Tag: Prashant Madal

  • ಶಾಸಕ ಮಾಡಾಳ್‌ ಜಾಮೀನಿಗೆ ಆಕ್ಷೇಪ – ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಶಾಸಕ ಮಾಡಾಳ್‌ ಜಾಮೀನಿಗೆ ಆಕ್ಷೇಪ – ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ನವದೆಹಲಿ: ಬಿಜೆಪಿ (BJP) ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರಿಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಲೋಕಾಯುಕ್ತ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಎರಡು ಬಾರಿ ವಕೀಲರು ಮಂಗಳವಾರ ಮನವಿ ಮಾಡಿದರು.

    ಲೋಕಾಯುಕ್ತ (Lokayukta) ಪರ ವಕೀಲರು ಮೊದಲು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಸಾಂವಿಧಾನಿಕ ಪೀಠದಲ್ಲಿ ಭಾಗಿಯಾಗುತ್ತಿದ್ದು ತುರ್ತು ವಿಚಾರಣೆ ಸಾಧ್ಯವಿಲ್ಲ, ಕಲಾಪ ಅಂತ್ಯದ ವೇಳೆ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. ಒಂದು ವೇಳೆ ತುರ್ತು ವಿಚಾರಣೆಯ ಅಗತ್ಯವಿದ್ದಲ್ಲಿ ನ್ಯಾ. ಸಂಜಯ್ ಕಿಶನ್ ಕೌಲ್ ಪೀಠದಲ್ಲಿ ಪ್ರಸ್ತಾಪಿಸಲು ಸೂಚನೆ ನೀಡಿದರು.

    ಸಿಜೆಐ ಸೂಚನೆ ಮೇರೆಗೆ ನ್ಯಾ. ಸಂಜಯ್ ಕಿಶನ್ ಕೌಲ್ ಪೀಠದ ಮುಂದೆ ಲೋಕಾಯುಕ್ತ ಪರ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದರು. ಆದರೆ ನ್ಯಾ. ಕೌಲ್ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದರು. ಅರ್ಜಿಯಲ್ಲಿ ತುರ್ತು ವಿಚಾರಣೆ ಮಾಡುವಂತದ್ದು ಏನಿದೆ? ಮಧ್ಯಂತರ ಜಾಮೀನು ರದ್ದುಗೊಳಿಸಬೇಕಾ? ಹೈಕೋರ್ಟ್ ತನ್ನ ವಿವೇಚನೆಯಲ್ಲಿ ಜಾಮೀನು ನೀಡಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಆರೋಪಿ ಹಾಲಿ ಶಾಸಕರಾಗಿದ್ದು, ಅಪಾರ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಸಿ.ಟಿ ರವಿಗೆ 20 ವರ್ಷ ಸಾಕಾಗಿಲ್ವಾ, ಏನು ಮಾಡಿದ್ದಾರೆ?- ಮತದಾರರಿಂದ ಕ್ಲಾಸ್

    ವಾದ ಆಲಿಸಿದ ಬಳಿಕ ಪ್ರಕರಣವನ್ನು ಸಾಧ್ಯವಾದಷ್ಟು ಬೇಗ ವಿಚಾರಣೆ ಪಟ್ಟಿ ಮಾಡಲು ಸೂಚನೆ ನೀಡಿದರು. ಇದಾದ ಬಳಿಕವೂ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದ ವಕೀಲರಿಗೆ ತರಾಟೆಗೆ ತೆಗೆದುಕೊಂಡ ನ್ಯಾ.ಕೌಲ್ ಹಿಂದಿನ ಆದೇಶವನ್ನು ವಾಪಸ್ ಪಡೆಯವುದಾಗಿ ಎಚ್ಚರಿಸಿದರು. ಇದನ್ನೂ ಓದಿ: ಬಿಜೆಪಿ ವಕ್ರದೃಷ್ಟಿ – ಮೋದಿ ರೋಡ್‌ಶೋಗೆ ಕುಮಾರಸ್ವಾಮಿ ಒಕ್ಕಲಿಗ ಕಾರ್ಡ್ ಪ್ಲೇ

  • ಪ್ರಶಾಂತ್ ಮಾಡಾಳ್ ಅಕೌಂಟ್ ಫ್ರೀಜ್ – ಶಾಸಕ ವಿರೂಪಾಕ್ಷಪ್ಪಗೆ ನೋಟಿಸ್

    ಪ್ರಶಾಂತ್ ಮಾಡಾಳ್ ಅಕೌಂಟ್ ಫ್ರೀಜ್ – ಶಾಸಕ ವಿರೂಪಾಕ್ಷಪ್ಪಗೆ ನೋಟಿಸ್

    ಬೆಂಗಳೂರು: ಎಂಎಲ್‌ಎ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಮತ್ತು ಪುತ್ರ ಪ್ರಶಾಂತ್ ಮಾಡಾಳ್‌ಗೆ (Prashant Madal) ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಐಟಿ, ಇಡಿಯಿಂದ 6 ಕೋಟಿ ರೂ. ಹಣ ಮೂಲದ ಮಾಹಿತಿ ಕೇಳಲಾಗಿದ್ರೆ, ಮತ್ತೊಂದು ಕಡೆ ಅಕೌಂಟ್ ಫ್ರೀಜ್ ಮಾಡಿ ಭ್ರಷ್ಟ ಅಧಿಕಾರಿ ಸಸ್ಪೆಂಡ್‌ಗೆ ಲೋಕಾಯುಕ್ತ (Lokayukta) ಅಧಿಕಾರಿಗಳು ಪತ್ರ ಬರೆದಿದ್ದಾರೆ.

    ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮನೆಯಲ್ಲಿ ಸಿಕ್ಕ 6 ಕೋಟಿ ರೂ. ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಫೋನ್ ಮೂಲಕ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮಾಹಿತಿ ಪಡೆದಿದ್ದಾರೆ. 6 ಕೋಟಿ ರೂ.ಗೆ ಮೂಲ ತೋರಿಸಿರದ ಹಿನ್ನೆಲೆ, ಆದಾಯ ತೆರಿಗೆ ವಂಚಿಸಿರುವ ಬಗ್ಗೆ ಗುಮಾನಿಗಳಿವೆ. ಲೋಕಾಯುಕ್ತ ತನಿಖೆಯಲ್ಲಿ ಭ್ರಷ್ಟಾಚಾರದಿಂದ ಹಣ ದುಡಿದಿರುವುದು ಎಂಬುದು ಸಾಬೀತಾದರೆ, ಐಟಿ ಹಾಗೂ ಇಡಿ ತನಿಖೆ ಆರಂಭಿಸಲಿವೆ.

    ಲೋಕಾಯುಕ್ತ ಪಡಸಾಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸರೆಂಡರ್ ಆಗಬಹದು ಎನ್ನುವ ಮಾಹಿತಿಗಳು ಓಡಾಡುತ್ತಿದೆ. ಕೇಸಲ್ಲಿ ಇವರೇ ಎ1 ಆರೋಪಿ ಇರುವುದರಿಂದ ಅಷ್ಟು ಸುಲಭವಾಗಿ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಅಲ್ಲದೇ ದೂರುದಾರ ಆಡಿಯೋ ಸಂಭಾಷಣೆ ಲೋಕಾಯುಕ್ತಕ್ಕೆ ನೀಡಿದ್ದಾರೆ. ಪುತ್ರನ ಮನೆಯಲ್ಲಿ 6 ಕೋಟಿ ರೂ. ಹಣ ಸಿಕ್ಕಿದೆ. ಹೆಚ್ಚು ದಿನ ತಲೆ ಮರೆಸಿಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಚುನಾವಣಾ ಆಯೋಗದಿಂದ ಯಾವಾಗ ಬೇಕಾದರೂ ಎಲೆಕ್ಷನ್ ಅನೌನ್ಸ್ ಆಗಬಹುದು. ಹೆಚ್ಚು ದಿನ ತಲೆ ಮರೆಸಿಕೊಂಡರೆ ಕ್ಷೇತ್ರದಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಹೀಗಾಗಿ ಸರೆಂಡರ್ ಆಗಬಹುದು ಎನ್ನಲಾಗುತ್ತಿದೆ.

    ಈ ನಡುವೆ ಲೋಕಾ ಪೊಲೀಸರು ಪ್ರಶಾಂತ್ ಮಾಡಾಳ್‌ನನ್ನು ಅಮಾನತು ಮಾಡುವಂತೆ ಎಸಿಎಸ್ ಫೈನಾನ್ಸ್ ರವರಿಗೆ ಪತ್ರ ಬರೆದಿದ್ದಾರೆ. ಲೋಕಾ ಟ್ರ‍್ಯಾಪ್ ವೇಳೆ ಆರೋಪಿತ ಸಿಕ್ಕಿಬಿದ್ದಿದ್ದು, ಮನೆಯಲ್ಲಿ ಅಪಾರ ಪ್ರಮಾಣದ ಹಣ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಆರೋಪಿತ ಸ್ಥಾನದಲ್ಲಿರೊ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ

    ಪ್ರಶಾಂತ್ ಮಾಡಾಳ್ ಹಾಗೂ ಆಪ್ತರಿಗೆ ಸೇರಿದ 5 ಅಕೌಂಟ್‌ಗಳನ್ನು ಫ್ರೀಜ್ ಮಾಡಿಸಲಾಗಿದೆ. ಅಕೌಂಟ್‌ನಲ್ಲಿ ಟ್ರ‍್ಯಾಪ್ ಹಿಂದಿನ ದಿನ ಒಂದು ಅಕೌಂಟ್ ನಿಂದ 30 ಲಕ್ಷ, ಮತ್ತೊಂದು ಅಕೌಂಟ್ ನಿಂದ 60 ಲಕ್ಷ ರೂ. ಹಣ ಕ್ರೆಡಿಟ್ ಆಗಿದೆ. ಹಣ ಯಾರ ಅಕೌಂಟ್‌ಗಳಿಂದ ಬಂದಿದೆ ಎಂಬುದನ್ನು ಕಳೆದ ಒಂದು ವರ್ಷದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

    ತಲೆ ಮರೆಸಿಕೊಂಡಿರುವ ಮಾಡಾಳ್ ವಿರೂಪಾಕ್ಷಪ್ಪಗೆ ಲೋಕಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿಆರ್‌ಪಿಸಿ 41ಎ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಖುದ್ದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಶಾಸಕರ ರೇಸ್ ವ್ಯೂ ಬಳಿಯ ಮನೆ, ಶಾಸಕರ ಕಚೇರಿ ಸೇರಿದಂತೆ 3 ಕಡೆ ನೋಟಿಸ್ ಅಂಟಿಸಲಾಗಿದೆ. ಅಪ್ಪ – ಮಗನ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ಬುಡಕ್ಕೆ ಬಂದಿದೆ. ಮಾಡಿದ್ದುಣ್ಣೊ ಮಾರಾಯ ಎಂಬಂತೆ ಅಪ್ಪ ಅಜ್ಞಾತವಾದರೆ, ಮಗ ಜೈಲು ಸೇರಿದ್ದಾನೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ

  • 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    ಬೆಂಗಳೂರು: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (Madal Virupakshappa) ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ನಿಗಮದ (KSDL) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ರಾತ್ರಿಯೇ ರಾಜೀನಾಮೆಗೆ ಸಿಎಂ ಸೂಚನೆ ನೀಡಿದ್ದರು. ಜೊತೆಗೆ ಕಾನೂನು ಕ್ರಮ ಎದುರಿಸುವಂತೆಯೂ ಸೂಚಿಸಿದ್ದರು. ಇದನ್ನೂ ಓದಿ: ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡ್ಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗ್ಲಿ: ಸಿಎಂ

    ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪ್ರಶಾಂತ್‌ ಮತ್ತು ಸಹಚರರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಲೋಕಾಯುಕ್ತ ಮುಂದಾಗಿದೆ. ಅಲ್ಲದೇ ಬಂಧಿತರನ್ನು ಪೊಲೀಸ್‌ ಕಸ್ಟಡಿಗೆ ವಹಿಸುವಂತೆ ಮನವಿ ಮಾಡಲಿದೆ.

    ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧದ ಷಡ್ಯಂತ್ರವಾಗಿದೆ. ಆದಾಗ್ಯೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆ ಅಂಗೀಕರಿಸಬೇಕು ಎಂದು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

    ಪ್ರಶಾಂತ್‌ನನ್ನು ಬಂಧಿಸಿದ ಬೆನ್ನಲ್ಲೇ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಒಟ್ಟು 7.72 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ!

    ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್‌, ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ, ರಾಸಾಯನಿಕ ಸರಬರಾಜು ವೇಳಾಪಟ್ಟಿ ಮತ್ತು ಕಾರ್ಯಾದೇಶ ವಿತರಿಸಲು 81 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರ ಶ್ರೇಯಸ್‌ ಕಶ್ಯಪ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

  • 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    ಬೆಂಗಳೂರು: ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (BJP MLA Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashanth Madal) ಲೋಕಾಯುಕ್ತ (Lokayuktha) ಬಲೆಗೆ ಬಿದ್ದಿದ್ದಾರೆ. ಪ್ರಶಾಂತ್ ಸೇರಿದಂತೆ ಐವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಲೋಕಾಯುಕ್ತ ಡಿಐಜಿ ಸುಬ್ರಮಣ್ಯ ರಾವ್, ಚೆನ್ನಗಿರಿ ಶಾಸಕ ಮಾಡಾಳ್ ವಿರೋಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮಾಡಾಳ್ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ದಾಳಿ ಮಾಡಲಾಗಿದೆ. ಜಲಮಂಡಳಿ ಹಾಗೂ ಎಸಿಬಿ ಎರಡಲ್ಲೂ ಅಕೌಂಟೆಂಟ್ ಆಗಿ ಪ್ರಶಾಂತ್‌ ಕಾರ್ಯನಿರ್ವಹಿಸುತ್ತಿದ್ದರು. ಕಚ್ಚಾ ಸಾಮಾಗ್ರಿ ಕಂಪನಿಯನ್ನು ನಡೆಸುತ್ತಿದ್ದ ಶ್ರೇಯಸ್ ಕಶ್ಯಪ್ ದೂರುದಾರರಾಗಿದ್ದು, ಬುಧವಾರ ಪ್ರಶಾಂತ್ ಹಣಕ್ಕೆ ಡಿಮಾಂಡ್ ಮಾಡಿದ್ದರ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.

    ದೂರಿನ ಆಧಾರದ ಮೇಲೆ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ಗುರುವಾರ ಪ್ರಶಾಂತ್ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರಿಗೆ ಲಂಚ ನೀಡಲು ಮುಂದಾಗಿದ್ದ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: 40 ಲಕ್ಷ ಲಂಚ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರ

    ಪ್ರಶಾಂತ್ 40 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರೂ ದಾಳಿ ವೇಳೆ ಒಟ್ಟು 1.62 ಕೋಟಿ ರೂ. ಸಿಕ್ಕಿದೆ. ಸದ್ಯ ಪ್ರಶಾಂತ್ ಕಚೇರಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇನ್ನೂ ಹಲವು ಸ್ಥಳಗಳಲ್ಲಿ ದಾಳಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಆರೋಪ ಏನು?
    ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿರುವ ಪ್ರಶಾಂತ್, ನಿಯೋಜನೆ ಮೇಲೆ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆಗೆ ಆಯ್ಕೆಯಾಗಿರುವ ಗುತ್ತಿಗೆದಾರರಿಂದ 80 ಲಕ್ಷ‌ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಪ್ರಶಾಂತ್‌ ಮಾಡಲ್‌ ಇದ್ದ ಖಾಸಗಿ ಕಚೇರಿ ಮೇಲೆ  ಪೊಲೀಸರು ದಾಳಿ ನಡೆಸಿದ್ದರು. ಮುಂದುವರಿದ ಭಾಗವಾಗಿ ಡಾಲರ್ಸ್‌ ಕಾಲೋನಿ ನಿವಾಸದಲ್ಲೂ ಲೋಕಾ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಮಾಡಾಳ್‌ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: ಉಪಚುನಾವಣೆ – ಮೂರು ಕಡೆ ಗೆದ್ದ ಕಾಂಗ್ರೆಸ್, ಬಿಜೆಪಿಗೆ ಮುಖಭಂಗ