Tag: power

  • ರಾತ್ರೋರಾತ್ರಿ 7 ಕಾಡಾನೆಗಳ ದುರ್ಮರಣ!

    ರಾತ್ರೋರಾತ್ರಿ 7 ಕಾಡಾನೆಗಳ ದುರ್ಮರಣ!

    ಭುವನೇಶ್ವರ್: ಜಿಲ್ಲೆಯ ಕಾಮಲಂಗಾ ಗ್ರಾಮದಲ್ಲಿ ವಿದ್ಯುತ್ ಶಾಕ್‍ಗೆ 7 ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ನಾಲೆಯಲ್ಲಿ 7 ಆನೆಗಳ ಶವಗಳನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಈ ಬಗ್ಗೆ ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಗ್ರಾಮದ ಬಳಿಯಿರುವ ರೈಲ್ವೇ ಹಳಿಯ ಪಕ್ಕದಲ್ಲಿ ಹಾದು ಹೋಗುವ ವಿದ್ಯುತ್ ತಂತಿಯನ್ನು ಈ ಆನೆಗಳು ಸ್ಪರ್ಶಿಸಿವೆ. ಪರಿಣಾಮ ಶಾಕ್ ನಿಂದಾಗಿ 7 ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ.

    ಸ್ಥಳೀಯರು ಮಾಹಿತಿ ನಿಡಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಆನೆಗಳ ಕಳೇಬರಗಳನ್ನು ಪರಿಶೀಲಿಸಿದ್ದಾರೆ. ಆದ್ರೆ ಘಟನೆಗೆ ಸಂಬಂಧಿಸಿದಂತೆ ನಿಖರ ಕಾರಣಗಳು ಇನ್ನಷ್ಟೇ ತಿಳಿದುಬರಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೀಪಾವಳಿ ಹಬ್ಬದ ವೇಳೆ ಕತ್ತಲಲ್ಲಿ ಮುಳುಗಲಿದೆ ಕರ್ನಾಟಕ!

    ದೀಪಾವಳಿ ಹಬ್ಬದ ವೇಳೆ ಕತ್ತಲಲ್ಲಿ ಮುಳುಗಲಿದೆ ಕರ್ನಾಟಕ!

    ರಾಯಚೂರು: ಈ ಬಾರಿ ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯದ ಜನತೆಗೆ ಕತ್ತಲು ಆವರಿಸುವ ಸಾಧ್ಯತೆ ದಟ್ಟವಾಗಿದೆ. ಕಲ್ಲಿದ್ದಲಿನ ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸುತ್ತಿವೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್), ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ವೈಟಿಪಿಎಸ್) ಸೇರಿದಂತೆ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಈಗಾಗಲೇ ಹಂತ ಹಂತವಾಗಿ ಉತ್ಪಾದನೆ ಕಡಿಮೆ ಮಾಡುತ್ತಿದೆ.

    ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ನೀಡುವ ಆರ್‌ಟಿಪಿಎಸ್ ಎಂಟು ಘಟಕಗಳಲ್ಲಿ ಆರು ಘಟಕಗಳು ಈಗಾಗಲೇ ಬಂದ್ ಆಗಿವೆ. ಸದ್ಯ 1 ಮತ್ತು 5ನೇ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. 1720 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಕೇವಲ 305 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇನ್ನು 800 ಮೆಗಾವ್ಯಾಟ್ ಸಾಮರ್ಥ್ಯದ ವೈಟಿಪಿಎಸ್ ಕೇವಲ 303 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. 1700 ಮೆಗಾ ವ್ಯಾಟ್ ಸಾಮರ್ಥ್ಯದ  ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್) ಸಂಪೂರ್ಣ ಸ್ಥಗಿತವಾಗಿದೆ.

    ಕೊರತೆಯಾಗಿದ್ದು ಯಾಕೆ?
    ತಿತ್ಲಿ ಚಂಡಮಾರುತದಿಂದಾಗಿ ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ಡ್ ಫೀಲ್ಡ್ ಹಾಗೂ ಒಡಿಶಾದ ಮಹಾನದಿ ಕೋಲ್ ಫೀಲ್ಡ್ಸ್ ಗಣಿ ಕಂಪನಿಗಳಿಂದ ಕಲ್ಲಿದ್ದಲು ಸರಬರಾಜು ಸಂಪೂರ್ಣ ನಿಂತಿದೆ. ಸದ್ಯ ತೆಲಂಗಾಣದ ಸಿಂಗರೇಣಿ ಗಣಿ ಕಂಪನಿ ಮಾತ್ರ ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಆದರೆ ಆರ್‍ಟಿಪಿಎಸ್‍ಗೆ ನಿತ್ಯ 25 ಸಾವಿರ ಮೆಟ್ರಿಕ್ ಟನ್‍ನಷ್ಟು ಕಲ್ಲಿದ್ದಲು ಬೇಕಿದ್ದು, ಅಗತ್ಯ ಪ್ರಮಾಣದ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ.

    ರಾಜ್ಯದ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲೂ ಕಲ್ಲಿದ್ದಲು ದಾಸ್ತಾನು ಖಾಲಿಯಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಜಲ, ಪವನ ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಭೀಕರ ವಿದ್ಯುತ್ ಸಮಸ್ಯೆ ಎದುರಾಗುವುದು ನಿಶ್ಚಿತ. ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ. ಆದ್ರೆ ಈ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡ್ತಿದೆ ಅನ್ನೋದು ಸಿಎಂ ಆರೋಪ. ಒಟ್ಟಿನಲ್ಲಿ ರಾಜಕೀಯ ದ್ವೇಷ ಮರೆತು ಕೇಂದ್ರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ.

  • ಕಲ್ಯಾಣ ಮಂಟಪ ಅಲಂಕರಿಸುತ್ತಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶ- ಸಾವು!

    ಕಲ್ಯಾಣ ಮಂಟಪ ಅಲಂಕರಿಸುತ್ತಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶ- ಸಾವು!

    ಚಿಕ್ಕಬಳ್ಳಾಪುರ: ಬುಧವಾರ ನಡೆಯಲಿದ್ದ ಮದುವೆಗಾಗಿ ಕಲ್ಯಾಣ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

    ರೆಡ್ಡಿಗೊಲ್ಲವಾರಹಳ್ಳಿ ನಿವಾಸಿ ಗೋಪಿನಾಥ್ (50) ಮೃತ ದುರ್ದೈವಿ. ಪೇರೇಸಂದ್ರ ಗ್ರಾಮದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಆರತಕ್ಷತೆ ನಿಗದಿಯಾಗಿತ್ತು. ಹೀಗಾಗಿ ಗೋಪಿನಾಥ್ ಕಲ್ಯಾಣ ಮಂಟಪದಲ್ಲಿದ್ದ ನೇಮ್ ಬೋರ್ಡ್ ಗೆ ಹೂವಿನಿಂದ ಅಲಂಕಾರ ಮಾಡುತ್ತಿದ್ದರು.

    ಬೋರ್ಡ್ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗೋಪಿನಾಥ್ ಅವರು ಸ್ಪರ್ಶಿಸಿದ್ದು, ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಲೆಗೆ ಬಲವಾಗಿ ಪೆಟ್ಟುಬಿದ್ದಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಗೋಪಿನಾಥ್ ಮೃತಪಟ್ಟಿದ್ದಾರೆ.

    ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯುತ್ ತಗುಲಿ 3 ವರ್ಷದ ಆನೆಮರಿ ಸಾವು

    ವಿದ್ಯುತ್ ತಗುಲಿ 3 ವರ್ಷದ ಆನೆಮರಿ ಸಾವು

    ಕೋಲಾರ: ವಿದ್ಯುತ್ ತಗುಲಿ ಮೂರು ವರ್ಷದ ಆನೆಮರಿ ಸಾವನ್ನಪ್ಪಿರುವ ಘಟನೆ ಕೋಲಾರದ ಗಡಿ ಆಂದ್ರ ಪ್ರದೇಶದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಗಡಿ ಆಂದ್ರದ ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪದ ಬೆರುಪಲ್ಲಿ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಗ್ರಾಮದ ಬಳಿ ಬೆಳೆ ನಾಶ ಮಾಡಿರುವ 7 ಆನೆಗಳ ಹಿಂಡು, ಸುತ್ತಮುತ್ತಲಿನ ಗ್ರಾಮದ ಬಳಿ ಬೀಡು ಬಿಟ್ಟಿವೆ.

    ರಾತ್ರಿ ತೋಟದ ಪಕ್ಕದಲ್ಲಿ ಇದ್ದ ವಿದ್ಯುತ್ ತಂತಿಯನ್ನು ಆನೆ ಮರಿ ಸೊಂಡಲಿನಿಂದ ತಾಕಿದ ಪರಿಣಾಮ 3 ವರ್ಷದ ಗಂಡು ಆನೆಮರಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸಾವಿಗೆ ನಿಖರ ಕಾರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಆನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕಾಡಿನಿಂದ ಬಾರದಂತೆ ಹೀಗಾಗಲೆ ಟ್ರಂಚ್ ಮಾಡಿದ್ದರು ಸಹ ನಾಡಿನತ್ತ ಬಂದು ಬೆಳೆ ನಾಶ ಮಾಡುತ್ತಿವೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ. ಸದ್ಯ ಆನೆ ಹಾವಳಿಯನ್ನು ಆದಷ್ಟು ಬೇಗ ತಡೆಯಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ರೂಲ್ಸ್!

    ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ರೂಲ್ಸ್!

    ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಣೇಶ ವಿಗ್ರಹ ಸ್ಥಾಪಿಸಿ, ಸಂಗೀತ, ಲೈಟಿಂಗ್ ನೀಡಿ ಭರ್ಜರಿಯಾಗಿ ಹಬ್ಬ ಸಂಭ್ರಮಾಚರಣೆ ಮಾಡುವ ಉದ್ದೇಶ ಹೊಂದಿದ್ದ ಮಂದಿಗೆ ಬೆಸ್ಕಾಂ ಶಾಕ್ ನೀಡಲು ಸಿದ್ಧತೆ ನಡೆಸಿದೆ.

    ಗಣೇಶನ ಹಬ್ಬ ಬಂದರೆ ನಗರದ ಬೀದಿಗಳಲ್ಲಿ ಗಣೇಶ್ ವಿಗ್ರಹ ಸ್ಥಾಪಿಸಿ ಬಣ್ಣಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡುವ ಹಲವು ಮಂದಿ ಅನಧಿಕೃತವಾಗಿ ವಿದ್ಯುತ್ ಪಡೆಯುವುದಕ್ಕೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗಿದೆ. ಗಣೇಶ ವಿಗ್ರಹ ಸ್ಥಾಪನೆ ಮಾಡುವ ಮುನ್ನ ಬೆಸ್ಕಾಂಗೆ ಮಾಹಿತಿ ಸಂಪರ್ಕ ಪಡೆಯವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದೇ ವಿದ್ಯುತ್ ಪಡೆದರೆ ದಂಡ ವಿಧಿಸುವ ಕುರಿತು ಬೆಸ್ಕಾಂ ಚಿಂತನೆ ನಡೆಸಿದೆ. ಈ ನಿಯಮ ಉಲ್ಲಂಘಿಸಿದರೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.

    ಸಂಪರ್ಕ ಪಡೆಯುವುದು ಹೇಗೆ?
    ನಗರದಲ್ಲಿ ಗಣೇಶ ವಿಗ್ರಹ ಮೂರ್ತಿ ಸ್ಥಾಪಿಸಲು ಇಚ್ಛಿಸುವವರು ವಿದ್ಯುತ್ ಸಂಪರ್ಕ ಪಡೆಯಲು ಸ್ಥಳೀಯ ಬೆಸ್ಕಾಂ ಉಪವಿಭಾಗಕ್ಕೆ ಪತ್ರ ಬರೆದು ನಿಗದಿ ಪಡಿಸಿದ ಹಣ ಪಾವತಿ ಮಾಡಬೇಕು. ಬಳಿಕ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ತಾತ್ಕಾಲಿಕ ಸಂಪರ್ಕ ನೀಡಲಿದ್ದಾರೆ ಎಂದು ಪ್ರಧಾನ ವ್ಯವಸ್ಥಾಪಕರಾದ ಜಯಂತಿ ತಿಳಿಸಿದ್ದಾರೆ.

    ದೇಶಾದ್ಯಂತ ಗಣೇಶನ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸುವ ಸಂಸ್ಕೃತಿ ಇದ್ದು, ಈ ವೇಳೆ ಕಾನೂನು ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • RTPSನಲ್ಲಿ ಹಳಿ ತಪ್ಪಿದ ಕಲ್ಲಿದ್ದಲು ತುಂಬಿದ ರೈಲು!

    RTPSನಲ್ಲಿ ಹಳಿ ತಪ್ಪಿದ ಕಲ್ಲಿದ್ದಲು ತುಂಬಿದ ರೈಲು!

    ರಾಯಚೂರು: ವಿದ್ಯುತ್ ಕೇಂದ್ರ ಆರ್ ಟಿ ಪಿಎಸ್ ನಲ್ಲಿ ಕಲ್ಲಿದ್ದಲು ತುಂಬಿದ ರೈಲು ಹಳಿ ತಪ್ಪಿದ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

    ರೈಲು ಹಳಿ ತಪ್ಪಿದ್ದರಿಂದ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಕಲ್ಲಿದ್ದಲು ತುಂಬಿದ ರೈಲಿನ ರೇಕ್ ಗಳು ನೆಲಕ್ಕೆ ಇಳಿದಿವೆ. ಮಹಾನದಿ ಕೋಲ್ ಫೀಲ್ಡ್ ನಿಂದ ಆರ್ ಟಿ ಪಿಎಸ್ ಗೆ ಕಲ್ಲಿದ್ದಲು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ.

    ವಿದ್ಯುತ್ ಕೇಂದ್ರದಲ್ಲಿ ಯಾವುದೇ ಅಪಾಯವಾಗಿಲ್ಲ. ಎರಡು ದಿನ ಕಾಲ ರೈಲು ಸಂಚಾರ ಮಾರ್ಗ ನಿಲುಗಡೆಯಾಗಲಿದೆ. ಕಲ್ಲಿದ್ದಲನ್ನು ನೆಲಕ್ಕೆ ಹಾಕಿ ಸಿಬ್ಬಂದಿ ಸಾಗಣೆ ಮಾಡುತ್ತಿದ್ದಾರೆ. ಕಲ್ಲಿದ್ದಲು ಸಂಗ್ರಹಣೆ ಕೊರತೆಯಾಗುವ ಹಿನ್ನೆಲೆ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

    ಇನ್ನೂ 1720 ಮೆಗಾ ವ್ಯಾಟ್ ಸಾಮಥ್ರ್ಯದ ವಿದ್ಯುತ್ ಕೇಂದ್ರದಲ್ಲಿ ಈಗ ಕೇವಲ 402 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ ಐದು ಮತ್ತು ಎಂಟನೆ ಘಟಕ ಮಾತ್ರ ವಿದ್ಯುತ್ ಉತ್ಪಾದಿಸುತ್ತಿವೆ. ಉಳಿದ 6 ಘಟಕಗಳ ಬೇಡಿಕೆ ಕುಸಿತ ಹಾಗೂ ತಾಂತ್ರಿಕ ಕಾರಣದಿಂದ ಕಾರ್ಯ ಸ್ಥಗಿತಗೊಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜಿಲ್ಲಾ ಪಂಚಾಯತ್‍ನಲ್ಲಿ ಕೈ ಸದಸ್ಯರ ಮುಸುಕಿನ ಗುದ್ದಾಟ: ಅಭಿವೃದ್ಧಿಗಾಗಿ ಬಂದಿದ್ದ ಹಣ ಸರ್ಕಾರಕ್ಕೆ ವಾಪಾಸ್!

    ಜಿಲ್ಲಾ ಪಂಚಾಯತ್‍ನಲ್ಲಿ ಕೈ ಸದಸ್ಯರ ಮುಸುಕಿನ ಗುದ್ದಾಟ: ಅಭಿವೃದ್ಧಿಗಾಗಿ ಬಂದಿದ್ದ ಹಣ ಸರ್ಕಾರಕ್ಕೆ ವಾಪಾಸ್!

    ಹಾವೇರಿ: ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ಸದಸ್ಯರುಗಳ ನಡುವೆಯೇ ಮುಸುಕಿನ ಗುದ್ದಾಟ ಶುರುವಾಗಿದ್ದು, ಇದರಿಂದಾಗಿ ಅಭಿವೃದ್ಧಿಗಾಗಿ ಬಂದಿದ್ದ ಹಣ ಮರಳಿ ಸರ್ಕಾರಕ್ಕೆ ಹಿಂದಿರುಗಿ ಹೋಗಿದೆ.

    ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಸದಸ್ಯರುಗಳ ನಡುವೆಯೇ ಮುಸುಕಿನ ಗುದ್ದಾಟ ಶುರುವಾಗಿದೆ. ಸದಸ್ಯರುಗಳು ತಮ್ಮ ಪಕ್ಷದವರೇ ಆಗಿರುವ ಅಧ್ಯಕ್ಷರನ್ನು ಕೆಳಗಿಳಿಸಬೇಕು ಎಂಬ ಹಠಕ್ಕೆ ಬಿದ್ದಿದ್ದು, ಯಾವುದೇ ಸಭೆ ನಡೆಯದಂತೆ ಮಾಡುತ್ತಿದ್ದಾರೆ. ಕೈ ಸದಸ್ಯರುಗಳ ಶೀತಲ ಸಮರದಿಂದಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಬಂದಿದ್ದ ಹಣ ವಾಪಸ್ಸು ಸರ್ಕಾರಕ್ಕೆ ಮರಳಿದೆ.

    ಜಿಲ್ಲಾ ಪಂಚಾಯತ್ ಒಟ್ಟು 34 ಸದಸ್ಯರ ಬಲ ಹೊಂದಿದೆ. ಇಲ್ಲಿ 22 ಸದಸ್ಯರನ್ನ ಹೊಂದಿರುವ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ನ ಕೊಟ್ರೇಶಪ್ಪ ಬಸೇಗಣ್ಣಿ ಕಳೆದ 3 ವರ್ಷಗಳಿಂದ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದಾರೆ. ಉಳಿದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮಾಜಿ ಸಚಿವ ಎಚ್ ಕೆ ಪಾಟೀಲರ ಆಪ್ತನಾಗಿರುವ ಕೊಟ್ರೇಶಪ್ಪನವರು ಮಾತ್ರ ಅಧಿಕಾರ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಬಹುತೇಕ ಕಾಂಗ್ರೆಸ್ ಸದಸ್ಯರು ಹಾಜರಾಗುತ್ತಿಲ್ಲ. ಸಾಮಾನ್ಯ ಸಭೆಗೆ ಕೋರಂ ಅಭಾವ ಸೃಷ್ಟಿಸಿ ಸಭೆ ನಡೆಯದಂತೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದರಿಂದಾಗಿ ಜಿಲ್ಲೆಯಲ್ಲಿನ ಯಾವುದೇ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಜಿಲ್ಲಾ ಪಂಚಾಯತ್ ಗೆ ಅಭಿವೃದ್ಧಿಗಾಗಿ ಸರ್ಕಾರದಿಂದ ಕೋಟಿ ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಸಭೆಯಲ್ಲಿ ಅನುಮೋದನೆ ಸಿಗದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಂದಿದ್ದ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ. ಗುರುವಾರವು ಸಹ ಕೈ ಸದಸ್ಯರು ಸಭೆಗೆ ಗೈರಾಗಿದ್ದರಿಂದ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿಯವರ ನಿಧನಕ್ಕೆ ಸಂತಾಪ ಸೂಚಿಸಿ ಸಭೆಯನ್ನು ಪುನಃ ಮತ್ತೊಮ್ಮೆ ಮುಂದೂಡಿದ್ದಾರೆ. ಸಭೆಯನ್ನು ಪದೇ ಪದೇ ಮುಂದೂಡುತ್ತಿರುವುದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

    ಜಿಲ್ಲಾ ಪಂಚಾಯತ್ ಗೆ ವಿವಿಧ ಯೋಜನೆಗಳಿಗೆಂದು ಕೋಟಿ ಕೋಟಿ ಹಣ ಬಂದಿದೆ. ಅಲ್ಲದೇ ಯಾವುದೇ ಕೆಲಸಗಳಿಗೆ ಹಣ ನೀಡಬೇಕೆಂದರೆ ಜಿಲ್ಲಾ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿ ಸಭೆಯಲ್ಲಿ ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳಬೇಕು. ಆದರೆ ಕಳೆದ ಎರಡು-ಮೂರು ತಿಂಗಳಿನಿಂದ ಕಾಂಗ್ರೆಸ್ ಸದಸ್ಯರ ಮುಸುಕಿನ ಗುದ್ದಾಟದಿಂದಾಗಿ ಯಾವುದೇ ಅನುಮೋದನೆಗಳು ಜಾರಿಯಾಗುತ್ತಿಲ್ಲ.

    ಅಧ್ಯಕ್ಷನ ವಿರುದ್ಧ ರೋಸಿ ಹೋಗಿರುವ ಕೈ ಸದಸ್ಯರು ಸಭೆಗೆ ಗೈರಾಗುವುದರಿಂದ ಪದೇ ಪದೇ ಕೋರಂ ಕೊರತೆ ಕಾಡುತ್ತಿದೆ. ಸಭೆ ನಡೆಯಬೇಕೆಂದರೆ ಕನಿಷ್ಠ 25 ಮಂದಿ ಸದಸ್ಯರ ಬಲ ಬೇಕು. ಆದರೆ ಸ್ವ-ಪಕ್ಷ ಸದಸ್ಯರುಗಳೇ ಪದೇ ಪದೇ ಸಭೆಗೆ ಗೈರಾಗುತ್ತಿರುವುದರಿಂದ ಸಭೆ ನಡೆಯುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗುರುವಾರವೂ ಸಹ ಮತ್ತೆ ಸಭೆಯನ್ನು ಅಧ್ಯಕ್ಷರು ಮುಂದೂಡಿದ್ದಾರೆ. ಅಲ್ಲದೇ ಹೀಗೆ ಸದಸ್ಯರ ವರ್ತನೆ ಮುಂದುವರಿಸಿದರೆ, ಸಭೆಗೆ ಗೈರಾಗುವ ಸದಸ್ಯರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ಆತಂಕ!

    ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ಆತಂಕ!

    ಚಿಕ್ಕೋಡಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮಸ್ಥರೇ ಆತಂಕದಿಂದ ಕಾಲ ಕಳೆಯುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆಯುತ್ತಿದೆ.

    ಸ್ವಲ್ಪ ವಿದ್ಯುತ್ ತಾಗಿದರೆ ಪ್ರಾಣ ಹೋಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಬಹುತೇಕ ಮನೆಗಳ ಮೇಲೆ ಹೈ ಟೆನ್ಶನ್ ವಿದ್ಯುತ್ ಕೇಬಲ್ ಗಳನ್ನು ಹರಿ ಬಿಟ್ಟಿದ್ದು ಜನರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಾಂಕ್ರೆಟ್ ಮನೆಗಳು ಆಗಿರುದರಿಂದ ಎಲ್ಲಿ ಸ್ವಲ್ಪ ಶಾರ್ಟ್ ಸರ್ಕ್ಯೂಟ್‍ ಆದರೂ ಮನೆಗೆಲ್ಲ ಕರೆಂಟ್ ತಾಗಿ ಬಿಡುತ್ತೆ ಎಂಬ ಭಯ ಜನರನ್ನು ಕಾಡುತ್ತಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ಲಾಸ್ಟಿಕ್ ಪೈಪ್ ಅಳವಡಿಸಿಕೊಳ್ಳಿ ಏನೂ ಆಗಲ್ಲ ಅನ್ನುತ್ತಿರುವ ಹೆಸ್ಕಾಂ ಸಿಬ್ಬಂದಿ ಮಾತು ಕೇಳಿ ಅದನ್ನೂ ಮಾಡಿದರೂ ಪ್ಲಾಸ್ಟಿಕ್ ಸುಟ್ಟು ಹೋಗುತ್ತಿದೆ. ಇದರಿಂದ ನಮಗೆ ತುಂಬ ಭಯ ಆಗುತ್ತಿದ್ದು ಚಿಕ್ಕ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರಿದ್ದಾರೆ.

    ಇಲ್ಲಿನ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಯಾವುದೇ ಅವಘಡ ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹಿಟ್ಲರ್ ನಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಿದ್ದಾರೆ- ಸಿಎಂ ವಿರುದ್ಧ ಶ್ರೀರಾಮುಲು ವಾಗ್ದಾಳಿ

    ಹಿಟ್ಲರ್ ನಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಿದ್ದಾರೆ- ಸಿಎಂ ವಿರುದ್ಧ ಶ್ರೀರಾಮುಲು ವಾಗ್ದಾಳಿ

    ಬಳ್ಳಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ 5-6 ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆಡಳಿಯ ಯಾವ ರೀತಿ ಆಗಿದೆ ಅಂದ್ರೆ, ನಾವು ಕುಮಾರಸ್ವಾಮಿ ಸ್ವಚ್ಛ ಮತ್ತು ಪಾರದರ್ಶಕ ಆಡಳಿತವನ್ನು ನೀಡುತ್ತಾರೆ ಅಂದುಕೊಂಡಿದ್ದೇವು. ಆದರೆ ಕುಮಾರಸ್ವಾಮಿ ಮನೆ ಮುಂದೆ ವರ್ಗಾವಣೆಗಾಗಿ ಅಧಿಕಾರಿಗಳು ಸೂಟ್ ಕೇಸ್ ತುಂಬಿಕೊಂಡು ನಿಂತಿದ್ದಾರೆ. ಮುಖ್ಯಮಂತ್ರಿ ವಿಧಾನಸಭೆಯಿಂದ ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ. ಪತ್ರಕರ್ತರನ್ನು ದೂರವಿಟ್ಟು ಆಡಳಿತ ನಡೆಸುವುದು ಸರಿಯಲ್ಲ. ಕುಮಾರಸ್ವಾಮಿ ಹಿಟ್ಲರ್ ನಂತೆ ನಡೆದುಕೊಳ್ಳುತ್ತಿದ್ದಾರೆಂದು ಶಾಸಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನರನ್ನು ಕೆಣಕುವಂತೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ನಾನೇ ಹೋರಾಟದ ನೇತೃತ್ವದ ವಹಿಸಿಕೊಳ್ಳುವೆ ಅಂತ ಮತ್ತೊಮ್ಮೆ ಉಚ್ಚರಿಸಿದ್ದಾರೆ.

    ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಬಂದರೆ. ಅದು ನೆಲ, ಜಲ, ಭಾಷೆ, ಗಡಿಯಾಗಿರಬಹುದು. ನನ್ನ ಸ್ವಾರ್ಥ ನಾನು ಉತ್ತರ ಕರ್ನಾಟಕದ ಕಡೆ ನಿಂತಿರುತ್ತೇನೆ. ನಾನು ಹೀಗೆ ಸುಮ್ಮನೆ ಕುಳಿತರೆ ಆಗದು. ನಾನು ಈ ರಾಜಕಾರಣದಲ್ಲಿ ಇರುತ್ತೇನೋ, ಹೋಗುತ್ತೀನೋ ಗೊತ್ತಿಲ್ಲ. ನಾನು ಇವತ್ತೇ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ನನಗೆ ರಾಜಕಾರಣ ಮುಖ್ಯವಲ್ಲ. ನಾನು ರಾಜೀನಾಮೆ ಕೊಟ್ಟು, ಕೊಟ್ಟು ಚುನಾವಣೆ ಮಾಡಿಕೊಂಡು ಬಂದಿದ್ದೇನೆ. ಯಾವ ಅವಧಿಯನ್ನು ನಾನು ಪೂರ್ಣ ಮಾಡಿಲ್ಲ ಎಂದು ಆಕ್ರೋಶದಿಂದ ಶ್ರೀರಾಮುಲು ಹೇಳಿದ್ದಾರೆ.

  • ಕೊಡಗಿನಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

    ಕೊಡಗಿನಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

    ಮಡಿಕೇರಿ: ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಅಕ್ಷರಶಃ ಕೊಡಗಿನ ಮಂದಿ ನಲುಗಿದ್ದಾರೆ. ಮಳೆಯ ಅರ್ಭಟದೊಂದಿಗೆ ಭಾರೀ ಗಾಳಿ ಇಡೀ ಜಿಲ್ಲೆಯನ್ನು ನಡುಗಿಸಿದೆ.

    10 ದಿನಗಳಿಂದ ಎಡೆಬಿಡದೆ ವರುಣ ತನ್ನ ಉಗ್ರನರ್ತನ ತೋರಿದ್ದು, ಮಳೆಯ ಅಬ್ಬರಕ್ಕೆ ವಿದ್ಯುತ್ ವ್ಯತ್ಯಯಗೊಂಡಿದೆ. ವಿದ್ಯುತ್ ಕಂಬಗಳು, ಮರಗಳು ಧರಶಾಯಿಗಳಾಗಿವೆ. ಮಡಿಕೇರಿ ನಗರದಲ್ಲಿ ಶನಿವಾರ ರಾತ್ರಿಯಿಂದಲ್ಲೇ ಪವರ್ ಕಟ್ ಆಗಿದ್ದು, ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿದೆ. ಗಾಳಿ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸುತ್ತಿದ್ದು ಮನೆಗಳ ಶೀಟ್ ಗಳು, ಗೋಡೆಗಳು ಕುಸಿತಗೊಳ್ತಿದೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಕ್ಷೇತ್ರ ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ. ಮಹಾಮಳೆಗೆ ತ್ರಿವೇಣಿ ಸಂಗಮ ತುಂಬಿ ಜಲಾವೃತಗೊಂಡಿದ್ದು, ಇದ್ರಿಂದ ತಲಕಾವೇರಿಗೆ ತೆರಳಲು ಸಂಪರ್ಕ ಅಸಾಧ್ಯವಾಗಿದೆ.

    ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದೆ. ಕೊಡಗು ಜಿಲ್ಲೆ ಎಂದೆಂದೂ ಕಾಣದ ಮಹಾಮಳೆಗೆ ತತ್ತರಗೊಂಡಿದ್ದು ಮಳೆ ಸಾಕಪ್ಪ ಅಂತಾಗಿದೆ. ಇದನ್ನೂ ಓದಿ: ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?