Tag: Pratap Gowda Patil

  • ಮುಂಬೈನ ಐಷಾರಾಮಿ ಹೋಟೆಲಿನಲ್ಲಿ ಪ್ರತಾಪ್ ಗೌಡ ಪಾಟೀಲ್-ಜೋಪಡಿಯಲ್ಲಿ ಶಾಲಾ ಮಕ್ಕಳು

    ಮುಂಬೈನ ಐಷಾರಾಮಿ ಹೋಟೆಲಿನಲ್ಲಿ ಪ್ರತಾಪ್ ಗೌಡ ಪಾಟೀಲ್-ಜೋಪಡಿಯಲ್ಲಿ ಶಾಲಾ ಮಕ್ಕಳು

    ರಾಯಚೂರು: ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಏನೋ ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಅವರದೇ ಕ್ಷೇತ್ರದ ಈ ಶಾಲೆಯ ಮಕ್ಕಳು ಮಾತ್ರ ಕಟ್ಟಡವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.

    ಸಿಂಧನೂರು ತಾಲೂಕಿನ ಗಣೇಶ ನಗರ ಗ್ರಾಮದ ಪ್ರಾಥಮಿಕ ಶಾಲೆಗೆ ಕಟ್ಟಡವೇ ಇಲ್ಲದೆ ಕಳೆದ 12 ವರ್ಷಗಳಿಂದ ಜೋಪಡಿಯಲ್ಲಿ ನಡೆಯುತ್ತಿದೆ. ಇಷ್ಟು ದಿನ ಬಿಸಿಲಿಗೆ ತತ್ತರಿಸಿದ ಒಂದರಿಂದ 6 ನೇ ತರಗತಿ ಮಕ್ಕಳು ಈಗ ಮಳೆಯಿಂದಾಗಿ ಶಾಲೆಗೆ ಹೋಗದಂತಹ ಸ್ಥಿತಿಯಲ್ಲಿದ್ದಾರೆ.

    ಖಾಸಗಿಯವರ ಜೋಪಡಿಯಲ್ಲಿ ಪಾಠ ನಡೆಸುತ್ತಿದ್ದ ಶಿಕ್ಷಕರು ಮಳೆಯಿಂದಾಗಿ ಶಾಲೆಯನ್ನ ನಡೆಸದಂತಾಗಿದೆ. ಕಷ್ಟಪಟ್ಟು ಶಾಲೆಗೆ ಬರುತ್ತಿದ್ದ 16 ಮಕ್ಕಳ ಭವಿಷ್ಯ ಈಗ ಅತಂತ್ರವಾಗಿದೆ. ಕನಿಷ್ಠ ಕಟ್ಟಡದಿಂದ ಹಿಡಿದು ಯಾವುದೇ ಸೌಲಭ್ಯಗಳಿಲ್ಲದೇ ಈ ಗ್ರಾಮದ ಶಾಲೆ ಇದ್ದರೂ ಇಲ್ಲದಂತಾಗಿದೆ.

    ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಶಾಸಕ ಪ್ರತಾಪ್ ಗೌಡ ಪಾಟೀಲ್‍ಗೆ ನೂರು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮೊದಲು ಪಬ್ಲಿಕ್ ಟಿವಿ ಸಹ ಶಾಲೆ ಕುರಿತು ವರದಿ ಪ್ರಸಾರ ಮಾಡಿತ್ತು, ಆದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ವಿದ್ಯಾರ್ಥಿಗಳ ಕಷ್ಟಕ್ಕೆ ಇನ್ನೂ ಸ್ಪಂದಿಸಿಲ್ಲ.

  • ಅತೃಪ್ತರ ರಾಜೀನಾಮೆ ಬೆನ್ನಲ್ಲೇ ಬೆಂಗ್ಳೂರಿಗೆ ಆಗಮಿಸಿದ ‘ಕೈ’ ಮೂವರು ಶಾಸಕರು

    ಅತೃಪ್ತರ ರಾಜೀನಾಮೆ ಬೆನ್ನಲ್ಲೇ ಬೆಂಗ್ಳೂರಿಗೆ ಆಗಮಿಸಿದ ‘ಕೈ’ ಮೂವರು ಶಾಸಕರು

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯ ರಾಜೀನಾಮೆ ಇಂದು ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಈ ಹಿಂದಿನಿಂದಲೂ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್, ಪ್ರತಾಪ್ ಗೌಡ ಪಾಟೀಲ್, ಅಮರೇಗೌಡ ಬಯ್ಯಾಪುರ ಇಂದು ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಪಕ್ಷದ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮೂವರು ಶಾಸಕ ನಡೆ ಕುತೂಹಲಕ್ಕೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭೀಮಾನಾಯ್ಕ್ ಅವರು, ಸಾಕಷ್ಟು ಬಾರಿ ನಾನು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಆನಂದ್ ಸಿಂಗ್ ಅವರು ಬೆಳಗ್ಗೆ ರಾಜೀನಾಮೆ ನೀಡಿದ ಬಳಿಕವೂ ನಾನು ಸ್ಪಷ್ಟನೆ ನೀಡಿದ್ದೆ. ಅವರ ಮನವೊಲಿಕೆ ಮಾಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಇಂದಿಗೂ ಮಾಧ್ಯಮಗಳ ಅತೃಪ್ತ ಪಟ್ಟಿಯಲ್ಲಿ ನಮ್ಮ ಹೆಸರಿದೆ. ನಾವು ಕಾಂಗ್ರೆಸ್‍ನಲ್ಲಿಯೇ ಮುಂದುವರಿಯುತ್ತೇವೆ ಎಂದು ಹೇಳುತ್ತೇನೆ. ಯಾವುದೇ ಕಾರಣಕ್ಕೂ ಮಾಧ್ಯಮಗಳು ಆಪರೇಷನ್ ಕಮಲ ಹೆಸರಿನಲ್ಲಿ ನಮ್ಮ ಹೆಸರು ಪ್ರಸ್ತಾಪ ಮಾಡಬೇಡಿ ಎಂದರು.

    ನಮಗೂ ಮಾನ, ಮರ್ಯಾದೆ ಇದೆ:
    ಈ ವೇಳೆ ಮಾತನಾಡಿದ ಅಮರೇಗೌಡ ಬಯ್ಯಾಪುರ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅವರ ಹಕ್ಕು. ಆದರೆ ರಾಜೀನಾಮೆ ನೀಡಿದ ಬಳಿಕ ಎಲ್ಲಿ ಹೋಗುತ್ತಾರೆ ಎಂಬುವುದು ಕೂಡ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಶಾಸಕರ ರಾಜೀನಾಮೆ ಹಿಂದೆ ನನ್ನ ಕೈವಾಡ ಇದೆ. ನಾನು ರಾಜೀನಾಮೆ ನೀಡುತ್ತೇನೆ ಎಂಬುವುದು ಸುಳ್ಳು. ಆದ್ದರಿಂದ ಮಾಧ್ಯಮಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ ನನ್ನ ಹೆಸರನ್ನು ಆತೃಪ್ತರ ಪಟ್ಟಿಯಲ್ಲಿ ಪ್ರಸ್ತಾಪ ಮಾಡಬೇಡಿ ಎಂದು ಮನವಿ ಮಾಡಿದರು.

    ಸದ್ಯ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ರಾಜೀನಾಮೆ ಅವರು ವೈಯಕ್ತಿಕ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ. ಇದರಿಂದ ನಾವು ನಾವು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದೆ. ಆದ್ದರಿಂದ ಪಕ್ಷದಲ್ಲೇ ಮುಂದುವರಿಯುತ್ತೇವೆ. ಯಾವುದೇ ಅತೃಪ್ತರ ಗುಂಪಿನಲ್ಲಿ ನಾವಿಲ್ಲ. ನಮಗೆ ಮಾನ ಮಾರ್ಯದೆ. ಇದೇ ಪಕ್ಷ ಬಿಡುವ ಯೋಚನೆಯೇ ಇಲ್ಲ ಎಂದರು.

  • ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

    ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

    ರಾಯಚೂರು: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಬೇಸತ್ತು ರಾಯಚೂರಿನ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮಸ್ಥರು ತಾವೇ ಸ್ವತಃ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ.

    ಬಿಸಿಲನಾಡು ರಾಯಚೂರಿನಲ್ಲಿ ಈಗ ಬೆಳಗ್ಗೆ ಹೊತ್ತಲ್ಲೇ ಹೊರಗಡೆ ಓಡಾಡುವುದು ಕಷ್ಟ, ಅಂಥದ್ದರಲ್ಲಿ ಮಲ್ಲದಗುಡ್ಡ ಗ್ರಾಮಸ್ಥರು ಬಿಸಿಲಿನಲ್ಲೇ ಪ್ರತಿದಿನ ಬಸ್‍ಗಾಗಿ ಕಾಯಬೇಕಿದೆ. ನಾಲ್ಕು ವರ್ಷಗಳ ಹಿಂದೆ ಸಿಂಧನೂರು-ಕುಷ್ಟಗಿ ರಸ್ತೆ ಕಾಮಗಾರಿಗಾಗಿ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಆದರೆ ಇದುವರೆಗೂ ಪುನಃ ಬಸ್ ನಿಲ್ದಾಣ ನಿರ್ಮಿಸಿಲ್ಲ.

    ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಲ್ಲದಗುಡ್ಡ ಗ್ರಾಮದಲ್ಲಿ ಪ್ರತಿಯೊಂದಕ್ಕೂ ಸಮಸ್ಯೆಗಳಿದ್ದು, ಸಾಕಷ್ಟು ಬಾರಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗ್ರಾಮಸ್ಥರು ಸುಸ್ತಾಗಿದ್ದಾರೆ. ಆದರೆ ಇದುವರೆಗೂ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮದ ಸರ್ದಾರ್ ವಲ್ಲಭಬಾಯಿ ಪಟೇಲ್ ಯುವಕರ ಸಂಘ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿಕೊಂಡಿದೆ.

    ಯುವಕರು ನಿರ್ಮಿಸಿರುವ ಈ ನಿಲ್ದಾಣ ತಾತ್ಕಾಲಿಕವಾಗಿದ್ದು, ಶಾಶ್ವತ ಪರಿಹಾರ ಬೇಕಿದೆ. ಹೀಗಾಗಿ ಗ್ರಾಮಸ್ಥರು ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ.

  • ಮುನಿಸಿಕೊಂಡಿದ್ದ ಪ್ರತಾಪ್ ಗೌಡ, ಬಸವರಾಜ್ ದದ್ದಲ್‍ಗೆ ಪವರ್ – ಡಾ.ಸುಧಾಕರ್ ಸ್ಥಾನ ಇನ್ನೂ ಸಸ್ಪೆನ್ಸ್

    ಮುನಿಸಿಕೊಂಡಿದ್ದ ಪ್ರತಾಪ್ ಗೌಡ, ಬಸವರಾಜ್ ದದ್ದಲ್‍ಗೆ ಪವರ್ – ಡಾ.ಸುಧಾಕರ್ ಸ್ಥಾನ ಇನ್ನೂ ಸಸ್ಪೆನ್ಸ್

    ಬೆಂಗಳೂರು: ಹೇಗಾದ್ರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಅತೃಪ್ತ ಶಾಸಕ ಡಾ.ಉಮೇಶ್ ಜಾಧವ್‍ಗೆ ಬಿಸಿ ಮುಟ್ಟಿಸಿದ್ದಾರೆ.

    ರಾಜ್ಯ ಉಗ್ರಾಣ ನಿಗಮಕ್ಕೆ ಉಮೇಶ್ ಜಾಧವ್ ನೇಮಕಾತಿಯನ್ನ ರದ್ದು ಮಾಡಿದ್ದಾರೆ. ಉಮೇಶ್ ಜಾಧವ್ ಬದಲಾಗಿ ಉಗ್ರಾಣ ನಿಗಮಕ್ಕೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‍ರನ್ನ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಅತೃಪ್ತರ ಓಲೈಕೆಗೂ ಸಿಎಂ ಮುಂದಾಗಿದ್ದಾರೆ.

    ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್‍ಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರತಾಪ್‍ಗೌಡ ಹಾಗೂ ಬಸವನಗೌಡ ಈ ಇಬ್ಬರೂ ಶಾಸಕರು ಬಿಜೆಪಿ ಕಡೆಗೆ ವಾಲುವ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ.  

    ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್‍ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಮರೀಚಿಕೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಸಸ್ಪೆನ್ಸ್ ಇರಿಸಿದ್ದು, ಸುಧಾಕರ್ ನಡೆ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಬ್ಬ ಕಾಂಗ್ರೆಸ್ ಶಾಸಕ ಮುಂಬೈಗೆ ಶಿಫ್ಟ್!

    ಮತ್ತೊಬ್ಬ ಕಾಂಗ್ರೆಸ್ ಶಾಸಕ ಮುಂಬೈಗೆ ಶಿಫ್ಟ್!

    ರಾಯಚೂರು: ಕಾಂಗ್ರೆಸ್‍ನ ಮತ್ತೊಬ್ಬ ಅತೃಪ್ತ ಶಾಸಕರು ಮುಂಬೈಗೆ ಶಿಫ್ಟ್ ಆಗಿದ್ದು, ಈ ಬೆಳವಣಿಗೆ ಮೈತ್ರಿ ಸರ್ಕಾರವನ್ನು ಮತ್ತಷ್ಟು ಗೊಂದಲಕ್ಕೆ ಗುರಿಮಾಡಿದೆ.

    ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್‍ಗೌಡ ಪಾಟೀಲ್ ಅವರು ಮಂಗಳವಾರ ಸಂಜೆ ಮುಂಬೈಗೆ ತೆರಳಿದ್ದಾರೆ. ಶಾಸಕರು ಹಾಗೂ ಪಕ್ಷದ ನಾಯಕರು ನಡುವೆ ಭಿನ್ನಮತ ಕಾಣಿಸಿಕೊಂಡಿದ್ದು, ಈಗಾಗಲೇ ಮುಂಬೈನ ಖಾಸಗಿ ಹೋಟೆಲ್‍ನಲ್ಲಿರುವ ಆರು ಜನ ಶಾಸಕರನ್ನು ಪ್ರತಾಪ್‍ಗೌಡ ಸೇರಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪಕ್ಷೇತರ ಶಾಸಕರ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿ, ಮೊದಲ ಹಂತದ ಆಪರೇಷನ್ ಕಮಲದಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರು ಬುಧವಾರ ಎರಡನೇ ಹಂತ ಆಪರೇಷನ್ ಕಮಲ ನಡೆಸಲು ಮುಂದಾಗಲಿದ್ದಾರಂತೆ. ಎರಡನೇ ಹಂತದಲ್ಲಿ ಅತೃಪ್ತ ಕಾಂಗ್ರೆಸ್‍ನ ಆರು ಜನ ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ರೂಪಿಸಿದ್ದ ಮೆಗಾ ಪ್ಲಾನ್‍ಗೆ ಪ್ರತಾಪ್‍ಗೌಡ ಪಾಟೀಲ್ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡುವ ಶಾಸಕರ ಸಂಖ್ಯೆ 6ರಿಂದ 7ಕ್ಕೆ ಏರಿಕೆ ಕಂಡಿದೆ ಎನ್ನಲಾಗುತ್ತಿದೆ.

    ಆ 6 ಮಂದಿ ಯಾರು?
    ಸಚಿವ ಸ್ಥಾನ ಕಳೆದುಕೊಂಡ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಕಂಪ್ಲಿಯ ಜೆ.ಎನ್, ಗಣೇಶ್ ಹಾಗೂ ಚಿಂಚೋಳಿ ಶಾಸಕ ಉಮೇಶ್ ಜಾದವ್ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಬ್ಬರು ಕೈ ಶಾಸಕರಿಗೆ `ಪವರ್’ ಫುಲ್ ಭದ್ರತೆ!

    ಇಬ್ಬರು ಕೈ ಶಾಸಕರಿಗೆ `ಪವರ್’ ಫುಲ್ ಭದ್ರತೆ!

    ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಇನ್ನೂ ಕಾಡುತ್ತಿದೆಯಾ ಆಪರೇಷನ್ ಕಮಲ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿಬರುತ್ತಿದೆ. ಯಾಕಂದ್ರೆ ಇಬ್ಬರು ಕೈ ಶಾಸಕರಿಗೆ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಭದ್ರತೆ ಒದಗಿಸುತ್ತಿದ್ದಾರೆ ಎಂಬ ವಿಚಾರವೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಕಾಂಗ್ರೆಸ್ ನಾಯಕರು ಹದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ರಾತ್ರಿ ಮಾಜಿ ಸಚಿವ ಡಿಕೆಶಿ ತಾವು ವಾಸ್ತವ್ಯವಿದ್ದ ಹೋಟೆಲಿಗೆ ಇಬ್ಬರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಮೂಲಕ ಈ ಇಬ್ಬರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ವಿಶ್ವಾಸಮತ ಸಾಬೀತು ಪಡಿಸುವವರೆಗೆ ಡಿಕೆಶಿ ಕಣ್ಗಾವಲಿನಲ್ಲಿ ಪ್ರತಾಪ್ ಗೌಡ ಮತ್ತು ಆನಂದ್ ಸಿಂಗ್ ಇರಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರಿದ್ದ ಹೋಟೆಲ್ ನಲ್ಲಿ ಈ ಇಬ್ಬರು ಶಾಸಕರೂ ಕೂಡ ವಾಸ್ತವ್ಯ ಹೂಡಲಿದ್ದಾರೆ. ಮತ್ತೆ ಬಿಜೆಪಿ ಕಡೆ ಯಾವುದೇ ಕಾರಣಕ್ಕೂ ಹೋಗಬೇಡಿ ಅಂತ ಡಿಕೆಶಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ದೊರೆತಿದೆ.

    ರಾಜ್ಯ ವಿಧಾನಸಭಾ ಫಲಿತಾಂಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಜಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಆದ್ರೂ ನಾನೇ ಸಿಎಂ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರು ರಾಜ್ಯಪಾಲರ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡು ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಹೀಗಾಗಿ ಭಾರೀ ಹೈಡ್ರಾಮಾವೇ ನಡೆದಿತ್ತು.

    ಇತ್ತ ವಿಧಾನಸಭಾ ಕಲಾಪ ನಡೆಯುತ್ತಿದ್ದಂತೆಯೇ ಶಾಸಕ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಬಾರದೇ ಇರುವುದು ಕಾಂಗ್ರೆಸ್ ಗೆ ಭಾರೀ ಆತಂಕವೇ ಎದುರಾಗಿತ್ತು. ಕೊನೆಗೆ ಡಿಕೆಶಿ ಅವರೇ ಈ ಇಬ್ಬರು ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ವಿಶ್ವಾಸ ಮತ ಸಾಬೀತು ಪಡಿಸುವವರೆಗೆ ಆಪರೇಷನ್ ಕಮಲದ ಭೀತಿಯಿದ್ದು, ಪರಿಣಾಮ ಇಬ್ಬರು ಶಾಸಕರು `ಕೈ’ ಬಿಟ್ಟು ಹೋಗದಂತೆ ಕಾಂಗ್ರೆಸ್ ನಾಯಕರು ನೋಡಿಕೊಳ್ಳುತ್ತಿದ್ದಾರೆ.

  • ಕಾಂಗ್ರೆಸ್‍ನಿಂದ ಉಚ್ಛಾಟನೆಗೊಳಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪ್ತರು

    ಕಾಂಗ್ರೆಸ್‍ನಿಂದ ಉಚ್ಛಾಟನೆಗೊಳಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪ್ತರು

    ರಾಯಚೂರು: ವಿಶ್ವಾಸ ಸಂದರ್ಭದಲ್ಲಿ ಸಕಾಲಕ್ಕೆ ಕೆಪಿಸಿಸಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ ರಾಯಚೂರಿನ ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪ್ತರು ಉಚ್ಚಾಟನೆಗೆ ಒಳಗಾಗಿದ್ದಾರೆ.

    ಮಸ್ಕಿ ನಗರ ಘಟಕ ಅಧ್ಯಕ್ಷ ಬಸವಂತರಾಯ ಕುರಿ, ಗ್ರಾಮಾಂತರ ಅಧ್ಯಕ್ಷ ಬಸವರಾಜಸ್ವಾಮಿ ಉಚ್ಛಾಟನೆಯಾಗಿದ್ದಾರೆ. ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಚ್ಚಾಟನೆಗೆ ಮುಂದಾಗಿತ್ತು ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ, ಘೋರ್ಪಡೆ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಶಾಸಕ ಪ್ರತಾಪ್ ಗೌಡ ನಾಪತ್ತೆಯಾಗಿದ್ದಾಗ ಅವರ ಜೊತೆಗಿದ್ದ ಬೆಂಬಲಿಗರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಇಬ್ಬರನ್ನೂ ಉಚ್ಚಾಟನೆ ಮಾಡಿದೆ.

  • ನನ್ನ ಬೆಂಬಲ ಕಾಂಗ್ರೆಸ್ಸಿಗೇ ಹೊರತು ಬಿಜೆಪಿಗಲ್ಲ- ಆನಂದ್ ಸಿಂಗ್ ಬೆಂಬಲಿಗರಿಂದ ಫೇಸ್ ಬುಕ್ ಪೋಸ್ಟ್

    ನನ್ನ ಬೆಂಬಲ ಕಾಂಗ್ರೆಸ್ಸಿಗೇ ಹೊರತು ಬಿಜೆಪಿಗಲ್ಲ- ಆನಂದ್ ಸಿಂಗ್ ಬೆಂಬಲಿಗರಿಂದ ಫೇಸ್ ಬುಕ್ ಪೋಸ್ಟ್

    ಬಳ್ಳಾರಿ: ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳದೇ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಾದ ಪತ್ರಕ್ಕೆ ಸಹಿ ಹಾಕಿದ ಬಳಿಕ ನಾಪತ್ತೆಯಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ಸದನಕ್ಕೆ ಆಗಮಿಸುತ್ತಾರಾ? ಆಗಮಿಸಿದರೆ ಯಾರ ಪರ ನಿಲ್ತಾರೆ ಎನ್ನುವ ಪ್ರಶ್ನೆಗಳು ಎಲ್ಲರನ್ನ ಕಾಡ್ತಿವೆ.

    ಈ ನಡುವೆ ನಾನು ಕಾಂಗ್ರೆಸ್ ಪಕ್ಷದ ಶಾಸಕ. ನನ್ನ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಹೊರತು ಬಿಜೆಪಿಗೆ ಅಲ್ಲ ಅಂತ ಆನಂದ್ ಸಿಂಗ್ ಪರವಾಗಿ ಅವರ ಬೆಂಬಲಿಗರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಗನ್ ಮ್ಯಾನ್, ಚಾಲಕನನ್ನು ಬಿಟ್ಟು ಪತ್ನಿ ಜೊತೆ ಕಾರಿನಲ್ಲಿ ಆನಂದ್ ಸಿಂಗ್ ಹೋಗಿದ್ದು ಎಲ್ಲಿಗೆ?

    ವಿಜಯನಗರದ ಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಜನತೆಯ ಋಣ ತೀರಿಸುವ ಜವಾಬ್ದಾರಿ ನನ್ನದು. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ಕಿವಿ ಕೊಡಬೇಡಿ ಅಂತಾ ಸಂದೇಶ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಅನ್ನೋದಕ್ಕೆ ಉತ್ತರಿಸಿದ್ರು ಹೆಚ್‍ಡಿಕೆ

    ಅನಾರೋಗ್ಯ ಕಾರಣ ಪ್ರತಾಪ್ ಗೌಡ ಪಾಟೀಲ್ ಕೂಡ ಹೊರ ರಾಜ್ಯದಲ್ಲಿದ್ದು, ವಿಶ್ವಾಸಮತ ಪರೀಕ್ಷೆ ವೇಳೆ ಸದನದಲ್ಲಿ ಇರ್ತಾರೆ ಅಂತಾ ಅವರ ಕುಟುಂಬ ಹೇಳುತ್ತಿದೆ.

  • ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

    ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

    -ಮಹಿಳೆಯರಿಂದಲೇ ಎಳೆಯಲ್ಪಡುವ ದುರ್ಗಮ್ಮಾದೇವಿ ತೇರು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಿರೇಅಂತರಗಂಗೆ ಗ್ರಾಮದಲ್ಲಿ ದುರ್ಗಮ್ಮ ದೇವಿ ಜಾತ್ರೆ ವೇಳೆ ತೇರಿನ ಗಾಲಿ ಹರಿದು ಮೂರು ಜನ ಭಕ್ತರ ಕಾಲು ಮುರಿದಿವೆ.

    ಈರಮ್ಮ, ಸುನಿತಾ, ಈರಮ್ಮ ಕಾಲು ಮುರಿದು ತೀವ್ರ ಗಾಯಗೊಂಡಿರುವ ಮಹಿಳೆಯರು. ಹೊಸದಾಗಿ ನಿರ್ಮಿಸಿದ್ದ ತೇರನ್ನ ಜಾತ್ರೆಯ ನಿಮಿತ್ತ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯರು ರಥದ ಚಕ್ರಕ್ಕೆ ಸಿಲುಕಿದ್ದಾರೆ.

    ಹಿಂದಿನಿಂದಲೂ ಮಹಿಳೆಯರಿಂದಲೇ ನಡೆಯುತ್ತಿರುವ ಜಾತ್ರೆಯಲ್ಲಿ ಮಹಿಳೆಯರೇ ತೇರನ್ನ ಎಳೆಯುತ್ತಾರೆ. ದುರಾದೃಷ್ಠವಶಾತ್ ಈ ಬಾರಿ ಮೂವರು ಮಹಿಳೆಯರು ಕಾಲು ಕಳೆದುಕೊಳ್ಳುವ ಸ್ಥಿತಿ ಎದುರಿಸುತ್ತಿದ್ದಾರೆ. ಗಾಯಾಳುಗಳನ್ನ ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

    ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.