Tag: prasada

  • ಮಾರಮ್ಮನ ಪ್ರಸಾದ ಸೇವನೆಯಿಂದ 70 ಜನ ಅಸ್ವಸ್ಥ

    ಮಾರಮ್ಮನ ಪ್ರಸಾದ ಸೇವನೆಯಿಂದ 70 ಜನ ಅಸ್ವಸ್ಥ

    ಮಂಡ್ಯ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.ಪ್ರಸಾದ ಸೇವನೆ ಬಳಿಕ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿದ 60 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. 60 ಜನರ ಪೈಕಿ ಐವರು ತೀವ್ರ ಸುಸ್ತಿನಿಂದ ಬಳಲಿದ್ದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ ಟಿಕಾಣಿ ಹೂಡಿ ಅಸ್ವಸ್ಥರಿಗೆ ಚಿಕಿತ್ಸೆ ನೀಡ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಲಿಂಗಪಟ್ಟಣ ಗ್ರಾಮದ ಡಾ.ಮಲ್ಲೇಶ್ ಗ್ರಾಮದೇವತೆ ಮಾರಮ್ಮನ ಹರಕೆ ತೀರಿಸಲು ಪೂಜೆ ಹಮ್ಮಿಕೊಂಡಿದ್ದರು. ಇಂದು ತಮ್ಮನ ಮದುವೆಯಿದ್ದ ಕಾರಣ ನೆನ್ನೆಯೇ ದೇವರಿಗೆ ಪ್ರಬಾಳೆ ಉಡುಗೊರೆ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಮಲ್ಲೇಶ್, 200ಜನರಿಗೆ ಪುಳಿಯೊಗೊರೆ ಪ್ರಸಾದ ಮಾಡಿಸಿದ್ದಾರೆ. ಪೂಜೆ ಬಳಿಕ ಅರ್ಚಕರು ಪ್ರಸಾದ ಹಂಚಿಸಿದ್ದು. ಗ್ರಾಮದ 60ಕ್ಕೂ ಹೆಚ್ಚು ಜನ ಪ್ರಸಾದ ಸ್ವೀಕರಿಸಿದ್ದಾರೆ. 10 ರಿಂದ 60 ವರ್ಷದ ವರೆಗಿನವರು ಪ್ರಸಾದ ಸೇವಿಸಿದ್ದು, ರಾತ್ರಿ ವೇಳೆಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ-ಭೇದಿ ಶುರುವಾಗಿದೆ. ತಕ್ಷಣವೇ 25ಮಂದಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಸ್ವಸ್ಥರೆಲ್ಲರೂ ಒಂದೇ ಗ್ರಾಮದವರಾಗಿದ್ದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ತಕ್ಷಣವೇ ಗ್ರಾಮದಲ್ಲಿ ಕ್ಯಾಂಪ್ ಹಾಕಿದೆ. ಬಳಿಕ ಪ್ರಸಾದ ಸ್ವೀಕರಿಸಿದವರೆಲ್ಲರನ್ನು ತಪಾಸಣೆಗೊಳಪಡಿಸಿದ್ದು. ಎಲ್ಲರಿಗೂ ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ. ತೀವ್ರ ಸುಸ್ತಿನಿಂದ ಬಳಲುತ್ತಿದ್ದ ಐವರನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ಪ್ರಸಾದದ ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿದೆ. ಫುಡ್ ಪಾಯ್ಸನ್ ನಿಂದ ಈ ಘಟನೆ ನಡೆದಿರಬಹುದು ಎಂದು ಡಿಎಚ್‍ಒ ಹೇಳಿದ್ದಾರೆ.

    ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದು. ಘಟನೆಯಿಂದ ಆತಂಕಗೊಂಡಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಮಂಡ್ಯ ಎಸ್‍ಪಿ ಪರಶುರಾಮ್, ಯಾರಾದರೂ ಈ ಬಗ್ಗೆ ದೂರು ನೀಡಿದರೆ ತನಿಖೆ ಮಾಡೋದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ಫುಡ್‍ಪಾಯ್ಸನ್ ಎನಿಸಿದ್ದು. ಪ್ರಸಾದದ ಸ್ಯಾಂಪಲ್ ಟೆಸ್ಟ್ ಬಂದ ಬಳಿಕವೇ ಅಸಲಿ ಕಾರಣ ಹೊರಬೀಳಬೇಕಿದೆ.

  • ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ

    ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ

    ಮಂಗಳೂರು: ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಮಂಗಳೂರಿನ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಅರ್ಚಕರು ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಗೆ ಕಳುಹಿಸಿದ್ದಾರೆ.

    ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನದಲ್ಲಿ ಕಳೆದ ಸೋಮವಾರ ಷಷ್ಠಿ ಮಹೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಸುಮಾರು 25 ಸಾವಿರ ಭಕ್ತರು ಈ ಷಷ್ಠಿ ಮಹೋತ್ಸವದಲ್ಲಿ ಭಾಗಿಯಾಗಿದ್ದರಿಂದ ಸ್ಥಳೀಯ ಮೂಡಬಿದ್ರೆ ಪೊಲೀಸರು ಸಂಪೂರ್ಣ ಭದ್ರತೆ ನೀಡಿದ್ದು, ಶಾಂತಿ ಸುವ್ಯವಸ್ಥೆಗೆ ಸಕಲ ಬಂದೋಬಸ್ತ್ ನಡೆಸಿದ್ದರು.

    ದೇವಸ್ಥಾನದ ಒಳಾಂಗಣದಲ್ಲಿ ಭಕ್ತರ ಜನ ಸಂದಣಿಯನ್ನು ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ದಲಿತ ಸಮುದಾಯದವರು ಎಂದು ಗೊತ್ತಾಗಿದ್ದೇ ತಡ, ಅಲ್ಲಿನ ಅರ್ಚಕ ವೃಂದದವರು ತಕ್ಷಣ ಆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳಿಸಿದ್ದಾರೆ. ಪಾರ್ಕಿಂಗ್ ಸ್ಥಳದಲ್ಲಿ ಬಂದೋ ಬಸ್ತ್ ಮಾಡಿ, ದೇವಸ್ಥಾನದ ಒಳಗೆ ನಿಮ್ಮನ್ನು ಬಿಟ್ಟದ್ದು ಯಾರು? ಕ್ಷೇತ್ರಕ್ಕೆ ನಿಮ್ಮಿಂದ ಮೈಲಿಗೆಯಾಗಿದೆ ಎಂದು ಸಾವಿರಾರು ಭಕ್ತರ ಮುಂದೆಯೇ ಅವಮಾನಿಸಿ ಹೊರಗಡೆ ಕಳುಹಿಸಿದ್ದಾರೆ.

    ಇದನ್ನು ಕೆಲವರು ವಿರೋಧಿಸಿದರೂ ಅರ್ಚಕ ವೃಂದ ಕ್ಯಾರೇ ಎನ್ನದೆ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ್ದಾರೆ. ಮಾತ್ರವಲ್ಲದೆ ಭೋಜನ ವ್ಯವಸ್ಥೆಯಲ್ಲೂ ತಾರತಮ್ಯ ನಡೆಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಪೂಜೆ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದ್ದು, ಅವರು ಊಟ ಮಾಡಿದ ನಂತರ ಉಳಿದ ಜಾತಿಯ ಭಕ್ತರಿಗೆ ಊಟ ನೀಡಲಾಗಿದೆ.

    ಸಹಪಂಕ್ತಿ ಭೋಜನದ ವ್ಯವಸ್ಥೆ ಆಗಬೇಕೆಂದು ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರೂ ಒತ್ತಾಯ ಮಾಡುತ್ತಿದ್ದರೂ ಈ ಕ್ಷೇತ್ರದಲ್ಲಿ ಇಂತಹ ಜಾತಿ ಆಧಾರದಲ್ಲಿ ಭೋಜನ ವ್ಯವಸ್ಥೆ ಮಾಡೋದು ಇಂದಿಗೂ ಜೀವಂತವಾಗಿ ಉಳಿದಿದೆ. ಮಾತ್ರವಲ್ಲದೆ ದೇವಳಕ್ಕೆ ಬರುವ ಭಕ್ತರನ್ನು ಇಲ್ಲಿನ ಅರ್ಚಕ ವೃಂದ ಜಾತಿ ಆಧಾರದಲ್ಲಿ ಗುರುತಿಸಿ ಸದಾ ಹೀಯಾಳಿಸುತ್ತಿರುವುದು ಭಕ್ತರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ಭಕ್ತರು ನೀಡುವ ಕಾಣಿಕೆ ಹಣಕ್ಕೆ ಯಾವುದೇ ಜಾತಿಯನ್ನು ನೋಡದೆ ಕಾಣಿಕೆ ಸಂಗ್ರಹಿಸುವ ಅರ್ಚಕರು, ಕ್ಷೇತ್ರ ಪ್ರವೇಶ, ಭೋಜನ ವ್ಯವಸ್ಥೆಗೆ ಜಾತಿ ಆಧಾರದಲ್ಲಿ ನೋಡುವುದು ಸರಿಯಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೋಟೇಲಿನಲ್ಲಿ ಪೊಲೀಸರ ಊಟ
    ಷಷ್ಠಿ ಮಹೋತ್ಸವದ ಸಂದರ್ಭ ಸುವ್ಯವಸ್ಥೆಗೆ ನಿಯೋಜನೆಗೊಂಡ ತಮ್ಮ ಸಹದ್ಯೋಗಿ ದಲಿತ ಮಹಿಳಾ ಸಿಬ್ಬಂದಿಗೆ ಅವಮಾನ ಮಾಡಿದ ದೇವಸ್ಥಾನದ ಅರ್ಚಕ ವೃಂದದ ನಡೆಯಿಂದ ಹಾಗೂ ಭೋಜನದಲ್ಲೂ ಪಂಕ್ತಿ ಭೇದ ಮಾಡಿದ ಅರ್ಚಕರ ವರ್ತನೆಯಿಂದ ಕರ್ತವ್ಯನಿರತ ಎಲ್ಲ ಪೊಲೀಸರು ಸ್ಥಳೀಯ ಹೋಟೇಲ್‍ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದರು. ದೇವಸ್ಥಾನದಲ್ಲಿ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರೂ ಈ ಘಟನೆಯಿಂದ ಆಕ್ರೋಶಗೊಂಡ ಸ್ವಾಭಿಮಾನಿ ಭಕ್ತರೂ ಕ್ಷೇತ್ರದ ಭೋಜನ ಸ್ವೀಕರಿಸದೇ ಅವರವರ ಮನೆಯಲ್ಲಿ ಊಟ ಮಾಡಿದ್ದು, ಅರ್ಚಕ ವೃಂದದ ಕೃತ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.

  • ವಿವಿಧ ಹಣ್ಣುಗಳಿದ್ದರೂ ಮೊಸ್ರನ್ನ ತಿಂದು ಹೋದ ಕೋತಿ

    ವಿವಿಧ ಹಣ್ಣುಗಳಿದ್ದರೂ ಮೊಸ್ರನ್ನ ತಿಂದು ಹೋದ ಕೋತಿ

    – ನೆರೆದವರಲ್ಲಿ ಅಚ್ಚರಿ

    ಚಿಕ್ಕಮಗಳೂರು: ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು.

    ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ ಇಲ್ಲದೆ ಸ್ಥಳಕ್ಕೆ ಬಂದ ಕೋತಿ, ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಹೋಮ ಕುಂಡದ ಸುತ್ತಲೂ ಬಗೆಬಗೆಯ ಹಣ್ಣುಗಳಿದ್ದರೂ ಯಾವುದನ್ನೂ ತಿನ್ನದೆ ಪ್ರಸಾದ ಸೇವಿಸಿದೆ.

    ನಂತರ ಉದ್ಧರಣೆಯಿಂದ ನೀರು ನೀಡಿದಾಗ ಕೈ ತೊಳೆದುಕೊಂಡು ಯಾರಿಗೂ ತೊಂದರೆ ಕೊಡದೆ ಮನೆಯಿಂದ ಹೊರಹೋಗಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ನೆರೆದಿದ್ದವರು ಮಂಗ ಹಣ್ಣನ್ನ ಬಿಟ್ಟು ಮೊಸರನ್ನ ತಿಂದು ಕೈತೊಳೆದುಕೊಂಡು ವಾಪಸ್ಸಾಗಿದ್ದನ್ನು ಕಂಡು ಆಶ್ಚರ್ಯಕ್ಕೀಡಾಗಿದ್ದಾರೆ.

  • ದೇವರ ಪ್ರಸಾದ ಸೇವಿಸಿ 18ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

    ದೇವರ ಪ್ರಸಾದ ಸೇವಿಸಿ 18ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

    ತುಮಕೂರು: ದೇವಾಲಯದ ಹರಿಸೇವೆ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ನೀಡಿದ್ದ ದೇವರ ಪ್ರಸಾದ ಸೇವಿಸಿ 14ಕ್ಕೂ ಹೆಚ್ಚು ಭಕ್ತರು ಆಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶನಿವಾರ ಹರಿಸೇವೆ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ನಂತರ ಭಕ್ತರಿಗೆ ಅನ್ನ-ಸಾರು, ಪಲ್ಯ ವಿತರಣೆ ಮಾಡಲಾಗಿತ್ತು. ಪ್ರಸಾದ ಸೇವಿಸಿ ಮನೆಗೆ ತೆರಳಿದ ಭಕ್ತರು ಬೆಳಗಿನ ವೇಳೆಗೆ ಆಸ್ವಸ್ಥರಾಗಿದ್ದು, ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಭಕ್ತರು ಆಸ್ವಸ್ಥಗೊಂಡಿರುವುದಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೆಲ ತಿಂಗಳ ಹಿಂದೆ ಚಾಮರಾಜನಗರದ ಸುಳ್ವಾಡಿ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದ್ದರು. ಆ ಬಳಿಕ ಚಿಕ್ಕಬಳ್ಳಾಪುರ ಚಿಂತಾಮಣಿ ನಗರದಲ್ಲೂ ಇಂತಹದ್ದೇ ಘಟನೆ ವರದಿಯಾಗಿತ್ತು. ಸದ್ಯ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.

  • ಗಂಗಮ್ಮದೇವಿ ವಿಷ ಪ್ರಸಾದ ಪ್ರಕರಣ: ಸಿಸಿಟಿವಿ ದೃಶ್ಯವಾಳಿ ಆಧರಿಸಿ ಚುರುಕುಗೊಂಡ ತನಿಖೆ

    ಗಂಗಮ್ಮದೇವಿ ವಿಷ ಪ್ರಸಾದ ಪ್ರಕರಣ: ಸಿಸಿಟಿವಿ ದೃಶ್ಯವಾಳಿ ಆಧರಿಸಿ ಚುರುಕುಗೊಂಡ ತನಿಖೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಒರ್ವ ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಎಸ್‍ಪಿ, ಪ್ರಕರಣದಲ್ಲಿ ಇದುವರೆಗೂ ಮಹಿಳೆಯೊಬ್ಬರು ಮೃತ ಪಟ್ಟಿದ್ದು, ಇಬ್ಬರು ಮಕ್ಕಳು ಸೇರಿದಂತೆ 11 ಜನ ಅಸ್ವಸ್ಥರಾಗಿದ್ದಾರೆ. ಸದ್ಯ ಕೋಲಾರದ ಆರ್.ಎಲ್ ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ 6 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಪ್ರಸಾದ ನೀಡುತ್ತಿದ್ದ ಮಹಿಳೆ, ಪಕ್ಕದಲ್ಲಿ ಹೂ ಮಾರುತ್ತಿದ್ದ ಮಹಿಳೆಯರನ್ನ ವಿಚಾರಣೆ ನಡೆಸುತ್ತಿದ್ದೇವೆ. ದೇವಾಲಯದ ಅರ್ಚಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ದೇವಾಲಯದ ಪಕ್ಕದಲ್ಲೇ ಹೂ ಮಾರಾಟ ಮಾಡುತ್ತಿದ್ದ ವೃದ್ಧೆಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ವೃದ್ಧೆ ಅಮರಾವತಿ ಎಂಬ ಮಹಿಳೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಮಹಿಳೆಯ ಹುಡುಕಾಟ ನಡೆಸಿದ್ದಾರೆ. ಆದರೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಮಹಿಳೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಮಹಿಳೆ ಕೆಲಸ ಮಾಡುತ್ತಿದ್ದ ಹೋಟೆಲ್ ಬಳಿ ಪತಿಗೆ ಹುಷಾರಿಲ್ಲ ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

    ಪ್ರಸಾದ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯವನ್ನು ಶಾಸಕ ಜೆಕೆ ಕೃಷ್ಣಾರೆಡ್ಡಿ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿಗೆ ಮಾಹಿತಿ ನೀಡಿದ ಅವರು, ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉಳಿದವರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಅಸ್ವಸ್ಥರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದು, ಯಾವುದೇ ತೊಂದರೆ ಇಲ್ಲ. ಒಂದೇ ಕುಟುಂಬವನ್ನು ಗುರಿಯಾಗಿಸಿ ಕೃತ್ಯ ನಡೆಸಿರುವ ಹಾಗೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದ್ದರಿಂದ ಚಾಮರಾಜನಗರ ಪ್ರಕರಣಕ್ಕೆ ಇದು ಹೋಲಿಕೆ ಆಗುತ್ತಿಲ್ಲ. ವೈಯಕ್ತಿಕ ದ್ವೇಷದ ಮೇಲೆ ನಡೆದಿರುವ ಶಂಕೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    https://www.youtube.com/watch?v=PRlm9tre_DY

    https://www.youtube.com/watch?v=5ev4AgezPd4

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಟ್ಟಾದ ವಿದ್ಯಾರ್ಥಿನಿಯರಿಗೂ ಪ್ರಸಾದಕ್ಕೆ ವ್ಯವಸ್ಥೆ ಮಾಡಿದ್ರು ಸಿದ್ದಗಂಗಾ ಶ್ರೀಗಳು

    ಮುಟ್ಟಾದ ವಿದ್ಯಾರ್ಥಿನಿಯರಿಗೂ ಪ್ರಸಾದಕ್ಕೆ ವ್ಯವಸ್ಥೆ ಮಾಡಿದ್ರು ಸಿದ್ದಗಂಗಾ ಶ್ರೀಗಳು

    ಬೆಂಗಳೂರು: ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳ ಕುರಿತ ಅನೇಕ ಬರಹಗಳನ್ನು ಜನರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇಂತದ್ದೆ ಒಂದು ಪೋಸ್ಟ್ ಒಂದು ಸಿದ್ದಗಂಗಾ ಶ್ರೀಗಳು ಮಹಿಳೆಯರ ಬಗ್ಗೆ ಹೊಂದಿದ್ದ ಕಾಳಜಿ, ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದೆ.

    ರಂಗಕರ್ಮಿ ಸುಷ್ಮಾ ರಾವ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸಿದ್ದಗಂಗಾ ಶ್ರೀಗಳು ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇದನ್ನು ಓದಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀಗಳಿಗೆ ಗೌರವ ಸಲ್ಲಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?:
    ನಾನು 13 ವರ್ಷದವಳಿದ್ದಾಗ ಶಿವಗಂಗೆಗೆ ಶಾಲಾ ಪ್ರವಾಸಕ್ಕೆ ಹೋಗಿದ್ದೇವು. ಅಲ್ಲಿಂದ ಮರಳುವಾಗ ನಮಗೆ ಸಿದ್ದಗಂಗಾ ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಠವನ್ನು ತಲುಪಿ ಪ್ರಸಾದ ಗೃಹಕ್ಕೆ ಹೋಗುವ ಮುನ್ನ ನಾನು ಹಾಗೂ ಕೆಲ ವಿದ್ಯಾರ್ಥಿನಿಯರು ನಮಗೆ ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದೆವು. ನಾವು ಪ್ರಸಾದ ಗೃಹದ ಹೊರಗೆ ನಿಂತಿದ್ದನ್ನು ನೋಡಿದ ಕೇಸರಿ ಬಟ್ಟೆ ಉಟ್ಟ ವೃದ್ಧ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು, ನೀವು ಇಲ್ಲಿ ಏಕೆ ನಿಂತಿದ್ದೀರಿ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿನಿಯರು, ನಾವು ಮುಟ್ಟಿನ ದಿನಗಳಲ್ಲಿದ್ದೇವೆ. ಹೀಗಾಗಿ ನಮಗೆ ಪ್ರತ್ಯೇಕವಾಗಿ ಪ್ರಸಾದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕೇಳಿದ್ದೇವೆ ಎಂದು ತಿಳಿಸಿದ್ದೆವು.

    ನಮ್ಮ ಮಾತು ಕೇಳಿದ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿ, ಇದು ಮಹಿಳೆಯರ ಸಹಜ ದೈಹಿಕ ಕ್ರಿಯೆ. ಇದಕ್ಕೆ ನೀವು ನಾಚಿಕೊಳ್ಳಬೇಕಿಲ್ಲ, ಹಿಂಜರಿಯಬೇಡಿ ಎಂದು ಹೇಳಿ, ಎಲ್ಲರೊಡನೆ ಪ್ರಸಾದಕ್ಕೆ ಕೂರುವಂತೆ ತಿಳಿಸಿದರು.

    ನಿಮ್ಮ ದೇಹದ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದು ಶ್ರೀಗಳು ನಗುವಿನ ಮೂಲಕ ಹೇಳಿದರು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ನಾನು ಕೇಳಿದಾಗ ಅವರು ನಡೆದಾಡುವ ದೇವರು, ಶ್ರೀ ಶಿವಕುಮಾರಸ್ವಾಮೀಜಿ ಎನ್ನುವುದು ತಿಳಿಯಿತು. ಸಿದ್ದಗಂಗಾ ಶ್ರೀಗಳು ಅನೇಕರಿಗೆ ಆದರ್ಶವಾಗಿರುವುದು ಇಂತಹ ವಿಚಾರಗಳಿಗೆ ಎಂದು ಸುಷ್ಮಾ ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ – ಪ್ರಸಾದಕ್ಕೂ ಎಕ್ಸ್ ಪೈರಿ ಡೇಟ್

    ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ – ಪ್ರಸಾದಕ್ಕೂ ಎಕ್ಸ್ ಪೈರಿ ಡೇಟ್

    ಬೆಂಗಳೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಘಟನೆ ನಂತರ ಎಚ್ಚೆತ್ತ ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

    ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮ ಪ್ರಕಾರ ‘ಎಕ್ಸ್ ಪೈರಿ ಡೇಟ್’ ನಮೂದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?

    ಮುಜರಾಯಿ ಇಲಾಖೆ ದೇವಾಲಯಗಳು ಸೇರಿದಂತೆ ಎಲ್ಲಾ ಖಾಸಗಿ ದೇವಾಲಯಗಳು ಹಾಗೂ ಮಠಗಳಿಗೂ ಈ ನಿಯಮ ಅನ್ವಯವಾಗಲಿದೆ. ಪ್ರಸಾದದ ಮೇಲೆ ಏನೆಲ್ಲಾ ನಮೂದಾಗಬೇಕು ಅನ್ನೋದನ್ನು ನೋಡೋದಾದರೆ,

    * ಪ್ರಸಾದದ ಪ್ಯಾಕೆಟ್‍ನಲ್ಲಿ ದೇವಾಲಯ ಹೆಸರು
    * ತಯಾರಾದ ದಿನಾಂಕ
    * ಬ್ಯಾಚ್ ನಂಬರ್
    * ತೂಕ
    * ಬಳಕೆಯ ಅವಧಿ(ಎಕ್ಸ್ ಪೈರಿ ಡೇಟ್, ಯೂಸ್ ಬಿಫೋರ್, ಬೆಸ್ಟ್ ಬಿಫೋರ್)
    * ಪ್ರಸಾದಕ್ಕೆ ಬಳಸಿರುವ ಪದಾರ್ಥ

    ಇದು ಕೇವಲ ದೇವಾಲಯ ಪ್ರಸಾದಕ್ಕೆ ಮಾತ್ರವಲ್ಲದೇ ತೀರ್ಥದ ಬಾಟಲ್‍ಗೂ ಈ ನಿಯಮ ಅನ್ವಯವಾಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿದ್ದಾರೆ. ಇನ್ನೂ 60ಕ್ಕೂ ಮಂದಿಗೂ ಹೆಚ್ಚಿನ ಭಕ್ತರು ಅಸ್ವಸ್ಥರಾಗಿದ್ದು, ಮೈಸೂರು ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

    ಈ ಹಿಂದೆಯೇ ಮುಜರಾಯಿ ಇಲಾಖೆ, ದೇವರ ನೈವೇದ್ಯ ಮತ್ತು ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಪ್ರಮುಖವಾಗಿ ದೇವಾಲಯದ ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವುದು. ತಯಾರಿಸಿದ ನೈವೇದ್ಯ/ ಅಡುಗೆಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು ಮತ್ತು ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಈ ರೀತಿಯ ಅನೇಕ ನಿಯಮಗಳನ್ನು ಕಡ್ಡಾಯ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ದುರಂತ – ಡಿಸ್ಚಾರ್ಜ್ ಆಗಿದ್ದವರು ತಡರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲು

    ಸುಳ್ವಾಡಿ ವಿಷ ದುರಂತ – ಡಿಸ್ಚಾರ್ಜ್ ಆಗಿದ್ದವರು ತಡರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಚಾರ್ಜ್ ಆದ ಅಸ್ವಸ್ಥರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವಿಷಪ್ರಸಾದ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅಸ್ವಸ್ಥರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಅವರಿಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಡರಾತ್ರಿ ಮೂವರು ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಎಂ.ಜಿ.ದೊಡ್ಡಿ ನಿವಾಸಿಗಳಾದ ಪಳನಿಯಮ್ಮ, ಮಾದಮ್ಮ ಮತ್ತು ಮಾದ ಆಸ್ಪತ್ರೆಗೆ ದಾಖಲಾಗಿರುವ ಅಸ್ವಸ್ಥರು.

    ಈ ಮೂವರು ಡಿಸೆಂಬರ್ 20 ರಂದು ಮೈಸೂರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ವೈದ್ಯರು ಪರೀಕ್ಷೆ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಒಂದು ವೇಳೆ ಆರೋಗ್ಯದಲ್ಲಿ ಮತ್ತೆ ಏರುಪೇರಾದರೆ ಮೈಸೂರಿಗೆ ಕರೆತರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

    ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿದ್ದು, ಇನ್ನೂ ಅನೇಕರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ನಾಲ್ವರು ಆರೋಪಿಗಳಾದ ಇಮ್ಮಡಿ ಮಹದೇವ ಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಇವರನ್ನು ಮೈಸೂರು ಜೈಲಿಗೆ ಕಳುಹಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಚಾಮರಾಜನಗರ: ಸುಳ್ವಾಡಿ ದೇವಾಲಯರ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಅಂಬಿಕಾ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ಅಂಬಿಕಾ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ.

    ಪ್ರಮುಖ ಆರೋಪಿಗಳಾದ ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಮೂವರು ಆರೋಪಿಗಳೊಂದಿಗೆ ಪೊಲೀಸರು ಸ್ಥಳ ಮಹಜರು ಮಾಡಲು ಹೋಗಿದ್ದರು. ಅಲ್ಲಿವರೆಗೂ ಅಂಬಿಕಾ ಸುಮ್ಮನಿದ್ದಳು. ಆದರೆ ಮನೆಗೆ ಹೋಗಿ ಮಹಜರ್ ಮಾಡಿ ವಾಪಸ್ ಬರುವಾಗ ಹೊರಗಡೆ ಜಮಾಸಿದ್ದ ಜನರನ್ನು ನೋಡಿ ಈ ವೇಳೆ 2ನೇ ಆರೋಪಿ ಅಂಬಿಕಾ ಡ್ರಾಮ ಮಾಡಿದ್ದಾಳೆ.

    ಮನೆಯ ಬಳಿ ಪೊಲೀಸರನ್ನು ಕಂಡು ಅಂಬಿಕಾ ರೇಗಾಡಿದ್ದು, ಪೊಲೀಸರು ನಂಗೆ ಮೋಸ ಮಾಡಿದ್ದಾರೆ ಎಂದು ಕೂಗಾಡಿದ್ದಾಳೆ. ಆಗ ಪೊಲೀಸ್ ಮಹಿಳಾ ಪೇದೆ ಅಂಬಿಕಾಳಿಗೆ ಮೊಟಕಿದ್ದು, ಬಲವಂತವಾಗಿ ಆಕೆಯನ್ನು ಕರೆದುಕೊಂಡು ಬರುತ್ತಿದ್ದರು. ಪೊಲೀಸರು ನಮ್ಮ ಮನೆಯ ಬೀಗ ತೆಗೆದುಕೊಂಡು ಅವರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ. ನಾನು ಪೊಲೀಸರನ್ನು ನಂಬಿದ್ದೆ. ಆದರೆ ಈಗ ಪೊಲೀಸ್ ಇಲಾಖೆ ಮೋಸ ಮಾಡಿದೆ. ನಾನು ಸಿಸಿಬಿಗೆ ಕೇಸ್ ಒಪ್ಪಿಸುತ್ತೇನೆ ಎಂದು ಅಂಬಿಕಾ ಕೂಗಾಡಿದ್ದಾಳೆ.

    ಅಂಬಿಕಾ ಮನೆಯನ್ನು ಮಹಜರ್ ಮಾಡುವಾಗ ಆಕೆಯ ಮನೆಯಲ್ಲಿ ವಿಷದ ಬಾಟೆಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ವಿಚಾರಣೆ ವೇಳೆ ಆರೋಪಿ ಅಂಬಿಕಾ, ನಾವೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಳು. ಆದರೆ ಮನೆಗೆ ಹೋಗೋವರೆಗೂ ಸುಮ್ಮನಿದ್ದ ಅಂಬಿಕಾ ಜನರನ್ನು ನೋಡಿದ ತಕ್ಷಣ ಅವರ ಮುಂದೆ ಮತ್ತೆ ಒಳ್ಳೆಯವಳಾಗಲೂ ಪೊಲೀಸರ ಮೇಲೆಯೇ ರೇಗಾಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತದಿಂದ ಎಚ್ಚೆತ್ತುಕೊಳ್ಳುತ್ತಿರುವ ದೇವಾಲಯಗಳು – ಪ್ರಸಾದ ತಯಾರಿಕಾ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ

    ಸುಳ್ವಾಡಿ ದುರಂತದಿಂದ ಎಚ್ಚೆತ್ತುಕೊಳ್ಳುತ್ತಿರುವ ದೇವಾಲಯಗಳು – ಪ್ರಸಾದ ತಯಾರಿಕಾ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ

    ಮೈಸೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕ್ರಿಮಿನಾಶಕ ಪ್ರಕರಣದಿಂದ ಎಚ್ಚೆತ್ತುಕೊಂಡ ಜಿಲ್ಲೆಯ ಇತರೆ ದೇವಾಲಯಗಳು ಪ್ರಸಾದ ತಯಾರಿಸುವ ಸ್ಥಳದಲ್ಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.

    ದೇವರಾಜ ಮೊಹಲ್ಲಾದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅಡುಗೆ ತಯಾರಿಕಾ ಸ್ಥಳದಲ್ಲಿ 3 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಗುರುವಾರದಿಂದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಡೆಯುತ್ತಿದೆ. ಆದರಿಂದ ಭಕ್ತರಿಗಾಗಿ ದೇವಾಲಯದಲ್ಲಿಯೇ ಪ್ರಸಾದವನ್ನು ತಯಾರಿಸಲಾಗುತ್ತಿದೆ.

    ದೇವಾಲಯದ ಅಧಿಕಾರಿಗಳು ಪ್ರಸಾದ ತಯಾರಿಕೆ ಮಾಡುತ್ತಿರುವ ಒಳಾವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲಾಗಿದ್ದು, ಯಾವುದೇ ತಪ್ಪು ನಡೆಯದಂತೆ ನಿಗಾವಹಿಸುತ್ತಿದ್ದಾರೆ.

    ಆದೇಶದಲ್ಲಿ ಏನಿದೆ?
    ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ನೀಡಿದ್ದ ವಿಷ ಪ್ರಸಾದ ಸೇವಿಸಿ 14 ಮಂದಿ ಸಾವನ್ನಪ್ಪಿದ ಬಳಿಕ ಎಚ್ಚೆತ್ತಿರುವ ರಾಜ್ಯ ಮುಜರಾಯಿ ಇಲಾಖೆ, ದೇವಾಲಯಗಳಲ್ಲಿ ಅನ್ನದಾಸೋಹ, ಪ್ರಸಾದ ವಿತರಣೆಗೆ ಸ್ಥಳೀಯ ಅಧಿಕಾರಿಗಳ ಅನುಮತಿ ಕಡ್ಡಾಯ ಎಂಬ ಖಡಕ್ ಆದೇಶವನ್ನು ಹೊರಡಿಸಿತ್ತು.

    ದೇವರ ನೈವೇದ್ಯ ಮತ್ತು ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿ ಟಿವಿ ಅಳವಡಿಕೆಯೂ ಕೂಡ ಕಡ್ಡಾಯ. ಪ್ರಮುಖವಾಗಿ ದೇವಾಲಯದ ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವುದು.

    ತಯಾರಿಸಿದ ನೈವೇದ್ಯ/ ಅಡುಗೆಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು. ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕರಿಗಳು ಪರಿಶೀಲನೆ ನಡೆಸಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ನೀಡುವ ಪ್ರಸಾದಕ್ಕೆ ಆರೋಗ್ಯಾಧಿಕಾರಿಯಿಂದ ಅನುಮತಿ ಪಡೆದ ಮೇಲೆಯೇ ವಿತರಣೆ ಮಾಡಬೇಕು.

    ದೇವಾಲಯದ ಪರಿಸರದಲ್ಲಿ ಭಕ್ತಾದಿಗಳೇ ಪ್ರಸಾದ ತಯಾರಿಸಿ ನೇರವಾಗಿ ಭಕ್ತರಿಗೆ ನೀಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆ ಒಳಪಡಿಸಿ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಇಲಾಖೆ ನೀಡಿದ ನಿಯಮಗಳನ್ನು ಆಯಾ ದೇವಾಲಯ ಸಂಸ್ಥೆಗಳು ಪಾಲಿಸಬೇಕು ಎಂದು ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv