Tag: Preetangouda

  • ಹಾಸನಾಂಬಾ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ

    ಹಾಸನಾಂಬಾ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ

    ಹಾಸನ: ಹಾಸನಾಂಬಾ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ ಬೀಳಲಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ಸುಮಾರಿಗೆ ಗರ್ಭಗುಡಿ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಅಧಿಕಾರಿಗಳ ಸಮ್ಮುಖದಲ್ಲಿ ಮುಚ್ಚಲಾಗುವುದು.

    ಹಾಸನಾಂಬಾ ಜಾತ್ರಾ ಮಹೋತ್ಸವದ ಕಡೇ ದಿನದ ಹಿನ್ನೆಲೆಯಲ್ಲಿ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಡಲಿದ್ದಾರೆ. ಇದರ ಇನ್ನೊಂದು ವಿಶೇಷತೆ ಎಂದರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅರ್ಚಕರು ಇಟ್ಟ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆ ರೋಗಿಗಳಲ್ಲಿ 30% ಹೆಚ್ಚಳ

    ಗರ್ಭಗುಡಿ ಬಾಗಿಲನ್ನು ಅಕ್ಟೋಬರ್ 28 ರಂದು ತೆರೆದಿದ್ದು, ಒಂಭತ್ತು ದಿನದಲ್ಲಿ ಏಳು ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1000, 300 ರೂ. ವಿಶೇಷ ಟಿಕೆಟ್, ಲಾಡು ಹಾಗೂ ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ನಿರೀಕ್ಷೆ ಇದೆ. ಇಂದು ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.

    ಹಾಸನದ ಎಸ್‍ಪಿ ಶ್ರೀನಿವಾಸ್ ನಿನ್ನೆ ದೇಗುಲದ ಬಳಿ ಭಕ್ತರ ನೂಕು ನುಗ್ಗಲು ಕಂಡು ಪರಿಸ್ಥಿತಿ ನಿಯಂತ್ರಿಸಿದ್ದರು. ನಂತರ ಅವರು ಮತ್ತು ಅವರ ಪತ್ನಿ ಸಿದ್ದೇಶ್ವರ ರಥೋತ್ಸವದಲ್ಲಿ ಭಾಗಿಯಾದರು. ಶ್ರೀನಿವಾಸ್ ಅವರು ಸಿದ್ದೇಶ್ವರ ದೇಗುಲದ ಒಳಭಾಗದಿಂದ ದೇಗುಲ ಹೊರಭಾಗದ ರಥದವರೆಗೆ ದೇವರ ಅಡ್ಡೆ ಹೊತ್ತು ಬಂದಿದ್ದು, ಪಕ್ಕದಲ್ಲೆ ಅವರ ಪತ್ನಿ ನಡೆದು ಬಂದು ದೇವರಿಗೆ ಭಕ್ತಿ ಅರ್ಪಿಸಿದ್ದಾರೆ. ಈ ವೇಳೆ ಶಾಸಕ ಪ್ರೀತಂಗೌಡ ಅವರು ಸಹ ಇವರ ಜೊತೆಯಲ್ಲಿಯೇ ಅಡ್ಡೆ ಹೊತ್ತಿಕೊಂಡು ಬಂದಿದ್ದಾರೆ. ಇದನ್ನೂ ಓದಿ:  ‘ಅಪ್ಪು’ ಸವಿನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

    ಐದು ದಿನಗಳ ಹಿಂದೆ ತಿರುಪತಿಯಲ್ಲಿ ವಿವಾಹವಾಗಿರುವ ಶ್ರೀನಿವಾಸ್ ಗೌಡ ಮತ್ತು ಅವರ ಪತ್ನಿ ಇಂದು ಹಾಸನಾಂಬಾ ಜಾತ್ರಾ ಮಹೋತ್ಸವದ ಕೊನೆಯ ದಿನವಾಗಿದ್ದರಿಂದ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

  • ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

    ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

    – ಆರ್‌ಎಸ್‌ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ

    ಹಾಸನ: ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ರಾಜಿಯಾಗಿ, ಅವರ ಮುಲಾಜಿಗೆ ಒಳಗಾಗಿ ಅವರು ಹೇಳಿದ್ದನ್ನೆಲ್ಲಾ, ಕೇಳುವಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಆಗಲಿ, ನಾಯಕರಿಗಾಗಲಿ, ಸಂಘಟನೆಗಾಗಲಿ ಬರಬಾರದು ಎನ್ನುವುದು ನನ್ನ ದಿಟ್ಟ ನಿಲುವು ಎಂದು ಶಾಸಕ ಪ್ರೀತಂಗೌಡ ಸ್ವಪಕ್ಷದ ನಾಯಕರಿಗೇ ಕಿವಿಮಾತು ಹೇಳಿದ್ದಾರೆ.

    ಆರ್‌ಎಸ್‌ಎಸ್ ಬಗ್ಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿರುವ ವಿಚಾರಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ. ದೇಶ ಕಟ್ಟುವುದೇ ತಪ್ಪು ಎನ್ನುವುದಾದರೆ ಸಾರ್ವಜನಿಕರು ಯೋಚನೆ ಮಾಡಬೇಕಾದ ಸಮಯ ಇದು. ಇದರಲ್ಲಿ ಯಾರ್ಯಾರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:  ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗ್ತಿದೆಯೇ: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ

    ಇದೇ ವೇಳೆ ಮುಖ್ಯಮಂತ್ರಿ ಸೇರಿದಂತೆ ಸ್ವಪಕ್ಷದ ಕೆಲವು ನಾಯಕರು ಜೆಡಿಎಸ್ ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಬಗ್ಗೆಯೂ ವಿರೋಧಿಸಿದ ಅವರು, ಬಿಜೆಪಿ ಯಾವುದೋ ಒಂದು ಭಾಗದಲ್ಲಿ ಅಧಿಕಾರ ಹಿಡಿಯಲು ಸಾಫ್ಟ್ ಕಾರ್ನರ್ ತೋರಿಸಿದೆ. ಜೆಡಿಎಸ್ ಅನ್ನು ರಾಜಕೀಯವಾಗಿ ಒಂದು ಮೈಲಿ, ಒಂದು ಕಿಲೋಮೀಟರ್, ಒಂದು ಮೀಟರ್ ದೂರ ಇಡಬೇಕು. ನಮ್ಮನ್ನು ಬಳಸಿಕೊಂಡು ಅವರ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

    ಕಲಬುರಗಿಯಲ್ಲಿ ಅಧಿಕಾರ ಹಿಡಿಯಲು ಅವರನ್ನು ಓಲೈಕೆ ಮಾಡಲು ಹೋದ್ರೆ ನಮ್ಮ ಬುಡಕ್ಕೆ ಬರುತ್ತೆ. ಅಧಿಕಾರ ಹಿಡಿಯಲು ಐದಲ್ಲ ಹತ್ತು ವರ್ಷ ಕಾಯೋಣ. ನಮ್ಮ ರಾಜ್ಯ ನಾಯಕರು, ರಾಜ್ಯಾಧ್ಯಕ್ಷರು, ಮಂತ್ರಿಗಳು, ಮುಖ್ಯಮಂತ್ರಿಗಳು ಯಾವ್ಯಾವ ಸಂದರ್ಭದಲ್ಲಿ ಜೆಡಿಎಸ್ ಬಗ್ಗೆ ಮೃದು ಧೋರಣೆ ತೋರಿದ್ದರು ಅವರಿಗೆ ಕುಮಾರಸ್ವಾಮಿ ಅವರು ಒಂದು ಸಂದೇಶ ನೀಡಿದ್ದಾರೆ ಎಂದರು. ಇದನ್ನೂ ಓದಿ:  ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

    ಯಾವುದೋ ಹಾಸನ ಮುನ್ಸಿಪಾಲಿಟಿ ಅಧಿಕಾರಕ್ಕೋಸ್ಕರ ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. ಜೆಡಿಎಸ್ ಅವರ ಮಿಷನ್ ಎಂದರೆ ಬಿಜೆಪಿ-ಕಾಂಗ್ರೆಸ್ ನೂರರ ಮೇಲೆ ಬರಬಾರದು. ಆಗ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಅವರ ಗುಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬೇರೆಯವರು ಮಾತನಾಡಲ್ಲ, ಪ್ರೀತಂಗೌಡ ನೇರವಾಗಿ ಮಾತನಾಡುತ್ತಾನೆ ಎಂದು ಶಾಸಕರು ಕಿಡಿಕಾರಿದ್ದಾರೆ.

    ಆರ್‌ಎಸ್‌ಎಸ್  ಪರ, ವಿರುದ್ಧ ರಾಜಕೀಯ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ