Tag: Prayer Aunty

  • ವೈರಲ್ ಆಯ್ತು ಮುಂಬೈ ಇಂಡಿಯನ್ಸ್ ‘ಪ್ರೇಯರ್ ಆಂಟಿ’ ಫೋಟೋ-ಯಾರಿವರು?

    ವೈರಲ್ ಆಯ್ತು ಮುಂಬೈ ಇಂಡಿಯನ್ಸ್ ‘ಪ್ರೇಯರ್ ಆಂಟಿ’ ಫೋಟೋ-ಯಾರಿವರು?

    ಅಬುಧಾಬಿ: 2020ರ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಭರ್ಜರಿ ಜಯ ಪಡೆದ ಮುಂಬೈ ಇಂಡಿಯನ್ಸ್ ತಂಡ 6ನೇ ಬಾರಿಗೆ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಇದರೊಂದಿಗೆ ಪಂದ್ಯದ ಸಂದರ್ಭ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರೇಯರ್ ಆಂಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕ್ರೀಡಾಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಪ್ರೇಯರ್ ಆಂಟಿ ಅವರನ್ನು ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಲಕ್ಕಿ ಚಾರ್ಮ್ ಎಂದೇ ಕರೆಯುತ್ತಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸುವ ಇವರು ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುವುದು ಸಾಮಾನ್ಯ ದೃಶ್ಯವಾಗಿದೆ.

    ಕೋವಿಡ್ ಕಾರಣದಿಂದ 2020ರ ಟೂರ್ನಿಯಲ್ಲಿ ಇದುವರೆಗೂ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಡೆಲ್ಲಿ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. 2017 ರಲ್ಲಿ ಮೊದಲ ಬಾರಿಗೆ ಅಭಿಮಾನಿಗಳು ಇವರನ್ನ ಗುರುತಿಸಿದ್ದರು. ಅಂದು ಪುಣೆ ವಿರುದ್ಧ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಪಂದ್ಯದಲ್ಲಿ ಪುಣೆ ಗೆಲುವಿಗೆ 5 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಈ ವೇಳೆ ಕಣ್ಣು ಮುಚ್ಚಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ರೋಚಕ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಪಡೆದಿತ್ತು. ಆ ಬಳಿಕ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ವೈರಲ್ ಫೋಟೋ ಹಂಚಿಕೊಂಡು ಮಾಹಿತಿ ನೀಡಿದ್ದ ನಟ ಅಭಿಷೇಕ್ ಬಚ್ಚನ್, ಇವರು ನೀತಾ ಅಂಬಾನಿ ಅವರ ಅಮ್ಮ ಪೂರ್ಣಿಮಾ ದಲಾಲ್, ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ತಂಡವನ್ನು ಬೆಂಬಲಿಸಲು ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಫೋಟೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಫೈನಲ್ ಪಂದ್ಯದಲ್ಲಿ ಕೂಡ ಇವರ ಅಗತ್ಯವಿದೆ. ಪ್ರೇಯರ್ ಆಂಟಿ ಬಂದಿರುವುದರಿಂದ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಪಡೆಯಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.