Tag: Pratap Chandra Sarangi

  • ಸಂಸತ್ತಿನೊಳಗೆ ಹೋಗಲು ಬಿಡದೆ ನನ್ನನ್ನೇ ತಳ್ಳಿದ್ರು, ಬೆದರಿಕೆ ಹಾಕಿದ್ರು – ರಾಗಾ ಪ್ರತ್ಯಾರೋಪ

    ಸಂಸತ್ತಿನೊಳಗೆ ಹೋಗಲು ಬಿಡದೆ ನನ್ನನ್ನೇ ತಳ್ಳಿದ್ರು, ಬೆದರಿಕೆ ಹಾಕಿದ್ರು – ರಾಗಾ ಪ್ರತ್ಯಾರೋಪ

    – ಸಂವಿಧಾನದ ಮೇಲೆ ದಾಳಿ, ಅಂಬೇಡ್ಕರ್‌ಗೆ ಅಪಮಾನ ಆದ್ರೆ ಸಹಿಸಲ್ಲ ಎಂದ ಸಂಸದ

    ನವದೆಹಲಿ: ಸಂಸತ್‌ ಭವನ ಆವರಣದಲ್ಲಿ (Parliament Premises) ನಡೆಯುತ್ತಿದ್ದ ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ ಅವರನ್ನು ತಳ್ಳಿದ್ದಾರೆ ಎಂಬ ಆರೋಪಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಸ್ಪಷ್ಟನೆ ನೀಡಿದ್ದಾರೆ.

    ಸಂಸತ್‌ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾರನ್ನು ತಳ್ಳಿಲ್ಲ. ಸಂಸತ್ತಿನ ಪ್ರವೇಶದ್ವಾರದ ಮೂಲಕ ಸಂಸತ್‌ ಭವನದ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ಬಿಜೆಪಿ ಸಂಸದರೇ ನನ್ನನ್ನು ತಡೆದರು, ತಳ್ಳಿದ್ರು ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದರು. ಹಾಗಾಗಿ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಸಂಸತ್‌ ಭವನ ಆವರಣದಲ್ಲಿ ಹೈಡ್ರಾಮಾ – ರಾಹುಲ್‌ ತಳ್ಳಿದ್ರಿಂದ ನಾನು ಬಿದ್ದೆ ಎಂದ ಬಿಜೆಪಿ ಸಂಸದ

    ಮುಂದುವರಿದು, ಸಂಸತ್‌ಗೆ ಭವನಕ್ಕೆ ಇದೊಂದೇ ಪ್ರವೇಶದ್ವಾರ, ಒಳಗೆ ಹೋಗುವುದು ನಮ್ಮ ಹಕ್ಕು. ನಮ್ಮನ್ನ ತಳ್ಳುವುದರಿಂದ ಸಮಸ್ಯೆಯಿಲ್ಲ, ಆದ್ರೆ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಹಾಗೂ ಅಂಬೇಡ್ಕರ್ ಅವರ ಸ್ಮರಣೆಗೆ ಅವಮಾನ ಮಾಡಿದ್ದಾರೆ. ಇದನ್ನು ನಾವು ಸಹಿಸಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ವಿಡಿಯೋ ಅಪ್ಲೋಡ್‌ – ಕೈ ನಾಯಕರಿಗೆ ಎಕ್ಸ್‌ನಿಂದ ನೋಟಿಸ್‌

    ಸಾರಂಗಿಗೆ ಆಗಿದ್ದೇನು?
    ಉಭಯ ಪಕ್ಷಗಳು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ (Pratap Chandra Sarangi) ಕುಸಿದುಬಿದ್ದಿದ್ದರು. ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನನ್ನನ್ನ ತಳ್ಳಿದ್ದಾರೆ ಎಂಬ ಆರೋಪ ಮಾಡಿದ್ದರು. ಸದ್ಯ ಅವರನ್ನು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ

    ಬಿಜೆಪಿ vs ಕಾಂಗ್ರೆಸ್‌ ಪ್ರೊಟೆಸ್ಟ್‌:
    ಚಳಿಗಾಲದ ಅಧಿವೇಶನದಲ್ಲಿ ʻಸಂವಿಧಾನʼ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಅಮಿತ್‌ ಶಾ ಅವರು ಮಾತನಾಡುತ್ತಾ, ʻಅಂಬೇಡ್ಕರ್‌ ಅಂಬೇಡ್ಕರ್‌ ಅಂಬೇಡ್ಕರ್‌ ಇದೊಂದು ಫ್ಯಾಷನ್‌ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತುʼ ಎಂದು ಹೇಳಿದ್ದರು. ಈ ಕುರಿತ ವೀಡಿಯೋಗಳನ್ನು ವಿಕ್ಷ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವರು ರಾಜೀನಾಮೇ ನೀಡಬೇಕು, ಅಂಬೇಡ್ಕರ್‌ ವಿರುದ್ಧದ ಟೀಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಕಾಂಗ್ರೆಸ್‌ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

    ಮತ್ತೊಂದೆಡೆ ಕಾಂಗ್ರೆಸ್ ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿದೆ ಎನ್ನುವ ಪ್ಲೆ ಕಾರ್ಡ್ ಹಿಡಿದು ಬಿಜೆಪಿ ಸದಸ್ಯರು ಪ್ರತಿಭಟನೆಗಿಳಿದಿದ್ದಾರೆ. ಇತ್ತ ಬಿಜೆಪಿ ಸಂಸದರಿಂದಲೂ ಸಂಸತ್ ಆವರಣದಲ್ಲಿ ʻಕಾಂಗ್ರೆಸ್ ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿದೆʼ ಅನ್ನೋ ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕದ ಬಿಜೆಪಿ ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಜಗ್ಗೇಶ್ ಭಾಗಿಯಾಗಿದ್ದಾರೆ.


    ಮೋದಿ ತಿರುಗೇಟು:
    ಇನ್ನೂ ಅಮಿತ್‌ ಶಾ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್‌ ಅಂಬೇಡ್ಕರ್‌ ಏನೇನು ಕೊಟ್ಟಿದೆ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್‌ ಎಂದು ಹೇಳಿದ್ದರು. ಅಮಿತ್‌ ಶಾ ಅವರು ಸಂವಿಧಾನ ಶಿಲ್ಪಿ ಡಾ ಬಿ.ಆರ್‌ ಅಂಬೇಡ್ಕರ್‌ರನ್ನು ಕನಸಿನಲ್ಲಿಯೂ ಅವಮಾನಿಸಲು ಸಾಧ್ಯವಿಲ್ಲದ ಪಕ್ಷದಿಂದ ಬಂದವರು. ಕಾಂಗ್ರೆಸ್‌ ಅವರ ಹೇಳಿಕೆಯನ್ನು ತಿರುಚಿದೆ ಎಂದು ಹೇಳಿದ್ದಾರೆ.

    ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ಪತ್ರದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಂಬೇಡ್ಕರ್‌ರಂತಹ ಮಹಾನ್‌ ವ್ಯಕ್ತಿ ಈ ಭೂಮಿಯಲ್ಲಿ ಹುಟ್ಟದಿದ್ದರೆ ನಾನು ಊರಿನಲ್ಲಿ ಕುರಿ ಮೇಯಿಸಿಕೊಂಡು ಇರುತ್ತಿದ್ದೆ, ಅಮಿತ್‌ ಶಾ ಅವರು ಕೂಡ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ – ಉಸ್ತುವಾರಿ ಮಲ್ಲಿಕಾರ್ಜುನ್‌ ಬದಲಾಯಿಸುವಂತೆ ಶಿವಗಂಗಾ ಬಸವರಾಜ್ ಪತ್ರ

  • ಸಚಿವರ ಕಾರ್ ಓವರ್ ಟೇಕ್ – 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು

    ಸಚಿವರ ಕಾರ್ ಓವರ್ ಟೇಕ್ – 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು

    – ಚಾಲಕರಿಬ್ಬರಿಗೂ ಪೊಲೀಸರಿಂದ ದಂಡ

    ಭುವನೇಶ್ವರ: ಓಡಿಶಾದ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಎಂಎಸ್‍ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ಓವರ್ ಟೇಕ್ ಮಾಡಿ ಚಾಲಕರಿಗೆ ದಂಡ ಹಾಕಲಾಗಿದೆ.

    ಸಚಿವ ಸಾರಂಗಿ ಅವರ ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ಎರಡು ಕಾರ್ ಗಳು ಓವರ್ ಟೇಕ್ ಮಾಡಿದ್ದವು. ತದನಂತರ ಎಸ್ಕಾರ್ಟ್ ಎರಡು ಕಾರ್ ಗಳನ್ನ ಸುಮಾರು 20 ಕಿಲೋ ಮೀಟರ್ ಹಿಂಬಾಲಿಸಿ ತಡೆದಿದ್ದಾರೆ. ನಂತರ ಕಾರ್ ಚಾಲಕರಿಬ್ಬರನ್ನ ಐದು ಗಂಟೆ ಠಾಣೆಯಲ್ಲಿ ರಿಸಿ ದಂಡ ವಿಧಿಸಿ ಕಳುಹಿಸಲಾಗಿದೆ.

    ಕೋಲ್ಕತ್ತಾ ಮೂಲದ ಸಂತೋಷ್ ತಮ್ಮ ಸೋದರ, ಪತ್ನಿ ಹಾಗೂ ಮಕ್ಕಳೊಂದಿಗೆ ಬಾಲಸೋರ್ ಜಿಲ್ಲೆಯ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಎರಡು ಕಾರ್ ಗಳಲ್ಲಿ ತೆರಳುತ್ತಿದ್ದರು. ಸಂತೋಷ್ ಅವರ ಕಾರುಗಳು ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಎಸ್ಕಾರ್ಟ್ ಸಿಬ್ಬಂದಿ ಹಾರ್ನ್ ಹಾಕಿದ್ದಾರೆ. ಹಾರ್ನ್ ಕೇಳದ ಹಿನ್ನೆಲೆ ಸಂತೋಷ್ ಓವರ್‍ಟೇಕ್ ಮಾಡಿ ಮುಂದೆ ಸಾಗಿದ್ದಾರೆ.

    ಹಿಂದಿನಿಂದ ಸೈರನ್ ಕೇಳಿದಾಗ ಅಂಬುಲೆನ್ಸ್ ಅಂತ ಸೈಡ್ ನೀಡಿದೆ. ಆದ್ರೆ ಅದು ಸಚಿವರ ಎಸ್ಕಾರ್ಟ್ ಸಿಬ್ಬಂದಿ ವಾಹನವಾಗಿತ್ತು. ಸಚಿವರ ಕಾರ್ ಓವರ್ ಟೇಕ್ ಮಾಡೋದು ತಪ್ಪು ಎಂದು ನಮಗೆ ತಿಳಿದಿರಲಿಲ್ಲ. ಐದು ಗಂಟೆ ನಮ್ಮನ್ನ ಠಾಣೆಯಲ್ಲಿರಿಸಿ ಸಮಯ ವ್ಯರ್ಥ ಮಾಡಲಾಯ್ತು. ಪೊಲೀಸರು ಪಿಆರ್ ಬಾಂಡ್ ನಲ್ಲಿ ನಮ್ಮ ಸಹಿ ತೆಗೆದು ದಂಡ ತೆಗದುಕೊಂಡಿದ್ದಾರೆ ಎಂದು ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.

    ಸಚಿವ ಪ್ರತಾಪ್ ಚಂದ್ರ ಸಾರಂಗಿ ಸಮೀಕ್ಷೆ ಸಭೆ ಹಿನ್ನೆಲೆ ಬಾಲಸೋರ್ ಜಿಲ್ಲೆಯ ಬಾಸ್ತಾಗೆ ಆಗಮಿಸಿದ್ದರು. ಸಚಿವರ ಎಸ್ಕಾರ್ಟ್ ಸಿಬ್ಬಂದಿ ಇಬ್ಬರು ಚಾಲಕರನ್ನ ಕಾರ್ ಸಹಿತ ಠಾಣೆಗೆ ಕರೆ ತಂದಿದ್ದರು. ನಿಯಮದಂತೆ ಇಬ್ಬರಿಗೂ ದಂಡ ಹಾಕಲಾಗಿದೆ ಎಂದು ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಅಶೋಕ್ ನಾಯಕ್ ಹೇಳಿದ್ದಾರೆ.

  • ಮಧುಮೇಹ, ಬೊಜ್ಜು ತಡೆಯೋದಕ್ಕೆ ಸಂಸ್ಕೃತ ಮಾತಾಡಿ: ಬಿಜೆಪಿ ಸಂಸದ

    ಮಧುಮೇಹ, ಬೊಜ್ಜು ತಡೆಯೋದಕ್ಕೆ ಸಂಸ್ಕೃತ ಮಾತಾಡಿ: ಬಿಜೆಪಿ ಸಂಸದ

    ನವದೆಹಲಿ: ಮಧುಮೇಹ, ಬೊಜ್ಜಿನಂತಹ ಸಮಸ್ಯೆಗಳನ್ನು ತಡೆಯಲು ಸಂಸ್ಕೃತ ಮಾತನಾಡಿ ಎಂದ ಬಿಜೆಪಿ ಸಂಸದರೊಬ್ಬರ ಹೇಳಿಕೆ  ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಗುರುವಾರ ಸದನದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಸಂವಾದದಲ್ಲಿ ಮಾತನಾಡುವ ವೇಳೆ ಬಿಜೆಪಿ ಸಂಸದ ಗಣೇಶ್ ಸಿಂಗ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ನೀವು ಸಕ್ಕರೆ ಕಾಯಿಲೆ ಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಇದನ್ನೆಲ್ಲಾ ತಡೆಯಲು ನೀವು ನಿತ್ಯ ಸಂಸ್ಕೃತ ಮಾತನಾಡಿ. ಆಗ ಈ ಕಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ ಎಂದು ಗಣೇಶ್ ಸಿಂಗ್ ಹೇಳಿಕೆ ನೀಡಿದ್ದಾರೆ. ಸಂಸದರ ಈ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದು, ನಗೆಪಾಟಲಿಗೆ ಕಾರಣವಾಗಿದೆ.

    ಅಮೆರಿಕ ಮೂಲದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ರತಿದಿನ ಸಂಸ್ಕೃತದಲ್ಲಿ ಮಾತನಾಡುವುದರಿಂದ ಮನುಷ್ಯನ ನರಗಳಿಗೆ ಹೊಸ ಚೈತನ್ಯ ಸಿಗುತ್ತದೆ. ಇದರಿಂದ ಮಧುಮೇಹ ಹಾಗೂ ಬೊಜ್ಜು ಸಮಸ್ಯೆ ನಮ್ಮಿಂದ ದೂರ ಉಳಿಯುತ್ತದೆ ಎಂದು ಅಮೆರಿಕದವರ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಆದ್ದರಿಂದ ಸಂಸ್ಕೃತ ಮಾತನಾಡಿ ನೀವು ಆರೋಗ್ಯವಾಗಿರಬಹುದು ಎಂದು ತಿಳಿಸಿದ್ದರು.

    ಅಷ್ಟೇ ಅಲ್ಲದೆ ಕಂಪ್ಯೂಟರ್ ಕೋಡಿಂಗ್ ಬಗ್ಗೆ ಕೂಡ ಪ್ರತಿಕ್ರಿಯಿಸಿ, ಸದ್ಯ ಕಂಪ್ಯೂಟರ್ ಕೋಡಿಂಗ್ ಇಂಗ್ಲಿಷ್‍ನಲ್ಲಿದೆ. ಆದರೆ ಅದನ್ನು ಸಂಸ್ಕೃತದಲ್ಲಿ ಮಾಡಿದರೆ ದೋಷವೆಂಬುದೇ ಇರುವುದಿಲ್ಲ. ಸಂಸ್ಕೃತ ಕಂಪ್ಯೂಟರ್ ಗೆ ಹೊಂದಾಣಿಕೆ ಆಗುವ ಸೂಕ್ತ ಭಾಷೆ ಎಂದರು ಅಭಿಪ್ರಾಯ ವ್ಯಕ್ತಪಡಿಸಿದರು.

    ಹಾಗೆಯೇ ವಿಶ್ವದ ಶೇ.97 ಭಾಷೆಗಳಿಗೆ ಸಂಸ್ಕೃತದ ಹಿನ್ನೆಲೆ ಇದೆ. ಕೆಲ ಇಸ್ಲಾಮಿಕ್ ಭಾಷೆಗಳ ಮೇಲೂ ಸಂಸ್ಕೃತ ಪ್ರಭಾವ ಬೀರಿದೆ. ಆದ್ದರಿಂದ ಸಂಸ್ಕೃತ ಭಾಷೆಯ ಹಿರಿಮೆ ದೊಡ್ಡದು ಎಂದು ಹೇಳಿದರು.

    ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಈ ಬಗ್ಗೆ ಮಾತನಾಡಿ, ಸಂಸ್ಕೃತ ಭಾಷೆಗೆ ಬೇಗ ಹೊಂದಿಕೊಳ್ಳಬಹುದು, ಅಲ್ಲದೆ ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಹಲವು ರೀತಿಯಲ್ಲಿ ಮಾತನಾಡಬಹುದು. ಅಷ್ಟೇ ಅಲ್ಲದೆ ಇಂಗ್ಲಿಷ್‍ನ ಹಲವು ಪದಗಳು ಸಂಸ್ಕೃತದಿಂದಲೇ ಬಂದಿದೆ. ಆದ್ದರಿಂದ ಈ ಪ್ರಾಚೀನ ಭಾಷೆಗೆ ಪ್ರಾಮುಖ್ಯತೆ ಕೊಡುವುದರಿಂದ ಬೇರೆ ಯಾವ ಭಾಷೆಗಳ ಮೇಲೂ ದುಷ್ಪರಿಣಾಮಗಳು ಬೀರುವುದಿಲ್ಲ ಎಂದಿದ್ದರು.