Tag: prajakiya

  • ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ? ನೀವೇ ನಿರ್ಧರಿಸಿ: ನಟ ಉಪೇಂದ್ರ

    ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ? ನೀವೇ ನಿರ್ಧರಿಸಿ: ನಟ ಉಪೇಂದ್ರ

    ಚಿಕ್ಕಬಳ್ಳಾಪುರ: ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ನಟ ಉಪೇಂದ್ರ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮುನಿರಾಜು ಪರ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮದು ರಾಜಕಾರಣ ಅಲ್ಲ ಪ್ರಜಾಕಾರಣ, 72 ವರ್ಷಗಳಿಂದಲೂ ಇರುವ ರಾಜಕಾರಣದ ಮನಸ್ಥಿತಿಯನ್ನು ಜನರಿಂದ ಬದಲಾವಣೆ ಮಾಡುವ ಸದುದ್ದೇಶದಿಂದಲೇ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಾವು ನಾಯಕರೂ ಅಲ್ಲ, ನಾವೂ ಜನರ ಸೇವಕರು, ಜನರಿಗಾಗಿ ಕೂಲಿ ಪಡೆದು ಕೆಲಸ ಮಾಡುವ ಕಾರ್ಮಿಕರಾಗಿರುತ್ತೇವೆ ಎಂದರು.

    ಎಲ್ಲಾ ರಾಜಕಾರಣಿಗಳು, ಪಕ್ಷಗಳಂತೆ ನಾವು ಯಾವುದೇ ಚುನಾವಣಾ ರ್ಯಾಲಿ, ಸಭೆ, ಸಮಾರಂಭಗಳನ್ನು ನಡೆಸುವುದಿಲ್ಲ, ಯಾವುದೇ ಪೊಳ್ಳು ಭರವಸೆಗಳ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವುದಿಲ್ಲ. ಕೇವಲ ಪ್ರಚಾರದ ಭಿತ್ತಿ ಪತ್ರಗಳನ್ನಷ್ಟೇ ಜನರಿಗೆ ನೀಡಿ ತಮ್ಮ ಅಭ್ಯರ್ಥಿಯ ಆಟೋ ಗುರುತಿಗೆ ಮತ ನೀಡಿ ಎಂದು ಮನವಿ ಮಾಡ್ತೇವೆ. ಅದೇ ಭಿತ್ತಿ ಪತ್ರದಲ್ಲಿ ನಿಮ್ಮ ಸಮಸ್ಯೆಗಳು, ಬೇಡಿಕೆಗಳು. ಆದೇಶಗಳನ್ನು ನಮಗೆ ಕೊಡುವಂತೆ ಜನರ ಬಳಿ ತಿಳಿಸುತ್ತೇವೆ ಎಂದು ಹೇಳಿದರು.

    ಜನರೇ ಪ್ರಜಾಕಾರಣದ ಸಿದ್ದಾಂತಗಳನ್ನು ಮೆಚ್ಚಿ ಮತ ನೀಡಬೇಕು ಹೊರತು ನಾವು ರ್ಯಾಲಿ ಸಭೆ ಸಮಾರಂಭಗಳ ಮೂಲಕ ಮತದಾರರನ್ನು ಮುಟ್ಟುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಮಾಧ್ಯಮಗಳ ಮೂಲಕ ಜನರಿಗೆ ಪ್ರಜಾಕಾರಣದ ಸಿದ್ದಾಂತಗಳು ತಿಳಿದು ಒಂದು ದಿನ ಪ್ರಜಾಕಾರಣ ಪಕ್ಷ ಮೇಲೆ ಬರುತ್ತದೆ. ಹೀಗಾಗಿ ಒಂದು ವೇಳೆ ಪ್ರಜಾಕಾರಣ ಸಿದ್ದಾಂತಗಳ ವಿಭಿನ್ನ ಪ್ರಯತ್ನ ಯಶಸ್ವಿಯಾದರೆ ಇಡೀ ಇಂಡಿಯಾವೇ ಪ್ರಜಾಕಾರಣಕ್ಕೆ ಬದಲಾಗುತ್ತೆ. ಒಂದಲ್ಲ ಒಂದು ದಿನ ಪ್ರಜಾಕಾರಣಕ್ಕೆ ಯಶಸ್ಸು ಸಿಕ್ಕೇ ಸಿಗುತ್ತೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

    ನಟ ಉಪೇಂದ್ರ ಜೊತೆ ಸೆಲ್ಫಿಗಾಗಿ ಸಾಕಷ್ಟು ಮಂದಿ ಮುಗಿಬಿದ್ದರು. ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಜೊತೆ ಖಾಕಿ ಶರ್ಟ್, ಕರಿ ಪ್ಯಾಂಟ್, ಟೈ ಧರಿಸಿ, ಗುರುತಿನ ಚೀಟಿ ಹಾಕಿ ಅಭ್ಯರ್ಥಿ ಮುನಿರಾಜು ಭಾಗವಹಿಸಿದ್ದು ವಿಶೇಷವಾಗಿತ್ತು. ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ಉದ್ದೇಶದಿಂದ ತಾವು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಉಪೇಂದ್ರ ತಿಳಿಸಿದರು.

  • ನೀವು ಪ್ರಜಾಕೀಯ ಬಿಟ್ಟು ಡೈರೆಕ್ಷನ್ ಮಾಡಿ ಅಂದ್ರೆ ನಾನು ಪಕ್ಷ ಬಿಡೋದಕ್ಕೆ ರೆಡಿ: ಉಪೇಂದ್ರ

    ನೀವು ಪ್ರಜಾಕೀಯ ಬಿಟ್ಟು ಡೈರೆಕ್ಷನ್ ಮಾಡಿ ಅಂದ್ರೆ ನಾನು ಪಕ್ಷ ಬಿಡೋದಕ್ಕೆ ರೆಡಿ: ಉಪೇಂದ್ರ

    ಬೆಂಗಳೂರು: ಪ್ರಜಾಕೀಯಕ್ಕೆ ಉಪೇಂದ್ರ ಗುಡ್ ಬೈ ಹೇಳುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಅಭಿಮಾನಿಗಳಿಗೆ ಉಪೇಂದ್ರ ಮಾಡಿರುವ ಟ್ವೀಟ್ ನಿಂದಾಗಿ ಈ ಪ್ರಶ್ನೆ ಈಗ ಎದ್ದಿದೆ.

    “ನೀವು ಪ್ರಜಾಕೀಯ ಬಿಟ್ಟು ಡೈರೆಕ್ಷನ್ ಮಾಡಿ ಅಂದರೆ ನಾನು ಪ್ರಜಾಕೀಯ ಬಿಡುವುದ್ದಕ್ಕೆ ರೆಡಿ” ಎಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು “ಇವರು ರಿಮೇಕ್ ಸಿನಿಮಾ ಮಾಡುವುದು ಬಿಡಲಿಲ್ಲ, ನೀವು ಮತ್ತೆ ಡೈರೆಕ್ಷನ್ ಮಾಡುತ್ತಿಲ್ಲ, ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಯಾಕೆಂದರೆ ನಮ್ಮ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ” ಎಂಬುದಾಗಿ ಟ್ವೀಟ್ ಮಾಡಿದ್ದರು.

    ಅಭಿಮಾನಿಗಳ ಈ ಟ್ವೀಟ್‍ಗೆ ಉಪೇಂದ್ರ ರೀ-ಟ್ವೀಟ್ ಮಾಡಿ “ನೀವಿಲ್ಲದೆ ನಾನೂ ಏನೂ ಅಲ್ಲ, ನೀವು ಹೇಳಿದ ಹಾಗೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ದಯವಿಟ್ಟು ಹೀಗೆ ಹೇಳಬೇಡಿ ನಿಮಗೋಸ್ಕರ ನಾನು ಪ್ರಜಾಕೀಯ ಬಿಡುವುದಕ್ಕೂ ತಯಾರಿದ್ದೇನೆ ಎಂಬುದಾಗಿ ಹೇಳಿ ರೀ-ಟ್ಟೀಟ್ ಮಾಡಿದ್ದಾರೆ.

    ಈ ಟ್ವೀಟ್ ನಿಂದಾಗಿ ಮತ್ತೆ ಉಪೇಂದ್ರ ಸಿನಿಮಾ ಡೈರೆಕ್ಷನ್ ಕಡೆ ಮುಖ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಬೆಂಗಳೂರು: ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ರಾಜೀನಾಮೆ ನೀಡಿದ್ದಾರೆ. ಇಂದು ನಗರದ ರುಪ್ಪೀಸ್ ರೆಸಾರ್ಟ್‍ನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಮಗೂ ಕೆಪಿಜೆಪಿಗೂ ಇನ್ಮುಂದೆ ಸಂಬಂಧ ಇರಲ್ಲ. ಪ್ರಜಾಕೀಯ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ತೀರ್ಮಾನ ಮಾಡಿರುವುದಾಗಿ ತಿಳಿಸಿದರು. ಇಂದಿನಿಂದಲೇ ಹೊಸ ಪಕ್ಷ ಸ್ಥಾಪನೆ ಕಾರ್ಯ ಆರಂಭಿಸುತ್ತೇವೆ ಎಂದು ಹೇಳಿದ್ರು.

    ಕೆಪಿಜೆಪಿಗೆ ನಾವೆಲ್ಲರೂ ರಾಜೀನಾಮೆ ನೀಡುತ್ತೇವೆ. ಪ್ರಜಾಕೀಯದ ಸಿದ್ಧಾಂತ ಇಟ್ಟುಕೊಂಡೇ ಹೊಸ ಪಕ್ಷ ಕಟ್ಟುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಎಲ್ಲರೂ ಸೇರಿ ಒಮ್ಮತದ ತಿರ್ಮಾನಕ್ಕೆ ಬಂದ್ದಿದ್ದೇವೆ. ನಾನು ಹಾಗೂ ನನ್ನ ಜೊತೆ ನಾಲ್ಕೈದು ಜನ ಸೇರಿ ಎಲ್ಲರೂ ರಾಜಿನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ರು.

    ಪ್ರಜಾಕೀಯ ವಿಷಯವನ್ನು ಜನರಿಗೆ ತಿಳಿಸುತ್ತೇವೆ. ಅದಷ್ಟು ಬೇಗ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುತ್ತೇವೆ. ಇದೇ ವಿಧಾನಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತೇವೆ. ಇಲ್ಲವಾದ್ರೆ ಪಾಲಿಕೆ ಚುನಾವಣೆ ಅಥವಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ. ಪಕ್ಷ ಸ್ಥಾಪನೆ ಬಗ್ಗೆ ವಕೀಲರೊಂದಿಗೆ ಮಾತನಾಡುತ್ತೇವೆ ಎಂದು ತಿಳಿಸಿದ್ರು.  ಇದನ್ನೂ ಓದಿ: ಕೆಪಿಜೆಪಿಯಲ್ಲಿ ಏನ್ ಆಗ್ತಿದೆ? ಗೊಂದಲ ಆಗಿದ್ದು ಎಲ್ಲಿ? – ಉಪ್ಪಿ ಮಾತಲ್ಲಿ ಕೇಳಿ

    ನಮಗೆ ಅಭ್ಯರ್ಥಿಗಳು ರೆಡಿ ಇದ್ದಾರೆ. ಈಗ ಪಕ್ಷ ಒಂದೇ ನಮಗೆ ಬೇಕು. ಇಂತಹ ಕಷ್ಟ ಗಳು ಸಾಕಷ್ಟು ಬರುತ್ತವೆ. ಇಂತಹ ಕಷ್ಟಗಳಿಂದ ಇನ್ನಷ್ಟು ಬಲಗೊಳ್ಳುತ್ತೇವೆ ಎಂದು ಹೇಳಿದ್ರು. ಮಹೇಶ್ ಗೌಡ ಮನವೊಲಿಸುವ ಕೆಲಸ ಮಾಡಿದೆವು, ಅದ್ರೆ ಅದು ಸಾಧ್ಯವಾಗಿಲ್ಲ. ಅವರಿಗೆ ಪಬ್ಲಿಸಿಟಿ ಅವಶ್ಯಕತೆ ಇದೆ. ಪ್ರಜಾಕೀಯ ವಿಷಯವನ್ನು ಕೊಲೆ ಮಾಡಲು ಹೋಗಿದ್ರು. ಅವರಿಗೆ ಪ್ರಜಾಕೀಯದ ಪರಿಕಲ್ಪನೆಯೇ ಅರ್ಥವಾಗಿಲ್ಲ ಎಂದು ಉಪೇಂದ್ರ ಹೇಳಿದ್ರು.

  • ನಟ ಉಪೇಂದ್ರ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ ಘೋಷಣೆ

    ನಟ ಉಪೇಂದ್ರ ಕೆಪಿಜೆಪಿ ಪಕ್ಷದ ಅಧಿಕೃತ ಚಿಹ್ನೆ ಘೋಷಣೆ

    ಹುಬ್ಬಳ್ಳಿ: ನಟ ಉಪೇಂದ್ರ ತಮ್ಮ `ಪ್ರಜಾಕೀಯ’ (ಕೆಪಿಜೆಪಿ) ಪಕ್ಷದ ಅಧಿಕೃತ ಚಿಹ್ನೆ “ಆಟೋ ರಿಕ್ಷಾ” ಎಂದು ಘೋಷಣೆ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಟೋ ರಿಕ್ಷಾ ಪಕ್ಷದ ಚಿಹ್ನೆಯಾಗಿ ಸಿಕ್ಕಿರುವುದು ಅತ್ಯಂತ ಸಂತೋಷವಾಗಿದೆ. ಕನ್ನಡ ಅಭಿಮಾನಿಗಳ ನೆಚ್ಚಿನ ನಟ ಶಂಕರ್ ನಾಗ್ ಸರ್ ಅವರಿಗೆ ಇದನ್ನು ಅರ್ಪಣೆ ಮಾಡುತ್ತೇನೆ. ಶಂಕರ್ ನಾಗ್ ಅವರು ಹಲವು ಕನಸುಗಳನ್ನು ಹೊಂದಿದ್ದರು. ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ಭಾರತಕ್ಕೆ ಮೆಟ್ರೋ ರೈಲು, ಬಡವರಿಗೆ ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡುವಂತಹ ಹಲವು ಯೊಜನೆಗಳನ್ನು ಹೊಂದಿದ್ದರು. ಅವರ ಆಟೋ ರಾಜ ಸಿನಿಮಾ ಮೂಲಕ ಎಲ್ಲರಿಗೂ ಪ್ರೇರಣೆ, ಅವರ ಚಿಂತನೆಗಳಿಂದ ಸ್ಫೂರ್ತಿ ಪಡೆದು ನಾನು ಖಾಕಿ ಬಟ್ಟೆ ಧರಿಸಿ, ಪಕ್ಷ ಸ್ಥಾಪನೆ ಮಾಡಿದೆ ಎಂದು ಹೇಳಿದರು.

    ಇನ್ನು ಪಕ್ಷದ ಚಿಹ್ನೆಯ ಕುರಿತು ವಿವರಣೆ ನೀಡಿದ ಅವರು, ಆಟೋ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ನಮಗೇ ನಾಯಕರು ಬೇಡ, ಕಾರ್ಮಿಕರು ಬೇಕು ಎಂಬ ಹಿನ್ನೆಲೆಯಲ್ಲಿ ಖಾಕಿ ಧರಿಸಿ ಕೆಪಿಜಿಪಿ ಪಕ್ಷ ಸಂಘಟನೆ ಮಾಡಿದ್ದೇವೆ. ಆಟೋ ಎಂಬ ಪದ ಮಿಷನ್, ಆಟೋಮೆಟಿಕ್ ಆಂದರೆ ಸ್ವಯಂ ಚಾಲಿತವಾದದ್ದು ಎಂಬ ಅರ್ಥ ಹೊಂದಿದೆ. ಸರ್ಕಾರವು ಹಾಗೆಯೇ ಕಾರ್ಯ ನಿರ್ವಹಿಸಬೇಕು. ಒಂದು ದೊಡ್ಡ ಕಾಪೋರೇಟ್ ಸಂಸ್ಥೆ ಹೇಗೆ ಭ್ರಷ್ಟಚಾರ ಮುಕ್ತವಾಗಿ ನಡೆಯುತ್ತದೆ. ಅಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಕೋಟ್ಯಾಂತರ ಹಣ, ಬಜೆಟ್ ಹೊಂದಿದ್ದರೂ ಸರ್ಕಾರದಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಮಾಡುವ ನಾಯಕರು ಬೇಡ. ಜನರ ಸಂಪರ್ಕದಲ್ಲಿರುವ ಸೇವಕರು ಬೇಕಾಗಿದ್ದಾರೆ. ಪ್ರಜಾಕೀಯದ ಮೂಲಕ ಆಡಳಿತದಲ್ಲಿ ಪರದರ್ಶಕತೆ ತರುವುದು ನಮ್ಮ ಉದ್ದೇಶವಾಗಿದೆ. ಆದೇ ರೀತಿ ಸರ್ಕಾರವು ಭ್ರಷ್ಟಚಾರ ಮುಕ್ತವಾಗಿ ನಡೆಯಬೇಕು ಎಂದರು.

    ರಾಜಕೀಯದಲ್ಲಿ ಹಣ, ಜಾತಿ, ಜನರ ಮನೋಭಾವನೆ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಬದಲಾಗಬೇಕಿದೆ. ಅದರಿಂದಲೇ ಪ್ರಜಾಕೀಯ ಎಂಬ ವೇದಿಕೆ ಸೃಷ್ಟಿಯಾಗಿದೆ. ಪ್ರತಿಯೊಬ್ಬರಲ್ಲೂ ಹಲವಾರು ಯೋಜನೆ, ಚಿಂತನೆಗಳು ಇರುತ್ತವೆ. ಅವುಗಳನ್ನು ನಮಗೆ ತಿಳಿಸಿ, ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

    ಚುನಾವಣೆಯಲ್ಲಿ ವಿಷಯಾಧಾರಿತವಾದ ಅಂಶಗಳ ಮೇಲೆ ಚರ್ಚೆ ನಡೆದು, ಅವುಗಳ ಮೇಲೆ ಮತದಾನ ಮಾಡುವ ನಿರ್ಣಯ ಮಾಡಬೇಕಿದೆ. ತಂತ್ರಜ್ಞಾನವನ್ನು ಬಳಸಿ ಪ್ರತಿಯೊಂದು ಕಾರ್ಯವನ್ನ ಪರದರ್ಶಕವಾಗಿ ಮಾಡಬಹುದು. ಪ್ರತಿ ಸರ್ಕಾರಿ ಅಧಿಕಾರಿಯ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಸಮಸ್ಯೆಗಳ ಕುರಿತು ಚರ್ಚೆ ಮಾಡುವ ಬದಲು ಅವುಗಳಿಗೆ ಪರಿಹಾರ ಹುಡುಕುವ ಕಾರ್ಯ ನಡೆಯಬೇಕಿದೆ. ಪಕ್ಷ ಪ್ರಣಾಳಿಕೆಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಅವುಗಳ ಕುರಿತು ವಿಸ್ತಾರ ಚರ್ಚೆ ಮಾಡಲಾಗುತ್ತದೆ. ನಾನು ಸಾಮಾನ್ಯ ಪ್ರಜೆಯಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

     

  • ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಮೈಸೂರು: ಸ್ಯಾಂಡಲ್ ವುಡ್ ನಟ ಕಮ್ ಕೆಪಿಜೆಪಿ ಸ್ಥಾಪಕ ಉಪೇಂದ್ರ ಇಂದು ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಪ್ರಜಾಕೀಯ ಪಕ್ಷದ ಸಂಘಟನೆ ಕುರಿತು ಮಾತನಾಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ. ನಮ್ಮದು ಥ್ರಿಲ್ಲರ್ ಸಿನಿಮಾನು ಅಲ್ಲ. ಇದೊಂದು ಟ್ರುಥ್ ಫುಲ್ ಸಿನಿಮಾ. ಅರ್ಥ ಆಗದೆ ಇರೋರಿಗೆ ಇದು ಹಾರರ್ ಸಿನಿಮಾ ಅಂತ ತನ್ನದೇ ಶೈಲಿಯಲ್ಲಿ ಡೈಲಾಗ್ ಹೊಡೆದ್ರು.

    ನಾನೂ ಮತ ಹಾಕಿ ಅಂತ ಬೀಕ್ಷೆ ಬೇಡುತ್ತಿಲ್ಲ. ನಾನೂ ದೇಶ ಸೇವೆ ಮಾಡಲು ಬಂದಿದ್ದೇನೆ. ನೀವೂ ಗೆಲ್ಲಿಸಬೇಕು ಹೊರತು ನಾನೂ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ. ನಾನೂ ಗೆಲ್ಲುತ್ತೇನೆ ಎನ್ನುತ್ತಿಲ್ಲ ನಿಮ್ಮ ಗೆಲುವು ಎನ್ನುತ್ತಿದ್ದೇನೆ. ನನಗೆ ಗಣ್ಯರು, ಹಿರಿಯರು ಬೆಂಬಲ ನೀಡಿದ್ದಾರೆ. ಮೈಸೂರು ಯದುವಂಶ ಮಹಾರಾಜ ಯದುವೀರ್ ಕೂಡ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಹೆಸರು ಹೇಳುವೆ. ಈವರೆಗೂ ಯಾವ ನಟರು ನನ್ನ ಪಾರ್ಟಿಗೆ ಸೇರುವುದಾಗಿ ಹೇಳಿಲ್ಲ. ಆದ್ರೆ ನಟ ಶಿವಣ್ಣ, ಯಶ್ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಅಂತ ಅವರು ಹೇಳಿದ್ರು.

    ರಾಜಕಾರಣ ಅಂದ್ರೆ ಹಿಂಗೆ ಇದೆ ಅಂತ ನಂಬಿ ಬಿಟ್ಟಿದ್ದೇವೆ. ಅದನ್ನ ಬದಲಾವಣೆ ಹೇಗೆ ಅನ್ನೋದೆ ದೊಡ್ಡ ಕುತೂಹಲವಾಗಿದೆ. ಅದಕ್ಕಾಗಿ ಕೆಪಿಜೆಪಿ ಪಕ್ಷ ಕ್ಯಾಶ್‍ಲೆಶ್ ಪಾರ್ಟಿ ಹುಟ್ಟುಹಾಕಿದ್ದೇವೆ. ಈ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ. ನಾವು ಪಾರ್ಟಿ ಆರಂಭಿಸಿದಾಗ ಕೇವಲ 10% ಜನರಿಗೆ ಗೊತ್ತಾಗಿತ್ತು. ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಗೂ ತಲುಪಿದೆ. ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅದಕ್ಕಾಗಿಯೇ ನಾವು ಆ್ಯಪ್ ಬಿಡುಗಡೆ ಮಾಡಿದ್ದೇವೆ. ವೆಬ್‍ಸೈಟ್ ಮೂಲಕ ನಮ್ಮನ್ನ ಸಂಪರ್ಕಿಸಬಹುದು. ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು ಅಂತ ಹೇಳಿದ್ರು.

    ನಾವು ಕ್ಷೇತ್ರವಾರು ಮೈಕ್ರೋ ಪ್ಲಾನ್ ಮಾಡಬೇಕು ಎಂದಿದ್ದೇವೆ. ಹೇಗೆ ಸರ್ಕಾರ ನಡೆಸಬೇಕು.? ಅದು ಸಂಪೂರ್ಣ ಪಾರದರ್ಶಕತೆ ಇರಬೇಕು. ಮೊದಲ ಹೆಜ್ಜೆಯೆ ನಾವು ಸರಿಯಾಗಿ ಇಡಬೇಕು. ನಾನು ನಾಯಕ ಆಗುತ್ತೇನೆ ಅಂತ ನಮ್ಮ ಪಕ್ಷಕ್ಕೆ ಬರಬೇಡಿ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಬನ್ನಿ. ಇಲ್ಲವಾದ್ರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಅಂತ ತನ್ನ ಪಕ್ಷಕ್ಕೆ ಆಗಮಿಸುವವರಿಗೆ ಷರತ್ತು ಹಾಕಿದ್ರು.

    ಇದನ್ನೂ ಓದಿ; ಉಪೇಂದ್ರ ರಾಜಕೀಯ ಎಂಟ್ರಿಗೆ ಯಶ್ ಹೇಳಿದ್ದು ಹೀಗೆ

    ನನ್ನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಆ ರೀತಿ ಆಯೋಗದಲ್ಲಿ ದೂರು ದಾಖಲಾದ್ರೆ ಕಾನೂನು ಹೋರಾಟ ಮಾಡುತ್ತೇನೆ. ನಾನೇನು ಹಣದ ವಿಚಾರವಾಗಿ ತಪ್ಪಾಗಿ ಮಾತನಾಡಿಲ್ಲ. ನೀವು ನನ್ನನ್ನ ಪ್ರಶ್ನೆ ಮಾಡಿದ್ರೆ ಹಾಗಂತ ನಿಮ್ಮ ಮೇಲೆ ಕೇಸ್ ಹಾಕಲು ಸಾಧ್ಯವೇ ಅಂತ ಉಪ್ಪಿ ಪತ್ರಕರ್ತರಿಗೆ ಪ್ರಶ್ನೆ ಹಾಕಿದ್ರು.

  • ಪ್ರಜಾಕೀಯಕ್ಕಾಗಿ ಉಪ್ಪಿಗೆ ಅಭಿಮಾನಿಗಳಿಂದ ಬಂತು ಸಲಹೆ

    ಪ್ರಜಾಕೀಯಕ್ಕಾಗಿ ಉಪ್ಪಿಗೆ ಅಭಿಮಾನಿಗಳಿಂದ ಬಂತು ಸಲಹೆ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮ ರಿಯಲ್ ಲೈಫ್ ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುವ ವೇಳೆ ಅಭಿಮಾನಿಗಳಿಂದ ಹಾಗೂ ಜನಸಮಾನ್ಯರ ಬಳಿಯಿರುವ ಹೊಸ ಪ್ಲಾನ್ ಗಳನ್ನು ತಮ್ಮದೊಂದಿಗೆ ಹಂಚಿಕೊಳ್ಳುವಂತೆ ಹೇಳಿದ್ದರು.

    ಅಂತೆಯೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸರಳವಾಗಿ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆಂಬುದರ ಬಗ್ಗೆ ಸಲಹೆ, ಸೂಚನೆ ಮತ್ತು ಪ್ಲಾನ್ ಗಳನ್ನು ಕೊಡುತ್ತಿದ್ದಾರೆ. ಸಲಹೆ ಸೂಚನೆಗಳನ್ನು ಪಡೆಯುವದಕ್ಕಾಗಿ ಉಪೇಂದ್ರ ಹೊಸ ಮೇಲ್ ಐಡಿಗಳನ್ನು ಸಹ ಕೊಟ್ಟಿದ್ದಾರೆ.

    ಇಂದು ಉಪೇಂದ್ರ ತಮಗೆ ಅಭಿಮಾನಿಗಳು ಕಳುಹಿಸಿರುವ ಸಲಹೆಯ ಎರಡು ಪತ್ರಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಪತ್ರಗಳಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.

    ಪತ್ರ 01:
    ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳಿವೆ. ಹಾಗಾಗಿ ಸರ್ಕಾರ ಪ್ರತಿಯೊಂದು ಜಿಲ್ಲೆಗೂ ಹೊಸ ಕಟ್ಟಡವನ್ನು ಕಟ್ಟುವ ಮೂಲಕ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ತೆರೆಯುವುದು. 30 ಜಿಲ್ಲೆಗಳಲ್ಲಿ 30 ಆಸ್ಪತ್ರೆಯನ್ನು ಆರಂಭಿಸಿದ ಮೇಲೆ ಅವುಗಳನ್ನು ನಿರ್ವಹಣೆ ಮಾಡಲು ಸಾಕಷ್ಟು ಹಣ ಬೇಕಾಗುತ್ತದೆ.

    ನಮ್ಮ ರಾಜ್ಯದಲ್ಲಿ ಅಂದಾಜು 6.5 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಅಂದಾಜು 1.5 ಕೋಟಿ ಜನರು ಮೊಬೈಲ್ ಫೋನ್ ಬಳಸುತ್ತಿಲ್ಲ ಎಂದು ತಿಳಿಯೋಣ. ಹಾಗಾದರೆ 5 ಕೋಟಿ ಜನರು ಮೊಬೈಲ್ ಬಳಕೆದಾರರು ನಮಗೆ ಸಿಗುತ್ತಾರೆ. ಪ್ರತಿಯೊಬ್ಬರಿಂದ ದಿನಕ್ಕೆ 1 ರೂ.ಯಂತೆ ತಿಂಗಳಿಗೆ 30 ರೂ. ಸಂಗ್ರಹಣೆ ಮಾಡುವುದು.

    ಇದನೆಲ್ಲಾ ಕೂಡಿ ಲೆಕ್ಕ ಹಾಕಿದರೆ ತಿಂಗಳಿಗೆ 150 ಕೋಟಿ ರೂ. ಸಂಗ್ರಹಣೆ ಆಗುತ್ತದೆ. ಇದೇ ಹಣವನ್ನು 5 ಕೋಟಿ ರೂ.ಯಂತೆ ಭಾಗ ಮಾಡಿ ಎಲ್ಲ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ನೀಡಿದರೆ ನಿರ್ವಹಣಾ ವೆಚ್ಚವನ್ನು ಸುಲಭವಾಗಿ ಭರಿಸಬಹುದು. ಇದರಿಂದ ಯಾವುದೇ ಬಡವರು ಯಾವ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.

    ಪತ್ರ 02:
    ಒಂದೇ ದೇಶ, ಒಂದೇ ಟ್ಯಾಕ್ಸ್ ಇರುವಂತೆ ರಾಜ್ಯದಲ್ಲಿ `ಒಂದೇ ದೇಹ, ಒಂದೇ ಇನ್ ಶ್ಯೂರನ್ಸ್’ ಜಾರಿಗೆ ತರಬೇಕು. ವಾಹನಗಳು ಅಪಘಾತಕ್ಕೆ ಒಳಗಾಗಬಹುದು ಅಥವಾ ಆಗದೇ ಇರಬಹುದು. ಆದರೂ ಪ್ರತಿಯೊಂದು ವಾಹನಕ್ಕೂ ಕಡ್ಡಾಯವಾಗಿ ಇನ್ ಶ್ಯೂರನ್ಸ್ ಮಾಡಿಸಬೇಕು. ಹಾಗಾದರೆ ಆರೋಗ್ಯ ವಿಮೆ (ಹೆಲ್ತ್ ಇನ್ ಶ್ಯೂರೆನ್ಸ್) ಯಾಕೆ ಕಡ್ಡಾಯವಾಗಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಪ್ರತಿ ದೇಹಕ್ಕೂ ಒಂದಲ್ಲಾ ಒಂದು ರೋಗ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಹೆಲ್ತ್ ಇನ್‍ಶ್ಯೂರೆನ್ಸ್ ಮಾಡಿಸಬೇಕು. ಈಗಿರುವ ಪಾಲಿಸಿಗಳು ಕೇವಲ ಕೆಲವು ರೋಗಗಳನ್ನು ಸರಿ ಮಾಡುತ್ತವೆ. ಮನುಷ್ಯರಾದ ಮೇಲೆ ಎಲ್ಲರಿಗೂ ಎಲ್ಲ ರೋಗ ರುಜಿನುಗಳು ಬರುತ್ತವೆ. ಆದ್ದರಿಂದ ಒಂದೇ ದೇಹ, ಒಂದೇ ಇನ್ ಶ್ಯೂರೆನ್ಸ್ ಜಾರಿಯಾಗಬೇಕು ಎಂದು ಅಭಿಮಾನಿ ಹೇಳಿದ್ದಾರೆ.

    ಒಟ್ಟಿನಲ್ಲಿ ಉಪೇಂದ್ರ ಕನಸಿನ ರಾಜಕೀಯ ಜೀವನಕ್ಕೆ ಅಭಿಮಾನಿಗಳು ಮತ್ತು ಜನಸಾಮನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರಜಾಕೀಯದ ಮೂಲಕ ಉಪೇಂದ್ರ ಜನಸಾಮನ್ಯರ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    https://twitter.com/HsVineeth/status/910363111173042176

    https://twitter.com/Pradeepsuraana1/status/910367116238495745