Tag: Pran Prathistha ceremony

  • ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ

    ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ

    ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram mandir) ಇಂದು ಮಧ್ಯಾಹ್ನ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಆಗಿದೆ. ಈ ಮೂಲಕ 500 ವರ್ಷಗಳ ಹಿಂದೂಗಳ ಕನಸು ನನಸಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿಯವರು(Narendra Modi ಪ್ರಾಣಪ್ರತಿಷ್ಠೆ ಬಳಿಕ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ.

    ಹೌದು. ಇಂದು 12 ಗಂಟೆಯ ಬಳಿಕ ಪೂಜಾ-ವಿಧಿ ವಿಧಾನಗಳನ್ನು ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ನೆರವೇರಿಸಲಾಯಿತು. ಬಳಿಕ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಈ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌, ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಅಲ್ಲಿನ ಪ್ರಧಾನ ಅರ್ಚಕರು ಭಾಗಿಯಾಗಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

    ಪ್ರಾಣಪ್ರತಿಷ್ಠೆಯ (Pran Prathistha ceremony)ಸಂದರ್ಭದಲ್ಲಿ ಶ್ರೀರಾಮ ಇಡೀ ಜಗತ್ತಿನ ದರ್ಶನ ನೀಡಿದ್ದು, ರಾಮಭಕ್ತರು ಶ್ರೀರಾಮನನ್ನು ಆನಂದಭಾಷ್ಪದಿಂದಲೇ ಕಣ್ತುಂಬಿಕೊಂಡರು. ಇತ್ತ ಪ್ರಾಣಪ್ರತಿಷ್ಠೆ ಬಳಿಕ ಶ್ರೀರಾಮನಿಗೆ ಸುತ್ತು ಬಂದ ಪ್ರಧಾನಿಯವರು ಸಾಷ್ಟಾಂಗ ನಮಸ್ಕಾರವನ್ನು ಮಾಡಿದರು. ನಂತರ ಸಾಧುಗಳಿಂದ ಆಶೀರ್ವಾದವನ್ನು ಪಡೆದುಕೊಂಡರು. ಇದಾದ ಬಳಿಕ ಮೋದಿಯವರು ವೇದಿಕೆಯತ್ತ ತೆರಳಿದರು.

    ಇಂದಿನ ಈ ಕಾರ್ಯಕ್ರಮಕ್ಕೆ ಸಿನಿ ತಾರೆಯರು, ರಾಜಕೀಯ ವ್ಯಕ್ತಿಗಳು, ರಾಮಭಕ್ತರು ಸೇರಿದಂತೆ ಸಾಕಷ್ಟು ಜನ ಸಾಕ್ಷಿಯಾದರು. ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಹಬ್ಬದ ವಾತಾವರಣವೇ ನಿರ್ಮಾಣ ಆಗಿದೆ. ಅಯೋಧ್ಯೆಯಲ್ಲಿ ಇಂದು ರಾಮ ಮತ್ತೆ ಹುಟ್ಟಿ ಬಂದಂತೆ ಎಲ್ಲಾ ಕಡೆಗಳಲ್ಲಿಯೂ ಸಂಭ್ರಮಿಸಲಾಗುತ್ತಿದೆ.

  • ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

    ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

    – ಪ್ರಧಾನಿ ಮೋದಿ ಸಾರಥ್ಯದಲ್ಲಿ ನೆರವೇರಿದ ಪ್ರಾಣಪ್ರತಿಷ್ಠೆ

    ಅಯೋಧ್ಯೆ: ರಾಮಭಕ್ತರ 500 ವರ್ಷಗಳ ತಪಸ್ಸಿಗೆ ವರ ಸಿಕ್ಕಿದೆ. ಆಧುನಿಕ ಶಬರಿಯಂತೆ ಕಾದಿದ್ದ ಕೋಟ್ಯಂತರ ಭಕ್ತರಿಗೆ ಭಗವಾನ್‌ ರಾಮ ಕೊನೆಗೂ ದರ್ಶನ ನೀಡಿದ್ದಾನೆ. ಅಯೋಧ್ಯೆ ಇಂದು (ಸೋಮವಾರ) ಅಕ್ಷರಸಹ ರಘುರಾಮನ ಭಕ್ತಿಯಲ್ಲಿ ಮಿಂದೆದ್ದಿತು. ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ (ಜ.22) ನೆರವೇರಿತು. ಪುಣ್ಯಪುರುಷ ರಾಮನನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು.

    12 ಗಂಟೆ 30 ನಿಮಿಷ 32 ಸೆಕೆಂಡು ಶುಭಘಳಿಗೆಯಲ್ಲಿ ಅಭಿಜಿತ್‌ ಮುಹೂರ್ತದಲ್ಲಿ (ʼಅಭಿಜಿತ್‌ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Pran Prathistha ceremony) ನೆರವೇರಿತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಪ್ರಧಾನಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು. ಈ ಸಂದರ್ಭದಲ್ಲಿ ಶಂಖ, ಜಾಗಟೆಗಳು ಮೊಳಗಿದವು.

    ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌ ಹಾಗೂ ಅಯೋಧ್ಯೆಯ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.

    ಈ ದಿನಕ್ಕಾಗಿ ಪ್ರಧಾನಿಯವರು ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು. ಈ ನಡುವೆ ಹಲವಾರು ದೇಗುಲಗಳಿಗೆ ತೆರಳಿ ಪೂಜೆಯನ್ನೂ ಸಲ್ಲಿಸಿದ್ದರು. ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವಾರು ಗಣ್ಯರು ಸಾವಿರಾರು ಸಂಖ್ಯೆಯಲ್ಲಿ ಈ ಕ್ಷಣಕ್ಕೆ ಸಾಕ್ಷಿಯಾದರು. ಒಟ್ಟಿನಲ್ಲಿ ಇಂದು ಎಲ್ಲೆಲ್ಲೂ ಜೈ ಶ್ರೀ ರಾಮ್ ಘೋಷಣೆ ಮೊಳಗುತ್ತಿದೆ. ಎಲ್ಲಾ ಕಡೆಯೂ ಶ್ರೀರಾಮನ ಗುಣಗಾನ ನಡೆಯುತ್ತಿದೆ.

    ಏನಿದು ಪ್ರಾಣ ಪ್ರತಿಷ್ಠೆ?: ಪ್ರಾಣ ಪ್ರತಿಷ್ಠೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದ ಪ್ರಮುಖ ಆಚರಣೆಯಾಗಿದೆ. ವಿಗ್ರಹವು ಕೇವಲ ದೇವರ ರೂಪವನ್ನು ಚಿತ್ರಿಸುವ ಒಂದು ಕಲಾಕೃತಿಯಷ್ಟೆ. ಪ್ರಾಣ ಪ್ರತಿಷ್ಠೆಯ ನಂತರವೇ ವಿಗ್ರಹವು ದೈವಿಕವಾಗುತ್ತದೆ. ಅದಕ್ಕಾಗಿ ವಿಗ್ರಹವನ್ನು ಪವಿತ್ರಗೊಳಿಸಿ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಪ್ರಾಣ ಎಂದರೆ ‘ಜೀವಶಕ್ತಿ, ಉಸಿರು, ಚೈತನ್ಯ’ ಮತ್ತು ಪ್ರತಿಷ್ಠೆ ಎಂದರೆ ‘ಸ್ಥಾಪನೆ’. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪೂಜಾ ವಿಧಾನ, ವೈದಿಕ ಸ್ತೋತ್ರಗಳ ಪಠಣ ನಡೆಸಲಾಗುವುದು. ಪ್ರಾಣ ಪ್ರತಿಷ್ಠೆ ಎಂದರೆ, ವಿಗ್ರಹಕ್ಕೆ ಜೀವಶಕ್ತಿ ತುಂಬಿ ದೈವಿಕವಾಗಿಸುವ ಆಚರಣೆ ಎನ್ನುತ್ತಾರೆ ಹಿರಿಯರು.

    ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗೂ ಮೊದಲು ವಿಗ್ರಹದಲ್ಲಿ ದೈವಿಕ ಶಕ್ತಿ ಇರುವುದಿಲ್ಲ. ಪ್ರಾಣ ಪ್ರತಿಷ್ಠೆ ನಂತರವೇ ವಿಗ್ರಹಕ್ಕೆ ವಿಶೇಷ ಶಕ್ತಿ ಬರುತ್ತದೆ. ಬಳಿಕ ವಿಗ್ರಹವು ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಆಗ ದೇವಾಲಯಗಳಲ್ಲಿ ಭಕ್ತರು ವಿಗ್ರಹವನ್ನು ಪೂಜಿಸಬಹುದು ಎಂಬ ನಂಬಿಕೆಯಿದೆ.

  • ರಾಮನ ಅತ್ತೆ ಮನೆ ಜನಕಪುರದಲ್ಲಿಯೂ ಹಬ್ಬದ ವಾತಾವರಣ

    ರಾಮನ ಅತ್ತೆ ಮನೆ ಜನಕಪುರದಲ್ಲಿಯೂ ಹಬ್ಬದ ವಾತಾವರಣ

    – ವಿದ್ಯುದ್ದೀಪಗಳಿಂದ ಕಂಗೊಳಿಸ್ತಿದೆ ಜಾನಕಿ ಮಂದಿರ

    ಕಠ್ಮಂಡು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ (Pran Prathistha ceremony) ಕ್ಷಣಗಣನೆ ನಡೆಯುತ್ತಿದ್ದರೆ, ಇತ್ತ ರಾಮನ ಅತ್ತೆ ಮನೆ ನೇಪಾಳದಲ್ಲಿಯೂ ಹಬ್ಬದ ಸಡಗರ ಜೋರಾಗಿದೆ.

    ಹೌದು. ನೇಪಾಳದ ಜನಕಪುರದಲ್ಲಿರುವ (Janakpur) ಜಾನಕಿ ದೇವಾಲಯದಲ್ಲಿ ಸಕಲ ತಯಾರಿಗಳು ನಡೆದಿದೆ. ಇನ್ನೂ ದೇಗುಲವು ವಿದ್ಯುದ್ದೀಪಗಳಿಂದ ಕಣ್ಮನ ಸೆಳೆಯುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ, ಜನಕ್‌ಪುರದಲ್ಲಿ ಸಂತೋಷ ಮತ್ತು ಹಬದ ರೀತಿಯಲ್ಲಿ ಸಂಭ್ರಮಿಸಲಾಗುತ್ತದೆ. ಇದು ಎರಡು ಸ್ಥಳಗಳ ನಡುವೆ ಹಂಚಿಕೊಂಡಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಒತ್ತಿಹೇಳುತ್ತದೆ.

    ಈ ಸಂಬಂಧ ಶ್ರೀರಾಮ ಯುವ ಸಮಿತಿಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಚೌಧರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತ್ರೇತಾಯುಗದ ವನವಾಸದ ಸಂದರ್ಭದಲ್ಲಿ ರಾಮಚಂದ್ರ ಅನುಭವಿಸಿದ ನೋವು ಕಲಿಯುಗದಲ್ಲಿಯೂ ಮುಂದುವರಿದಿದೆ. ಬರೋಬ್ಬರಿ 500 ವರ್ಷಗಳ ಹೋರಾಟವನ್ನು ಮಾಡಬೇಕಾಯಿತು. ಈ ಸಮಯದಲ್ಲಿ ಅವರು ಟಾರ್ಪಾಲಿನ ಅಡಿಯಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಅವರ ನೋವು ನಿಜಕ್ಕೂ ಎಲ್ಲಾ ಹಿಂದೂಗಳ ನೋವಾಗಿದೆ. ನಮ್ಮ ಪೂರ್ವಜರು ಕಷ್ಟಪಟ್ಟು ಹೋರಾಡಿದರು. ಇದೀಗ ಅಂತಿಮ ಫಲಿತಾಂಶವು ಇಂದು ಇಲ್ಲಿ ಮರ್ಯಾದಾಪುರುಷ ಭಗವಾನ್ ರಾಮನ ದೇವಾಲಯದ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ ಮತ್ತು ಜನಕಪುರದ ಜನ ಕೂಡ ಸಂತೋಷದಿಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Ram Mandir: ಭಗವಾನ್‌ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್‌ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ

    ನೇಪಾಳದಿಂದ ಯಾರಿಗೆಲ್ಲ ಆಹ್ವಾನ?: ನೇಪಾಳದ (Nepala) ಜನಕ್‌ಪುರದಿಂದ ಚೋಟ್ಟೆ ಮಹಾಂತರೊಂದಿಗೆ ಮುಖ್ಯ ಮಹಂತರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಜನಕಪುರ್ ಸ್ಥಳೀಯವಾಗಿ ಭರ್ ಎಂಬ ಅರ್ಪಣೆಗಳನ್ನು ಅಯೋಧ್ಯೆಗೆ ಆಚರಣೆಯ ಭಾಗವಾಗಿ ಕಳುಹಿಸಲಾಗಿದೆ. ಇದರಲ್ಲಿ ಆಭರಣಗಳು, ಪಾಕಪದ್ಧತಿಗಳು, ಬಟ್ಟೆಗಳು ಮತ್ತು ಇತರ ದೈನಂದಿನ ಅಗತ್ಯತೆಗಳಿದ್ದವು. ಸೀತಾ ದೇವಿಯ ತಾಯಿಯ ಮನೆಯಾದ ಜನಕಪುರ ಕೂಡ ಪ್ರಾಣ ಪ್ರತಿಷ್ಠೆಯ ದಿನದಂದು ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಸಿದ್ಧವಾಗಿದೆ.

    ಸೋಮವಾರ ಸಂಜೆ ದೀಪಾವಳಿ ಆಚರಿಸಲು ಉದ್ದೇಶಿಸಿರುವುದರಿಂದ ಕಲಾವಿದರು ಬಣ್ಣಗಳ ಜೊತೆಗೆ ಹೂವುಗಳನ್ನು ಬಳಸಿ ರಂಗೋಲಿ ಮಾಡುತ್ತಾರೆ. ಸೋಮವಾರ ಸಂಜೆ ಹಬ್ಬದ ರೀತಿ ಆಚರಿಸಲು ಈಗಾಗಲೇ ಸಂಗ್ರಹಿಸಲಾದ 2500 ಲೀಟರ್ ಸಾಸಿವೆ ಎಣ್ಣೆಯಿಂದ ಸುಮಾರು 2,50,000 ಎಣ್ಣೆ-ಪೂರಿತ ದೀಪಗಳನ್ನು ಬೆಳಗಿಸುವ ಸಂಗ್ರಹ ಅಭಿಯಾನ ನಡೆಯುತ್ತಿದೆ.

  • ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್‌

    ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್‌

    ಅಯೋಧ್ಯೆ (ಉತ್ತರ ಪ್ರದೇಶ): ಭವ್ಯವಾದ ಶ್ರೀರಾಮಮಂದಿರದ (Ram Mandir) ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ (ರಾಮಲಲ್ಲಾ) ನೂತನ ವಿಗ್ರಹವನ್ನು (Ramlalla Idol) ಗುರುವಾರ‌ ಇರಿಸಲಾಗಿದೆ.

    ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಗರ್ಭಗುಡಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಚಿತ್ರ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಎಳನೀರು ಸೇವನೆ, ನೆಲದಲ್ಲೇ ನಿದ್ದೆ, ಸಾತ್ವಿಕ ಆಹಾರ- ರಾಮನ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ

    ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಿಂದ ಕೆತ್ತನೆ ಮಾಡಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಬಿಗಿ ಭದ್ರತೆಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ಇದನ್ನೂ ಓದಿ: Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ

    ಗುರುವಾರ ಸಂಜೆ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದ ಬಳಿಕ ಕೃಷ್ಣಶಿಲೆಯಲ್ಲಿ ಮೂಡಿದ 5 ವರ್ಷದ ರಾಮನ 51 ಇಂಚು ಎತ್ತರದ ಬಾಲರಾಮನ ಮೂರ್ತಿಯನ್ನ ಪ್ರತಿಷ್ಠಾಪಿಸಲಾಯಿತು. ಜನವರಿ 22ರಂದು ರಾಮಭಕ್ತರು ಇದರ ರೂಪ ಕಣ್ತುಂಬಿಕೊಳ್ಳುವ ಸಮಯ ಮತ್ತಷ್ಟು ಸನ್ನಿಹಿತವಾದಂತಾಗಿದೆ. ಅಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಲಿದೆ.

  • Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ

    Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ

    ಅಯೋಧ್ಯೆ: ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾದ ಆಚರಣೆಗಳು ಮುಂದುವರಿದಿದೆ. ಇದೀಗ ಇಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ (Pran Prathistha Ceremony) ಎಂದು ಮಂದಿರ ನಿರ್ಮಾಣ ಸಮಿತಿಯ ಸದಸ್ಯರು ಹೇಳಿದ್ದಾರೆ.

    ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ರಾತ್ರಿ ವಿಶೇಷ ಪೂಜೆಯೊಂದಿಗೆ ರಾಮಲಲ್ಲಾನ ವಿಗ್ರಹವನ್ನು ಗರ್ಭಗುಡಿಗೆ ತರಲಾಯಿತು. ಇದನ್ನೂ ಓದಿ: ಎಳನೀರು ಸೇವನೆ, ನೆಲದಲ್ಲೇ ನಿದ್ದೆ, ಸಾತ್ವಿಕ ಆಹಾರ- ರಾಮನ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ

    ಈ ಬೆಳ್ಳಿಯ ವಿಗ್ರಹವನ್ನು ಗುಲಾಬಿ ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿತ್ತು. ಬಳಿಕ ಅದನ್ನು ಗರ್ಭಗುಡಿಯಲ್ಲಿ ಇರಿಸಲು ಕ್ರೇನ್ ಬಳಸಿ ಮೇಲೆತ್ತಲಾಯಿತು. ಜನವರಿ 22 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣೆಯ ಅಂಗವಾಗಿ ‘ಕಲಶ ಪೂಜೆ’ ನಡೆಯಿತು. ಇಂದು 4 ಗಂಟೆಗಳ ಧಾರ್ಮಿಕ ಕಾರ್ಯಕ್ರಮಗಳ  ನಂತರ 5 ವರ್ಷದ ರಾಮನ 51 ಇಂಚು ಎತ್ತರದ ಕಪ್ಪು ಕಲ್ಲಿನ ವಿಗ್ರಹವನ್ನು ಸ್ಥಾಪಿಸಲಾಯಿತು ಎಂದಿದ್ದಾರೆ.

    ಜನವರಿ 22 ರಂದು ನಡೆಯುವ ಸಮಾರಂಭಕ್ಕೆ, ದೇವಾಲಯದ ಟ್ರಸ್ಟ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಮಿತಾಬ್ ಬಚ್ಚನ್, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ 7,000 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಆಹ್ವಾನಗಳನ್ನು ನೀಡಿದೆ.

  • ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್‌ ಯಾದವ್‌

    ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್‌ ಯಾದವ್‌

    ಅಯೋಧ್ಯೆ: ರಾಮನೂರಿನಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ (Pran Prathistha Ceremony) ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಾವಿರಾರು ಜನರಿಗೆ ಈಗಾಗಲೇ ಆಹ್ವಾನ ಕಳುಹಿಸಲಾಗಿದೆ. ಹೀಗಾಗಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಇನ್ನೂ ಕೆಲವರು ಭಾಗವಹಿಸಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಹೈಕಮಾಂಡ್ (Congress High Command) ನಿರಾಕರಿಸಿದೆ. ಇದೀಗ ಅಖಿಲೇಶ್ ಯಾದವ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಇದೀಗ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ಸಂಬಂಧ ಅಖಿಲೇಶ್‌ (Akhilesh Yadav) ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ಕಾರ್ಯಕ್ರಮದ ನಂತರ ಬರುವುದಾಗಿ ಹೇಳಿದ್ದಾರೆ. ಜೊತೆಗೆ ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಕೂಡ ಅಲ್ಲಿಸಿದ್ದಾರೆ. ಇದರೊಂದಿಗೆ ಈ ಕಾರ್ಯಕ್ರಮವನ್ನು ಸುರಕ್ಷಿತವಾಗಿ ಪೂರ್ಣಗೊಳಿಸಬೇಕು. ಜನವರಿ 22 ರ ಕಾರ್ಯಕ್ರಮದ ಬಳಿಕ ತಮ್ಮ ಕುಟುಂಬದೊಂದಿಗೆ ಅಯೋಧ್ಯೆಗೆ ಭೇಟಿ ನೀಡುವುದಾಗಿಯೂ ಅಖಿಲೇಶ್‌ ತಿಳಿಸಿದ್ದಾರೆ.

    ಆಹ್ವಾನ ಬಂದಿಲ್ಲವೆಂದು ಹೇಳಿದ್ದರು ಅಖಿಲೇಶ್:‌ ಇದಕ್ಕೂ ಮುನ್ನ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ್ದ ಅಖಿಲೇಶ್ ಯಾದವ್, ತಮಗೆ ಆಹ್ವಾನ ಬಂದಿಲ್ಲ ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ನಡೆಯಲಿರುವ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಅಥವಾ ಕೊರಿಯರ್ ಮೂಲಕ ಆಹ್ವಾನ ಬಂದಿಲ್ಲ. ಆಮಂತ್ರಣ ಪತ್ರವನ್ನು ಕೊರಿಯರ್ ಮೂಲಕ ಕಳುಹಿಸಿದ್ದರೆ ಅದರ ರಸೀದಿಯನ್ನು ಅವರಿಗೆ ತೋರಿಸಬೇಕು, ಆಮಂತ್ರಣವನ್ನು ಸರಿಯಾದ ವಿಳಾಸಕ್ಕೆ ಕಳುಹಿಸಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಬಹುದು ಎಂದು ಅವರು ಹೇಳಿದ್ದರು.

  • ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

    ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

    ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ಜನವರಿ 22 ರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮೊದಲು 11 ದಿನಗಳ ವ್ರತ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಉಳಿದಿವೆ. ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನನ್ನದು. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಕೇಳಿದ್ದಾನೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಇದಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ. ಈ ಕ್ಷಣದಲ್ಲಿ ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಡಿಯೋ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ

    ವ್ರತದ ಮಹತ್ವ ಏನು..?: ಹಿಂದೂ ಶಾಸ್ತ್ರಗಳ ಪ್ರಕಾರ, ದೇವರ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ಒಂದು ವಿವರವಾದ ಆಚರಣೆಯಾಗಿದೆ. ಇದಕ್ಕೂ ಮುನ್ನ ಸಾಕಷ್ಟು ನಿಯಮಗಳನ್ನು ಅನುರಿಸಬೇಕಾಗುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಜವಾಬ್ದಾರಿಗಳ ನಡುವೆಯೂ ಎಲ್ಲಾ ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಿರ್ಧರಿಸಿದ್ದಾರೆ. ಅದರ ಫಲವಾಗಿ 11 ದಿನಗಳ ವ್ರತಕ್ಕೆ ಇಂದು ಕೈ ಹಾಕಿದ್ದಾರೆ.

    ಹಿಂದೂ ಧರ್ಮಗ್ರಂಥಗಳಲ್ಲಿ, ಉಪವಾಸಕ್ಕಾಗಿ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ. ಅಂತೆಯೇ ತಮ್ಮ ದೈನಂದಿನ ದಿನಚರಿಯ ಭಾಗವಾಗಿ ಪ್ರಧಾನಿಯವರು ಬ್ರಹ್ಮ ಮುಹೂರ್ತ ಜಾಗರಣ, ಪ್ರಾರ್ಥನೆಗಳು ಮತ್ತು ಸರಳ ಆಹಾರದಂತಹ ಆಚರಣೆಗಳನ್ನು ಅನುಸರಿಸುತ್ತಾರೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

    ಜ. 16ರಿಂದಲೇ ಆರಂಭ: ಜನವರಿ 22 ರಂದು ಅಯೋಧ್ಯೆಯಲ್ಲಿನ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ವೈದಿಕ ವಿಧಿ-ವಿಧಾನಗಳು ಜನವರಿ 16 ರಂದು ಅಂದರೆ ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಜನವರಿ 22 ರಂದು ವಾರಣಾಸಿಯ ಅರ್ಚಕರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಮುಖ್ಯ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ನಿರ್ವಹಿಸಲಿದ್ದಾರೆ.

    ಈ ಸಂದರ್ಭದಲ್ಲೇ ಸರಯೂ ನದಿ ದಂಡೆಯಲ್ಲಿ 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಾವಿರಾರು ಭಕ್ತರಿಗೆ ಅವಕಾಶ ಕಲ್ಪಿಸಲು ಅಯೋಧ್ಯೆಯಲ್ಲಿ ಹಲವಾರು ಟೆಂಟ್ ಸಿಟಿಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, 10,000-15,000 ಜನರಿಗೆ ವ್ಯವಸ್ಥೆ ಮಾಡಲಾಗುವುದು. ಇನ್ನು ಕಾರ್ಯಕ್ರಮಕ್ಕೆ ಭಾರತ ಮತ್ತು ವಿದೇಶದಿಂದ ಹಲವಾರು ಗಣ್ಯರು ಆಹ್ವಾನಗಳನ್ನು ಸ್ವೀಕರಿಸಿರುವುದರಿಂದ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆಗಳು ಕೊನೆಯ ಹಂತದಲ್ಲಿವೆ.