Tag: Prakash Ambedkar

  • ದುಬೈನಲ್ಲಿ ಶರದ್ ಪವಾರ್, ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು: ಪ್ರಕಾಶ್ ಅಂಬೇಡ್ಕರ್

    ದುಬೈನಲ್ಲಿ ಶರದ್ ಪವಾರ್, ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು: ಪ್ರಕಾಶ್ ಅಂಬೇಡ್ಕರ್

    ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ (Sharad Pawar) ಮುಖ್ಯಮಂತ್ರಿಯಾಗಿದ್ದಾಗ ದುಬೈನಲ್ಲಿ (Dubai) ದಾವೂದ್ ಇಬ್ರಾಹಿಂನನ್ನು (Dawood Ibrahim) ಭೇಟಿಯಾಗಿದ್ದರು ಎಂದು ವಂಚಿತ್ ಬಹುಜನ ಆಘಾಡಿ (ವಿಬಿಎ) ಮುಖ್ಯಸ್ಥ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ (Prakash Ambedkar) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಅವರು ಮುಖ್ಯಮಂತ್ರಿಯಾಗಿದ್ದಾಗ ದಾವೂದ್ ಇಬ್ರಾಹಿಂನನ್ನು ಭೇಟಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ? ಎಂಬುದನ್ನು ಖಚಿತಪಡಿಸಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಶರದ್ ಪವಾರ್ ಅವರು 1988 ರಿಂದ 1991 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ವಿದೇಶ ಪ್ರವಾಸ ಮಾಡಿದ್ದರು. ಮೊದಲು ಲಂಡನ್‌ಗೆ ಹೋಗಿದ್ದರು, ನಂತರ ಕ್ಯಾಲಿಫೋರ್ನಿಯಾದಲ್ಲಿ ಸಭೆ ಒಂದರ ಸಲುವಾಗಿ ಎರಡು ದಿನ ಕಳೆದಿದ್ದರು. ಬಳಿಕ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾದರು. ಆ ದಿನ ಸಂಜೆ ಪವಾರ್ ಲಂಡನ್‌ಗೆ ತೆರಳಿ ಎರಡು ದಿನಗಳ ನಂತರ ಭಾರತಕ್ಕೆ ಮರಳಿದ್ದರು. ಈ ಸಭೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.

    ನಾನು ಯಾವುದೇ ಆರೋಪ ಮಾಡಿಲ್ಲ, ಆದರೆ ನಾನು ಕೆಲವು ಸತ್ಯಗಳನ್ನು ಸಮಾಜದ ಮುಂದಿಟ್ಟಿದ್ದೇನೆ. ಮುಖ್ಯಮಂತ್ರಿಯಾಗಿ ಪವಾರ್ ಅವರು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಲ್ಲದೇ ಸಭೆಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ? ದಾವುದ್‌ ಇಬ್ರಾಹಿಂ ಹಾಗೂ ಪವಾರ್ ಅವರ ಈ ಭೇಟಿಯ ವಿಶೇಷತೆ ಏನು ಎಂದು ಬಹಿರಂಗಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಎಲ್ಲಾ 288 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ಅಲ್ಲ, ಹಿಂದೂ ವಿರೋಧಿ: ಪ್ರಕಾಶ್ ಅಂಬೇಡ್ಕರ್

    ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ಅಲ್ಲ, ಹಿಂದೂ ವಿರೋಧಿ: ಪ್ರಕಾಶ್ ಅಂಬೇಡ್ಕರ್

    ಧಾರವಾಡ: ಸಂವಿಧಾನ ಅಷ್ಟೇ ಅಲ್ಲ, ಈ ದೇಶದ ಜನರೇ ತೊಂದರೆಯಲ್ಲಿದ್ದಾರೆ. ಈಗ ಸರ್ಕಾರ ಮುಸ್ಲಿಮರ ಮುಖ ತೋರಿಸುತ್ತಿದೆ, ಆದರೆ ನಿಜವಾಗಿ ಇದು ಹಿಂದೂ ವಿರೋಧಿ ಸರ್ಕಾರ ಎಂಬ ಆರೋಪ ಇದೆ ಎಂದು ಬಿ.ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, 70 ವರ್ಷದಲ್ಲಿ ಜನರು ಜಾಗೃತರಾಗಿದ್ದಾರೆ. ರಾಜಕಾರಣಿಗಳು ನಿಜ ಹೇಳುತ್ತಾರೋ? ಸುಳ್ಳು ಹೇಳ್ಳುತ್ತಾರೋ ಎಂಬುದನ್ನು ಜನರು ತಿಳಿಯುತ್ತಿದ್ದಾರೆ. ಮೋದಿ ಅವರು ಜನರ ದಾರಿ ತಪ್ಪಿಸುವ ಮಾತು ಹೇಳಬಾರದು ಎಂದು ಕಿಡಿಕಾರಿದರು.

    ಅಸ್ಸಾಂನಲ್ಲಿ 5 ಲಕ್ಷ ಮುಸ್ಲಿಂ ಹಾಗೂ 14 ಲಕ್ಷ ಹಿಂದೂ ಜನರಿದ್ದಾರೆ. 6 ಕೋಟಿ ಜನಸಂಖ್ಯೆ ಇರುವ ರಾಜ್ಯದ ಸ್ಥಿತಿ ಏನಾಗಬಹುದು ವಿಚಾರ ಮಾಡಿ. ಜೆಎನ್‍ಯು ಗಲಾಟೆ ಒಳಗಿನ ವಿಷಯದಲ್ಲಿ ಹಿಂದೂ ಸಂಘಟನೆ ಹೆಸರಿನಲ್ಲಿ ಅಲ್ಲಿ ಗುಂಡಾಗಿರಿ ನಡೆದಿದ್ದಕ್ಕೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.

    ಆರ್‌ಎಸ್‌ಎಸ್‌ ಮುಖ ಇದು, ನಮ್ಮ ಮಾತು ಕೇಳದೆ ಇದ್ರೆ ಹೊಡೆಯುತ್ತೇವೆ ಎನ್ನುವುದೇ ಇದರ ಅರ್ಥ ಎಂದು ಆರೋಪಿಸಿದರು. ಸಂವಿಧಾನ ಸುಡುವ ಮಾತನ್ನ ಪ್ರಸಾದ ಎನ್ನುವವರು ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ಮುಖವೇ ಹಿಟ್ಲರಿಸಂ, ನಮ್ಮ ಜೊತೆ ಬರದೆ ಇದ್ದರೆ ಹೊಡೆಯುತ್ತೇವೆ ಅಂತ ಮುಸೊಲಿನಿ ಹಾಗೂ ಹಿಟ್ಲರ್ ಕೂಡಾ ಹೇಳುತ್ತಿದ್ದರು. ಅದನ್ನೇ ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    2024ಕ್ಕೆ ಚುನಾವಣೆ ಇದೆ, ಅಲ್ಲಿವರೆಗೆ ಇವರು ಸರ್ಕಾರ ತೆಗೆದುಕೊಂಡು ಹೋಗಬೇಕಿದೆ. ಅದಕ್ಕೆ ಎನ್‌ಆರ್‌ಸಿ ತಂದಿದ್ದಾರೆ. ಇದರಿಂದಲೇ ಅವರು ತುರ್ತು ಪರಿಸ್ಥಿತಿಯನ್ನ ತಂದು ಜನರನ್ನ ಒತ್ತೆಯಿಡುವ ಕೆಲಸ ಮಾಡುತಿದ್ದಾರೆ. ಈ ಹಿಂದೆ ಅನಂತ್‍ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಮಾತನ್ನ ಹೇಳಿದ್ದರು. ಆರ್‌ಎಸ್‌ಎಸ್‌ ಮನಸ್ಸಿನ ಮಾತನ್ನ ಅವರು ಹೇಳಿದ್ದರು ಎಂದು ಪ್ರಕಾಶ್ ಹರಿಹಾಯ್ದರು.

    ಪ್ರತಿ 10 ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ. ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ, ಫೆಬ್ರವರಿಗೆ ಹೊಸ ಬಜೆಟ್ ಬರಲಿದೆ. ಸರ್ಕಾರದ ಬಳಿ 11 ಲಕ್ಷ ಕೋಟಿ ಹಣ ಮಾತ್ರ ಇದೆ. ಆದರೆ ಸರ್ಕಾರ ನಡೆಸಲು 13 ಲಕ್ಷ ಕೋಟಿ ಬೇಕು. ಅವರ ಬಳಿ ಅಷ್ಟು ಹಣ ಇಲ್ಲದ ಕಾರಣ ಸರ್ಕಾರ ಇಂಥದ್ದೆಲ್ಲ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ನಿಜ ಮುಚ್ಚಿ ಹಾಕಲು ಪ್ರಯತ್ನ ನಡೆದಿದ್ದು ದನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತಿದ್ದೆವೆ. ಜನ ಕೂಡಾ ಅರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ಕಿಡಿಕಾರಿದರು.