Tag: Pranav Singh

  • ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಡ್ಯಾನ್ಸ್- ಶಾಸಕನನ್ನು ಉಚ್ಚಾಟಿಸಿದ ಬಿಜೆಪಿ

    ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಡ್ಯಾನ್ಸ್- ಶಾಸಕನನ್ನು ಉಚ್ಚಾಟಿಸಿದ ಬಿಜೆಪಿ

    ಡೆಹ್ರಾಡೂನ್: ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ಉತ್ತರಾಖಂಡ್‍ನ ಶಾಸಕ ಪ್ರಣವ್ ಸಿಂಗ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ಅವರು, ಪ್ರಣವ್ ಸಿಂಗ್ ನಿರಂತರವಾಗಿ ದುರ್ನಡತೆ ತೋರುತ್ತಾ ಬಂದಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದೇವೆ ಎಂದು ತಿಳಿಸಿದರು.

    ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮದ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ್ದರು. ಪ್ರಣವ್ ಸಿಂಗ್ ಅವರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕುರಿತು ಎಚ್ಚರ ವಹಿಸಿದ್ದರು. ತಕ್ಷಣವೇ ಗನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತನಿಖೆ ನಡೆಸಿದ್ದರು. ಈ ಘಟನೆಯಿಂದ ಮುಜುಗುರಕ್ಕೆ ಈಡಾಗಿದ್ದ ಬಿಜೆಪಿ ಸಹ ಖಂಡನೆ ವ್ಯಕ್ತಪಡಿಸಿದ್ದು, ಪ್ರಣವ್ ಸಿಂಗ್ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿತ್ತು.

    ನಾನು ಈ ವಿಡಿಯೋವನ್ನು ಗಮನಿಸಿದ್ದು, ಶಾಸಕ ಪ್ರಣವ್ ಸಿಂಗ್ ಇಂತಹ ವರ್ತನೆಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಹೀಗಾಗಿಯೇ ಈ ಹಿಂದೆ ಮೂರು ತಿಂಗಳುಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಘಟನೆ ಕುರಿತು ಉತ್ತರಾಖಂಡ್ ರಾಜ್ಯ ಬಿಜೆಪಿ ಜೊತೆ ಮಾತನಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ತಿಳಿಸಿದ್ದರು.

    ತಮ್ಮ ನಡತೆಯನ್ನು ಸಮರ್ಥಿಸಿಕೊಂಡಿದ್ದ ಶಾಸಕ ಪ್ರಣವ್ ಸಿಂಗ್, ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನಾನು ಗುಂಡುಗಳನ್ನು ಲೋಡ್ ಮಾಡದ ಗನ್ ಹಿಡಿದುಕೊಂಡಿದ್ದೆ. ಮನೆಯಲ್ಲಿ ಪಾರ್ಟಿ ಮಾಡುವುದು, ಕುಡಿಯುವುದು ತಪ್ಪೇ ಎಂದು ಪ್ರಶ್ನಿಸಿದ್ದರು.