ಬೆಂಗಳೂರು: ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಹಫ್ತಾ. ವರ್ಧನ್ ತೀರ್ಥಹಳ್ಳಿ ನಾಯಕ ನಟನಾಗಿ ಲಾಂಚ್ ಆಗುತ್ತಿರೋ ಈ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನವನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಪೋಸ್ಟರ್‍ಗಳ ಮೂಲಕವೇ ಕಡಲ ತಡಿಯ ಭೂಗತ ಲೋಕದ ರೋಚಕ ಸ್ಟೋರಿಯ ಝಲಕ್ ತೋರಿಸಿರುವ ಹಫ್ತಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಬೆರಗಾಗುವಂಥಾ ಮೇಕಿಂಗ್, ಅದಕ್ಕೆ ತಕ್ಕುದಾದ ಪಾತ್ರವರ್ಗ ಮತ್ತು ಖಡಕ್ ಕಥೆಯ ಸುಳಿವಿನ ಮೂಲಕ ಇದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಈಗಾಗಲೇ ಚಿತ್ರರಂಗದ ಗಣ್ಯರೇ ಒಂದಷ್ಟು ಮಂದಿ ಹಫ್ತಾ ಖದರನ್ನು ಕಂಡು ಮೆಚ್ಚಿಕೊಂಡಿದ್ದಾರೆ. ಒಳ್ಳೆ ಮಾತಾಡುತ್ತಲೇ ಶುಭ ಕೋರಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಹಫ್ತಾದ ಅಂತರಾಳವೇನೆಂಬುದರ ಸ್ಪಷ್ಟ ಸೂಚನೆ ನೀಡಿದೆ. ಕರಾವಳಿ ತೀರದಲ್ಲಿನ ಮಾಫಿಯಾ ಜಗತ್ತಿನ ಸುತ್ತ ಅತ್ಯಾಕರ್ಷಕ ಕಥೆ ಚಿತ್ರವಿಚಿತ್ರ ಪಾತ್ರಗಳ ಮೂಲಕ ಅನಾವರಣಗೊಂಡಿರೋದೂ ಪಕ್ಕಾ ಆಗಿದೆ. ವರ್ಧನ್ ತೀರ್ಥಹಳ್ಳಿ ನಾಯಕನಾಗಿ, ವಿಲನ್ ಆಗಿ ಮಂಗಳಮುಖಿ ಪಾತ್ರದಲ್ಲಿಯೂ ಅಬ್ಬರಿಸಿದ ರೀತಿ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ.
ಈ ಮೂಲಕವೇ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಯಾರೂ ಮುಟ್ಟದ ಕಥೆಯೊಂದನ್ನು ಎತ್ತಿಕೊಂಡು ಆರಂಭಿಕ ಹೆಜ್ಜೆಗಳಲ್ಲಿಯೇ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೈತ್ರಿ ಮಂಜುನಾಥ್ ಮತ್ತು ಬಾಲರಾಜ್ ಸೇರಿಕೊಂಡು ಈ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆಂಬುದಕ್ಕೂ ಈ ಟ್ರೈಲರ್ ಸಾಕ್ಷಿಯಂತಿದೆ. ಒಟ್ಟಾರೆಯಾಗಿ ಕಡಲ ಕಿನಾರೆಯ ಭೂಗತ ಲೋಕದ ಈ ವಿಶಿಷ್ಟ ಕಥಾನಕ ಭಾರೀ ಗೆಲುವಿನ ರೂವಾರಿಯಾಗೋ ಮುನ್ಸೂಚನೆಯಂತೆ ಈ ಟ್ರೈಲರ್ ಮೂಡಿ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಫ್ತಾ ಬಿಡುಗಡೆಯ ದಿನಾಂಕವೂ ಹೊರಬೀಳಲಿದೆ.
ಬೆಂಗಳೂರು: ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ `ಹಫ್ತಾ’ ಚಿತ್ರದ ಹವಾ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್, ಹಾಡುಗಳ ಮೂಲಕವೇ ಭರ್ಜರಿ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಬಗ್ಗೆ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಯಾವುದೇ ಒಂದು ಸಿನಿಮಾ ಅಂದರೂ ಹೆಚ್ಚಿನದಾಗಿ ಹಲವರ ಅದೆಷ್ಟೋ ವರ್ಷದ ಕನಸು ನನಸಾದ ಕಥೆಗಳಿರುತ್ತವೆ. ಹಫ್ತಾ ಚಿತ್ರದ ವಿಚಾರದಲ್ಲಿಯೂ ಅಂಥವೇ ಒಂದಷ್ಟು ಮೊದಲ ಕನಸಿನ ಕಥೆಗಳಿವೆ. ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿರೋ ಬಾಲರಾಜ್ ಟಿಸಿ ಪಾಳ್ಯ ಕೂಡಾ ವರ್ಷಾಂತರಗಳ ಕನಸೊಂದು ಹಫ್ತಾ ಮೂಲಕ ನನಸಾದ ಖುಷಿಯಲ್ಲಿದ್ದಾರೆ.
ಹಫ್ತಾ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರ ಪಾಲಿಗೂ ಮೊದಲ ಹೆಜ್ಜೆ. ವರ್ಧನ್ ತೀರ್ಥಹಳ್ಳಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕನಾಗಿ ಅವರಿಗೂ ಇದು ಮೊದಲ ಹೆಜ್ಜೆಯೇ. ಇನ್ನು ನಿರ್ಮಾಪಕರಾದ ಮೈತ್ರಿ ಮಂಜುನಾಥ್ ಅವರೂ ಇದೇ ಸಾಲಿನಲ್ಲಿದ್ದಾರೆ. ಅದೇ ರೀತಿ ತಮ್ಮದೇ ಬ್ಯುಸಿನೆಸ್, ವಹಿವಾಟು ಅಂತಿದ್ದರೂ ಸಿನಿಮಾ ಧ್ಯಾನವನ್ನು ಬಹುವಾಗಿ ಹಚ್ಚಿಕೊಂಡಿದ್ದ ಬಾಲರಾಜ್ ಕೂಡಾ ಹಫ್ತಾ ಮೂಲಕವೇ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಬಾಲರಾಜ್ ಮೂಲ ಬೆಂಗಳೂರಿಗರೇ. ಟಿಸಿ ಪಾಳ್ಯ ಏರಿಯಾದಲ್ಲಿಯೇ ಹುಟ್ಟಿ ಬೆಳೆದ ಅವರು ಕಾಲೇಜು ದಿನಗಳಲ್ಲಿಯೇ ಸಹಜವೆಂಬಂಥಾ ಸಿನಿಮಾ ವ್ಯಾಮೋಹ ಹೊಂದಿದ್ದವರು. ತಾನೂ ಕೂಡಾ ಈ ಬಣ್ಣದ ಜಗತ್ತಿನ ಭಾಗವಾಗಬೇಕೆಂಬ ಕನಸನ್ನು ಆ ಕಾಲದಿಂದಲೇ ಕಾಪಿಟ್ಟುಕೊಂಡು ಬಂದಿದ್ದ ಬಾಲರಾಜ್ ಆ ನಂತರದಲ್ಲಿ ಜೀವನೋಪಾಯಕ್ಕಾಗಿ ತಮ್ಮದೇ ಬ್ಯುಸಿನೆಸ್‍ನ ಹಾದಿ ಹಿಡಿದಿದ್ದರು. ಈ ಜಂಜಾಟ, ಒತ್ತಡಗಳ ನಡುವೆಯೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದ ಅವರಿಗೆ ಕಡೆಗೂ ಹಫ್ತಾ ಮೂಲಕ ಆ ಅವಕಾಶ ಕೂಡಿ ಬಂದಿದೆ.
ಈ ಸಿನಿಮಾ ನಿರ್ದೇಶಕರಾದ ಪ್ರಕಾಶ್ ಹೆಬ್ಬಾಳ, ನಿರ್ಮಾಪಕ ಮೈತ್ರಿ ಮಂಜುನಾಥ್ ಹಾಗೂ ಬಾಲರಾಜ್ ಸ್ನೇಹಿತರು. ವರ್ಷಗಳ ಹಿಂದೆ ಪ್ರಕಾಶ್ ಹೆಬ್ಬಾಳ ಹಫ್ತಾ ಚಿತ್ರದ ಬಗ್ಗೆ ಹೇಳಿ, ಕಥೆಯನ್ನೂ ವಿವರಿಸಿ ಬಾಲರಾಜ್ ಮುಂದೆ ನಿರ್ಮಾಣದಲ್ಲಿ ಭಾಗಿಯಾಗುವ ಬಗ್ಗೆ ಆಫರ್ ಇಟ್ಟಿದ್ದರಂತೆ. ಆ ಕ್ಷಣವೇ ಒಪ್ಪಿಗೆ ಸೂಚಿಸಿದ್ದ ಬಾಲರಾಜ್ ಅಂಥಾದ್ದೊಂದು ಹಠಾತ್ ನಿರ್ಧಾರ ತಳೆಯಲು ಕಾರಣವಾದದ್ದು ಹಫ್ತಾದ ಡಿಫರೆಂಟ್ ಕಥೆ. ಆ ಬಳಿಕ ಅಂದುಕೊಂಡಂತೆಯೇ ಸಾಗಿ ಬಂದು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿರುವ ತೃಪ್ತಿ ಬಾಲರಾಜ್ ಅವರಲ್ಲಿದೆ.
ಇಂಥಾ ಮೊದಲ ಹೆಜ್ಜೆಗಳು ಒಳ್ಳೆ ಅಭಿಪ್ರಾಯ, ಪ್ರೋತ್ಸಾಹಗಳಿಂದ ಮುದಗೊಳ್ಳುತ್ತವೆ. ಅದರಲ್ಲಿಯೂ ಗೆಲುವಿನ ಸೂಚನೆ ಸಿಕ್ಕಿದರಂತೂ ಉತ್ಸಾಹ ಇನ್ನೂ ಇಮ್ಮಡಿಸುತ್ತದೆ. ಬಾಲರಾಜ್ ಈಗ ಅಂಥಾದ್ದೇ ಮೂಡಿನಲ್ಲಿದ್ದಾರೆ. ಹಫ್ತಾ ಚಿತ್ರಕ್ಕೆ ಎಲ್ಲ ದಿಕ್ಕುಗಳಿಂದಲೂ ಸಕಾರಾತ್ಮಕ ಸ್ವಾಗತವೇ ಸಿಗುತ್ತಿದೆ. ಇನ್ನೇನು ತೆರೆಗೆ ಬರಲಿರೋ ಈ ಚಿತ್ರದ ಗೆಲುವಿನ ಸೂಚನೆ ಈಗಾಗಲೇ ಸಿಕ್ಕಿಬಿಟ್ಟಿದೆ. ಹಫ್ತಾ ಮೂಲಕವೇ ನಿರ್ಮಾಪಕರಾಗಿ ಅದೃಷ್ಟ ಪರೀಕ್ಷೆಗಿಳಿದಿರೋ ಬಾಲರಾಜ್ ಕೂಡಾ ಇದರಿಂದ ಖುಷಿಗೊಂಡು ದೊಡ್ಡ ಗೆಲುವೊಂದನ್ನು ಎದುರು ನೋಡುತ್ತಿದ್ದಾರೆ.
ಬೆಂಗಳೂರು: ಈಗ ಎಲ್ಲೆಡೆ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟುಹಾಕಿರೋ ಚಿತ್ರ ಹಫ್ತಾ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಖಳನಟನಾಗಿ ಅಬ್ಬರಿಸಿರೋ ಯುವ ನಟ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿ ಹೊರಹೊಮ್ಮುವ ಖುಷಿಯಲ್ಲಿದ್ದಾರೆ. ಈವರೆಗೂ ಹೊರಬಂದಿರೋ ಪೋಸ್ಟರ್ ಗಳಲ್ಲಿನ ವಿಭಿನ್ನ ಛಾಯೆಯ ಮೂಲಕವೇ ಭರವಸೆ ಹುಟ್ಟಿಸಿವೆ. ಕರಾವಳಿ ತೀರದ ಭೂಗತ ಮಜಲೊಂದನ್ನು ತೆರೆದಿಡುವ ಮಜವಾದ ಕಥಾ ಹಂದರ ಹೊಂದಿರೋ ಈ ಚಿತ್ರ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರ ಮೊದಲ ಕನಸು.
ಇಂಥಾ ಪ್ರತೀ ಮೊದಲ ಹೆಜ್ಜೆಯ ಹಿಂದೆಯೂ ಅದೆಷ್ಟೋ ವರ್ಷಗಳ ತಪನೆಯಿರುತ್ತದೆ. ಕಷ್ಟ ಕಾರ್ಪಣ್ಯಗಳನ್ನು ದಾಟಿಕೊಂಡು ಗುರಿಯತ್ತ ಸಾಗಿ ಬಂದ ಸ್ಫೂರ್ತಿದಾಯಕ ಕಹಾನಿಯೂ ಇರುತ್ತದೆ. ಇದೀಗ ಹಫ್ತಾ ಎಂಬ ಅಪರೂಪದ ಚಿತ್ರವೊಂದರ ಮೂಲಕವೇ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಂಡಿರುವ ಪ್ರಕಾಶ್ ಹೆಬ್ಬಾಳ ಅವರ ಹಿಂದೆಯೂ ಅಂಥಾದ್ದೇ ಒಂದು ಕಥೆಯಿದೆ. ಏಳೆಂಟು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಅವುಡುಗಚ್ಚಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಾ ಕಡೆಗೂ ಒಂದೊಳ್ಳೆ ಸಿನಿಮಾ ನಿರ್ದೇಶನ ಮಾಡಿದ ಆತ್ಮತೃಪ್ತಿಯೂ ಅವರ ಮಾತುಗಳಲ್ಲಿ ಹಣಕಿ ಹಾಕುತ್ತವೆ.
ಪ್ರಕಾಶ್ ಹೆಬ್ಬಾಳ ರಮೇಶ್ ಅರವಿಂದ್, ದಯಾಳ್ ಪದ್ಮನಾಭನ್ ಮುಂತಾದವರ ಗರಡಿಯಲ್ಲಿ ಪಳಗಿಕೊಂಡವರು. ಬೆಂಗಳೂರಿನಂಥಾ ಸಿಟಿಯಲ್ಲಿ ಹುಟ್ಟಿದರೂ ಬೇರೆ ಭಾಗಗಳತ್ತ, ಅಲ್ಲಿನ ಆಗು ಹೋಗುಗಳತ್ತ ಬೆರಗುಗಣ್ಣಿನ ನೋಟ ಹೊಂದಿದ್ದ ಅವರ ಪಾಲಿಗೆ ಕಾಲೇಜು ದಿನಗಳಲ್ಲಿಯೇ ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ತೀವ್ರವಾಗಿತ್ತು. ಓದೆಲ್ಲವೂ ಮುಗಿದಾಕ್ಷಣವೇ ತನ್ನ ಕನಸಿನ ಕ್ಷೇತ್ರದ ಕಕ್ಷೆ ತಲುಪಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸಲಾರಂಭಿಸಿದ್ದ ಅವರು ಕಡೆಗೂ ಜೋಕಾಲಿ ಎಂಬ ಚಿತ್ರದ ಮೂಲಕ ಅದನ್ನು ಸಾಕಾರಗೊಳಿಸಿಕೊಂಡಿದ್ದರು. ಈ ಚಿತ್ರದಲ್ಲವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ಈ ಮೂಲಕವೇ ನಿರ್ದೇಶನದ ಪಟ್ಟುಗಳ ಮೊದಲ ಪಾಠ ಅರಿತುಕೊಂಡ ಪ್ರಕಾಶ್ ಪಾಲಿಗೆ ಮತ್ತೊಂದು ಅಯಾಮವನ್ನು ಅನಾವರಣಗೊಳಿಸಿದ್ದು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹಗ್ಗದ ಕೊನೆ ಸಿನಿಮಾ. ಈ ನಡುವೆಯೇ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಲುವಾಗಿ ಪೀಕ್ ಅವರ್ ಎಂಬೊಂದು ಕಿರು ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಇದು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದರಿಂದಲೇ ಭರವಸೆ ತುಂಬಿಕೊಂಡ ಪ್ರಕಾಶ್ ಹೆಬ್ಬಾಳ, ಒಂದು ವಿಭಿನ್ನವಾದ ಕಥೆಯೊಂದಿಗೇ ನಿರ್ದೇಶಕನಾಗಿ ಪಾದಾರ್ಪಣೆ ಮಾಡಬೇಕೆಂಬ ನಿರ್ಧಾರದೊಂದಿಗೆ ಮುಂದುವರೆಯಲಾರಂಭಿಸಿದ್ದರು. ಆಗ ಅವರಿಗೆ ಆಕರ್ಷಣೆಯಾಗಿ ಕಂಡದ್ದು ಕರಾವಳಿ ತೀರದ ಭೂಗತ ಜಗತ್ತು. ಈಗಾಗಲೇ ಆ ಭಾಗದ ಕೆಲವರು ಕೋಸ್ಟಲ್ ಏರಿಯಾದ ಕತ್ತಲ ಲೋಕದ ಹಲವಾರು ಮಜಲುಗಳನ್ನು ತೆರೆ ಮೇಲೆ ತಂದಿದ್ದಾರೆ. ಆದರೆ ಅದರಾಚೆಯ ಗುರುತಿರದ ಮಜಲುಗಳನ್ನು ದಕ್ಕಿಸಿಕೊಳ್ಳೋದು ತಪ್ತ ಮನಸುಗಳಿಗೆ ಮಾತ್ರವೇ ಸಾಧ್ಯ. ಅಂಥಾದ್ದೊಂದು ಮನಸ್ಥಿತಿ ಇರೋದರಿಂದಲೇ ಅದೆಲ್ಲಕ್ಕಿಂತಲೂ ಭಿನ್ನ ನೋಟದೊಂದಿಗೇ ಮಜವಾದೊಂದು ಕಥೆ ಹೆಣೆದ ಪ್ರಕಾಶ್ ಕಡೆಗೂ ಅಂದುಕೊಂಡಂತೆಯೇ ಅದಕ್ಕೆ ದೃಶ್ಯ ರೂಪ ನೀಡಿದ್ದಾರೆ.
ಪ್ರತಿಯೊಂದರಲ್ಲಿಯೂ ಬಹಳ ಎಚ್ಚರಿಕೆಯಿಂದ, ಶ್ರದ್ಧೆಯಿಂದಲೇ ಪ್ರಕಾಶ್ ಹಫ್ತಾ ಚಿತ್ರವನ್ನು ರೂಪಿಸಿದ್ದಾರೆ. ಆ ಕಾರಣದಿಂದಲೇ ಬಿಡುಗಡೆಯ ಹಂತದಲ್ಲಿರೋ ಹಫ್ತಾ ದೊಡ್ಡ ಮಟ್ಟದಲ್ಲಿಯೇ ಸೌಂಡ್ ಮಾಡುತ್ತಿದೆ. ಯಾರಿಗೇ ಆದರೂ ಮೊದಲ ಪ್ರಯತ್ನಕ್ಕೇ ಈ ಪಾಟಿ ಪಾಸಿಟಿವ್ ವಾತಾವರಣ ಸೃಷ್ಟಿಯಾದರೆ ಖುಷಿಯಾಗುತ್ತದೆ. ಪ್ರಕಾಶ್ ಹೆಬ್ಬಾಳ್ ಕೂಡಾ ಇದೀಗ ಅಂಥಾದ್ದೊಂದು ತುಂಬು ಖುಷಿಯ ವಾರಸೂದಾರರಾಗಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಪ್ರಯತ್ನಕ್ಕೆ ಗೆಲುವಾಗುವ ತುಂಬು ಭರವಸೆಯೂ ಅವರಲ್ಲಿದೆ.
ಮೈತ್ರಿ ಪ್ರೊಡಕ್ಷನ್ ಲಾಂಛನದಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣದ ಹಫ್ತಾ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಪಿಕೇಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್ ನಿರ್ದೇಶನವಿದೆ.
ಸೂರಿ ಸಿನಿಟೆಕ್- ಛಾಯಾಗ್ರಹಣ, ಸಂಗೀತ – ವಿಜಿ ಯಾಡ್ರ್ಲಿ, ಹಿನ್ನೆಲೆ ಸಂಗೀತ – ಗೌತಮ್ ಶ್ರೀವತ್ಸ, ಸಂಕಲನ -ವೆಂಕಿ ಯು.ಡಿ.ವಿ, ಸಹನಿರ್ದೇಶನ – ಕುಮಾರ್ ಟಿ ಗೌಡ ಬಸವರಾಜ್, ಸಾಹಸ – ರಾಕಿ ರಮೇಶ್, ನೃತ್ಯ – ಜೈ ನಿರ್ಮಾಣ ನಿರ್ವಹಣೆ – ಅಚ್ಯುತ್‍ರಾವ್, ದಶಾವರ ಚಂದ್ರು.
ಈ ಚಿತ್ರವು ಸಂಪೂರ್ಣ ವಾಣಿಜ್ಯಾತ್ಮಕ ಮನರಂಜನೆಯ ಚಿತ್ರವಾಗಿದ್ದು ಚಿತ್ರಕಥೆಯು ಭೂಗತ ಜಗತ್ತಿನ ಹಫ್ತಾ ವಸೂಲಿ ಮತ್ತು ಸುಪಾರಿ ಕಿಲ್ಲರ್ ಗಳ ಅಂಶಗಳನ್ನು ಒಳಗೊಂಡಿರುತ್ತದೆ. ತಾರಾಗಣದಲ್ಲಿ ವರ್ಧನ್ ತೀರ್ಥಹಳ್ಳಿ, ಬಿಂಬಶ್ರೀ ನಿನಾಸಂ, ರಾಘವ್ ನಾಗ್, ಸೌಮ್ಯ ತತೀರ, ಬಲರಾಜ್ ವಾಡಿ, ದಶಾವರ ಚಂದ್ರು, ಉಗ್ರಂ ರವಿ, ಚಂದ್ರು ಮುಂತಾದವರಿದ್ದಾರೆ.