Tag: Prakash Javdekar

  • ರಜನಿಕಾಂತ್‍ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

    ರಜನಿಕಾಂತ್‍ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

    ನವದೆಹಲಿ: ಚಿತ್ರರಂಗದ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೂಪರ್ ಸ್ಟಾರ್ ರಜನಿಕಾಂತ್ ಭಾಜನರಾಗಿದ್ದಾರೆ. ನವದೆಹಲಿಯ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಣೆ ಮಾಡಿದರು.

    ಗಾಯಕಿ ಆಶಾ ಬೋಸ್ಲೆ, ನಿರ್ಮಾಪಕ ಸುಭಾಶ್ ಗೈ, ನಟ ಮೋ ಹನ್ ಲಾಲ್, ಗಾಯಕ ಶಂಕರ್ ಮಹದೇವನ್ ಮತ್ತು ಬಿಸ್ವಜಿತ್ ಚಟರ್ಜಿ ಸಮಿತಿ ಒಮ್ಮತವಾಗಿ ರಜಿನಿಕಾಂತ್ ಅವರನ್ನ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ಸಮಿತಿ ಶಿಫಾರಸ್ಸಿನ ಮೇರೆಗೆ 51ನೇ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಗೆ ರಜನಿಕಾಂತ್ ಭಾಜನರಾಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ಜಾವ್ಡೇಕರ್, 2019ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ ಅವರ ಹೆಸರನ್ನು ಘೋಷಿಸಲು ಸಂತೋಷವಾಗುತ್ತಿದೆ. ಜೂರಿ ತಂಡಕ್ಕೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ರಜನಿ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ತಲೈವಾಗೆ ಶುಭಾಶಯ ತಿಳಿಸುತ್ತಿದ್ದಾರೆ.

    ರಜನಿಕಾಂತ್ ಅವರಿಗೆ ಮೇ 3 ರಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ವರದಿಯಾಗಿದೆ. ಪ್ರೆಸ್ ಇನ್‍ಫರ್ಮೇಶನ್ ಬ್ಯೂರೊ ಸಾಮಾಜಿಕ ಜಾಲತಾಣದಲ್ಲಿ ರಜನಿಗಾಗಿ ವಿಶೇಷ ವೀಡಿಯೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಶುಭಹಾರೈಸಿದೆ.

    1950 ಡಿಸೆಂಬರ್ 12 ರಂದು, ರಾಮೋಜಿ ಮತ್ತು ಜಿಜಾಬಾಯ್ ದಂಪತಿಗಳ ಮಗನಾಗಿ ಶಿವಜೀ ರಾವ್ ಗಾಯಕ್ವಾಡ್ ನಾಮಂಕಿತರಾಗಿದ್ದ ರಜನಿಕಾಂತ್, ತನ್ನ ಬಾಲ್ಯದಲ್ಲೇ ಅಭಿನಯದ ಹುಚ್ಚು ಬೆಳೆಸಿಕೊಂಡಿದ್ದರು. ರಜನಿ ಅವರ ಆಸೆಯಂತೆ ಅವರ ಹೆತ್ತವರು ಸಿನಿಮಾ ತರಬೇತಿಗಾಗಿ ಮದ್ರಾಸ್ ಸಿನಿಮಾ ಕೇಂದ್ರಕ್ಕೆ ಸೇರಿಸಿದ್ದರು. ನಂತರ ತಮಿಳು ಚಿತ್ರರಂಗದಲ್ಲಿ ಬೆಳದ ರಜನಿ ತನ್ನದೆ ಆದ ಸ್ಟೈಲ್ ಮೂಲಕ ವಿಶ್ವದಾದ್ಯಂತ ಹಲವು ಅಭಿಮಾನಿಗಳನ್ನು ಸಂಪಾದಿಸಿ ತಮಿಳಿನ ತಲೈವಾ ಸಿನಿಮಾದ ಮೂಲಕ ತಮಿಳಿನ ಸೂಪರ್ ಸ್ಟಾರ್ ಎಂಬ ಬಿರುದು ಪಡೆದುಕೊಂಡಿದ್ದಾರೆ. ನಂತರ ಅವರ ಸಿನಿ ಪಯಣದಲ್ಲಿ ಬಿಲ್ಲ, ಎಂದಿರನ್, ಕಾಲ ಪೇಟಾ,2.0 ಮೊದಲಾದ ಸಿನಿಮಾಗಳಲ್ಲಿ ಅದ್ಬುತವಾಗಿ ನಟಿಸುವ ಮೂಲಕ ತಮಿಳು ಚಿತ್ರರಂಗದಲ್ಲಿ ಹೊಸ ಕಾಂತ್ರಿ ಮೂಡಿಸಿದ್ದರು.

    ರಜನಿ ಅವರಿಗಿಂತ ಮೊದಲು ಈ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗ ಕಂಡ ಹಲವು ನಟ ನಟಿಯರು ಪಡೆದುಕೊಂಡಿದ್ದಾರೆ ಇವರಲ್ಲಿ ಪ್ರಮುಖರೆಂದರೆ, ಡಾ. ರಾಜ್ ಕುಮಾರ್, ಸತ್ಯಜೀತ್ ರೇ, ರಾಜ್ ಕಪೂರ್, ಗಾಯಕಿ ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

    ರಜನಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗುತ್ತಿದ್ದಂತೆ ಪ್ರಧಾನಿ ಮೋದಿ, ಸ್ಟಾಲಿನ್, ಯಡಿಯೂರಪ್ಪ, ಕಮಲ್ ಹಾಸನ್ ಸಹಿತ ಹಲವು ಗಣ್ಯರು ಶುಭ ಹಾರೈಕೆ ಮಾಡಿದ್ದಾರೆ.

  • ಎಫ್.ಎಂ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಬಿ.ವೈ ರಾಘವೇಂದ್ರ ಮನವಿ

    ಎಫ್.ಎಂ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಬಿ.ವೈ ರಾಘವೇಂದ್ರ ಮನವಿ

    ಶಿವಮೊಗ್ಗ: ಜಿಲ್ಲೆಯ ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಲು ಬಹುದಿನಗಳಿಂದ ಜಿಲ್ಲೆಯ ಜನರ ಕನಸಾಗಿರುವ ಎಫ್.ಎಂ ರೇಡಿಯೋ ಕೇಂದ್ರವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

    ಈ ಹಿಂದೆ ಶಿವಮೊಗ್ಗದಲ್ಲಿ ಎಫ್.ಎಂ ರೇಡಿಯೋ ಕೇಂದ್ರವನ್ನು ಆರಂಭಿಸುವಂತೆ ಹಾಗೂ ಭದ್ರಾವತಿಯಲ್ಲಿ ಈಗಿರುವ ರೇಡಿಯೋ ಕೇಂದ್ರಕ್ಕೆ ತರಂಗಾತರಗಳನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆಯಂತೆ ಯೋಜನೆ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಎಫ್.ಎಂ ರೇಡಿಯೋ ಕೇಂದ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಂಸದರು ತಿಳಿಸಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಗೂ ಶಿವಮೊಗ್ಗ ಜಿಲ್ಲೆಯ ಕೇಂದ್ರ ಸ್ಥಳವಾಗಿರುವ ಶಿವಮೊಗ್ಗದಲ್ಲಿ ಒಂದು ಎಫ್.ಎಂ ಕೇಂದ್ರ ಇರುವುದಿಲ್ಲ. ಭದ್ರಾವತಿ ಆಕಾಶವಾಣಿ ಕೇಂದ್ರವು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಶಕ್ತಿಯ ಟ್ರಾನ್ಸ್ ಮೀಟರ್ ನಿಂದಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿದರು ಕೂಡ ಕೆಲವೇ ಕಿ.ಮಿ.ಗಳ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೂ ತಲುಪದಿರುವ ಬಗ್ಗೆ ಸಂಸದರು ಸಚಿವರ ಗಮನಕ್ಕೆ ತಂದಿದ್ದಾರೆ.

    ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಡಿಮೆ ಶಕ್ತಿಯ ದೂರದರ್ಶನ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿರುವ ನಿಟ್ಟಿನಲ್ಲಿ ಹೆಚ್ಚಿನ ಶಕ್ತಿಯ ಟ್ರಾನ್ಸ್ ಮೀಟರ್ ಉನ್ನತೀಕರಿಸಿ ಇಲ್ಲಿರುವ ಸ್ಥಳವಕಾಶ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುವ ಹಿನ್ನೆಲೆಯಲ್ಲಿ ಈಗಿರುವ ಟ್ರಾನ್ಸ್ ಮೀಟರ್ 10ಕೆ.ವಿ.ಗೆ ಹೆಚ್ಚಿಸಿ, ಎಫ್.ಎಂ ಕೇಂದ್ರವನ್ನು ಮಂಜೂರು ಮಾಡಿದ್ದಲ್ಲಿ, ಮಲೆನಾಡಿನ ಹೆಚ್ಚಿನ ಸಂಖ್ಯೆಯ ಶಾಸ್ತ್ರೀಯ ಹಾಗೂ ಜನಪದ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದಾರೆ.

    ಆಕಾಶವಾಣಿ ಕೇಂದ್ರವು ಶಿವಮೊಗ್ಗದಿಂದ 20ಕಿ.ಮೀ. ದೂರದಲ್ಲಿರುವ ಭದ್ರಾವತಿಯಲ್ಲಿದ್ದರೂ, ಅದೂ ನಗರ ವ್ಯಾಪ್ತಿ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಜಿಲ್ಲಾದ್ಯಂತ ವಿವಿಧ ಭಾಗಗಳಿಂದ ಇಲ್ಲಿಗೆ ಜನರು ಬರಲು ತೊಂದರೆಯಾಗುತ್ತಿದೆ. ಅದೂ ಅಲ್ಲದೆ ಈ ಕೇಂದ್ರಕ್ಕೆ ನಿರ್ವಹಣಾಧಿಕಾರಿಗಳು ಇಲ್ಲದ ಪ್ರಯುಕ್ತ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯದಂತಾಗಿದೆ. ಹೀಗಾಗಿ ಕೂಡಲೇ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನಿಯೋಜಿಸುವಂತೆಯೂ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

    ನಗರದಲ್ಲಿ ಯಾವುದೇ ರೀತಿಯ ರೇಡಿಯೋ ಚಾನೆಲ್‍ಗಳು ಇಲ್ಲದಿರುವ ಪ್ರಯುಕ್ತ, ಎಫ್.ಎಂ ಕೇಂದ್ರ ಪ್ರಾರಂಭವಾದಲ್ಲಿ ಇದೊಂದು ಅತ್ಯುತ್ತಮ ರೇಡಿಯೋ ಕೇಂದ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರ್ಕಾರಿ ಎಫ್.ಎಂ ಕೇಂದ್ರ ಸ್ಥಾಪನೆಯಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

  • ಕಳಸಾ ಬಂಡೂರಿ ಯೋಜನೆಗೆ ಮತ್ತೆ ಗ್ರೀನ್ ಸಿಗ್ನಲ್

    ಕಳಸಾ ಬಂಡೂರಿ ಯೋಜನೆಗೆ ಮತ್ತೆ ಗ್ರೀನ್ ಸಿಗ್ನಲ್

    ನವದೆಹಲಿ: ಕಳಸಾ ಬಂಡೂರಿ ನಾಲಾ ಯೋಜನೆಗೆ ಮತ್ತೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕಾಮಗಾರಿ ಆರಂಭಿಸಲು ನಮ್ಮ ತಕರಾರಿಲ್ಲ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟಪಡಿಸಿದ್ದಾರೆ.

    ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಜಾವ್ಡೇಕರ್, ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ಬೇಕಿಲ್ಲ, ಹೀಗಾಗಿ ಕಳಸಾ ಬಂಡೂರಿ ಯೋಜನೆ ಆರಂಭಿಸಬಹುದು. ನ್ಯಾಯಾಧೀಕರಣ ಆದೇಶದ ಹೊರಡಿಸಿದ ಮೇಲೆ ಅರಣ್ಯ ಮತ್ತು ವನ್ಯಜೀವಗಳ ಇಲಾಖೆಯಿಂದ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಬಹುದು ಎಂದು ತಿಳಿಸಿದ್ದಾರೆ.

    ಕಳಸಾ ಬಂಡೂರಿ ಯೋಜನೆ ಆರಂಭಿಸಲು ಕೇಂದ್ರ ಸರ್ಕಾರದ ತಡೆ ಇಲ್ಲ ನಿಮ್ಮ ಮನವಿಯನ್ನು ಆಧರಿಸಿ ಈ ಸಂಬಂಧ ಇದ್ದ ಗೊಂದಲಗಳನ್ನು ಬಗೆಹರಿಸಿದ್ದೇವೆ ಎಂದು ಭಾವಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಮಹದಾಯಿ ನ್ಯಾಯಾಧೀಕರಣ ತೀರ್ಪಿನ ಬಳಿಕ ಕಳಸಾ ಬಂಡೂರಿ ಕಾಮಗಾರಿ ಆರಂಭಿಸಿಲು ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿತ್ತು. ಈ ವೇಳೆ ಗೋವಾ ಸರ್ಕಾರದ ನಿಯೋಗ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭೇಟಿಯಾಗಿ ಅನುಮತಿ ರದ್ದು ಮಾಡುವಂತೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ಬಾಕಿ ಇರುವ ಕಾರಣ ಅನುಮತಿ ತಡೆ ಹಿಡಿಯಲಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಪತ್ರ ಬರೆಯಲಾಗಿತ್ತು. ಈ ಪತ್ರದ ಬೆನ್ನಲ್ಲೇ ರಾಜ್ಯದಲ್ಲಿ ಹೋರಾಟಗಳು ನಡೆದಿದ್ದವು. ಅಲ್ಲದೆ ತಡೆ ರದ್ದು ಮಾಡುವಂತೆ ಕಳೆದ ವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಉಮೇಶ್ ಕತ್ತಿ ಅವರು ಜಾವ್ಡೇಕರ್ ಭೇಟಿ ಮಾಡಿ ಕಾಮಗಾರಿಗೆ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.

  • ಕಳಸಾ ಬಂಡೂರಿಗೆ ತಡೆ- ಜಾವ್ಡೇಕರ್ ಭೇಟಿ ಮಾಡಿದ ಕೇಂದ್ರ ಸಚಿವರ ನಿಯೋಗ

    ಕಳಸಾ ಬಂಡೂರಿಗೆ ತಡೆ- ಜಾವ್ಡೇಕರ್ ಭೇಟಿ ಮಾಡಿದ ಕೇಂದ್ರ ಸಚಿವರ ನಿಯೋಗ

    ನವದೆಹಲಿ: ಮಹದಾಯಿ ಯೋಜನೆಗೆ ನೀಡಿರುವ ತಾತ್ಕಾಲಿಕ ತಡೆಯನ್ನು ಹಿಂಪಡೆಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಕೇಂದ್ರ ಸಚಿವರ ನಿಯೋಗ ಮನವಿ ಮಾಡಿದೆ.

    ಗುರುವಾರ ದೆಹಲಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಉಮೇಶ್ ಕತ್ತಿ ಒಳಗೊಂಡ ನಿಯೋಗ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿ ಮುಂದುವರಿಸುವಂತೆ ಮನವಿ ಮಾಡಿತು.

    ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿದ್ದು ಇದಕ್ಕೆ ಅಡ್ಡಿ ಮಾಡಬಾರದು ಇಲ್ಲಿ ಯಾವುದೇ ಜಲ ವಿದ್ಯುತ್ ಅಥವಾ ನೀರಾವರಿ ಯೋಜನೆಗಳನ್ನು ಮಾಡುತ್ತಿಲ್ಲ. ಹೀಗಾಗಿ ನೀಡಿರುವ ತಡೆಯನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.

    ಕುಡಿಯುವ ನೀರಿನ ಯೋಜನೆಯಾದ ಹಿನ್ನೆಲೆ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿದೆ. ಇದನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಅರ್ಜಿ ಸಲ್ಲಿಸಿವೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಮುಂದೆ ಪರಿಶೀಲನೆ ಮಾಡಿಕೊಳ್ಳೋಣ ಈಗ ಸುಪ್ರೀಂ ಕೋರ್ಟ್ ನೆಪವೊಡ್ಡಿ ಯೋಜನೆಗೆ ನೀಡಿರುವ ಅನುಮತಿಗೆ ತಡೆ ನೀಡಬಾರದು, ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಉಮೇಶ್ ಕತ್ತಿ, ಪ್ರಕಾಶ್ ಜಾವ್ಡೇಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ತೊಂದರೆ ನೀಡುವುದಿಲ್ಲ ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

    ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಒಪ್ಪಿಗೆ ನೀಡಿತ್ತು. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವ ಹಿನ್ನೆಲೆ ಒಪ್ಪಿಗೆಗೆ ತಡೆ ನೀಡುವಂತೆ ಗೋವಾ ಸರ್ಕಾರ ಕೇಂದ್ರ ಸಚಿವ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿತ್ತು. ಒತ್ತಡದ ಬೆನ್ನೆಲ್ಲೇ ಬುಧವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಯೋಜನೆಗೆ ನೀಡಿದ್ದ ಒಪ್ಪಿಗೆಗೆ ತಡೆ ನೀಡಿತ್ತು.

  • ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಗುಡ್‍ನ್ಯೂಸ್: ತುಟ್ಟಿ ಭತ್ಯೆ ಹೆಚ್ಚಳ

    ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಗುಡ್‍ನ್ಯೂಸ್: ತುಟ್ಟಿ ಭತ್ಯೆ ಹೆಚ್ಚಳ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೀಪಾವಳಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಹೆಚ್ಚಿಸಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದೆ.

    ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಕೇಂದ್ರ ಸರ್ಕಾರಿ ನೌಕರರಿಗೆ ಶೇ.5ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, ಜುಲೈ 1, 2019 ರಿಂದಲೇ ಇದು ಪೂರ್ವನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

    ಇಷ್ಟು ದಿನಗಳ ಕಾಲ ಇದ್ದ ಶೇ.12ರಷ್ಟು ತುಟ್ಟಿ ಭತ್ಯೆ (ಡಿಎ)ಯನ್ನು ನೀಡಲಾಗುತಿತ್ತು. ಈಗ ಶೇ.17ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ತುಟ್ಟಿ ಭತ್ಯೆ ಹೆಚ್ಚಳ ಪಿಂಚಣಿದಾರರಿಗೂ ಅನ್ವಯವಾಗಲಿದೆ. ಒಟ್ಟು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಜನ ಪಿಂಚಣಿದಾರರು ಇದರ ಸೌಲಭ್ಯ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

    ಇದು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 16 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದರು.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಸೌಲಭ್ಯ ಪಡೆಯಲು ರೈತರು ಆಧಾರ್ ಲಿಂಕ್ ಮಾಡಲು ಹೆಚ್ಚಿನ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ. ನವೆಂಬರ್ 30ರ ವರೆಗೂ ಅವಧಿಯನ್ನು ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಜೊತೆಗೆ ಆಶಾ ಕಾರ್ಯಕರ್ತೆಯರ ಸಂಭಾವನೆಯನ್ನು ಒಂದು ಸಾವಿರ ರೂ.ದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

  • ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ: ಜಾವಡೇಕರ್

    ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ: ಜಾವಡೇಕರ್

    ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನೇ ನೋಡಿಕೊಳ್ಳಲಿ ಎಂದು ಕೇಂದ್ರ ಸಚಿವ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ.

    8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಮೋದಿ ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ಜಾಮೀನು ಪಡೆಯುವ ಮೂಲಕ ಹೊರಗೆ ಇದ್ದಾರೆ. ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

    ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಮ್ಮ ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ. ಆದರೆ ಅವರು ತಮ್ಮ ಆಪ್ತ ಕೆಲ ಅಭ್ಯರ್ಥಿಗಳ ಪರಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು.

    ನಾವು ಬೇರೆ ಪಕ್ಷದ ಜೊತೆ ಎಂದೂ ಜಗಳಕ್ಕೆ ಇಳಿಯಲ್ಲ. ದೇಶದ ಅಭಿವೃದ್ಧಿಗಷ್ಟೇ ಪ್ರಯಾಸ ಪಡುತ್ತಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿ ವಿಚಾರವನ್ನು ಬಿಟ್ಟು ಬೇರೆ ಎಲ್ಲ ಮಾತುಗಳನ್ನು ಆಡುತ್ತಿದೆ. ರೈತರ ಆತ್ಮಹತ್ಯೆ ಸೇರಿದಂತೆ ಅನಂತ್ ಕುಮಾರ್ ಅವರು ನಿನ್ನೆ ಐದು ಪ್ರಶ್ನೆ ಗಳನ್ನು ಕೇಳಿದ್ದಾರೆ ಅದಕ್ಕೆ ಉತ್ತರ ಕೊಡಲಿ.

    ಮೋದಿ ಅಭ್ಯರ್ಥಿ ಗಳ ಜೊತೆ ಸಂವಾದ ಮಾಡಿರುವುದು ಸ್ಫೂರ್ತಿದಾಯಕ ಹಾಗೂ ಇಂದು ಇತಿಹಾಸ ಸೃಷ್ಟಿಸಿದೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಜನರ ಮನಸನ್ನು ಗೆಲ್ಲಿ, ಅಭಿವೃದ್ಧಿ ಕೆಲಸ ಮಾಡಿ ಅನ್ನುವ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ತಿಳಿಸಿದರು.

    ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಕಾರ್ಯಕರ್ತರೆಲ್ಲರೂ ಬಹಳ ಖುಷಿಯಾಗಿದ್ದಾರೆ. ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರ ಮನಸ್ಸನ್ನ ಗೆಲ್ಲುವಂತೆ ಪ್ರೇರೇಪಿಸಿದ್ದಾರೆ. ರಾಜ್ಯದ ರೈತರ ಸಮಸ್ಯೆ, ನಗರಗಳ ಸಮಸ್ಯೆ ಹಾಗೂ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಏನೇ ಸಮಸ್ಯೆ ಇರಲಿ ಅಭಿವೃದ್ಧಿಯೇ ನಮ್ಮ ಗುರಿ ಎಂದು ತಿಳಿಸಿದ್ದಾರೆ ಎಂದರು.

    ಕಾಂಗ್ರೆಸ್ ಬೇರೆ ರಾಜ್ಯಗಳನ್ನ ಉದಾಹರಣೆಯಾಗಿ ತೋರಿಸುತ್ತದೆ. ಬೇರೆ ರಾಜ್ಯಗಳನ್ನ ಬಿಟ್ಟು ಕರ್ನಾಟಕದ ಬಗ್ಗೆ ಮಾತನಾಡಲಿ. ಆದರೆ ನಾವು ನೇರವಾಗಿ ಕನ್ನಡಿಗರ ಬಗ್ಗೆ ಮಾತನಾಡುತ್ತೇವೆ. ಚಾಮುಂಡೇಶ್ವರಿಯಿಂದ ಬಾದಾಮಿಯ ವರೆಗಿನ ಪ್ರವಾಸದ ವೇಳೆ ಜನ ಗೋ ಬಾಕ್ ಸಿದ್ದರಾಮಯ್ಯ ಅಂತ ಹೇಳುತ್ತಾ ಇದ್ದಾರೆ. ನಿನ್ನೆ ಸಿಎಂಗೆ ದಲಿತ ಮತದಾರನೊಬ್ಬ ಬೆವರಿಳಿಸಿದ್ದು ಜನರ ಮನಸ್ಥಿತಿಯನ್ನು ತಿಳಿಸುತ್ತೆ. ಜನರು ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಹಲವಡೆ ನಕಲಿ ಮತದಾರರು ಹುಟ್ಟಿಕೊಂಡಿದ್ದಾರೆ. ತುಮಕೂರು ಸೇರಿದಂತೆ ಅನೇಕ ಭಾಗದಲ್ಲಿ ನಕಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ನಾವು ಚಾಮುಂಡೇಶ್ವರಿಯಲ್ಲಿ ಮೈತ್ರಿ ಮಾಡಿಕೊಂಡಿಲ್ಲ. ಲಿಂಗಾಯಿತ ವೀರಶೈವ ಮಠವನ್ನು ಟಾರ್ಗೆಟ್ ಮಾಡಿಕೊಂಡು ಹೋಗಿಲ್ಲ. ಅಲ್ಲೂ ಅಭ್ಯರ್ಥಿ ಇದ್ದಾರೆ. ಎಲ್ಲಾ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.

  • ಉತ್ತರನ ಪೌರುಷ ಒಲೆ ಮುಂದೆ, ಬಿಜೆಪಿ ಪೌರುಷ ಮಾಧ್ಯಮಗಳ ಮುಂದೆ : ಸಚಿವ ರಾಮಲಿಂಗಾರೆಡ್ಡಿ

    ಉತ್ತರನ ಪೌರುಷ ಒಲೆ ಮುಂದೆ, ಬಿಜೆಪಿ ಪೌರುಷ ಮಾಧ್ಯಮಗಳ ಮುಂದೆ : ಸಚಿವ ರಾಮಲಿಂಗಾರೆಡ್ಡಿ

    ಬೆಂಗಳೂರು: ನರೇಂದ್ರ ಮೋದಿಯವರೇ ಎರಡೆರಡು ಕಡೆ ಸ್ಪರ್ಧಿಸಿದ್ರು. ಆ ಸಂದರ್ಭದಲ್ಲಿ ಮೋದಿಯವರಿಗೆ ಭಯ ಇತ್ತಾ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

    ಮುಖ್ಯಮಂತ್ರಿ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಈ ವೇಳೆ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಜನ ಸಿಎಂ ಸ್ಪರ್ಧೆ ಮಾಡಿ ಅಂತಾ ಕೇಳಿಕೊಂಡ್ರು. ಹೀಗಾಗಿ ಸಿಎಂ ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಮಾತಾಡುವಾಗ ನೋಡಿಕೊಂಡು ಮಾತಾಡಬೇಕು ಎಂದು ತಿರುಗೇಟು ನೀಡಿದ್ರು.

    ಬಿಜೆಪಿಯಲ್ಲೇ ಭಿನ್ನಮತ ಇದೆ. ಯಡಿಯೂರಪ್ಪ, ಈಶ್ವರಪ್ಪ ಬಡಿದಾಡಿಕೊಂಡಿದ್ರು. ಬಿಜೆಪಿಯಲ್ಲಿರುವಷ್ಟು ಒಳ ಜಗಳ ಬೇರೆಲ್ಲೂ ಇಲ್ಲ. ಬಿಜೆಪಿಯಲ್ಲಿ ಜೈಲಿಗೆ ಹೋಗಿ ಬಂದವರೇ ಹೆಚ್ಚು ಮಂದಿ. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೇ ಬಿಜೆಪಿಯವರು ಮಾಧ್ಯಮಗಳ ಮುಂದೆ ಮಾತ್ರ ಮಾತಾಡುತ್ತಾರೆ. ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಬದಲಾಗಿ ಸಿದ್ದರಾಮಯ್ಯನವರ ಹವಾ ಇದೆ ಎಂದರು.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ 50 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಅಂತ ಬೆಂಗಳೂರಿನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದರು.

  • ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡ್ತಾರಾ ರಾಜ್ಯಪಾಲ ವಿ.ಆರ್.ವಾಲಾ?

    ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡ್ತಾರಾ ರಾಜ್ಯಪಾಲ ವಿ.ಆರ್.ವಾಲಾ?

    ಬೆಂಗಳೂರು: ಭೂಪಸಂದ್ರದ ಬಳಿ ಸಿಎಂ ಸಿದ್ದರಾಮಯ್ಯ ಅಕ್ರಮ ಡಿನೋಟಿಫಿಕೇಶನ್ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಕೇಂದ್ರ ಮಾನವ ಸಂಪನ್ಮೂಲ ಸಚಿವ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಕಾಶ್ ಜಾವಡೇಕರ್ ಭಾನುವಾರ ರಾತ್ರಿ ಅರ್ಧಗಂಟೆಗಳ ಕಾಲ ಡಿನೋಟಿಫಿಕೇಶನ್  ಪ್ರಕರಣದ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಈ ವಿಚಾರದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಇದು ಬೋಗಸ್ ಜನತಾ ಪಾರ್ಟಿಯ ಬೋಗಸ್ ಆರೋಪ ಅಷ್ಟೇ. ಅವರ ಆರೋಪದ ದಾಖಲೆಗಳನ್ನು ನಾವು ಕಸದ ಬುಟ್ಟಿಗೆ ಹಾಕುತ್ತೇವೆ. ಚುನಾವಣೆಯ ಹೊಸ್ತಿಲಲ್ಲಿ ಸಿಎಂ ವಿರುದ್ಧ ಸುಳ್ಳು ಆರೋಪಗಳನ್ನ ಮಾಡ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ಆರೋಪವೇನು?
    ಭೂಪಸಂದದ್ರದ ಸರ್ವೆ ನಂಬರ್ 20, 21ರಲ್ಲಿ ಸುಮಾರು 6 ಎಕರೆ 26 ಗುಂಟೆ ಅಕ್ರಮ ಡಿನೋಟಿಫಿಕೇಷನ್ ನಡೆದಿದೆ. ಆರ್‍ಎಂವಿ ಬಡಾವಣೆಗಾಗಿ ಅಕ್ರಮ ಡಿನೋಟಿಫಿಕೇಶನ್ ನಡೆದಿದೆ. ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್ ವಿರುದ್ದ ದೂರು ನೀಡಿದ್ದರೂ ಎಸಿಬಿ, ಲೋಕಾಯುಕ್ತದಲ್ಲಿ ಸರಿಯಾದ ತನಿಖೆಯಾಗಿಲ್ಲ. ಹಾಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಡಿ ಎಂದು ಡಿಸೆಂಬರ್ 20 ರಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.