Tag: power

  • ಶನಿವಾರದಿಂದ ಎಚ್‍ಡಿಕೆ ಬಜೆಟ್‍ನ ಹೊರೆ – ಯಾವುದು ಎಷ್ಟೆಷ್ಟು ಏರಿಕೆಯಾಗುತ್ತೆ?

    ಶನಿವಾರದಿಂದ ಎಚ್‍ಡಿಕೆ ಬಜೆಟ್‍ನ ಹೊರೆ – ಯಾವುದು ಎಷ್ಟೆಷ್ಟು ಏರಿಕೆಯಾಗುತ್ತೆ?

    ಬೆಂಗಳೂರು: ಶನಿವಾರದಿಂದಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಜಾರಿಯಾಗಲಿದ್ದು, ಜನಸಾಮಾನ್ಯರ ಜೇಬು ಮತ್ತಷ್ಟು ಖಾಲಿಯಾಗಲಿದೆ.

    ಪೆಟ್ರೋಲ್- ಡೀಸೆಲ್: ಬಜೆಟ್‍ನಲ್ಲಿ ತೈಲ ದರದ ಮೇಲೆ ವಿಧಿಸಲಾಗುತ್ತಿದ್ದ ಸೆಸ್ ದರವನ್ನು 30% ದಿಂದ 32%ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಶನಿವಾರದಿಂದ ಪೆಟ್ರೋಲ್ ಪ್ರತಿ ಲೀಟರ್ ಗೆ 1.14 ರೂ. ಮತ್ತು ಡೀಸೆಲ್ ಲೀಟರ್ ಗೆ 1.12 ರೂ. ದುಬಾರಿಯಾಗಲಿದೆ. ಪ್ರತಿ ತಿಂಗಳು ನೀವು 100 ಲೀಟರ್ ಪೆಟ್ರೋಲ್ ಬಳಸಿದರೆ ಈಗ ಪಾವತಿ ಮಾಡುತ್ತಿದ್ದ ದರಕ್ಕಿಂತ ಹೆಚ್ಚುವರಿಯಾಗಿ 120 ರೂ. ಪಾವತಿಸಬೇಕಾಗುತ್ತದೆ. ಡೀಸೆಲ್ ದರ ಏರಿಕೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಮನೆಯ ದಿನಸಿ, ತರಕಾರಿ, ಹಾಲಿನ ದರದ ಜೊತೆ ಬಸ್, ಟ್ಯಾಕ್ಸಿ ಪ್ರಯಾಣ ದರವೂ ಏರಿಕೆಯಾಗುವ ಸಾಧ್ಯತೆಯಿದೆ.

    ವಿದ್ಯುತ್: ಗೃಹ ಬಳಕೆಯ ವಿದ್ಯುತ್ ಮೇಲಿನ ತೆರಿಗೆಯನ್ನು 6% ರಿಂದ 9% ಏರಿಕೆ ಮಾಡಲಾಗಿದೆ. 3% ರಷ್ಟು ಅಧಿಕ ಮಾಡಿದ್ದರಿಂದ ತಿಂಗಳಿಗೆ 500 ರೂ. ವಿದ್ಯುತ್ ಬಿಲ್ ಪಾವತಿಸುತ್ತಿರುವ ಮನೆಗೆ ವಿದ್ಯುತ್ ಬಿಲ್‍ನಲ್ಲಿ ಹೆಚ್ಚುವರಿಯಾಗಿ 15 ರೂ. ಸೇರಿ 515 ರೂ. ಪಾವತಿಸಬೇಕಾಗುತ್ತದೆ.

    ಮದ್ಯ: ರಾಜ್ಯ ಸರ್ಕಾರ ಹೆಚ್ಚುವರಿ ವೆಚ್ಚಗಳಿಗೆ ಆದಾಯ ಸಂಗ್ರಹಿಸಲು ಹೆಚ್ಚಾಗಿ ಅಬಕಾರಿ ಇಲಾಖೆಯನ್ನೇ ನೆಚ್ಚಿಕೊಂಡಿದ್ದು, ತನ್ನ ಪರಿಷ್ಕೃತ ಬಜೆಟ್‍ನಲ್ಲಿ ಮದ್ಯದ ವಿವಿಧ ಸ್ಲಾಬ್‍ ಗಳ ಮೇಲೆ ಅಬಕಾರಿ ಸುಂಕವನ್ನು 4%ರಷ್ಟು ಹೆಚ್ಚಿಸಲಾಗಿದೆ. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ನಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು 8% ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4% ಏರಿಕೆ ಮಾಡಿದ್ದರಿಂದ 2018-19ನೇ ಸಾಲಿನಲ್ಲಿ ಮದ್ಯದ ಬೆಲೆ 12% ರಷ್ಟು ಏರಿಕೆಯಾಗಲಿದೆ.

    ಎಷ್ಟು ಏರಿಕೆಯಾಗುತ್ತೆ?
    ಹಿಂದಿನ ಸರ್ಕಾರ 8% ರಷ್ಟು ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದ 500 ರೂ. ಮೌಲ್ಯದ ಒಂದು ಬಾಟಲ್ ಮದ್ಯದ ಬೆಲೆ 540 ರೂ. ಆಗಿತ್ತು. ಈಗ ಮತ್ತೆ 4% ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಆ ಬಾಟಲ್‍ ನ ಬೆಲೆ 560 ರೂ. ಆಗುತ್ತದೆ.

    ಮೋಟಾರು ವಾಹನ ತೆರಿಗೆ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.

  • ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಪ್ರವಹ- ಕಂಬದ ಮೇಲೆಯೇ ನೇತಾಡಿದ ಕಾರ್ಮಿಕ

    ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಪ್ರವಹ- ಕಂಬದ ಮೇಲೆಯೇ ನೇತಾಡಿದ ಕಾರ್ಮಿಕ

    ಬಾಗಲಕೋಟೆ: ಹೆಸ್ಕಾಂ ಅಧಿಕಾರಿ ಹಾಗೂ ಲೈನ್ ಮನ್ ಕರ್ತವ್ಯ ನಿರ್ಲಕ್ಷಕ್ಕೆ ಕಾರ್ಮಿಕ ಟ್ರಾನ್ಸ್ ಫಾರ್ಮರ್ ಕಂಬದ ಮೇಲೆಯೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.

    27 ವರ್ಷದ ಶರಣಯ್ಯ ಹಾದಿಮನಿ ಎಂಬ ಕಾರ್ಮಿಕನೇ ಮೃತ ದುರ್ದೈವಿ. ಇವರು ಮಂಗಳವಾರ ಮುಸ್ಸಂಜೆ ನಗರದ ಮಾಹಾಂತ ನಗರದ ಟ್ರಾನ್ಸ್ ಫಾರ್ಮರ್ ದುರಸ್ಥಿ ಕಾರ್ಯ ಮಾಡುತ್ತಿರುವಾಗ ದಿಢೀರ್ ಪ್ರವಹಿಸಿದ ವಿದ್ಯುತ್ ನಿಂದ ಶರಣಯ್ಯ ಸಾವೀಗೀಡಾಗಿದ್ದಾರೆ.

    ಗುತ್ತಿಗೆ ಆಧಾರದ ಕಾರ್ಮಿಕ ಶರಣಯ್ಯ ಹಾದಿಮನಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮಹಾಂತನಗರದ ಟ್ರಾನ್ಸ್ ಫಾರ್ಮರ್ ದುರಸ್ಥಿಗಾಗಿ ಬಂದಿದ್ದರು. ಅಲ್ಲದೇ ವಿದ್ಯುತ್ ಕಡಿತಗೊಳಿದ್ದೇವೆ ಎಂಬ ಖಾತರಿಯ ಮೇರೆಗೆ ಟ್ರಾನ್ಸ್ ಫಾರ್ಮರ್ ಕಂಬ ಏರಿ, ದುರಸ್ಥಿ ಕಾರ್ಯ ಆರಂಭಿಸಿದ್ದಾರೆ. ಆದ್ರೆ ದುರಸ್ಥಿ ವೇಳೆ ಟ್ರಾನ್ಸ್ ಫಾರ್ಮರ್ ಗೆ ದಿಢೀರ್ ವಿದ್ಯುತ್ ಪ್ರವಹಿಸಿದ ಪರಿಣಾಮ ಶರಣಯ್ಯ ವಿದ್ಯುತ್ ಕಂಬದ ಮೇಲೆಯೇ ನೇತಾಡಿದ್ದಾರೆ. ವಿಷಯ ತಿಳಿದ ಕೂಡಲೇ ಸಂಬಂಧಿಕರು ಹಾಗೂ ಸ್ಥಳಿಯರು ಸೇರಿ ಮೃತನ ಶವ ಕೆಳಗಡೆ ಇಳಿಸಿದ್ದಾರೆ.

    ಇಷ್ಟೆಲ್ಲಾ ಅನಾಹುತವಾದ್ರೂ ಈವರೆಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಶರಣಯ್ಯನ ಸಾವಿಗೆ ಹೆಸ್ಕಾಮ್ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಎಚ್‍ಡಿಕೆ ಬಜೆಟ್‍ನಲ್ಲಿ ಇಂಧನ, ವಸತಿಗೆ ಸಿಕ್ಕಿದ್ದು ಏನು?

    ಎಚ್‍ಡಿಕೆ ಬಜೆಟ್‍ನಲ್ಲಿ ಇಂಧನ, ವಸತಿಗೆ ಸಿಕ್ಕಿದ್ದು ಏನು?

    ಬೆಂಗಳೂರು: ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ವಿದ್ಯುತ್ ಪ್ರಸರಣ ಜಾಲವನ್ನು ಬಲವರ್ಧನೆಗೊಳಿಸಲು 35 ವಿದ್ಯುತ್ ಉಪಕೇಂದ್ರಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಸ್ಥಾಪಿಸಲಾಗುವುದು. 75 ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು.

    ಬೆಂಗಳೂರು ನಗರದಲ್ಲಿ ಎಲ್ಲಾ ಓವರ್‍ಹೆಡ್ ಮಾರ್ಗಗಳನ್ನು ಭೂಗತ ಮಾರ್ಗ ಪರಿವರ್ತಿಸಲು ವಿಸ್ತøತ ಯೋಜನೆಯನ್ನು ತಯಾರಿಸಿ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವುದು.

    ವಸತಿ:
    ಈ ಹಿಂದೆ ಬೆಂಗಳೂರು ನಗರದ ಬಡವರಿಗೆ ವಸತಿ ಸೌಲಭ್ಯ ಒದಗಿಸಲು `ಮುಖ್ಯಮಂತ್ರಿ ಒಂದು ಲಕ್ಷ ಮನೆಗಳು’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದನ್ನು ಮುಂದಿನ ವರ್ಷಗಳಲ್ಲಿ ಎಲ್ಲಾ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.

    ಬೆಂಗಳೂರು ನಗರದಲ್ಲಿ ಬಡವರಿಗೆ ಮನೆಗಳನ್ನು ಒದಗಿಸುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಲು ಆಯ್ದ ಸ್ಥಳಗಳಲ್ಲಿ ಬಹುಮಹಡಿ ಮನೆಗಳನ್ನು(ನೆಲಮಹಡಿ+14) ನಿರ್ಮಿಸಲು ನಮ್ಮ ಸರ್ಕಾರವು ಉದ್ದೇಶಿಸಿದೆ.

    ರಾಜ್ಯದ ಕೊಳಗೇರಿಗಳಲ್ಲಿರುವ ಜನಸಂಖ್ಯೆ 40 ಲಕ್ಷಕ್ಕೂ ಅಧಿಕವಾಗಿದೆಯೆಂದು ಅಂದಾಜಿಸಲಾಗಿದೆ. ಕೊಳಗೇರಿ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸುವ ಹಕ್ಕನ್ನು ವರ್ಗಾಯಿಸುವ (ಟಿಡಿಆರ್) ಬದಲಿಗೆ ಹೆಚ್ಚುವರಿ ನೆಲಗಟ್ಟು ಪ್ರದೇಶದ ಅನುಪಾತ (ಎಫ್‍ಎಆರ್) ಒದಗಿಸುವುದರ ಮೂಲಕ ಅವುಗಳನ್ನು ನಗರಪಾಲಿಕೆಗಳ ಪ್ರದೇಶಗಳಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ವಿಸ್ತøತವಾದ ಮಾರ್ಗಸೂಚಿಯನ್ನು 2019-20 ರಿಂದ ಜಾರಿಗೆ ತರಲಾಗುವುದು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 14 ಲಕ್ಷ ಮನೆಗಳು ನಿರ್ಮಾಣವಾಗಿರುತ್ತದೆ. ನಮ್ಮ ಮೈತ್ರಿ ಸರ್ಕಾರವು ಇನ್ನಷ್ಟು ಉತ್ಸಾಹದಿಂದ ವಸತಿ ಯೋಜನೆಯನ್ನು ಮುಂದುವರೆಸಲು ಉದ್ದೇಶಿಸಿದ್ದು, ಬೇಡಿಕೆಗೆ ಅನುಗುಣವಾಗಿ ಮನೆಗಳ ನಿರ್ಮಾಣವನ್ನು ಮಾಡಲು ಸಂಕಲ್ಪ ತೊಟ್ಟಿದೆ.

    ಪ್ರಸ್ತುತ ವಸತಿ ಯೋಜನೆಗಳಲ್ಲಿ ವಿಕಲಚೇತನ ಫಲಾನುಭವಿಗಳಿಗೆ `ಬೇಡಿಕೆಯ ಮೇರೆಗೆ’ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಪಡೆದು ಮನೆ ಹಂಚಿಕೆ ಮಾಡಲು ಉದ್ದೇಶಿಸಿದೆ.

  • ಅಕ್ಟೋಬರ್ 2ನೇ ವಾರದಲ್ಲಿ ಯಡಿಯೂರಪ್ಪಗೆ ಮಹಾಯೋಗ -ಭವಿಷ್ಯ ನುಡಿದ ರಂಭಾಪುರಿ ಶ್ರೀಗಳು

    ಅಕ್ಟೋಬರ್ 2ನೇ ವಾರದಲ್ಲಿ ಯಡಿಯೂರಪ್ಪಗೆ ಮಹಾಯೋಗ -ಭವಿಷ್ಯ ನುಡಿದ ರಂಭಾಪುರಿ ಶ್ರೀಗಳು

    ತುಮಕೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ಜಾತಕದಲ್ಲಿ ಅಕ್ಟೋಬರ್ ಎರಡನೇ ವಾರದಲ್ಲಿ ಮಹಾಯೋಗ ಇದೆ ಅಂತ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

    ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀಗಳು ಈ ಭವಿಷ್ಯವಾಣಿ ನುಡಿದಿದ್ದಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ಯಡಿಯೂರಪ್ಪರ ಜಾತಕದಲ್ಲಿ ಮಹಾಯೋಗ ಇದೆ. ಈ ಮಹಾಯೋಗದ ಪ್ರಕಾರ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಅಕ್ಟೋಬರ್ ಎರಡನೇ ವಾರದ ಅಪೂರ್ವ ಘಟ್ಟದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಯೋಗ ಇದೆ ಎಂದರು. ಶ್ರೀಗಳಿಂದ ಹಿತನುಡಿ ಹೊರಬರುತಿದ್ದಂತೆ ಸಮಾರಂಭದಲ್ಲಿ ನೆರೆದವರು ಚಪ್ಪಾಳೆ ಸುರಿಮಳೆಗೈದಿದ್ದಾರೆ.

  • ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಬೀದರ್: ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಎರಡು ಬಾರಿ ಕರೆಂಟ್ ಕಟ್ಟಾಗಿದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಗರಂ ಆಗಿದ್ದ ಘಟನೆ ಬೀದರ್‍ ರಂಗಮಂದಿರದಲ್ಲಿ ನಡೆದಿದೆ.

    ಇಂದು ಸಚಿವರಿಗೆ ದಲಿತ ಪರ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಗರಂ ಆದ ಸಚಿವರು ರೈತರಿಗಾಗಿ ನಿರಂತರ ಜ್ಯೋತಿ ನೀಡಬೇಕು ಹಾಗೂ ಸಮಸ್ಯೆ ಇರುವ ಕಡೆ ದುರಸ್ಥಿ ಕಾರ್ಯ ನಡೆಸ ಬೇಕು ಎಂದು ಜೆಎಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ ಅದರು ಸಮಸ್ಯೆ ಬಗೆಹರಿದಿಲ್ಲ ಎಂದು ಗರಂ ಆದರು.

    ರೈತರು ನಿರಂತವಾಗಿ ಈ ಕುರಿತು ತಮಗೇ ದೂರು ನೀಡುತ್ತಾರೆ. ವಿದ್ಯುತ್ ಸರಿಯಾಗಿ ನೀಡದ ಹಿನ್ನೆಲೆ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿದೆ. ರೈತರು ಅಧಿಕಾರಿಗಳಿಗೆ ಫೋನ್ ಮಾಡಿ ಸುಸ್ತಾಗಿ ಕೊನೆಗೆ ನಮಗೆ ಫೋನ್  ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಮೈತ್ರಿ ಸರ್ಕಾರದ ಸ್ಥಿರತೆ ಕುರಿತು ಅನುಮಾನ ವ್ಯಕ್ತಪಡಿಸಿದ ದೇವೇಗೌಡ್ರು!

    ಮೈತ್ರಿ ಸರ್ಕಾರದ ಸ್ಥಿರತೆ ಕುರಿತು ಅನುಮಾನ ವ್ಯಕ್ತಪಡಿಸಿದ ದೇವೇಗೌಡ್ರು!

    ತುಮಕೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಸ್ತುತ ಮೈತ್ರಿ ಸರ್ಕಾರ 5 ವರ್ಷ ಪೂರೈಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರು ಕೂಡಾ ಸರ್ಕಾರದ ಸ್ಥಿರತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

    ಪಾವಗಡ ತಾಲೂಕಿನ ತಾಳೆಮರದ ಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 78 ಸ್ಥಾನ ಗಳಿಸಿದ್ದರೂ ಅವರು ನೀವೇ ಮುಖ್ಯಮಂತ್ರಿ ಆಗಬೇಕೆಂದು ಅಧಿಕಾರ ಕೊಟ್ಟಿದ್ದಾರೆ. ಈಗ ಕುಮಾರಸ್ವಾಮಿಗೆ ದೇವರು ಅಧಿಕಾರ ಕೊಟ್ಟು ಪರೀಕ್ಷಿಸುತ್ತಿದ್ದಾನೆ. ಹೆಜ್ಜೆಹೆಜ್ಜೆಗೂ ಸಂಕಷ್ಟ ಎದುರಾಗುತ್ತಿದೆ. ಈ ಎಲ್ಲಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ದೊಡ್ಡ ಹೋರಾಟವೇ ಮಾಡಬೇಕಿದೆ ಎಂದು ಮೈತ್ರಿ ಸರ್ಕಾರ ಮುನ್ನಡೆಸುವ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

    ದೇವರ ಅನುಗ್ರಹದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗೇನೆ 38ಸ್ಥಾನ ಪಡೆದ ನಮಗೆ 78ಸ್ಥಾನ ಪಡೆದ ರಾಷ್ಟ್ರೀಯ ಪಕ್ಷ ಬೆಂಬಲ ನೀಡಿದರ ಹಿಂದೆ ದೇವರ ಕೃಪೆ ಇದೆ. ಆದರೂ ದೇವರು ಕ್ಷಣ ಕ್ಷಣಕ್ಕೂ ಪರೀಕ್ಷೆ ಒಡ್ಡುತ್ತಿದ್ದಾನೆ ಎಂದು ನೋವು ಹೇಳಿಕೊಂಡಿದ್ದಾರೆ.

  • ಬೆಸ್ಕಾಂನಿಂದ ಗ್ರಾಹಕರಿಗೆ ಮತ್ತೊಂದು ಶಾಕ್!

    ಬೆಸ್ಕಾಂನಿಂದ ಗ್ರಾಹಕರಿಗೆ ಮತ್ತೊಂದು ಶಾಕ್!

    ಚಿಕ್ಕಬಳ್ಳಾಪುರ: ಚುನಾವಣೆಗೂ ಮುನ್ನವೇ ಪ್ರತಿ ಯೂನಿಟ್ ಗೆ 30 ಪೈಸೆ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ್ದ ಬೆಸ್ಕಾಂ, ಈಗ ಮತ್ತೊಂದು ಶಾಕ್ ಕೊಟ್ಟಿದೆ.

    ಹೌದು. ಪ್ರತಿ ವರ್ಷದಂತೆ ಈ ಬಾರಿಯೂ ವಾರ್ಷಿಕ ವಿದ್ಯುತ್ ಬಳಕೆಗೆ ಅನುಗುಣವಾಗಿ ಪ್ರತಿಯೊಬ್ಬ ಗ್ರಾಹಕರು ಹೆಚ್ಚುವರಿ ಯೂನಿಟ್ ಗಳ ಬಳಕೆ ಆಧಾರದ ಮೇಲೆ ಹೆಚ್ಚುವರಿ ಡಿಪಾಸಿಟ್ ಹಣ ಪಾವತಿ ಮಾಡುವಂತೆ ಗ್ರಾಹಕರಿಗೆ ಬೆಸ್ಕಾಂ ಡಿಮ್ಯಾಂಡ್ ನೋಟಿಸ್ ವಿತರಿಸುತ್ತಿದೆ.

    ಜೂನ್ ತಿಂಗಳ ವಿದ್ಯುತ್ ಬಿಲ್ ಜೊತೆ ಜೊತೆಗೆ ಇಡೀ ವರ್ಷ ಬಳಸಿರುವ ಹೆಚ್ಚುವರಿ ಯೂನಿಟ್ ಗಳ ಆಧಾರದ ಮೇಲೆ ಇಂತಿಷ್ಟು ಅಂತ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸುವಂತೆ ಗ್ರಾಹಕರಿಗೆ ಬೆಸ್ಕಾಂ ನೋಟಿಸ್ ನೀಡಿದೆ. ವಿದ್ಯುತ್ ಬಿಲ್ ಜೊತೆಗೆ ಹೆಚ್ಚುವರಿ ಭದ್ರತಾ ಹಣದ ನೋಟಿಸ್ ನೋಡ್ತಿರೋ ಜನ ನಾವ್ಯಾಕೆ ಹೆಚ್ಚುವರಿ ಹಣ ಕಟ್ಟಬೇಕು ಅಂತ ಕಕ್ಕಾ ಬಿಕ್ಕಿಯಾಗಿ ಗೊಂದಲಕ್ಕೀಡಾಗುತ್ತಿದ್ದಾರೆ.

    ಬೆಸ್ಕಾಂ ನ ನಿಯಮದಂತೆ ವಿದ್ಯುತ್ ಕನೆಕ್ಷನ್ ಪಡೆದು ಮೀಟರ್ ಆಳವಡಿಕೆ ವೇಳೆ ಇಂತಿಷ್ಟು ಯೂನಿಟ್ ಗಳ ಬಳಕೆಗೆ ಇಂತಿಷ್ಟು ಹಣ ಅಂತ ಭದ್ರತಾ ಠೇವಣಿ ಪಾವತಿಸಿರಲಾಗಿರುತ್ತೆ. ಆದ್ರೆ ಆ ಯೂನಿಟ್ ಗಳ ಬಳಕೆ ಮೀರಿ ಹೆಚ್ಚುವರಿ ಯೂನಿಟ್ ಬಳಕೆ ಮಾಡಿದ್ದಲ್ಲಿ, ಅದಕ್ಕೂ ಮಾಮೂಲಿ ನಿಗದಿತ ಯೂನಿಟ್ ದರದ ಹಣಕ್ಕಿಂತ ಹೆಚ್ಚುವರಿಯಾಗಿ ದರ ವಸೂಲಿ ಕೂಡ ಮಾಡುತ್ತೆ. ಅದಲ್ಲದೆ ವಾರ್ಷಿಕ ವಿದ್ಯುತ್ ಬಳಕೆಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಠೇವಣಿ ಕೂಡ ಪಾವತಿಸಿ ಅಂತ ಪ್ರತಿ ವರ್ಷ ಡಿಮ್ಯಾಂಡ್ ನೋಟಿಸ್ ನೀಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಗ್ರಾಹಕರ ಪ್ರಶ್ನೆಯಾಗಿದೆ.

    ಅಸಲಿಗೆ ಗ್ರಾಹಕರಿಂದ ಪಡೆಯುವ ಡಿಪಾಸಿಟ್ ಹಣವನ್ನು ವಿದ್ಯುತ್ ಕನೆಕ್ಷನ್ ಡಿಸ್ಕನೆಕ್ಟ್ ಮಾಡಿದ ಸಂದರ್ಭದಲ್ಲಿ ಬಡ್ಡಿ ಸಮೇತ ಹಣವನ್ನು ಬೆಸ್ಕಾಂ ವಾಪಾಸ್ ನೀಡುತ್ತೆ. ಆದ್ರೆ ಮೊದಲೇ ತಿಂಗಳ ಕರೆಂಟ್ ಬಿಲ್ ಕಟ್ಟೋಕೆ ಕಷ್ಟ ಪಡೋ ಹಲವು ಕುಟುಂಬಗಳಿಗೆ ಪ್ರತಿ ವರ್ಷವೂ ಈ ರೀತಿ ಡಿಪಾಸಿಟ್ ಏರಿಕೆ ಮಾಡ್ತಾ ಹೋದ್ರೇ ಕಟ್ಟೋದು ಹೇಗೆ ಅಂತ ಗ್ರಾಹಕರು ಚಿಂತಿತರಾಗಿದ್ದಾರೆ.

  • ವಿದ್ಯುತ್ ಕಂಬ ಸಾಗಣೆ ವೇಳೆ ಟ್ರ್ಯಾಕ್ಟರ್ ಪಲ್ಟಿ – ನಾಲ್ವರ ದುರ್ಮರಣ

    ವಿದ್ಯುತ್ ಕಂಬ ಸಾಗಣೆ ವೇಳೆ ಟ್ರ್ಯಾಕ್ಟರ್ ಪಲ್ಟಿ – ನಾಲ್ವರ ದುರ್ಮರಣ

    ರಾಯಚೂರು: ವಿದ್ಯುತ್ ಕಂಬ ಸಾಗಣೆ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂಧನೂರಿನ ಶ್ರೀಪುರಂ ಜಂಕ್ಷನ್‍ನಲ್ಲಿ ನಡೆದಿದೆ.

    ನಾಗರಾಜ್ (35), ರಮೇಶ್(25), ಶರಣಪ್ಪ(19) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜನ್ (30) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸಿಂಧನೂರಿನ ಸರ್ಕಾರಿ ಆಸ್ಪತೆಗೆ ದಾಖಲಿಸಲಾಗಿದೆ.

    ವಿದ್ಯುತ್ ಕಂಬ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ ಟ್ರಾಲಿ ಪಲ್ಟಿ ಹೊಡೆದು ಕಾರಣ ವಿದ್ಯುತ್ ಕಂಬಗಳು ಕಾರ್ಮಿಕರ ಮೇಲೆ ಬಿದ್ದು ಈ ಅನಾಹುತ ಸಂಭವಿಸಿದೆ. ಮೃತರು ಕೊಪ್ಪಳದ ಸುಳೆಕಲ್ ಮೂಲದವರು ಎನ್ನಲಾಗಿದ್ದು. ಸಾಸಲಮರಿ ಕ್ಯಾಂಪ್‍ನಿಂದ ಸಿಂಧನೂರು ಮಧ್ಯೆ ವಿದ್ಯುತ್ ಕಂಬ ಅಳವಡಿಕೆ ಕಾರ್ಯಕ್ಕೆ ಸಾಗಾಣೆ ಮಾಡಲಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಿಂಧನೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಒಂದಿಲ್ಲೊಂದು ತಲೆನೋವು ಎದುರಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೆ ಮತ್ತೊಂದು ಕಡೆ ಜೆಡಿಎಸ್ ಗೆ ರೇವಣ್ಣ ಎರಡು ಖಾತೆ ನೀಡಿ ಎಂದು ಪಟ್ಟು ಹಿಡಿದ್ದಾರೆ.

    ಎಚ್ ಡಿ ರೇವಣ್ಣರ ಹಠ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಸಂಪುಟದಲ್ಲಿ ನನಗೆ ಇಂಧನ ಮತ್ತು ಪಿಡಬ್ಲ್ಯೂಡಿ ಎರಡೂ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ರೇವಣ್ಣರ 2 ಖಾತೆಯ ಮನವಿಯನ್ನು ತಿರಸ್ಕರಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದು, ಕೇವಲ ಯಾವುದಾದರೂ ಒಂದು ಖಾತೆಯನ್ನು ನಿರ್ವಹಿಸುವಂತೆ ರೇವಣ್ಣಗೆ ಸೂಚಿಸಿದ್ದಾರೆ. ಇಂಧನ ಇಲ್ಲವೇ ಲೋಕೊಪಯೋಗಿ ಖಾತೆಯನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

    ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ. ಟಿ. ದೇವೇಗೌಡ ಅವರು ಲೋಕೋಪಯೋಗಿ ಇಲಾಖೆಯ ಪಟ್ಟು ಹಿಡಿದಿದ್ದಾರೆ. ಮೈಸೂರು ಕ್ಷೇತ್ರದ ಶಾಸಕರುಗಳಾದ ಸಾರಾ ಮಹೇಶ್, ಕೆ ಮಹದೇವ್ ಹಾಗೂ ಅಶ್ವಿನ್ ಕುಮಾರ್‍ರವರು ಜಿಟಿಡಿಯವರಿಗೆ ಸಾಥ್ ನೀಡಿದ್ದಾರೆ. ದೇವೇಗೌಡರು ಚುನಾವಣೆಯಲ್ಲಿ ಜಿಟಿಡಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವ ಮಾತುಕೊಟ್ಟ ಹಿನ್ನೆಲೆಯಲ್ಲಿ ಜಿಟಿಡಿಗೆ ಮಂತ್ರಿಸ್ಥಾನ ಸಿಗುವುದು ಪಕ್ಕಾ ಆಗಿದ್ದು ಖಾತೆ ಯಾವುದು ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?

  • ಸಂಪುಟ ರಚನೆಯಲ್ಲಿ ದೇವೇಗೌಡರ ಹಸ್ತಕ್ಷೇಪವಿಲ್ಲ: ಎಚ್‍ಡಿಕೆ

    ಸಂಪುಟ ರಚನೆಯಲ್ಲಿ ದೇವೇಗೌಡರ ಹಸ್ತಕ್ಷೇಪವಿಲ್ಲ: ಎಚ್‍ಡಿಕೆ

    ಬೆಂಗಳೂರು: ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ತಲೆದೋರಿದ್ದ ಗೊಂದಲಕ್ಕೆ ತೆರೆಬಿದ್ದಿದ್ದು, ಸಚಿವ ಸಂಪುಟ ರಚೆನೆಯಲ್ಲಿ ಇಂಧನ ಇಲಾಖೆಯನ್ನು ಒತ್ತಾಯ ಪೂರ್ವಕವಾಗಿ ಜೆಡಿಎಸ್ ತೆಗೆದುಕೊಳ್ಳುವಲ್ಲಿ ದೇವೇಗೌಡರ ಯಾವುದೇ ಹಸ್ತಕ್ಷೇಪವಿಲ್ಲವೆಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ರೇವಣ್ಣ ಹಾಗೂ ಡಿಕೆಶಿ ನಡುವಿನ ಇಂಧನ ಖಾತೆ ಜಟಾಪಟಿಯು ಸತ್ಯಕ್ಕೆ ದೂರವಾದ ಮಾತು ಇದರಲ್ಲಿ ದೇವೇಗೌಡರ ಯಾವುದೇ ಮಾಸ್ಟರ್ ಪ್ಲ್ಯಾನ್ ಇಲ್ಲ. ಆದರೆ ಇಬ್ಬರಿಗೂ ಇಂಧನ ಇಲಾಖೆ ಆಸಕ್ತಿ ಇದ್ದಿದ್ದು ನಿಜ ಎಂದರು.

    ವೇಣುಗೋಪಾಲ್ ಖಾತೆ ಹಂಚಿಕೆ ಪಟ್ಟಿ ತೆಗೆದುಕೊಂಡು ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ. ಸಂಪುಟ ರಚನೆ ವಿಚಾರದಲ್ಲಿ ದೇವೇಗೌಡರು ಮೂಗು ತೂರಿಸಿದ್ದಾರೆ ರೇವಣ್ಣಗಾಗಿ ಮಧ್ಯಪ್ರವೇಶ ಮಾಡಿದ್ದಾರೆ ಅನ್ನೋದು ಸುಳ್ಳು ಎಂದು ಹೇಳಿದರು.

    ಕಾಂಗ್ರೆಸ್‍ನ ಕೇಂದ್ರ ನಾಯಕರಿಗೂ ಈ ವಿಚಾರ ಗೊತ್ತಿದೆ. ಹಣಕಾಸು ಇಲಾಖೆ ಕೇಳಿದ್ದು ನಿಜ ಆದರೆ ಬೇರೆ ಖಾತೆ ವಿಚಾರದಲ್ಲಿ ಜಟಾಪಟಿ ಇಲ್ಲ, ಜೆಡಿಎಸ್ ಒತ್ತಾಯದಿಂದ ಯಾವುದೇ ಖಾತೆ ಪಡೆದಿಲ್ಲವೆಂದು ಸ್ಪಷ್ಟನೆ ನೀಡಿದರು.

    ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿಚಾರ ಅಧಿಸೂಚನೆ ಹೊರಡಿಸಲು ಸಮಯಾವಕಾಶ ಕೇಳಿತ್ತು. ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡಿ ಬಳಿಕ ರಾಜ್ಯದ ನಿಲುವು ತಿಳಿಸುತ್ತೇವೆ ಎಂದು ಹೇಳಿದರು.

    ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಬಜೆಟ್ ಮಂಡನೆಯಾಗಬೇಕು ಇದಕ್ಕೆ ಪೂರಕವಾಗಿ ಮೂರ್ನಾಲ್ಕು ದಿನಗಳಲ್ಲಿ ಬಜೆಟ್ ನ ಸಿದ್ಧತಾ ಸಭೆ ನಡೆಸಿ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಹಾಗೂ ಹಿಂದಿನ ಸರ್ಕಾರಗಳ ಯೋಜನೆಗಳನ್ನು ಒಳಗೊಂಡಂತೆ ಬಜೆಟ್ ಸಿದ್ಧಪಡಿಸಲು ಜಂಟಿ ಅಧಿವೇಶನ ಕರೆಯಲಾಗುವುದೆಂದು ತಿಳಿಸಿದರು.ಇದನ್ನೂ ಓದಿ:ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ