Tag: prasada

  • ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲು

    ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲು

    – ಎರಡು ಮಕ್ಕಳ ತಾಯಿಯನ್ನು ಬಿಡಲಿಲ್ಲ

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಎ1 ಆರೋಪಿಯಾಗಿರುವ ಇಮ್ಮಡಿ ಮಹದೇವ ಸ್ವಾಮೀಜಿ ಅಲಿಯಾಸ್ ಚಿಕ್ಕ ಬುದ್ದಿಯ ಮತ್ತೊಂದು ರಂಗಿನಾಟ ಬೆಳಕಿಗೆ ಬರುತ್ತಿವೆ.

    ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲಾಗಿದ್ದು, ಕಳೆದ ಆರು ತಿಂಗಳ ಹಿಂದೆ ಎರಡು ಮಕ್ಕಳ ತಾಯಿಯನ್ನ ಮಹದೇವ ಸ್ವಾಮಿ ಕರೆದುಕೊಂಡು ಹೋಗಿದ್ದನು ಎಂದು ತಿಳಿದು ಬಂದಿದೆ. ಹನೂರು ತಾಲೂಕಿನ ಗ್ರಾಮವೊಂದರ ಮಹಿಳೆ ಎರಡು ಮಕ್ಕಳನ್ನ ಕಟ್ಟಿಕೊಂಡು ಸಂಸಾರ ನಡೆಸಲು ಪರದಾಡುತ್ತಿದ್ದಳು. ಆಗ ಈ ಸ್ವಾಮೀಜಿ ಆಕೆಯನ್ನು ಕರೆದುಕೊಂಡು ಹೋಗಿ ಕೊಳ್ಳೇಗಾಲ ಪಟ್ಟಣದ ಬಡಾವಣೆಯಲ್ಲಿ ಇಟ್ಟು ಸಾಕುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!

    ಈ ಸಂಬಂಧ ಕಳೆದ ಆರು ತಿಂಗಳ ಹಿಂದೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಸ್ವಾಮೀಜಿ ಬಗ್ಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಆರು ತಿಂಗಳಲ್ಲಿ ಮೂರು ಬಾರಿ ದೂರು ಕೊಟ್ಟರು ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಈ ಸ್ವಾಮೀಜಿಯ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯ ಪೋಷಕರು ಗುರುವಾರ ಮೂರನೇ ಬಾರಿಗೆ ಸ್ವಾಮೀಜಿ ಬಗ್ಗೆ ವಿರುದ್ಧ ದೂರು ನೀಡಿದ್ದಾರೆ. ಆದರೆ ಈ ವೇಳೆ ಪೊಲೀಸರು ಇನ್ನು ಎರಡು ದಿನ ಸುಮ್ಮನಿರುವಂತೆ ಹೇಳಿ ಕಳುಹಿಸಿದ್ದಾರೆ.

    ಈ ಹಿಂದೆ ಮಹದೇವ ಸ್ವಾಮೀಜಿ ಐವರು ಮಹಿಳೆಯರ ಸಹವಾಸ ಹೊಂದಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಸಾಲೂರು ಮಠದ ಪಕ್ಕದ ಗ್ರಾಮದ ಮಂಜುಳಾ ಎಂಬ ಮಹಿಳೆ ವಾರಕ್ಕೆ ಎರಡು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದಳಂತೆ. ಸರ್ಕಾರಿ ಶಾಲೆಯ ಟೀಚರ್ ಮಹದೇವಮ್ಮ ಭಾನುವಾರ ಮಿಸ್ ಮಾಡುತ್ತಿರಲಿಲ್ಲ. ಒಂದು ವೇಳೆ ಇವರಿಬ್ಬರು ಮಠಕ್ಕೆ ಬರದಿದ್ದರೆ ಮಹದೇವನೇ ಫೋನ್ ಮಾಡಿ ಕರೆಸುತ್ತಿದ್ದನಂತೆ. ಸರ್ಕಾರಿ ರಜೆ ಬಂದರೆ ಸಾಕು ಟೀಚರ್ ಮಿಸ್ ಮಾಡ್ದೆ ಮಠಕ್ಕೆ ಹಾಜರಾಗುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮಹದೇವ ಸ್ವಾಮೀಜಿ ಪ್ರಕರಣದಲ್ಲಿ ಬಂಧಿತಳಾಗಿರುವ ಎ2 ಆರೋಪಿ ಅಂಬಿಕಾಳೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಾನೆ.

    ವಿಷ ಪ್ರಸಾದ ಪ್ರಕರಣದಲ್ಲಿ ಈವರೆಗೆ ಒಬ್ಬಳು ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 16 ಜನ ಮೃತಪಟ್ಟಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಕೆಲಸ ಮಾಡುತ್ತಿದೆ.

    https://www.youtube.com/watch?v=WP4XJddApD4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ವಿಷ ಹಾಕಿದ ಪಾಪಿ ಪತ್ತೆ – ಋಣ ತೀರಿಸಲು ಹೋಗಿ 15 ಮಂದಿ ಬಲಿ ಪಡೆದ ಅರ್ಚಕ

    ಕೊನೆಗೂ ವಿಷ ಹಾಕಿದ ಪಾಪಿ ಪತ್ತೆ – ಋಣ ತೀರಿಸಲು ಹೋಗಿ 15 ಮಂದಿ ಬಲಿ ಪಡೆದ ಅರ್ಚಕ

    ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ದುರಂತ ಪ್ರಕರಣವೂ ಹೊಸ ತಿರವು ಪಡೆದುಕೊಂಡಿದ್ದು ಉದ್ಯೋಗ ನೀಡಿದ್ದ ಋಣ ತೀರಿಸಲು ನಾನೇ ವಿಷ ಹಾಕಿದ್ದೇನೆ ಎಂದು ಆರೋಪಿ ದೊಡ್ಡಯ್ಯ ತಪ್ಪೊಪ್ಪಿಕೊಂಡಿದ್ದಾನೆ.

    ಆರೋಪಿ ದೊಡ್ಡಯ್ಯ ಸುಳ್ವಾಡಿ ಮಾರಮ್ಮ ದೇವಾಲಯದ ಸಮೀಪ ಇರುವ ನಾಗರಕೋವಿ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ. ಈತನನ್ನು ಅರ್ಚಕನಾಗಿ ನೇಮಿಸಿದ್ದೆ ಇಮ್ಮಡಿ ಮಹಾದೇವ ಸ್ವಾಮೀಜಿ. 2 ವರ್ಷದ ಹಿಂದೆ ನಾಗರಕೋವಿ ದೇಗುಲದಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಸ್ವಾಮೀಜಿ ಹೇಳಿದಂತೆ ವಿಷ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: 5 ಮಂದಿಯ ಕುತಂತ್ರಕ್ಕೆ 15 ಮಂದಿ ಬಲಿ – ವಿಷ ಪ್ರಸಾದ ಸ್ಫೋಟಕ ಸತ್ಯ ರಿವೀಲ್

    ಶುಕ್ರವಾರ ಏನಾಯ್ತು?
    ಮಾರಮ್ಮ ದೇಗುಲದ ಅಡುಗೆ ಮಾಡಿದ್ದ ಸ್ಥಳದಿಂದ 100 ಮೀಟರ್ ದೂರದ ಅಂತರದಲ್ಲಿ ಆರೋಪಿ ದೊಡ್ಡಯ್ಯ ತನ್ನ ಯಮಹ ಬೈಕನ್ನು ನಿಲ್ಲಿಸಿದ್ದ. ಬಳಿಕ ಪ್ರಸಾದದಲ್ಲಿ ವಿಷ ಬೆರೆಸಿ ಹೋಗಿದ್ದಾನೆ. ನಂತರ ತನ್ನ ಮೇಲೆ ಅನುಮಾನ ಬಾರದೇ ಇರಲು ಪ್ರಸಾದ ಸೇವಿಸಿದಂತೆ ನಾಟಕವಾಡಿ ಆಸ್ಪತ್ರೆ ಸೇರಿದ್ದ. ಆದರೆ ವೈದ್ಯರ ಪರೀಕ್ಷೆಯ ವೇಳೆ ದೊಡ್ಡಯ್ಯ ದೇಹದಲ್ಲಿ ವಿಷ ಪ್ರಸಾದ ಸೇವಿಸದೇ ಇರುವ ವಿಚಾರ ಬೆಳಕಿಗೆ ಬಂದಿತ್ತು.

    ಅಷ್ಟೇ ಅಲ್ಲದೇ ಈತನ ವರ್ತನೆಯ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈ ಕೃತ್ಯವನ್ನು ತಾನು ಎಸಗಿದ್ದು ಯಾಕೆ ಎನ್ನುವುದನ್ನು ತಿಳಿಸಿದ್ದಾನೆ.

    ಸದ್ಯಕ್ಕೆ ವಿಷಮಿಶ್ರಿತ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ಇಂದು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ನಾಗದೇವತೆ ದೇವಾಲಯದ ಅರ್ಚಕ ದೊಡ್ಡಯ್ಯ ಪ್ರಮುಖ ಆರೋಪಿಗಳಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲಾ ದೇವಸ್ಥಾನ ಪ್ರಸಾದ ಪರೀಕ್ಷೆ ಆದೇಶ ಸರಿಯಲ್ಲ – ಬಿಎಸ್‍ವೈ

    ಎಲ್ಲಾ ದೇವಸ್ಥಾನ ಪ್ರಸಾದ ಪರೀಕ್ಷೆ ಆದೇಶ ಸರಿಯಲ್ಲ – ಬಿಎಸ್‍ವೈ

    ಶಿವಮೊಗ್ಗ: ಸುಳ್ವಾಡಿ ಪ್ರಕರಣದಿಂದಾಗಿ ಎಲ್ಲಾ ದೇವಾಲಯದ ಪ್ರಸಾದ ಪರೀಕ್ಷಿಸುವಂತೆ ಧಾರ್ಮಿಕ ದತ್ತಿ ಇಲಾಖೆಗೆ ಸರ್ಕಾರ ಆದೇಶ ನೀಡಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಚಾಮರಾಜನಗರದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತ್ ಮಾರಮ್ಮ ದೇವಸ್ಥಾನದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ದುಷ್ಕರ್ಮಿಗಳು ವಿಷ ಬೆರೆಸಿದ್ದರು. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೇ ಹೊರತು ಪ್ರಸಾದ ಪರೀಕ್ಷೆ ಮಾಡುವಂತೆ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಹೇಳಿದರು.

    ಉತ್ತರ ಕರ್ನಾಟಕ ಅಭಿವೃದ್ಧಿ ಕುಂಠಿತ ಹಾಗೂ ನೀರಾವರಿ ಯೋಜನೆಗಳ ಚರ್ಚೆ ಅಗತ್ಯವಾಗಿದೆ. ಈ ಕುರಿತು ಸದನದಲ್ಲಿ ನಾಳೆ ಚರ್ಚೆ ಮಾಡಲಿದ್ದೇನೆ ಎಂದು ತಿಳಿಸಿದರು.

    ರೈತರ ಸಾಲಮನ್ನಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ರಾಷ್ಟ್ರಿಕೃತ ಬ್ಯಾಂಕ್‍ಗಳು ಯಾವುದೇ ಕಾರಣಕ್ಕೂ ಋಣಮುಕ್ತ ಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಿವೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರದಲ್ಲಿ ತೊಡಗಿದ್ದಾರೆಯೇ ಹೊರತು, ಅಭಿವೃದ್ಧಿಯತ್ತ ಗಮನಹರಿಸುತ್ತಿಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಆರೋಪಿಸಿದ ಅವರು, ಪಂಚ ರಾಜ್ಯ ಚುನಾವಣೆ ಫಲಿತಾಂಶವು ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಾದದಲ್ಲಿ ವಿಷ ಕೇಸ್: ಅಂದು ಕೂಲಿ ಕಾರ್ಮಿಕ -ಇಂದು ಐಷಾರಾಮಿ ಮನೆಯ ಒಡೆಯ!

    ಪ್ರಸಾದದಲ್ಲಿ ವಿಷ ಕೇಸ್: ಅಂದು ಕೂಲಿ ಕಾರ್ಮಿಕ -ಇಂದು ಐಷಾರಾಮಿ ಮನೆಯ ಒಡೆಯ!

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ದೇವಾಲಯ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದ ದೇವಾಸ್ಥಾನದ ಟ್ರಸ್ಟಿನ ಸದಸ್ಯನಾಗಿರುವ ಚಿನ್ನಪ್ಪಿಯ ಆಸ್ತಿ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಮೇಲೆ ಅನುಮಾನುಗೊಂಡು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಆದರೆ ಈ ವೇಳೆ ಚಿನ್ನಪ್ಪಿ ಐದು ವರ್ಷದ ಹಿಂದೆ ಸಾಮಾನ್ಯ ಕೂಲಿ ಕೆಲಸ ಮಾಡುತ್ತಿದ್ದನು. ಜೀವನಕ್ಕಾಗಿ ಕೂಲಿ ಕೆಲಸ ಮಾಡಲೇಬೇಕಿದ್ದ ಪರಿಸ್ಥಿತಿ ಇತ್ತು. ಆದರೆ ಈಗ ಚಿನ್ನಪ್ಪಿ ಕೂಲಿ ಕಾರ್ಮಿಕನಾಗಿದ್ದವನು ಐಷಾರಾಮಿ ಮನೆ ಮತ್ತು ಕಾಂಪ್ಲೆಕ್ಸ್ ಗಳ ಒಡೆಯನಾಗಿದ್ದಾನೆ. ಆದ್ದರಿಂದ ಕೂಲಿ ಕೆಲಸ ಮಾಡುತ್ತಿದ್ದವನು ಇಷ್ಟು ಆಸ್ತಿ ಹೇಗೆ ಸಂಪಾದನೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಾಮಾನ್ಯ ಕೂಲಿ ಕಾರ್ಮಿಕನಾಗಿದ್ದ ಚಿನ್ನಪ್ಪಿ ಕೊಡ್ಡ ಮನೆ ಮತ್ತು ಕಾಂಪ್ಲೆಕ್ಸ್ ಕಟ್ಟಿಸಿದ್ದಾನೆ. ಅಷ್ಟೇ ಅಲ್ಲದೇ ಮನೆಯನ್ನು 3 ವರ್ಷಗಳ ಹಿಂದೆ ಕಟ್ಟಿಸಿದ್ದಾನೆ. ದೇವಾಲಯದ ಆಡಳಿತ ಮಂಡಳಿಯಲ್ಲಿ ಚಿನ್ನಪ್ಪಿ ಸಾಕಷ್ಟು ಹಗರಣ ಎಸಗಿದ್ದಾನೆ. ಆದ್ದರಿಂದ ಇಂತಹ ಮನೆ ಕಟ್ಟಿಸಿದ್ದಾನೆ. ಜಮೀನು ಖರೀದಿಸಿದ್ದಾನೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.

    ಚಿನ್ನಪ್ಪಿ ಕಿಚ್‍ಗುತ್ ಮಾರಮ್ಮ ದೇವಾಲಯದ ಟ್ರಸ್ಟ್ ನ ಸದಸ್ಯನಾಗಿದ್ದನು. ಪ್ರಸಾದದ ದುರಂತ ಸಂಭವಿಸಿದ ಬಳಿಕ ಚಿನ್ನಪ್ಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಾರಮ್ಮ ದೇವಾಲಯ ವಿಷ ಪ್ರಸಾದ ದುರಂತಕ್ಕೆ ದೇವಸ್ಥಾನದ ಆದಾಯವೇ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನಪ್ಪಿ ಆಸ್ತಿ ಬಗ್ಗೆಯೂ ಪೊಲೀಸರಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಇಬ್ಬರು, ಭಾನವಾರ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಆದರೆ ವಿಷಪ್ರಸಾದ ಪ್ರಕರಣದಲ್ಲಿ ಒಟ್ಟು 7 ಮದಿಯ ಮೇಲೆ ಎಫ್‍ಐಆರ್ ಹಾಕಲಾಗಿದೆ. ಕೊಳ್ಳೇಗಾಲ ಡಿಎಸ್‍ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದೆ. ಕೊಳ್ಳೇಗಾಲ ನ್ಯಾಯಾಲಯಕ್ಕೆ ಆರೋಪಿಗಳು ಸೇರಿದಂತೆ ಚಿನ್ನಪ್ಪಿಯನ್ನು ಇಂದು ಹಾಜರು ಪಡಿಸುವ ಸಾಧ್ಯತೆ ಇದೆ.

    https://www.youtube.com/watch?v=VlWU8VbgtSc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಪ್ರಸಾದ ವಿತರಣೆಗೆ ರೂಲ್ಸ್

    ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಪ್ರಸಾದ ವಿತರಣೆಗೆ ರೂಲ್ಸ್

    ಬೆಂಗಳೂರು: ಪ್ರಸಾದಕ್ಕೆ ವಿಷವನ್ನು ಬೆರೆಸಿದ ಪ್ರಕರಣದಿಂದ ಎಚ್ಚರಗೊಂಡಿರುವ ಮುಜರಾಯಿ ಇಲಾಖೆ ಪ್ರಸಾದ ವಿತರಣೆಗೆ ನಾನಾ ರೂಲ್ಸ್ ತಂದಿದೆ. ಇಂದು ಹಾಗೂ ನಾಳೆ ನಾನಾ ಕಡೆ ವೈಕುಂಠ ಏಕಾದಶಿಗೆ ಲಡ್ಡು ತಯಾರಿಸುವ ಸ್ಥಳ, ಹಾಗೂ ನಾಳೆ ಲಡ್ಡು ವಿತರಣೆಯ ಸಮಯದಲ್ಲಿ ದೇಗುಲಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಮುಜರಾಯಿ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಲಿದ್ದಾರೆ. ಇದನ್ನೂ ಓದಿ: ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕು ತಹಶೀಲ್ದಾರ್, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇಗುಲಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನೆಲಮಂಗಲದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿವೆಂಕಟರಮಣ ದೇಗುಲಕ್ಕೆ ತಹಶಿಲ್ದಾರ್ ಕೆ.ಎನ್ ರಾಜಶೇಖರ್ ಲಡ್ಡು ತಯಾರಿಕೆ ವೇಳೆ ಭೇಟಿ ನೀಡಿ, ಲಡ್ಡು ತಯಾರಿಸುವಾಗ ಎಚ್ಚರ ವಹಿಸುವಂತೆ ಮುಜುರಾಯಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಸಿದ್ದಾರೆ. ದೇವಸ್ಥಾನದ ಪ್ರಸಾದ ತಯಾರಿಕಾ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಆದೇಶ ಮಾಡಿದ್ದಾರೆ.

    ಇಂದು ವೈಕುಂಠ ಏಕಾದಶಿಯ ಪ್ರಯುಕ್ತ ಬರುವ ಭಕ್ತಾಧಿಗಳಿಗೆ ಈ ದೇವಾಲಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನ ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿನ ದೇವರಿಗೂ ತಿರುಪತಿಯ ತಿರುಮಲದಲ್ಲಿ ಮಾಡುವಂತಹ ಅಲಂಕಾರವನ್ನ ಮಾಡಲಾಗುತ್ತಿದೆ. ಹೀಗಾಗಿ ಪ್ರಾಚೀನ ಕಾಲದ ಇತಿಹಾಸವಿರುವ ಸುಪ್ರಸಿದ್ಧ ಈ ದೇವಾಲಯಲ್ಲಿ, ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆಯನ್ನ ವಹಿಸಿದ್ದಾರೆ.

    ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ನಾನಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಲಿದೆ. ಇಸ್ಕಾನ್ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪೂಜೆ ಶುರುವಾಗಿದ್ದು, ಚುಮು ಚುಮು ಚಳಿಯಲ್ಲಿ ಮುಂಜಾನೆಯಿಂದಲೇ ದೇಗುಲಕ್ಕೆ ಭಕ್ತರು ಬರುತ್ತಿದ್ದಾರೆ. ಭಕ್ತರಿಗೆ ವೈಕುಂಠ ದ್ವಾರ ಪ್ರವೇಶಕ್ಕೆ ಎಲ್ಲಾ ವ್ಯವಸ್ಥೆಗಳ ಸಿದ್ಧತೆ ಮಾಡಲಾಗಿದ್ದು, ಸರದಿ ಸುಗಮವಾಗಿ ಸಾಗಲು ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಾದ ಸೇವನೆ ಪ್ರಕರಣ: 101 ರೋಗಿಗಳ ಪೈಕಿ ಮೂವರ ಸ್ಥಿತಿ ಗಂಭೀರ-ಡಿಹೆಚ್‍ಓ

    ಪ್ರಸಾದ ಸೇವನೆ ಪ್ರಕರಣ: 101 ರೋಗಿಗಳ ಪೈಕಿ ಮೂವರ ಸ್ಥಿತಿ ಗಂಭೀರ-ಡಿಹೆಚ್‍ಓ

    ಮೈಸೂರು: ಮಾರಮ್ಮ ದೇವಾಲಯದ ಪ್ರಸಾದ ಸೇವನೆಯಿಂದಾಗಿ ಇದೂವರೆಗೂ ನಗರದಾದ್ಯಂತ 101 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಡಿಎಚ್‍ಓ) ಬಸವರಾಜ್ ತಿಳಿಸಿದ್ದಾರೆ.

    ನಗರದ ಕೆ.ಆರ್. ಆಸ್ಪತ್ರೆಯ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನಾದ್ಯಂತ ಇದುವರೆಗೂ ಒಟ್ಟು 101 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳಿಂದ 75 ಮಂದಿಯನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಉಳಿದಂತೆ 26 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಸಿದ್ದೇವೆ. ಇದರಲ್ಲಿನ 3 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

    ಮೀಸೆ ಮಾದಯ್ಯ ಎಂಬ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯದ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಎಲ್ಲ ರೋಗಿಗಳು ಕ್ಷೇಮವಾಗಿದ್ದಾರೆ. ವಿಷ ಪ್ರಸಾದ ಸೇವನೆಯಿಂದಾಗಿ ಇದುವರೆಗೂ 14 ಮಂದಿ ಮೃತಪಟ್ಟಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

    ಏನಿದು ಘಟನೆ?
    ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದರು. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಕಂಡ ಸ್ಥಳೀಯರು 108 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.

    ಪ್ರಸಾದದಲ್ಲಿ ಏನಿತ್ತು?
    ಪ್ರಸಾದದ ವರದಿ ಕುರಿತು ಪ್ರತಿಕ್ರಿಯಿಸಿದ್ದ ಐಜಿಪಿ ಶರತ್ ಚಂದ್ರ ಅವರು, ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎನ್ನುವ ವರದಿ ಬಂದಿದೆ. ಇದನ್ನು ಕೀಟನಾಶಕ್ಕೆ ಬಳಸುತ್ತಾರೆ. ಗಿಡಕ್ಕೆ ಹುಳು ಮತ್ತು ರೋಗ ಬಂದಾಗ ಈ ಕೀಟನಾಶಕವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ. ಈ ಕುರಿತು ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದದ ಸುತ್ತ ಅನುಮಾನಗಳ ಹುತ್ತ- ಚರ್ಚೆಯಾಗುತ್ತಿದೆ ಉತ್ತರವಿಲ್ಲದ 4 ಪ್ರಶ್ನೆಗಳು

    ವಿಷ ಪ್ರಸಾದದ ಸುತ್ತ ಅನುಮಾನಗಳ ಹುತ್ತ- ಚರ್ಚೆಯಾಗುತ್ತಿದೆ ಉತ್ತರವಿಲ್ಲದ 4 ಪ್ರಶ್ನೆಗಳು

    ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್‍ಕುತ್ ಮಾರಮ್ಮ ದೇಗುಲದ ವಿಷ ಪ್ರಸಾದದ ಸುತ್ತ ಅನುಮಾನಗಳ ಹುತ್ತ ಬೆಳೆದಿದ್ದು, ಉತ್ತರ ಸಿಗದ 4 ಪ್ರಶ್ನೆಗಳು ಈಗ ಜನರಲ್ಲಿ ಚರ್ಚೆಯಾಗುತ್ತಿದೆ.

    ಕಿಚ್‍ಕುತ್ ಮಾರಮ್ಮನ ಪ್ರಸಾದ ಸೇವನೆಯಿಂದಾಗಿ ಇದೂವರೆಗೂ 14 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 101 ಮಂದಿ ಭಕ್ತರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಸದ್ಯ ಪೊಲೀಸರು ಘಟನೆ ಬಗ್ಗೆ ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ. ಆದರೆ ಭಕ್ತರು ಸೇವಿಸಿದ್ದ ಪ್ರಸಾದದ ಮೇಲೆಯೇ ಅನುಮಾನ ಹೊರಬಿದ್ದಿದೆ.

    ಉತ್ತರ ಸಿಗದ ಪ್ರಶ್ನೆಗಳು:
    – ವಿಷದ ಪ್ರಸಾದವನ್ನು ದೇವಸ್ಥಾನದ ಯಾವೊಬ್ಬ ಟ್ರಸ್ಟ್ ಸಿಬ್ಬಂದಿಯೂ ಸ್ವೀಕರಿಸಿಲ್ಲ ಯಾಕೆ?
    – ಪ್ರಸಾದ ಸೇವಿಸಿದರಲ್ಲಿ ಬಹುತೇಕ ಬೇರೆ ಗ್ರಾಮದ ಭಕ್ತರೇ ಆಗಿದ್ದಾರೆ ಯಾಕೆ?
    – ಸುಲ್ವಾಡಿ ಗ್ರಾಮದವರು ಪ್ರಸಾದವನ್ನು ತಿಂದಿಲ್ಲ, ಮೊದಲೇ ಸುಲ್ವಾಡಿ ಗ್ರಾಮಸ್ಥರಿಗೆ ಗೊತ್ತಿತ್ತಾ?
    – ಗೋಪುರ ಶಂಕುಸ್ಥಾಪನೆಗೆಂದೇ ಬಂದಿದ್ದ ಭಕ್ತರಿಗೆ ಮಾತ್ರವೇ, ಈ ಪ್ರಸಾದವನ್ನು ಮಾಡಲಾಗಿತ್ತು. ಅಲ್ಲದೇ ಇದನ್ನು ಇತರೆ ಭಕ್ತರಿಗಾಗಿ ಮಾಡಿಲ್ಲ ಯಾಕೆ?

    ಏನಿದು ಘಟನೆ?
    ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಈವರೆಗೂ 14 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ : ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಕೊನೆಗೂ ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಅನ್ನೋದು ಪತ್ತೆಯಾಯ್ತು!

    ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ದುರಂತಕ್ಕೆ ಈಗಾಗಲೇ 14 ಮಂದಿ ಮೃತಪಟ್ಟಿದ್ದು, ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ಮೂಲಕ ತಿಳಿದು ಬಂದಿದೆ.

    ಭಕ್ತರು ಸೇವಿಸಿದ್ದ ವಿಷ ಪ್ರಸಾದದಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳು ಮೊದಲಿಗೆ ನೀರಿನಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿಕೊಂಡು ಬಳಿಕ ಪ್ರಸಾದಕ್ಕೆ ಬೆರೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಖಚಿತವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಐಜಿಪಿ ಶರತ್ ಚಂದ್ರ ಅವರು, ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎನ್ನುವ ವರದಿ ಬಂದಿದೆ. ಇದನ್ನು ಕೀಟನಾಶಕ್ಕೆ ಬಳಸುತ್ತಾರೆ. ಗಿಡಕ್ಕೆ ಹುಳು ಮತ್ತು ರೋಗ ಬಂದಾಗ ಈ ಕೀಟನಾಶವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ಕರೆದುಕೊಂಡು ಪ್ರಶ್ನೆ ಮಾಡಿ ವಿಚಾರಣೆ ಮಾಡುತ್ತಿದ್ದೇವೆ. ಶೀಘ್ರವಾಗಿಯೇ ತನಿಖೆ ನಡೆಯುತ್ತಿದೆ ಎಂದು ಶರತ್ ಚಂದ್ರ ಅವರು ಹೇಳಿದ್ದಾರೆ. ಈಗಾಗಲೇ ಮಾರಮ್ಮ ದೇವಾಲಯದ ವಿಷಪ್ರಸಾದಕ್ಕೆ 14 ಮಂದಿ ಮೃತಪಟ್ಟಿದ್ದು, ಮೃತಪಟ್ಟ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಕೀಟನಾಶಕ ಶಂಕೆಯಿತ್ತು:
    ದೇವರ ಪ್ರಸಾದದಲ್ಲಿ ವಿಷ ಬೆರತಿರುವುದರಿಂದ ಈ ದುರಂತ ಸಂಭವಿಸಿರಬಹುದು ಎಂದು ಕೆ.ಆರ್.ಆಸ್ಪತ್ರೆಯ ವೈದ್ಯರಾದ ರಾಜೇಶ್ ಕುಮಾರ್ ಶುಕ್ರವಾರವೇ ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಅವರು, ಇದೂವರೆಗೂ ಕೆಆರ್ ಆಸ್ಪತ್ರೆಯಲ್ಲಿ ಒಟ್ಟು 25 ಮಂದಿ ದಾಖಲಾಗಿದ್ದಾರೆ. ಅಸ್ವಸ್ಥರಾಗಿರುವವರೆಲ್ಲಾ ಉಸಿರಾಡಲೂ ಸಹ ಕಷ್ಟ ಪಡುತ್ತಿದ್ದಾರೆ. ಅಸ್ವಸ್ಥರ ಗುಣಲಕ್ಷಣಗಳನ್ನು ನೋಡಿದರೇ, ಆಹಾರದಲ್ಲಿ ಕೀಟನಾಶಕ ಬೆರೆತಿರುವ ಸಂಶಯ ವ್ಯಕ್ತವಾಗುತ್ತಿದೆ. ಜಮೀನುಗಳಲ್ಲಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ನಿಖರವಾಗಿ ಈಗ ಹೇಳಲು ಸಾಧ್ಯವಾಗುವುದಿಲ್ಲ. ರೋಗಿಗಳ ರಕ್ತ, ವಾಂತಿ ಹಾಗೂ ಆಹಾರದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣವನ್ನು ಹೇಳಬಹುದೆಂದು ತಿಳಿಸಿದ್ದರು.

    ನಡೆದಿದ್ದು ಏನು?
    ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಈವರೆಗೂ 14 ಮಂದಿ ಮೃತಪಟ್ಟಿದ್ದಾರೆ.

    https://www.youtube.com/watch?v=EBJ_QLJGny8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

    ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

    ಚಾಮರಾಜನಗರ: “ಹರಕೆ ಮಾಡಿಕೊಂಡಿದ್ದಕ್ಕೆ ಮಗು ಕೊಟ್ಟೆ, ಆದರೆ ನನ್ನ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ” ಎಂದು ಹೇಳಿ ಸುಳ್ವಾಡಿ ಗ್ರಾಮದ ಬಾಣಂತಿಯೊಬ್ಬರು ಈಗ ಕಣ್ಣೀರು ಹಾಕುತ್ತಿದ್ದಾರೆ.

    ಹುನೂರು ತಾಲೂಕಿನ ಸುಳ್ವಾಡಿ ಗ್ರಾಮದ ಶಾಂತರಾಜು ಅವರಿಗೆ ಮದುವೆಯಾಗಿ ಮಕ್ಕಳಾಗಿರಲಿಲ್ಲ. ಮಕ್ಕಳಾಗದ್ದಕ್ಕೆ ಓಂ ಶಕ್ತಿ ದೇವರಿಗೆ ಹರಕೆ ಹೊತ್ತಿಕೊಂಡಿದ್ದರು. ದೇವಿಯ ಅನುಗ್ರಹವೆಂಬಂತೆ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಹುಟ್ಟಿತ್ತು.

    ದೇವಿಯ ಹರಕೆಯಿಂದಲೇ ಮಗು ಜನನವಾಗಿದೆ ಎಂದು ತಿಳಿದು ದಂಪತಿ ಖುಷಿಯಿಂದ ಈ ಹರಕೆ ತೀರಿಸಲು ಶುಕ್ರವಾರ ಬೆಳಗ್ಗೆ ಮಾರಮ್ಮ ದೇವಸ್ಥಾನಕ್ಕೆ ಆಗಮಿಸಿದ್ದರು. ವಿಧಿ ಬರಹ ಘೋರ ಎನ್ನುವಂತೆ ದೇವಸ್ಥಾನದಲ್ಲಿ ಪೂಜೆ ಮಾಡಿದ ಬಳಿಕ ಶಾಂತರಾಜು ಪ್ರಸಾದವನ್ನು ಸೇವಿಸಿದ್ದಾರೆ. ಪ್ರಸಾದವನ್ನು ತಿಂದು ಅಸ್ವಸ್ಥಗೊಂಡಿದ್ದ ಶಾಂತರಾಜು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಪತಿ ಮೃತಪಟ್ಟ ಶಾಕಿಂಗ್ ವಿಚಾರ ತಿಳಿದು ಮೂರು ತಿಂಗಳ ಮಗುವಿನೊಂದಿಗೆ ಬಾಣಂತಿ,”ಮಗುವನ್ನ ಕೊಟ್ಟು ಪತಿಯನ್ನ ಕಿತ್ತುಕೊಂಡಾ ದೇವರೇ. ಅಮ್ಮಾ, ಯಾಕೆ ನನಗೆ ಈ ಕಷ್ಟವನ್ನು ಕೊಟ್ಟೆ” ಎಂದು ಹೇಳಿ ರೋಧಿಸುತ್ತಿದ್ದಾರೆ. ಬಾಣಂತಿಯ ನೋವನ್ನು ಕೇಳಿ ಸ್ಥಳದಲ್ಲಿದ್ದ ಜನ ಸಹ ಕಣ್ಣೀರು ಹಾಕುತ್ತಿದ್ದಾರೆ. ಪುಟ್ಟ ಕಂದಮ್ಮನ್ನು ಹಿಡಿದು ಆಡಿಸಬೇಕಾದ ತಂದೆ ಈಗ ಶವವಾಗಿದ್ದಾರೆ. ಮಗುವಿನ ಜನನೊಂದಿಗೆ ಸಂಭ್ರಮದಲ್ಲಿದ್ದ ಕುಟುಂಬ ಈಗ ಸೂತಕದ ಛಾಯೆಯಲ್ಲಿದೆ.

    ಪ್ರಸಾದ ದುರಂತದಲ್ಲಿ ಒಂದೇ ಗ್ರಾಮದ 7 ಮಂದಿ ಮೃತಪಟ್ಟಿದ್ದು, ಈಗಾಗಲೇ ಮೃತದೇಹಗಳನ್ನು ಗ್ರಾಮಕ್ಕೆ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಗ್ರಾಮಸ್ಥರು ಸಾಮೂಹಿಕವಾಗಿ ಬೆಂಕಿ ಇಟ್ಟು ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.

    ಏನು ಹೇಳಲು ಸಾಧ್ಯವಿಲ್ಲ: ಸದ್ಯಕ್ಕೆ ಅಸ್ವಸ್ಥರಾಗಿರುವ ಜನರ ಆರೋಗ್ಯದ ಬಗ್ಗೆ ಇನ್ನೂ 15 ದಿನ ಏನೂ ಹೇಳುವುದಕ್ಕೆ ಆಗಲ್ಲ. ಮಾರಮ್ಮ ದೇವಿಯ ಭಕ್ತರ ದೇಹ ಸೇರಿರುವುದು ಅಪಾಯಕಾರಿ ವಿಷವಾಗಿದೆ. ಕೀಟನಾಶಕ ಮಿಶ್ರಣವಾಗಿರುವ ಕಾರಣ ಅಸ್ವಸ್ಥರು ಔಟ್ ಆಫ್ ಡೇಂಜರ್ ಅಂತ ಹೇಳಲು ಅಸಾಧ್ಯವಾಗಿದ್ದು, ಅದಕ್ಕೆ ಇನ್ನೂ ಸಮಯ ಬೇಕು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸುಳ್ವಾಡಿ ವಿಷ ಪ್ರಸಾದಕ್ಕೆ 14 ಬಲಿ – ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ

    ಸುಳ್ವಾಡಿ ವಿಷ ಪ್ರಸಾದಕ್ಕೆ 14 ಬಲಿ – ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿಯ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಇಲ್ಲಿವರೆಗೂ 14 ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ನರಳಾಡುತ್ತಿದ್ದಾರೆ.

    ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೃತರನ್ನು ಪಾಪಣ್ಣ(70), ಅನಿತಾ(12), ಶಾಂತರಾಜು(25), ಗೋಪಿಯಮ್ಮ(40), ಅಣ್ಣಯಪ್ಪತಮಡಿ(45), ರಾಚಯ್ಯ (35), ಕೃಷ್ಣನಾಯಕ್(50), ಶಿವು(35), ದೊಡ್ಡ ಮಾದಯ್ಯ(42), ಶಕ್ತಿ ವೇಲು(45) ಅವಿನಾಶ್(7) ಮೃತ ದುರ್ದೈವಿಗಳು.

    ಮೈಸೂರಿನ ಕೆ. ಆರ್.ಆಸ್ಪತ್ರೆ, ಜೆಎಸ್‍ಎಸ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲೂ 40 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಬ್ಬರು ಮಕ್ಕಳು ಸೇರಿ 13 ಮಂದಿಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಅಸ್ವಸ್ಥರು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ದುರಂತ ಒಂದು ಕಡೆಯಾದರೆ ಬದುಕುಳಿದವರಿಗೆ ಚಿಕಿತ್ಸೆ ಕೊಡಿಸುವುದೇ ಸವಾಲಾಗಿ ಪರಿಣಮಿಸಿದೆ. ಕೊಳ್ಳೇಗಾಲ ತಾಲೂಕಾಸ್ಪತ್ರೆ ಕುಂದುಕೊರತೆಗಳ ಆಗರವಾಗಿದೆ. ಇಲ್ಲಿ ಯಾವುದೇ ಸೌಲಭ್ಯವಿಲ್ಲ, ಸರಿಯಾದ ಚಿಕಿತ್ಸೆ ಕೊಡುತ್ತಿಲ್ಲ ಅಂತ ಅಸ್ವಸ್ಥರ ಸಂಬಂಧಿಕರು ವೈದ್ಯರೊಂದಿಗೆ ಗಲಾಟೆ ಮಾಡಿದ್ದಾರೆ. ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ರೋಗಿಗಳಲ್ಲಿ ಐವರನ್ನು ಶಿಫ್ಟ್ ಮಾಡಲಾಗಿದ್ದು, ಇನ್ನು 3 ಮಂದಿ ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶುಕ್ರವಾರ ಕೂಡ ಅಸ್ವಸ್ಥರನ್ನ ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಗಳು ಬಂದರೆ ಅಲ್ಲಿ ವೆಂಟಿಲೇಟರ್ ಇಲ್ಲ. ಅಂಬ್ಯುಲೆನ್ಸ್ ಸಿಬ್ಬಂದಿ ಬಲೂನ್ ಊದಿ ಅಸ್ವಸ್ಥಗೊಂಡವರಿಗೆ ಕೃತಕ ಉಸಿರಾಟ ನೀಡಿದ್ದರು. ನಂತರ ಹೇಗೋ ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ಕರೆತಂದರೆ ಅಲ್ಲಿ ಸ್ಟ್ರಕ್ಚರ್ ಇಲ್ಲ. ಕುಟುಂಬಸ್ಥರೇ ಹೆಗಲುಕೊಟ್ಟು ಅಸ್ವಸ್ಥರನ್ನು ವಾರ್ಡ್ ಒಳಗೆ ಸೇರಿಸಿದ್ದರು. ಇನ್ನು ಕೆಲವರನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

    ದೇವಾಲಯ:
    ಇನ್ನು ದುರಂತದ ಪರಿಣಾಮ ಇತಿಹಾಸದಲ್ಲೇ ಮೊದಲ ಬಾರಿಗೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ. ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

    ಪರಿಹಾರ:
    ವಿಷಯ ತಿಳಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ, ಸಚಿವ ಸಿಎಸ್ ಪುಟ್ಟರಾಜು ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಮಾಧಾನ ಹೇಳಿದ್ದಾರೆ. ಮೃತರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಸಿಎಂ, ದೇವಾಲಯದಲ್ಲಿ ಇಂತಹ ಘಟನೆ ನಡೆದರೆ ಯಾರನ್ನ ನಂಬುವುದು. ಯಾರೇ ಇಂತಹ ಘಟನೆಗಳ ಹಿಂದೆ ಇದ್ದರೂ ಕಠಿಣ ಕ್ರಮ ಜರುಗಿಸುತ್ತೇವೆ. ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ವೆಚ್ಚವನ್ನ ಸರ್ಕಾರ ಭರಿಸುತ್ತೆ. ಮರಣ ಹೊಂದಿರುವವರ ಅಂತ್ಯಕ್ರಿಯೆಗೆ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.

    https://www.youtube.com/watch?v=V_qoMhCwGNs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv