Tag: Prabhsimran Singh

  • IPL Retention | ಹೊಸ ಮುಖಗಳಿಗೆ ಪಂಜಾಬ್‌ ಕಿಂಗ್ಸ್‌ ಮಣೆ – ಸ್ಟಾರ್‌ ಆಟಗಾರರು ಹೊರಕ್ಕೆ

    IPL Retention | ಹೊಸ ಮುಖಗಳಿಗೆ ಪಂಜಾಬ್‌ ಕಿಂಗ್ಸ್‌ ಮಣೆ – ಸ್ಟಾರ್‌ ಆಟಗಾರರು ಹೊರಕ್ಕೆ

    ಮುಂಬೈ: 2024ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೂ ವಿರೋಚಿತ ಸೋಲುಗಳಿಂದಲೇ ಪ್ಲೇ ಆಫ್‌ ನಿಂದ ದೂರ ಉಳಿದ ಪಂಜಾಬ್‌ ಕಿಂಗ್ಸ್‌ (PBKS) ಈ ಬಾರಿ ಕೇವಲ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.

    ಶಶಾಂಕ್‌ ಸಿಂಗ್‌ (Shashank Singh) ಅವರನ್ನು 5.5 ಕೋಟಿ ರೂ.ಗೆ ಹಾಗೂ ಆರಂಭಿಕ ಆಟಗಾರ ಪ್ರಭ್‌ಸಿಮ್ರನ್‌ ಸಿಂಗ್‌ (Prabhsimran Singh) ಅವರನ್ನು 4 ಕೋಟಿ ರೂ.ಗೆ ಧಾರಣೆ ಮಾಡಿಕೊಂಡಿದೆ. ಉಳಿದೆಲ್ಲ ಸ್ಟಾರ್‌ ಆಟಗಾರರನ್ನ ಹೊರದಬ್ಬಿದೆ. ಇದರಿಂದ ಪರ್ಸ್‌ನಲ್ಲಿ 110 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: IPL Retention | ಸಂಭಾವನೆ ಹೆಚ್ಚಿಸಿಕೊಂಡ ಕ್ಲಾಸೆನ್‌ – ಬರೋಬ್ಬರಿ 23 ಕೋಟಿ ರೂ.ಗೆ ರೀಟೆನ್‌

    ದಾಖಲೆ ಬೆಲೆಯ ಆಟಗಾರ ಔಟ್‌: 
    2023ರ ಐಪಿಎಲ್‌ಗೆ ನಡೆದ ಮಿನಿ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ಆವೃತ್ತಿಗೆ 18.50 ಕೋಟಿ ರೂ.ಗೆ ಬಿಕರಿಯಾಗಿದ್ದ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ (Sam Curran) ರಿಟೇನ್‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿದ್ದಾರೆ.

    2022ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಸ್ಯಾಮ್‌ ಕರ್ರನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ 18.50 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದನ್ನೂ ಓದಿ: IPL Retention | ಕೆಕೆಆರ್‌ನಿಂದ ಸ್ಟಾರ್ಕ್‌, ಶ್ರೇಯಸ್‌ ಔಟ್‌ – ರಿಂಕು ಸಂಭಾವನೆ ಕೋಟಿ ಕೋಟಿ ಏರಿಕೆ!

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

  • ರನ್‌ ಮಳೆಯಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳ ಜಯ – ಚೇಸಿಂಗ್‌ನಲ್ಲಿ ಆರ್‌ಸಿಬಿ ದಾಖಲೆ ಸರಿಗಟ್ಟಿದ ಕಿಂಗ್ಸ್‌

    ರನ್‌ ಮಳೆಯಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳ ಜಯ – ಚೇಸಿಂಗ್‌ನಲ್ಲಿ ಆರ್‌ಸಿಬಿ ದಾಖಲೆ ಸರಿಗಟ್ಟಿದ ಕಿಂಗ್ಸ್‌

    ಕೋಲ್ಕತ್ತಾ: ಜಾನಿ ಬೈರ್‌ಸ್ಟೋವ್‌ (Jonny Bairstow) ಭರ್ಜರಿ ಶತಕ ಹಾಗೂ ಶಶಾಂಕ್‌ ಸಿಂಗ್‌, ಪ್ರಭ್‌ ಸಿಮ್ರನ್‌ಸಿಂಗ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಲ್ಲದೇ ಐಪಿಎಲ್‌ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್‌ ಇದಾಗಿದೆ. ಇತ್ತೀಚೆಗೆ ಸನ್‌ ರೈರ್ಸ್‌ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ (RCB) ಚೇಸಿಂಗ್‌ನಲ್ಲಿ 262 ರನ್‌ ಗಳಿಸಿತ್ತು. ಇದು ದಾಖಲೆಯಾಗಿತ್ತು. ಇದೀಗ ಪಂಜಾಬ್‌ ಕಿಂಗ್ಸ್‌ ಸಹ 262 ರನ್‌ ಗಳಿಸಿ ಆರ್‌ಸಿಬಿ ದಾಖಲೆ ಸರಿಗಟ್ಟಿದೆ.

    262 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಪಂಜಾಬ್‌ ಕಿಂಗ್ಸ್‌ ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್‌ ಶುರು ಮಾಡಿತ್ತು. ಮೊದಲ ವಿಕೆಟ್‌ಗೆ 6 ಓವರ್‌ಗಳಲ್ಲಿ ಬರೋಬ್ಬರಿ 93 ರನ್‌ ಚಚ್ಚಿತ್ತು. ಆರಂಭಿಕ ಪ್ರಭ್‌ ಸಿಮ್ರನ್‌ ಸಿಂಗ್‌ (Prabhsimran Singh) 20 ಎಸೆತಗಳಲ್ಲಿ 54 ರನ್‌ (5 ಸಿಕ್ಸರ್‌, 4 ಬೌಂಡರಿ) ರನ್‌ ಚಚ್ಚಿ ಔಟಾದರು. ಈ ಬೆನ್ನಲ್ಲೇ 26 ರನ್‌ ಗಳಿಸಿದ್ದ ರೀಲಿ ರೋಸೋ ಸಹ ಪೆವಿಲಿಯನ್‌ಗೆ ಮರಳಿದರು. ಬಳಿಕ ಜಾನಿ ಬೈರ್‌ಸ್ಟೋವ್‌ ಜೊತೆಗೂಡಿದ ಶಶಾಂಕ್‌ ಸಿಂಗ್‌ (Shashank Singh) ಕೆಕೆಆರ್‌ ಬೌಲರ್‌ಗಳ ವಿರುದ್ಧ ಬೆಂಕಿ-ಬಿರುಗಾಳಿಯಂತೆ ಬ್ಯಾಟಿಂಗ್‌ ನಡೆಸಿದರು. ಪರಿಣಾಮ ಪಂಬಾಜ್‌ 18.4 ಓವರ್‌ಗಳಲ್ಲೇ 262 ರನ್‌ ಚಚ್ಚಿ ವಿಜಯಮಾಲೆ ಹಾಕಿಕೊಂಡಿತು.

    ಪಂಜಾಬ್‌ ಪರ ಜಾನಿ ಬೈರ್‌ಸ್ಟೋವ್‌ 48 ಎಸೆತಗಳಲ್ಲಿ ಅಜೇಯ 108 ರನ್‌ (9 ಸಿಕ್ಸರ್‌, 8 ಬೌಂಡರಿ), ಶಶಾಂಕ್‌ ಸಿಂಗ್‌ 68 ರನ್‌ (8 ಸಿಕ್ಸರ್‌, 2 ಬೌಂಡರಿ) ಸಿಡಿಸಿ ತಂಡದ ಗೆಲುವಿಗೆ ನೆರವಾದರು.

    ರನ್‌ ಏರಿದ್ದು ಹೇಗೆ?
    21 ಎಸೆತ – 50 ರನ್‌
    44 ಎಸೆತ – 100 ರನ್‌
    66 ಎಸೆತ – 150 ರನ್‌
    90 ಎಸೆತ – 200 ರನ್‌
    112 ಎಸೆತ – 262 ರನ್‌

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ಬ್ಯಾಟರ್ಸ್‌ಗಳು ಪಂಬಾಜ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಸುನೀಲ್‌ ನರೇನ್‌ ಮತ್ತು ಪಿಲ್‌ ಸಾಲ್ಟ್‌ (Phil Salt) ಜೋಡಿ ಸಿಕ್ಸರ್‌ ಬೌಂಡರಿಗಳ ಅಬ್ಬರ ಶುರು ಮಾಡಿತು. ಮೊದಲ ವಿಕೆಟ್‌ಗೆ ಈ ಜೋಡಿ 10.2 ಓವರ್‌ಗಳಲ್ಲಿ 138 ರನ್‌ ಸಿಡಿಸಿತ್ತು.

    ಸುನೀಲ್‌ ನರೇನ್‌ 32 ಎಸೆತಗಳಲ್ಲಿ ಸ್ಫೋಟಕ 71 ರನ್‌ (9 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ಪಿಲ್‌ ಸಾಲ್ಟ್‌ 37 ಎಸೆಗಳಲ್ಲಿ 75 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಕಣಕ್ಕಿಳಿದ ವೆಂಕಟೇಶ್‌ ಅಯ್ಯರ್‌ 33 ರನ್‌, ಆಂಡ್ರೆ ರಸ್ಸೆಲ್‌ 24 ರನ್‌, ಶ್ರೇಯಸ್‌ ಅಯ್ಯರ್‌ ಸ್ಪೋಟಕ 28 ರನ್‌, ರಿಂಕು ಸಿಂಗ್‌ 5 ರನ್‌, ರಮಣದೀಪ್‌ ಸಿಂಗ್‌ 6 ರನ್‌ ಗಳ ಕೊಡುಗೆ ನೀಡಿದರು.

    ಕೆಕೆಆರ್‌ ಪರ ಅರ್ಷ್‌ದೀಪ್‌ ಸಿಂಗ್‌ 2 ವಿಕೆಟ್‌, ಸ್ಯಾಮ್‌ ಕರ್ರನ್‌, ಹರ್ಷಲ್‌ ಪಟೇಲ್‌ ಮತ್ತು ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ರನ್‌ ಏರಿದ್ದು ಹೇಗೆ?
    23 ಎಸೆತ – 50 ರನ್‌
    48 ಎಸೆತ – 100 ರನ್‌
    71 ಎಸೆತ – 150 ರನ್‌
    93 ಎಸೆತ – 200 ರನ್‌
    120 ಎಸೆತ – 261 ರನ್‌

  • ಕ್ಯಾಪ್ಟನ್‌ ಕೊಹ್ಲಿ, ಡುಪ್ಲೆಸಿಸ್‌ ಶತಕದಾಟಕ್ಕೆ ಪಂಜಾಬ್‌ ಪಂಚರ್‌ – RCBಗೆ 24 ರನ್‌ಗಳ ಭರ್ಜರಿ ಜಯ

    ಕ್ಯಾಪ್ಟನ್‌ ಕೊಹ್ಲಿ, ಡುಪ್ಲೆಸಿಸ್‌ ಶತಕದಾಟಕ್ಕೆ ಪಂಜಾಬ್‌ ಪಂಚರ್‌ – RCBಗೆ 24 ರನ್‌ಗಳ ಭರ್ಜರಿ ಜಯ

    ಮೊಹಾಲಿ: ನಾಯಕ ವಿರಾಟ್‌ ಕೊಹ್ಲಿ ಹಾಗೂ ಫಾಫ್‌ ಡು ಪ್ಲೆಸಿಸ್‌ ಶತಕದ ಜೊತೆಯಾಟ ಹಾಗೂ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 24 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದು ಮತ್ತೊಂದು ವಿಶೇಷ.

    ಮೊಹಾಲಿಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 18.2 ಓವರ್‌ಗಳಲ್ಲೇ 150 ರನ್‌ಗಳಿಗೆ ಸರ್ವಪತನ ಕಂಡು, ಆರ್‌ಸಿಬಿ ಎದುರು ಮಂಡಿಯೂರಿತು.

    ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕಿಂಗ್ಸ್‌ ಪಂಜಾಬ್‌ ತಂಡದ ಆಟಗಾರರು ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಅಥರ್ವ ತೈದೆ 4 ರನ್‌, ಮ್ಯಾಥಿವ್‌ ಶಾರ್ಟ್‌ 8 ರನ್‌, ಲಿಯಾಮ್‌ ಲಿವಿಂಗ್ಸ್ಟನ್‌ 2 ರನ್‌ ಹಾಗೂ ಹರ್ಪ್ರೀತ್‌ ಸಿಂಗ್‌ 13 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ನಡುವೆ ಮತ್ತೋರ್ವ ಆರಂಭಿಕ ಪ್ರಭ್‌ಸಿಮ್ರಾನ್‌ ಸಿಂಗ್‌ ಹಾಗೂ ಸ್ಯಾಮ್‌ ಕರ್ರನ್‌ ಉತ್ತಮ ಜೊತೆಯಾಟವಾಡಲು ಪ್ರಯತ್ನಿಸಿದರು. ಆದ್ರೆ ಆರ್‌ಸಿಬಿ ಬೌಲರ್‌ಗಳು ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು. ಸ್ಯಾಮ್‌ ಕರ್ರನ್‌ ಕೇವಲ 10 ರನ್‌ ಗಳಿಸಿ ರನೌಟ್‌ಗೆ ತುತ್ತಾದ ಬೆನ್ನಲ್ಲೇ 46 ರನ್‌ (30 ಎಸೆತ, 3 ಬೌಂಡರಿ, 4 ಸಿಕ್ಸರ್‌) ಗಳಿಸಿದ್ದ ಪ್ರಭ್‌ಸಿಮ್ರಾನ್‌ ಸಹ ಕ್ಲೀನ್‌ ಬೌಲ್ಡ್‌ ಆದರು.

    ಮಧ್ಯಮ ಕ್ರಮಾಂಕದಲ್ಲಿ ಬಂದ ಎಂ.ಶಾರೂಖ್‌ ಖಾನ್‌ 7 ರನ್‌ ಗಳಿಸಿದ್ರೆ, ಹರ್ಪ್ರೀತ್‌ ಬ್ರಾರ್‌ 13 ರನ್‌, ನಾಥನ್‌ ಎಲ್ಲಿಸ್‌ ಕೇವಲ 1 ರನ್‌ ಗಳಿಸಿದರು. ಇತ್ತ ತಂಡ ವಿಕೆಟ್‌ ಕಳೆದುಕೊಳ್ಳುತ್ತಿದ್ದರ ಹೊರತಾಗಿಯೂ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಜಿತೇಶ್‌ ಶರ್ಮಾ 27 ಎಸೆತಗಳಲ್ಲಿ 41 ರನ್‌ (3 ಸಿಕ್ಸರ್‌, 2 ಬೌಂಡರಿ) ಸಿಡಿಸಿದ್ದರು. ಕೊನೆಯ 11 ಎಸೆತಗಳಲ್ಲಿ 25 ರನ್‌ ಬೇಕಿದ್ದಾಗಲೇ ಶರ್ಮಾ ಸಿಕ್ಸರ್‌ ಸಿಡಿಸಲು ಮುಂದಾಗಿ ಕ್ಯಾಚ್‌ ನೀಡಿದರು. ಇದರಿಂದ ತಂಡ ನಿರಾಸೆಗೊಂಡಿತು. ಅಂತಿಮವಾಗಿ ಅರ್ಷ್‌ದೀಪ್‌ ಸಿಂಗ್‌ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ 4 ವಿಕೆಟ್‌ ಕಿತ್ತರು. ಇನ್ನುಳಿದಂತೆ ವಾನಿಂದು ಹಸರಂಗ 2 ವಿಕೆಟ್‌ ಪಡೆದರೆ, ವೇಯ್ನ್ ಪಾರ್ನೆಲ್ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಆರ್‌ಸಿಬಿ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಸಿಕ್ಸರ್‌, ಬೌಂಡರಿಗಳ ಆಟದಿಂದ ಉತ್ತಮ ಶುಭಾರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 16.1 ಓವರ್‌ಗಳಲ್ಲಿ 137 ರನ್‌ಗಳ ಜೊತೆಯಾಟವಾಡಿತು. ಕೊಹ್ಲಿ 47 ಎಸೆತಗಳಲ್ಲಿ 59 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ಈ ಬೆನ್ನಲ್ಲೇ ಫಾಫ್‌ ಡುಪ್ಲೆಸಿಸ್‌ 56 ಎಸೆತಗಳಲ್ಲಿ 84 ರನ್ (5 ಬೌಂಡರಿ, 5 ಸಿಕ್ಸರ್ ) ಸಿಡಿಸಿ ಶತಕವಂಚಿತರಾದರು.

    ಕೊನೆಯಲ್ಲಿ ದಿನೇಶ್ ಕಾರ್ತಿಕ್ 7 ರನ್‌ ಗಳಿಸಿ ಔಟಾದರೆ, ಮಹಿಪಾಲ್ ಲೋಮ್ರೋರ್ 6 ರನ್‌, ಶಹಬಾಜ್ ಅಹ್ಮದ್ 5 ರನ್ ಗಳಿಸಿ ಅಜೇಯರಾಗುಳಿದರು. ಇನ್ನೂ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಬೌಲರ್‌ಗಳನ್ನು ಚೆಂಡಾಡಿದ್ದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಮೊದಲ ಎಸೆತದಲ್ಲೇ ಡಕೌಟ್‌ ಆಗಿ ನಿರಾಸೆ ಮೂಡಿಸಿದರು.

    ಪಂಜಾಬ್ ಪರ ಹರ್ಪ್ರೀತ್‌ ಬ್ರಾರ್ 2 ವಿಕೆಟ್‌ ಪಡೆದರೆ, ನಾಥನ್ ಎಲ್ಲಿಸ್, ಅರ್ಷ್‌ದೀಪ್‌ ಸಿಂಗ್‌ ತಲಾ ಒಂದೊಂದು ವಿಕೆಟ್ ಕಬಳಿಸಿದರು.

    ಮತ್ತೆ ಕ್ಯಾಪ್ಟನ್‌ ಆಗಿ ಕಣಕ್ಕಿಳಿದ ಕೊಹ್ಲಿ: ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ನಿರೀಕ್ಷಿಸದ ಅಚ್ಚರಿಯೊಂದು ಕಾದಿತ್ತು. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ವಿರಾಟ್ ಕೊಹ್ಲಿ 2022ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ನಾಯಕತ್ವ ತ್ಯಜಿಸಿದ್ದರು. ಹೀಗಾಗಿ ಫಾಫ್ ಡು ಪ್ಲೆಸಿಸ್ ಕಳೆದ ವರ್ಷದ ಆವೃತ್ತಿಯಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಿರಾಟ್ ಕೊಹ್ಲಿ ಅನುಭವಿ ಆಟಗಾರನಾಗಿ ನಾಯಕನಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತೆ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನ ರಂಜಿಸಿದರು.

  • IPL 2023: ಕೊನೆಯವರೆಗೂ ಹೋರಾಡಿ ಸೋತ ರಾಜಸ್ಥಾನ್‌ – ಪಂಜಾಬ್‌ಗೆ 5 ರನ್‌ಗಳ ರೋಚಕ ಜಯ

    IPL 2023: ಕೊನೆಯವರೆಗೂ ಹೋರಾಡಿ ಸೋತ ರಾಜಸ್ಥಾನ್‌ – ಪಂಜಾಬ್‌ಗೆ 5 ರನ್‌ಗಳ ರೋಚಕ ಜಯ

    ಗುವಾಹಟಿ: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ನಾಥನ್ ಎಲ್ಲಿಸ್ ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದ್ದು, 16ನೇ ಐಪಿಎಲ್‌ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.

    ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. 198 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 192 ರನ್‌ ಹೋರಾಡಿ ಸೂತಿತು. ಇದನ್ನೂ ಓದಿ: ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    15 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿದ್ದ ರಾಜಸ್ಥಾನ್‌ ತಂಡ ಸಂಕಷ್ಟಕ್ಕೆ ಗುರಿಯಾಗಿತ್ತು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ಶಿಮ್ರಾನ್‌ ಹೆಟ್ಮೆಯರ್‌ ಹಾಗೂ ಧ್ರುವ್‌ ಜುರೆಲ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಪಂಜಾಬ್‌ ಬೌಲರ್‌ಗಳನ್ನ ಬೆಂಡೆತ್ತಿದರು. 26 ಎಸೆತಗಳಲ್ಲಿ ಬರೋಬ್ಬರಿ 61 ರನ್‌ ಚಚ್ಚಿದರು.

    18ನೇ ಓವರ್‌ನಲ್ಲಿ 19 ರನ್‌, 19ನೇ ಓವರ್‌ನಲ್ಲಿ 18 ರನ್‌ ಬಂದ ಹಿನ್ನೆಲೆಯಲ್ಲಿ ಕೊನೆಯ ಓವರ್‌ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ್‌ಗೆ 15 ರನ್‌ಗಳ ಅಗತ್ಯವಿತ್ತು. ಈ ವೇಳೆ ಜುರೆಲ್‌ ಮೊದಲ ಎಸೆತದಲ್ಲಿ 1 ರನ್‌ ಕದ್ದರೆ, 2ನೇ ಎಸೆತದಲ್ಲಿ ಹೆಟ್ಮೆಯರ್‌ 2 ರನ್‌ ಕದ್ದರು. 3ನೇ ಎಸೆತದಲ್ಲಿ 2ರನ್‌ ಕದಿಯಲು ಯತ್ನಿಸಿ ಹೆಟ್ಮೆಯರ್‌ ರನೌಟ್‌ಗೆ ತುತ್ತಾದರು. ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ 2 ಎಸೆತಗಳಲ್ಲಿ ಒಂದೊಂದು ರನ್‌ಗಳಷ್ಟೇ ಸೇರ್ಪಡೆಯಾಯಿತು. ಕೊನೆಯ ಎಸೆತವನ್ನು ಧ್ರುವ್‌ ಜುರೆಲ್‌ ಬೌಂಡರಿಗಟ್ಟಿದರು. ಅಂತಿಮವಾಗಿ ರಾಜಸ್ಥಾನ್‌ 5 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.

    ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌, ರವಿಚಂದ್ರನ್‌ ಅಶ್ವಿನ್‌ ಹಾಗೂ ಜೋಸ್‌ ಬಟ್ಲರ್‌ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಜೈಸ್ವಾಲ್‌ 11 ರನ್‌ ಗಳಿಸಿದರೆ, ಬಟ್ಲರ್‌ 11 ಎಸೆತಗಳಲ್ಲಿ 19 ರನ್‌ ಹೊಡೆದರು. ಆದರೆ ಅಶ್ವಿನ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ತಂಡ ಮುನ್ನಡೆದಿತ್ತು. 4ನೇ ವಿಕೆಟ್‌ಗೆ ಜೊತೆಯಾದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ದೇವದತ್‌ ಪಡಿಕಲ್‌ ಉತ್ತಮ ಜೊತೆಯಾಟವಾಡಿದರು. 32 ಎಸೆತಗಳಲ್ಲಿ 34 ರನ್‌ ಕಲೆಹಾಕಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿತ್ತು. ಇದನ್ನೂ ಓದಿ:  ICC ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್

    ಅಷ್ಟರಲ್ಲೇ 42 ರನ್‌ (25 ಎಸೆತ, 5 ಬೌಂಡರಿ, 1 ಸಿಕ್ಸರ್‌) ಗಳಿಸಿ ಆಟವಾಡುತ್ತಿದ್ದ ಸಂಜು ಸ್ಯಾಮ್ಸನ್‌ ಸಿಕ್ಸರ್‌ ಚಚ್ಚಲು ಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ರಿಯಾನ್‌ ಪರಾಗ್‌ 20 ರನ್‌ (12 ಎಸೆತ, 2 ಸಿಕ್ಸರ್‌, 1 ಬೌಂಡರಿ), ದೇವದತ್‌ ಪಡಿಕಲ್‌ 21 ರನ್‌ (26 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್‌ ಒಪ್ಪಿಸಿದರು. ಇದರಿಂದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಗೆಲುವಿನ ಭರವಸೆ ಕೈತಪ್ಪಿತು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ 36 ರನ್‌ (18 ಎಸೆತ, 3 ಸಿಕ್ಸರ್‌, 1 ಬೌಂಡರಿ) ಚಚ್ಚಿದರೆ, ಧ್ರುವ್‌ 15 ಎಸೆತಗಳಲ್ಲೇ 32 ರನ್‌ ಬಾರಿಸಿದರು. ಜೇಸನ್‌ ಹೋಲ್ಡರ್‌ 1 ರನ್‌ ಗಳಿಸಿ ಅಜೇಯರಾಗುಳಿದರು.

    ನಾಥನ್ ಎಲ್ಲಿಸ್ ಬೌಲಿಂಗ್‌ ಮಿಂಚು:
    ಪಂಜಾಬ್‌ ಕಿಂಗ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ನಾಥನ್‌ ಎಲ್ಲಿಸ್‌ ರಾಜಸ್ಥಾನ ತಂಡದ ಪ್ರಮುಖ‌ ಬ್ಯಾಟ್ಸ್‌ಮ್ಯಾನ್‌ಗಳನ್ನ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. 4 ಓವರ್‌ಗಳಲ್ಲಿ 30 ರನ್‌ ನೀಡಿ ಪ್ರಮುಖ ನಾಲ್ಕು ವಿಕೆಟ್‌ ಕಿತ್ತರೆ, ಅರ್ಶ್‌ ದೀಪ್‌ ಸಿಂಗ್‌ 2 ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ಶಿಖರ್ ಧವನ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 9.1 ಓವರ್‌ಗಳಲ್ಲಿ ಭರ್ಜರಿ 90 ರನ್‌ ಕಲೆಹಾಕಿತು. ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ 60 ರನ್ (34 ಎಸೆತ, 7 ಬೌಂಡರಿ, 3 ಸಿಕ್ಸರ್‌) ಬಾರಿಸಿ ಔಟಾದರು. ನಂತರ ಕಣಕ್ಕಿಳಿದ ಭಾನುಕ ರಾಜಪಕ್ಸ 1 ರನ್ ಗಳಿಸಿ ಆಡುತ್ತಿದ್ದಾಗಲೇ ಗಾಯಗೊಂಡು ಹೊರನಡೆದರು. ಬಳಿಕ ಕ್ರೀಸ್‌ಗಿಳಿದ ಜಿತೇಶ್ ಶರ್ಮಾ 16 ಎಸೆತಗಳಲ್ಲಿ 27 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರೆ, ಶಾರೂಖ್ ಖಾನ್ 10 ಎಸೆತಗಳಲ್ಲಿ 11 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

    ಧವನ್‌ಗೆ ಕೈತಪ್ಪಿದ ಶತಕ:
    ಆರಂಭದಿಂದ ಕೊನೆಯವರೆಗೂ ಹೋರಾಡಿದ ನಾಯಕ ಶಿಖರ್ ಧವನ್ 56 ಎಸೆತಗಳಲ್ಲಿ 86 ರನ್ ಬಾರಿಸಿ (9 ಬೌಂಡರಿ, 3 ಸಿಕ್ಸರ್) ತಂಡದ ಮೊತ್ತ 190 ರನ್‌ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಾ ರಾಜಸ್ಥಾನ್‌ ಬೌಲರ್‌ಗಳನ್ನ ಬೆಂಡೆತ್ತಿದರು.

    ರನ್‌ ನೀಡಿದ ಹೊರತಾಗಿಯೂ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಜೇಸನ್ ಹೋಲ್ಡರ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಿತ್ತರೆ, ಆರ್‌. ಅಶ್ವಿನ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು, ಯಜುವೇಂದ್ರ ಚಾಹಲ್ 4 ಓವರ್‌ಗಳಲ್ಲಿ 50 ರನ್ ನೀಡಿ 1 ವಿಕೆಟ್ ಉರುಳಿಸಿದರು.