Tag: Prashant bhushan

  • ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ – ಮೋದಿ ಸಂತಾಪ

    ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ – ಮೋದಿ ಸಂತಾಪ

    ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) (Shanti Bhushan) ಮಂಗಳವಾರ ನಿಧನರಾಗಿದ್ದಾರೆ.

    ಮಂಗಳವಾರ ಸಂಜೆ 7 ಗಂಟೆಗೆ ಅವರು ದೆಹಲಿಯಲ್ಲಿರುವ (NewDelhi) ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೊರಾರ್ಜಿ ದೇಸಾಯಿ (Morarji Desai) ನೇತೃತ್ವದ ಸರ್ಕಾರದಲ್ಲಿ ಶಾಂತಿ ಭೂಷಣ್ ಅವರು ಕಾನೂನು ಸಚಿವರಾಗಿ (Law Minister) 1977ರಿಂದ 1979ರ ವರೆಗೆ ಸೇವೆ ಸಲ್ಲಿಸಿದ್ದರು.

    1974ರಲ್ಲಿ ಶಾಂತಿ ಭೂಷಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಕೇಂದ್ರದ ಮಾಜಿ ಸಚಿವ ರಾಜ್ ನಾರಾಯಣ್ ಪರವಾಗಿ ವಾದಿಸಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದರು.

    ರಾಜ್ ನಾರಾಯಣ್ ಅವರು ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ನಂತರ ಅವರು ಭ್ರಷ್ಟ ಚುನಾವಣಾ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ಇಂದಿರಾ ಗಾಂಧಿಯವರ ಚುನಾವಣೆಯನ್ನೇ ಅನೂರ್ಜಿತಗೊಳಿಸಲು ಮನವಿ ಸಲ್ಲಿಸಿದರು. ಶಾಂತಿ ಭೂಷಣ್ ಪ್ರಕರಣದ ಪರ ವಕೀಲರಾಗಿದ್ದರು. ಇದನ್ನೂ ಓದಿ: 2013ರ ರೇಪ್‌ಕೇಸ್‌: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

    ಶಾಂತಿ ಭೂಷಣ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ಸಂತಾಪ ಸೂಚಿಸಿದ್ದಾರೆ. ಕಾನೂನು ಕ್ಷೇತ್ರಕ್ಕೆ ಶಾಂತಿ ಭೂಷಣ್ ಅವರ ಕೊಡುಗೆ ಹಾಗೂ ಸಮಾಜದಲ್ಲಿ ಹಿಂದುಳಿದವರ ಪರವಾಗಿ ದನಿ ಎತ್ತುತ್ತಿದ್ದುದು ಸ್ಮರಣೀಯವಾದುದು. ಅವರ ನಿಧನವು ತೀವ್ರ ನೋವು ತಂದಿದೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಶಾಂತಿ ಭೂಷಣ್ ಅವರ ಮಗ ಪ್ರಶಾಂತ್ ಭೂಷಣ್ (Prashant Bhushan) ಸಹ ಖ್ಯಾತ ವಕೀಲರಾಗಿದ್ದಾರೆ. ಶಾಂತಿ ಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಅವರು 2012ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸ್ಥಾಪಕ ಸದಸ್ಯರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ

    ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ

    ನವದೆಹಲಿ: ಶಾಲಾ – ಕಾಲೇಜು (School College) ತರಗತಿಗಳಲ್ಲಿ ಹಿಜಬ್ ನಿರ್ಬಂಧಿಸಿರುವುದು ಲಿಂಗ ಮತ್ತು ಧರ್ಮದ ತಾರತಮ್ಯವಾಗಿದೆ, ಇಂದಿನ ಶಿಕ್ಷಣದಲ್ಲಿ ಧಾರ್ಮಿಕ ಸಹಿಷ್ಣುತೆ ಬಗ್ಗೆ ತಿಳಿಸಿಕೊಡಬೇಕಿದೆ. ಆದರೆ ರಾಜ್ಯ ಸರ್ಕಾರದ (Karnataka Government) ಆದೇಶ ಅದಕ್ಕೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ವಾದಿಸಿದ್ದಾರೆ.

    ಶಾಲೆ ಮತ್ತು ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್(High Court) ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್(Supreme Court) ವಿಚಾರಣೆಗೆ ನಡೆಸುತ್ತಿದೆ. 6ನೇ ದಿನದ ವಿಚಾರಣೆ ವೇಳೆ ಮೀನಾಕ್ಷಿ ಅರೋರಾ ಮಕ್ಕಳ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತವು CEDAW ನಿರ್ಣಯಗಳನ್ನು ಒಪ್ಪಿಕೊಂಡಿದೆ. CEDAW ಮಕ್ಕಳು ತಮ್ಮ ಧರ್ಮವನ್ನು ಆಚರಿಸಲು ಮತ್ತು ಅವರ ನಡುವಿನ ತಾರತಮ್ಯದ ವಿರುದ್ಧ ರಕ್ಷಿಸುತ್ತದೆ. ನಾರ್ವೆ ಕ್ರಿಶ್ಚಿಯನ್ ದೇಶವಾಗಿರುವುದರಿಂದ ತಮ್ಮ ಮಕ್ಕಳಿಗೆ ಕ್ರಿಶ್ಚಿಯನ್ ಮೌಲ್ಯಗಳನ್ನು ಮಾತ್ರ ಕಲಿಸಲು ಆಯ್ಕೆ ಮಾಡಿಕೊಂಡಿದೆ. ಆದರೆ CEDAW ಇದನ್ನು ಒಪ್ಪಿಕೊಂಡಿಲ್ಲ, ನೀವು ಮಕ್ಕಳಿಗೆ ಅವರ ಸ್ವಂತ ನಂಬಿಕೆಯನ್ನು ಅನುಸರಿಸಲು ಅನುಮತಿಸಬೇಕು ಎಂದು ಹೇಳಿದೆ‌. ಶಿಕ್ಷಣದಲ್ಲಿ ಸಂಪೂರ್ಣ ಧಾರ್ಮಿಕ ಸಹಿಷ್ಣುತೆ ತರುವುದು ಇದರ ಉದ್ದೇಶವಾಗಿದೆ. ಆದರೆ ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಸಹಿಷ್ಣುತೆ ಕಲಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕ ಸುವ್ಯವಸ್ಥೆ ಹಾಗೂ ನೈತಿಕತೆಗೆ ವಿರುದ್ಧವಲ್ಲದ ಧಾರ್ಮಿಕ ಅಭಿವ್ಯಕ್ತಿಯ ಒಂದು ಅಂಶವನ್ನು ನಾವು ನಿಷೇಧಿಸಲು ಪ್ರಾರಂಭಿಸಿದರೆ ಹೇಗೆ? ಹಿಜಬ್ ನಿಷೇಧಿಸುವುದು ಸಂಪ್ರದಾಯವನ್ನು ಉಲ್ಲಂಘಿಸುತ್ತದೆ ಎಂದು ಯುಎನ್ ಸಮಿತಿಯು ಕಂಡುಕೊಂಡಿದೆ. ಡ್ರೆಸ್ ಕೋಡ್ ವಿದ್ಯಾರ್ಥಿಗಳು (Student Dress Code) ಶಾಲೆಗೆ ಬರುವುದನ್ನು ನಿಲ್ಲಿಸುವ ಬದಲು ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ಯುಎನ್ ಹೇಳುತ್ತದೆ. ಹಿಜಬ್ ಯಾವ ರೀತಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಧಕ್ಕೆ ತರುತ್ತದೆ? ಯುಎನ್ (UN) ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಕ್ಕಳನ್ನು ಶಾಲೆಯಿಂದ ಹೊರಗಿಡಲಾಗುತ್ತಿದೆ. ಕೇಂದ್ರ ಸರ್ಕಾರ ಶಾಸನದ ವಿರುದ್ಧ ಸರ್ಕಾರಿ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ, ಕೇಂದ್ರೀಯ ವಿದ್ಯಾಲಯಗಳಲ್ಲಿ (Central Universities) ಹಿಜಬ್ ಅನ್ನು ಅನುಮತಿಸುವಾಗ ರಾಜ್ಯ ಸರ್ಕಾರ ಇದನ್ನು ಹೇಗೆ ನಿರ್ಬಂಧಿಸುತ್ತದೆ? ಎಂದು ಪ್ರಶ್ನಿದ್ದಾರೆ.

    HIJAB

    ಇಸ್ಲಾಂ ಪ್ರಪಂಚದಾದ್ಯಂತ ಆಚರಿಸಲಾಗುವ 2ನೇ ಅತಿದೊಡ್ಡ ಧರ್ಮವಾಗಿದೆ. ವಿಶ್ವದಲ್ಲಿ ಇಸ್ಲಾಂ ಧರ್ಮವನ್ನು ಅಭ್ಯಾಸ ಮಾಡುವ ಹೆಚ್ಚಿನ ಜನರು ಹಿಜಬ್ ಧರಿಸುವುದನ್ನು ಸಾಂಸ್ಕೃತಿಕ ಅಭ್ಯಾಸವೆಂದು ಗುರುತಿಸುತ್ತಾರೆ. ಪ್ರಪಂಚದಾದ್ಯಂತದ ನ್ಯಾಯಾಲಯಗಳು ಮತ್ತು ಜನಸಂಖ್ಯೆಯ ದೊಡ್ಡ ಭಾಗವು ಹಿಜಬ್ (Hijab) ಅನ್ನು ಅತ್ಯಗತ್ಯವೆಂದು ಗುರುತಿಸುತ್ತದೆ. ಇದನ್ನು ಪರಾಮರ್ಶಿಸಲು ನಾವು ಯಾರು? ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವಂತೆ, ನಾವು ಬೇರೆಡೆ ಅಲ್ಪಸಂಖ್ಯಾತರಾಗಿದ್ದೇವೆ‌. ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ಕಾನೂನು ಹೋರಾಟ ಮಾಡಿದ ಹಲವು ಉದಾಹರಣೆಗಳೂ ಇವೆ. ಮೂಗುತಿಗಾಗಿ, ಸಿಖ್ಖರು ಖಡಗಕ್ಕಾಗಿ ಕಾನೂನು ಹೋರಾಟ ಮಾಡಿದ್ದಾರೆ. ದಯವಿಟ್ಟು ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮನವಿ ಮಾಡಿದ್ದಾರೆ.

    ಬಳಿಕ ಸಂವಿಧಾನ 15(1) ಉಲ್ಲೇಖಿಸಿ ವಾದ ಮಂಡಿಸಿದ ವಕೀಲೆ ಜಯನಾ ಕೊಠಾರಿ, ಸಂವಿಧಾನದ 15ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ, ಇಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ಹಿಜಬ್ ಧಾರ್ಮಿಕ ಅಗತ್ಯ, ಅನಗತ್ಯವೂ ಪ್ರತ್ಯೇಕ ವಿಚಾರ, ಆದರೆ ಹಿಜಬ್ ಧರಿಸುವ ಕಾರಣ ವಿದ್ಯಾರ್ಥಿನಿಯರಲ್ಲಿ ತಾರತಮ್ಯ ಮಾಡುತ್ತಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ‌. ಇದು ಕೇವಲ ಧರ್ಮಾಧಾರಿತ ತಾರತಮ್ಯವಲ್ಲ, ಇದು ಲಿಂಗಾಧಾರಿತ ತಾರತಮ್ಯವೂ ಆಗಿದೆ. ಹಾಗಾಗಿ ಲಿಂಗ ಮತ್ತು ಧರ್ಮವನ್ನು ಅನ್ನು ನಾವು ಈ ಸಂದರ್ಭದಲ್ಲಿ ವಿಶ್ಲೇಷಿಸಬೇಕಾಗಿದೆ ಎಂದು ವಾದ ಮಂಡಿಸಿದ್ದಾರೆ.

    ಹಿಜಬ್ ಗುರುತಿನ ವಿಷಯವಾಗಿದೆ, ಸಾರ್ವಜನಿಕ ದೃಷ್ಟಿಯಿಂದ ತನ್ನ ದೇಹವನ್ನು ಮುಚ್ಚಿಟ್ಟುಕೊಳ್ಳುವುದು ಅವಳ ವೈಯಕ್ತಿಕ ಆಯ್ಕೆಯಾಗಿದೆ ಎಂದು ವಕೀಲ ಶೋಬ್ ಆಲಂ ವಾದಿಸಿದರು. ನಾವೀಲ್ಲಿ ಗೌಪ್ಯತೆ ಹಾಗೂ ಖಾಸಗಿತನಕ್ಕೂ ಆದ್ಯತೆ ನೀಡಬೇಕಾಗುತ್ತದೆ.‌ ಹಿಜಬ್ ಧಾರ್ಮಿಕ ಅಗತ್ಯವೋ ಅಲ್ಲವೋ ಬಳಿಕ‌ ಚಿಂತಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ. ಮತ್ತೊರ್ವ ವಕೀಲ ಧಾರ್ ವಾದ ಮಂಡಿಸಿ, ಇಸ್ಲಾಂ ಪ್ರಕಾರ ಹಿಜಬ್ ಕಡ್ಡಾಯವಾಗಿದೆ ಎಂದು ಪೂರಕ ಅಂಶಗಳನ್ನು ಕೋರ್ಟ್ ಮುಂದಿಟ್ಟರು.

    ಪ್ರಶಾಂತ ಭೂಷಣ್, ಕಪಿಲ್ ಸಿಬಲ್ ವಾದ ಆಲಿಸಿದ ಬಳಿಕ ದುಷ್ಯಂತ್ ದವೆಗೆ ವಾದ ಮಂಡಿಸಲು ಸಮಯ ಎಷ್ಟು ಬೇಕು? ಎಂದು ಪ್ರಶ್ನಿಸಿದರು. ದವೆ 4 ಗಂಟೆಗಳ ಸಮಯ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರಿದ್ದ ಪೀಠ ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಮುಂದೂಡಿತು.

    Live Tv
    [brid partner=56869869 player=32851 video=960834 autoplay=true]

  • 1 ರೂ. ಪಾವತಿಸಿ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವೆ: ಪ್ರಶಾಂತ್ ಭೂಷಣ್

    1 ರೂ. ಪಾವತಿಸಿ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವೆ: ಪ್ರಶಾಂತ್ ಭೂಷಣ್

    ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ರೂಪಾಯಿ ದಂಡ ವಿಧಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಿ ದಂಡ ಪಾವತಿಸುತ್ತೇನೆ. ಜೊತೆಗೆ ಈ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

    ಇಂದು ಸುಪ್ರೀಂಕೋರ್ಟ್ ಆದೇಶದ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಮುಂದಿನ ನಿಲುವು ಸ್ಪಷ್ಟಪಡಿಸಿದರು. ನಾನು ಮಾಡಿದ ಟ್ವೀಟ್‍ಗಳು ಸುಪ್ರೀಂಕೋರ್ಟ್‍ನ್ನು ಅಗೌರವಕ್ಕೆ ಒಳಪಡಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಮತ್ತೆ ಸಮರ್ಥಿಸಿಕೊಂಡರು.

    ನ್ಯಾಯಾಲಯಗಳು ದುರ್ಬಲಗೊಂಡರೆ, ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಹಾನಿ ಮಾಡುತ್ತದೆ. ಹೀಗಾಗಿ ಕಾನೂನು ವ್ಯವಸ್ಥೆ ಬಲಿಷ್ಠವಾಗಿರಬೇಕು. ಸುಪ್ರೀಂ ಕೋರ್ಟ್ ಗೆದ್ದಾಗಲೆಲ್ಲಾ ಪ್ರತಿಯೊಬ್ಬ ಭಾರತೀಯನೂ ಗೆಲ್ಲುತ್ತಾನೆ. ಸತ್ಯವು ಹೆಚ್ಚು ಮೇಲುಗೈ ಸಾಧಿಸಿದೆ ಎಂದು ನನಗೆ ಈಗ ವಿಶ್ವಾಸ ಮೂಡಿಸಿದೆ. ಈ ಪ್ರಕರಣದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ನ್ಯಾಯ ಸಿಕ್ಕಿದೆ. ಅನ್ಯಾಯದ ವಿರುದ್ಧ ಸಮಾಜದಲ್ಲಿ ಅನೇಕರು ಧ್ವನಿ ಎತ್ತಲು ಇದು ಪ್ರೇರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸುಪ್ರೀಂಕೋರ್ಟ್ ಮತ್ತು ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಯ ಟ್ವೀಟ್ ಹಿನ್ನೆಲೆ ನ್ಯಾಯಾಂಗ ನಿಂದನೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಇಂದು ಒಂದು ರೂಪಾಯಿ ದಂಡ ಅಥವಾ ಮೂರು ತಿಂಗಳು ಜೈಲು ಮತ್ತು ಕಲಾಪದಿಂದ ನಿರ್ಬಂಧಿಸುವ ಆದೇಶ ನೀಡಿತ್ತು. ಕೋರ್ಟ್ ಆದೇಶದ ಬಳಿಕ ಪ್ರಶಾಂತ್ ಭೂಷಣ್ ಅವರು ತಮ್ಮ ವಕೀಲ ರಾಜೀವ್ ಧವನ್ ಭೇಟಿ ಮಾಡಿ ಅವರಿಗೆ ದಂಡದ ಮೊತ್ತಕ್ಕೆ ಒಂದು ರೂಪಾಯಿ ನೀಡಿ ಟ್ವೀಟ್ ಮಾಡಿದ್ದರು. ಇದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು.

    ಟ್ವೀಟ್‍ನಲ್ಲಿ ಏನಿತ್ತು?
    ಮೊದಲ ಟ್ವೀಟ್ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಕಳೆದ 6 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಯಾವ ರೀತಿ ನಾಶ ಮಾಡಲಾಗಿದೆ ಎಂಬುದನ್ನು ಇತಿಹಾಸಕಾರರು ಹಿಂದಿರುಗಿ ನೋಡಿದರೆ, ಈ ನಾಶದಲ್ಲಿ ಸುಪ್ರೀಂ ಕೋರ್ಟ್ ಪಾತ್ರವನ್ನು ನೋಡಬಹುದು. ಅದರಲ್ಲೂ ವಿಶೇಷವಾಗಿ ಕಳೆದ 4 ಜಡ್ಜ್ ಗಳ ಪಾತ್ರವನ್ನು ಸ್ಪಷ್ಟವಾಗಿ ಗಮನಿಸಬಹುದು.

    ಎರಡನೇ ಟ್ವೀಟ್: ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್‍ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ಕೊರೊನಾ ಲಾಕ್‍ಡೌನ್ ಎಂದು ರಜೆ ಹಾಕಿ ದೇಶದ ನಾಗರಿಕರ ಮೂಲಭೂತ ಹಕ್ಕಾದ ನ್ಯಾಯ ಸಿಗದ ಸಮಯದಲ್ಲಿ ಬೈಕ್ ಸವಾರಿ ಮಾಡಿದ್ದಾರೆ.

    ಈ ಎರಡು ಟ್ವೀಟ್ ಅಲ್ಲದೇ 2009ರಲ್ಲಿ ತೆಹಲ್ಕಾ ಮ್ಯಾಗಜಿನ್‍ಗೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಸಂದರ್ಶನ ನೀಡಿದ್ದ ಪ್ರಶಾಂತ್ ಭೂಷಣ್ ಹೇಳಿಕೆ ಸಂಬಂಧ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು.

  • ನ್ಯಾಯಾಂಗ ನಿಂದನೆ- ಹಿರಿಯ ವಕೀಲ ಪ್ರಶಾಂತ್ ಭೂಷಣ್‍ಗೆ ಒಂದು ರೂಪಾಯಿ ದಂಡ

    ನ್ಯಾಯಾಂಗ ನಿಂದನೆ- ಹಿರಿಯ ವಕೀಲ ಪ್ರಶಾಂತ್ ಭೂಷಣ್‍ಗೆ ಒಂದು ರೂಪಾಯಿ ದಂಡ

    ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆ ಹಿರಿಯ ವಕೀಲ ಪ್ರಶಾಂತ್ ಭೂಷಣ್‍ಗೆ ಒಂದು ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.

    ಸೆಪ್ಟೆಂಬರ್ 15 ರೊಳಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸದಿದ್ದರೇ ಮೂರು ತಿಂಗಳು ಜೈಲು ಶಿಕ್ಷೆ ಮತ್ತು ಮೂರು ತಿಂಗಳು ಕೋರ್ಟ್ ಕಲಾಪಗಳಿಂದ ನಿರ್ಬಂಧಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ.

    ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಹಿನ್ನಲೆ ಸುಪ್ರೀಂಕೋರ್ಟ್ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಆದೇಶ ನೀಡಿತ್ತು. ಆದೇಶ ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೊರ್ಟ್ ಗೆ ಕ್ಷಮೆ ಕೇಳುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ವಕೀಲ ಪ್ರಶಾಂತ್ ಭೂಷಣ್ ಕ್ಷಮೆ ಕೇಳದ ಹಿನ್ನೆಲೆ ಇಂದು ಒಂದು ರೂಪಾಯಿ ಜುಲ್ಮಾನೆ ವಿಧಿಸಿ ಆದೇಶ ಹೊರಡಿಸಿದೆ.

    ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಇಂದು ಸಂಜೆ 4 ಗಂಟೆಗೆ ಸಿಜೆಎಆರ್ ಮತ್ತು ಸ್ವರಾಜ್ ಅಭಿಯಾನ್ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಮತ್ತು ಅಂಜಲಿ ಭಾರಧ್ವಜ್ ಭಾಗಿಯಾಗಲಿದ್ದಾರೆ.

  • ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ, ಆ ಪದ ಅಷ್ಟು ಕೆಟ್ಟದಾಗಿದೆಯೇ- ಪ್ರಶಾಂತ್ ಭೂಷಣ್‍ಗೆ ಸುಪ್ರೀಂ ಪ್ರಶ್ನೆ

    ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ, ಆ ಪದ ಅಷ್ಟು ಕೆಟ್ಟದಾಗಿದೆಯೇ- ಪ್ರಶಾಂತ್ ಭೂಷಣ್‍ಗೆ ಸುಪ್ರೀಂ ಪ್ರಶ್ನೆ

    ನವದೆಹಲಿ: ನ್ಯಾಯಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿರುವ ವಕೀಲ ಪ್ರಶಾಂತ್ ಭೂಷಣ್‍ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಪ್ರಕರಣವನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.

    ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಮಾಣ ಪ್ರಕಟಿಸುವ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಂಗದ ವಿರುದ್ಧ ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್ ಸರ್ವೋಚ್ಛ ನ್ಯಾಯಾಲಯದ ಕ್ಷಮೆಯಾಚಿಸಲು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಕೋರ್ಟ್ ಪ್ರಶ್ನಿಸಿದೆ.

    ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ? ಈ ಪದ ತುಂಬಾ ಕೆಟ್ಟದಾಗಿದೆಯೇ? ಎಂದು ನ್ಯಾಯಾಧೀಶರಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿ ಸದಸ್ಯ ಪೀಠ ಪ್ರಶಾಂತ್ ಭೂಷಣ್ ಅವರನ್ನು ಪ್ರಶ್ನಿಸಿದೆ. ತಾವು ಮಾಡಿದ ನ್ಯಾಯಾಂಗ ನಿಂದನೆ ಟ್ವೀಟ್ ಕುರಿತು ಕೋರ್ಟ್ ಯಾವುದೇ ಶಿಕ್ಷೆ ನೀಡಲಿ, ಅನುಭವಿಸುತ್ತೇನೆ. ಆದರೆ ಕ್ಷಮೆಯಾಚಿಸುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದ್ದರು. ಈ ಹಿನ್ನೆಲೆ ಕೋರ್ಟ್ ಅವರಿಗೆ ಈ ಪ್ರಶ್ನೆ ಕೇಳಿದೆ.

    ಊಟದ ಅವಧಿ ಮುಗಿದ ಬಳಿಕ ಸುಪ್ರೀಂ ಕೋರ್ಟ್‍ನ ಪೀಠವು ಪ್ರಶಾಂತ್ ಭೂಷಣ್ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರ ವಾದವನ್ನು ಆಲಿಸಿತು. ಈ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಧವನ್, ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷೆಗೊಳಪಡಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು. ಭೂಷಣ್ ಅವರ ಪ್ರಕರಣವನ್ನು ಮುಚ್ಚುವುದು ಮಾತ್ರವಲ್ಲ, ವಿವಾದವನ್ನೇ ಅಂತ್ಯಗೊಳಿಸುವ ಮೂಲಕ ಉತ್ತಮ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿದರು.

    ಪ್ರಶಾಂತ್ ಭೂಷಣ್ ಅವರನ್ನು ಹುತಾತ್ನರನ್ನಾಗಿ ಮಾಡಬಾರದು, ಅವರು ಕೊಲೆ ಅಥವಾ ಕಳ್ಳತನದಲ್ಲಿ ದೋಷಿಯಾಗಿಲ್ಲ ಎಂದು ಧವನ್ ವಾದ ಮಂಡಿಸಿದರು. ಅಲ್ಲದೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರ ವಾದವನ್ನು ಖಂಡಿಸಿದ ಧವನ್, ಇದು ಅತಿಯಾಯಿತು ಎಂದು ಉತ್ತರಿಸಿದರು.

    ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಕ್ಷಮೆಯಾಚಿಸಲು ನಿರಾಕರಿಸಿದ ನಂತರವೂ ತಮ್ಮ ಅಫಿಡೆವಿಟ್‍ನಲ್ಲಿ ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬುದು ಸುಪ್ರೀಂ ಕೋರ್ಟ್ ಗಮನಿಸಿದೆ. ನ್ಯಾಯಾಂಗ ನಿಂದನೆ ಕುರಿತು ಮಾಡಿದ ಟ್ವೀಟ್‍ಗಳಿಗೆ ಸಂಬಂಧಿಸಿದಂತೆ ಕ್ಷಮೆಯಾಚಿಸುವ ನಿಲುವಿನ ಕುರಿತು ಯೋಚಿಸುವಂತೆ ಭೂಷಣ್ ಅವರಿಗೆ ಕೋರ್ಟ್ 30 ನಿಮಿಷಗಳ ಕಾಲಾವಕಾಶ ನೀಡಿತು.

    ಇದಾದ ಬಳಿಕವೂ ಧವನ್ ವಾದ ಮುಂದುವರಿಸಿ, ಭೂಷಣ್ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್ ಕುಸಿದಿದೆ ಎಂದು ಪ್ರಶಾಂತ್ ಭೂಷಣ್ ಹೇಳುತ್ತಾರೆ. ಇದು ಆಕ್ಷೇಪಾರ್ಹವಲ್ಲವೇ ಎಂದು ಪ್ರಶ್ನಿಸಿತು.

    ಅದಾಗ್ಯೂ ವಾದ ಮುಂದುವರಿಸಿದ ಭೂಷಣ್ ಪರ ವಕೀಲ ಧವನ್, ಪ್ರಶಾಂತ್ ಭೂಷಣ್ ಅವರನ್ನು ಕ್ಷಮಿಸಬೇಕು. ಎಚ್ಚರಿಕೆ ನೀಡಿ ಕಳುಹಿಸಬೇಕು. ಕೋರ್ಟ್ ಇದನ್ನು ಸಹಾನುಭೂತಿ ದೃಷ್ಟಿಕೋನದಿಂದ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ ನ್ಯಾಯಾಲಯ ಪ್ರಶಾಂತ್ ಭೂಷಣ್ ಕ್ಷಮೆಯಾಚಿಸಬೇಕು ಎಂದು ಹೇಳಿತು. ಬಳಿಕ ಪ್ರಕರಣವನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

  • ಕ್ಷಮೆ ಕೇಳಲ್ಲ, ಶಿಕ್ಷೆ ಅನುಭವಿಸಲು ಸಿದ್ಧ- ವಕೀಲ ಪ್ರಶಾಂತ್ ಭೂಷಣ್

    ಕ್ಷಮೆ ಕೇಳಲ್ಲ, ಶಿಕ್ಷೆ ಅನುಭವಿಸಲು ಸಿದ್ಧ- ವಕೀಲ ಪ್ರಶಾಂತ್ ಭೂಷಣ್

    ನವದೆಹಲಿ: ನನಗೆ ಕರುಣೆ ಬೇಡ, ಅದನ್ನು ಒತ್ತಾಯಿಸುವುದಿಲ್ಲ. ಸುಪ್ರೀಂ ಕೋರ್ಟ್ ನಿಂದ ದಯೆ ಬಯಸುತ್ತಿಲ್ಲ. ನ್ಯಾಯಾಲಯ ಏನೇ ಶಿಕ್ಷೆ ನೀಡದರೂ ಸಂತೋಷದಿಂದ ಅನುಭವಿಸಲು ಸಿದ್ಧನಿದ್ದೇನೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

    ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅವಧಿ ನಿಗದಿಪಡಿಸುವ ವಿಚಾರಣೆ ವೇಳೆ ಪ್ರಶಾಂತ್ ಭೂಷಣ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಆರಂಭದಲ್ಲಿ ವಿಚಾರಣೆಯನ್ನು ಮುಂದೂಡಬೇಕು, ಪ್ರಕರಣದಲ್ಲಿ ದೋಷಿ ಎಂದು ಆದೇಶ ನೀಡಿದ್ದು, ತೀರ್ಪು ಪರಿಶೀಲನಾ ಅರ್ಜಿ ಸಲ್ಲಿಸಲಾಗುತ್ತಿದೆ. ಪರಿಶೀಲನೆ ಅರ್ಜಿ ಬಳಿಕ ವಿಚಾರಣೆ ದಿನಾಂಕ ನಿಗದಿ ಮಾಡುವಂತೆ ಅವರು ಮನವಿ ಮಾಡಿದರು.

    ಈ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠ, ಶಿಕ್ಷೆಯ ಪ್ರಮಾಣ ನಿಗದಿಪಡಿಸುವ ವಿಚಾರಣೆಯ ಮುಂದೂಡಿಕೆಗೆ ನಿರಾಕರಿಸಿತು. ಈ ವೇಳೆ ಪ್ರಶಾಂತ್ ಭೂಷಣ್ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆ ದಾಖಲಿಸಿದರು. ನ್ಯಾಯಾಲಯದ ತಿರಸ್ಕಾರಕ್ಕೆ ಗುರಿಯಾಗಿದ್ದಕ್ಕೆ ತುಂಬಾ ಬೇಸರವಾಗಿದೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ, ಟೀಕೆಗಳನ್ನು ಮಾಡಬೇಕಾಗುತ್ತದೆ. ನನಗೆ ಕರುಣೆ ಬೇಡ, ನಾನು ಅದನ್ನು ಬಯಸುತ್ತಿಲ್ಲ. ನ್ಯಾಯಾಲಯ ಏನೇ ಶಿಕ್ಷೆ ನೀಡಿದರೂ ಸಂತೋಷದಿಂದ ಅನುಭವಿಸಲು ಸಿದ್ಧನಾಗಿದ್ದೇನೆ ಎಂದರು.

    ಮೂರು ದಶಕಗಳಿಂದ ಯಾವ ಘನ ನ್ಯಾಯಾಲಯದ ಗೌರವವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದ್ದೇನೋ ಅದೇ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ನನ್ನನ್ನು ತಪ್ಪಿತಸ್ಥನೆಂದು ಘೋಷಿಸಿದೆ. ನನ್ನನ್ನು ಸಂಪೂರ್ಣವಾಗಿ ತಪ್ಪು ಅರ್ಥ ಮಾಡಿಕೊಂಡಿದ್ದಕ್ಕೆ ನನಗೆ ನೋವಿದೆ. ಉದ್ದೇಶವನ್ನು ಅರಿಯದೆ, ಸ್ಪಷ್ಟ ವಿಚಾರಣೆ ನಡೆಸದೆ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿರುವುದಕ್ಕೆ ಆಘಾತವಾಗಿದೆ ಎಂದಿದ್ದಾರೆ.

    ನನ್ನ ಟ್ವೀಟ್‍ಗಳು ನಾಗರಿಕನಾಗಿ ನನ್ನ ಕರ್ತವ್ಯ ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ. ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯ ವಿಧಿಸಬಹುದಾದ ಯಾವುದೇ ದಂಡವನ್ನು ಸಲ್ಲಿಸುತ್ತೇನೆ. ಆದರೆ ಕ್ಷಮೆಯಾಚಿಸುವುದಿಲ್ಲ ಎಂದು ಭೂಷಣ್ ಸುಪ್ರೀಂಕೋರ್ಟ್‍ಗೆ ತಿಳಿಸಿದ್ದಾರೆ.

    ವಕೀಲ ಪ್ರಶಾಂತ್ ಭೂಷಣ್ ಪರ ರಾಜೀವ್ ದವನ್ ಮತ್ತು ದುಷ್ಯಂತ್ ದವೆ ವಾದ ಮಂಡಿಸಿದರು. ಮರು ಪರಿಶೀಲನೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ರಾಜೀವ್ ದವನ್ ಮನವಿ ಮಾಡಿದರು. ಇದಕ್ಕೆ ನ್ಯಾ.ಗವಾಯಿ ಪ್ರತಿಕ್ರಿಯಿಸಿ, ಆಗಸ್ಟ್ 17ರಂದೇ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಿರಿ ಇನ್ನೂ ಯಾಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ವಕೀಲ ದುಷ್ಯಂತ್ ದವೆ, ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಒಂದು ತಿಂಗಳ ಅವಕಾಶವಿದೆ ಎಂದರು.

    ಅಂತಿಮವಾಗಿ ಕೋರ್ಟ್ 3 ದಿನಗಳ ಒಳಗಡೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿತು. ಇದನ್ನೂ ಓದಿ: 2 ಟ್ವೀಟ್‍ನಿಂದ ಅಪರಾಧಿಯಾದ ಭೂಷಣ್

    ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ಮಹತ್ವದ ತೀರ್ಪು ಪ್ರಕಟಿಸಿತ್ತು.ನ್ಯಾ.ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು `ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ತೀರ್ಪು ನೀಡಿತ್ತು. ಪ್ರಶಾಂತ್ ಭೂಷಣ್ ಅವರಿಗೆ ಈ ಕಾಯ್ದೆಯ ಅಡಿ ಗರಿಷ್ಟ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ.

    ಸೆಪ್ಟೆಂಬರ್ 2 ರಂದು ಅರುಣ್ ಮಿಶ್ರಾ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಈ ಅವಧಿಯೊಳಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕಿದೆ.

  • 2 ಟ್ವೀಟ್‌ ಮಾಡಿ ಅಪರಾಧಿಯಾದ ಪ್ರಶಾಂತ್‌ ಭೂಷಣ್‌ – ಶಿಕ್ಷೆ ಏನಿರಬಹುದು?

    2 ಟ್ವೀಟ್‌ ಮಾಡಿ ಅಪರಾಧಿಯಾದ ಪ್ರಶಾಂತ್‌ ಭೂಷಣ್‌ – ಶಿಕ್ಷೆ ಏನಿರಬಹುದು?

    ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಅಪರಾಧಿ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

    ನ್ಯಾ. ಅರುಣ್‌ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ‘ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 20ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ.

    ಪ್ರಶಾಂತ್ ಭೂಷಣ್ ಅವರಿಗೆ ಈ ಕಾಯ್ದೆಯ ಅಡಿ ಗರಿಷ್ಟ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ.

    ಜೂನ್‌ 27 ಹಾಗೂ 29ರಂದು ಭೂಷಣ್‌ ಎರಡು ಟ್ವೀಟ್‌ಗಳನ್ನು ಮಾಡಿದ್ದರು. ಈ ಟ್ವೀಟ್‌ಗಳ ಬಗ್ಗೆ ಭಾರೀ ಚರ್ಚೆ/ ಟೀಕೆ ವ್ಯಕ್ತವಾದ ಬಳಿಕ ಟ್ವಿಟ್ಟರ್‌ ಈ ಎರಡು ಟ್ವೀಟ್‌ಗಳನ್ನು ತೆಗೆದು ಹಾಕಿತ್ತು.

    ಈ ಬಗ್ಗೆ ಗ್ವಾಲಿಯರ್ ಮೂಲದ ವಕೀಲರೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ ನಿಮ್ಮ ವಿರುದ್ಧ ನಾವು ಯಾಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂದು ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಿತ್ತು.

    ಶೋಕಾಸ್‌ ನೋಟಿಸ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಿಂದನೆ ಮಾಡಿ ಟ್ವೀಟ್‌ ಮಾಡಿದ್ದು ತಪ್ಪು. ಅವರು ಬೈಕ್‌ನಲ್ಲಿ ತೆರಳುತ್ತಿರಲಿಲ್ಲ. ನಿಂತಿದ್ದ ಬೈಕ್ ಮೇಲೆ ಹೆಲ್ಮೆಟ್ ಧರಿಸದ್ದೇ ಕುಳಿತ್ತಿದ್ದನ್ನು ಗಮನಿಸುವಲ್ಲಿ ನಾನು ವಿಫಲನಾಗಿದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

    ಟ್ವೀಟ್ ಗಳ ಬಗ್ಗೆ ಪ್ರಶಾಂತ್ ಭೂಷಣ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಳೆದ ಜುಲೈ 22ರಂದು ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಏಕೆ ನಡೆಸಬಾರದು ಎಂದು ಕೇಳಿ ಶೋಕಾಸ್ ನೋಟಿಸ್‌ ನೀಡಿತ್ತು.

    ಟ್ವೀಟ್‌ನಲ್ಲಿ ಏನಿತ್ತು?
    ಮೊದಲ ಟ್ವೀಟ್ – ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಕಳೆದ 6 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಯಾವ ರೀತಿ ನಾಶ ಮಾಡಲಾಗಿದೆ ಎಂಬುದನ್ನು ಇತಿಹಾಸಕಾರರು ಹಿಂದಿರುಗಿ ನೋಡಿದರೆ, ಈ ನಾಶದಲ್ಲಿ ಸುಪ್ರೀಂ ಕೋರ್ಟ್‌ ಪಾತ್ರವನ್ನು ನೋಡಬಹುದು. ಅದರಲ್ಲೂ ವಿಶೇಷವಾಗಿ ಕಳೆದ 4 ಜಡ್ಜ್‌ಗಳ ಪಾತ್ರವನ್ನು ಸ್ಪಷ್ಟವಾಗಿ ಗಮನಿಸಬಹುದು.

    ಎರಡನೇ ಟ್ವೀಟ್‌: ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್‌ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ಕೊರೊನಾ ಲಾಕ್‌ಡೌನ್‌ ಎಂದು ರಜೆ ಹಾಕಿ ದೇಶದ ನಾಗರಿಕರ ಮೂಲಭೂತ ಹಕ್ಕಾದ ನ್ಯಾಯ ಸಿಗದ ಸಮಯದಲ್ಲಿ ಬೈಕ್‌ ಸವಾರಿ ಮಾಡಿದ್ದಾರೆ.

    ಈ ಎರಡು ಟ್ವೀಟ್‌ ಅಲ್ಲದೇ 2009ರಲ್ಲಿ ತೆಹಲ್ಕಾ ಮ್ಯಾಗಜಿನ್‌ಗೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಸಂದರ್ಶನ ನೀಡಿದ್ದ ಪ್ರಶಾಂತ್ ಭೂಷಣ್ ಹೇಳಿಕೆ ಸಂಬಂಧ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿತ್ತು.

  • ರಫೇಲ್ ಪ್ರಕರಣದಲ್ಲಿ ಕೇಂದ್ರಕ್ಕೆ ಹಿನ್ನಡೆ – ಪತ್ರಿಕಾ ದಾಖಲೆಗಳು ಸಾಕ್ಷ್ಯ: ಸುಪ್ರೀಂ

    ರಫೇಲ್ ಪ್ರಕರಣದಲ್ಲಿ ಕೇಂದ್ರಕ್ಕೆ ಹಿನ್ನಡೆ – ಪತ್ರಿಕಾ ದಾಖಲೆಗಳು ಸಾಕ್ಷ್ಯ: ಸುಪ್ರೀಂ

    ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಮರು ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

    ಕೇಂದ್ರ ಸರ್ಕಾರದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಸಂಜೀವ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ತಿರಸ್ಕರಿಸಿದೆ.

    ಪತ್ರಿಕೆಯೊಂದು ರಫೇಲ್ ಖರೀದಿ ಸಂಬಂಧ ಹಲವು ದಾಖಲೆಗಳನ್ನು ಪ್ರಕಟಿಸಿತ್ತು. ಈ ದಾಖಲೆಗಳನ್ನು ರಕ್ಷಣಾ ಇಲಾಖೆಯಿಂದ ಕದ್ದು ಪ್ರಕಟಿಸಿದೆ ಎಂದು ಸರ್ಕಾರ ವಾದವನ್ನು ಮಂಡಿಸಿತ್ತು. ಸುಪ್ರೀಂ ಕೋರ್ಟ್ ಈಗ ಈ ದಾಖಲೆಗಳನ್ನು ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಎಂದು ಹೇಳಿದೆ.

    ಕಳೆದ ಡಿಸೆಂಬರ್ 14ರಂದು ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಮರುಪರಿಶೀಲನಾ ಅರ್ಜಿಗಳನ್ನು ಅರ್ಹತೆಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.

    ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ್ದರು. ಈ ದಾಖಲೆಗಳು ಸೂಕ್ಷ್ಮವಾಗಿದ್ದು ರಕ್ಷಣಾ ಸಚಿವಾಲಯದ ಮೂಲಗಳಿಂದ ನಾನು ಪಡೆದಿದ್ದೇನೆ ಪ್ರಶಾಂತ್ ಭೂಷಣ್ ತಿಳಿಸಿದ್ದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿರುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಉಲ್ಲೇಖಿಸಿ ವರದಿಯನ್ನು ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಅಥವಾ ಹಾಲಿ ಉದ್ಯೋಗಿಗಳು ದಾಖಲೆಗಳನ್ನು ಕದ್ದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

    ವೇಣುಗೋಪಾಲ್ ಈ ಅಭಿಪ್ರಾಯವನ್ನು ಮಂಡಿಸಿದ ಕೂಡಲೇ ರಕ್ಷಣಾ ಇಲಾಖೆಯ ಮಾಹಿತಿಯನ್ನು ಕಾಪಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ನಂತರದ ಕೋರ್ಟ್ ವಿಚಾರಣೆಯಲ್ಲಿ ವೇಣುಗೋಪಾಲ್ ದಾಖಲೆಗಳು ಕಳುವಾಗಿದೆ ಎಂದರೆ ಕಳ್ಳತನವಲ್ಲ. ಅಲ್ಲಿ ಪ್ರಸ್ತಾಪಗೊಂಡ ಮೂಲ ದಾಖಲೆಯ ನಕಲು ಪ್ರತಿಗಳು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

    ರಫೇಲ್ ಸುದ್ದಿ ಪ್ರಕಟಿಸಿ ವಿಚಾರಣೆ ವೇಳೆ ಪ್ರಭಾವ ಮೂಡಿಸುವ ಯತ್ನ ನಡೆಯುತ್ತಿದೆ. ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿದಾರರು ವಾದಿಸುತ್ತಿದ್ದಾರೆ. ಅರ್ಜಿದಾರರು ಉಲ್ಲೇಖಿಸಿದ ಮಾಹಿತಿ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಮತ್ತು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬಾರದು. ಹೀಗಾಗಿ ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಈ ದಾಖಲೆಗಳನ್ನು ಯಾವುದೇ ಕಾರಣಕ್ಕೆ ಅರ್ಜಿಯ ಜೊತೆ ಪರಿಗಣಿಸಬಾರದು ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈಗ ಸುಪ್ರೀಂ ಕೋರ್ಟ್ ಮಾಧ್ಯಮದಲ್ಲಿ ಪ್ರಕಟವಾದ ದಾಖಲೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಎಂದು ತಿಳಿಸಿದೆ.