Tag: Powerplay

  • ಓವರಿಗೆ 22 ರನ್‌ ಚಚ್ಚಿದ ವಾರ್ನರ್‌ – ಪವರ್‌ ಪ್ಲೇನಲ್ಲಿ ದಾಖಲೆ ಬರೆದ ಹೈದರಾಬಾದ್‌

    ಓವರಿಗೆ 22 ರನ್‌ ಚಚ್ಚಿದ ವಾರ್ನರ್‌ – ಪವರ್‌ ಪ್ಲೇನಲ್ಲಿ ದಾಖಲೆ ಬರೆದ ಹೈದರಾಬಾದ್‌

    ದುಬೈ: ನಾಯಕ ಡೇವಿಡ್‌ ವಾರ್ನರ್‌ ಒಂದೇ ಓವರ್‌ನಲ್ಲಿ 22 ರನ್‌ ಚಚ್ಚುವ ಮೂಲಕ ಈ ವರ್ಷದ ಐಪಿಎಲ್‌ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ದಾಖಲೆ ನಿರ್ಮಿಸಿದೆ.

    ಇಂದು ಮೊದಲ 6 ಓವರ್‌ಗಳಿಗೆ ಹೈದರಾಬಾದ್‌ ತಂಡ ವಿಕೆಟ್‌ ನಷ್ಟವಿಲ್ಲದೇ 77 ರನ್‌ ಗಳಿಸಿತ್ತು. ಈ ಮೂಲಕ ಪವರ್‌ ಪ್ಲೇನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್‌ ಪಾತ್ರವಾಗಿದೆ.

    ಈ ಮೊದಲು ಪವರ್‌ ಪ್ಲೇ ಆಟದಲ್ಲಿ ರಾಜಸ್ಥಾನ ರಾಯಲ್ಸ್‌ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ 1 ವಿಕೆಟ್‌ ನಷ್ಟಕ್ಕೆ 69 ರನ್‌ ಗಳಿಸಿತ್ತು. ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ವಿಕೆಟ್‌ ನಷ್ಟವಿಲ್ಲದೇ 63 ರನ್‌ ಹೊಡೆದಿತ್ತು. ಕಿಗಿಸೋ ರಬಾಡ ಎಸೆದ 6ನೇ ಓವರ್‌ನಲ್ಲಿ ವಾರ್ನರ್‌ 4 ಬೌಂಡರಿ ಒಂದು ಸಿಕ್ಸರ್‌ ಬಾರಿಸಿ 22 ರನ್‌ ಹೊಡೆದಿದ್ದರು. ಮೂರನೇ ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ.

    ವಾರ್ನರ್‌ ಮತ್ತು ವೃದ್ಧಿಮಾನ್‌ ಸಹಾ ಅವರ ಸ್ಫೋಟಕ ಆಟದಿಂದ ಹೈದರಾಬಾದ್‌ ತಂಡ ಡೆಲ್ಲಿಗೆ 220 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

    ವಾರ್ನರ್‌ 66 ರನ್‌(34 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹೊಡೆದರೆ, ಸಹಾ 87 ರನ್‌(45 ಎಸೆತ, 12 ಬೌಂಡರಿ, 2 ಸಿಕ್ಸರ್‌) ಹೊಡೆದರು. ಇವರಿಬ್ಬರು ಮೊದಲ ವಿಕೆಟಿಗೆ 9.4 ಓವರ್‌ಗಳಲ್ಲಿ 107 ರನ್‌  ಜೊತೆಯಾಟವಾಡಿದ್ದರು.

    14.3 ಓವರ್‌ಗಳಲ್ಲಿ ವೃದ್ಧಿಮಾನ್‌ ಸಹಾ ಔಟಾದಾಗ ಹೈದರಾಬಾದ್‌ ತಂಡ 170 ರನ್‌ ಗಳಿಸಿತ್ತು. ಮನೀಷ್‌ ಪಾಂಡೆ 44 ರನ್‌(31 ಎಸೆತ, 4 ಬೌಂಡರಿ, 1 ಸಿಕ್ಸರ್‌ ಹೊಡೆದರೆ ಕೇನ್‌ ವಿಲಿಯಮ್ಸನ್‌ 10 ಎಸೆತ ಎದುರಿಸಿ 11 ರನ್‌ ಹೊಡೆದು ಅಜೇಯರಾಗಿ ಉಳಿದರು.

    ರಬಾಡ 4 ಓವರ್‌ಗೆ 54 ರನ್‌ ನೀಡಿದರೆ ಆರ್‌ ಅಶ್ವಿನ್‌ ಮತ್ತು ದೇಶಪಾಂಡೆ 3 ಓವರ್‌ ಎಸೆದು 35 ರನ್‌ ನೀಡಿದರು. ಇತರೇ ರೂಪದಲ್ಲಿ 11 ರನ್‌ ಬಂದಿತ್ತು.

    ರನ್‌ ಏರಿದ್ದು ಹೀಗೆ?
    50 ರನ್‌ – 28 ಎಸೆತ
    100 ರನ್‌ – 52 ಎಸೆತ
    150 ರನ್‌ – 77 ಎಸೆತ
    200 ರನ್‌ – 105 ಎಸೆತ
    219 ರನ್‌ – 120 ಎಸೆತ