Tag: Pranita

  • ಚಿರು, ಸುಶಾಂತ್ ನೆನಪಿನಲ್ಲಿ ಮಾನವೀಯತೆ ಮೆರೆದ ಪ್ರಣಿತಾ

    ಚಿರು, ಸುಶಾಂತ್ ನೆನಪಿನಲ್ಲಿ ಮಾನವೀಯತೆ ಮೆರೆದ ಪ್ರಣಿತಾ

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮತ್ತು ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ನಟಿ ಪ್ರಣಿತಾ ಬಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ನಟಿ ಪ್ರಣಿತಾ ಸುಭಾಷ್ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಪದಾರ್ಥಗಳು, ರೇಷನ್ ಮುಂತಾದವುಗಳನ್ನು ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಇದೀಗ ಮತ್ತೆ ನೂರಾರು ಬಡ ಮಹಿಳೆಯರಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ ರೇಷನ್ ಕಿಟ್ ಹಂಚಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನಟಿ “ದೇವರಿಗೆ ಹತ್ತಿರವಾಗಿರುವ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ನೆನಪಲ್ಲಿ ನಾವು ಕಷ್ಟದಲ್ಲಿರುವವರಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ 150ಕ್ಕೂ ಹೆಚ್ಚು ರೇಷನ್ ಕಿಟ್‍ಗಳು ಮತ್ತು ಸ್ಯಾನಿಟರಿ ಪ್ಯಾಡ್‍ಗಳನ್ನು ಹಂಚಿದ್ದೇವೆ” ಎಂದು ಪ್ರಣಿತಾ ತಿಳಿಸಿದ್ದಾರೆ.

    ಅಲ್ಲದೇ ತಮಗೆ ಪ್ರೇರಣೆಯಾದ ವ್ಯಕ್ತಿಯ ಬಗ್ಗೆಯೂ ತಿಳಿಸಿದ್ದಾರೆ. ಸುಧಾ ಮೂರ್ತಿ ಅವರು ಸದಾ ಸಮಾಜದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗುತ್ತಾರೆ. ಹೀಗಾಗಿ ಸುಧಾ ಮೂರ್ತಿ ಅವರೇ ನನಗೆ ಪ್ರೇರಣೆ. ಅವರ ಮಾರ್ಗದಲ್ಲೇ ಕೆಲ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದಾರೆ.

    ಭಾರತೀಯ ಚಿತ್ರರಂಗದ ಇಬ್ಬರು ಜನಪ್ರಿಯರು ತಾರೆಯರು ಅಗಲಿದ್ದಾರೆ. ಜೂನ್ 7 ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ತಮ್ಮ ಅಪಾರ್ಟ್ ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಫೌಂಡೇಷನ್ ಮೂಲಕ ನಟಿ ಪ್ರಣಿತಾ ನೂರಾರು ಬಡ ಮಹಿಳೆಯರಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ ರೇಷನ್ ಕಿಟ್ ಹಂಚಿದ್ದಾರೆ.

    ನಟಿ ಪ್ರಣಿತಾ ಲಾಕ್‍ಡೌನ್ ಜಾರಿಯಾದಾಗಿನಿಂದಲೂ ಬಡವರಿಗೆ, ಕಷ್ಟದಲ್ಲಿರುವವರಿಗೆ, ಸಹಾಯ ಮಾಡುತ್ತಲೇ ಬಂದಿದ್ದಾರೆ. ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದ್ದರು.