Tag: Pratapgowda Patil

  • ಮಸ್ಕಿ ಉಪಚುನಾವಣಾ ಕಣದಲ್ಲಿ ಕೋಟ್ಯಧೀಶ ಅಭ್ಯರ್ಥಿಗಳು

    ಮಸ್ಕಿ ಉಪಚುನಾವಣಾ ಕಣದಲ್ಲಿ ಕೋಟ್ಯಧೀಶ ಅಭ್ಯರ್ಥಿಗಳು

    ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಲ್ಲಿ ಕೋಟ್ಯಧೀಶರಾಗಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿಯ ಪ್ರತಾಪಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ನ ಬಸನಗೌಡ ತುರವಿಹಾಳ ಇಬ್ಬರು ಕೋಟ್ಯಾಧೀಶರು.

    ಪ್ರತಾಪಗೌಡ ಪಾಟೀಲ್ ಒಟ್ಟು 5.92 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಪ್ರತಾಪಗೌಡ ಹೆಸರಿನಲ್ಲಿ 30.33 ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ 26 ಎಕರೆ ಜಮೀನು ಹೊಂದಿದ್ದಾರೆ. 33 ಲಕ್ಷ ಸಾಲ ಹೊಂದಿದ್ದಾರೆ. 8.45 ಲಕ್ಷ ನಗದು, ಬ್ಯಾಂಕ್ ಗಳಲ್ಲಿ 1.19 ಕೋಟಿ ರೂಪಾಯಿ ಎಫ್ ಡಿ ಇಟ್ಟಿದ್ದಾರೆ. ವಿವಿಧ ಕಂಪನಿಗಳಲ್ಲಿ 39.48 ಲಕ್ಷ ರೂಪಾಯಿ ಷೇರು ಹೊಂದಿದ್ದಾರೆ. 62.71 ಲಕ್ಷ ರೂಪಾಯಿ ಮೌಲ್ಯದ 3 ಕಾರುಗಳಿವೆ. ಪ್ರತಾಪಗೌಡ ಬಳಿ 275 ಗ್ರಾಂ, ಪತ್ನಿ 650 ಗ್ರಾಂ ಚಿನ್ನ ಹೊಂದಿದ್ದಾರೆ. ಒಟ್ಟು ಸ್ಥಿರಾಸ್ತಿ 3.22 ಕೋಟಿ ರೂಪಾಯಿ.

    ಇನ್ನೂ ಬಸನಗೌಡ ತುರ್ವಿಹಾಳ ಒಟ್ಟು 1.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸ್ವಂತ ಹೆಸರಿನಲ್ಲಿ 19.13 ಎಕರೆ ಜಮೀನು, ಪತ್ನಿ ಹೆಸರಿನಲ್ಲಿ 5.34 ಎಕರೆ ಭೂಮಿ ಹೊಂದಿದ್ದಾರೆ. ಬಸನಗೌಡ 2 ಲಕ್ಷ ರೂಪಾಯಿ ತಮ್ಮ ಬಳಿ, ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ ಒಂದು ಲಕ್ಷ ನಗದು ಹೊಂದಿದ್ದಾರೆ. 26 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರು, 150 ಗ್ರಾಂ ಚಿನ್ನ ಹಾಗೂ ಒಂದು ಕೆಜಿ ಬೆಳ್ಳಿಯಿದೆ. ತುರ್ವಿಹಾಳದ ಯುಕೋ ಬ್ಯಾಂಕಿನಲ್ಲಿ 2.72 ಲಕ್ಷ ರೂಪಾಯಿ ಸಾಲ, 3.67 ಲಕ್ಷ ರೂಪಾಯಿ ಬೆಳೆ ಸಾಲ ಮಹೇಂದ್ರ ಫೈನಾನ್ಸ್ ನಲ್ಲಿ 7 ಲಕ್ಷ ರೂಪಾಯಿ ಸಾಲ ಸೇರಿ ಒಟ್ಟು 19.39 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ.

    ನಿನ್ನೆ ಇಬ್ಬರು ಅಭ್ಯರ್ಥಿ ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಸುವಾಗ ನೀಡಿದ ಆಸ್ತಿ ವಿವರ ಪ್ರಕಾರ ಇಬ್ಬರೂ ಅಭ್ಯರ್ಥಿಗಳು ಕೋಟ್ಯಧಿಪತಿಗಳು ಆಗಿದ್ದಾರೆ.

  • ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ರಾಯಚೂರು: ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ಸರ್ಕಾರದಿಂದ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಮಸ್ಕಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಒಟ್ಟು 17 ಕೆರೆಗಳಿಗೆ ನೀರು ತುಂಬಿಸುವ 457.18 ಕೋಟಿ ರೂಪಾಯಿಯ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಮೊದಲ ಕಂತಾಗಿ ಆರ್ಥಿಕ ಇಲಾಖೆ 82.33 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ತಕ್ಷಣ ಟೆಂಡರ್ ಕರೆಯುವಂತೆಯೂ ಸೂಚನೆ ನೀಡಲಾಗಿದೆ.

    ಇತ್ತೀಚಿಗೆ ಕನಕ ಹಾಗು ಹೇಮರಡ್ಡಿ ಮಲ್ಲಮ್ಮ ಭವನಕ್ಕೆ 2.50 ಕೋಟಿ ರೂಪಾಯಿ ಮಂಜೂರಾತಿ ನೀಡಲಾಗಿತ್ತು. ನಿರ್ಮಾಣವಾಗಿರುವ ಕಟ್ಟಡಗಳು ವಿವಿಧ ಕಾಮಗಾರಿಗಳಿಗೆ ಈಗ ಒಂದೊಂದಾಗೆ ಚಾಲನೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ಕ್ಷೇತ್ರದ ವಟಗಲ್ ನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಇಂದಿರಾಗಾಂಧಿ ವಸತಿ ಶಾಲೆ ಆರಂಭಿಸಲಾಗಿದೆ. ಮಸ್ಕಿ ಬೈ ಎಲೆಕ್ಷನ್ ಇಷ್ಟರಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದ್ದು, ಚುನಾವಣೆ ಗೆಲ್ಲಲು ಬಿಜೆಪಿ ಕಾರ್ಯತಂತ್ರ ನಡೆಸಿದೆ.

    ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮತ ಸೆಳೆಯುವ ತಂತ್ರಗಾರಿಕೆಯಂತೂ ನಡೆದಿದೆ. ಮಸ್ಕಿ ಬೈ ಎಲೆಕ್ಷನ್ ನಲ್ಲಿ ಪ್ರತಾಪಗೌಡ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಚುನಾವಣಾ ಉಸ್ತುವಾರಿಯನ್ನ ಬಿ.ವೈ.ವಿಜಯೇಂದ್ರ, ಶ್ರೀರಾಮುಲು, ರವಿಕುಮಾರ್, ಡಾ.ಶಿವರಾಜ್ ಪಾಟೀಲ್, ರಾಜೂಗೌಡ, ನೇಮಿರಾಜ್ ನಾಯಕ್ ವಹಿಸಿಕೊಂಡಿದ್ದಾರೆ.

    ಒಂದೆಡೆ ಎನ್‍ಆರ್ ಬಿ ಸಿ 5 ಎ ಕಾಲುವೆಗಾಗಿ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಹೋರಾಟ 80 ನೆಯ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟದ ಮಧ್ಯೆಯೇ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

  • 60 ದಿನ ಪೂರೈಸಿದ 5 ಎ ಕಾಲುವೆ ಹೋರಾಟ – ರೈತರ ಮಧ್ಯೆ ಬಿರುಕು ಮೂಡಿಸಲು ಯತ್ನ?

    60 ದಿನ ಪೂರೈಸಿದ 5 ಎ ಕಾಲುವೆ ಹೋರಾಟ – ರೈತರ ಮಧ್ಯೆ ಬಿರುಕು ಮೂಡಿಸಲು ಯತ್ನ?

    – ಪ್ರತಾಪ್‍ಗೌಡ ಪಾಟೀಲ್ ವಿರುದ್ದ ರೈತರ ಆಕ್ರೋಶ
    – ಮೊದಲು ಭರವಸೆ ಕೊಟ್ಟು ಈಗ ಅವೈಜ್ಞಾನಿಕ ಅಂತಿರೋ ಸರ್ಕಾರ

    ರಾಯಚೂರು: ಜಿಲ್ಲೆಯ ಮಸ್ಕಿಯ ನಾರಾಯಣಪುರ ಬಲದಂಡೆ 5 ಎ ಕಾಲುವೆ ಹೋರಾಟ 60 ದಿನಗಳನ್ನ ಪೂರೈಸಿದರು ಸರ್ಕಾರ ರೈತರಿಗೆ ಸ್ಪಂದಿಸಿಲ್ಲ. ಬದಲಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರೈತರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ. ಹೋರಾಟದ ದಿಕ್ಕನ್ನ ಬದಲಿಸುವ ಪ್ರಯತ್ನ ನಡೆದಿದೆ ಅಂತ ರೈತರು ರೊಚ್ಚಿಗೆದ್ದಿದ್ದಾರೆ.

    ನಾಲ್ಕು ಗ್ರಾಮ ಪಂಚಾಯತಿಗಳ ಬಹಿಷ್ಕಾರ, ಮಸ್ಕಿ ಬಂದ್, ಸತತ 60 ದಿನಗಳಿಂದ ಅನಿರ್ಧಿಷ್ಟಾವದಿ ಧರಣಿ ನಡೆಸಿದರು 5 ಎ ಕಾಲುವೆ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ರಾಯಚೂರಿನ ಮಸ್ಕಿಯ ಪಾಮನಕಲ್ಲೂರಿನಲ್ಲಿ ರೈತರು ಕಾಲುವೆಗಾಗಿ ನಿರಂತರ ಹೋರಾಟವನ್ನ ನಡೆಸಿದ್ದಾರೆ. ಆದ್ರೆ ಪ್ರತಾಪ್ ಗೌಡ ಪಾಟೀಲ್ ತಮ್ಮ ಬೆಂಬಲಿಗರನ್ನೇ 5 ಎ ಕಾಲುವೆ ಹೋರಾಟ ನಿರತ ರೈತರು ಅಂತ ಬೆಂಗಳೂರಿಗೆ ಕರೆದೊಯ್ದು ಸರ್ಕಾರಕ್ಕೆ ಹರಿ ನೀರಾವರಿ ಬಗ್ಗೆ ಮನವಿ ಮಾಡಿದ್ದಾರೆ. ನೀರಾವರಿ ಸಚಿವರೊಂದಿಗೆ ಮಾತನಾಡಿದವರು ಯಾರೂ 5 ಎ ರೈತರಲ್ಲ ಬದಲಾಗಿ ಪ್ರತಾಪ್ ಗೌಡ ಪಾಟೀಲ್ ಬೆಂಬಲಿಗರು. ರೈತರ ಮಧ್ಯೆ ತಂದಿಡುವ ಕೆಲಸವನ್ನ ಮಾಡಲಾಗುತ್ತಿದೆ ಅಂತ ರೈತರು ಆರೋಪಿಸಿದ್ದಾರೆ.

    5 ಎ ಕಾಲುವೆ ಅವೈಜ್ಞಾನಿಕವಾಗಿರುವುದರಿಂದ ನಂದವಾಡಗಿಯಿಂದ 23 ಗ್ರಾಮಗಳಿಗೆ ಅನುಕೂಲವಾಗುವಂತೆ ತೆರೆದ ಕಾಲುವೆ ಮುಖಾಂತರ ಹನಿ ನೀರಾವರಿ ಬದಲು ಹರಿ ನೀರಾವರಿ ಯೋಜನೆ ಜಾರಿ ಮಾಡಲಾಗುವುದು ಅಂತ ಸರ್ಕಾರ ಈಗ ಹೇಳುತ್ತಿದೆ. ಇದು ಸರಿಯಾದ ಕ್ರಮವಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾವಿರಾರು ಹೆಕ್ಟೇರ್ ಫಲವತ್ತಾದ ಭೂಮಿ ಇದ್ರೂ ನೀರಿನ ಅಲಭ್ಯತೆಯಿಂದ ರೈತರು ಗುಳೆ ಹೋಗುತ್ತಿದ್ದಾರೆ. ಹೀಗಾಗಿ 12 ವರ್ಷಗಳಿಂದ 5ಎ ಕಾಲುವೆಗಾಗಿ ಹೋರಾಟ ನಡೆದಿದೆ. ಹಲವಾರು ತಾಂತ್ರಿಕ ಕಾರಣಗಳ ನೆಪವೊಡ್ಡಿ ಮಸ್ಕಿ, ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕಿನ 107 ಗ್ರಾಮಗಳನ್ನ ನೀರಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ಮಸ್ಕಿಯ ಕಾಳಾಪುರದಿಂದ ಶುರುವಾಗಬೇಕಿದ್ದ 5 ಎ ಕಾಲುವೆ ಕಾಮಗಾರಿ ಈವರೆಗೂ ಪ್ರಾರಂಭ ಮಾಡಿಯೇ ಇಲ್ಲ. ಕೂಡಲೇ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ರೈತರ ಹೋರಾಟಕ್ಕೆ ಸ್ಪಂದಿಸಿ ಅನುಕೂಲ ಮಾಡಿಕೊಡಬೇಕಾದ ಸರ್ಕಾರ ಅನ್ನದಾತರಿಗೆ ಒಳಿತು ಮಾಡುವ ಬದಲು ಸಮಯವ್ಯರ್ಥ ಮಾಡುತ್ತ ಚೆಲ್ಲಾಟವಾಡುತ್ತಿದೆ. ಈ ಮೊದಲು ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಲುವೆ ನಿರ್ಮಾಣ ಬಗ್ಗೆ ಭರವಸೆ ನೀಡಿದ ಜನಪ್ರತಿನಿಧಿಗಳೇ ಈಗ ವರಸೆ ಬದಲಿಸಿದ್ದಾರೆ. ಹೀಗಾಗಿ ರೈತರು 5 ಎ ಕಾಲುವೆ ಜಾರಿಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.

  • ಮಸ್ಕಿ ಗೆಲ್ಲಲು ಬಿಎಸ್‍ವೈ ಸರ್ಕಾರದಿಂದ ಜಲಾಸ್ತ್ರ

    ಮಸ್ಕಿ ಗೆಲ್ಲಲು ಬಿಎಸ್‍ವೈ ಸರ್ಕಾರದಿಂದ ಜಲಾಸ್ತ್ರ

    ಬೆಂಗಳೂರು: ಬೆಳಗಾವಿ, ಬಸವಕಲ್ಯಾಣ ಗೆಲ್ಲಲು ಮರಾಠ ನಿಗಮದ ಅಸ್ತ್ರ ಪ್ರಯೋಗಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಮಸ್ಕಿಯಲ್ಲಿ ಬೇರೆಯದ್ದೇ ತಂತ್ರ ಹೂಡಿದೆ. ಶಿರಾದಲ್ಲಿ ಪ್ರಯೋಗಿಸಿದ್ದ ಎರಡು ಅಸ್ತ್ರಗಳ ಪೈಕಿ, ಇಲ್ಲಿ ಒಂದನ್ನು ಪ್ರಯೋಗ ಮಾಡುತ್ತಿದೆ. ಶಿರಾದಲ್ಲಿ ಮದಲೂರು ಕೆರೆಗೆ ನೀರು ಹರಿಸುವ ಅಸ್ತ್ರ ಪ್ರಯೋಗ ಯಶಸ್ವಿಯಾದ ಕೂಡಲೇ, ಮಸ್ಕಿಯಲ್ಲಿ ನೀರಾವರಿ ಮಂತ್ರ ಜಪಿಸಿದೆ.

    ಉಪಚುನಾವಣೆಗೆ ದಿನಾಂಕ ಘೋಷಣೆಗೆ ಮುನ್ನವೇ ಮಸ್ಕಿ ನಾಲಾ ಯೋಜನೆಯ ಆಧುನೀಕರಣ ಕಾಮಗಾರಿಗಳಿಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಬರೋಬ್ಬರಿ 52.54 ಕೋಟಿ ರೂಪಾಯಿ ಮೊತ್ತದ ಡಿಪಿಆರ್ ಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಈ ಮೂಲಕ ಮಸ್ಕಿ ಮತದಾರರನ್ನು ಓಲೈಸಿ ಉಪ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ.

    ಮೊನ್ನೆಯಷ್ಟೇ ಮಸ್ಕಿಯಲ್ಲಿ ಪ್ರಚಾರ ನಡೆಸಿದ್ದ ಬಿಜೆಪಿ ಮುಖಂಡ ರವಿಕುಮಾರ್, ಎನ್‍ಆರ್‍ಬಿಸಿ 5ಎ ಕಾಲುವೆ ಅನುಷ್ಠಾನದ ಜೊತೆಗೆ ಕ್ಷೇತ್ರದ ಎಲ್ಲಾ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಡಿಸುವ ಭರವಸೆ ನೀಡಿದರು. ಇದಾದ ಮೂರೇ ದಿನಕ್ಕೆ 52.54 ಕೋಟಿ ರೂಪಾಯಿ ಮೊತ್ತದ ಡಿಪಿಆರ್ ಗೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಇದೆಲ್ಲಾ ಬೈ ಎಲೆಕ್ಷನ್ ಗಿಮಿಕ್ ಅಷ್ಟೇ. ಬಿಜೆಪಿಯವರನ್ನ ನಂಬಬೇಡಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

    ಮಸ್ಕಿ ಗೆಲ್ಲಲು ಜಲಾಸ್ತ್ರ ಏಕೆ?: ಉಪ ಕಣದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಅದಲು ಬದಲಾಗಿದ್ದಾರೆ. ಮೂರು ಬಾರಿ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಈ ಬಾರಿ ಬಿಜೆಪಿ ಹುರಿಯಾಳು ಆಗಿದ್ದಾರೆ. ಇಷ್ಟು ದಿನ ಬಿಜೆಪಿಯಲ್ಲಿದ್ದ ಬಸನಗೌಡ ತುರುವಿಹಾಳ್ ಕಾಂಗ್ರೆಸ್‍ಗೆ ಜಂಪ್ ಆಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್‍ಗೆ ಬಸನಗೌಡ ತುರುವಿಹಾಳ್ ಪ್ರಬಲ ಎದುರಾಳಿಯಾಗಿದ್ದು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರ ನಡುವಿನ ಅಂತರ ಕೇವಲ 213 ಮತಗಳಿತ್ತು.

    ತುರುವಿಹಾಳ್ ಅನುಕಂಪದ ಅಲೆಯಲ್ಲಿ ಗೆಲ್ಲಬಹುದು ಎಂಬುದು ಬಿಜೆಪಿ ಭಯ. ಹೀಗಾಗಿಯೇ ಪ್ರತಾಪ್ ಗೌಡ ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಜಲಾಸ್ತ್ರ ಪ್ರಯೋಗಿಸಿದೆ ಎನ್ನಲಾಗುತ್ತಿದೆ.

  • ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

    ಕೇಸ್ ವಾಪಸ್ – ಅನರ್ಹ ಶಾಸಕ ಪ್ರತಾಪ್‍ಗೌಡ ಬೇಡಿಕೆ ಈಡೇರಿಸಿದ ಬಿಜೆಪಿ

    ರಾಯಚೂರು: ಅನರ್ಹ ಶಾಸಕ ಪ್ರತಾಪ್‍ಗೌಡ ಅವರ ಬೇಡಿಕೆಯನ್ನು ಈಡೇರಿಸಲು ಬಿಜೆಪಿ ಯಶಸ್ವಿಯಾಗಿದ್ದು, ಅವರ ವಿರುದ್ಧ ಹೂಡಲಾಗಿದ್ದ ಬೋಗಸ್ ಮತದಾನ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಅವರು ವಾಪಸ್ ಪಡೆದಿದ್ದಾರೆ.

    2018ರ ಚುನಾವಣೆ ವೇಳೆ ತುರ್ವಿಹಾಳ ಅವರು ಮಸ್ಕಿ ಮತಕ್ಷೇತ್ರದಲ್ಲಿ ಬೋಗಸ್ ಮತದಾನ ನಡೆದಿದೆ ಎಂದು ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನರ್ಹರಾಗಿದ್ದ ಪ್ರತಾಪ್‍ಗೌಡ ಅವರ ಮಸ್ಕಿ ಕ್ಷೇತ್ರಕ್ಕೆ ಚುನಾವಣೆ ನಡೆದಿರಲಿಲ್ಲ. ಆದರೆ ಸದ್ಯ ಏಕಾಏಕಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದು, ಪ್ರತಾಪ್‍ಗೌಡ ಅವರ ಹಾದಿ ಸದ್ಯ ಸುಗಮವಾಗಿದೆ.

    ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ತುರ್ವಿಹಾಳ ಅವರು 213 ಮತಗಳ ಅಂತರದಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಈ ಹಿಂದೆ ಪ್ರಕರಣವನ್ನು ವಾಪಸ್ ಪಡೆಯಲು ಹಿಂದೇಟು ಹಾಕಿದ್ದ ತುರ್ವಿಹಾಳ ಅವರು ಸರ್ಕಾರ ನೀಡಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಲ್ಲದೇ ನಾವು ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ ಉಪಚುನಾವಣೆ ಫಲಿತಾಂಶದ ಬಳಿಕ ತಮ್ಮ ಮನಸ್ಸು ಬದಲಿಸಿದ ತುರ್ವಿಹಾಳ ಅವರು ಪ್ರಕರಣವನ್ನು ವಾಪಸ್ ಪಡೆದಿರುವುದರಿಂದ ಮಸ್ಕಿ ಉಪಚುನಾವಣೆಗೆ ಹಾದಿ ಸುಗಮವಾಗಿದೆ. ಮಸ್ಕಿ ಪ್ರಕರಣ ಇತ್ಯರ್ಥವಾದ ಕಾರಣದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಚುನಾವಣಾ ಪ್ರಕರಣವೂ ಸುಲಭವಾಗಿ ಇತ್ಯರ್ಥವಾಗುವ ಸಾಧ್ಯತೆಯಿದೆ.

    ಸದ್ಯ ಬಿಜೆಪಿ ಹೈಕಮಾಂಡ್ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ತುರ್ವಿಹಾಳ ಅವರು, ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಒಪ್ಪಿಗೆಯಾಗದ ಕಾರಣ ಇದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

    ಏನಿದು ಪ್ರಕರಣ: ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿರಲಿಲ್ಲ. ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದ ಕಾರಣ ಪ್ರತಾಪ್‍ಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಕೂಡ ಉಪಚುನಾವಣೆ ನಡೆದಿರಲಿಲ್ಲ.

  • ಉಪಚುನಾವಣೆ ಫಲಿತಾಂಶದಿಂದ ಮಹತ್ವ ಕಳೆದುಕೊಂಡ್ವಾ 2 ಕ್ಷೇತ್ರಗಳು?

    ಉಪಚುನಾವಣೆ ಫಲಿತಾಂಶದಿಂದ ಮಹತ್ವ ಕಳೆದುಕೊಂಡ್ವಾ 2 ಕ್ಷೇತ್ರಗಳು?

    ರಾಯಚೂರು: ಉಪಚುನಾವಣೆಯ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ ಚುನಾವಣೆಯನ್ನ ಇನ್ನೂ ಎದುರಿಸದ ಎರಡು ಕ್ಷೇತ್ರಗಳ ಅನರ್ಹ ಶಾಸಕರ ಪರಸ್ಥಿತಿ ಈಗಲೂ ಅತಂತ್ರವಾಗಿದೆ. ಆ ಎರಡೂ ಕ್ಷೇತ್ರಗಳ ಉಪಚುನಾವಣೆಗೂ ಅಷ್ಟೇನೂ ಮಹತ್ವ ಇಲ್ಲದ ಕಾರಣ ಇಲ್ಲಿನ ಟಿಕೆಟ್ ಆಕಾಂಕ್ಷಿಗಳಲ್ಲೇ ಉತ್ಸಾಹ ಕುಂದಿದಂತಾಗಿದೆ. ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಂತೂ ಇಷ್ಟುದಿನ ಇದ್ದ ಕುತೂಹಲವೇ ಈಗ ಮಾಯವಾದಂತೆ ಕಾಣುತ್ತಿದೆ.

    ಕಳೆದ ವಿಧಾನಸಭಾ ಚುನಾವಣಾ ವೇಳೆ ಅಕ್ರಮ ಮತದಾನ ನಡೆದಿದೆ ಅಂತ ಅಂದಿನ ಬಿಜೆಪಿ ಅಭ್ಯರ್ಥಿಗಳು ನ್ಯಾಯಾಲಯ ಮೆಟ್ಟಿಲು ಏರಿದ್ದಕ್ಕೆ ರಾಯಚೂರಿನ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ಇನ್ನೂ ನಡೆದಿಲ್ಲ. ಈಗ ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಮೂಲಕ ಬಿಜೆಪಿ ಸಂಖ್ಯಾಬಲದಿಂದ ಭದ್ರವಾಗಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಚುನಾವಣೆಗೂ ಅಷ್ಟೊಂದು ಮಹತ್ವವಿಲ್ಲ. ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಆರ್ ಆರ್ ನಗರದ ಅನರ್ಹ ಶಾಸಕ ಮುನಿರತ್ನ ಚುನಾವಣೆ ಎದುರಿಸಲು ಇನ್ನಷ್ಟು ಸಮಯ ಕಾಯಬೇಕಿದೆ.

    ಇಷ್ಟು ದಿನ ದೂರನ್ನ ವಾಪಸ್ ಪಡೆಯಲ್ಲ, ನಾನೂ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದ ಮಸ್ಕಿ ಕ್ಷೇತ್ರದ ಬಸನಗೌಡ ತುರವಿಹಾಳ ಈಗ ದೂರನ್ನ ವಾಪಸ್ ಪಡೆದು ಯಾರೇ ಅಭ್ಯರ್ಥಿಯಾದರೂ ಪಕ್ಷಕ್ಕೆ ಬೆಂಬಲಿಸುತ್ತೇನೆ ಅಂತಿದ್ದಾರೆ. ಟಿಕೆಟ್ ಬೇಡಿಕೆಯಿಂದಲೇ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಸನಗೌಡ, ಈಗ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ, ಅಕ್ರಮ ಮತದಾನ ನಡೆದಿದೆ ಅಂತ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಎಂ ಯಡಿಯೂರಪ್ಪನವರ ಮಾತಿಗೆ ಒಪ್ಪಿ ದೂರು ಹಿಂಪಡೆಯಲು ಮುಂದಾಗಿದ್ದಾರಂತೆ. ಆದರೆ ಅವರಿಗೆ ಟಿಕೆಟ್ ಗ್ಯಾರೆಂಟಿಯಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಬಸನಗೌಡ ತುರ್ವಿಹಾಳ

    ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಹಾರಿದ ಮೇಲೆ ಕಾಂಗ್ರೆಸ್ಸಿಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೀಗಾಗಿ ಉಪಚುನಾವಣೆ ಈಗಲೇ ಎದುರಾದ್ರೂ ಚುನಾವಣೆ ಎದುರಿಸಲು ಕಾಂಗ್ರೆಸ್ ಸದೃಢವಾಗಿಲ್ಲ. ಬಿಜೆಪಿ ಟಿಕೆಟ್ ಕೈತಪ್ಪಿದರೆ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಕದ ತಟ್ಟಬಹುದು ಅನ್ನೋ ವಿಚಾರವೂ ಸದ್ಯಕ್ಕೆ ಮುಗಿದ ಅಧ್ಯಾಯದಂತೆ ಕಾಣುತ್ತಿದೆ. ಕಾಂಗ್ರೆಸ್ ಮಾತ್ರ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ನಾನಾ ಕಸರತ್ತು ನಡೆಸಿದೆ.

    ಒಟ್ಟಿನಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಈ ಎರಡೂ ಕ್ಷೇತ್ರಗಳನ್ನ ಗೌಣವಾಗಿಸಿದೆ. ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಗಂತೂ ಚುನಾವಣೆ ಬೇಡವಾಗಿದ್ದು ಎಂ.ಎಲ್.ಸಿ ನಿರೀಕ್ಷೆಯಲ್ಲಿದ್ದಾರೆ ಅನ್ನೋದು ಅವರ ಆಪ್ತವಲಯದ ಮಾತು. ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುವ ಬಸನಗೌಡ ತುರ್ವಿಹಾಳ ಈ ಬಾರಿಯಾದ್ರೂ ದೂರು ವಾಪಸ್ ತೆಗೆದುಕೊಳ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ

  • ನನ್ನ ಫೋನೂ ಕದ್ದಾಲಿಕೆಯಾಗಿದೆ – ಅನರ್ಹ ಶಾಸಕ ಪ್ರತಾಪ್‍ಗೌಡ ಪಾಟೀಲ್

    ನನ್ನ ಫೋನೂ ಕದ್ದಾಲಿಕೆಯಾಗಿದೆ – ಅನರ್ಹ ಶಾಸಕ ಪ್ರತಾಪ್‍ಗೌಡ ಪಾಟೀಲ್

    ರಾಯಚೂರು: ರಾಜ್ಯಾದ್ಯಂತ ಫೋನ್ ಕದ್ದಾಲಿಕೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ನನ್ನ ಫೋನನ್ನೂ ಕದ್ದಾಲಿಕೆ ಮಾಡಲಾಗಿದೆ ಎಂದು ಮಸ್ಕಿಯ ಅನರ್ಹ ಶಾಸಕ ಪ್ರತಾಪ್‍ಗೌಡ ಪಾಟೀಲ್ ತಿಳಿಸಿದ್ದಾರೆ.

    ಈ ಕುರಿತು ಕೊಪ್ಪಳದ ಮುನಿರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಹಲವರು ಶಾಮೀಲಾಗಿದ್ದಾರೆ. ನನ್ನ ಹಾಗೂ ನನ್ನ ಆಪ್ತ ಕಾರ್ಯದರ್ಶಿಯ ಫೋನ್ ಸಹ ಕದ್ದಾಲಿಕೆ ಮಾಡಲಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳು ಸಹ ಶಾಮೀಲಾಗಿದ್ದರಿಂದ ಎಸ್‍ಐಟಿ ಇಲ್ಲವೇ ಸಿಐಡಿ ತನಿಖೆ ನಡೆಸುವುದು ಸೂಕ್ತ. ಸರ್ಕಾರ ಈ ಪ್ರಕರಣವನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರ ತ್ವರಿತವಾಗಿ ಉನ್ನತ ಮಟ್ಟದ ತನಿಖೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಎರಡು ದಿನದೊಳಗೆ ಅನರ್ಹ ಶಾಸಕರು ಸಭೆ ಸೇರಿ ತೀರ್ಮಾನಿಸಿ ಹೈಕೋರ್ಟ್ ಮೂಲಕ ಉನ್ನತ ತನಿಖೆಗೆ ಕೋರುತ್ತೇವೆ. ಈ ಬಗ್ಗೆ ನಾಳೆ ಎಲ್ಲ ಅನರ್ಹ ಶಾಸಕರು ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ನಿನ್ನೆ ಟ್ವೀಟ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು. ನಾನು ಫೋನ್ ಕದ್ದಾಲಿಕೆ ಮಾಡಿಲ್ಲ. ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೆ ಹೇಳುತ್ತಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಮೇಲಿನ ಆರೋಪವನ್ನು ಕುಮಾರಸ್ವಾಮಿ ಸಾರಾಸಗಟಾಗಿ ತಿರಸ್ಕರಿಸಿದ್ದರು.

  • ಸುಪ್ರೀಂ ತೀರ್ಪಿಗೆ ನಾವು ಬದ್ಧ, ಸಿಎಂ ರಾಜೀನಾಮೆ ಕೊಡಲಿ – ಪ್ರತಾಪ್‍ಗೌಡ ಪಾಟೀಲ್

    ಸುಪ್ರೀಂ ತೀರ್ಪಿಗೆ ನಾವು ಬದ್ಧ, ಸಿಎಂ ರಾಜೀನಾಮೆ ಕೊಡಲಿ – ಪ್ರತಾಪ್‍ಗೌಡ ಪಾಟೀಲ್

    ಮುಂಬೈ: ಸುಪ್ರೀಂಕೋರ್ಟ್ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಂದು ಕೋರ್ಟ್ ಏನು ಆದೇಶ ನೀಡುತ್ತದೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ರಾಜೀನಾಮೆ ನೀಡಿರುವ ಮಸ್ಕಿ ಕೈ ಶಾಸಕ ಪ್ರತಾಪ್‍ಗೌಡ ಪಾಟೀಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇವತ್ತು ಸಿಎಂ ವಿಶ್ವಾಸಮತಯಾಚನೆ ಮಾಡುತ್ತೇನೆ ಎಂದು ಹೇಳಿರುವ ಹಿಂದಿನ ಉದ್ದೇಶ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಅವರಿಗೆ ಬಹುಮತ ಇಲ್ಲ ಎಂದು ಗೊತ್ತಿದ್ದರೂ ಸಹ ಮತ್ತೆ ಅದೇ ವಿಪ್ ಜಾರಿ ಮಾಡುವ ನಿಟ್ಟಿನಲ್ಲಿ ಏನಾದರೂ ವಿಶ್ವಾಸ ಮತಯಾಚನೆ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.

    ವಿಧಾಸಭೆಯಲ್ಲಿ ಘಟನೆಗಳ ಬಗ್ಗೆ ವಿವರಣೆಯನ್ನು ನೀಡಿ ರಾಜೀನಾಮೆ ಕೊಟ್ಟು ಹೋಗುತ್ತಾರೆ ಅನ್ನಿಸುತ್ತಿದೆ. ಇದು ಬಹುಮತ ಕಳೆದುಕೊಂಡಿರುವ ಸರ್ಕಾರ, ಆದರೂ ಸಿಎಂ ನಾನು ಬಹುಮತ ಸಾಬೀತುಪಡಿಸುತ್ತೇನೆ ಅಂತಿದ್ದಾರೆ ಅಂದ್ರೆ ಅವರು ಯಾವ ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾವು ಎಲ್ಲರೂ ನಮ್ಮ ರಾಜೀನಾಮೆಗೆ ಬದ್ಧರಾಗಿದ್ದೇವೆ. ಇದು ಅಲ್ಪ ಮತದ ಸರ್ಕಾರ ಆಗಿರುವುದರಿಂದ, ಸಿಎಂ ರಾಜೀನಾಮೆ ಕೊಡಲಿ ಎಂದು ಕೇಳುತ್ತೇವೆ ಎಂದು ಹೇಳಿದರು.