Tag: pranab mukherjee

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ನಿನ್ನೆಯಿಂದ ತೀರಾ ಹದಗೆಟ್ಟಿದ್ದು, ಕೋಮಾದಲ್ಲಿದ್ದಾರೆ ಎಂದು ಸೇನಾ ಆಸ್ಪತ್ರೆ ತಿಳಿಸಿದೆ.

    ಪ್ರಣಬ್ ಅವರ ಆರೋಗ್ಯದ ಸ್ಥಿತಿಗತಿ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆರ್ಮಿ ಆಸ್ಪತ್ರೆ, ಪ್ರಣಬ್ ಮುಖರ್ಜಿ ಅವರು ಆಸ್ಪತ್ರೆಗೆ ದಾಖಲಾಗಿ 20 ದಿನಗಳಾಗಿದ್ದು, ಕೋಮಾ ಹಂತವನ್ನು ತಲುಪಿದ್ದಾರೆ. ಶ್ವಾಸಕೋಸದ ಸೋಂಕಿ(ಲಂಗ್ ಇನ್ಫೆಕ್ಷನ್)ನಿಂದಾಗಿ ಅವರು ಸೆಪ್ಟಿಕ್ ಶಾಕ್‍ಗೆ ಒಳಗಾಗಿದ್ದಾರೆ. ಹೀಗಾಗಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

    ನಿನ್ನೆಯಿಂದ ಪ್ರಣಬ್ ಆರೋಗ್ಯದಲ್ಲಿ ಮತ್ತಷ್ಟು ಕುಸಿತ ಕಂಡಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಅವರು ಕೋಮಾದಲ್ಲಿದ್ದು, ವೆಂಟಿಲೇಟರ್‍ನಲ್ಲಿರಿಸಲಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

    84 ವರ್ಷದ ಪ್ರಣಬ್ ಮುಖರ್ಜಿ, ಆಗಸ್ಟ್ 10ರಂದು ದೆಹಲಿ ಕಂಟೋನ್ಮೆಂಟ್‍ನ ಆರ್ಮಿ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆದುಳು ಹೆಪ್ಪುಗಟ್ಟುವಿಕೆಯನ್ನು ತಡೆಯಲಾಗಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಕುರಿತು ನಿಗಾ ವಹಿಸಿದ್ದಾರೆ.

    ಪ್ರಣಬ್ ಮುಖರ್ಜಿ ಅವರು ಆಸ್ಪತ್ರೆಗೆ ದಾಖಲಾದಾಗ ಕೊರೊನಾ ಸೋಂಕು ತಗುಲಿರುವುದು ಸಹ ಪತ್ತೆಯಾಗಿತ್ತು. ನಂತರ ಶ್ವಾಸಕೋಶದಲ್ಲಿ ಸೋಂಕು ಹಾಗೂ ಕಿಡ್ನಿ ನಿಷ್ಕ್ರಿಯತೆಯಿಂದ ಬಳಲುತ್ತಿದ್ದಾರೆ.

  • ತಂದೆಯ ಆರೋಗ್ಯ ಸ್ಥಿರವಾಗಿದೆ- ಪ್ರಣಬ್ ಮುಖರ್ಜಿ ಪುತ್ರ

    ತಂದೆಯ ಆರೋಗ್ಯ ಸ್ಥಿರವಾಗಿದೆ- ಪ್ರಣಬ್ ಮುಖರ್ಜಿ ಪುತ್ರ

    – ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆರೋಗ್ಯದಲ್ಲಿ ಸುಧಾರಣೆಯಾಗಿದೆ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಅವರ ಆರೋಗ್ಯ ಸುಧಾರಿಸುತ್ತಿದ್ದು, ಸ್ಥಿರವಾಗಿದ್ದಾರೆ ಎಂದು ಅವರ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಅಭಿಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅಭಿಜಿತ್ ಬ್ಯಾನರ್ಜಿ, ನಾನು ಆಸ್ಪತ್ರೆಗೆ ಭೇಟಿ ನೀಡಿದ್ದು, ದೇವರ ಆಶೀರ್ವಾದದಿಂದಾಗಿ ನಿಮ್ಮೆಲ್ಲರ ಹಾರೈಕೆಯಿಂದ ಈ ಹಿಂದಿನ ದಿನಗಳಿಗಿಂತ ಇದೀ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸ್ಥಿರವಾಗಿದ್ದಾರೆ. ಅಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವೇ ಅವರು ಮತ್ತೆ ನಮ್ಮನ್ನು ಸೇರಲಿದ್ದಾರೆ ಎಂದು ನಾವು ಬಲವಾಗಿ ನಂಬಿದ್ದೇವೆ ಎಂದು ತಿಳಿಸಿದ್ದಾರೆ.

    ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆ ಬಳಿಕ ಸೋಮವಾರ ರಾತ್ರಿಯಿಂದಲೇ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು. ನಂತರ ಚಿಕಿತ್ಸೆ ಮುಂದುವರಿಸಿದ್ದು, ವೆಂಟಿಲೇಟರ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಸ್ವತಃ ಮಾಜಿ ರಾಷ್ಟ್ರಪತಿಗಳೇ ಟ್ವೀಟ್ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾದೆ. ಇದೀಗ ವರದಿ ಪಾಸಿಟಿವ್ ಎಂದು ಬಂದಿದ್ದು, ಯಾರೂ ಆತಂಕ ಪಡಬೇಡಿ. ಹಾಗೆಯೇ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಪರೀಕ್ಷೆಗೆ ಒಳಗಾಗಿ, ಹೋಂ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದರು.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಗಂಭೀರ – ಪುತ್ರಿಯಿಂದ ಭಾವನಾತ್ಮಕ ಪತ್ರ

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಗಂಭೀರ – ಪುತ್ರಿಯಿಂದ ಭಾವನಾತ್ಮಕ ಪತ್ರ

    ನವದೆಹಲಿ : ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ, ಚಿಂತಾಜನಕ ಪರಿಸ್ಥಿತಿ ಮುಂದುವರಿದಿದೆ ಎಂದು ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಪ್ರಣಬ್ ಮುಖರ್ಜಿ ಪುತ್ರಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

    ಸದ್ಯ ಪ್ರಣಬ್ ಮುಖರ್ಜಿ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಚಿಕಿತ್ಸೆ ಪೂರಕವಾದ ಸ್ಪಂದನೆ ಪೂರ್ಣ ಪ್ರಮಾಣದಲ್ಲಿ ದೊರಕುತ್ತಿಲ್ಲ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಆರೋಗ್ಯ ವರದಿಯಲ್ಲಿ ಉಲ್ಲೇಖಿಸಿದೆ.

    ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿ ಟ್ವಿಟರ್ ನಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ದೇವರು ಉತ್ತಮ ಮಾರ್ಗವನ್ನೇ ತೋರಿಸುತ್ತಾನೆ ಅದನ್ನು ಸ್ವೀಕರಿಸುವ ಶಕ್ತಿಯನ್ನು ದಯಪಾಲಿಸಲಿದ್ದಾನೆ. ಕಳೆದ ವರ್ಷ ಅಗಸ್ಟ್ 8 ರಂದು ಭಾರತ ರತ್ನ ಗೌರವ ನೀಡಲಾಗಿತ್ತು. ಇದು ಜೀವನ ಅತ್ಯಂತ ಖುಷಿಯ ಕ್ಷಣವಾಗಿತ್ತು. ಇದಾಗಿ ಸರಿಯಾಗಿ ಒಂದು ವರ್ಷಕ್ಕೆ ಅಗಸ್ಟ್ 10 ರಿಂದ ಅವರ ಆರೋಗ್ಯ ಗಂಭೀರವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

    84 ವರ್ಷದ ಪ್ರಣಬ್ ಮುಖರ್ಜಿ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಸ್ಪತ್ರೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಮೆದುಳು ಸಂಬಂಧಿಸಿದ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಬಂದ ಹಿನ್ನೆಲೆ ಆಪರೇಷನ್ ಕೂಡಾ ಮಾಡಲಾಗಿದ್ದು ಸದ್ಯ ಆರೋಗ್ಯ ತೀವ್ರ ಗಂಭೀರ ಪರಿಸ್ಥಿತಿಯಲ್ಲಿದೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಮುಖರ್ಜಿಯವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ ಅಂತ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನ ಸಂಪರ್ಕದಲ್ಲಿ ಇದ್ದವರು ಈ ಕೂಡಲೇ ಕೋವಿಡ್ 19 ಟೆಸ್ಟ್ ಮಾಡಿಕೊಂಡು ಸ್ವತಃ ಐಸೋಲೇಷನ್ ಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಅಂದರೆ ಆಗಸ್ಟ್ 2ರಂದು ಅಮಿತ್ ಶಾ ಅವರು ಕೊರೊನಾ ದೃಢವಾಗಿರುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದರು. ಅಲ್ಲದೆ ಅದೇ ದಿನ ದೆಹಲಿ ಹೊರವಲಯದ ಗುರುಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಬಿಜೆಪಿ ಸಂಸದ ಮನೋಜ್ ತಿವಾರಿ, ಅಮಿತ್ ಶಾಗೆ ಎರಡನೇ ಬಾರಿ ಕೋವಿಡ್ 19 ಟೆಸ್ಟ್ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಭಾನುವಾರ ಟ್ವೀಟ್ ಮಾಡಿದ್ದರು. ಈ ಸಂಬಂಧ ಗೃಹ ಸಚಿವಾಲಯ 2ನೇ ಬಾರಿ ಟೆಸ್ಟ್ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ತಿವಾರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಶಾ ಅವರು ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದುಕೊಂಡೇ ಶುಭಹಾರೈಸಿದ್ದರು.

  • ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಭಾರತ ರತ್ನ ಗೌರವವನ್ನು ಪ್ರದಾನ ಮಾಡಿದರು.

    ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಅವರ ಜತೆಗೆ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್‍ಮುಖ್ ಹಾಗೂ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನವನ್ನು ನೀಡಿ ಗೌರವಿಸಲಾಯಿತು. ನಾನಾಜಿ ದೇಶ್‍ಮುಕ್ ಮತ್ತು ಭೂಪೇನ್ ಹಜಾರಿಕಾ ಅವರ ಪರವಾಗಿ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

    ದಶಕಗಳ ಕಾಲ ದೇಶಕ್ಕೆ ಪ್ರಣಬ್ ಮುಖರ್ಜಿ ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರ್ಕಾರ ಈ ವರ್ಷದ ಜನವರಿಯಲ್ಲಿ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಖಾತೆ ಸೇರಿದಂತೆ ನಾನಾ ಬಗೆಯ ಖಾತೆಗಳನ್ನು ನಿಭಾಯಿಸಿದ ಮುಖರ್ಜಿ ಅವರು 2012ರಲ್ಲಿ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2017ರವರೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಜವಾಬ್ದಾರಿ ವಹಿಸಿದ್ದರು.

    ಜನಸಂಘದ ಪ್ರಮುಖ ನಾಯಕ ನಾನಾಜಿ ದೇಶ್‍ಮುಖ್ ನಾಗರಿಕರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರ ಸಿಗಬೇಕೆಂದು ಹೋರಾಡಿದ ಸಾಮಾಜಿಕ ಕಾರ್ಯಕರ್ತರು. ರಾಜ್ಯಸಭಾ ಸದಸ್ಯರಾಗಿಯೂ ನಾನಾಜಿ ಹೊಣೆ ನಿಭಾಯಿಸಿದ್ದರು. 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೂ ನಾನಾಜಿ ಭಾಜನರಾಗಿದ್ದರು.

    ಅಸ್ಸಾಂನ ಸಾದಿಯಾ ಗ್ರಾಮದ ಭೂಪೇನ್ ದೊಡ್ಡ ಸಾಧಕರಾಗಿದ್ದು, ಗೀತೆರಚನೆಕಾರ, ಸಂಗೀತ ನಿರ್ದೇಶಕ, ಗಾಯಕ, ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1975ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ, 1985ರಲ್ಲಿ ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, 1977 ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ, 1992 ದಾದಾ ಸಾಹೇಬ್ ಫಾಲ್ಕೆ, 2012ರಲ್ಲಿ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಸರ್ಕಾರ ನೀಡಿ ಗೌರವಿಸಿತ್ತು.

  • ಕಳಪೆ ಕೆಲಸಗಾರ ಮಾತ್ರ ಸಲಕರಣೆಯನ್ನು ದೂಷಿಸುತ್ತಾನೆ – ಆಯೋಗವನ್ನು ಹೊಗಳಿದ ಪ್ರಣಬ್

    ಕಳಪೆ ಕೆಲಸಗಾರ ಮಾತ್ರ ಸಲಕರಣೆಯನ್ನು ದೂಷಿಸುತ್ತಾನೆ – ಆಯೋಗವನ್ನು ಹೊಗಳಿದ ಪ್ರಣಬ್

    ನವದೆಹಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಯೋಗ ಮೋದಿ ಪರವಾಗಿ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಯೋಗದ ಕಾರ್ಯವೈಖರಿಯನ್ನು ಹೊಗಳಿದ್ದಾರೆ.

    ಎನ್‍ಡಿ ಟಿವಿಯ ಸಂಪಾದಕೀಯ ನಿರ್ದೇಶಕಿ ಸೋನಿಯಾ ಸಿಂಗ್ ಅವರು ಬರೆದಿದ್ದ “ಡಿಫೈನಿಂಗ್ ಇಂಡಿಯಾ ಥ್ರೂ ದೇರ್ ಐಸ್” ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರೋಧದ ನಡುವೆಯು ಚುನಾವಣಾ ಆಯೋಗದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಮ್ಮ ಸಂಸ್ಥೆಗಳು ಉತ್ತಮವಾಗಿದೆ. ಈ ಸಂಸ್ಥೆಗಳು ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ. ನನ್ನ ಪ್ರಕಾರ ಕಳಪೆ ಕೆಲಸಗಾರ ಮಾತ್ರ ತನ್ನ ಸಲಕರಣೆಗಳನ್ನು ದೂಷಿಸುತ್ತಾನೆ. ಉತ್ತಮ ಕೆಲಸಗಾರ ಈ ಸಲಕರಣೆಗಳನ್ನು ಹೇಗೆ ಬಳಕೆ ಮಾಡುವುದು ಎಂದು ಯೋಚನೆ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರಿಂದ ಹಿಡಿದು ಇಂದಿನ ಆಯುಕ್ತರವರೆಗೆ ಆಯೋಗ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇವತ್ತು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಈ ಸಂಸ್ಥೆಗಳೇ ಕಾರಣ. ಆ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡ ಉತ್ತಮವಾಗಿ ಕೆಲಸ ಮಾಡಿದೆ. ಈ ಕೆಲಸವನ್ನು ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಕೊನೆಯ ಸುತ್ತು ಮಗಿದ ಬಳಿಕ ರಾಹುಲ್ ಗಾಂಧಿ, “ಚುನಾವಣೆ ವೇಳಾಪಟ್ಟಿ, ನಮೋ ಟಿವಿ, ಮೋದಿ ಸೈನ್ಯ ಮತ್ತು ಈಗ ಕೇದಾರನಾಥದಲ್ಲಿ ಮೋದಿ ನಾಟಕ ಈ ಇಲ್ಲಾ ವಿಚಾರದಲ್ಲೂ ಚುನಾವಣಾ ಆಯೋಗ ಮೋದಿಗೆ ಬೆಂಬಲ ನೀಡಿದೆ ಎಂದು ಭಾರತೀಯರಿಗೆ ಸ್ಪಷ್ಟವಾಗಿದೆ” ಎಂದು ಟ್ಟೀಟ್ ಮಾಡಿ ಚುನಾವಣಾ ಆಯೋಗದ ಮೇಲೆ ಕಿಡಿಕಾರಿದ್ದರು.

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ನವದೆಹಲಿ: ವಿಶ್ವರತ್ನ, ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕು ಎನ್ನುವ ಕೋಟ್ಯಂತರ ಕನ್ನಡಿಗರ ದನಿ ಕೊನೆಗೂ ಪ್ರಧಾನಿ ಮೋದಿಗೆ ಕೇಳಿಸಲೇ ಇಲ್ಲ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪ್ರಕಟವಾಗಿದ್ದು ಈ ಬಾರಿಗೆ ಮೂವರಿಗೆ ನೀಡಲಾಗಿದೆ.

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಹಿನ್ನೆಲೆ ಗಾಯಕ ಭೂಪೇನ್ ಹಜಾರಿಕ, ಸಮಾಜ ಸೇವಕ ನಾನಾಜಿ ದೇಶ್‍ಮುಖ್ ಅವರಿಗೆ ಈ ಬಾರಿಯ ಭಾರತ ರತ್ನ ಪ್ರಶಸ್ತಿ ಒಲಿದಿದೆ. ಗಣರಾಜ್ಯೋತ್ಸವದ ಅಂಗವಾಗಿ ದೇಶದ ಮೂವರು ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡ ಗೌರವಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಹೊರಡಿಸಲಾಗಿದೆ.

    ನಾನಾಜಿ ದೇಶ್‍ಮುಖ್ ಮತ್ತು ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಣಬ್ ಮುಖರ್ಜಿ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಇಲ್ಲ:
    ವಿಶ್ವರತ್ನ, ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳಿಗೆ ಈ ಬಾರಿ ಭಾರತ ರತ್ನ ಸಿಗಬೇಕು ಎಂದು ಕನ್ನಡಿಗರು, ರಾಜಕಾರಣಿಗಳು ಬೇಡಿಕೆ ಇಟ್ಟಿದ್ದರು. ಆದರೆ ಈ ಪಟ್ಟಿಯಲ್ಲಿ ಶ್ರೀಗಳ ಹೆಸರು ಇಲ್ಲದೇ ಇರುವುದು ಕನ್ನಡಿಗರಿಗೆ ಬೇಸರ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಬೆಂಗಳೂರು: ಕಳೆದ ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

    ಮೌಲಾನ ಅಬ್ದುಲ್ ಕಲಾಮ್ ಆಝಾದ್ ಅವರ `ಇಂಡಿಯಾ ವಿನ್ಸ್ ಫ್ರೀಡಂ’ ಆಂಗ್ಲ ಕೃತಿಯನ್ನು ಜಾಫರ್ ಶರೀಫ್ ಉರ್ದು ಭಾಷೆಗೆ ತರ್ಜುಮೆ ಮಾಡಿಸಿದ್ದರು. ಆ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪ್ರಣವ್ ಮುಖರ್ಜಿಯನ್ನು ಪುಸ್ತಕದ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಪುಸ್ತಕದ ಲೋಕಾರ್ಪಣೆಗೆ ಮುನ್ನ ಜಾಫರ್ ಶರೀಫ್ ಇಹಲೋಕ ತ್ಯಜಿಸಿದರು.

    ಈ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ಪ್ರಣವ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಜಾಫರ್ ಶರೀಫ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಿ.ಎಂ.ಇಬ್ರಾಹೀಂ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ಜಾಫರ್ ಶರೀಫ್ ಕುಟುಂಬದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಣಬ್ ಭಾಷಣದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

    ಪ್ರಣಬ್ ಭಾಷಣದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಪಟ್ಟು ಹೆಚ್ಚಳ

    ಕೋಲ್ಕತ್ತಾ: ಜೂನ್ 07 ರಂದು ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ ಬಳಿಕ ಆರ್ ಎಸ್‍ಎಸ್ ಸೇರುವವರ ಸಂಖ್ಯೆ 4 ಹೆಚ್ಚಳವಾಗಿದೆ.

    ಈ ಕುರಿತು ಆರ್ ಎಸ್‍ಎಸ್ ಮಾಹಿತಿ ನೀಡಿದ್ದು, ಆರ್ ಎಸ್‍ಎಸ್ ಸೇರಲು ಜೂನ್ 1 ರಿಂದ 6 ಅವಧಿಯಲ್ಲಿ ಸಂಸ್ಥೆಯ ವೆಬ್ ಸೈಟ್‍ನಿಂದ ಸರಾಸರಿ 378 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು, ಆದರೆ ಜೂನ್ 7 ರಂದು 1,779 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಬಂಗಾಳದ ಆರ್ ಎಸ್‍ಎಸ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

    ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಭಾಗಿಯಾಗಿದಕ್ಕಾಗಿ ಕೃತಜ್ಞತೆ ತಿಳಿಸಿ ಆರ್ ಎಸ್‍ಎಸ್ ಪತ್ರ ಬರೆದಿದೆ. ಸೋಮವಾರ ಈ ಕುರಿತು ಪತ್ರ ಬರೆದಿರುವ ಸಂಘದ ಮನಮೋಹನ್ ವೈದ್ಯ ಅವರು ಪ್ರಣಬ್ ಅವರ `ಒಂದು ಭಾರತ’ ಮತ್ತು `ಒಂದು ಸಂಸ್ಕೃತಿ’ ಅಭಿಪ್ರಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಣಬ್ ಅವರಿಗೆ ಪತ್ರ ರವಾನಿಸುವ ಮುನ್ನ ವೈದ್ಯ ಅವರು ಬಂಗಾಳದ ಆರ್ ಎಸ್‍ಎಸ್ ಕಾರ್ಯಕರ್ತರನ್ನ ಕುರಿತು ಮಾತನಾಡಿ, ಪ್ರಣಬ್ ಅವರಿಗೆ ವಿರೋಧ ವ್ಯಕ್ತಪಡಿಸಿದ ಬಳಿಕ ದೇಶದ್ಯಾಂತ ಆರ್ ಎಸ್‍ಎಸ್ ಕಾರ್ಯಕ್ರಮ ಪ್ರಸಾರವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಣಬ್ ಅವರ ಪುತ್ರಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ಸಹ ತಮ್ಮ ವಿರೋಧ ತಿಳಿಸಿ ಟ್ವೀಟ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.

    ಸದ್ಯ ಆರ್ ಎಸ್‍ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಶರ್ಮಿಷ್ಠ ಅವರು ನಿರಾಕರಿಸಿದ್ದಾರೆ. ಆರ್ ಎಸ್‍ಎಸ್ ಪ್ರಣಬ್ ಅವರಿಗೆ ಬರೆದಿರುವ ಪತ್ರದಲ್ಲಿ ಅವರನ್ನು ಪ್ರಣಬ್‍ಬಾಬು ಎಂದು ಸಂಬೋಧಿಸಲಾಗಿದೆ ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಣಬ್ ಅವರು ಭಾಗವಹಿಸುವ ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಅವರ ಭಾಷಣ ಎಲ್ಲರ ಮನಸ್ಸು ತಟ್ಟಿದೆ ಎಂದಿದ್ದಾರೆ. ಅಲ್ಲದೇ ಮೋಹನ್ ಭಾಗವತ್ ಹಾಗೂ ಮುಖರ್ಜಿ ಅವರ ದೃಷ್ಟಿಕೋನ ಒಂದೇ ರೀತಿ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪತ್ರದ ಕೊನೆಯಲ್ಲಿ ಆರ್ ಎಸ್‍ಎಸ್‍ಗೆ ವ್ಯಕ್ತವಾಗುತ್ತಿರುವ ಜನ ಬೆಂಬಲದ ಕುರಿತು ಕೂಡ ಉಲ್ಲೇಖಿಸಿದ್ದಾರೆ.

  • ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

    ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

    ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಡದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ ವಕ್ತಾರರಾದ ರಣ್‍ದೀಪ್ ಸಿಂಗ್ ಸೂರಜ್‍ವಾಲಾ ಅವರು, ಪ್ರಣಬ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ತಮ್ಮ ಆಹ್ವಾನವನ್ನು ಮನ್ನಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಈ ಹಿಂದೆ ಕಾಂಗ್ರೆಸ್ 2015 ರಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು. ಆದರೆ ಇದಾದ ಬಳಿಕ ಎರಡು ವರ್ಷ ಕಾರ್ಯಕ್ರಮವನ್ನು ಏರ್ಪಡಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಎಐಸಿಸಿ ಅಧಕ್ಷರಾದ ಬಳಿಕ ಮೊದಲ ಬಾರಿಗೆ ಇಫ್ತಾರ ಕೂಟವನ್ನು ಏರ್ಪಡಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಹಾಗೂ ನಾಯಕರು ಭಾಗವಹಿಸಿದ್ದರು.

    ಕಳೆದ ಕೆಲ ದಿನಗಳ ಹಿಂದೆ ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸುವ ಕುರಿತು ಹಲವು ಕಾಂಗ್ರೆಸ್ ನಾಯಕರು ಅಸಮಾಧಾನವನ್ನು ಹೊರಹಾಕಿದ್ದರು. ಸ್ವತಃ ಪ್ರಣಬ್ ಅವರ ಪುತ್ರಿ ಸಹ ಈ ಕುರಿತು ಟ್ವೀಟ್ ಮಾಡಿ ಆರ್ ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.