Tag: Pragya Singh Thakur

  • Malegaon Blast Case | ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ

    Malegaon Blast Case | ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ

    ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ (Malegaon Blast Case) ಬಿಜೆಪಿಯ (BJP) ಮಾಜಿ ಸಂಸದೆ ಪ್ರಜ್ಞಾ ಠಾಕೂರ್ (Pragya Singh Thakur) ಸೇರಿ ಎಲ್ಲಾ 7 ಆರೋಪಿಗಳಿಗೂ ಬಿಗ್‌ ರಿಲೀಫ್‌ ಸಿಕ್ಕಿದೆ. ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ಎನ್‍ಐಎ ವಿಶೇಷ ಕೋರ್ಟ್ (NIA Court) ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.

    ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್, ಮೇ 8ರಂದು ಕೋರ್ಟ್‌ನಲ್ಲಿ ಹಾಜರಿರುವಂತೆ ಆರೋಪಿಗಳಿಗೆ ಸೂಚಿಸಿತ್ತು. ನ್ಯಾಯಾಧೀಶರಾದ ಎ.ಕೆ.ಲಾಹೋಟಿ ಅವರು, ತೀರ್ಪು ಪ್ರಕಟಿಸಲು ಹೆಚ್ಚಿನ ಸಮಯ ಬೇಕು. ಜುಲೈ 31ರಂದು ಎಲ್ಲಾ ಆರೋಪಿಗಳು ಹಾಜರಿರಬೇಕು’ ಎಂದು ಆರೋಪಿಗಳಿಗೆ ತಿಳಿಸಿದ್ದರು. ಇದನ್ನೂ ಓದಿ: ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣೆ ಆಯೋಗ

    ಏನಿದು ಪ್ರಕರಣ?
    2008ರ ಸೆ.29ರಂದು ರಂಜಾನ್ ಮಾಸದಲ್ಲಿ ನವರಾತ್ರಿ ಆಚರಣೆಗೆ ಮುಂಚಿನ ದಿನ ಬಾಂಬ್ ಸ್ಫೋಟ ನಡೆದಿತ್ತು.‌ ಈ ಸ್ಫೋಟದಲ್ಲಿ 6 ಜನರು ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

    ಈ ಪ್ರಕರಣವನ್ನು ಮುಂಬೈ ಭಯೋತ್ಪಾದಕ ನಿಗ್ರಹ ಪಡೆ ಪ್ರಾಥಮಿಕ ತನಿಖೆ ನಡೆಸಿತ್ತು. ನಂತರ ತನಿಖೆಯ ಹೊಣೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ಬಿಜೆಪಿ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಸೇರಿದಂತೆ ಏಳು ಮಂದಿ ಆರೋಪಿಗಳ ಮೇಲೆ ಐಪಿಸಿ, ಯುಎಪಿಎ ಅನ್ವಯ ಆರೋಪ ಹೊರಿಸಲಾಗಿತ್ತು. ಇದನ್ನೂ ಓದಿ: ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ: ಅಮಿತ್ ಶಾ

  • ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದ್ರೆ ಹಿಜಬ್ ಧರಿಸಿ, ಶಾಲಾ-ಕಾಲೇಜುಗಳಲ್ಲ: ಪ್ರಜ್ಞಾ ಠಾಕೂರ್

    ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದ್ರೆ ಹಿಜಬ್ ಧರಿಸಿ, ಶಾಲಾ-ಕಾಲೇಜುಗಳಲ್ಲ: ಪ್ರಜ್ಞಾ ಠಾಕೂರ್

    ಭೋಪಾಲ್: ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದರೆ ಹಿಜಬ್ ಧರಿಸಬಹುದು. ಆದರೆ ಶಾಲಾ-ಕಾಲೇಜುಗಳಲ್ಲಿ ಹಿಜಬ್ ಧರಿಸುವ ಅಗತ್ಯವಿಲ್ಲ ಎಂದು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರು ಹಿಜಬ್ ಧರಿಸುವುದಕ್ಕೆ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಬುಧವಾರ ಭೋಪಾಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹಿಜಬ್ ಧರಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ನೀವು ಹಿಜಬ್ ಧರಿಸಬಹುದು. ಹಿಂದೆ ಗುರುಕುಲಕ್ಕೆ ಹೋಗುತ್ತಿದ್ದ ಶಿಷ್ಯರು ಭಗವ (ಕೇಸರಿ) ಬಣ್ಣದ ಉಡುಪನ್ನು ಧರಿಸಿ ಹೋಗುತ್ತಿದ್ದರು. ಹಾಗೆಯೇ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಶಾಲಾ ಸಮವಸ್ತ್ರ ಧರಿಸಿ ಶಿಕ್ಷಣ ಸಂಸ್ಥೆಗಳ ಶಿಸ್ತನ್ನು ಪಾಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

    ಇದೇ ವೇಳೆ ಖಿಜಬ್ ಅನ್ನು ಬೂದು ಕೂದಲನ್ನು ಮರೆಮಾಡಲು ಬಳಸಲಾಗುತ್ತದೆ. ಆದರೆ ಹಿಜಬ್ ಅನ್ನು ಮುಖವನ್ನು ಮುಚ್ಚಲು ಬಳಸಲಾಗುತ್ತದೆ. ಹಿಜಬ್ ಒಂದು ಪರ್ದಾ. ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ತಡೆಯಲು ಪರ್ದಾವನ್ನು ಬಳಸಬೇಕು. ಆದರೆ ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ, ಹಿಂದೂಗಳು ಮಹಿಳೆಯರನ್ನು ಪೂಜಿಸುತ್ತಾರೆ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ. ಇಲ್ಲಿ ಹೆಣ್ಣನ್ನು ಪೂಜಿಸುವುದು ಸನಾತನ ಸಂಸ್ಕೃತಿಯಾಗಿದೆ. ಹೆಣ್ಣಿನ ಸ್ಥಾನವೇ ಪ್ರಧಾನವಾಗಿರುವ ಈ ದೇಶದಲ್ಲಿ ಹಿಜಬ್ ಧರಿಸುವ ಅವಶ್ಯಕತೆಯಿದೆಯೇ? ಭಾರತದಲ್ಲಿ ಹಿಜಬ್ ಧರಿಸುವ ಅಗತ್ಯವಿಲ್ಲ. ತಮ್ಮ ಮನೆಗಳಲ್ಲಿ ತೊಂದರೆ ಎದುರಿಸುತ್ತಿರುವವರು ಅಲ್ಲಿ ಹಿಜಾಬ್ ಧರಿಸಬೇಕಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.

    ಹೊರಗಿರುವಾಗ ಹಿಂದೂ ಸಮಾಜದಲ್ಲಿ ಇರುವವರೆಲ್ಲಾ ಹಿಜಬ್ ಧರಿಸುವ ಅಗತ್ಯವಿಲ್ಲ. ಆದರೆ ಮದರಸಾಗಳಲ್ಲಿ ಹಿಜಬ್ ಅಥವಾ ಖಿಜಬ್ ಧರಿಸಿ, ಅದು ಹೇಗೆ ನಮಗೆ ಸಂಬಂಧಿಸಿರುತ್ತದೆ? ಆದರೆ ನೀವು ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ ಶಿಸ್ತನ್ನು ಅಡ್ಡಿಪಡಿಸಿದರೆ ಅದನ್ನು ಮಾತ್ರ ಸಹಿಸಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತುಪ್ಪ ಸವಿಯುವ ಮುನ್ನ ಇರಲಿ ಎಚ್ಚರ – ನಕಲಿ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ

  • ಹಿಂದಿನ ಸಾಲಿನಲ್ಲಿ ತಮ್ಮ ಕುರ್ಚಿ ಕಂಡು ಹೊರ ನಡೆದ ಪ್ರಜ್ಞಾ ಸಿಂಗ್

    ಹಿಂದಿನ ಸಾಲಿನಲ್ಲಿ ತಮ್ಮ ಕುರ್ಚಿ ಕಂಡು ಹೊರ ನಡೆದ ಪ್ರಜ್ಞಾ ಸಿಂಗ್

    – ಸಿಎಂ ಆಗಮನಕ್ಕೂ ಮುನ್ನವೇ ಹೊರ ಬಂದ ಸಂಸದೆ

    ಭೋಪಾಲ್: ತಮಗೆ ಹಿಂದೆ ಕುರ್ಚಿ ಹಾಕಿದ್ದಕ್ಕೆ ಕೋಪಗೊಂಡ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಹೊರ ಬಂದಿದ್ದಾರೆ. ಭೋಪಾಲ್ ನಗರದ ಬಿಜೆಪಿ ಕಚೇರಿಯಲ್ಲಿಯ ಸಭೆಗೆ ಪಕ್ಷದ ರಾಜ್ಯಾಧ್ಯಕ್ಷ, ಸಿಎಂ, ಪ್ರಜ್ಞಾ ಸಿಂಗ್ ಸೇರಿದಂತೆ ಹಲವು ಮುಖಂಡರನ್ನ ಆಹ್ವಾನಿಸಲಾಗಿತ್ತು.

    ಡಿಸೆಂಬರ್ 25ರಂದ ಬಿಜೆಪಿ ಜಿಲ್ಲಾ ಕಾರ್ಯಲಯದ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯ ಪ್ರದೇಶದ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ, ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸಂಸದೆ ಪ್ರಜ್ಞಾ ಸಿಂಗ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಬರೋವರಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಆಗಮಿಸಿದ ಸಂಸದೆ ಪ್ರಜ್ಞಾ ಸಿಂಗ್ ವೇದಿಕೆ ಮೇಲೆ ಇರಿಸಲಾಗಿದ್ದ ಕುರ್ಚಿಗಳನ್ನ ಗಮನಿಸಿದ್ದಾರೆ.

    ಹಿಂದಿನ ಸಾಲಿನಲ್ಲಿ ತಮಗೆ ಮೀಸಲಿರಿಸಿದ್ದ ಕುರ್ಚಿ ಕಂಡು ಕಚೇರಿಯಿಂದ ಹೊರ ಬಂದಿದ್ದಾರೆ. ಕಾರ್ಯಕ್ರಮಕ್ಕೂ ಆಯೋಜಕರು ಮನವೊಲಿಸಲು ಮುಂದಾದ್ರೂ ಪಕ್ಷದ ಮುಖಂಡರು ಮತ್ತು ಸಿಎಂ ಆಗಮನಕ್ಕೂ ಮೊದಲು ಹೊರ ಬಂದು ಬೇರೊಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಈ ವೇಳೆ ತಮಗೆ ಹಿಂದಿನ ಸಾಲಿನಲ್ಲಿ ಕುರ್ಚಿ ಹಾಕಿದ್ದರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

  • ಪ್ರಜ್ಞಾ ಸಿಂಗ್ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ: ಬಿಜೆಪಿ

    ಪ್ರಜ್ಞಾ ಸಿಂಗ್ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ: ಬಿಜೆಪಿ

    – ನಾಪತ್ತೆ ಪೋಸ್ಟರ್‌ಗಳಿಗೆ ‘ಕಮಲ’ ಪ್ರತಿಕ್ರಿಯೆ

    ಭೋಪಾಲ್: ಕೊರೋನಾ ಮಹಾಮಾರಿ ದೇಶವನ್ನು ಒಕ್ಕರಿಸಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಬಿಜಪಿ ಸಂಸದೆ ಪ್ರಜ್ಞಾ ಸಿಂಗ್ ಮಾತ್ರ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಭೋಪಾಲ್ ಮಂದಿ ಸಂಸದೆ ಎಲ್ಲಿದ್ದಾರೆ?, ಠಾಕೂರ್ ನಾಪತ್ತೆಯಾಗಿದ್ದಾರೆ ಎಂಬೆಲ್ಲ ಪೋಸ್ಟರ್ ಗಳನ್ನು ಎಲ್ಲಾ ಕಡೆ ಅಂಟಿಸಿದ್ದಾರೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ.

    ಈ ಬಗ್ಗೆ ಸಮರ್ಥಿಸಿಕೊಂಡಿರುವ ಬಿಜೆಪಿ, ಪ್ರಜ್ಞಾ ಸಿಂಗ್ ನಾಪತ್ತೆಯಾಗಿಲ್ಲ. ಅವರು ಅನಾರೋಗ್ಯಕ್ಕೀಡಾಗಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಅವರು ಕಾರ್ಯಕರ್ತರ ಜೊತೆ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮೂಲಕ ಪ್ರವಾಸಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಕಷ್ಟು ಪಡುತ್ತಿರುವವರಿಗೆ ಹಾಗೂ ವಿದ್ಯಾರ್ಥಿಗಳಿಗೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

    ಬಜೆಪಿ ವಕ್ತಾರ ರಾಹುಲ್ ಕೊತಾರಿ ಪ್ರತಿಕ್ರಿಯಿಸಿ, ಪ್ರಜ್ಞಾ ಸಿಂಗ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಕ್ಷೇತ್ರದಲ್ಲಿ ಜನರಿಗೆ ಬೇಕಾದ ಆಹಾರ, ದಿನಸಿ ಮೊದಲಾದ ಅಗತ್ಯ ವಸ್ತುಗಳನ್ನು ಇಂದಿಗೂ ಪೂರೈಕೆ ಮಾಡಲಾಗುತ್ತಿದೆ ಎಂದರು.

    ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಕಾಣಿಸಿಕೊಳ್ಳುತ್ತಿರುವ ರಾಜಕೀಯ ಪ್ರಹಸನ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಗೋಮೂತ್ರದಿಂದ ನನ್ನ ಸ್ತನಕ್ಯಾನ್ಸರ್ ವಾಸಿಯಾಯ್ತು- ಸಾಧ್ವಿ ಪ್ರಜ್ಞಾಸಿಂಗ್

  • ಚರಂಡಿ, ಶೌಚಾಲಯ ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ: ಸಾಧ್ವಿ ಪ್ರಜ್ಞಾ ಸಿಂಗ್

    ಚರಂಡಿ, ಶೌಚಾಲಯ ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ: ಸಾಧ್ವಿ ಪ್ರಜ್ಞಾ ಸಿಂಗ್

    ಭೋಪಾಲ್: ನಾನು ಶೌಚಾಲಯ ಹಾಗೂ ಚರಂಡಿ ಸ್ವಚ್ಛಗೊಳಿಸಲು ಸಂಸದೆಯಾಗಿ ಆಯ್ಕೆಯಾಗಿಲ್ಲ ಎಂದು ಹೇಳುವ ಮೂಲಕ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಸೆಹೋರೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಈ ರೀತಿ ಹೇಳಿದ್ದು, ನಾನು ಚರಂಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ ಅರ್ಥ ಮಾಡಿಕೊಳ್ಳಿ. ನಾನು ಯಾವ ಕೆಲಸ ಮಾಡಲು ಚುನಾಯಿತಳಾಗಿದ್ದೇನೆ ಎನ್ನುವುದು ತಿಳಿದಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ, ಈ ಕುರಿತು ಹಲವು ಬಾರಿ ಹೇಳಿದ್ದೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.

    ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪ್ರದೇಶದಲ್ಲಿ ಹೆಚ್ಚು ನೈರ್ಮಲ್ಯವಿದ್ದು ಸ್ವಚ್ಛತೆಯ ಕೊರತೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನಿಮ್ಮ ಶೌಚಾಲಯ, ಚರಂಡಿ ಸ್ವಚ್ಛಗೊಳಿಸುವುದು ನನ್ನ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.

    ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರು, ಪುರಸಭೆ ಕೌನ್ಸಿಲರ್ ಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವುದು ಸಂಸತ್ ಸದಸ್ಯರ ಕರ್ತವ್ಯ. ಕ್ಷೇತ್ರದ ಜನರು ಹಾಗೂ ಕಾರ್ಯರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹಲವು ಬಾರಿ ಹೇಳಿದ್ದಾರೆ. ಆದರೂ ಸಹ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾರ್ಯರ್ತರ ಬಳಿ ನಿರ್ಲಕ್ಷ್ಯದಿಂದ ವರ್ತಿಸಿದ್ದು, ಸ್ಥಳಿಯ ಸಮಸ್ಯೆಗಳನ್ನು ನಿಮ್ಮ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಎಲ್ಲ ಸಮಸ್ಯೆಗಳನ್ನೂ ನನ್ನ ಬಳಿ ಹೇಳಿಕೊಳ್ಳಬೇಡಿ ಎಂದು ಗುಡುಗಿದ್ದಾರೆ.

    ಪ್ರಜ್ಞಾ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ನಾಯಕ ತಾರಿಖ್ ಅನ್ವರ್ ಪ್ರತಿಕ್ರಿಯಿಸಿ, ಈ ಹೇಳಿಕೆಯಿಂದ ಸ್ವಚ್ಛ ಭಾರತದ ಬಗ್ಗೆ ಅವರು ಯಾವ ರೀತಿಯ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಮೋದಿ ಸ್ವಾಧ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಲೋಕಸಭಾ ಚುನಾವಣೆಯ ಪ್ರಚಾರ ಮಾಡುವ ಸಂದರ್ಭದಲ್ಲಿ 2008ರ ಮಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್, ಗಾಂಧಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಗಾಂಧಿ ಹತ್ಯೆ ಕುರಿತು ಯಾರೇ ಹೇಳಿಕೆ ನೀಡಿದರೂ ಅವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

  • ಪ್ರಜ್ಞಾಸಿಂಗ್ ವಿರುದ್ಧ 12 ವರ್ಷದ ಹಿಂದಿನ ಕೇಸ್ ತೆರೆಯಲು ಮುಂದಾದ ಮಧ್ಯಪ್ರದೇಶ ಸರ್ಕಾರ

    ಪ್ರಜ್ಞಾಸಿಂಗ್ ವಿರುದ್ಧ 12 ವರ್ಷದ ಹಿಂದಿನ ಕೇಸ್ ತೆರೆಯಲು ಮುಂದಾದ ಮಧ್ಯಪ್ರದೇಶ ಸರ್ಕಾರ

    ಭೋಪಾಲ್: ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಭೋಪಾಲ್ ಕ್ಷೇತ್ರದಿಂದ ಗೆಲ್ಲಲ್ಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರವು ಪ್ರಜ್ಞಾಸಿಂಗ್ ವಿರುದ್ಧ ದಾಖಲಾಗಿರುವ 12 ವರ್ಷದ ಹಿಂದಿನ ಪ್ರಕರಣ ತೆರೆಯಲು ಮುಂದಾಗಿದೆ.

    ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣವನ್ನು ಪುನಃ ತೆರೆದು, ತನಿಖೆ ನಡೆಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಕಾನೂನು ಸಚಿವ ಪಿ.ಸಿ.ಶರ್ಮಾ ತಿಳಿಸಿದ್ದಾರೆ.

    ಸುನಿಲ್ ಜೋಶಿ ಅವರ ಕೊಲೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ದೇವಾಸ್ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಕಾನೂನು ಅಭಿಪ್ರಾಯ ಪಡೆದು ಹೈಕೋರ್ಟ್ ಮೆಟ್ಟಿಲು ಏರಲಾಗುತ್ತದೆ ಎಂದು ಪಿ.ಸಿ.ಶರ್ಮಾ ಹೇಳಿದ್ದಾರೆ.

    ಏನಿದು ಪ್ರಕರಣ?:
    ಆರ್‍ಎಸ್‍ಎಸ್‍ನ ಮಾಜಿ ಪ್ರಚಾರಕ ಸುನಿಲ್ ಜೋಶಿ ಅವರು 2007ರ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದ ಆರೋಪಿಯಾಗಿದ್ದರು. ಆದರೆ ಅವರನ್ನು 2007 ಡಿಸೆಂಬರ್ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಸಾಧ್ವಿ ಪ್ರಜ್ಞಾಸಿಂಗ್ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಕೋರ್ಟ್ ಸ್ವಾಧ್ವಿ ಅವರನ್ನು 2017ರಲ್ಲಿ ಖುಲಾಸೆಗೊಳಿಸಿತ್ತು.

    ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಗೆಲುವು ಸಾಧಿಸುತ್ತಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ತಿಳಿವೆ. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

  • ಪ್ರಜ್ಞಾಸಿಂಗ್ ಹೇಳಿಕೆಗೆ ಬಿಜೆಪಿಯಿಂದ ಖಂಡನೆ – ಕ್ಷಮೆಗೆ ಆಗ್ರಹ

    ಪ್ರಜ್ಞಾಸಿಂಗ್ ಹೇಳಿಕೆಗೆ ಬಿಜೆಪಿಯಿಂದ ಖಂಡನೆ – ಕ್ಷಮೆಗೆ ಆಗ್ರಹ

    ನವದೆಹಲಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ಬಿಜೆಪಿಯಿಂದಲೇ ಖಂಡನೆ ವ್ಯಕ್ತವಾಗಿದೆ.

    ಸಾಧ್ವಿ ಪ್ರಜ್ಞಾಸಿಂಗ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು, ಈ ಹೇಳಿಕೆಯನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ ಹಾಗೂ ಇದು ಖಂಡನೀಯವಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡುವಂತೆ ಪ್ರಜ್ಞಾಸಿಂಗ್ ಹೇಳುತ್ತೇವೆ. ಅಷ್ಟೇ ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.

    ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಕೂಡ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ನಾಥೂರಾಮ್ ಗೋಡ್ಸೆ ಒಬ್ಬ ಹಂತಕ. ಗೋಡ್ಸೆಯನ್ನು ವೈಭವಿಕರಿಸುವುದು ದೇಶಭಕ್ತಿಯಲ್ಲ, ಅದು ದುಷ್ಕøತ್ಯ ಎಂದು ಕಿಡಿಕಾರಿದ್ದಾರೆ.

    ಪ್ರಜ್ಞಾಸಿಂಗ್ ಹೇಳಿದ್ದೇನು?:
    ಭೋಪಾಲ್‍ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, ನಾಥೂರಾಮ್ ಗೋಡ್ಸೆ ದೇಶಭಕ್ತರು. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಇರುತ್ತಾರೆ. ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಅಂತವರಿಗೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗುತ್ತದೆ ಎಂದು ನಟ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದರು.

    ಚುನಾವಣೆಯ ಸಮಯದಲ್ಲಿ ಸಾಧ್ವಿ ಸಿಂಗ್ ಈ ರೀತಿಯ ಹೇಳಿಕೆ ನೀಡುವುದು ಹೊಸದೆನಲ್ಲ. ಭೋಪಾಲ್‍ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, 26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಸಾವನ್ನಪಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು ಎಂದು ಹೇಳಿದ್ದರು.

    ಹೇಮಂತ್ ಕರ್ಕರೆ ಅವರು ಪದೇ ಪದೇ ನನ್ನನ್ನು ವಿಚಾರಣೆಗೆ ಒಳಪಡಿಸಿ, ಕಿರುಕುಳ ನೀಡುತ್ತಿದ್ದರು. ನಿರಪರಾಧಿಯಾಗಿದ್ದರಿಂದ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಹೀಗಾಗಿ ನಾನು ಅವರಿಗೆ ಶಪಿಸಿದ್ದೆ. ನನ್ನನ್ನು ಬಂಧಿಸಿದ 45 ದಿನಗಳ ನಂತರ ಕರ್ಕರೆ ಉಗ್ರರಿಂದ ಪ್ರಾಣ ಬಿಟ್ಟರು ಎಂದು ತಿಳಿಸಿದ್ದರು. ಈ ಹೇಳಿಕೆ ವಿವಾದವಾಗುತ್ತಿದ್ದಂತೆ ಕ್ಷಮೆ ಕೇಳಿದ್ದರು.

    ಕಮಲ್ ಹಾಸನ್ ಹೇಳಿದ್ದೇನು?:
    ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ, ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು, ಭಾರತದ ಮೊದಲ ಭಯೋತ್ಪಾದಕ ಹಿಂದೂ. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ದೇಶದಾದ್ಯಂತ ಪರ ವಿರೋಧ ಚರ್ಚೆ ಆರಂಭವಾಗಿದೆ.

    ವಿವಾದಿತ ಹೇಳಿಕೆ ಸಂಬಂಧ ಕಮಲ್‍ಹಾಸನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಆದರೆ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ನಾನು ಹೇಳಿದ್ದು ‘ಐತಿಹಾಸಿಕ ಸತ್ಯ’. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಈ ಕಹಿಯೇ ಔಷಧವಾಗಿ ಬದಲಾಗಿ ಜನರ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದ್ದರು.

    ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು, ಕಮಲ್ ಹಾಸನ್ ಹೇಳಿಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಧರ್ಮವನ್ನು ಚುನಾವಣಾ ಕಣದಲ್ಲಿ ಲಾಭಕ್ಕಾಗಿ ಬಳಸುವುದನ್ನು ತಡೆಯಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ದೆಹಲಿ ಹೈಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿದೆ. ಕಮಲ್ ಹೇಳಿಕೆ ಕೋರ್ಟ್‍ನ ವ್ಯಾಪ್ತಿಗೆ ಬರುವುದಿಲ್ಲ. ಬೇಕಾದರೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿ ಎಂದು ನ್ಯಾ. ಜಿ.ಎಸ್. ಸಿಸ್ತಾನಿ ಮತ್ತು ನ್ಯಾ. ಜ್ಯೋತಿ ಸಿಂಗ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.