Tag: prakash belavadi

  • ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    – ಹೈಕೋರ್ಟ್‌ನಲ್ಲಿ ತೇಜಸ್ವಿ ಸೂರ್ಯ ವಾದ ಮಂಡನೆ

    ಬೆಂಗಳೂರು: ಸುರಂಗ ಮಾರ್ಗ (Bengaluru Tunnel Road) ವಿವಾದ ಈಗ ಹೈಕೋರ್ಟ್ ಅಂಗಳ ತಲುಪಿದೆ. ಟನಲ್ ರಸ್ತೆ ಯೋಜನೆ ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ (Tejasvi Surya), ನಟ ಪ್ರಕಾಶ್ ಬೆಳವಾಡಿ ಅರ್ಜಿ ಸಲ್ಲಿಸಿದ್ದಾರೆ.

    ಯೋಜನೆಗೆ ಪರಿಸರ ಪರಿಣಾಮ ಮೌಲ್ಯಮಾಪನವನ್ನು ನಡೆಸದಿರುವುದು, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದೊಂದಿಗೆ ಸಮಾಲೋಚಿಸದಿರುವುದು ಮತ್ತು ವಿವರವಾದ ಯೋಜನಾ ವರದಿ, ವಿಶೇಷವಾಗಿ ಐತಿಹಾಸಿಕ ಲಾಲ್‌ಬಾಗ್ ಬಂಡೆಯ ಕೆಳಗೆ ಹಾದುಹೋಗುವ ಸುರಂಗದ ಜೋಡಣೆಯ ಬಗ್ಗೆ ಇರುವ ಕಳವಳಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು – ಎಂ.ಬಿ ಪಾಟೀಲ್ ಆಗ್ರಹ

    ಹೈಕೋರ್ಟ್‌ನಲ್ಲಿ ಖುದ್ದು ವಾದ ಮಂಡನೆ ಮಾಡಿದ ವಕೀಲರೂ ಆಗಿರುವ ತೇಜಸ್ವಿ ಸೂರ್ಯ, ಯೋಜನೆಯಿಂದ ಸುಮಾರು 6.5 ಎಕರೆ ಲಾಲ್‌ಬಾಗ್ ಭೂಮಿಗೆ ಪರಿಣಾಮ ಬೀರಬಹುದು. ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಗುರುತಿಸಲ್ಪಟ್ಟಿರುವ 3,000 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್ ಬಂಡೆಗೆ ಈ ಯೋಜನೆಯಿಂದ ಮಾರಕ ಆಗುತ್ತೆ. ತೋಡುವ ಸುರಂಗದಿಂದಾಗಿ ಈ ಬಂಡೆಯು ಗಂಭೀರ ಅಪಾಯವನ್ನು ಎದುರಿಸುತ್ತದೆ. ಹಲವು ಮರಗಳಿಗೂ ಕೊಡಲಿ ಬೀಳಲಿದೆ ಎಂದು ತಿಳಿಸಿದರು.

    ಯೋಜನೆಯೊಂದಿಗೆ ಸಂಬಂಧಿಸಿದ ಮರಗಳನ್ನು ಕಡಿಯುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಪರಿಸರ ಪರಿಣಾಮ ಮೌಲ್ಯಮಾಪನದ ಕುರಿತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದಲೂ ಅಭಿಪ್ರಾಯ ಕೇಳಿದ ಕೋರ್ಟ್, ನಂತರ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ರಂದು ಮುಂದೂಡಿದೆ. ಇದನ್ನೂ ಓದಿ: ಚಾಮುಂಡಿ ತಾಯಿಯ ಕ್ಷಮೆ ಕೇಳು: ಪ್ರತಾಪ್‌ ಸಿಂಹಗೆ ಪ್ರದೀಪ್‌ ಈಶ್ವರ್‌ ಆಗ್ರಹ

  • ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ನ್ನಡ ಚಿತ್ರರಂಗವನ್ನು ತಮ್ಮ ವಿಭಿನ್ನ ಆಲೋಚನೆಗಳ ಮೂಲಕವೇ ಬೆಳಗಿದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಿತ್ರರಂಗ ಒಂದೇ ಬಿಂದುವಿನ ಸುತ್ತ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಹೊಸ ಸಾಧ್ಯತೆಗಳ ಬ್ರಹ್ಮಾಂಡವನ್ನೇ ಬಿಚ್ಚಿಟ್ಟವರು ಪುಟ್ಟಣ್ಣ ಕಣಗಾಲ್. ಇದರೊಂದಿಗೆ ಪರಭಾಷಾ ಚಿತ್ರರಂಗದ ಮಂದಿಯೇ ಬೆರಗಾಗುವಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕಣಗಾಲರ ಪ್ರಯೋಗಶೀಲತೆಗೆ ಕಥಾ ಸಂಗಮ ಕಿರೀಟವಿದ್ದಂತೆ. ಇದೀಗ ಈಗಿನ ತಲೆಮಾರಿನ ಕ್ರಿಯಾಶೀಲ ನಿರ್ದೇಶಕ ರಿಷಬ್ ಶೆಟ್ಟಿ ಆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸುವಂತಹ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ರೂಪುಗೊಂಡಂತಿರುವ ಹೊಸ `ಕಥಾ ಸಂಗಮ’ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮವೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಒಂದು ಸಿನಿಮಾ ನಿರ್ದೇಶನಕ್ಕಿಳಿದರೆಂದರೆ ಅಲ್ಲೇನೋ ಹೊಸತನ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಚಿತ್ರವನ್ನವರು ರೂಪಿಸಿದ್ದ ರೀತಿಯೇ ಅವರೆಂತಹ ಭಿನ್ನ ನಿರ್ದೇಶಕ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಈ ಕಥಾ ಸಂಗಮದಲ್ಲಂತೂ ಅವರು ಕನ್ನಡ ಚಿತ್ರರಂಗದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಪ್ರಯತ್ನ ಮಾಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ನಾಲ್ಕು ಕಥೆಗಳನ್ನು ಹೇಳಿದ್ದರು. ರಿಷಬ್ ಶೆಟ್ಟರು ಈ ಕಥಾ ಸಂಗಮದಲ್ಲಿ ಏಳು ಕಥೆಗಳನ್ನು ಹೇಳಿದ್ದಾರೆ. ಇಲ್ಲಿ ಏಳು ಜನ ನಿರ್ದೇಶಕರು, ಏಳು ಮಂದಿ ಛಾಯಾಗ್ರಾಹಕರು ಮತ್ತು ಏಳು ಜನ ಸಂಗೀತ ನಿರ್ದೇಶಕರು ಸೇರಿ ಈ ಸಿನಿಮಾವನ್ನು ನಿರ್ವಹಿಸಿದ್ದಾರೆ. ರಿಷಬ್ ಶೆಟ್ಟಿ ಅದರ ಸೂತ್ರ ಹಿಡಿದು ಮುನ್ನಡೆಸಿದ್ದಾರೆ. ಈ ಸಿನಿಮಾಗೀಗ ಸೆನ್ಸಾರ್ ಮಂಡಳಿ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಈ ಮೂಲಕ ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ನೋಡುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಹಲವು ಬಗೆಯ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಗಳು ಹತ್ತಿರವಾಗುತ್ತಿವೆ. ನಿರ್ದೇಶಕ ರಿಷಬ್ ಶೆಟ್ಟಿ ಸದಾ ಸಿನಿಮಾ ಧ್ಯಾನದಲ್ಲಿಯೇ ತಲ್ಲೀನರಾಗಿರುವವರು. ಕಥಾ ಸಂಗಮದಂತಹ ಗುಂಗೀಹುಳ ಅವರ ಮನಸ್ಸು ಹೊಕ್ಕು ಕೆಲಸ ಶುರುವಿಟ್ಟುಕೊಂಡಿದ್ದದ್ದು ವರ್ಷಗಳ ಹಿಂದೆ. ನಂತರ ಪಟ್ಟು ಬಿಡದೇ ಏಳು ಮಂದಿ ಪ್ರತಿಭಾವಂತರನ್ನು ಹುಡುಕಿ, ಚೆಂದದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈ ರಿಸ್ಕಿ ಸಾಹಸಕ್ಕೆ ಕೈ ಹಾಕಿದ್ದರು. ಪುಟ್ಟಣ್ಣ ಕಣಗಾಲರ ಸ್ಫೂರ್ತಿಯಿಂದಲೇ ತಯಾರಾದ ಈ ಸಿನಿಮಾವನ್ನು ಅವರಿಗೇ ಅರ್ಪಿಸುವ ಮೂಲಕ ಗೌರವ ತೋರಿಸಲಾಗಿದೆ. ಕಣಗಾಲರ ಕೀರ್ತಿಯನ್ನು ಮತ್ತಷ್ಟು ಮಿರುಗಿಸುವಂತೆಯೇ ಈ ಸಿನಿಮಾ ಮೂಡಿ ಬಂದಿದೆ ಅನ್ನೋದು ಈಗಾಗಲೇ ಸ್ಪಷ್ಟಗೊಂಡಿದೆ.

    ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ರಿಷಬ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್ ಮುಂತಾದವರು ಈ ಏಳೂ ಕಥೆಗಳ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಏಳೂ ಕಥೆಗಳ ಪ್ರತೀ ಪಾತ್ರಗಳೂ ಅದೆಷ್ಟು ಭಿನ್ನವಾಗಿವೆ ಅನ್ನೋದಕ್ಕೆ ಮೊನ್ನೆ ಬಿಡುಗಡೆಗೊಂಡಿರೋ ಟ್ರೇಲರ್‍ನಲ್ಲಿ ಸಾಕ್ಷಿಗಳಿವೆ. ವಾರದೊಪ್ಪತ್ತಿನಲ್ಲಿಯೇ ಕಥಾ ಸಂಗಮ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.