Tag: Practice

  • ನೆಟ್ಸ್‌ನಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಕಲಿಯುತ್ತಿರುವ ಸ್ಮಿತ್

    ನೆಟ್ಸ್‌ನಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಕಲಿಯುತ್ತಿರುವ ಸ್ಮಿತ್

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ನೆಟ್ಸ್‌ನಲ್ಲಿ  ಧೋನಿಯವರ ಹೆಲಿಕಾಪ್ಟರ್ ಶಾಟ್ ಹೊಡೆಯಲು ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಐಪಿಎಲ್ ಯುವ ಆಟಗಾರರಿಗೆ ಮತ್ತು ಕ್ರಿಕೆಟಿನಲ್ಲಿ ಹೊಸತನವನ್ನು ಪ್ರಯತ್ನಿಸಲು ಉತ್ತಮ ವೇದಿಕೆಯಾಗಿದೆ. ಇದರಿಂದ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಅಂತೆಯೇ ಎಂದೂ ಹೆಲಿಕಾಪ್ಟರ್ ಶಾಟ್ ಹೊಡೆಯದ ಸ್ಟೀವ್ ಸ್ಮಿತ್ ಅವರು ಐಪಿಎಲ್ ವೇಳೆ ಅದನ್ನು ಕಲಿಯಲು ಪ್ರಯತ್ನ ಮಾಡುತ್ತಿದ್ದಾರೆ.

    ಅಭ್ಯಾಸದ ವೇಳೆ ಸ್ಮಿತ್ ಹೆಲಿಕಾಪ್ಟರ್ ಶಾಟ್ ಹೊಡೆಯಲು ಪ್ರಯತ್ನ ಮಾಡಿರುವ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ತಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ನಾಯಕನ್ನು ನಾವು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೇಗದ ಬೌಲರ್ ಎಸೆದ ಯಾರ್ಕರ್ ಗೆ ಸ್ಮಿತ್ ಹೆಲಿಕಾಪ್ಟರ್ ಶಾಟ್ ಬಾರಿಸಿರುವುದನ್ನು ಕಾಣಬಹುದು.

    ಕಳೆದ ಮಂಗಳವಾರ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರಾಯಲ್ಸ್ ತಂಡ 16 ರನ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಮಂಗಳವಾರ ನಡೆದ ಐಪಿಎಲ್ ನಾಲ್ಕನೇ ಮ್ಯಾಚಿನಲ್ಲಿ ಸ್ಟೀವ್ ಸ್ಮಿತ್ ಅವರು ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. 47 ಎಸೆತದಲ್ಲಿ 69 ರನ್ ಪೇರಿಸಿದ ಸ್ಮಿತ್, 146.81ರ ಸ್ಟ್ರೈಕ್ ರೇಟ್‍ನಲ್ಲಿ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದ್ದರು.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಪ್ರಾ ಆರ್ಚರ್ ಅವರ ಮಿಂಚಿನಂತ ಹೊಡೆತಗಳಿಂದ ಭರ್ಜರಿ 217 ರನ್‍ಗಳ ಟಾರ್ಗೆಟ್ ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ಚೆನ್ನೈ ತಂಡ ರಾಯಲ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿನಲ್ಲಿ ಕೇವಲ 199 ರನ್ ಗಳಿಸಿ 16 ರನ್‍ಗಳಿಂದ ಸೋಲುಂಡಿತ್ತು.

  • ವಯಸ್ಸು 39 ಆದ್ರೂ, ನೆಟ್ಸ್‌ನಲ್ಲಿ ಧೋನಿ, ವಾಟ್ಸನ್ ಘರ್ಜನೆ – ವಿಡಿಯೋ

    ವಯಸ್ಸು 39 ಆದ್ರೂ, ನೆಟ್ಸ್‌ನಲ್ಲಿ ಧೋನಿ, ವಾಟ್ಸನ್ ಘರ್ಜನೆ – ವಿಡಿಯೋ

    ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ ಮ್ಯಾನ್ ಶೇನ್ ವಾಟ್ಸನ್ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

    ತಂಡದಲ್ಲಿ ಇಬ್ಬರು ಆಟಗಾರಿಗೆ ಮತ್ತು 11 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚೆನ್ನೈ ತಂಡ ಸ್ವಲ್ಪ ತಡವಾಗಿ ಅಭ್ಯಾಸವನ್ನು ಆರಂಭ ಮಾಡಿತ್ತು. ಸದ್ಯ ನಿರಂತರ ಅಭ್ಯಾಸದಲ್ಲಿ ನಿರತವಾಗಿರುವ ಧೋನಿ ನೇತೃತ್ವದ ಸಿಎಸ್‍ಕೆ ತಂಡ, ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಯುಇಎಯ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದೆ.

    ಭಾನುವಾರದ ಅಭ್ಯಾಸದ ವೇಳೆ 39 ವರ್ಷದ ಶೇನ್ ವಾಟ್ಸನ್ ಮತ್ತು ಎಂಎಸ್ ಧೋನಿ ನೆಟ್ಸ್ ಪ್ರಾಕ್ಟೀಸ್‍ನಲ್ಲಿ ಬೌಲರ್ ಗಳನ್ನು ದಂಡಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಶೇನ್ ವಾಟ್ಸನ್, 39ರ ವಯಸ್ಸಿನಲ್ಲೂ, ಈ ಇಬ್ಬರು ಹಳೆಯ ವ್ಯಕ್ತಿಗಳು ಮಾಡುತ್ತಿರುವ ಅಭ್ಯಾಸವು ಇಷ್ಟವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಓದಿ: ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ – ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ

    ಐಪಿಎಲ್‍ನಲ್ಲಿ ಹೆಚ್ಚು ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಆಡಿದ್ದ ವಾಟ್ಸನ್ ಕಳೆದ ಎರಡು ಆವೃತ್ತಿಯಿಂದ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನನಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಬೇಕು ಮತ್ತು ಶೇನ್ ವಾರ್ನ್ ಅವರ ಮಾರ್ಗದರ್ಶನದಲ್ಲಿ ಆಡಬೇಕು ಎಂದು ಇಷ್ಟವಿತ್ತು. ಆದರೆ ಅದೂ ಆಗಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಂತಹ ದೊಡ್ಡ ತಂಡಕ್ಕಾಗಿ ಆಡುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ.

    ಚೆನ್ನೈ ತಂಡ ನನ್ನ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದೆ. ಚೆನ್ನೈ ಒಂದು ಒಳ್ಳೆಯ ತಂಡ. ನಾನು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇದ್ದಾಗ ಚೆನ್ನೈ ವಿರುದ್ಧ ಆಡುವ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರನ್ನು ಮೆಚ್ಚಿಕೊಂಡಿದ್ದೆ. ಅವರು ಪಂದ್ಯದಲ್ಲಿ ಮತ್ತು ಪಂದ್ಯದಿಂದ ಹೊರಗೂ ತಮ್ಮ ತಂಡದ ಆಟಗಾರರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಮೆಚ್ಚಿಕೊಂಡಿದ್ದೆ ಎಂದು ವಾಟ್ಸನ್ ತಿಳಿಸಿದ್ದಾರೆ. ಇದನ್ನು ಓದಿ: ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದ್ದ ಐಪಿಎಲ್ ಯುಎಇಯಲ್ಲಿ ರಂಗೇರಲು ಸಿದ್ಧವಾಗಿದೆ. ಇದೇ ಸೆಪ್ಟಂಬರ್ 19ರಿಂದ ಐಪಿಎಲ್ ಹಂಗಾಮ ಶುರುವಾಗಲಿದೆ. ಆರಂಭಿಕ ಪಂದ್ಯದಲ್ಲಿ ಕಳೆದ ಆವೃತ್ತಿಯಲ್ಲಿ ಫೈನಲ್ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡ ಕಣಕ್ಕೀಳಿಯಲಿವೆ. ಒಟ್ಟು 46 ದಿನ 56 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

  • ರೆಡ್ ಪ್ಯಾಡ್, ನ್ಯೂ ಬ್ಯಾಟ್ – ಅಭ್ಯಾಸಕ್ಕೆ ಸಿದ್ಧವೆಂಬ ಸೂಚನೆ ಕೊಟ್ಟ ಆರ್‌ಸಿಬಿ ನಾಯಕ ಕಿಂಗ್ ಕೊಹ್ಲಿ

    ರೆಡ್ ಪ್ಯಾಡ್, ನ್ಯೂ ಬ್ಯಾಟ್ – ಅಭ್ಯಾಸಕ್ಕೆ ಸಿದ್ಧವೆಂಬ ಸೂಚನೆ ಕೊಟ್ಟ ಆರ್‌ಸಿಬಿ ನಾಯಕ ಕಿಂಗ್ ಕೊಹ್ಲಿ

    ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಐಪಿಎಲ್‍ಗಾಗಿ ಅಭ್ಯಾಸ ಮಾಡಲು ಸಿದ್ಧವಾಗುತ್ತಿರುವ ಸೂಚನೆಯನ್ನು ನೀಡಿದ್ದಾರೆ.

    ಕೊರೊನಾದಿಂದ ಸುಮಾರು 60 ವರ್ಷದ ಬಳಿಕ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಯನ್ನು ನಿಲ್ಲಿಸಿ ಸ್ತಭ್ಧವಾಗಿತ್ತು. ಸದ್ಯ ಕೊರೊನಾ ಲಾಕ್‍ಡೌನ್ ವಿಶ್ವದ ಬಹುತೇಕ ಕಡೆ ಸಡಿಲಿಕೆ ಆಗಿದ್ದು, ಕ್ರಿಕೆಟ್ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಇದರ ಮಧ್ಯದಲ್ಲಿ ಐಪಿಎಲ್ ಕೂಡ ಆರಂಭವಾಗುತ್ತಿದ್ದು, ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಅಭ್ಯಾಸ ಸಿದ್ಧವಾಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಈ ವಿಚಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೋರಿ ಹಾಕಿರುವ ಕೊಹ್ಲಿ, ಕೆಂಪು ಬಣ್ಣದ ಆರ್‌ಸಿಬಿ ತಂಡದ ಪ್ಯಾಡ್‍ಗಳು, ಹೊಸ ಬ್ಯಾಟ್‍ಗಳ ಮತ್ತು ತಮ್ಮ ಕ್ರಿಕೆಟ್ ಕಿಟ್‍ನ ಫೋಟೋ ಹಾಕಿದ್ದಾರೆ. ಈ ಮೂಲಕ ತಾನು ಐಪಿಎಲ್ ಪಂದ್ಯಗಳಿಗಾಗಿ ಅಭ್ಯಾಸ ನಡೆಸುವ ಸೂಚನೆಯನ್ನು ನೀಡಿದ್ದಾರೆ. ಕೊರೊನಾ ಲಾಕ್‍ಡೌನ್ ಆದ ನಂತರ ಕೊಹ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಉಳಿದಿದ್ದ ಕೊಹ್ಲಿ ಕೊರೊನಾ ವೈರಸ್ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಸೇರಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದನ್ನು ಓದಿ: ಅನುಷ್ಕಾಳನ್ನು ಭೇಟಿಯಾಗದಿದ್ದರೆ ನಾನು ಬದಲಾಗುತ್ತಿರಲಿಲ್ಲ: ಪತ್ನಿಯನ್ನು ಹಾಡಿಹೊಗಳಿದ ವಿರಾಟ್

    ಐಪಿಎಲ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್‍ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಇದನ್ನು ಓದಿ: ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

    ಕೊರೊನಾ ಲಾಕ್‍ಡೌನ್ ಇಲ್ಲದಿದ್ದರೆ ಐಪಿಎಲ್-2020 ಕಳೆದ ಮಾರ್ಚ್ ತಿಂಗಳಲ್ಲಿ ಇಂಡಿಯಾದಲ್ಲೇ ಆರಂಭವಾಗಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಮುಂದಕ್ಕೆ ಹೋಗಿತ್ತು. ಈಗ ಕೊರೊನಾ ವೈರಸ್ ಕಾಟದಿಂದ ಈ ಬಾರಿಯ ಐಪಿಎಲ್ ಅನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಮುಂದಿನ ತಿಂಗಳ 19ರಂದು ಆರಂಭವಾಗಲಿರುವ ಐಪಿಎಲ್ ಫೈನಲ್ ನವೆಂವರ್ 8 ಅಥವಾ 10ರಂದು ನಡೆಯಲಿದೆ ಎಂದು ಹೇಳಲಾಗಿದೆ.

  • ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ನಲ್ಲಿ ಭಾರತಕ್ಕೆ ಚಿನ್ನ ತಂದ ಆಟಗಾರ್ತಿ ಪಿ.ವಿ ಸಿಂಧು ಅವರು ಅಭ್ಯಾಸ ಮಾಡುವ ವಿಡಿಯೋ ನೋಡಿ ನಾನು ಆಯಾಸಗೊಂಡೆ ಎಂದು ಉದ್ಯಮಿ ಅನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪರ ಮೊದಲ ಬಾರಿಗೆ ಚಿನ್ನ ಗೆದ್ದ ಪಿ.ವಿ ಸಿಂಧು ಅವರು ಹೈದರಾಬಾದಿನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಅನಂದ್ ಮಹೀಂದ್ರಾ ತುಂಬಾ ಕ್ರೂರವಾಗಿದೆ ಈ ಅಭ್ಯಾಸ. ಈ ವಿಡಿಯೋ ನೋಡಿಯೇ ನಾನು ದಣಿದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಆಕೆಯ ಅಭ್ಯಾಸ ಮಾಡುವ ವಿಡಿಯೋ ನೋಡಿಯೇ ನಾನು ದಣಿದಿದ್ದೇನೆ. ಆಕೆ ವಿಶ್ವ ಚಾಂಪಿಯನ್ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. ಉದಯೋನ್ಮುಖ ಭಾರತೀಯ ಕ್ರೀಡಾಪಟುಗಳು ಆಕೆಯನ್ನು ಅನುಸರಿಸಬೇಕು ಮತ್ತು ಉನ್ನತವಾದದ್ದನ್ನು ಸಾಧಿಸಲು ಆಕೆಯ ಬದ್ಧತೆಯನ್ನು ನೋಡಿ ಕಲಿಯಬೇಕು ಎಂದು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಂಧು ಅವರು ರನ್ನಿಂಗ್ ಮಾಡುತ್ತಿರುವುದು, ವೇಟ್ ಲಿಫ್ಟಿಂಗ್ ಸೇರಿದಂತೆ ಹಲವು ಅಭ್ಯಾಸಗಳನ್ನು ಮಾಡುತ್ತಿರುವುದು ಸೆರೆಯಾಗಿದೆ.

    ಭಾನುವಾರ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಿ.ವಿ ಸಿಂಧು ಅವರು ಜಪಾನ್ ದೇಶದ ಒಕುಹಾರ ಅವರ ವಿರುದ್ಧ 21-7, 21-7 ರ ನೇರ ಸೆಟ್‍ನಲ್ಲಿ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು. ಪಂದ್ಯದ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಿಂಧು ನೇರ ಸೆಟ್‍ನಲ್ಲಿ ಸುಲಭವಾಗಿ ಜಯಸಾಧಿಸಿದರು. ಈ ಮೂಲಕ ಭಾರತದ ಪರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಚಿನ್ನ ಗೆದ್ದು ಭಾರತಕ್ಕೆ ವಾಪಸ್ ಬಂದ 24 ವರ್ಷದ ಪಿ.ವಿ ಸಿಂಧು, ಈ ವಿಜಯಕ್ಕಾಗಿ ತುಂಬಾ ದಿನಗಳಿಂದ ತಯಾರಿಯಾಗಿದ್ದೆ. ಇದಕ್ಕಾಗಿ ನನ್ನ ಪೋಷಕರಿಗೆ ಮತ್ತು ನನ್ನ ತರಬೇತುಗಾರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇವರ ಬೆಂಬಲವಿಲ್ಲದೆ ನಾನು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆಲ್ಲಲು ಆಗುತ್ತಿರಲಿಲ್ಲ. ಮುಖ್ಯವಾಗಿ ನನ್ನ ಪ್ರಯೋಜಕರಿಗೆ ಮತ್ತು ನನ್ನನ್ನು ಬೆಂಬಲಿಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಪಿ.ವಿ ಸಿಂಧು ಹೇಳಿದ್ದಾರೆ.

    ವಿಶ್ವ ಚಾಂಪಿಯನ್‍ಶಿಪ್ ಮುಗಿಸಿ ಸೋಮವಾರ ರಾತ್ರಿ ದೆಹಲಿಗೆ ಬಂದಿಳಿದ ಪಿ.ವಿ ಸಿಂಧು ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರನ್ನು ಮಂಗಳವಾರ ಭೇಟಿಯಾದರು. ಈ ಸಮಯದಲ್ಲಿ ಸಿಂಧು ಅವರನ್ನು “ಭಾರತದ ಹೆಮ್ಮೆ” ಎಂದು ಕರೆದ ಮೋದಿ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.

  • ನನ್ನ ಪತ್ನಿ ಪ್ರಾಕ್ಟೀಸ್ ಮಾಡ್ವಾಗ ಯಾರೂ ಬರ್ಬೇಡಿ- ನ್ಯಾಷನಲ್ ಅಥ್ಲೀಟ್‍ಗಳನ್ನ ಹೊರಗೆ ಕಳಿಸಿದ ಐಪಿಎಸ್ ಅಧಿಕಾರಿ

    ನನ್ನ ಪತ್ನಿ ಪ್ರಾಕ್ಟೀಸ್ ಮಾಡ್ವಾಗ ಯಾರೂ ಬರ್ಬೇಡಿ- ನ್ಯಾಷನಲ್ ಅಥ್ಲೀಟ್‍ಗಳನ್ನ ಹೊರಗೆ ಕಳಿಸಿದ ಐಪಿಎಸ್ ಅಧಿಕಾರಿ

    ಬೆಂಗಳೂರು: ನನ್ನ ಪತ್ನಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆದ್ದರಿಂದ ಸ್ಟೇಡಿಯಂಗೆ ಯಾರೂ ಬರಬೇಡಿ ಎಂದು ಹೇಳಿ ಐಪಿಎಸ್ ಅಧಿಕಾರಿ ಅನುಪಮ್ ಅಗರವಾಲ್ ನ್ಯಾಷನಲ್ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅವಮಾನ ಮಾಡಿದ್ದಾರೆ.

    ಕಂಠೀರವ ಸ್ಟೇಡಿಯಂ ನಿರ್ದೇಶಕ ಅನುಪಮ್ ಅಗರವಾಲ್ ರಾಷ್ಟ್ರೀಯ ಕ್ರೀಡಾಪಟುಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸ್ಟೇಡಿಯಂನಲ್ಲಿ ನನ್ನ ಪತ್ನಿ ಪ್ರಾಕ್ಟೀಸ್ ಮಾಡುವ ಸಂದರ್ಭದಲ್ಲಿ ಯಾರೂ ಸ್ಟೇಡಿಯೋ ಒಳಗಡೆ ಇರಬಾರದು ಎಂದು ಹೆಂಡತಿಗೋಸ್ಕರ ಅಥ್ಲೀಟ್‍ಗಳನ್ನು ಸ್ಟೇಡಿಯಂನಿಂದ ಹೊರ ಹೋಗಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಹೋಂಗಾರ್ಡ್‍ಗಳನ್ನು ಕರೆದು ಕ್ರೀಡಾಪಟುಗಳನ್ನು ಹೊರ ಹಾಕಿಸಿದ್ದಾರೆ.

    ಐಪಿಎಸ್ ಅಧಿಕಾರಿ ಅನುಪಮ್ ಅಗರವಾಲ್ ಅವರ ಪತ್ನಿಪ್ರೇಮಕ್ಕೆ ಕಂಗಾಲಾದ ಅಥ್ಲೀಟ್‍ಗಳು ಕಂಠೀರವ ಸ್ಟೇಡಿಯಂ ಬಿಟ್ಟು ಕಬ್ಬನ್ ಪಾರ್ಕ್‍ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಎಲ್ಲಾ ಅಥ್ಲೆಟಿಕ್ ಕ್ರೀಡಾಪಟುಗಳು ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

    ಅನುಪಮ್ ಅಗರವಾಲ್ ಫೋನ್ ಮಾಡಿ ಯಾವುದೇ ಪೆÇಲೀಸ್ ಠಾಣೆಯಲ್ಲೂ ದೂರು ಸ್ವೀಕಾರ ಮಾಡಬೇಡಿ ಅಂತ ಹೇಳಿದ್ದಾರೆ. ಸಂಪಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ.

    https://www.youtube.com/watch?v=sYO07ojfHMg

     

  • ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಮೈಸೂರು: ನಗರದಲ್ಲಿ ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಎಂ.ಜೆ ರವಿಕುಮಾರ್ ಕುದುರೆ ಸವಾರಿ ಮಾಡುತ್ತಾ ನಗರದ ಸಮಸ್ಯೆ ಆಲಿಸಿದರು.

    ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಮೇಯರ್ ಕುದುರೆ ಓಡಿಸುವ ತರಬೇತಿ ಪಡೆಯುತ್ತಿದ್ದಾರೆ. ಜಂಬೂಸವಾರಿ ಮೆರವಣಿಗೆಯಲ್ಲಿ ಮೇಯರ್ ಹಾಗೂ ಜಿ.ಪಂ ಅಧ್ಯಕ್ಷರು ಭಾಗವಹಿಸುವುದು ಸಂಪ್ರದಾಯವಾಗಿದೆ. ಇದಕ್ಕಾಗಿ ಮೇಯರ್ ಕುದುರೆ ಸವಾರಿ ತಾಲೀಮು ನಡೆಸುತ್ತಿದ್ದಾರೆ. ಹೀಗೆ ಕುದುರೆ ಸವಾರಿ ಮಾಡುತ್ತಾ ನಗರ ಪ್ರದಕ್ಷಿಣೆ ಕೂಡ ಮಾಡಿದರು.

    ಮೈಸೂರಿನ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಪರಿಶೀಲನೆ ನಡೆಸಿ ಫುಟ್‍ಪಾತ್ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಕುದುರೆ ಮೇಲೆ ಕುಳಿತು ವಾಕಿ ಟಾಕಿಯಲ್ಲಿ ಅಧಿಕಾರಿಗಳಿಗೂ ಖಡಕ್ ಎಚ್ಚರಿಕೆ ನೀಡಿದರು. ಕಾರಿನಲ್ಲಿ ಓಡಾಡುತ್ತಾ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಮೇಯರ್ ಹೀಗೆ ಕುದುರೆಯಲ್ಲಿ ಓಡಾಡುತ್ತಾ ಜನರ ಸಮಸ್ಯೆ ಆಲಿಸಿದ್ದನ್ನು ಜನರು ಕುತೂಹಲದಿಂದ ನೋಡುತ್ತಿದ್ದರು.

  • ಮೈಸೂರು: ಪ್ರಾಕ್ಟೀಸ್‍ಗಾಗಿ ಸಾರ್ವಜನಿಕ ಸ್ಥಳದಲ್ಲೇ ಗುಂಡು ಹಾರಿಸ್ದ!

    ಮೈಸೂರು: ಪ್ರಾಕ್ಟೀಸ್‍ಗಾಗಿ ಸಾರ್ವಜನಿಕ ಸ್ಥಳದಲ್ಲೇ ಗುಂಡು ಹಾರಿಸ್ದ!

    ಮೈಸೂರು: ಗುಂಡು ಹಾರಿಸುವುದನ್ನು ಸಾಮಾನ್ಯವಾಗಿ ದೊಡ್ಡ ಮೈದಾನದಲ್ಲಿ ಜನರು ಓಡಾಡದಂತ ಸ್ಥಳದಲ್ಲಿ ಪ್ರಾಕ್ಟೀಸ್ ಮಾಡುತ್ತಾರೆ. ಆದರೆ ಮೈಸೂರಿನಲ್ಲೊಬ್ಬ ವ್ಯಕ್ತಿ ತನ್ನ ಮನೆ ಪಕ್ಕದ ಪಾಳುಬಿದ್ದ ಜಾಗದಲ್ಲೇ ಗುಂಡು ಹಾರಿಸಿ ಪ್ರಾಕ್ಟೀಸ್ ಮಾಡಿದ ಘಟನೆ ನಡೆದಿದೆ.

    ಅಭ್ಯಾಸಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹೆಸರು ಗಣೇಶ್ ಪ್ರಸಾದ್. ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ. ಗಣೇಶ್ ಪ್ರಸಾದ್ ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ್ದನ್ನು ಅವರ ಸ್ನೇಹಿತರ ಬಳಿ ವಿಡಿಯೋ ಕೂಡ ಮಾಡಿಸಿದ್ದಾರೆ.

    ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಪಾಳು ಮನೆಯಲ್ಲಿ ಗುಂಡು ಹಾರಿಸಲಾಗಿದೆ. ಗಣೇಶ್ ಪ್ರಸಾದ್ ಗುಂಡು ಹಾರಿಸುವ ವೇಳೆ ಅಲ್ಲಿ ಒಂದು ಕಾರು ಕೂಡ ನಿಂತಿದೆ. ಮತ್ತೊಂದು ಕಾರು ಅದೇ ಮಾರ್ಗದಲ್ಲಿ ಸಾಗುತ್ತದೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

    ಒಂದು ವೇಳೆ ಗುರಿ ತಪ್ಪಿದ್ದರೆ ಹೆಚ್ಚಿನ ಅನಾಹುತವಾಗುತ್ತಿದ್ದುದು ಸ್ಪಷ್ಟ. ಆದರೆ ಈ ಆರೋಪವನ್ನ ಗಣೇಶ್ ಪ್ರಸಾದ್ ನಿರಾಕರಿಸುತ್ತಿದ್ದು ಆ ರೀತಿ ಅನಾಹುತ ಆಗೋಕೆ ಸಾಧ್ಯವಿಲ್ಲ. ನಾನು ಲೈಸೆನ್ಸ್ ಪಡೆದು ಸ್ಪರ್ಧೆಗಾಗಿ ಪ್ರಾಕ್ಟೀಸ್ ಮಾಡುತ್ತಿದ್ದೆ. ಇದರಲ್ಲಿ ಯಾವ ತಪ್ಪಿಲ್ಲ ಎಂದು ಹೇಳಿದ್ದಾರೆ.