Tag: Prachand Helicopter

  • ಭಾರತೀಯ ಸೇನೆಗೆ ಹೆಚ್ಚಿದ ಬಲ – ಶತ್ರು ಸೇನೆಗಳಿಗೆ ನಡುಕ!

    ಭಾರತೀಯ ಸೇನೆಗೆ ಹೆಚ್ಚಿದ ಬಲ – ಶತ್ರು ಸೇನೆಗಳಿಗೆ ನಡುಕ!

    ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಭಾರತ ಶತ್ರು ಸೇನೆಗಳ ಹುಟ್ಟಡಗಿಸಲು ಸೂಕ್ತ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತ ಸ್ವದೇಶಿ ನಿರ್ಮಿತ ಆಯುಧಗಳನ್ನೇ ಸೇನೆಗೆ ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಿದೆ. ಕೆಲ ದಿನಗಳ ಹಿಂದೆಯಷ್ಟೇ ಭಾರತ ಅಗ್ನಿ-5 (AGNI – 5) ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. 5,000 ಕಿಮೀ ದೂರದಲ್ಲಿರುವ ಗುರಿಯನ್ನು ತಲುಪಿ ಶತ್ರುಗಳನ್ನು ಕೊಲ್ಲುವ ಸಾಮರ್ಥ್ಯದ ಈ ಕ್ಷಿಪಣಿಯನ್ನು ರಕ್ಷಣಾ ಸಚಿವಾಲಯ ಸೇನೆಗೆ ಸೇರಿಸುವ ಸಿದ್ಧತೆ ನಡೆಸಿದೆ. ಅಲ್ಲದೇ ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ವದೇಶಿ ನಿರ್ಮಿತ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ʻನಾಗಾಸ್ತ್ರʼವನ್ನು (ಆತ್ಮಹತ್ಯಾ ಡ್ರೋನ್‌) (Suicide Drone) ಭಾರತೀಯ ಸೇನೆಗೆ ಸೇರಿಸುವ ತಯಾರಿ ನಡೆದಿದೆ. ಇದಾದ ಒಂದೆರಡು ದಿನಗಳಲ್ಲೇ ಚೀನಾ ಮತ್ತು ಪಾಕ್‌ ಗಡಿಯಲ್ಲಿ ಭಾರತ ಗಸ್ತು ಹೆಚ್ಚಿಸಲು 156 ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿದೆ.

    ಹಾಗಾದ್ರೆ ಭಾರತದ ರಕ್ಷಣಾ ವಲಯದಲ್ಲಿ (India’s Defense Sector) ಆಗುತ್ತಿರುವ ಬೆಳವಣಿಗೆಗಳು ಏನು? ಸೇನಾ ಸಾಮರ್ಥ್ಯ ಹೆಚ್ಚಿಸಲು ಯಾವೆಲ್ಲ ಕ್ರಮಗಳನ್ನು ಮತ್ತು ಏಕೆ ಕೈಗೊಳ್ಳಲಾಗುತ್ತಿದೆ? ಅನ್ನೋ ಬಗ್ಗೆ ತಿಳಿಯೋಣ…

    ಚೀನಾ-ಪಾಕ್‌ಗೆ ಠಕ್ಕರ್‌ ಕೊಡಲು ಪ್ಲ್ಯಾನ್‌:
    ಇತ್ತೀಚೆಗೆ ಚೀನಾ, ಭಾರತದ ಸಿಕ್ಕಿಂನಿಂದ ಸುಮಾರು 150 ಕಿಮೀ ಮೀಟರ್‌ಗಳಷ್ಟು ದೂರದ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಅತ್ಯಾಧುನಿಕ ಫೈಟರ್‌ ಜೆಟ್‌ಗಳನ್ನ ನಿಯೋಜಿಸಿದೆ. ಅಲ್ಲದೇ ಚೀನಾ ನೆರವಿನಿಂದಲೇ ಎದುರಾಳಿ ಪಾಕಿಸ್ತಾನ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳಿಗೆ ಠಕ್ಕರ್‌ ಕೊಡಲು ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಭಾರತೀಯ ಸೇನೆಗೆ 90 ಮತ್ತು ಭಾರತೀಯ ವಾಯುಸೇನೆಗೆ 66 ಲಘು ಯುದ್ಧ ಹೆಲಿಕಾಪ್ಟರ್‌ಗಳ (ಪ್ರಚಂಡ್‌) ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಡೆಟ್‌ಗೆ (HAL) 45,000 ಕೋಟಿ ರೂ.ಗೆ ಟೆಂಡರ್‌ ನೀಡಿದೆ. `ಪ್ರಚಂಡ್‌ʼ ಹೇಲಿಕಾಪ್ಟರ್‌ (Prachand Helicopter) 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಮಾಡುವ ಸಾಮರ್ಥ್ಯ ಹೊಂದಿದ್ದು, ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್‌ ನಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.

    ಅಣ್ವಸ್ತ್ರಗಳ ಬಲ ಹೆಚ್ಚಿಸಿಕೊಂಡ ಭಾರತ:
    ಹೌದು. ವಿಶ್ವದ 9 ರಾಷ್ಟ್ರಗಳು 2023ರಲ್ಲಿ ಅಣ್ವಸ್ತ್ರಗಳನ್ನು (Nuclear Weapons) ಆಧುನಿಕರಣಗೊಳಿಸುವುದರ ಜೊತೆಗೆ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆ ನಿಯೋಜಿಸಿವೆ. ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ, ದಕ್ಷಿಣ ಕೊರಿಯಾ, ಇಸ್ರೇಲ್‌ ಅಲ್ಲದೇ ಭಾರತವೂ ಸಹ ಈ ರಾಷ್ಟ್ರಗಳ ಪಟ್ಟಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಮುನ್ನುಗ್ಗುತ್ತಿರುವ ಭಾರತ ಅಣ್ವಸ್ತ್ರಗಳ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಸದ್ಯ ಅತಿಹೆಚ್ಚು ಅಣ್ವಸ್ತ್ರಗಳನ್ನು ಹೊಂದಿರುವ ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನಕ್ಕೆ ಏರಿಕೆ. ಅಮೆರಿಕ 5,044, ರಷ್ಯಾ 5,580, ಚೀನಾ 476, ಭಾರತ 172, ಪಾಕಿಸ್ತಾನ 170, ಇಸ್ರೇಲ್‌ 90, ಉತ್ತರ ಕೊರಿಯಾ 50 ಪರಮಾಣು ಅಸ್ತ್ರಗಳನ್ನು ಒಳಗೊಂಡಿವೆ.

    ಶತ್ರುಗಳಲ್ಲಿ ನಡುಕ ಹುಟ್ಟಿಸಿದ ನಾಗಾಸ್ತ್ರ:
    ನಾಗಾಸ್ತ್ರ-1 ಡ್ರೋನ್ (Nagastra – 1) ಅನ್ನು ಅತ್ಯಂತ ನಿಖರವಾದ ದಾಳಿ ನಡೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದ್ದು, ಜಿಪಿಎಸ್ ನಿರ್ದೇಶನದ ನೆರವಿನಿಂದ ಗುರಿಯ ಕೇವಲ 2 ಮೀಟರ್ ವ್ಯಾಪ್ತಿಯಲ್ಲಿ ನಿಖರ ದಾಳಿ ನಡೆಸಬಲ್ಲದು. ಅಲ್ಲದೇ ಇದು ಸ್ಥಿರ ರೆಕ್ಕೆಗಳನ್ನು ಹೊಂದಿದ್ದು, ಓರ್ವ ವ್ಯಕ್ತಿಯೇ ಕೊಂಡೊಯ್ಯುವಷ್ಟು ಹಗುರವಾಗಿದೆ. ಕೇವಲ 9 ಕೆಜಿ ತೂಕ ಹೊಂದಿದ್ದು, ಗರಿಷ್ಠ 30 ನಿಮಿಷಗಳಷ್ಟು ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಡ್ರೋನ್ ಹೊಂದಿರುವ ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯ ಕಾರಣದಿಂದ, ಇದು ಅತ್ಯಂತ ಕನಿಷ್ಠ ಪ್ರಮಾಣದ ಸದ್ದನ್ನು ಹೊರಹೊಮ್ಮಿಸುತ್ತದೆ. ಡ್ರೋನ್ 200 ಮೀಟರ್‌ಗಳಿಗಿಂತ ಎತ್ತರದಲ್ಲಿ ಹಾರಾಟ ನಡೆಸುವಾಗ ಅದನ್ನು ಗುರುತಿಸುವುದು ಶತ್ರುಗಳಿಗೆ ಕಷ್ಟಕರವಾಗುತ್ತದೆ.

    ನಾಗಾಸ್ತ್ರ ಆತ್ಮಹತ್ಯಾ ಡ್ರೋನ್‌:
    ನಾಗಾಸ್ತ್ರವನ್ನು ಆತ್ಮಹತ್ಯಾ ಡ್ರೋನ್‌ಗಳೆಂದೂ (ಸುಸೈಡ್ ಡ್ರೋನ್) ಕರೆಯಲಾಗುತ್ತದೆ. ಇವುಗಳು ಒಂದು ಬಾರಿ ಮಾತ್ರವೇ ಪ್ರಯೋಗಿಸಬಲ್ಲ ಆಯುಧಗಳಾಗಿವೆ. ನೇರವಾಗಿ ತಮ್ಮ ಗುರಿಯೆಡೆಗೆ ಸಾಗಿ, ತಮ್ಮನ್ನು ತಾವು ಸ್ಫೋಟಿಸಿಕೊಳ್ಳುತ್ತವೆ. ಇದು ಸರಿಯಾದ ಗುರಿಯನ್ನು ಗುರುತಿಸುವ ತನಕ ಮೇಲ್ಭಾಗದಲ್ಲಿ ಹಾರಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅವಕಾಶ ಸಿಕ್ಕ ತಕ್ಷಣವೇ ಗುರಿಯ ಮೇಲೆ ದಾಳಿ ನಡೆಸುತ್ತವೆ. ಒಂದು ವೇಳೆ ಗುರಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ದಾಳಿ ಯೋಜನೆ ರದ್ದುಗೊಳಿಸಿದರೆ, ಗಾಳಿಯಲ್ಲಿ ಅಡ್ಡಾಡುವ ಡ್ರೋನ್ ಅನ್ನು ಮರಳಿ ಹಿಂದಕ್ಕೆ ಕರೆಸಿಕೊಳ್ಳಬಹುದು. ಅದಕ್ಕಾಗಿ ಅನುಕೂಲಕರ ಲ್ಯಾಂಡಿಂಗ್‌ ಮಾಡಲು ಪ್ಯಾರಾಚುಟ್‌ ರಿಕವರಿ ವ್ಯವಸ್ಥೆಯನ್ನೂ ಹೊಂದಿದೆ. ಇದರಿಂದಾಗಿ ಡ್ರೋನ್ ಮರುಬಳಕೆಗೆ ಲಭ್ಯವಾಗುತ್ತದೆ.

    ಇಷ್ಟೇ ಅಲ್ಲ, ಕಳೆದ ವರ್ಷವೂ ಸಹ ಭಾರತದ ರಕ್ಷಣಾ ಸಚಿವಾಲಯ ಸುಮಾರು 45,000 ಕೋಟಿ ರೂ. ಮೌಲ್ಯದ ವಿವಿಧ ಆಯುಧಗಳ ಖರೀದಿಗೆ ಒಪ್ಪಿಗೆ ಸೂಚಿಸಿತ್ತು. ಧ್ರುವಾಸ್ತ್ರ ಕ್ಷಿಪಣಿಗಳು, ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಾಣದ 12 ಸುಖೋಯ್‌-30 MKI ಯುದ್ಧ ವಿಮಾನಗಳು, ಆರ್ಟಿಲರಿ ಗನ್‌ಗಳು ಮತ್ತು ರೇಡಾರ್‌ಗಳನ್ನ ಕ್ಷಿಪ್ರವಾಗಿ ಸಾಗಿಸಲು ಅತ್ಯವಶ್ಯಕವಾದ ಹೈ ಮೊಬಿಲಿಟಿ ವೆಹಿಕಲ್ ಹಾಗೂ ಗನ್ ಟೋವಿಂಗ್ ವೆಹಿಕಲ್ಸ್‌ಗಳನ್ನ ಖರೀದಿಸಲು ಅನುಮೋದನೆ ನೀಡಿತ್ತು.

    ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ʻಧ್ರುವಾಸ್ತ್ರʼ:
    ಭಾರತದ ದೇಶೀಯ ನಿರ್ಮಾಣದ ಹೆಲಿಕಾಪ್ಟರ್ ಲಾಂಚ್ಡ್ ನಾಗ್ (ಹೆಲಿನಾ) ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ATGM) ಎಲ್ಲ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೆಲಿನಾ ಭಾರತೀಯ ಭೂಸೇನೆಯ ಆವೃತ್ತಿಯಾದರೆ, ಭಾರತೀಯ ವಾಯುಪಡೆಯ ಆವೃತ್ತಿಯನ್ನ ಧ್ರುವಾಸ್ತ್ರ ಎಂದು ಕರೆಯಲಾಗುತ್ತದೆ. ಈ ಧ್ರುವಾಸ್ತ್ರವೂ ತನ್ನ ಆರಂಭಿಕ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಧ್ರುವಾಸ್ತ್ರ ಅವಳಿ ಲಾಂಚರ್‌ಗಳನ್ನ ಹೊಂದಿದ್ದು, ಒಟ್ಟು 8 ಕ್ಷಿಪಣಿಗಳನ್ನ ಒಯ್ಯುವ ಸಾಮರ್ಥ್ಯ ಹೊಂದಿದೆ. ಇದರ ಕ್ಷಿಪಣಿ ಗರಿಷ್ಠ 4 ಕಿಮೀ ಗಳಷ್ಟು ಎತ್ತರದಿಂದ ಉಡಾವಣೆಗೊಳಿಸಬಹುದಾಗಿದೆ. ಪ್ರತಿ ಗಂಟೆಗೆ 70 ಕಿಮೀ ಗಳಷ್ಟು ವೇಗದಲ್ಲಿ ನಿಖರವಾಗಿ ದಾಳಿ ನಡೆಸಬಲ್ಲದು. ಧ್ರುವಾಸ್ತ್ರ ಕ್ಷಿಪಣಿ 43 ಕೆಜಿ ತೂಕ ಹೊಂದಿರಲಿದೆ. ಇದು ಇದರ ಮೂಲ ವಿನ್ಯಾಸವಾದ ನಾಗ್ ಕ್ಷಿಪಣಿಯಷ್ಟೇ ತೂಕ ಹೊಂದಿದೆ. ಇದರ ಸಿಡಿತಲೆ 8 ಕೆಜಿಗಳಷ್ಟು ತೂಕವಿದೆ. ಇದು ಅಂದಾಜು 1.85 – 1.9 ಮೀಟರ್ (6 ಅಡಿ) ಉದ್ದವಿದ್ದು, 0.16-0.2 ಮೀಟರ್ (8 ಇಂಚ್) ಅಗಲ ಇರಲಿದೆ. ಧ್ರುವಾಸ್ತ್ರ ಸಹ ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಗೊಳಿಸಿದ್ದು, ಸೇನೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

  • ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ನವದೆಹಲಿ: ಕೇಂದ್ರ ಸರ್ಕಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನಿಂದ (HAL) ಭಾರತದ ವಾಯುಸೇನೆಗೆ (Indian Air Force) 156 ಸ್ಥಳೀಯ `ಪ್ರಚಂಡ್’ ಲಘು ಸೇನಾ ಹೆಲಿಕಾಪ್ಟರ್‌ಗಳನ್ನು (Prachand Helicopter) ಖರೀದಿಸಲು ಮುಂದಾಗಿದೆ. ಈ ಮೂಲಕ ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಮಾಡುತ್ತಿರುವ ಸಮಸ್ಯೆಯನ್ನು ನಿಯಂತ್ರಿಸಲು ವಾಯುಸೇನೆಗೆ ಬಲ ತುಂಬಲು ಕೇಂದ್ರ ಈ ನಿರ್ಧಾರ ಕೈಗೊಂಡಿದೆ.

    ಈಗಾಗಲೇ ಈ ಯೋಜನೆಯನ್ನು ಅಂತಿಮಗೊಳಿಸಲಾಗಿದೆ. ಹೆಲಿಕಾಪ್ಟರ್‌ಗಳು ಸಿಯಾಚಿನ್ ಗ್ಲೇಸಿಯರ್ ಮತ್ತು ಪೂರ್ವ ಲಡಾಖ್‍ನಂತಹ ಎತ್ತರದ ಪ್ರದೇಶಗಳಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಗೆ ಸಮರ್ಥವಾಗಿವೆ. ಸೇನೆಯು (Indian Army) 90 ಹೆಲಿಕಾಪ್ಟರ್‌ಗಳನ್ನು ಪಡೆಯಲಿದೆ. 66 ಹೆಲಿಕಾಪ್ಟರ್‌ಗಳನ್ನು ವಾಯುಸೇನೆ ಪಡೆಯಲಿದೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    ಈ ಯೋಜನೆಗೆ ವಾಣಿಜ್ಯ ಮಾತುಕತೆಗಳ ಮತ್ತು ಭದ್ರತೆಯ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಅಂತಿಮ ಒಪ್ಪಿಗೆಯ ನಂತರ ಆದೇಶವನ್ನು ನೀಡಲು ನಿರ್ಧರಿಸಲಾಗಿದೆ.

    5.8 ಟನ್ ತೂಕದ ಪ್ರಚಂಡ್ ಲಘು ಯುದ್ಧ ಚಾಪರ್ ಸ್ಥಳೀಯವಾಗಿ ತಯಾರಿಸಲಾಗಿದೆ. ಅಲ್ಲದೇ ವಿಶ್ವದಲ್ಲಿ ತೂಕದ ವರ್ಗದ ಏಕೈಕ ದಾಳಿ ಹೆಲಿಕಾಪ್ಟರ್ ಎಂದು ಹೆಸರು ಪಡೆದಿದೆ. 20 ಎಂಎಂ ಬಂದೂಕುಗಳು, 70 ಎಂಎಂ ರಾಕೆಟ್ ವ್ಯವಸ್ಥೆ ಮತ್ತು ಕ್ಷಿಪಣಿಗಳನ್ನು ಇಂದು ಹೊಂದಿದೆ. ಇದು 16,400 ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿರುವುದು ವಿಶೇಷ. ಇದನ್ನೂ ಓದಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]