Tag: PPE Kit

  • ಅಂಬುಲೆನ್ಸ್ ಬರದಕ್ಕೆ ಪಿಪಿಇ ಕಿಟ್ ಧರಿಸಿ ಬೈಕ್ ಏರಿ ಬಂದ ಸೋಂಕಿತ

    ಅಂಬುಲೆನ್ಸ್ ಬರದಕ್ಕೆ ಪಿಪಿಇ ಕಿಟ್ ಧರಿಸಿ ಬೈಕ್ ಏರಿ ಬಂದ ಸೋಂಕಿತ

    – ವಿಡಿಯೋ ವೈರಲ್ ಬಳಿಕ ಎಚ್ಚೆತ್ತ ಅಧಿಕಾರಿಗಳು

    ಭೋಪಾಲ್: ಅಂಬುಲೆನ್ಸ್ ಬರದಕ್ಕೆ ಕೊರೊನಾ ಸೋಂಕಿತ ಪಿಪಿಇ ಕಿಟ್ ಧರಿಸಿ ಬೈಕ್ ಮೇಲೆ ಕೋವಿಡ್ ಕೇರ್ ಸೆಂಟರ್ ಗೆ ಬಂದಿರುವ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಬುಧ್ನಿಯಲ್ಲಿ ನಡೆದಿದೆ.

    ಬುಧ್ನಿಯ ಆನಂದ ನಗರದ ಯವಕನೋರ್ವ ಭಾನುವಾರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಮಂಗಳವಾರ ಯುವಕನಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ. ಮಂಗಳವಾರ ಯುವಕನಿಗೆ ಕರೆ ಮಾಡಿದ ಅಧಿಕಾರಿಗಳು ಆಸ್ಪತ್ರೆಗೆ ಬಂದು ರಿಪೋರ್ಟ್ ಕಲೆಕ್ಟ್ ಮಾಡಿಕೊಳ್ಳಲು ಸೂಚಿಸಿದ್ದಾರೆ.

    ಬುಧ್ನಿಯ ಆರೋಗ್ಯ ಕೇಂದ್ರಕ್ಕೆ ಬಂದ ಸೋಂಕಿತನಿಗೆ ಪಾಸಿಟಿವ್ ರಿಪೋರ್ಟ್ ಜೊತೆ ಪಿಪಿಇ ಕಿಟ್ ಸಹ ನೀಡಿದ್ದಾರೆ. ಅಂಬುಲೆನ್ಸ್ ಬರಲು ತಡವಾದ ಹಿನ್ನೆಲೆಯಲ್ಲಿ ಯುವಕ ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ತಲುಪಿದ್ದಾನೆ.

    ಸೋಂಕಿತ ಬೈಕ್ ಮೇಲೆ ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆ ಎಂದು ಕಿಡಿಕಾರಿದ್ದಾರೆ. ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಜಿಲ್ಲಾ ಪಂಚಾಯ್ತಿ ಸಿಇಓ ಮನೋಜ್ ಕುಮಾರ್, ಆಸ್ಪತ್ರೆಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

  • ಪಿಪಿಇ ಕಿಟ್ ಧರಿಸಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳ ಪ್ರತಿಭಟನೆ

    ಪಿಪಿಇ ಕಿಟ್ ಧರಿಸಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳ ಪ್ರತಿಭಟನೆ

    ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

    ಪಿಂಚಣಿ ಯೋಜನೆ, ಜ್ಯೋತಿ ಸಂಜೀವಿನಿ ವಿಮೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು, ಆಸ್ಪತ್ರೆ ಹೊರ ಆವರಣದಲ್ಲಿ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದ ಖಾಯಂ ಶುಶ್ರೂಷಕರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ತಮ್ಮ ಬೇಡಿಕೆ ಆಗ್ರಹಿಸಿ ಪ್ರದರ್ಶನ ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡಿದರು.

    ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಲವು ದಿನಗಳಿಂದ ಸಿಬ್ಬಂದಿ ಮನವಿ ಮಾಡಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ನೂತನ ಪಿಂಚಣಿ ಯೋಜನೆ (ಎನ್‍ಪಿಎಸ್) ಯಲ್ಲಿ ಶುಶ್ರೂಷಕರ ವೇತನ ಕಡಿತ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ಯೋಜನೆಯನ್ನು ನಿಲ್ಲಿಸಲಾಗಿದ್ದು, ಹಣವನ್ನು ಮರುಪಾವತಿ ಮಾಡಿಲ್ಲ. ಬೇರೆ ಸ್ವಯತ್ತ ಸಂಸ್ಥೆಗಳಲ್ಲಿನ ಸಿಬ್ಬಂದಿಗೆ ಹಣ ಬರುತ್ತಿದೆ ಎಂಬುವುದು ಸಿಬ್ಬಂದಿಯ ಆರೋಪವಾಗಿದೆ. ಉಳಿದಂತೆ ಜ್ಯೋತಿ ಸಂಜೀವಿನಿ ಆರೋಗ್ಯ ವ್ಯವಸ್ಥೆಗೆ ಜಾರಿ ಹಾಗೂ ಪ್ರೋತ್ಸಾಹ ಭತ್ಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಪಿಪಿಇ ಕಿಟ್ ಇಲ್ಲದೆ ಸೋಂಕಿತರ ಅಂತ್ಯ ಸಂಸ್ಕಾರದ ವೇಳೆ ಸಿಬ್ಬಂದಿ ಓಡಾಟ!

    ಪಿಪಿಇ ಕಿಟ್ ಇಲ್ಲದೆ ಸೋಂಕಿತರ ಅಂತ್ಯ ಸಂಸ್ಕಾರದ ವೇಳೆ ಸಿಬ್ಬಂದಿ ಓಡಾಟ!

    – ಬೆಳಗಾವಿ ಜಿಲ್ಲಾಡಳಿತದಿಂದ ಮತ್ತೊಂದು ಎಡವಟ್ಟು

    ಬೆಳಗಾವಿ: ಚಿತೆಯ ಮೇಲೆ ಶವ ಬಿಸಾಡಿ ಟೀಕೆಗೆ ಗುರಿಯಾಗಿದ್ದ ಬೆಳಗಾವಿ ನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಸದ್ಯ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರ ವೇಳೆ ಪಿಪಿಇ ಕಿಟ್ ಇಲ್ಲದೇ ಸಿಬ್ಬಂದಿ ಓಡಾಟ ನಡೆಸಿರುವುದು ಕಂಡು ಬಂದಿದೆ.

    ಬೆಳಗಾವಿಯಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದರ ನಡುವೆಯೇ ಕೋವಿಡ್ 19 ನಿರ್ವಹಣೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಘಟನೆ ನಡೆದಿದ್ದು, ಸೋಂಕಿತರ ಮೃತದೇಹದ ಬಳಿ ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪಿಪಿಇ ಕಿಟ್ ಇಲ್ಲದೇ ಓಡಾಟ ನಡೆಸಿದ್ದರು. ಸಿಬ್ಬಂದಿಗೆ ಅಗತ್ಯ ಪಿಪಿಇ ಕಿಟ್‍ಗಳನ್ನು ಪೂರೈಕೆ ಮಾಡದೆ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಆ ಮೂಲಕ ಜಿಲ್ಲಾಡಳಿತ ಸಿಬ್ಬಂದಿಯನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

    ನಿನ್ನೆ ಸೋಂಕಿತರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮೃತದೇಹ ಬಳಿ ಇಬ್ಬರು ಸಿಬ್ಬಂದಿ ಪಿಪಿಇ ಕಿಟ್ ಧರಿಸಿದೆ ಬಿಂದಾಸ್ ಓಡಾಟ ನಡೆಸಿದ್ದರು. ಕಿಟ್ ಇಲ್ಲದೇ ಇಬ್ಬರು ಸಿಬ್ಬಂದಿ ಓಡಾಟದ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಸದ್ಯ ಸಾರ್ವಜನಿಕರು ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂತ್ಯ ಸಂಸ್ಕಾರ ನಡೆಸುವ ಸಿಬ್ಬಂದಿಗೆ ಪಿಪಿಇ ಕಿಟ್ ಯಾರು ನೀಡಬೇಕೆಂಬ ಗೊಂದಲ ಅಧಿಕಾರಿಗಳನ್ನು ಕಾಡುತ್ತಿದೆ. ಆಸ್ಪತ್ರೆಯ ಸಿಬ್ಬಂದಿಯೇ ಪಿಪಿಇ ಕಿಟ್ ನೀಡಬೇಕೆ? ಅಥವಾ ಪಾಲಿಕೆ ಅಧಿಕಾರಿಗಳು ಪಿಪಿಇ ಕಿಟ್ ಪೂರೈಕೆ ಮಾಡಬೇಕೆ? ಎಂಬ ಗೊಂದಲ ಅಧಿಕಾರಿಗಳಲ್ಲಿದೆ. ಪರಿಣಾಮ ಸ್ಮಶಾನದ ಕಾವಲುಗಾರ, ಆಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಇಲ್ಲದೇ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ನಿರ್ವಹಿಸುತ್ತಿದ್ದರು ಸರಿಯಾದ ಸಮಯಕ್ಕೆ ಮಹಾನಗರ ಪಾಲಿಕೆ ಸಂಬಳ ನೀಡುತ್ತಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

    ಇತ್ತ ನಿನ್ನೆ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಬೇಕಾಬಿಟ್ಟಿ ಮಾಡಲಾಗಿತ್ತು. ಮಹಾನಗರ ಪಾಲಿಕೆಯ ಸದಾಶಿವ ನಗರ ಸ್ಮಶಾನದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಒಂದೇ ಆಂಬುಲೆನ್ಸ್ ನಲ್ಲಿ ಎರಡು ಮೃತದೇಹವನ್ನು ತಂದು ಚಿತೆಯ ಶವಗಳನ್ನು ಸಿಬ್ಬಂದಿ ಅಮಾನವೀಯವಾಗಿ ಎಸೆದು ಅಂತ್ಯಕ್ರಿಯೆ ಮಾಡಿದ್ದರು.

  • ಪೊಲೀಸರಿಗೆ ಗಿಫ್ಟ್ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಜ್ವಲ್ ದೇವರಾಜ್

    ಪೊಲೀಸರಿಗೆ ಗಿಫ್ಟ್ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಜ್ವಲ್ ದೇವರಾಜ್

    ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ 33ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಹಿನ್ನೆಲೆ ಸಂಭ್ರಮದಿಂದ ಆಚರಿಸಿಕೊಳ್ಳದಿದ್ದರೂ ಅರ್ಥಪೂರ್ಣವಾಗಿ ಬರ್ತ್‍ಡೇ ಮಾಡಿಕೊಳ್ಳುತ್ತಿದ್ದಾರೆ.

    ಕೊರೊನಾ ಮಹಾಮಾರಿ ಇಂದಾಗಿ ಪೊಲೀಸರು ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದು, ಹೆಚ್ಚು ಜನರಿಗೆ ಸೋಂಕು ತಗುಲಿದ್ದರಿಂದ ಭಯದ ವಾತಾವರಣದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ನಟ ನಟಿಯರು ಬಡವರಿಗೆ, ನಿರ್ಗತಿಕರಿಗೆ ಆಹಾರ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡಿದರೆ, ಪ್ರಜ್ವಲ್ ದೇವರಾಜ್ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರಿಗೆ ಪಿಪಿಇ ಕಿಟ್ ವಿತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುವುದು ಬೇಡ ಎಂದು ವಾರದ ಹಿಂದೆ ತಮ್ಮ ಅಭಿಮಾನಿಗಳ ಬಳಿ ಪ್ರಜ್ವಲ್ ದೇವರಾಜ್ ಮನವಿ ಮಾಡಿದ್ದರು. ಕಳೆದ ಬಾರಿಯೂ ತಮ್ಮ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಬದಲು, ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಅದರಂತೆಯೇ ಅವರೂ ಒಂದು ಶಾಲೆಯನ್ನು ದತ್ತು ಪಡೆದಿದ್ದರು. ಆದರೆ ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಸಹಾಯ ಮಾಡಿದ್ದಾರೆ.

     

    View this post on Instagram

     

    A post shared by Prajwal Devaraj (@prajwaldevaraj) on

    ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಗುಂಪಲ್ಲಿ ಸೇರುವುದು ಒಳ್ಳೆಯದಲ್ಲ, ಹೀಗಾಗಿ ಈ ಬಾರಿಯೂ ಹುಟ್ಟುಹಬ್ಬ ಆಚರಿಸುವುದು ಬೇಡ. ನನ್ನ ಹುಟ್ಟುಹಬ್ಬಕ್ಕೆ ತರುವ ಕೇಕ್, ಹಾರದ ಬದಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಬಡವರಿಗೆ, ಅಸಹಾಯಕರಿಗೆ ಆಹಾರದ ಕಿಟ್‍ಗಳನ್ನು ನೀಡಿ ಎಂದು ಮನವಿ ಮಾಡಿದ್ದರು. ಅದರಂತೆ ಪ್ರಜ್ವಲ್ ದೇವರಾಜ್ ಸಹ ಮೆಚ್ಚುಗೆ ಕೆಲಸ ಮಾಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪ್ರಜ್ವಲ್ ದೇವರಾಜ್ ಹಾಗೂ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರ ತಂಡದಿಂದ ಪೊಲೀಸರಿಗೆ ಪಿಪಿಇ ಕಿಟ್‍ಗಳನ್ನು ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರಿಗೆ ಸುಮಾರು 200 ಪಿಪಿಇ ಕಿಟ್‍ಗಳನ್ನು ವಿತರಿಸಿದ್ದಾರೆ. ಪ್ರಜ್ವಲ್ ಅವರ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷ ಕೆಲಸ ಮಾಡಬೇಕು ಎಂದು ಚಿತ್ರ ತಂಡ ಅಂದುಕೊಂಡಿತ್ತಂತೆ. ಹೀಗಾಗಿ ಪಿಪಿಇ ಕಿಟ್ ವಿತರಿಸಲಾಗಿದೆ.

    ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದಲ್ಲಿಯೂ ನಾಯಕ ನಟ ಪೊಲೀಸ್ ಆಗಿರುತ್ತಾನೆ. ಹೀಗಾಗಿ ಪೊಲೀಸರಿಗೆ ಸಹಾಯ ಮಾಡುವ ಐಡಿಯಾ ಬಂತು. ಈ ಮೂಲಕ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವನ್ನು ಸ್ವರಣೀಯವಾಗಿಸಿದ್ದೇವೆ ಎಂದು ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಮಾಹಿತಿ ನೀಡಿದ್ದಾರೆ.

  • ಬೆಂಗ್ಳೂರಿನ ಬೀದಿ ಬೀದಿಯಲ್ಲಿ ಸಿಗ್ತಿದೆ ಬಳಸಿದ್ದ ಪಿಪಿಇ ಕಿಟ್‍ಗಳು!

    ಬೆಂಗ್ಳೂರಿನ ಬೀದಿ ಬೀದಿಯಲ್ಲಿ ಸಿಗ್ತಿದೆ ಬಳಸಿದ್ದ ಪಿಪಿಇ ಕಿಟ್‍ಗಳು!

    – ಬೌರಿಂಗ್ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ. ಮತ್ತೊಂದೆಡೆ ಸಾರ್ಜಜನಿಕರು ಓಡಾಡುವ, ಮನೆಗಳಿರುವ ರಸ್ತೆಯ ಪಕ್ಕದಲ್ಲೇ ಕೋವಿಡ್‍ನಿಂದ ಮೃತಪಟ್ಟರ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಈ ಮಧ್ಯೆ ಕೋವಿಡ್ ಆಸ್ಪತ್ರೆಯಲ್ಲಿ ಬಳಿಸಿದ್ದ ಪಿಪಿಇ ಕಿಟ್‍ಗಳು ಬೆಂಗಳೂರಿನ ಬೀದಿ ಬೀದಿಯಲ್ಲಿ ಬಿದ್ದಿದೆ.

    ಕೋವಿಡ್ ವಾರ್ಡಿನಲ್ಲಿ ವೈದ್ಯರು ಧರಿಸಿದ್ದ ಮಾಸ್ಕ್‌ಗಳು ಅಥವಾ ಜನ ಧರಿಸಿದ ಮಾಸ್ಕ್‌ಗಳನ್ನು ರಸ್ತೆಯಲ್ಲಿ ಎಸೆಯಲಾಗುತ್ತಿದೆ. ಕಸದ ಗಾಡಿಯಲ್ಲಿ ಪಿಪಿಇ ಕಿಟ್ ತೆಗೆದುಕೊಂಡು ಹೋಗುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದಾರೆ. ಇದರಿಂದ ಕೋರಮಂಗಲದ ರಸ್ತೆ ರಸ್ತೆಯಲ್ಲಿ ಬಳಸಿದ್ದ ಮಾಸ್ಕ್‌ಗಳ ರಾಶಿಯೇ ಬಿದ್ದಿದೆ.

    ಮಾಸ್ಕ್‌ಗಳ ವಿಲೇವಾರಿಗೆ ಪ್ರತ್ಯೇಕ ಗೈಡ್ ಲೈನ್ ಇದ್ದರೂ ರಸ್ತೆ ರಸ್ತೆಯಲ್ಲಿ ಮಾಸ್ಕ್‌ಗಳ ರಾಶಿ ಇದೆ. ಸಾರ್ವಜನಿಕರು ಆ ಪಿಪಿಇ ಕಿಟ್ ತುಳಿದುಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಕಸದ ವಾಹನದ ಎಡವಟ್ಟಿಗೆ ಜನ ಭಯಭೀತರಾಗಿದ್ದಾರೆ.

    ಬೌರಿಂಗ್ ಆಸ್ಪತ್ರೆಯಲ್ಲಿ ಅವಾಂತರ
    ಇತ್ತ ಬೌರಿಂಗ್ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರವಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವಿಲೇವಾರಿ ಮಾಡದೆ ಹಾಗೆಯೇ ರಾಶಿ ರಾಶಿ ಪಿಪಿಇ ಕಿಟ್ ಬಿದ್ದಿವೆ. ಕೋವಿಡ್ ರೋಗಿಗಳು ಇರುವ ವಾರ್ಡಿನಲ್ಲಿ ವೈದ್ಯರು ಈ ಕಿಟ್‍ಗಳನ್ನು ಬಳಸಲಾಗಿದೆ. ಆದರೆ ಇವುಗಳನ್ನು ವಿಲೇಮಾರಿ ಮಾಡದೆ ಆಸ್ಪತ್ರೆಯಲ್ಲೇ ರಾಶಿ ರಾಶಿ ಪಿಪಿಇ ಕಿಟ್ ಬಿದ್ದಿದೆ.

    ಈಗಾಗಲೇ ಬೌರಿಂಗ್ ಆಸ್ಪತ್ರೆಗಳಲ್ಲಿ ಕೊರೊನಾ ವಾರಿಯರ್ಸ್‌ಗೆ ವಕ್ಕರಿಸುತ್ತಿದೆ. ಇಂತಹ ನಿರ್ಲಕ್ಷದಿಂದ ಮತ್ತಷ್ಟು ಸೋಂಕು ಹರಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಕೂಡಲೇ ಎಚ್ಚೆತ್ತು ಪಿಪಿಇ ಕಿಟ್ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಗಂಡಾಂತರ ತಪ್ಪಿದ್ದಲ್ಲ ಎನ್ನಲಾಗಿದೆ. ಆಸ್ಪತ್ರೆಯೇ ಇತರ ಎಡವಟ್ಟು ಮಾಡಿದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಬೆಂಗ್ಳೂರಿಗರೇ ಹುಷಾರ್- ನಿಮ್ಮ ಮನೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡ್ಬೋದು!

    ಬೆಂಗ್ಳೂರಿಗರೇ ಹುಷಾರ್- ನಿಮ್ಮ ಮನೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡ್ಬೋದು!

    ಬೆಂಗಳೂರು: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರವನ್ನು ರಸ್ತೆಯ ಪಕ್ಕದಲ್ಲಿ, ಮನೆ ಪಕ್ಕ ಇರುವ ಖಾಲಿ ಜಾಗದಲ್ಲೇ ಮಾಡುತ್ತಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಹೀಗಾಗಿ ಮೃತ ಸೋಂಕಿತರನ್ನ ನಿಮ್ಮ ಮನೆ ಪಕ್ಕದ ಖಾಲಿ ಜಾಗದಲ್ಲಿಯೇ ಅಂತ್ಯ ಸಂಸ್ಕಾರ ಮಾಡಬಹುದು ಹುಷಾರಾಗಿರಿ.

    ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತರ ಅಂತ್ಯ ಸಂಸ್ಕಾರ ರಾಮಸ್ವಾಮಿಪಾಳ್ಯ ವಾರ್ಡಿನಲ್ಲಿ ನಡೆಯುತ್ತಿದೆ. ಜೆಸಿ ರಸ್ತೆ – ನಂದಿದುರ್ಗ ರಸ್ತೆ ಮಧ್ಯೆ ಬರುವ ಸ್ಮಾಶನವೊಂದರಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ನಂದಿದುರ್ಗ ಪೆರಲ್ ಗ್ರೌಂಡ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಆದರೆ ಮೃತ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕಳೆದ ಒಂದು ವಾರದಿಂದ ಇದುವರೆಗೆ 16 ಮೃತ ಸೊಂಕಿತರ ಅಂತ್ಯ ಸಂಸ್ಕಾರದ ಈ ಸ್ಮಶಾನದಲ್ಲಿ ಆಗಿದೆ. ಅಷ್ಟೇ ಅಲ್ಲದೇ ಅಂತ್ಯ ಸಂಸ್ಕಾರದಲ್ಲೂ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಕೇವಲ ಮೂರು ಅಡಿ ಗುಂಡಿ ತೋಡಿ ಅಂತ್ಯ ಸಂಸ್ಕಾರ ಮಾಡಲಾಗುತ್ತೆ. ಸ್ಮಶಾನದ 50 ಮೀಟರ್ ಅಂತರದಲ್ಲಿಯೇ ಮನೆಗಳಿವೆ. ಪಿಪಿಇ ಕಿಟ್‍ಗಳನ್ನೂ ಗುಂಡಿಗಳ ಬಳಿಯೇ ಬಿಸಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಅಲ್ಲದೇ ಗುಂಡಿ ತೋಡುವ ವ್ಯಕ್ತಿಗಳು ಕೂಡ ಮಾಸ್ಕ್ ಹಾಕಲ್ಲ. ಸ್ಮಶಾನದ ಪಕ್ಕದ ರಸ್ತೆಗೆ ಬಂದು ಟೀ ಕುಡಿಯುತ್ತಾರೆ, ಜನರೊಂದಿಗೆ ಓಡಾಡುತ್ತಾರೆ. ಸ್ಮಶಾನದ ಹತ್ತಿರ ಬೀಸಾಡಿದ ಪಿಪಿಇ ಕಿಟ್‍ಗಳನ್ನ ನಾಯಿಗಳು ರಸ್ತೆಗೆ ಎಳೆದು ತರುತ್ತವೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಬಿಬಿಎಂಪಿಗೆ ದೂರು ಕೊಡಿ ಅಂತ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಇದರಿಂದ ಸ್ಥಳೀಯರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.

    ಈ ಬಗ್ಗೆ ಕಾರ್ಪೋರೇಟರ್ ನೇತ್ರಾವತಿ ಕೃಷ್ಣೆಗೌಡ ಪತಿ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತನಾಡಿದ್ದಾರೆ.
    ವರದಿಗಾರ: ನಿಮ್ಮ ವಾರ್ಡಿನಲ್ಲಿ ಒಂದು ಸ್ಮಶಾನದಲ್ಲಿ ಬೌರಿಂಗ್ ಮತ್ತು ವಿಕ್ಟೋರಿಯಾದಿಂದ ಮೃತ ಸೋಂಕಿತರ ಹುಳುತ್ತಿದ್ದಾರೆ ಅಂತ ಸುದ್ದಿ ಇದೆ ಹೌದ ಸರ್?
    ಕಾರ್ಪೋರೇಟರ್ ಪತಿ: ತಂದು ಹುಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಸ್ಟೇಷನ್‍ಗೂ ಹೇಳಿದ್ದೀವಿ. ಯಾರು ನ್ಯಾಚುರಲ್ ಡೆತ್ ಆಗಿದಾರೋ ಅವರನ್ನು ಮಾತ್ರ ಹುಳಬೇಕು. ಹೊರಗಡೆಯಿಂದ ತಂದು ಹುಳಬಾರದು ಅಂತ ಇನ್ಸ್‌ಪೆಕ್ಟರ್‌ಗೂಹೇಳಿದ್ದೀವಿ, ಬಿಬಿಎಂಪಿ ಕಮಿಷನರ್ ಜೊತೆಯೂ ಮಾತನಾಡಿದ್ದೀವಿ.
    ವರದಿಗಾರ: ಯಾವ ಸ್ಮಶಾನ ಸರ್, ಜೆಸಿ ರೋಡ್- ನಂದಿದುರ್ಗ ರೋಡ್ ಮದ್ಯೆನಾ?


    ಕಾರ್ಪೋರೇಟರ್ ಪತಿ: ನಂದಿದುರ್ಗ ರೋಡ್ ಬರುತ್ತೆ
    ವರದಿಗಾರ: ಸ್ಮಶಾನ ಹೆಸರು ಏನು ಸರ್.
    ಕಾರ್ಪೋರೇಟರ್ ಗಂಡ: ನಂದಿದುರ್ಗ ಪರೇಲ್ ಗ್ರೌಂಡ್
    ವರದಿಗಾರ: ನೀವೆನಾದರೂ ಆಪೋಸ್ ಮಾಡಿದ್ರಾ? ಸ್ಥಳೀಯರು ಆಪೋಸ್ ಮಾಡುತ್ತಿದ್ದಾರೆ
    ಕಾರ್ಪೋರೇಟರ್ ಗಂಡ: ನಾವು ಎಲ್ಲರಿಗೂ ಹೇಳಿದ್ದೀವಿ, ಪೊಲೀಸರು ಕರೆದು ಈ ತರ ಮಾಡಬಾರದು ಅಂತ ಹೇಳಿದ್ದಾರೆ. ಈ ಬಗ್ಗೆ ಕಮಿಷನರ್ ಜೊತೆ ಮಾತ ನಾಡಿದ್ದೇನೆ. ನಾವು ಚೆಕ್ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಸ್ಥಳೀಯ ಶಾಸಕ ರಿಜ್ವಾನ್‍ ಬಳಿ ಮಾತನಾಡೋಣ ಅಂತ ಹೋಗಿದ್ದೆ. ಆದರೆ ಅವರು ಸಿಕ್ಕಿಲ್ಲ.

  • ಕೂಡಿಟ್ಟ 15 ಸಾವಿರದಿಂದ ಪಿಪಿಇ ಕಿಟ್, ಸ್ಯಾನಿಟೈಸರ್ ವಿತರಿಸಿದ 17ರ ಹುಡುಗ!

    ಕೂಡಿಟ್ಟ 15 ಸಾವಿರದಿಂದ ಪಿಪಿಇ ಕಿಟ್, ಸ್ಯಾನಿಟೈಸರ್ ವಿತರಿಸಿದ 17ರ ಹುಡುಗ!

    – ಮಗನ ಮಾನವೀಯ ಗುಣಕ್ಕೆ ಹೆಮ್ಮೆ ವ್ಯಕ್ತಪಡಿಸಿದ ತಂದೆ

    ಮುಂಬೈ: ಕೊರೊನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದ್ದು, ಅನೇಕ ಮಂದಿ ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡಿ ಮಾನವೀಯತೆ ಮೆರೆದರೆ, ಇಲ್ಲೊಬ್ಬ 17 ವರ್ಷದ ಹುಡುಗ ತಾನು ಕೂಡಿಟ್ಟ ಹಣದಿಂದ ಧಾನ್ಯ, ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್ ಗಳನ್ನು ಖರೀದಿ ಮಾಡಿ ಅದನ್ನು ಅಗತ್ಯ ಇರುವವರಿಗೆ ನೀಡಿದ್ದಾನೆ.

    ಹೌದು. ಹುಸೈನ್ ಝಾಕೀರ್ ಸುಮಾರು 15 ಸಾವಿರ ಹಣ ಕೂಡಿಟ್ಟಿದ್ದ. ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಜನರ ಬದುಕನ್ನು ದಿಕ್ಕಾಪಾಲಾಗಿಸಿದೆ. ಅಲ್ಲದೆ ಮೆಡಿಕಲ್ ಸಿಬ್ಬಂದಿ ಹಾಗೂ ಪೊಲೀಸರು ಕೂಡ ಕೊರೊನಾಗೆ ಬಲಿಯಾಗುತ್ತಿರುವ ಸುದ್ದಿಗಳನ್ನು ಕೇಳಿದ ಝಾಕೀರ್, ತಾನು ಕೂಡಿಟ್ಟಿದ್ದ ಹಣದಿಂದ ಕೊರೊನಾ ಹರಡುವುನ್ನು ತಡೆಗಟ್ಟಲು ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿ ಅವುಗಳನ್ನು ವಿತರಿಸಲು ನಿರ್ಧಾರ ಮಾಡಿದ್ದಾನೆ.

    ಮೆಡಿಕಲ್ ಸಿಬ್ಬಂದಿ ಹಾಗೂ ಪೊಲೀಸರು ಕೊರೊನಾಗೆ ಬಲಿಯಾಗುತ್ತಿರುವ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡ ಬಾಲಕ ತಾನು ಉಳಿಸಿಕೊಂಡಿದ್ದ ಹಣದಿಂದ ಪಿಪಿಇ ಕಿಟ್ ಹಾಗೂ ಇತರ ವಸ್ತುಗಳನ್ನು ಖರೀದಿ ಮಾಡಿದ್ದಾನೆ. ಅಲ್ಲದೆ ಅವುಗಳನ್ನು ಅಗತ್ಯ ಇರುವವರಿಗೆ ವಿತರಣೆ ಕೂಡ ಮಾಡಿದ್ದಾನೆ. ಹುಡುಗನ ಈ ಸಾರ್ಥಕ ಸೇವೆಗೆ ಗೆಳೆಯರು ಕೂಡ ಸಾಥ್ ನೀಡಿದ್ದಾರೆ.

    ಹುಡುಗನ ಈ ಮಹಾನ್ ಕಾರ್ಯ ಬೆಳಕಿಗೆ ಬರುತ್ತಿದ್ದಂತೆಯೇ ರೋಟರಿ ಆ್ಯಕ್ಟ್ ಕ್ಲಬ್ ನವರು ಆತನನ್ನು ಗೌರವಿಸಿದ್ದಲ್ಲದೆ, ತಮ್ಮ ಕ್ಲಬ್ ನ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಈ ಮೂಲಕ ಝಾಕೀರ್, ಸಮುದಾಯ ಆಧಾರಿತ ಅತ್ಯಂತ ಕಿರಿಯ ಅಧ್ಯಕ್ಷನಾಗಿದ್ದಾನೆ ಎಂದು ರೋಟರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಒಂದು ದಿನ ನನ್ನ ಮಗ ಬಹಳ ಆತಂಕಕ್ಕೀಡಾಗಿ ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಹಾಗೆಯೇ ನಾನು ಆತನಿಗೆ ಸಹಾಯ ಮಾಡುತ್ತಿದ್ದೇನೆ. ಹೀಗಾಗಿ ಇಂದು ನನ್ನ ಮಗನ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತಿದೆ. ಯಾಕಂದ್ರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನನ್ನ ಮಗನಲ್ಲಿ ಸಹಾಯ ಮಾಡುವ ಮನಸ್ಸು ಕಂಡು ನನಗೆ ತುಂಬಾನೆ ಖುಷಿಯಾಗಿದೆ ಎಂದು ಝಾಕೀರ್ ತಂದೆ ಹೇಳಿದ್ದಾರೆ.

    ಕೋವಿಡ್ 19 ಬಂದಾಗಿನಿಂದ ನಾವು ಬಹಳ ಭಯದಿಂದಲೇ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ನಮಗೆ ಇಲ್ಲಿ ಕೆಲಸ ಮಾಡಲು ಭಯವಾಗಿ ಮತ್ತೆ ತಮ್ಮೂರಿಗೆ ವಾಪಸ್ ಹೋಗಲು ನಿರ್ಧರಿಸಿದೆವು. ಆದರೆ ನಮ್ಮೆಲ್ಲ ಕಷ್ಟಗಳನ್ನು ಅರ್ಥ ಮಾಡಿಕೊಂಡ ಝಾಕೀರ್, ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ. ಆತ ನಮಗೆ ಸಹಾಯ ಮಾಡಿರುವುದು ನಮಗೆ ತುಂಬಾನೇ ಪ್ರಯೋಜನವಾಗಿದೆ. ಅದರಲ್ಲೂ ಇಷ್ಟು ಸಣ್ಣ ವಯಸ್ಸಿನಲ್ಲಿ ಮಾನವೀಯತೆ ಗುಣ ಕಂಡು ನಿಜಕ್ಕೂ ಆತನಿಗೆ ಚಿರಋಣಿಯಾಗಿದ್ದೇವೆ ಎಂದು ವಾಚ್‍ಮ್ಯಾನ್ ಒಬ್ಬರು ತಿಳಿಸಿದ್ದಾರೆ.

  • ಪಿಪಿಇ ಕಿಟ್ ಧರಿಸಿ ಮಕ್ಕಳ ರಕ್ಷಣೆಗೆ ನಿಂತ ಉತ್ತರ ಕನ್ನಡ ಪೊಲೀಸರು!

    ಪಿಪಿಇ ಕಿಟ್ ಧರಿಸಿ ಮಕ್ಕಳ ರಕ್ಷಣೆಗೆ ನಿಂತ ಉತ್ತರ ಕನ್ನಡ ಪೊಲೀಸರು!

    ಕಾರವಾರ: ಯಾವುದೇ ಗಲಾಟೆ ಇರಲಿ, ರಕ್ಷಣೆ ಇರಲಿ ಎಲ್ಲದಕ್ಕೂ ಪೊಲೀಸರು ಬೇಕೇ ಬೇಕು. ಸಮಾಜದಲ್ಲಿ ನೆಮ್ಮದಿ ನೆಲೆಸಲು ಪೊಲೀಸರು ತಮ್ಮ ಖಾಸಗಿ ಜೀವನವನ್ನು ಬದಿಗೊತ್ತಿ ಜನರ ಶಾಂತಿಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾರೆ. ಕೊರೊನಾ ಬಂದ ನಂತರ ಪೊಲೀಸರ ಕಾರ್ಯ ವೈಖರಿ ಎಲ್ಲರೂ ಮೆಚ್ಚುವಂತದ್ದು. ಕೆಲಸದ ಸಂದರ್ಭದಲ್ಲಿ ಪೊಲೀಸರು ಕೂಡ ಕೊರೊನಾ ಮಾರಿಗೆ ತುತ್ತಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಡಿ.ಆರ್ ಪೊಲೀಸ್ ಸಿಬ್ಬಂದಿಗೆ ಕೊರೊನಾ ವಕ್ಕರಿಸಿತ್ತು. ಕಂಟೈನ್ಮೆಂಟ್ ಝೋನ್, ಕೋವಿಡ್ ವಾರ್ಡ್ ಎನ್ನದೇ ಎಲ್ಲಾ ಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಪೊಲೀಸರಿಗೆ ಈಗ ಎಸ್‍ಎಸ್‍ಎಲ್‍ಸಿ ಪರಿಕ್ಷಾ ಕೇಂದ್ರದ ಬಂದೋಬಸ್ತ್ ಜವಬ್ದಾರಿ ಕೂಡ ಹೆಗಲಿಗೇರಿದೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 156ಕ್ಕೆ ಜಿಗಿತ ಕಂಡಿದೆ. ಹೀಗಾಗಿ ಮಕ್ಕಳ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಯ ಹಿತದೃಷ್ಟಿಯಿಂದ ಕಾರವಾರದ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ರವರು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಸೂಕ್ಷ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗಾಗಿ ಎಸ್.ಜಿ.ಆರ್ ಫಂಡ್ ನಲ್ಲಿ 260 ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಿ ಸಿಬ್ಬಂದಿಗೆ ನೀಡಿದ್ದಾರೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲೆಯ 72 ಕೇಂದ್ರಗಳಿಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಿದ್ದು ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಕ್ಕಳಿಗೆ ಕೊರೊನಾ ಹರಡದಂತೆ ಪೊಲೀಸ್ ಇಲಾಖೆ ಜಾಗೃತಿ ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಜಿಲ್ಲೆಯಲ್ಲಿ ಎರಡು ಶೈಕ್ಷಣಿಕ ಜಿಲ್ಲೆಯಿದ್ದು 20,150 ವಿದ್ಯಾರ್ಥಿಗಳು ಇಂದಿನಿಂದ ಪರೀಕ್ಷೆ ಬರೆಯುತ್ತಿದ್ದಾರೆ. 72 ಪರೀಕ್ಷಾ ಕೇಂದ್ರದಲ್ಲಿ 100 ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷಾ ಕೆಂದ್ರದಲ್ಲಿ ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸುತ್ತಿದ್ದು ಪರೀಕ್ಷೆ ಪ್ರಾರಂಭದಲ್ಲಿ ಹಾಗೂ ಮುಗಿದ ನಂತರ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ತಮ್ಮಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದೆಂಬ ಕಾಳಜಿ ಪೊಲೀಸ್ ಇಲಾಖೆಯದ್ದಾಗಿದ್ದು ಎಲ್ಲರಿಗೂ ಮಾದರಿಯಾಗಿದೆ.

  • ‘ಕೊರೊನಾ ಸೋಂಕಿತನ ಮೃತದೇಹದಿಂದ ವೈರಸ್ ಹರಡೋದಿಲ್ಲ’: ಯುಟಿ ಖಾದರ್

    ‘ಕೊರೊನಾ ಸೋಂಕಿತನ ಮೃತದೇಹದಿಂದ ವೈರಸ್ ಹರಡೋದಿಲ್ಲ’: ಯುಟಿ ಖಾದರ್

    -ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡ್ಬೇಕೆಂಬ ಭಾವನೆ ಬಂದಿದ್ದಕ್ಕೆ ಪಾಲ್ಗೊಂಡೆ

    ಮಂಗಳೂರು: ನಿನ್ನೆ ಪಿಪಿಇ ಕಿಟ್ ಇಲ್ಲದೇ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಶಾಸಕ ಯುಟಿ ಖಾದರ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡ್ಬೇಕೆಂಬ ಭಾವನೆ ಬಂದಿದ್ದಕ್ಕೆ ಪಾಲ್ಗೊಂಡೆ ಎಂದು ಹೇಳಿದ್ದಾರೆ.

    ಅಂತ್ಯ ಸಂಸ್ಕಾರದಲ್ಲಿ ಪಿಪಿಇ ಕಿಟ್ ಧರಿಸದೆ ಭಾಗಿಯಾದ ಕುರಿತು ಸ್ಪಷ್ಟನೆ ನೀಡಿದ ಅವರು, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಬಂತು. ಆದ್ದರಿಂದ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದೇನೆ. ಸೋಂಕಿತನ ಮೃತದೇಹದಿಂದ ವೈರಸ್ ಹರಡುವುದಿಲ್ಲ. ಮೃತದೇಹದಿಂದ ವೈರಸ್ ಹರಡುತ್ತೆ ಎಂದು ವೈದ್ಯಕೀಯ ಅಧ್ಯಯನ ಹೇಳಿಲ್ಲ. ಆದ್ದರಿಂದ ಪಿಪಿಐ ಕಿಟ್‍ನ ಅಗತ್ಯ ಇಲ್ಲ ಎಂದು ಹೇಳಿದರು.

    ಮೃತ ತಂದೆಯ ದೇಹವನ್ನು ಅಂತಿಮವಾಗಿ ನೋಡಲು ಸಹ ಮಕ್ಕಳು ಬರಲ್ಲ. ಜನ ಅಷ್ಟು ಭಯಭೀತರಾಗಿದ್ದಾರೆ. ಧಾರ್ಮಿಕ ವಿಧಿವಿಧಾನ ಮಾಡೋಕೆ ಜನರಿಗೆ ಹೆದರಿಕೆ ಇದೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೇ ಇರುವುದು ತಪ್ಪು. ಆದರೆ ನಾನು ಕೊರೊನಾ ಕುರಿತು ಜನರಿಗೆ ಮನವರಿಕೆ ಮಾಡಲು ಪಿಪಿಇ ಕಿಟ್ ಧರಿಸಿಲ್ಲ. ಜನರು ಧಾರ್ಮಿಕ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ಮಾಡಬಹುದು ಎಂದರು.

    ಇದೇ ವೇಳೆ ನಾಳೆ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಮುಂಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಶಾಲೆಯ 50 ಮೀಟರ್ ಸುತ್ತಾ ಸಂಪೂರ್ಣ ಬಂದ್ ಮಾಡಬೇಕು. ವಿದ್ಯಾರ್ಥಿಗಳನ್ನು ಕರೆತರುವ ಪೋಷಕರ ಬಗ್ಗೆಯೂ ಗಮನಹರಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಶಾಲೆಯ ಸ್ಯಾನಿಟೈಸೇಷನ್ ಮಾಡುವ ಹೊಣೆ ಕೊಟ್ಟಿದ್ದಾರೆ. ಆದರೆ ಆರೋಗ್ಯ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಸೆಲೂನ್‍ನಲ್ಲಿ ಬಳಸುವ ಸ್ಟ್ರೇ ಬಳಸಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದರು.

    ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸರ್ಕಾರ ಎನ್‍ಜಿಒ,ಸಂಘ ಸಂಸ್ಥೆಗಳ ಸಭೆ ಕರೆಯಬೇಕು. ಮುಂದಕ್ಕೆ ಪರಿಸ್ಥಿತಿ ಮತ್ತೆ ಬಿಗಾಡಾಯಿಸುವ ಸಾಧ್ಯತೆ ಇರುವುದರಿಂದ ಜನ ಮತ್ತಷ್ಟು ಜಾಗರೂಕತೆಯಿಂದ ಇರಬೇಕಾಗುತ್ತದೆ. ಸರ್ಕಾರ ಜನರಿಗೆ ವೈರಸ್ ನೊಂದಿಗೆ ಬದುಕಲು ಹೇಳಿದೆ. ಆದರೆ ವೈರಸ್‍ಗೆ ಜನರ ಜೊತೆ ಬದುಕೋಕೆ ಗೊತ್ತಾಗಬೇಕಲ್ವಾ? ವೈರಸ್ ಜನರನ್ನು ಬಲಿ ಪಡೆಯುತ್ತಲೇ ಇದೆ ಎಂದು ಟೀಕಿಸಿದರು.

  • ಪಿಪಿಇ ಕಿಟ್ ಧರಿಸದೇ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರ ನಡೆಸಿದ ಖಾದರ್

    ಪಿಪಿಇ ಕಿಟ್ ಧರಿಸದೇ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರ ನಡೆಸಿದ ಖಾದರ್

    ಮಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಸಂಸ್ಕಾರವನ್ನು ಪಿಪಿಇ ಕಿಟ್ ಧರಿಸದೇ ಶಾಸಕ ಯು.ಟಿ. ಖಾದರ್ ನಡೆಸಿದ್ದಾರೆ.

    ಮಂಗಳೂರಿನ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಕೊರೊನಾ ಸೋಂಕಿತನ ಅಂತ್ಯಸಂಸ್ಕಾರ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಶಾಸಕ ಖಾದರ್ ಕೂಡ ಅಂತ್ಯಸಂಸ್ಕಾರ ಕಾರ್ಯ ಮಾಡಿದ್ದಾರೆ. ಖಾದರ್ ಮಸೀದಿ ಭೂಮಿಯಲ್ಲಿ ಗುಂಡಿ ತೆಗೆದು ಸ್ವತಃ ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸ ಮಾಡಿದ್ದಾರೆ. ಆದರೆ ಈ ವೇಳೆ ಪಿಪಿಇ ಕಿಟ್ ಧರಿಸದೇ ಅಂತ್ಯ ಸಂಸ್ಕಾರ ಕಾರ್ಯ ನಡೆಸಿದ್ದಾರೆ.

    ಕೊರೊನಾ ಸೋಂಕಿತನ ಅಂತ್ಯಸಂಸ್ಕಾರ ಮಾಡುವಾಗ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರು. ಆದರೆ ಶಾಸಕ ಖಾದರ್ ಪಿಪಿಇ ಕಿಟ್ ಧರಿಸಿಲ್ಲ. ಹೀಗಾಗಿ ಖಾದರ್ ಡೆಡ್ಲಿ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.

    ಮಂಗಳವಾರ 70 ವರ್ಷದ ವೃದ್ಧ, ರೋಗಿ 6282 ರೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ಜೂನ್ 7 ರಂದು ಬೆಂಗಳೂರಿನಿಂದ ಆಗಮಿಸಿದ್ದು, ಜೂನ್ 12 ರಂದು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ವೇಳೆ ಅಂತ್ಯಸಂಸ್ಕಾರ ಮಾಡಲಾಗಿದೆ.