Tag: Preetham gowda

  • ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ

    ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ

    ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಪ್ರೀತಂಗೌಡ ಬೆಂಬಲಿಗರು ಬಿಗ್ ಶಾಕ್ ಕೊಟ್ಟಿದ್ದಾರೆ.

    ಪ್ರೀತಂಗೌಡ ಬಲಗೈ ಬಂಟ ಉದ್ದೂರು ಪುರುಷೋತ್ತಮ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರೀತಂಗೌಡ ಯಾವುದೇ ಸೂಚನೆ ನೀಡದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಭೇಟಿಯಾಗಿದ್ದಾರೆ. ಈ ಮೂಲಕ ಪ್ರೀತಂಗೌಡ ಆಪ್ತರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದು, ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಒಳಪೆಟ್ಟು ಬೀಳುವ ಆತಂಕ ಎದುರಾಗಿದೆ.

    ಪ್ರೀತಂಗೌಡ (Preetham Gowda) ಹಾಗೂ ಅವರ ಬೆಂಬಲಿಗರು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ತಿರುಗಿಬಿದ್ದಿದ್ದು, ಬಹಿರಂಗವಾಗಿಯೇ ಶ್ರೇಯಸ್ ಪಟೇಲ್ ಪರ ಪ್ರಚಾರಕ್ಕಿಳಿದಿದ್ದಾರೆ. ಇದೀಗ ಹಾಸನ ಕ್ಷೇತ್ರದಲ್ಲಿ (Hassan Lok Sabha constituency) ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೂ ಪ್ರೀತಂಗೌಡ ಹಾಗೂ ಅವರ ಬೆಂಬಲಿಗರ ನಡೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.

    ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಮೈತ್ರಿ ಆದಾಗಿನಿಂದ ಪ್ರೀತಂಗೌಡ ಹಾಗೂ ಅವರ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದರು. ಇಬ್ಬರ ನಡುವಿನ ಅಸಮಾಧಾನ ಶಮನಗೊಳಿಸಲು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸಿದ್ದರು. ಅಸಮಾಧಾನ ಬಗೆಹರಿಯದ ಹಿನ್ನೆಲೆ ಪ್ರೀತಂಗೌಡ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಬಹಿರಂಗವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ.

  • ಹಾಸನದಲ್ಲಿ ಮುಗಿಯದ ವೈಮನಸ್ಸು- ಪ್ರಚಾರದ ವಿಚಾರದಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟ ಪ್ರೀತಂ

    ಹಾಸನದಲ್ಲಿ ಮುಗಿಯದ ವೈಮನಸ್ಸು- ಪ್ರಚಾರದ ವಿಚಾರದಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟ ಪ್ರೀತಂ

    – ಎನ್‌ಡಿಎ ಅಭ್ಯರ್ಥಿ ಯಾರೇ ಇದ್ರೂ ಬೆಂಬಲಿಸೋದು ನನ್ನ ಕರ್ತವ್ಯ

    ಮೈಸೂರು: ಹಾಸನ (Hassan) ಲೋಕಸಭಾ ಚುನಾವಣೆ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಪ್ರೀತಂಗೌಡ (Preetham Gowda) ನಡುವೆ ವೈಮನಸ್ಸು ಮುಂದುವರಿದಿದೆ. ಇನ್ನೂ ಪ್ರಜ್ವಲ್ ಪರ ಪ್ರಚಾರದ ಕುರಿತು ಮಾತನಾಡುವಾಗಲೂ ಪ್ರೀತಂ ಎಲ್ಲಿಯೂ ಪ್ರಜ್ವಲ್ ರೇವಣ್ಣ ಹೆಸರು ಹೇಳದೆ ಕೇವಲ ಎನ್‌ಡಿಎ ಅಭ್ಯರ್ಥಿ ಎಂದು ಉಲ್ಲೇಖಿಸಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

    ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೀತಂ, ನನ್ನನ್ನು ಕಾಶ್ಮೀರಕ್ಕೆ ಹೋಗು ಅಂದ್ರೆ ಹೋಗುತ್ತೇನೆ. ಕನ್ಯಾಕುಮಾರಿಗೆ ಹೋಗು ಅಂದ್ರೂ ಹೋಗುತ್ತೇನೆ. ಪಕ್ಷ ಹೇಳಿದ ಕಡೆ ಹೋಗುತ್ತೇನೆ. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿ. ಅದಕ್ಕಾಗಿ ಮೈಸೂರಿಗೆ ಬಂದಿದ್ದೇನೆ. ಇಂದು ಮೈಸೂರು ಚಾಮರಾಜನಗರ ಕಾರ್ಯಕರ್ತರ ಸಭೆ ಮಾಡುತ್ತೇನೆ. ಸದಾನಂದ ಗೌಡರು ಹಾಸನಕ್ಕೆ ಹೋಗಿದ್ದರು. ಯಾಕೆ ಹಾಸನಕ್ಕೆ ಹೋಗಿದ್ರಿ ಅಂತ ಕೇಳೋಕೆ ಆಗುತ್ತಾ? ನಾನು ಪಕ್ಷ ಹೇಳಿದ ಕಡೆ ಹೋಗುತ್ತೇನೆ ಎಂದರು. ಇದನ್ನೂ ಓದಿ: ಇಬ್ಬರಲ್ಲಿ ಕಾಲರಾ ದೃಢವಾಗ್ತಿದ್ದಂತೆ ಹಾಸ್ಟೆಲ್ ಖಾಲಿ ಮಾಡಿ ಹೊರಟ ಸ್ಟೂಡೆಂಟ್ಸ್!

    ಪ್ರಜ್ವಲ್ ರೇವಣ್ಣ ಭೇಟಿ ವಿಚಾರ ಗೊತ್ತಿಲ್ಲ, ನನಗೆ ಮಾಹಿತಿ ಇಲ್ಲ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಪ್ರೀತಂಗೌಡ ಮುಖ ನೋಡಿ ಜನ ವೋಟ್ ಹಾಕಲ್ಲ. ನಮ್ಮ ಮನೆಯಲ್ಲೂ ಮೋದಿ ಮುಖ ನೋಡಿ ಮತ ಹಾಕುತ್ತಾರೆ. ಇದು ಪಂಚಾಯಿತಿ ಚುನಾವಣೆಯಲ್ಲ, ದೇಶದ ಚುನಾವಣೆ. ಪಕ್ಷ ಸೂಚನೆ ಕೊಟ್ಟಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: RSS ಬಗ್ಗೆ ತಿಳಿದುಕೊಳ್ಳದೆ ಮಾತನಾಡಿದ್ದೇನೆ: ಪ್ರಜ್ವಲ್ ರೇವಣ್ಣ ಕ್ಷಮೆ

    ಮಾಧ್ಯಮದವರು ಎಷ್ಟೇ ಪ್ರಶ್ನೆ ಮಾಡಿದರೂ ಪ್ರೀತಂಗೌಡ ಒಮ್ಮೆಯೂ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಹೆಸರು ಹೇಳಿಲ್ಲ. ಪ್ರತಿ ಪ್ರಶ್ನೆಗಳಿಗೆ ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ: ಹಿಮಂತ್ ಶರ್ಮಾ

  • ಮೈತ್ರಿ ಮುನಿಸು – ಭಾನುವಾರ ಮೈಸೂರಿನಲ್ಲಿ ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ಮುಖಾಮುಖಿ

    ಮೈತ್ರಿ ಮುನಿಸು – ಭಾನುವಾರ ಮೈಸೂರಿನಲ್ಲಿ ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ಮುಖಾಮುಖಿ

    ಹಾಸನ: ಲೋಕಸಭಾ ಚುನಾವಣೆಗೆ (Lok Sabha Election) ಇನ್ನು 19 ದಿನಗಳು ಮಾತ್ರ ಉಳಿದಿದ್ದು, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಆದರೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ (Preetham Gowda) ಮಾತ್ರ ಪ್ರಜ್ವಲ್ ರೇವಣ್ಣ ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಸನದಲ್ಲಿ ನಡೆದ ಎರಡು ಸಮನ್ವಯ ಸಭೆ ಹಾಗೂ ನಾಮಪತ್ರ ಸಲ್ಲಿಕೆಗೂ ಪ್ರೀತಂಗೌಡ ಗೈರಾಗಿದ್ದು, ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೂರು ನೀಡಿದ್ದಾರೆ. ನಾಳೆ (ಏ.7) ಪ್ರೀತಂಗೌಡ ಹಾಗೂ ಪ್ರಜ್ವಲ್ ರೇವಣ್ಣ ಮೈಸೂರಿನಲ್ಲಿ (Mysuru) ಮುಖಾಮುಖಿಯಾಗಲಿದ್ದು, ಎಲ್ಲದಕ್ಕೂ ತೆರೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.

    ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಶಾಸಕ ಪ್ರೀತಂಗೌಡ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಿಲ್‌ಕುಲ್ ಬೇಡ ಎಂದು ಪಟ್ಟು ಹಿಡಿದಿದ್ದರು. ಆದರೆ ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿಯಾದರೂ ಪ್ರೀತಂಗೌಡ ಮಾತ್ರ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬದ ಮೇಲಿನ ರಾಜಕೀಯ ದ್ವೇಷವನ್ನು ಮರೆತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಪ್ರೀತಂಗೌಡ ಬಿಜೆಪಿಯಿಂದ ಸ್ಪರ್ಧಿಸಿ 2018ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಹೆಚ್.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಏಕೈಕ ಬಿಜೆಪಿ ಶಾಸಕರಾಗಿದ್ದ ಪ್ರೀತಂಗೌಡರನ್ನು ಹೆಚ್.ಡಿ.ರೇವಣ್ಣ ಆಕಸ್ಮಿಕ ಶಾಸಕ ಎಂದು ಪದೇ ಪದೇ ಹೀಯಾಳಿಸುತ್ತಿದ್ದರು. ಆದರೆ ಪ್ರೀತಂಗೌಡ ಬೆಂಬಲಕ್ಕೆ ಯಾವ ಬಿಜೆಪಿ ನಾಯಕರೂ ನಿಲ್ಲಲಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಕೊಲ್ಲುತ್ತೇವೆಂದ ರಕ್ಷಣಾ ಸಚಿವರ ಹೇಳಿಕೆಗೆ ಪಾಕ್‌ ಖಂಡನೆ

    ಅನಂತರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಹತ್ತಿರವಾದ ಪ್ರೀತಂಗೌಡ ಆಪರೇಷನ್ ಕಮಲ ಮಾಡುವಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಮನೆಗೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಯಡಿಯೂರಪ್ಪ ಆದಿಯಾಗಿ ಇಡಿ ಬಿಜೆಪಿ ನಾಯಕರ ದಂಡೆ ಪ್ರೀತಂಗೌಡ ಬೆಂಬಲಕ್ಕೆ ನಿಂತಿತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಪ್ರೀತಂಗೌಡ ವರ್ಚಸ್ಸು ಬದಲಾಯಿತು. ರೇವಣ್ಣ ತಂದಿದ್ದ ಬಹುಕೋಟಿ ವೆಚ್ಚದ ಕಾಮಗಾರಿಗಳನ್ನು ಬದಲಾಯಿಸಿದರು. ಹಾಸನ ವಿಮಾನ ನಿಲ್ದಾಣ, ಚನ್ನಪಟ್ಟಣ ಕೆರೆ ಅಭಿವೃದ್ಧಿ, ಐಐಟಿಗೆ ಮೀಸಲಿಟ್ಟಿದ್ದ ಜಾಗ, ಟ್ರಕ್ ಟರ್ಮಿನಲ್ ಸೇರಿದಂತೆ ಹಲವು ಕಾಮಗಾರಿಗಳ ವಿಚಾರದಲ್ಲಿ ಪ್ರೀತಂಗೌಡ ಹಾಗೂ ಹೆಚ್.ಡಿ.ರೇವಣ್ಣ ಕುಟುಂಬದ ನಡುವೆ ಮಾತಿನ ಯುದ್ಧ ನಡೆದು ಹೋಯಿತು. ಪ್ರೀತಂಗೌಡರಂತು ಹೆಚ್.ಡಿ.ರೇವಣ್ಣ ಕುಟುಂಬದ ಬಗ್ಗೆ ಲಘುವಾಗಿ ಟೀಕೆ ಮಾಡಿದರು. ಇದರಿಂದ ಕೆರಳಿದ ದಳಪತಿಗಳು 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರೀತಂಗೌಡರನ್ನು ಸೋಲಿಸಲು ಪಣತೊಟ್ಟು ಯಶಸ್ವಿಯಾದರು. ಇದು ಪ್ರೀತಂಗೌಡರ ನಿದ್ದೆಗೆಡಿಸಿದೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ: ಹೆಚ್‌.ಡಿ.ದೇವೇಗೌಡ

    ಇದೀಗ ಪ್ರೀತಂಗೌಡರ ಬೆಂಬಲ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ಗೆ ಅಗತ್ಯವಿದೆ. ಆದರೆ ಇಬ್ಬರು ನಾಯಕರ ನಡುವೆ ನಡೆದಿರುವ ಯುದ್ಧ ಎಲ್ಲದಕ್ಕೂ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಏ.1ರಂದು ಬೆಂಗಳೂರಿನಲ್ಲಿ ಸಮನ್ವಯ ಸಭೆ ನಡೆಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದರು ಪ್ರೀತಂಗೌಡ ಮನಸ್ಸು ಬದಲಿಸಲಿಲ್ಲ. ಖುದ್ದು ಬಿ.ವೈ.ವಿಜಯೇಂದ್ರ ಅವರೇ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಬಂದರೂ ಪ್ರೀತಂಗೌಡ ಹಾಜರಾಗಲಿಲ್ಲ. ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಜಿಲ್ಲೆಗೆ ಮೊದಲ ಭಾರಿ ಭೇಟಿ ನೀಡಿದಾಗ ಹಾಗೂ ಮಾಜಿ ಸಚಿವ ಸಿ.ಟಿ.ರವಿ ನಡೆಸಿದ ಸಮನ್ವಯ ಸಭೆಗೂ ಪ್ರೀತಂಗೌಡ ಗೈರಾಗಿದ್ದರು. ಇದರಿಂದ ಸಿಟ್ಟಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ದಿಢೀರ್ ಜಿಲ್ಲೆ ಆಗಮಿಸಿದ ರಾಧಾ ಮೋಹನ್ ದಾಸ್ ಅಗರ್ವಾಲ್ ಬಿಜೆಪಿ ಶಾಸಕರು, ಮುಖಂಡರು ಹಾಗೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಜ್ವಲ್ ವಿರುದ್ಧ ಅಸಮಾಧಾನ ಹೊರಹಾಕಿದ ಅಗರ್ವಾಲ್ ಹಾಗೂ ಮುಖಂಡರು ನೀವು ಜಿಲ್ಲೆಯ ಬಹುತೇಕ ಮುಖಂಡರನ್ನು ಭೇಟಿ ಮಾಡಿದ್ದೀರಿ. ಪ್ರೀತಂಗೌಡ ಅವರನ್ನು ಏಕೆ ಭೇಟಿ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಜ್ವಲ್ ಈಗಲೇ ಫೋನ್ ಮಾಡುತ್ತೇನೆ ಎಂದಿದ್ದಾರೆ. ಈಗ ಬೇಡ ಎಂದಿರುವ ಅಗರ್ವಾಲ್ ನಾಳೆ ಮೈಸೂರಿನಲ್ಲಿ ಪ್ರೀತಂಗೌಡ ಹಾಗೂ ಪ್ರಜ್ವಲ್ ರೇವಣ್ಣ ಭೇಟಿಗೆ ಮೂಹೂರ್ತ ಫಿಕ್ಸ್ ಮಾಡುವ ಮೂಲಕ ವೈಮನಸ್ಸು ಶಮನ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಮಾದರಿಯಲ್ಲೇ ಕೇಂದ್ರದಲ್ಲೂ ಗ್ಯಾರಂಟಿಗಳನ್ನು ತಂದಿದ್ದೇವೆ: ಡಿಕೆಶಿ

    ಒಟ್ಟಿನಲ್ಲಿ ನಾಳಿನ ಮೈಸೂರಿನಲ್ಲಿ ಪ್ರೀತಂಗೌಡ ಹಾಗೂ ಪ್ರಜ್ವಲ್ ರೇವಣ್ಣ ಭೇಟಿ ಮಹತ್ವ ಪಡೆದುಕೊಂಡಿದೆ. ಇಬ್ಬರ ನಡುವೆ ನಡೆಯುವ ಸಂಧಾನ ಸಫಲವಾದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಬಲ ಹೆಚ್ಚಲಿದೆ. ಆದರೆ ಏನೇ ಸಂಧಾನ ನಡೆದರು ಪ್ರೀತಂಗೌಡ ಸೋಲಿನ ಸೇಡನ್ನು ಮರೆತು ಪ್ರಜ್ವಲ್‌ಗೆ ಬೆಂಬಲ ನೀಡುವುದು ಬಹುತೇಕ ಅನುಮಾನವಾಗಿದೆ. ಇದನ್ನೂ ಓದಿ: ಸೈದ್ಧಾಂತಿಕವಾಗಿ ಇಬ್ಬರಿಗೂ ಹೊಂದಾಣಿಕೆ ಆಗಲ್ಲ: ಕಾಂಗ್ರೆಸ್‌ ಶಾಸಕಿ ಪತ್ನಿಯಿದ್ದ ಮನೆ ಬಿಟ್ಟು ಹೋದ ಬಿಎಸ್‌ಪಿ ಅಭ್ಯರ್ಥಿ

  • ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು‌, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ

    ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು‌, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ

    ಬೆಂಗಳೂರು: ಪ್ರೀತಂಗೌಡಗೆ (Preetham Gowda) ಸ್ವಲ್ಪ ಅಸಮಾಧಾನ ಇತ್ತು‌. ಅದನ್ನ ಸರಿ ಮಾಡೋ ಕೆಲಸ ಆಗಿದ್ದು, ಎಲ್ಲರೂ ಒಂದಾಣಿಕೆಯಿಂದ ಕೆಲಸ ಮಾಡೋದಾಗಿ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ತಿಳಿಸಿದ್ದಾರೆ.

    ಮಾಜಿ ಸಿಎಂ ಯಡಿಯೂರಪ್ಪ (Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು (Vijayendra) ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ, ವಿಜಯೇಂದ್ರ ಅವರನ್ನ ಭೇಟಿಯಾಗಿ ಸಹಕಾರ ಕೋರಿದ್ದೇವೆ. ನಮ್ಮ ಕ್ಷೇತ್ರಕ್ಕೆ ಪ್ರಚಾರ ಮಾಡಬೇಕು, ಸಹಕಾರ ಕೊಡಬೇಕು, ಆಶೀರ್ವಾದ ಮಾಡಬೇಕು ಅಂತ ಮನವಿ ಮಾಡಿದ್ದೇವೆ. ಯಡಿಯೂರಪ್ಪ ಅವರು ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ನನ್ನ ಚುನಾವಣೆ ಅಂತ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗ್ತೀವಿ ಎಂದರು. ಇದನ್ನೂ ಓದಿ: ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದೇನೆ: ಹೆಚ್.ಸಿ.ಮಹದೇವಪ್ಪ

    ನಮ್ಮ ಗುರಿ ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಬೇಕು. ಇಡೀ ದೇಶದಲ್ಲಿ 400 ಸೀಟು ಬರಬೇಕು‌. ಅದರಲ್ಲಿ ನಾನು ಒಬ್ಬನಾಗಿರಬೇಕು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಎರಡೆರೆಡು ಬಾರಿ ಬಂದು ಪ್ರಚಾರ ಮಾಡ್ತೀನಿ ಅಂತ ಹೇಳಿದ್ದಾರೆ. ನನ್ನ ಮಗ ಅಂದುಕೊಂಡ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

    ಪ್ರಜ್ವಲ್‌ಗೆ ಹಾಸನದಲ್ಲಿ ಬಿಜೆಪಿಯಿಂದ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವಿರೋಧ ಇಲ್ಲ. ಪಕ್ಷದ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಯಡಿಯೂರಪ್ಪ ಅವರೇ ಖುದ್ದು ಪಟ್ಟಿ ಬಿಡುಗಡೆ ಆದ ಮೇಲೆ ನಾನೇ ಬಂದು ಜಂಟಿ ಸಭೆ ಮಾಡೋದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್‌ ಶಾ ಪ್ರಶ್ನೆ

    ಪ್ರೀತಂಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಅಸಮಾಧಾನ ಇಲ್ಲ. ಪ್ರೀತಂಗೌಡ ಅಸಮಾಧಾನ ಇದ್ದರೂ ಅದನ್ನ ಸರಿ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲ. ಸಣ್ಣಪುಟ್ಟ ಗೊಂದಲ ಇದ್ದರೆ ಸರಿ ಮಾಡಿಕೊಂಡು ಹೋಗ್ತೀವಿ. ಎಲ್ಲಾ ಸ್ಥಳೀಯ ಬಿಜೆಪಿ ನಾಯಕರನ್ನ ಭೇಟಿಯಾಗಿ ಮನವಿ ಮಾಡ್ತಿದ್ದೇವೆ. ಎಲ್ಲರೂ ಕೂಡಾ ನಮ್ಮ ಪರವೇ ಕೆಲಸ ಮಾಡೋದಾಗಿ ಹೇಳಿದ್ದಾರೆ. ಪ್ರೀತಂಗೌಡ ಎಲ್ಲೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಸ್ವಲ್ಪ ಅಸಮಾಧಾನದಲ್ಲಿ ಇದ್ದರೂ ಅದನ್ನು ಸರಿ ಮಾಡೋ ಕೆಲಸ ಆಗಿದೆ. ಎಲ್ಲರೂ ಒಂದಾಣಿಕೆಯಿಂದ ಈಗ ಕೆಲಸ ಮಾಡ್ತಿದ್ದಾರೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಅವರ ಜೊತೆ ಮಾತಾಡ್ತಿದ್ದಾರೆ ಎಂದರು.

  • ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್- ದಿಶಾ ಸಭೆಯಲ್ಲಿ ಸಂಸದ ಕ್ಷಮೆ

    ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್- ದಿಶಾ ಸಭೆಯಲ್ಲಿ ಸಂಸದ ಕ್ಷಮೆ

    – ಪ್ರಜ್ವಲ್‍ಗೆ ಟಿಕೆಟ್ ಕೊಡದಂತೆ ಪ್ರೀತಂಗೌಡ ಪರೋಕ್ಷ ವಿರೋಧ

    ಹಾಸನ: ಲೋಕಸಭಾ ಚುನಾವಣೆ (Loksabh Election) ಸಮೀಪಿಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆದರೆ ಇನ್ನೂ ಯಾವ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ಹಾಲಿ ಸಂಸದರು ಹಾಗೂ ಟಿಕೆಟ್ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಅತ್ತ ಹಾಸನದಲ್ಲಿ ಇನ್ನೂ ಯಾರು ಅಭ್ಯರ್ಥಿ ಎಂಬುದೇ ಘೋಷಣೆ ಆಗಿಲ್ಲ. ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಜೆಡಿಎಸ್‍ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್ ಆಗಿದ್ದಾರೆ.

    ಹಾಸನ ಹಾಗೂ ಮಂಡ್ಯ (Hassan- Mandya) ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ ಬೇಕೇಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ (Preetham Gowda) ಪದೇಪದೇ ಒತ್ತಾಯಿಸುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಟಿಕೆಟ್ ನೀಡದಂತೆ ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು (HD Devegowda) ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

    ಇದಲ್ಲದೇ ಕಳೆದ ಮೂರು ದಿನಗಳಿಂದ ಕಡೆಯ ದಿಶಾ ಸಭೆ ನಡೆಸಿದ ಪ್ರಜ್ವಲ್, ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಡೆಯುತ್ತಿರುವ ಕಾಮಗಾರಿಗಳ ವೇಗ ಹೆಚ್ಚಿಸುವಂತೆ ಸೂಚನೆ ನೀಡಿದರು. ಎಲ್ಲಾ ತರದಲ್ಲೂ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದೀರಾ, ಐದು ವರ್ಷಗಳ ಕಾಲ ಅಧಿಕಾರಿಗಳು ಸಹಕರಿಸಿದ್ದೀರಾ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೆ, ದಿಶಾ ಸಭೆಯಲ್ಲಿ ಸರಿಯಾದ ನಡವಳಿಕೆ ನಡೆದುಕೊಂಡಿಲ್ಲ ಎಂದರೆ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದರು.

    ಒಟ್ಟಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯ ಕಡೆ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ, ಪ್ರೀತಂಗೌಡ ಪ್ರಜ್ವಲ್‍ರೇವಣ್ಣ ಪರ ನಿಲ್ಲುತ್ತಾರಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

  • ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

    ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ (Lok Sabha Election) ಚುನಾವಣೆ ರಾಜಕೀಯ ಗರಿಗೆದರಿದೆ. ಇದರ ಮಧ್ಯೆ ಜೆಡಿಎಸ್-ಬಿಜೆಪಿ (BJP-JDS) ದೋಸ್ತಿಗಳ ಮಧ್ಯೆ ಸೀಟು ಹಂಚಿಕೆ ಗೊಂದಲ ಹೆಚ್ಚಾಗಿದೆ.

    ಜೆಡಿಎಸ್ ಕಣ್ಣಿಟ್ಟ ಕ್ಷೇತ್ರಗಳನ್ನು ಬಿಟ್ಟುಕೊಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ (Mandya), ಹಾಸನ (Hassan) ಕ್ಷೇತ್ರಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಂತೆ ಸ್ಥಳೀಯ ಕಮಲ ಮುಖಂಡರಿಂದ ಆಗ್ರಹ ವ್ಯಕ್ತವಾಗಿದೆ. ಇದನ್ನೂ ಓದಿ: ಡಿಕೆಸು ಪ್ರತ್ಯೇಕ ದೇಶ ಹೇಳಿಕೆ; ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ – ನಿವಾಸ ಮುತ್ತಿಗೆಗೆ ಯತ್ನಿಸಿದವರ ಮೇಲೆ ಲಾಠಿ ಪ್ರಹಾರ

    ಹಾಸನ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಂ ಗೌಡ ಒತ್ತಾಯಿಸಿದ್ದಾರೆ. ಇತ್ತ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಮಾಜಿ ಸಚಿವ ನಾರಾಯಣ ಗೌಡರಿಂದ ಆಗ್ರಹ ಕೇಳಿಬಂದಿದೆ.

    ಹಾಸನ ಬಳಿಕ ಮಂಡ್ಯದಲ್ಲೂ ಕ್ಷೇತ್ರ ಬಿಟ್ಟುಕೊಡದಂತೆ ಪ್ರೀತಂ ಗೌಡ ಗುಡುಗಿದ್ದಾರೆ. ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿಯ ಪಕ್ಷ ಸಂಘಟನೆ ಬಲಗೊಂಡಿದ್ದು, ಪಕ್ಷದಿಂದಲೇ ಅಭ್ಯರ್ಥಿ ಹಾಕಲು ಒತ್ತಡ ವ್ಯಕ್ತವಾಗಿದೆ. ಇದನ್ನೂ ಓದಿ: ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

    ಹಾಸನದಲ್ಲಿ ಜೆಡಿಎಸ್ ಸಂಸದರು ಇದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್ ಕೇಳುತ್ತಿದೆ. ಹಾಗಾದರೆ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅವರು ಸಂಸದರು, ಮಂಡ್ಯ ಬಿಟ್ಟುಕೊಡಲಿ ಎಂದು ಪ್ರೀತಂ ಗೌಡ ಠಕ್ಕರ್‌ ಕೊಟ್ಟಿದ್ದಾರೆ.

    ಕ್ಷೇತ್ರ ಉಳಿಸಿಕೊಳ್ಳಿ ಎನ್ನುವುದು ಎರಡೂ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಒತ್ತಾಯ. ಸೀಟು ಹಂಚಿಕೆ ಅಂತಿಮವಾಗುವ ಮುನ್ನವೇ ಕ್ಷೇತ್ರಗಳಲ್ಲಿ ಜೆಡಿಎಸ್ ಚುನಾವಣಾ ಸಿದ್ಧತೆಗೂ ಆಕ್ಷೇಪ ವ್ಯಕ್ತವಾಗಿದೆ. ಮಂಡ್ಯ, ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಕೊಡಲು ಸ್ಥಳೀಯ ಬಿಜೆಪಿ‌ ಮುಖಂಡರು, ಕಾರ್ಯಕರ್ತರು ವಿರೋಧಿಸಿದ್ದಾರೆ. ಸ್ಥಳೀಯರ ವಿರೋಧವು ಬಿಜೆಪಿಗೆ ತಲೆನೋವಾಗಿದೆ.

    ಎರಡೂ ಲೋಕಸಭೆ ಕ್ಷೇತ್ರಗಳ ವಿರೋಧ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವ ಆತಂಕದಲ್ಲಿ ಕಮಲ ನಾಯಕರು ಇದ್ದಾರೆ. ಹೈಕಮಾಂಡ್ ಅಂಗಳಕ್ಕೆ ರಿಪೋರ್ಟ್ ಕಳಿಸಲು ಕಮಲ ಪಡೆ ಮುಂದಾಗಿದೆ. ಕ್ಷೇತ್ರ ಹಂಚಿಕೆ ಜಟಾಪಟಿ ಹೈಕಮಾಂಡ್ ಕೋರ್ಟಿನಲ್ಲಿ ಬೇಗ ಇತ್ಯರ್ಥ ಮಾಡಿ ಎಂದು ಮನವಿ ಮಾಡಲು ಮುಂದಾಗಿದ್ದಾರೆ. ಇದೇ ತಿಂಗಳ ಎರಡನೇ ವಾರದಲ್ಲಿ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

    ಅಮಿತ್ ಶಾ ಸಮ್ಮುಖದಲ್ಲೂ ಕ್ಷೇತ್ರ ಜಟಾಪಟಿ ಪ್ರಸ್ತಾಪ ಮಾಡಲು ಪ್ಲ್ಯಾನ್‌ ನಡೆದಿದೆ. ಸದ್ಯಕ್ಕೆ ಈ ವಿಚಾರದಲ್ಲಿ ಹೆಚ್ಚಿಗೆ ಮೂಗು ತೂರಿಸದಿರಲು ರಾಜ್ಯ ಬಿಜೆಪಿ ನಾಯಕರು ನಿಶ್ಚಯಿಸಿದ್ದಾರೆ. ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠರ‌ ತೀರ್ಮಾನಕ್ಕೆ ಬಿಡಲು ರಾಜ್ಯ ಬಿಜೆಪಿ ಘಟಕ ಮುಂದಾಗಿದೆ. ಸದ್ಯ ಪರಿಸ್ಥಿತಿ ತಿಳಿ ಮಾಡುವ ಪ್ರಯತ್ನ ಅಥವಾ ಕಾರ್ಯಕರ್ತರ ಮನವರಿಕೆಗೂ ಕೈಹಾಕಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೈಕಮಾಂಡ್‌ನಿಂದಲೇ ತೀರ್ಮಾನ ಬರಲಿ ಎಂದು ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

  • ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

    ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

    – ಜೆಡಿಎಸ್‍ಗೆ ಕ್ಷೇತ್ರ ಬಿಡುವುದಾದರೆ ಬಿಜೆಪಿ ಕಾರ್ಯಕರ್ತರ ಒಪ್ಪಿಗೆಗೆ ಸೂಚನೆ

    ಮಂಡ್ಯ: ಲೋಕಸಭಾ ಚುನಾವಣೆಗೆ (Lok Sabha Elections 2024 )ಹಾಸನ ಹಾಗೂ ಮಂಡ್ಯ (Mandya) ಎರಡು ಕ್ಷೇತ್ರಗಳು ಬಿಜೆಪಿಗೆ ಸಿಗಲಿದೆ. ಈ ಮೂಲಕ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ. ಒಂದು ವೇಳೆ ಜೆಡಿಎಸ್‍ಗೆ (JDS) ಕ್ಷೇತ್ರ ಬಿಟ್ಟು ಕೊಟ್ಟರೆ, ಅಭ್ಯರ್ಥಿ ಆಯ್ಕೆಗೆ ನಮ್ಮ ಕಾರ್ಯಕರ್ತರ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಮ್‍ಗೌಡ (Preetham Gowda) ಹೇಳಿದ್ದಾರೆ.

    ಪಾಂಡವಪುರದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಗೌಡರಿಗೆ ಮಂಡ್ಯದಲ್ಲೂ ನೆಂಟರಿದ್ದಾರೆ, ಹಾಸನದಲ್ಲೂ ನೆಂಟರು ಇರ್ತಾರೆ, ನಮ್ಮ ಸಂಕಲ್ಪ ಕುಟುಂಬ ರಾಜಕೀಯದ ವಿರುದ್ಧ ಇರಬೇಕು. ನೆಂಟಸ್ಥಿಕೆ ಎಲ್ಲವನ್ನೂ ಬಿಡಬೇಕು ಎಂದರು.

    ರಾಷ್ಟ್ರ, ರಾಜ್ಯ ಸೇರಿದಂತೆ ಮಂಡ್ಯದಲ್ಲೂ ಕುಟುಂಬ ರಾಜಕೀಯ ಇದೆ. ಎಲ್ಲಾ ರಾಜ್ಯದಲ್ಲೂ ಒಂದೊಂದು ಕುಟುಂಬ ರಾಜಕೀಯ ಇದೆ. ಇನ್ನೂ ರಾಜ್ಯದ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವುದೇ ಬೇಡ. ಅವರು ಆಯ್ತು, ಮಕ್ಕಳು ಆಯ್ತು, ಮೊಮ್ಮಕ್ಕಳು ಆಯ್ತು, ಈಗ ಮರಿ ಮಕ್ಕಳು ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಇದುವರೆಗೂ ನಮ್ಮನ್ನು ವಿರೋಧ ಮಾಡುತ್ತಿದ್ದ ಜೆಡಿಎಸ್ ನಮ್ಮೊಂದಿಗೆ ಮೈತ್ರಿಯಾಗಿದೆ. ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಜೆಡಿಎಸ್ ಕೈಜೋಡಿಸಿರುವುದು ಸ್ವಾಗತ. ಜೆಡಿಎಸ್ ಎನ್‍ಡಿಎ ಕೂಟಕ್ಕೆ ಸೇರಿದೆ ಅಷ್ಟೇ, ಇನ್ನೂ ಯಾವ ಕ್ಷೇತ್ರ, ಯಾವ ಪಕ್ಷಕ್ಕೆ ಎಂದು ನಿರ್ಧಾರವಾಗಿಲ್ಲ. ಮೈತ್ರಿಯಾಗಿದೆ ಟಿಕೆಟ್ ಬಿಟ್ಟುಕೊಡಬೇಕು ಎಂದು ಕಾರ್ಯಕರ್ತರು ಕುಂದುವ ಅವಶ್ಯಕತೆ ಇಲ್ಲ. ಮಂಡ್ಯ ಜಿಲ್ಲೆಯಲ್ಲಿ ಒಂದೇ ಒಂದು ಸೀಟ್ ಬಿಜೆಪಿ ಗೆದ್ದಿರಲಿಲ್ಲ. ಕೆಆರ್‌ಪೇಟೆಯಲ್ಲೂ ನಾರಾಯಣಗೌಡರು ಮೊದಲ ಬಾರಿಗೆ ಗೆದ್ದರು, ಅವರನ್ನು ಬಿಜೆಪಿ ಮಂತ್ರಿಯನ್ನಾಗಿ ಮಾಡಿತು ಎಂದಿದ್ದಾರೆ.

    ಕೆರಗೋಡಿನಲ್ಲಿ ನಮ್ಮ ಆಚಾರ ವಿಚಾರಗಳನ್ನು ಕಾಂಗ್ರೆಸ್ (Congress) ವಿರೋಧ ಮಾಡಿದೆ. ಅದನ್ನು ನಮ್ಮ ಪಕ್ಷ ವಿರೋಧಿಸುವಲ್ಲಿ ಯಶಸ್ವಿಯಾಗಿದೆ. ಕೆರಗೋಡಿನ ಜನರೊಂದಿಗೆ ಬಿಜೆಪಿ ನಿಂತು ಹೋರಾಟ ಮಾಡಿದೆ. ಇದು ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ.

    ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ಬಿಜೆಪಿ ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಎಷ್ಟೇ ಅಸಮಾಧಾನವಿದ್ರೂ ಮೋದಿ ಪ್ರಧಾನಿಯಾಗಲು ಒಟ್ಟಾಗಿ ಕೆಲಸ ಮಾಡಿ: ಪ್ರೀತಂಗೌಡ

    ಎಷ್ಟೇ ಅಸಮಾಧಾನವಿದ್ರೂ ಮೋದಿ ಪ್ರಧಾನಿಯಾಗಲು ಒಟ್ಟಾಗಿ ಕೆಲಸ ಮಾಡಿ: ಪ್ರೀತಂಗೌಡ

    ಬೆಂಗಳೂರು: ಯಾರಿಗೆ ಎಷ್ಟೇ ಅಸಮಾಧಾನ ಇದ್ದರೂ ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡಲು ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಪ್ರೀತಂಗೌಡ (Preetham Gowda) ಪಕ್ಷದ ಅಸಮಾಧಾನಿತರಿಗೆ ಕರೆ ನೀಡಿದ್ದಾರೆ.

    ಬಿಜೆಪಿಯಲ್ಲಿ ಯತ್ನಾಳ್, ಸೋಮಣ್ಣ ಅಸಮಾಧಾನ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ (BJP Office) ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣದಲ್ಲಿ ಸೋಮಣ್ಣ, ಯತ್ನಾಳ್ ಹಿರಿಯರಿದ್ದಾರೆ. ಜೆಡಿಎಸ್ ಜೊತೆ ಹೊಂದಾಣಿಕೆ ಆದಾಗ ಎಫೆಕ್ಟ್ ಆದ ಮೊದಲ ವ್ಯಕ್ತಿ ಪ್ರೀತಂಗೌಡ. ಮೋದಿ (Narendra Modi) ಅವರು ಮತ್ತೆ ಪ್ರಧಾನಿ ಆಗಬೇಕು ಅಂತ ಇಚ್ಚೆ ಪಟ್ಟಿದ್ದೇವೆ. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಅದಕ್ಕೆ ಸೋಮಣ್ಣ, ಯತ್ನಾಳ್ ಹೊರತಲ್ಲ ಎಂದರು.

    ಸೋಮಣ್ಣ (V Somanna) ಮತ್ತು ಯತ್ನಾಳ್ (Basanagoda Patil Yatnal) ಕೂಡ ಮೋದಿ ಪ್ರಧಾನಿಯಾಗಿ (Narendra Modi) ಆಗಬೇಕು ಅಂತ ಹೇಳಿದ್ದಾರೆ. ಕಾಲಕ್ರಮೇಣ ಎಲ್ಲವೂ ಸರಿಯಾಗಲಿದೆ. ಮೋದಿ ಅವರನ್ನ ಪ್ರಧಾನಮಂತ್ರಿ ಮಾಡೋಣ. ಲೋಕಸಭಾ ಚುನಾವಣೆಗೆ ಬಹಳ ಹೆಚ್ಚಿನ ಶಕ್ತಿಯನ್ನು ಸೋಮಣ್ಣ, ಯತ್ನಾಳ್ ಕೂಡ ಮಾಡ್ತಾರೆ. ಸ್ವಲ್ಪ ಅಸಮಾಧಾನ ಇರುತ್ತದೆ. ಎಲ್ಲವೂ ಮುಂದೆ ಸರಿ ಹೋಗಲಿದೆ ಎಂದರು.

    ವಿಜಯೇಂದ್ರ ಹರಕೆಯ ಕುರಿ, ಯಡಿಯೂರಪ್ಪಗೆ ಆದ ಗತಿಯೇ ವಿಜಯೇಂದ್ರಗೆ ಆಗಲಿದೆ ಎಂಬ ಸಚಿವ ತಿಮ್ಮಾಪೂರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಹರಕೆಯ ಕುರಿ ಅಂತ ಮುಂದೆ ಗೊತ್ತಾಗಲಿದೆ. ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆದ್ರು. ಹಾಗಾದ್ರೆ ತಿಮ್ಮಾಪುರ ಪ್ರಕಾರ ವಿಜಯೇಂದ್ರ ಕೂಡ ನಾಲ್ಕು ಬಾರಿ ಸಿಎಂ ಆಗ್ತಾರೆ. ವಿಜಯೇಂದ್ರ ಅವರು ಅಶ್ವಮೇಧಯಾಗ ಕುದುರೆ ಕಟ್ಟಿದ್ದಾರೆ. ಹರಕೆಯ ಕುರಿ ಯಾರು ಅನ್ನೋದು ಮುಂದೆ ಗೊತ್ತಾಗುತ್ತೆ. ವಿಜಯೇಂದ್ರ ಅವರ ಶಕ್ತಿ ಏನು, ರಾಜಕೀಯ ತಂತ್ರಗಾರಿಕೆ ಏನು ಅಂತ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ ಅಂತ ತಿರುಗೇಟು ಕೊಟ್ಟರು.

  • ಹಾಸನದಲ್ಲಿ ಗೆಲುವು ಸಾಧಿಸಿದ ಸ್ವರೂಪ್ – ಕರೆ ಮಾಡಿ ಶುಭಾಶಯ ತಿಳಿಸಿದ ಹೆಚ್‌ಡಿಡಿ

    ಹಾಸನದಲ್ಲಿ ಗೆಲುವು ಸಾಧಿಸಿದ ಸ್ವರೂಪ್ – ಕರೆ ಮಾಡಿ ಶುಭಾಶಯ ತಿಳಿಸಿದ ಹೆಚ್‌ಡಿಡಿ

    ಹಾಸನ: ಹಾಸನದಲ್ಲಿ ಪ್ರೀತಂ ಗೌಡ (Preetham Gowda) ಹಾಗೂ ಸ್ವರೂಪ್ ಪ್ರಕಾಶ್ (Swaroop Prakash) ನಡುವೆ ಜಿದ್ದಾ ಜಿದ್ದಿ ನಡೆದಿದ್ದು, ಇದೀಗ ಸ್ವರೂಪ್ 70,080 ಮತಗಳನ್ನು ಪಡೆಯುವ ಮೂಲಕ ಗೆಲುವಿನ ಜಯಭೇರಿಯನ್ನು ಭಾರಿಸಿದ್ದಾರೆ.

    ಸ್ವರೂಪ್ ಪ್ರಕಾಶ್ ಜನತಾ ದಳ ಪಕ್ಷದಿಂದ ಸ್ಪರ್ಧಿಸಿದ್ದು, ಅವರ ವಿರುದ್ಧವಾಗಿ ಪ್ರೀತಂ ಗೌಡ ಬಿಜೆಪಿಯಿಂದ (BJP) ಕಣಕ್ಕೆ ಇಳಿದಿದ್ದರು. ಇಬ್ಬರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೂ ಪ್ರೀತಂ ವಿರುದ್ಧ ಸ್ವರೂಪ್ 6,773 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಚುನಾವಣೆಯಲ್ಲಿ (Election) ಗೆದ್ದ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (H.D.Deve Gowda) ಫೋನ್ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ದೇವೇಗೌಡರು ಕರೆ ಮಾಡಿದ ಸಂದರ್ಭದಲ್ಲಿ ಸ್ವರೂಪ್ ಮತ ಎಣಿಕೆ ಕೇಂದ್ರದಲ್ಲಿ ಇದ್ದುದ್ದರಿಂದ ದೇವೇಗೌಡರನ್ನು ಭಾನುವಾರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿನ ಹೊಣೆಹೊತ್ತ ರಾಜ್ಯಾಧ್ಯಕ್ಷ ಕಟೀಲ್

    ಇನ್ನೂ ಹಾಸನ (Hassan) ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸ್ವರೂಪ್ ಪತ್ನಿ ಡಾ.ಶ್ವೇತಾ ಪತಿಯನ್ನು ಅಪ್ಪಿ ಕಣ್ಣೀರಿಟ್ಟು ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದರು. ಇದೇ ವಿಚಾರ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಕೊನೆ ಕ್ಷಣದಲ್ಲಿ ಭವಾನಿಗೆ ಟಿಕೆಟ್ ನಿರಾಕರಿಸಿ, ಸ್ವರೂಪ್ ಪ್ರಕಾಶ್‌ಗೆ ಕುಮಾರಸ್ವಾಮಿ ಟಿಕೆಟ್ ನೀಡಿದ್ದರು. ರೇವಣ್ಣ ಕುಟುಂಬದ ಯಾರೇ ಸ್ಪರ್ಧಿಸಿದರೂ, 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಸವಾಲು ಹಾಕಿದ್ದ ಪ್ರೀತಂ ಗೌಡ ಸೋಲನ್ನು ಅನುಭವಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

  • ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ

    ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ

    ಹಾಸನ: ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ದೇವೇಗೌಡ (H.D Devegowda) ರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು, ಗ್ರಾಮೀಣ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂತ ಹೋರಾಟ ಮಾಡಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಏಳೂ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಮನವಿ ಮಾಡಿದ್ದಾರೆ.

    ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕೆಲವರು ಗಲ್ಲಿ ಗಲ್ಲಿ ರಸ್ತೆ ಆಗಿವೆ ಅಂತಾರೆ, ಅದು ದೊಡ್ಡದಾ ಇವತ್ತು ಎಂದು ಪ್ರಶ್ನಿಸಿದ ರೇವಣ್ಣ, ವರ್ಕ್ ಆರ್ಡರ್ ತಡೆ ಹಿಡಿಯುವುದೇ ಇವರ ಸಾಧನೆ. ತೋಟಗಾರಿಕಾ ಕಾಲೇಜು ಕಿತ್ತುಕೊಂಡರು. ಆದರೆ ಸ್ಥಳೀಯ ಶಾಸಕರು ಉಸಿರೇ ಬಿಡಲಿಲ್ಲ. ನಾನು ಏನು ಮಾಡಿದ್ದೇನೆ ಎಂಬುದನ್ನು ತೆಗೆದು ನೋಡಲಿ, ರೋಡ್‍ಗೆ ಇವತ್ತು ಟಾರು ಹಾಕಿದ್ರೆ ಬೆಳಗ್ಗೆ ಕಿತ್ತು ಹೋಗ್ತಿದೆ. ಇಂಜಿನಿಯರ್‍ಗಳು, ಕಂಟ್ರ್ಯಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ವಲ್ಲಭಾಯಿ ರೋಡ್ ಜಗ್ಗ ಎನ್ನುವವನ ಮೇಲೆ ಗ್ರೇಟ್ ಡಿವೈಎಸ್‍ಪಿ ಉದಯ್ ಭಾಸ್ಕರ್, ಗ್ರೇಟ್ ಸರ್ಕಲ್ ಇನ್ಸ್ ಪೆಕ್ಟರ್ ರೌಡಿ ಶೀಟರ್ ಓಪನ್ ಮಾಡಿ, ಮೂರು ತಿಂಗಳ ಹಿಂದೆ ಗಡಿಪಾರು ಮಾಡಿದ್ದಾರೆ. ಸ್ವರೂಪ್ (Swaroop) ಪರವಾಗಿ ವೋಟು ಹಾಕಿಸ್ತಾನೆ ಅಂತ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಅವನೇನೂ ಮರ್ಡರ್ ಮಾಡಿದ್ನಾ ಎಂದು ಕಿಡಿಕಾರಿದರು. ರೌಡಿಗಳ ತಾಣದ ಪೋಷಕನಾಗಿದ್ದ ದಿ ಗ್ರೇಟ್ ಉದಯ್ ಭಾಸ್ಕರ್, ಯಾರನ್ನ ಬೇಕಾದ್ರೂ ಮರ್ಡರ್ ಮಾಡಿಸೋನು. ಈಗ ಇಡೀ ಅಧಿಕಾರಿಗಳೆಲ್ಲಾ ಸೇರಿ ರಜೆ ಮೇಲೆ ಕಳ್ಸಿದ್ದಾರೆ, ಪಾಪ ಅವನನ್ನು ಉಳಿಸಲು ಸ್ಥಳೀಯ ಶಾಸಕರು ಬಹಳ ಪ್ರಯತ್ನಪಟ್ಟರು ಎಂದು ದೂರಿದರು. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    ಹಾಸನ ನಗರಕ್ಕೆ ಬಿಜೆಪಿ ಅವರ ಕೊಡುಗೆ 60 ಬ್ರಾಂಡಿ ಶಾಪ್ ಕೊಟ್ಟು, ಕುಡ್ಕಂಡು ಇರಿ, ಅಂತ ಕೊಡುಗೆ ಕೊಟ್ಟಿದ್ದಾರೆ. ಮೋದಿಯವರೇ ನಿಮ್ಮ ಪಕ್ಷದ ಕೊಡುಗೆ ಸಿಎಲ್-7. ಮನೆ ಒಳಗಡೆ ಇದ್ದರು ಎದ್ದು ಇಂತಹ ಶಕ್ತಿಗಳನ್ನು ದಮನ ಮಾಡಲು ಹೊರಗೆ ಬಂದಿದ್ದಾರೆ ಎಂದು ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಮಾಜಿ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿದ ರೇವಣ್ಣ, ಹದಿನೈದು ವರ್ಷದಿಂದ ನಾನು ಸಾಕಿದ ಗಿಣಿ ಇತ್ತು, ಅದರ ಬಳಿ ಒಂದು ಸ್ವಲ್ಪ ದುಡ್ಡಿದೆ ಅಂತ ಕಾಂಗ್ರೆಸ್‍ನವರು ಗೆಲ್ಲುತ್ತೆ ಅಂತ ಕರ್ಕೊಂಡ್ರು. ಅವರು ಪುಕ್ಸಟ್ಟೆ ಯಾವುದನ್ನೂ ಮಾಡಲ್ಲ, ಸಾಕಿದ ಗಿಣಿನಾ ಬೋನಿಗೆ ಬಿಡಬೇಕು, ಈಚೆಗೆ ಬಿಡಬಾರದು ಅಂತ ದೇವರೇ ನಮ್ಮ ಹತ್ರ ಸಂತೋಷ್ ಅವರನ್ನು ಕಳುಹಿಸಿದ್ದಾನೆ ಎಂದರು.

    ಸಾಕಿದ ಗಿಣಿಗೆ ಬಲೆ ಬೀಸಿ ಕಾಂಗ್ರೆಸ್‍ನವರು ಇಟ್ಕಂಡವ್ರೆ, ಜನರೇ ಹದ್ದಾಗಿ ಕುಕ್ತಾರೆ ಎಂದು ಭವಿಷ್ಯ ನುಡಿದರು. ತಾಲೂಕಿನಲ್ಲಿ ಜೆಡಿಎಸ್‍ಗೆ 13 ಸಾವಿರ ವೋಟು ಇತ್ತು, ನಾನು ಬಂದ ಮೇಲೆ ಜಾಸ್ತಿ ಆಯ್ತು ಅನ್ನುತ್ತಿರುವವರು ಕಾಂಗ್ರೆಸ್ ಬಿಟ್ಟು ಸ್ಪರ್ಧೆ ಮಾಡಲಿ. ಎಷ್ಟು ವೋಟು ತಗೋತಾರೆ ನೋಡೋಣ ಎಂದು ಸವಾಲು ಹಾಕಿದರು. ಜೆಡಿಎಸ್ ಪಕ್ಷಕ್ಕೆ ವೋಟು ಕೊಡಿ, ಸ್ವರೂಪ್ ಅವರನ್ನು ಗೆಲ್ಲಿಸಿ. ಅವರ ತಂದೆ ಪ್ರಾಮಾಣಿಕವಾಗಿದ್ರು. ಸ್ವರೂಪ್ ಯುವಕ ಇದ್ದಾನೆ, ಐದು ವರ್ಷ ನೋಡೋಣ. ಸ್ವರೂಪ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು, ಸ್ವರೂಪ್ ಅವರನ್ನು ಗೆಲ್ಲಿಸಲು ಬೆಂಬಲ ಕೊಟ್ಟಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ದುಡ್ಡಿಲ್ಲದಿದ್ದರೂ ಹೋರಾಟ ಮಾಡುತ್ತಿದ್ದಾರೆ. ಏಳು ಕ್ಷೇತ್ರಗಳನ್ನು ಗೆಲ್ಲಿಸಿ ನಿಮ್ಮ ಕೆಲಸ ತಪ್ಪದೇ ಮಾಡ್ತೀವಿ ಎಂದರು.