Tag: power

  • ಚುನಾವಣೆ ಬೆನ್ನಲ್ಲೇ ರಾಜ್ಯದ ಜನರಿಗೆ `ಕರೆಂಟ್’ ಶಾಕ್

    ಚುನಾವಣೆ ಬೆನ್ನಲ್ಲೇ ರಾಜ್ಯದ ಜನರಿಗೆ `ಕರೆಂಟ್’ ಶಾಕ್

    ಬೆಂಗಳೂರು: ಚುನಾವಣೆಯ ಮಧ್ಯೆ ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ವಿದ್ಯುತ್ ದರ ಏರಿಕೆಗೆ ಕೆಇಆರ್ ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)ಕ್ಕೆ ವಿದ್ಯುತ್ ಸರಬರಾಜು ಕಂಪನಿ ಮನವಿ ಮಾಡಿಕೊಂಡಿದೆ.

    ಪ್ರತಿ ಯೂನಿಟ್ ಗೆ ಒಂದು ರೂ. ಏರಿಕೆ ಮಾಡುವಂತೆ ಐದು ವಿದ್ಯುತ್ ಕಂಪನಿಗಳು ಈಗಾಗಲೇ ಮನವಿಮಾಡಿಕೊಂಡಿದ್ದು, ಅದರಲ್ಲೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ 1.46 ಪೈಸೆಯ ಅತೀ ಹೆಚ್ಚು ದರ ಏರಿಕೆಗೆ ಮನವಿ ಮಾಡಿದೆ. ಹೀಗಾಗಿ ಇದೀಗ ರಾಜ್ಯ ಸರ್ಕಾರ ದರ ಏರಿಕೆ ಧರ್ಮಸಂಕಟಕ್ಕೆ ಸಿಲುಕಿದೆ.

    ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಸಾರ್ವಜನಿಕ ಅಹವಾಲು ಸ್ವೀಕಾರವಾದ ಬಳಿಕ ದರ ಏರಿಕೆಯಾಗಲಿದೆ. ಆದ್ರೆ ಎಲೆಕ್ಷನ್ ಹಿನ್ನಲೆಯಲ್ಲಿ ದರ ಏರಿಕೆ ಕೈ ಸರ್ಕಾರಕ್ಕೆ ಸೈಡ್ ಎಫೆಕ್ಟ್ ಹೊಡೆಯಲಿದೆ ಅನ್ನೋ ಭಯವೂ ರಾಜ್ಯ ಸರ್ಕಾರಕ್ಕೆ ಎದುರಾಗಿದೆ.

    ಇದನ್ನೂ ಓದಿ: ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದ್ರೆ ಬಿಎಸ್‍ವೈ ಹಿಂದೆ ಅಲೆಯುವೆ: ಡಿಕೆಶಿ

    ದರ ಏರಿಕೆ ಅನಿವಾರ್ಯ: ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಫೆ. 20ರಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಈ ಬಗ್ಗೆ 5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದರು. ಕಳೆದ ವರ್ಷ ಮಾರ್ಚ್‍ನಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು.

    ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?: ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ, 31 ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್‍ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.

  • ರಾಯಚೂರಲ್ಲಿ ನಿರಂತರ ವಿದ್ಯುತ್‍ಗಾಗಿ ನಡೆದ ಶಾಸಕರ ಹೈಡ್ರಾಮಾ ಅಂತ್ಯ

    ರಾಯಚೂರಲ್ಲಿ ನಿರಂತರ ವಿದ್ಯುತ್‍ಗಾಗಿ ನಡೆದ ಶಾಸಕರ ಹೈಡ್ರಾಮಾ ಅಂತ್ಯ

    ರಾಯಚೂರು: ಜಿಲ್ಲೆಯಲ್ಲಿ ಎರಡು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿದ್ರೂ ಜನ ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನೇ ವಿಷಯವಾಗಿಟ್ಟುಕೊಂಡ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನಿರಂತರ ವಿದ್ಯುತ್‍ಗಾಗಿ ನವೆಂಬರ್ 27 ರಿಂದ ಪಾದಯಾತ್ರೆ ಆರಂಭಿಸಿದ್ದರು.

    ಭೂಸಂತ್ರಸ್ತರ ಬೇಡಿಕೆ ಈಡೇರಿಸಬೇಕು ಅಂತ ಆಗ್ರಹಿಸಿ ಗುರುವಾರ ಮಧ್ಯರಾತ್ರಿವರೆಗೂ ಹೋರಾಟ ನಡೆಸಿದರು. ರಾಯಚೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಸುಮಾರು ನಾಲ್ಕು ಗಂಟೆಗಳ ಕಾಲ ಸಂಪೂರ್ಣ ಬಂದ್ ಆಗಿತ್ತು. 10 ಕೀ.ಮೀವರೆಗೆ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡಿದರು. ಆದ್ರೆ ಹೋರಾಟ ಮುಂದುವರೆಸಿದ್ದ ಶಾಸಕರು ಯಾವಾಗ ಜಿಲ್ಲಾಧಿಕಾರಿ ಹಾಗೂ ಜೆಸ್ಕಾಂ, ಕೆಪಿಸಿ ಅಧಿಕಾರಿಗಳು ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದರೋ ಅಲ್ಲಿಗೆ ಹೋರಾಟವನ್ನೇ ನಿಲ್ಲಿಸಿದ್ರು. ಬಂಧಿಸಿ ಬಿಡುಗಡೆ ಮಾಡುವ ಡ್ರಾಮಾ ಬಳಿಕ ಹೋರಾಟ ಅಂತ್ಯವಾಗಿದೆ.

    12 ಗಂಟೆ ಕಾಲ ವಿದ್ಯುತ್ ನೀಡಲು ಸರ್ಕಾರ ಆದೇಶಿಸಿದೆ ಅಂತ ಕಾಂಗ್ರೆಸ್ ಎರಡು ದಿನಗಳ ಕೆಳಗೆ ಸಂಭ್ರಮಾಚರಣೆ ಮಾಡಿತ್ತು. ಅಧಿಕೃತ ಆದೇಶ ನೀಡಿದರೆ ಹೋರಾಟ ಹಿಂಪಡೆಯುತ್ತೇವೆ ಎಂದಿದ್ದ ಶಾಸಕರು ಯಾವ ಲಿಖಿತ ಆದೇಶವಿಲ್ಲದಿದ್ದರೂ ಹೋರಾಟ ಕೈಬಿಟ್ಟಿದ್ದಾರೆ.

    ಒಟ್ಟಿನಲ್ಲಿ 24 ಗಂಟೆ ವಿದ್ಯುತ್ ನೀಡಿ, ಭೂಸಂತ್ರಸ್ತರಿಗೆ ಉದ್ಯೋಗ, ಮನೆ ನೀಡಿ ಅಂತ ಹೋರಾಟ ನಡೆಸಿದ ಶಾಸಕರು ಸುಸ್ತಾಗಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ನಡೆಸಿದ ಹೋರಾಟದಿಂದ ಯಾರಿಗೂ ಯಾವ ಪ್ರಯೋಜನವೂ ಆಗಲಿಲ್ಲ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಮತದಾರರಿಗೆ ಹತ್ತಿರವಾಗಲು ನಡೆಸಿದ ಗಿಮಿಕ್‍ನಂತೆ ಹೋರಾಟ ಅಂತ್ಯಗೊಂಡಿದ್ದು ದುರಂತವೇ ಸರಿ.

  • ರಾಯಚೂರಿನಲ್ಲಿ ವಿದ್ಯುತ್ ಗಾಗಿ ಬಿಜೆಪಿ ಜೆಡಿಎಸ್ ಶಾಸಕರ ಪಾದಯಾತ್ರೆ

    ರಾಯಚೂರಿನಲ್ಲಿ ವಿದ್ಯುತ್ ಗಾಗಿ ಬಿಜೆಪಿ ಜೆಡಿಎಸ್ ಶಾಸಕರ ಪಾದಯಾತ್ರೆ

    ರಾಯಚೂರು: ನಗರದ ತಾಲೂಕಿಗೆ ನಿರಂತರ 24 ಗಂಟೆ ವಿದ್ಯುತ್ ನೀಡಲು ಆಗ್ರಹಿಸಿ ರಾಯಚೂರಿನ ಜೆಡಿಎಸ್, ಬಿಜೆಪಿ ಶಾಸಕರು ನಡೆಸುತ್ತಿರುವ ಪಾದಯಾತ್ರೆ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ. ಯರಮರಸ್ ಗ್ರಾಮದಿಂದ ಇಂದು ಪಾದಯಾತ್ರೆ ಆರಂಭಿಸಿರುವ ಜೆಡಿಎಸ್ ಶಾಸಕ ಡಾ.ಶಿವರಾಜ್ ಪಾಟೀಲ್, ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಆರ್ ಟಿಪಿಎಸ್ ವರೆಗೆ ಪಾದಯಾತ್ರೆ ನಡೆಸಲಿದ್ದಾರೆ.

    ಸರ್ಕಾರ ಸ್ಪಂದಿಸಿ ವಿದ್ಯುತ್ ಹಾಗೂ ಭೂಸಂತ್ರಸ್ಥರ ಕಷ್ಟಗಳಿಗೆ ಸ್ಪಂದಿಸಿದಲ್ಲಿ ಹೋರಾಟ ಇಂದು ಅಂತಿಮಗೊಳ್ಳಲಿದೆ. ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಇಬ್ಬರು ಶಾಸಕರು ಎಚ್ಚರಿಕೆ ನೀಡಿದ್ದಾರೆ.

    ದೇವಸುಗೂರು ಗ್ರಾಪಂ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಿದ್ದು ಆರ್ ಟಿಪಿಎಸ್ ಬಳಿ ಹೋರಾಟ ಮಾಡದಂತೆ ಈಗಾಗಲೇ ಜಿಲ್ಲಾಡಳಿತ ನೋಟಿಸ್ ನೀಡಿದ್ದರೂ ಪಾದಯಾತ್ರೆ ಮುಂದುವರಿದಿದೆ. ನೂರಾರು ಜನ ಬೆಂಬಲಿಗರೊಂದಿಗೆ ಶಾಸಕರು ಪಾದಯಾತ್ರೆ ನಡೆಸುತ್ತಿದ್ದಾರೆ.

    ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು 4 ಜನ ಡಿಎಸ್‍ಪಿ, 10 ಸಿಪಿಐ, 15 ಪಿಎಸ್‍ಐ, 300 ಜನ ಸಿಬ್ಬಂದಿ, ಎರಡು ಕೆಎಸ್‍ಆರ್‍ಪಿ, ಎರಡು ಡಿಎಆರ್ ನೇಮಿಸಲಾಗಿದೆ.

     

  • ವಿದ್ಯುತ್ ತಂತಿ ಸ್ಪರ್ಶಿಸಿ ಪೂಜಾರಿ ಸಾವು

    ವಿದ್ಯುತ್ ತಂತಿ ಸ್ಪರ್ಶಿಸಿ ಪೂಜಾರಿ ಸಾವು

    ಬೆಂಗಳೂರು: ಅಕ್ರಮವಾಗಿ ತೋಟಕ್ಕೆ ಸಂಪರ್ಕ ಪಡೆದುಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪೂಜಾರಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ಸಶಿಮಾಕನಹಳ್ಳಿಯಲ್ಲಿ ಘಟನೆ ನಡೆದಿದ್ದು, ಪೂಜಾರಿ ನಾರಾಯಣಸ್ವಾಮಿ(50) ಮೃತ ವ್ಯಕ್ತಿಯಾಗಿದ್ದಾರೆ. ಅಕ್ರಮವಾಗಿ ರಸ್ತೆ ಮಾರ್ಗದಲ್ಲಿ ತೋಟಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿತ್ತು. ಇದನ್ನು ಗಮನಿಸದ ಪೂಜಾರಿ ನಾರಾಯಣಸ್ವಾಮಿ ಇಂದು ಬೆಳಗ್ಗೆ ಸೈಕಲ್ ನಲ್ಲಿ ನೀರು ಹೊತ್ತು ಸಾಗುವಾಗ ಅಯತಪ್ಪಿ ನೆಲದ ಮೇಲೆ ಬಿದ್ದಿದ್ದಾರೆ. ಈ ವೇಳೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದು ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಿಜೆಪಿ ಕಲ್ಲಿದ್ದಲು ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಾಸ್ತ್ರ: ಡಿಕೆಶಿ-ಹೆಚ್‍ಡಿಕೆ ತೋಡಿದ ಖೆಡ್ಡಾಕ್ಕೆ ಬೀಳ್ತಾರಾ ಶೋಭಾ?

    ಬಿಜೆಪಿ ಕಲ್ಲಿದ್ದಲು ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಾಸ್ತ್ರ: ಡಿಕೆಶಿ-ಹೆಚ್‍ಡಿಕೆ ತೋಡಿದ ಖೆಡ್ಡಾಕ್ಕೆ ಬೀಳ್ತಾರಾ ಶೋಭಾ?

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮುಯ್ಯಿಗೆ ಮುಯ್ಯಿ, ಆರೋಪಕ್ಕೆ ಪ್ರತ್ಯಾರೋಪ ಶುರುವಾಗಿದೆ. ಇಂಧನ ಇಲಾಖೆಯಲ್ಲಿನ 447 ಕೋಟಿ ಅಕ್ರಮದ ದಾಖಲೆಗಳನ್ನು ಮೊನ್ನೆ ಬಿಜೆಪಿ ಬಹಿರಂಗಗೊಳಿಸುತ್ತಿದ್ದಂತೆ ಇದೀಗ ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ ವಿದ್ಯುತ್ ಖರೀದಿಸಿದ್ದ ದಾಖಲೆಗಳನ್ನು ಕಾಂಗ್ರೆಸ್ ಕೆದಕಿದೆ.

    2010ರಲ್ಲಿ 1500 ಮೆಗಾವ್ಯಾಟ್ ವಿದ್ಯುತ್ ಖರೀದಿ ವೇಳೆ 28 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದರಿಂದ ಶೋಭಾ ಕರಂದ್ಲಾಜೆ ಚೆಕ್ ರೂಪದಲ್ಲಿ 40 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಪ್ರಸ್ತಾಪಿಸಿ, ಕಲ್ಲಿದ್ದಲ್ಲು ಅಕ್ರಮ ಆರೋಪಕ್ಕೆ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸಿದೆ.

    ಈ ತಿಂಗಳ 30ರಂದು ವಿದ್ಯುತ್ ಖರೀದಿ ಹಗರಣದ ಬಗ್ಗೆ ಸದನ ಸಮಿತಿ ಅಂತಿಮ ವರದಿ ಸಲ್ಲಿಸುತ್ತಿದ್ದು, ವಿದ್ಯುತ್ ಖರೀದಿಯಲ್ಲಿ ಆಗಿರುವ ಅಕ್ರಮವನ್ನು ಪ್ರಸ್ತಾಪಿಸಿ ಸೇಡು ತೀರಿಸಿಕೊಳ್ಳಲು ಬಲೆ ಎಣಿದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಶುಕ್ರವಾರದಂದು ಭೇಟಿಯಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಚರ್ಚಿಸಿದ್ದಾರೆ ಎನ್ನಲಾಗಿದೆ.

    * ಆರೋಪ 1: ಮೊದಲು ಪ್ರತಿ ಯೂನಿಟ್‍ಗೆ 3 ರೂಪಾಯಿ 05 ಪೈಸೆ ವಿದ್ಯುತ್ ಖರೀದಿ ಪ್ರಸ್ತಾವನೆ. ಬಳಿಕ ಪ್ರತಿ ಯೂನಿಟ್‍ಗೆ 6.30 ಪೈಸೆ ಕೊಟ್ಟು ವಿದ್ಯುತ್ ಖರೀದಿಸಿದ್ದೇಕೆ?
    * ಆರೋಪ 2: ಆನ್‍ಲೈನ್‍ನಲ್ಲಿ ವಿದ್ಯುತ್ ಖರೀದಿಯಲ್ಲಿ ಅಕ್ರಮ ಪತ್ತೆ. ಒಂದೇ ದಿನ ಆನ್‍ಲೈನ್‍ನಲ್ಲಿ ವಿಭಿನ್ನ ದರದಲ್ಲಿ ವಿದ್ಯುತ್ ಖರೀದಿಸಿದ್ದೇಕೆ?
    * ಆರೋಪ 3: ಬೇರೆ ರಾಜ್ಯಗಳಲ್ಲಿ ವಿದ್ಯುತ್ ದರ ಕಡಿಮೆ. ಕರ್ನಾಟಕ ದುಬಾರಿ ದರದಲ್ಲಿ ವಿದ್ಯುತ್ ಖರೀದಿಸಿದ್ದೇಕೆ?

    ವರದಿಯಲ್ಲಿ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗ್ತಿದೆ.

  • ಬಾಡಿಗೆ ನೀಡದಕ್ಕೆ ಕರೆಂಟ್, ನೀರು ಕಟ್ ಮಾಡಿದ ಮನೆ ಮಾಲೀಕನ ಮೇಲೆಯೇ ಹಲ್ಲೆ

    ಬಾಡಿಗೆ ನೀಡದಕ್ಕೆ ಕರೆಂಟ್, ನೀರು ಕಟ್ ಮಾಡಿದ ಮನೆ ಮಾಲೀಕನ ಮೇಲೆಯೇ ಹಲ್ಲೆ

    ಕೊಪ್ಪಳ: ಮನೆಯ ಬಾಡಿಗೆ ಕೊಟ್ಟಿಲ್ಲವೆಂದು ನೀರು, ವಿದ್ಯುತ್ ಕಟ್ ಮಾಡಿದ ಮನೆ ಮಾಲೀಕನಿಗೆ ಬಾಡಿಗೆದಾರರು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಕಲ್ಯಾಣ ನಗರದಲ್ಲಿ ನಡೆದಿದೆ.

    ಬಾಬಾ ಹಲ್ಲೆಗೊಳಗಾದ ಮನೆಯ ಮಾಲೀಕ. ಬಾಬಾ ಮನೆಯಲ್ಲಿ ಮೊಹಮ್ಮದ್ ಎಂಬವರು 14 ತಿಂಗಳಿನಿಂದ ವಾಸವಾಗಿದ್ದಾರೆ. ಕೇವಲ ಎರಡು ದಿನ ಬಾಡಿಗೆ ನೀಡಲು ತಡ ಮಾಡಿದ್ದಕ್ಕೆ ಮನೆಯ ಓನರ್ ಬುಧವಾರದಿಂದಲೇ ಬಾಡಿಗೆದಾರರ ಮನೆಯ ನೀರು ಮತ್ತು ವಿದ್ಯುತ್ ಕಟ್ ಮಾಡಿದ್ದಾನೆ.

    ಮುಂದಿನ ತಿಂಗಳು 1ನೇ ತಾರೀಖಿನಿಂದ ಮನೆಯನ್ನು ಖಾಲಿ ಮಾಡುತ್ತವೆ. ನಿಮ್ಮ ಬಳಿಯಿರುವ 10 ಸಾವಿರ ಡಿಪಾಸಿಟ್ ಹಣದಲ್ಲಿ ವಜಾ ಮಾಡಿಕೊಳ್ಳಿ ಎಂದು ಹೇಳಿದರೂ ಮನೆಯ ಓನರ್ ದರ್ಪ ತೋರಿದ್ದಾನೆ. ಇಂದು ಬೆಳಗ್ಗೆ ನೀರು ಕೊಡಿ ಎಂದು ಕೇಳಲು ಹೋದಾಗ ಮನೆಯ ಮಾಲೀಕ ಮಹಿಳೆಗೆ ಅವಾಚ್ಯ ಶಬ್ಧಗಳಿಂದ  ನಿಂದಿಸಿದ್ದಾನೆ. ಇದರಿಂದ ಕೋಪಗೊಂಡು ನಾನು ಮತ್ತು ನನ್ನ ಪತ್ನಿ ಇಬ್ಬರೂ ಸೇರಿ ಹೊಡೆದಿದ್ದೇವೆ ಎಂದು ಮೊಹಮದ್ ಜೀಲಾನಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

     

  • ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ಸಾವು

    ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ಸಾವು

    ದಾವಣಗೆರೆ: ಕುರಿ ಕಾಯಲು ಹೋಗಿದ್ದ ಕುರಿಗಾಹಿಯೊಬ್ಬರು ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಎರ್ಲಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಮಡ್ರಳ್ಳಿ ಅರಣ್ಯ ಪ್ರದೇಶದ ಬಳಿ ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ಸಂಭವಿಸಿದೆ. ಮಂಜಣ್ಣ (23)ಮೃತ ದುರ್ದೈವಿ.

    ಮಡ್ರಳ್ಳಿಯಲ್ಲಿ ರಸ್ತೆ ಮೇಲೆ ಮಂಜಣ್ಣ ಅವರು ಕುರಿ ಕಾಯಲು ಹೋಗಿದ್ದಾಗ ಮಳೆಗೆ ಹರಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದ್ದಾರೆ. ಈ ವಿದ್ಯುತ್ ಆಘಾತದಿಂದ ಅವರ ಸೊಂಟದ ಕೆಳಗಿನ ಭಾಗ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಾಗಿದ್ದ ಮಂಜಣ್ಣ ಅವರ ಕುಟುಂಬದ ಮೇಲೆ ಸೂತಕದ ಛಾಯೆ ಕವಿದಿದೆ. ವಿದ್ಯುತ್ ತಂತಿ ಬಲಿ ತೆಗೆದುಕೊಂಡಿದ್ದರಿಂದ ಬೆಸ್ಕಾಂ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಗಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮೋದಿಗೆ ಟ್ವೀಟ್ ಮಾಡಿದ್ದಕ್ಕೆ ಕೊಪ್ಪಳದ ರೈತನ ಜಮೀನಿನಲ್ಲಿ ಹೊಸ ವಿದ್ಯುತ್ ಕಂಬ ಬಂತು!

    ಮೋದಿಗೆ ಟ್ವೀಟ್ ಮಾಡಿದ್ದಕ್ಕೆ ಕೊಪ್ಪಳದ ರೈತನ ಜಮೀನಿನಲ್ಲಿ ಹೊಸ ವಿದ್ಯುತ್ ಕಂಬ ಬಂತು!

    ಕೊಪ್ಪಳ: ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಿಂದಾಗಿ ಕೆಲ ಸಮಸ್ಯೆಗಳು ಬದಲಾಗಿದ್ದನ್ನು ನೀವು ಈ ಹಿಂದೆ ಓದಿದ್ದೀರಿ. ಆದರೆ ಈಗ ಪ್ರಧಾನಿಗೆ ಮಾಡಿದ ಟ್ವೀಟ್ ನಿಂದಾಗಿ ಜಿಲ್ಲೆಯ ರೈತರೊಬ್ಬರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.

    ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿಜಯಕುಮಾರ್ ಯತ್ನಳ್ಳಿ ಅವರ ಜಮೀನಿನಲ್ಲಿದ್ದ ಕಬ್ಬಿಣದ ವಿದ್ಯುತ್ ಕಂಬವೊಂದು ಬಾಗಿತ್ತು.  ವಿದ್ಯುತ್ ಕಂಬ ಬಾಗಿದ್ದರಿಂದ ಪ್ರತಿ ವರ್ಷ ಉಳುಮೆ ಮಾಡಲು ಇವರಿಗೆ ತೊಂದರೆ ಆಗುತಿತ್ತು.

    ಈ ಸಮಸ್ಯೆ ನಿವಾರಣೆಗೆ ವಿಜಯಕುಮಾರ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಇವರ ಮನವಿ ಅಧಿಕಾರಿಗಳಿಗೆ ಕೇಳಿಸಲೇ ಇಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ರೈತ ವಿಜಯ್‍ಕುಮಾರ್ ಅವರು ಈ ಸಮಸ್ಯೆಯನ್ನು ಬಗೆ ಹರಿಸಲು ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿಗೆ ಟ್ವೀಟ್ ಮಾಡಿದ ವಿಚಾರ ತಿಳಿದು ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ದಿಢೀರ್ ಆಗಿ ಗುರುವಾರ ಜಮೀನಿಗೆ ಬಂದು ಕಂಬವನ್ನು ಬದಲಾಯಿಸಿ ಹೋಗಿದ್ದಾರೆ.

     

     

  • ರೈತರಿಗೆ, ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು: ಯೋಗಿಯಿಂದ ಎರಡನೇ ಮಹತ್ವದ ಆದೇಶ

    ರೈತರಿಗೆ, ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು: ಯೋಗಿಯಿಂದ ಎರಡನೇ ಮಹತ್ವದ ಆದೇಶ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ಮತ್ತು ಗ್ರಾಮೀಣ ಭಾಗದಲ್ಲಿ 18 ಗಂಟೆ ನಿರಂತರ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

    ಮೊದಲ ಕ್ಯಾಬಿನೆಟ್‍ನಲ್ಲಿ ರೈತರ ಸಾಲಮನ್ನಾ ಮಾಡಿದ್ದ ಯೋಗಿ ಸರ್ಕಾರ ಎರಡನೇ ಕ್ಯಾಬಿನೆಟ್‍ನಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮವನ್ನು ತೆಗೆದುಕೊಂಡಿದೆ.

    ಗ್ರಾಮಾಂತರ ಭಾಗದಲ್ಲಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಬಾರದು ಎಂದು ಯೋಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ದೋಷಪೂರಿತ ಅಥವಾ ಸುಟ್ಟು ಹೋಗಿರುವ ಎಲ್ಲಾ ಟ್ರಾನ್ಸ್ ಫಾರ್ಮರ್ ಗಳನ್ನು ಕೂಡಲೇ ಬದಲಾಯಿಸಬೇಕು. ಕೃಷಿಕರಿಗೆ ಮುಂದೆ ಯಾವುದೇ ಕಾರಣಕ್ಕೆ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಯೋಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

    ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ 18 ಗಂಟೆಗಳ ಕಾಲ ವಿದ್ಯುತ್ ವಿತರಣೆಗೆ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಇಂಧನ ಸಚಿವ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

    ಪ್ರತಿಯೊಬ್ಬ ಬಡವನಿಗೆ ಮನೆ, ಪ್ರತಿಯೊಂದು ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ಯೋಗಿ ಅವರ ಕನಸು ಎಂದು ಅವರು ತಿಳಿಸಿದರು.

    ಎಲ್ಲರಿಗೂ ವಿದ್ಯುತ್ ಎಂಬ ಮಹತ್ವದ ಯೋಜನೆಗೆ ಏಪ್ರಿಲ್ 14ರಂದು ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ಸಹಿ ಹಾಕಲಿದ್ದು,  2019ರ ವೇಳೆಗೆ ಉತ್ತರ ಪ್ರದೇಶದ ಎಲ್ಲಾ ಗ್ರಾಮಗಳು ವಿದ್ಯುತ್ ಸಂಪರ್ಕ ಪಡೆಯಲಿವೆ ಎಂದು ಶ್ರೀಕಾಂತ್ ಶರ್ಮಾ ಹೇಳಿದರು.

    ಕ್ಯಾಬಿನೆಟ್ ಸಭೆ ನಡೆಯುದಕ್ಕೂ ಮೊದಲು ಹಿರಿಯ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ “ಶ್ರೀ ಸಾಮಾನ್ಯ ಸೇವೆ” ಅಜೆಂಡಾವನ್ನು ಇಟ್ಟುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

    ಉತ್ತಪ್ರದೇಶದ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಅದರಂತೆ ಮೊದಲ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ರೈತರ 36,359 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದರು.

    2.15 ಕೋಟಿ ರೈತರಲ್ಲಿ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಲಾಗಿದೆ.  ಇದರ ಜೊತೆಗೆ ಪಾಳು ಬಿದ್ದಿರುವ ಜಮೀನು ಹೊಂದಿರುವ 7 ಲಕ್ಷ ರೈತರ 5,630 ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ.2016ರ ಮಾರ್ಚ್ 31ರವರೆಗೆ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ. 2017ರ ಮಾರ್ಚ್‍ಗೆ 31ರವರೆಗೆ ಬಾಕಿ ಇರುವ ಸಾಲವನ್ನ ಸರ್ಕಾರ ಪಾವತಿಸುತ್ತದೆ.

  • ಪ್ರತಿ ಯೂನಿಟ್‍  ವಿದ್ಯುತ್‍ಗೆ 48 ಪೈಸೆ ಹೆಚ್ಚಳ: ನಗರದಲ್ಲಿ ಎಷ್ಟು? ಗ್ರಾಮಾಂತರದಲ್ಲಿ ಎಷ್ಟು? ಇಲ್ಲಿದೆ ಪೂರ್ಣ ಮಾಹಿತಿ

    ಪ್ರತಿ ಯೂನಿಟ್‍ ವಿದ್ಯುತ್‍ಗೆ 48 ಪೈಸೆ ಹೆಚ್ಚಳ: ನಗರದಲ್ಲಿ ಎಷ್ಟು? ಗ್ರಾಮಾಂತರದಲ್ಲಿ ಎಷ್ಟು? ಇಲ್ಲಿದೆ ಪೂರ್ಣ ಮಾಹಿತಿ

    ಬೆಂಗಳೂರು: ಪ್ರತಿ ಯೂನಿಟ್ ವಿದ್ಯುತ್‍ಗೆ 48 ಪೈಸೆ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಅನುಮೋದನೆ ನೀಡಿದೆ. ಏಪ್ರಿಲ್ 1 ರಿಂದಲೇ ಪರಿಷ್ಕೃತ  ದರ ಜಾರಿಗೆ ಬರಲಿದೆ ಎಂದು ಕೆಇಆರ್‍ಸಿ ಅಧ್ಯಕ್ಷ ಶಂಕರಲಿಂಗೇಗೌಡ ಹೇಳಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನವೆಂಬರ್‍ನಲ್ಲಿ ಯೂನಿಟ್‍ಗೆ 1 ರೂ 48 ಪೈಸೆ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ 48 ಪೈಸೆ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು.

    ನಗರ ಪ್ರದೇಶದ ಗೃಹ ಬಳಕೆ
    30 ಯೂನಿಟ್ ವರೆಗೆ 3 ರೂ. ಇತ್ತು ಈಗ ಇದೀಗ 3 ರೂ 25 ಪೈಸೆಗೆ ಏರಿಕೆಯಾಗಿದೆ. 31ರಿಂದ 100 ಯೂನಿಟ್ ವರೆಗೆ 4 ರೂ. 40 ಪೈಸೆಯಿಂದ 4 ರೂ 70ಪೈಸೆಗೆ ಏರಿಕೆಯಾಗಿದೆ. 101 ರಿಂದ 200 ಯೂನಿಟ್ ವರೆಗೆ 5 ರೂ. 90 ಪೈಸೆಯಿಂದ 6 ರೂ. 25ಪೈಸೆಗೆ ಏರಿಕೆಯಾಗಿದ್ದರೆ, 200 ಯೂನಿಟ್ ಮೇಲ್ಪಟ್ಟು 6 ರೂ. 90 ಪೈಸೆಯಿಂದ 7 ರೂ. 30 ಪೈಸೆಗೆ ಏರಿಕೆಯಾಗಿದೆ.

    ಗ್ರಾಮೀಣ ಪ್ರದೇಶದ ಗೃಹ ಬಳಕೆ
    30 ಯೂನಿಟ್ ವರೆಗೆ 2 ರೂ. 90 ಪೈಸೆಯಿಂದ 3 ರೂ. 15 ಪೈಸೆಗೆ ಏರಿಕೆಯಾಗಿದ್ದರೆ, 31ರಿಂದ 100 ಯೂನಿಟ್ ವರೆಗೆ 4 ರೂ. 10 ಪೈಸೆಯಿಂದ 4 ರೂ 40ಪೈಸೆಗೆ ಏರಿಕೆಯಾಗಿದ್ದರೆ, 101ರಿಂದ 200 ಯೂನಿಟ್ ವರೆಗೆ 5 ರೂ. 60 ಪೈಸೆಯಿಂದ 5 ರೂ. 95ಪೈಸೆಗೆ ಏರಿಕೆಯಾಗಿದೆ. 200 ಯೂನಿಟ್ ಮೇಲ್ಪಟ್ಟು 6 ರೂ. 40 ಪೈಸೆಯಿಂದ 6 ರೂ. 80 ಪೈಸೆಗೆ ಏರಿಕೆಯಾಗಿದೆ.

    ಕೈಗಾರಿಕೆ
    ಎಲ್‍ಟಿ ಕೈಗಾರಿಕೆ 10 ಪೈಸೆಯಿಂದ ರಿಂದ 20 ಪೈಸೆಯಾಗಿದೆ. ಮೊದಲ 500 ಯೂನಿಟ್‍ಗೆ 5 ರೂ. 10 ಪೈಸೆಯಿಂದ 5 ರೂ. 25 ಪೈಸೆಗೆ ಏರಿಕೆಯಾಗಿದ್ದರೆ, 500 ಯೂನಿಟ್ ಮೇಲ್ಪಟ್ಟು 6 ರೂ. 30 ಪೈಸೆಯಿಂದ 6 ರೂ 50 ಪೈಸೆಗೆ ಏರಿಕೆಯಾಗಿದೆ.

    ಬೆಸ್ಕಾಂ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‍ಟಿ ಪ್ರತಿ ಯೂನಿಟ್‍ಗೆ 20 ಪೈಸೆಯಿಂದ ರಿಂದ 40 ಪೈಸೆ ಹೆಚ್ಚಳವಾಗಿದ್ದರೆ, ಎಲ್‍ಟಿ ವಾಣಿಜ್ಯ ಬಳಕೆಯ ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳವಾಗಿದೆ.

    ಬೆಸ್ಕಾಂ ವ್ಯಾಪ್ತಿಯಲ್ಲಿ ನಗರ ಪ್ರದೇಶದ ಕೈಗಾರಿಕಾ ಬಳಕೆಗೆ ಮೊದಲ 500 ಯೂನಿಟ್ ಗೆ 5.10 ರಿಂದ 5.25 ಕ್ಕೆ ಏರಿಕೆಯಾಗಿದೆ. 500 ಯೂನಿಟ್ ಮೀರಿದ ಬಳಕೆಗೆ 6.30 ರಿಂದ 6.50 ಕ್ಕೆ ಏರಿಕೆಯಾಗಿದೆ.

    ಬೆಸ್ಕಾಂ ಹೊರತುಪಡಿಸಿದ ಎಸ್ಕಾಂಗಳಲ್ಲಿ ಮೊದಲ 500 ಯೂನಿಟ್ ಗೆ 4.95 ರೂ.ನಿಂದ 5.10 ರೂ.ಗೆ ಕ್ಕೆ ಏರಿಕೆಯಾಗಿದ್ದರೆ, 500 ರಿಂದ 1000 ಯೂನಿಟ್ ಬಳಕೆಗೆ 5.85 ರೂ. ನಿಂದ ರಿಂದ 6.05 ರೂಪಾಯಿಗೆ ಏರಿಕೆಯಾಗಿದೆ. 1000 ಯೂನಿಟ್ ಮೀರಿದ ಬಳಕೆಗೆ 6.15 ರೂ.ನಿಂದ 6.35 ರೂ.ಗೆ ಏರಿಕೆಯಾಗಿದೆ.

    ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಮತ್ತು ಇತರ ನಗರ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆ ಬಳಕೆಗೆ 20 ರಿಂದ 40 ಪೈಸೆ ಏರಿಕೆಯಾಗಿದೆ. ಮೊದಲ ಒಂದು ಲಕ್ಷ ಯೂನಿಟ್ ಗೆ 6.25 ರಿಂದ 6.65 ಕ್ಕೆ ಏರಿಕೆಯಾಗಿದ್ದರೆ, ಒಂದು ಲಕ್ಷ ಯೂನಿಟ್ ಮೀರಿದ ಬಳಕೆಗೆ 6.75 ರಿಂದ 6.95 ಕ್ಕೆ ಏರಿಕೆಯಾಗಿದೆ.

    ಕುಡಿಯುವ ನೀರು ಸರಬರಾಜು ಮಾಡುವ ಎಲ್‍ಟಿ ಸ್ಥಾವರಗಳಿಗೂ ಶಾಕ್ ಸಿಕ್ಕಿದ್ದು, ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈ ದರ 3 ರೂ. 90 ಪೈಸೆಯಿಂದ 4 ರೂ. 25 ಪೈಸೆಗೆ ಹೆಚ್ಚಳವಾಗಿದೆ.

    ಉಚಿತ ವಿದ್ಯುತ್: ಹತ್ತು ಎಚ್ ಪಿ ವರೆಗಿನ ಕೃಷಿ ಪಂಪ್ ಸೆಟ್ ಗಳಿಗೆ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್ ಮುಂದವರಿಕೆಯಾಗಿದೆ. ಇದರಿಂದಾಗಿ 26.57 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸಿಗಲಿದೆ.

    ಯಾವ ವರ್ಷ ಎಸ್ಕಾಂಗಳ ಪ್ರಸ್ತಾವನೆ ಎಷ್ಟಿತ್ತು? ಕೆಇಆರ್‍ಸಿ ಎಷ್ಟು ಹೆಚ್ಚಳ ಮಾಡಿತ್ತು?
    2011-12 ರಲ್ಲಿ ಎಸ್ಕಾಂಗಳು 88 ಪೈಸೆ ಹೆಚ್ಚಳಕ್ಕೆ ಕೇಳಿದ್ದರೆ ಕೆಇಆರ್‍ಸಿ 23 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು
    2012-13 ರಲ್ಲಿ ಎಸ್ಕಾಂಗಳು 73 ಪೈಸೆ ಹೆಚ್ಚಿಸುವಂತೆ ಕೇಳಿತ್ತು, ಆದರೆ 13 ಪೈಸೆ ಹೆಚ್ಚಳಕ್ಕೆ ಕೆಇಆರ್‍ಸಿ ಅನುಮೋದಿಸಿತ್ತು
    2013-14 ರಲ್ಲಿ 70 ಪೈಸೆ ಹೆಚ್ಚಿಸುವಂತೆ ಕೇಳಿತ್ತು. ಆದ್ರೆ 13 ಪೈಸೆ ಹೆಚ್ಚಳವಾಗಿತ್ತು
    2014-15 ರಲ್ಲಿ ಎಸ್ಕಾಂಗಳು 66 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿತ್ತು, ಕೆಇಆರ್‍ಸಿ 13 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು
    2015-16 ರಲ್ಲಿ 1.02 ಪೈಸೆ ಹೆಚ್ಚಿಸುವಂತೆ ಪ್ರಸ್ತಾಪ ಮಾಡಿದ್ದರೆ, 30 ಪೈಸೆ ಏರಿಕೆ ಮಾಡಿತ್ತು
    2016-17 ರಲ್ಲಿ ಎಸ್ಕಾಂಗಳು 1.48 ರೂ. ಪೈಸೆ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು, ಕೆಇಆರ್‍ಸಿ ಈಗ 48 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.