಉದ್ಯಮಿ ಮುಕೇಶ್ ಅಂಬಾನಿ ಸಹೋದರಿ ನೀನಾ ಕಠೋರಿಯ ಮಗಳು ನಯನಾತಾರಾ ಅವರ ಪ್ರೀ-ವೆಡ್ಡಿಂಗ್ ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಅಭಿಷೇಕ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರೆ, ಐಶ್ವರ್ಯಾ ಸಬ್ಯಾಸಾಚಿ ವಿನ್ಯಾಸದ ಕೆಂಪು ಬಣ್ಣದ ಸಲ್ವಾರ್‍ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮತ್ತೆ ಐಶ್ವರ್ಯ ರೈ ಗರ್ಭಿಣಿ?

    ಐಶ್ವರ್ಯಾ ತಮ್ಮ ಸಲ್ವಾರ್‍ನ ದುಪ್ಪಟ್ಟಾವನ್ನು ಹರಿಡಿಕೊಂಡು ಹಾಕಿದ್ದರು. ಈ ಫೋಟೋದಲ್ಲಿ ಐಶ್ವರ್ಯಾ ಹೊಟ್ಟೆ ಮುಚ್ಚಿಕೊಂಡಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಐಶ್ವರ್ಯಾ ಮತ್ತೊಮ್ಮೆ ಗರ್ಭಿಣಿ ಆಗಿದ್ದಾರಾ ಎಂದು ಚರ್ಚೆ ನಡೆಸುತ್ತಿದ್ದಾರೆ. ಕೆಲವರು ಐಶ್ವರ್ಯಾ ತಮ್ಮ ಬೇಬಿ ಬಂಪ್ ಮುಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಐಶ್ವರ್ಯಾ ಮತ್ತೆ ಗರ್ಭಿಣಿ ಆಗಿದ್ದಾರಾ? ಎಂದು ಕಮೆಂಟ್ ಮಾಡಿದ್ದಾರೆ.

    ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಐಶ್ವರ್ಯಾ ತಮ್ಮ ಪತಿ ಅಭಿಷೇಕ್ ಜೊತೆ ಸಮಯ ಕಳೆಯಲು ಗೋವಾ ಬೀಚ್‍ಗೆ ಹೋಗಿದ್ದರು. ಈ ವೇಳೆ ಇಬ್ಬರು ನಡೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿತ್ತು. ಫೋಟೋ ನೋಡಿ ಅಭಿಮಾನಿಗಳು ಐಶ್ವರ್ಯಾ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎಂದು ಹೇಳುತ್ತಿದ್ದರು. ಏಕೆಂದರೆ ಬೀಚ್‍ನಲ್ಲಿ ಐಶ್ವರ್ಯ ಧರಿಸಿದ ಉಡುಪಿನಲ್ಲಿ ಅವರು ಗರ್ಭಿಣಿಯಂತೆ ಕಾಣಿಸುತ್ತಿದ್ದರು. ಹಾಗಾಗಿ ಹೀಗಾಗಿ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದರು.

    ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2011ರಲ್ಲಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಆರಾಧ್ಯ ಎಂದು ಹೆಸರನ್ನಿಟ್ಟಿದ್ದಾರೆ.

  • ಡಿಸಿಎಂ ಆಗಮನದ ಬಂದೋಬಸ್ತಿಗೆ ಬಿಸಿಲಲ್ಲಿ ನಿಂತ ತುಂಬು ಗರ್ಭಿಣಿ ಪೇದೆ!

    ಡಿಸಿಎಂ ಆಗಮನದ ಬಂದೋಬಸ್ತಿಗೆ ಬಿಸಿಲಲ್ಲಿ ನಿಂತ ತುಂಬು ಗರ್ಭಿಣಿ ಪೇದೆ!

    ಮಂಗಳೂರು: ತುಂಬು ಗರ್ಭಿಣಿಯಾಗಿದ್ದ ಪೊಲೀಸ್ ಪೇದೆಯೊಬ್ಬರನ್ನು ಡಿಸಿಎಂ ಆಗಮನದ ವೇಳೆ ಬಂದೋಬಸ್ತಿಗೆ ನಿಯೋಜಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಡಿಸಿಎಂ ಅಶ್ವಥ್ ನಾರಾಯಣ್ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಮಣಿಪಾಲಕ್ಕೆ ರಸ್ತೆ ಮೂಲಕ ತೆರಳಿದ್ದರು. ಈ ಸಂದರ್ಭದಲ್ಲಿ ಅವರಿಗೆ ಬಂದೋಬಸ್ತ್ ನೀಡಲು ಮುಲ್ಕಿ ಪೊಲೀಸ್ ಠಾಣೆಯಿಂದ ಗರ್ಭಿಣಿ ಪೇದೆಯನ್ನು ನಿಯುಕ್ತಿಗೊಳಿಸಲಾಗಿತ್ತು. ತುಂಬು ಗರ್ಭಿಣಿಯಾಗಿದ್ದ ಪೇದೆ ರಸ್ತೆಯಲ್ಲಿ ಲಾಠಿ ಹಿಡಿದು ನಿಂತಿರುವ ಚಿತ್ರವನ್ನು ಸಾರ್ವಜನಿಕರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

    ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಗರ್ಭಿಣಿ ಪೇದೆಯನ್ನು ಬಂದೋಬಸ್ತಿಗೆ ನಿಯೋಜಿಸಿದ ಮುಲ್ಕಿ ಠಾಣಾಧಿಕಾರಿಯಿಂದ ವರದಿ ನೀಡುವಂತೆ ಆದೇಶಿಸಿದ್ದಾರೆ.

  • ಮಾರ್ಗಮಧ್ಯೆ ಅಂಬುಲೆನ್ಸ್ ಡೀಸೆಲ್ ಖಾಲಿ- ನರಳಿ ಪ್ರಾಣಬಿಟ್ಟ ಗರ್ಭಿಣಿ

    ಮಾರ್ಗಮಧ್ಯೆ ಅಂಬುಲೆನ್ಸ್ ಡೀಸೆಲ್ ಖಾಲಿ- ನರಳಿ ಪ್ರಾಣಬಿಟ್ಟ ಗರ್ಭಿಣಿ

    ಭುವನೇಶ್ವರ: ಗರ್ಭಿಣಿಯನ್ನ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಡೀಸೆಲ್ ಖಾಲಿಯಾಗಿ ಮಾರ್ಗಮಧ್ಯದಲ್ಲಿಯೇ ವಾಹನ ನಿಂತುಕೊಂಡಿದೆ. ಪರಿಣಾಮ ಆಸ್ಪತ್ರೆಗೆ ತೆರಳುವ ಮೊದಲೇ ಗರ್ಭಿಣಿ ನರಳಿ ಪ್ರಾಣಬಿಟ್ಟ ಘಟನೆ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ನಡೆದಿದೆ.

    ಬುಡಕಟ್ಟು ಸಮುದಾಯಕ್ಕೆ ಸೇರಿದ ತುಳಸಿ(23) ಅವರನ್ನು ಮೊದಲು ಬಂಗಿರಿಪೋಸಿಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಕುಟುಂಬಸ್ಥರಿಗೆ ಸಲಹೆ ನೀಡಿದ್ದರು. ಆದ್ದರಿಂದ ಕುಟುಂಬಸ್ಥರು ಗರ್ಭಿಣಿಯನ್ನು ಅಂಬುಲೆನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ವಾಹನದ ಡೀಸೆಲ್ ಖಾಲಿಯಾಗಿದ್ದು, ಒಂದು ಗಂಟೆಗೂ ಅಧಿಕ ಕಾಲ ನೋವಿನಿಂದ ನರಳಿದ ಗರ್ಭಿಣಿ ಅಂಬುಲೆನ್ಸ್‌ನಲ್ಲೇ ಸಾವನ್ನಪ್ಪಿದ್ದಾರೆ.

    ಈ ವೇಳೆ ಅಂಬುಲೆನ್ಸ್‌ನಲ್ಲಿ ಆಶಾ ಕಾರ್ಯಕರ್ತೆ ಕೂಡ ಇದ್ದರು, ಆದರೆ ಅವರು ಅಸಹಾಯಕ ಸ್ಥಿತಿಯಲ್ಲಿದ್ದರು. ಆದ್ದರಿಂದ ಪತ್ನಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮೃತ ಗರ್ಭಿಣಿಯ ಪತಿ ಚಿತ್ತರಂಜನ್ ಮುಂಡಾ ತಿಳಿಸಿದ್ದಾರೆ

    ಅಂಬುಲೆನ್ಸ್ ಡೀಸೆಲ್ ಖಾಲಿ ಆಗಿ ನಿಂತ ತಕ್ಷಣ ಬೇರೆ ವಾಹನದ ವ್ಯವಸ್ಥೆ ಮಾಡಿದ್ದರೆ ನನ್ನ ಪತ್ನಿ ಉಳಿಯುತ್ತಿದ್ದಳು. ಆದರೆ ಸುಮಾರು 2 ತಾಸುಗಳ ಬಳಿಕ ಬೇರೆ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆ ವೇಳೆಗೆ ನನ್ನ ಪತ್ನಿ ಕೊನೆಯುಸಿರು ಎಳೆದಿದ್ದಳು ಎಂದು ಪತಿ ಅಳಲನ್ನು ತೋಡಿಕೊಂಡರು.

    ಅಂಬುಲೆನ್ಸ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ಇತ್ತು. ಆದರೆ ಟ್ಯಾಂಕ್ ಲೀಕ್ ಆಗಿದಕ್ಕೆ ಎಲ್ಲಾ ಡೀಸೆಲ್ ಸೋರಿ ವಾಹನ ಮಾರ್ಗ ಮಧ್ಯೆ ನಿಂತುಕೊಂಡಿತು ಎಂದು ಅಂಬುಲೆನ್ಸ್ ಚಾಲಕ ಹೇಳಿದ್ದಾನೆ. ಸದ್ಯ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಂಬುಲೆನ್ಸ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

  • ನಾನು ತಾಯಿ ಆಗುತ್ತಿದ್ದೇನೆ: ರಾಖಿ ಸಾವಂತ್

    ನಾನು ತಾಯಿ ಆಗುತ್ತಿದ್ದೇನೆ: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಾವು ತಾಯಿ ಆಗುತ್ತಿದ್ದೇನೆ ಎಂದು ಹೇಳಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

    ರಾಖಿ ಸಾವಂತ್ ತಾವು ಗರ್ಭಿಣಿ ಎಂದು ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಇದು ಫನ್ನಿ ವಿಡಿಯೋ ಆಗಿದ್ದು, ರಾಖಿ, “ಜಾನು ನಾನು ತಾಯಿ ಆಗುತ್ತಿದ್ದೇನೆ” ಎಂದು ಹೇಳಿದ್ದಾರೆ. ಇದೇ ವೇಳೆ “ಇದು ಹೇಗೆ ಸಾಧ್ಯ ನಾನು ಲಂಡನ್‍ನಲ್ಲಿ ಇದ್ದೇನೆ” ಎಂದು ಮತ್ತೊಂದು ಧ್ವನಿ(ಅಂದರೆ ಅವರ ಪತಿಯ ಧ್ವನಿ ಕೇಳಿಸುತ್ತದೆ) ವಿಡಿಯೋದಲ್ಲಿ ಕೇಳಿಸುತ್ತದೆ.

    ಎನ್‍ಆರ್‍ಐ ಉದ್ಯಮಿಯನ್ನು ಗೌಪ್ಯವಾಗಿ ಮದುವೆಯಾಗಿದ್ದೇನೆ ಎಂದು ರಾಖಿ ಹೇಳಿದ್ದರು. ಆದರೆ ತಮ್ಮ ಪತಿಯ ಫೋಟೋವನ್ನು ಅವರು ರಿವೀಲ್ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ರಾಖಿ 9 ಪುರುಷರ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ನನ್ನ ಪತಿಯನ್ನು ಗುರುತಿಸಿ ಎಂದು ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದರು.

    ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಪ್ರಶ್ನಿಸಲಾಗಿತ್ತು. ಆಗ ರಾಖಿ ಸಾವಂತ್ ಅವರು, “ನಾನು 2020ರವರೆಗೂ ಮಗುವಿನ ಪ್ಲಾನಿಂಗ್ ಮಾಡುತ್ತೇನೆ. ನನ್ನ ಪತಿ ರಿತೇಶ್ ಮಗುವಿನೊಂದಿಗೆ ಎಲ್ಲರ ಮುಂದೆ ಬರುತ್ತಾರೆ” ಎಂದು ಉತ್ತರಿಸಿದ್ದಾರೆ.

    ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತಮ್ಮ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಈವರೆಗೂ ರಾಖಿ ತಮ್ಮ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

     

    View this post on Instagram

     

    A post shared by Rakhi Sawant (@rakhisawant2511) on

  • ಸರ್ಕಾರಿ ಆಸ್ಪತ್ರೆಗೆ ಬೀಗ- ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಸರ್ಕಾರಿ ಆಸ್ಪತ್ರೆಗೆ ಬೀಗ- ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಯಾದಗಿರಿ: ಭಾನುವಾರ ಎಂಬ ಕಾರಣಕ್ಕೆ ವೈದ್ಯರು, ಸಿಬ್ಬಂದಿ ಸರ್ಕಾರಿ ಆಸ್ಪತ್ರೆ ಬಂದ್ ಮಾಡಿದ್ದು, ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರು ನರಳಾಡಿ ಕೊನೆಗೆ ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಶ್ರೀನಿವಾಸಪುರ ಸರ್ಕಾರಿ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಭಾನುವಾರವೆಂದು ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಬಲಶೆಟ್ಟಿಹಾಳ ಗ್ರಾಮದ ನಿಂಗಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಅವರನ್ನು ಶ್ರೀನಿವಾಸಪುರ ಸರ್ಕಾರಿ ಪ್ರಥಾಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ಬೀಗ ಹಾಕಿದ್ದ ಕಾರಣಕ್ಕೆ ವೈದ್ಯರು ಸಿಗದೆ ನಿಂಗಮ್ಮ ಹೆರಿಗೆ ನೋವಿನಿಂದ ನರಲಾಡಬೇಕಾಯಿತು.

    ಬೇರೆ ದಾರಿ ಕಾಣದೆ ಮಹಿಳೆಯ ಕುಟುಂಬಸ್ಥರು ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿ, ಟಂಟಂ ವಾಹನದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ಟಂಟಂ ವಾಹನದಲ್ಲಿ ಹೆರಿಗೆಯಾಗಿದ್ದು, ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದಾರೆ.

    ಸರ್ಕಾರಿ ಆಸ್ಪತ್ರೆಯ ಬಾಗಿಲು ಮುಚ್ಚಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಭಾನುವಾರವೆಂದು ತಮ್ಮ ಪಾಡಿಗೆ ವೈದ್ಯರು, ಸಿಬ್ಬಂದಿ ಹೋಗಿಬಿಟ್ಟರೆ ರೋಗಿಗಳ ಗತಿಯೇನು? ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗಂಡನನ್ನು ಹುಡುಕಿಕೊಡಿ ಎಂದು ಸಿಎಂ ಬಳಿ ಮಹಿಳೆ ಮನವಿ

    ಗಂಡನನ್ನು ಹುಡುಕಿಕೊಡಿ ಎಂದು ಸಿಎಂ ಬಳಿ ಮಹಿಳೆ ಮನವಿ

    ತುಮಕೂರು: ಮಹಿಳೆಯೊಬ್ಬಳು ಗಂಡ ಬೇಕು ಗಂಡ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿದ್ದಾಳೆ.

    ರಿಜಿಸ್ಟರ್ ಮದುವೆಯಾಗಿ, ಏಳು ತಿಂಗಳ ಗರ್ಭಿಣಿಯಾದ ಬಳಿಕ ತನ್ನನ್ನು ಗಂಡ ಬಿಟ್ಟು ಹೋಗಿ ಬೇರೆ ಮದುವೆಯಾಗಿದ್ದಾನೆ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾಳೆ.

    ತುಮಕೂರು ತಾಲೂಕು ಬೆಳ್ಳಾವಿಯ ಯುವತಿ ದಿವ್ಯಾ ಹಾಗೂ ಇದೇ ಊರಿನಲ್ಲಿ ಬೇಕರಿ ನಡೆಸುತ್ತಿದ್ದ ಪ್ರತಾಪ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿ ರಿಜಿಸ್ಟರ್ ಮದುವೆ ಆಗಿದ್ದರು. ಅಲ್ಲದೆ ಈಗ ದಿವ್ಯಾ ಏಳು ತಿಂಗಳು ತುಂಬು ಗರ್ಭಿಣಿ. ಈ ನಡುವೆ ಕಳ್ಳ ಪ್ರತಾಪ್ ಚಿಕ್ಕಮಗಳೂರು ಮೂಲದ ಯುವತಿಯನ್ನು ಮದುವೆಯಾಗಿದ್ದಾನೆ.

    ಮದುವೆಯಾದ ಬಳಿಕ ಅಲ್ಲಿಂದ ದಿವ್ಯಾಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾನೆ. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ದಿವ್ಯಾ ಈಗ ಅನಾಥೆಯಾಗಿದ್ದಾಳೆ. ದಿಕ್ಕು ದೆಸೆ ಇಲ್ಲದೆ ಕಂಗಾಲಾಗಿದ್ದಾಳೆ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿವೇದನೆ ಮಾಡಿಕೊಳ್ಳುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

  • 38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿಯಾದ 16 ಮಕ್ಕಳ ತಾಯಿ

    38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿಯಾದ 16 ಮಕ್ಕಳ ತಾಯಿ

    ಮುಂಬೈ: 16 ಮಕ್ಕಳ ತಾಯಿಯೊಬ್ಬರು ತಮ್ಮ 38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿ ಆಗಿರುವ ಅಪರೂಪದ ಸಂಗತಿಯೊಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಲಂಕಾಬಾಯಿ ಖರತ್(38) 20ನೇ ಮಗುವಿಗೆ ಜನ್ಮ ನೀಡಲಿರುವ ಮಹಿಳೆ. ಲಂಕಾಬಾಯಿ ಅವರು ಈವರೆಗೂ 16 ಮಕ್ಕಳಿಗೆ ಜನ್ಮ ನೀಡಿದ್ದು, ಮೂರು ಅರ್ಬಾಷನ್ ಆಗಿದೆ. ಈಗ ಅವರು ಮತ್ತೆ 7 ತಿಂಗಳು ಗರ್ಭಿಣಿ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಅಲ್ಲದೆ ಪ್ರತಿ ಬಾರಿ ಅವರು ಒಂದು ಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಡೆಲಿವರಿ ಆದ ಕೆಲವೇ ದಿನಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪುತ್ತಿತ್ತು. ಹೀಗೆ 5 ಮಕ್ಕಳು ಮೃತಪಟ್ಟಿವೆ. ಈಗ ಅವರ 11 ಮಕ್ಕಳು ಬದುಕಿದ್ದಾರೆ. ಲಂಕಾಬಾಯಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಮೂರು ಬಾರಿ ಗರ್ಭಪಾತ ಆಗಿದೆ. 38 ವರ್ಷದಲ್ಲಿ ಅವರು 20ನೇ ಬಾರಿ ಗರ್ಭಿಣಿ ಆಗಿದ್ದಾರೆ ಎಂದು ಬೀಡ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಅಶೋಕ್ ತೋರಟ್ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಮತ್ತೊಬ್ಬ ವೈದ್ಯರು, ಅವರು ಗರ್ಭಿಣಿ ಎಂಬ ವಿಷಯ ತಿಳಿದಾಗ ಮೊದಲು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಗತ್ಯವಿರುವ ಎಲ್ಲ ಪರೀಕ್ಷೆ ನಡೆಸಿದ್ದೇವೆ. ಸದ್ಯ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ. ಇದು ಆಸ್ಪತ್ರೆಯಲ್ಲಿ ಮಹಿಳೆಯ ಮೊದಲ ಹೆರಿಗೆ ಆಗಿದ್ದು, ಈ ಹಿಂದೆ ಎಲ್ಲ ಹೆರಿಗೆ ಮನೆಯಲ್ಲೇ ನಡೆದಿತ್ತು. ಆರೋಗ್ಯದ ಅಪಾಯವನ್ನು ತಪ್ಪಿಸಲು ಎರಡು ತಿಂಗಳಲ್ಲಿ ನಿಗದಿಯಾದ ಹೆರಿಗೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.

  • ಕಲಬುರಗಿಯಲ್ಲಿ ಪೊಲೀಸಪ್ಪನ ಮಗನಿಂದ ಲವ್, ಸೆಕ್ಸ್- ಗರ್ಭಿಣಿ ಎಂದು ಗೊತ್ತಾಗಿ ಮರ್ಡರ್

    ಕಲಬುರಗಿಯಲ್ಲಿ ಪೊಲೀಸಪ್ಪನ ಮಗನಿಂದ ಲವ್, ಸೆಕ್ಸ್- ಗರ್ಭಿಣಿ ಎಂದು ಗೊತ್ತಾಗಿ ಮರ್ಡರ್

    ಕಲಬುರಗಿ: ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯನ್ನು ಪ್ರೀತಿಸಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ರಾಜು ಪೂಜಾರಿ ಕೊಲೆ ಮಾಡಿದ ವ್ಯಕ್ತಿ. ರಾಜು ಪೂಜಾರಿ ಕಲಬುರಗಿಯ ರಾಜಾಪುರದ ನಿವಾಸಿಯಾಗಿದ್ದು, ಕಾಲೇಜು ಯುವತಿಯ ಹಿಂದೆ ಬಿದ್ದು ಲವ್ ಮಾಡಿ ಗರ್ಭಿಣಿ ಮಾಡಿದ್ದನು. ಯುವತಿ ಗರ್ಭಿಣಿ ಆಗಿರುವ ವಿಚಾರ ತಿಳಿದು ಬಲವಂತವಾಗಿ ಅಬಾರ್ಷನ್ ಮಾಡಿಸುವುದಕ್ಕೆ ಮುಂದಾಗಿದ್ದನು. ಅಲ್ಲದೆ ಇದೇ ತಿಂಗಳು 4ರಂದು ಕಾಲೇಜಿಗೆ ತೆರಳಿದ್ದ ಯುವತಿಯನ್ನು ಅಲ್ಲಿಂದ ಕರೆದುಕೊಂಡು ಬಂದು ಅಬಾರ್ಷನ್ ಮಾಡಿಸಿದ್ದನು. ಬಲವಂತವಾಗಿ ಅಬಾರ್ಷನ್ ಮಾಡಿಸುವ ಸಲುವಾಗಿ ಯುವತಿಗೆ ಹೇವಿ ಡೋಸ್ ಇಂಜೆಕ್ಷನ್ ಕೊಡಿಸಿದ್ದನು.

    ಹೇವಿ ಡೋಸ್ ಇಂಜೆಕ್ಷನ್ ನೀಡಿದ್ದರಿಂದ ಗರ್ಭಪಾತದ ವೇಳೆ ಯುವತಿ ಮೃತಪಟ್ಟಿದ್ದಾಳೆ. ಬಳಿಕ ರಾಜು ಪೂಜಾರಿ ಯುವತಿಯ ಶವ ಕಾರಿನಲ್ಲಿಟ್ಟುಕೊಂಡು 48 ಗಂಟೆಗಳ ಕಾಲ ಸುತ್ತಾಡಿದ್ದಾನೆ. ಆದರೆ ಅಷ್ಟರಲ್ಲೇ ಯುವತಿಯ ಶವ ಡಿ ಕಂಪೋಸ್ ಆಗಿ ವಾಸನೆ ಬರುವುದಕ್ಕೆ ಆರಂಭವಾಗಿತ್ತು. ಶವದ ವಾಸನೆ ಬರುವುದಕ್ಕೆ ಶುರುವಾದಾಗ ರಾಜು ಕಾರಲ್ಲೇ ತೆಲಂಗಾಣದ ಕಡೆಗೆ ತೆಗೆದುಕೊಂಡು ಹೋಗಿದ್ದನು. ಬಳಿಕ ತೆಲಂಗಾಣದ ಜಹಿರಬಾದ್ ನ ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಬದಿ ಗುಂಡಿ ತೋಡಿ ಪೆಟ್ರೋಲ್ ಹಾಕಿ ಯುವತಿಯನ್ನು ಸುಟ್ಟು ಹಾಕಿದ್ದಾನೆ.

    ಯುವತಿ ಶಿಬಾರಾಣಿ, ಕಲಬುರಗಿ ಫೈನ್ ಆರ್ಟ್ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಾಲೇಜು ಹೋದ ಯುವತಿ ಸಂಜೆಯಾದರೂ ಮನೆಗೆ ಬಾರದೆ ಹೋದಾಗ ಪೋಷಕರು ಹುಡುಕಾಟ ಶುರು ಮಾಡಿದ್ದಾರೆ. ಎರಡು ದಿನಗಳ ಕಾಲ ಪೋಷಕರು ಹುಡುಕಾಟ ನಡೆಸಿ ಬಳಿಕ ಇದೇ ತಿಂಗಳು 6ರ ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಬಾರಾಣಿ ನಾಪತ್ತೆ ಹಿಂದೆ ರಾಜು ಪೂಜಾರಿಯ ಕೈವಾಡದ ಶಂಕೆಯಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜು ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಾಜು ಯುವತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವುದಾಗಿ ಬಾಯಿಬಿಟ್ಟಿದ್ದಾನೆ. ಹಂತಕನ ಮಾಹಿತಿ ಮೇರೆಗೆ ಪೊಲೀಸರು ತೆಲಂಗಾಣದ ಜಹೀರಾಬಾದ್ ಗೆ ತೆರಳಿದ್ದಾರೆ. ಶಿಬಾರಾಣಿ ಕೊಲೆ ಮಾಡಿ ಸುಟ್ಟು ಹಾಕಿದ್ದ ಜಾಗದಲ್ಲಿ ಯುವತಿಯ ಸುಟ್ಟು ಕರಕಲಾದ ಶವದ ಪತ್ತೆ ಆಗಿದೆ. ಪೊಲೀಸರು ಕೊಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

    ಈ ಕೊಲೆ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವೈದ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗರ್ಭಪಾತ ಮಾಡಿದ ಆರೋಪದ ಮೇಲೆ ಪೊಲೀಸರು ವೈದ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.