Tag: power

  • ತಂದೆ ಮಾಡ್ಬೇಕಿದ್ದ ಸಭೆಯನ್ನ ಮಗ ಮಾಡ್ದ- ಎಂಎಲ್‍ಎ ಪುತ್ರನ ದರ್ಬಾರ್

    ತಂದೆ ಮಾಡ್ಬೇಕಿದ್ದ ಸಭೆಯನ್ನ ಮಗ ಮಾಡ್ದ- ಎಂಎಲ್‍ಎ ಪುತ್ರನ ದರ್ಬಾರ್

    ದಾವಣಗೆರೆ: ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಅಪ್ಪನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಶಾಸಕರು ನಡೆಸಬೇಕಿದ್ದ ಸಭೆಯನ್ನು ಶಾಸಕರ ಪುತ್ರ ನಡೆಸಿದ್ದಾರೆ. ಚನ್ನಗಿರಿ ತಾಲೂಕಿನ ಬಹು ವರ್ಷಗಳ ಯೋಜನೆಯಾದ ಸಾಸ್ವೆಹಳ್ಳಿ ನೀರಾವರಿ ಯೋಜನೆಯ ಬಗ್ಗೆ ಅಧಿಕಾರಿಗಳ ಜೊತೆ ಶಾಸಕರು ಹಾಗೂ ಸಂಸದರು ಸಭೆ ನಡೆಸಬೇಕಿತ್ತು. ಆದರೆ ಶಾಸಕರ ಪುತ್ರ ಸಭೆಯಲ್ಲಿ ಭಾಗವಹಿಸಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

    ಶಾಸಕರು ನಡೆಸಬೇಕಿದ್ದ ಸಭೆಯನ್ನು ಶಾಸಕರ ಮಗ ನಡೆಸಿ ಅಧಿಕಾರ ದುರುಪಯೋಗ ಪಡಿಸಿಕೊಂಡಂತೆ. ಮುಂದಿನ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಉತ್ತರಾಧಿಕಾರಿಯಾಗಿ ಸುಪುತ್ರ ಮಾಡಾಳ್ ಮಲ್ಲಿಕಾರ್ಜುನರನ್ನು ನೇಮಿಸುವುದಕ್ಕೆ ಈಗಲೇ ತರಬೇತಿ ನೀಡುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಕೆಲ ದಿನಗಳ ಹಿಂದೆಯಷ್ಟೆ ಮಾಡಾಳ್ ಮಲ್ಲಿಕಾರ್ಜುನ್ ಶಿಕ್ಷಕರಿಗೆ ನಿಂದನೆ ಮಾಡಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಸಭೆಯಲ್ಲಿ ಭಾಗವಹಿಸುವ ಮೂಲಕ ಶಾಸಕರ ಪುತ್ರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

  • ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಈಗ ಸ್ವಾಗತಿಸ್ತಿದ್ದಾರೆ: ಸಂತೋಷ್ ಹೆಗಡೆ

    ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಈಗ ಸ್ವಾಗತಿಸ್ತಿದ್ದಾರೆ: ಸಂತೋಷ್ ಹೆಗಡೆ

    ಬಳ್ಳಾರಿ: ಹಿಂದೆ ಜೈಲಿಗೆ ಹೋದವರನ್ನು ಶಿಕ್ಷೆ ಆಗುವ ಮುಂಚೆ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

    ಇಂದು ಬಳ್ಳಾರಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಮಾಜ ಬದಲಾಗಬೇಕಿದೆ. ಸಮಾಜದಲ್ಲಿನ ವ್ಯವಸ್ಥೆ ಬದಲಾಗಬೇಕು. ಜನರಲ್ಲಿ ಬದಲಾವಣೆ ಬರಬೇಕು ಎಂದು ಹೇಳಿದರು.

    ಜನರಲ್ಲಿ ದುರಾಸೆ, ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹಿಂದೆ ಜೈಲಿಗೋದವರನ್ನು ಶಿಕ್ಷೆ ಆಗೋ ಮುಂಚೆ ಬಹಿಷ್ಕರಿಸುತ್ತಿದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ. ಏಕ ವ್ಯಕ್ತಿ ಪೂಜೆ ಮಾಡಿ ಆದರೆ ಭ್ರಷ್ಟರನ್ನು ಪೂಜೆ ಮಾಡಬಾರದು ಎಂದು ಹೇಳಿ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.

    ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಲಿಷ್ಠ ಲೋಕಪಾಲ್ ಬಿಲ್ ಯಾರಿಗೆ ಬೇಕು. ಅಧಿಕಾರದಲ್ಲಿ ಇರೋರು ಎಷ್ಟು ಜನಪ್ರಮಾಣಿಕರು ಇದ್ದಾರೆ. ಈಗ ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆ ಯಲ್ಲಿ ಬರೋ ಸಂಸ್ಥೆ. ಮಂತ್ರಿ ಕೆಳಗೆ ಇರೋ ಎಸಿಬಿ ಏನು ಮಾಡಬಹುದು. ಹೀಗಾದರೆ ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ ಎಂದು ಪ್ರಶ್ನೆ ಮಾಡಿದರು.

  • ಧಾರವಾಡದಲ್ಲಿ ಎಸ್‍ಪಿಗಳ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ

    ಧಾರವಾಡದಲ್ಲಿ ಎಸ್‍ಪಿಗಳ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ

    ಧಾರವಾಡ: ಅಧಿಕಾರ, ಕುರ್ಚಿಗಾಗಿ ರಾಜಕಾರಣಿಗಳ ಮಧ್ಯೆ ಕಚ್ಚಾಟ ನಡೆಯುವುದು ಸಾಮಾನ್ಯ. ಆದರೆ ಪೊಲೀಸ್ ಇಲಾಖೆಯಂತಹ ಶಿಸ್ತು ಬದ್ಧ ಅಧಿಕಾರಿಗಳು ಸಹ ಸ್ಥಾನಮಾನದ ಕುರಿತು ಗಲಾಟೆ ಮಾಡಿಕೊಳ್ಳುವ ಮೂಲಕ ಮುಜುಗರಕ್ಕೀಡಾಗಿದ್ದಾರೆ.

    ಧಾರವಾಡ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಶಾಲೆ ವಿವಾದದ ಕೇಂದ್ರವಾಗಿದ್ದು, ಹೊಸದಾಗಿ ವರ್ಗವಾಗಿ ಬಂದಿರುವ ಅಧೀಕ್ಷಕರು ಅಧಿಕಾರ ಪಡೆಯಲು ಎರಡು ದಿನದಿಂದ ಹಠ ಹಿಡಿದು ಕುಳಿತಿದ್ದಾರೆ. ಇನ್ನೊಂದೆಡೆ ಪ್ರಸ್ತುತ ಎಸ್‍ಪಿ ಮಾತ್ರ ಕುರ್ಚಿ ಬಿಟ್ಟು ಏಳುತ್ತಿಲ್ಲ. ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗಿರುವ ಈ ಶಾಲೆಯ ಹಾಲಿ ಅಧೀಕ್ಷಕ ಆರ್.ಎ. ಪಾರಶೆಟ್ಟಿಯೇ ಈಗ ಮತ್ತೊಂದು ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

    ಇವರ ಜಾಗಕ್ಕೆ ವಿಜಯಪುರದಿಂದ ಎನ್.ಬಿ.ಜಾಧವ್ ಎಂಬವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರನ್ವಯ ಅವರು ಆದೇಶ ಪ್ರತಿ ಹಿಡಿದು ಬಂದಿದ್ದಾರೆ. ಆದರೆ ಪಾರಶೆಟ್ಟಿಯವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಜಾಧವ್ ಅವರು ನನಗೆ ನ್ಯಾಯ ದೊರಕಿಸಿಕೊಡಿ ಎಂದು ಗೋಳಿಡುತ್ತಿದ್ದಾರೆ.

    ಒಂದೆಡೆ ಪಾರಶೆಟ್ಟಿ ತಮ್ಮ ಚೇಂಬರ್ ಬೀಗ ಹಾಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಕಾಯುತ್ತ ನಿಂತಿದ್ದ ಜಾಧವ್ ಅವರು, ಪಾರಶೆಟ್ಟಿ ಬಂದು ಚೇಂಬರ್ ಬಾಗಿಲು ತೆರೆಯುತ್ತಿದ್ದಂತೆ ತಾವೂ ಒಳ ಪ್ರವೇಶಿಸಿ, ಅಧಿಕಾರ ಬಿಟ್ಟು ಕೊಡಿ ಎಂದಿದ್ದಾರೆ. ಆಗ ಪಾರಶೆಟ್ಟಿಯವರು ನಾನು ಗೃಹ ಸಚಿವರನ್ನು ಭೇಟಿಯಾಗಿ ಬಂದಿರುವೆ. ನೀವು ಬರುವ ಮುಂಚೆಯೇ ನಾನು ನಿವೃತ್ತಿಯಂಚಿನಲ್ಲಿರುವ ಕಾರಣ ವರ್ಗಾವಣೆ ಮಾಡಬೇಡಿ ಎಂದು ಇಲಾಖೆಗೆ ಮನವಿ ಮಾಡಿಕೊಂಡಿದ್ದೇನೆ. ಈಗ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆ ಕೂಡ ತರುತ್ತೇನೆ. ಹೀಗಾಗಿ ಈಗ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದರು.

    ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆದಿದೆ. ಎಸ್ಪಿ ದರ್ಜೆಯ ಅಧಿಕಾರಿಗಳ ಮಧ್ಯೆ ನಡೆದಿರುವ ಕುರ್ಚಿ ಸಮರ ತರಬೇತಿ ಶಾಲೆ ಆವರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

    ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

    – ಹೊನ್ನಾಂಬಿಕೆ ದೇವಿ ದರ್ಶನ ಪಡೆದ ಬಿಎಸ್‍ವೈ
    – ಸರ್ಕಾರ ಪೂರ್ಣಾವಧಿ ಪೂರೈಸಲೆಂದು ಪ್ರಾರ್ಥನೆ

    ತುಮಕೂರು: ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾಲಯ ಅಮಾವಾಸ್ಯೆ ಪೂಜೆಯ ಮೊರೆ ಹೋದರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಬಿಎಸ್‍ವೈ ಇಂದು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕೆ ದೇವಿ ಮೊರೆ ಹೋಗಿದ್ದು, ಯಡಿಯೂರಪ್ಪನವರು ಸಿಎಂ ಆಗುವುದಾಗಿ ಇದೇ ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು. ಈ ಕುರಿತು ಮೂರು ತಿಂಗಳ ಹಿಂದೆ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಯಡಿಯೂರಪ್ಪನವರ ಪರ ಭವಿಷ್ಯ ಕೇಳಿದ್ದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಮುಖ್ಯಮಂತ್ರಿಯಾದರೂ ಸಂಕಷ್ಟ ಇದೆ ಎಂದು ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು.

    ಸಂಕಷ್ಟ ಪರಿಹಾರಕ್ಕಾಗಿ ಮಹಾಲಯ ಅಮಾವಾಸ್ಯೆಯಂದು ಪೂಜೆ ಸಲ್ಲಿಸುವಂತೆ ಅರ್ಚಕರು ಈ ಹಿಂದೆ ಬಿಎಸ್‍ವೈ ಭೇಟಿ ನೀಡಿದಾಗ ಸೂಚಿಸಿದ್ದರು. ಹೀಗಾಗಿ ಆಪ್ತ ಸಹಾಯಕ ಸಂತೋಷ್ ಅವರ ಸಲಹೆಯಂತೆ ಸಿಎಂ ಯಡಿಯೂರಪ್ಪ ಹೊನ್ನಾಂಬಿಕಾ ದೇವಸ್ಥಾನಕ್ಕೆ ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿಎಸ್‍ವೈ ದೇವಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಧೂತರಾಯನ ಬಳಿ ಸಿಎಂ ಪ್ರಶ್ನೆ ಹಾಕಿದರು. ಸಿಎಂ ಮತ್ತು ಅರ್ಚಕರಿಗೆ ಮಾತ್ರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಪೂಜೆ ನಂತರ ಪ್ರತಿಕ್ರಿಯಿಸಿದ ಬಿಎಸ್‍ವೈ, ತಾಯಿಯ ಆಶೀರ್ವಾದ ಪಡೆದಿದ್ದೇನೆ. ಜನತೆ ನೆಮ್ಮದಿ ಸುಭೀಕ್ಷದಿಂದ ಇರಲಿ, ನಮ್ಮ ಸರ್ಕಾರದ ಅವಧಿ ಪೂರ್ಣವಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಮ್ಮ ಆಪ್ತ ಸಂತೋಷ್ ಒತ್ತಾಯದ ಮೇರೆಗೆ ಬಂದಿದ್ದೇನೆ. ಇಂದು ಮಹಾಲಯ ಅಮಾವಾಸ್ಯೆ ಒಳ್ಳೆದಾಗುತ್ತೆ ಎಂದಿದ್ದರು ಹಾಗಾಗಿ ಬಂದಿದ್ದೆ. ತಾಯಿಯ ದರ್ಶನದಿಂದ ನೆಮ್ಮದಿ ಸಮಾಧಾನ ತೃಪ್ತಿ ಹಾಗೂ ಪ್ರೇರಣೆ ಸಿಕ್ಕಿದೆ. ಇಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಒತ್ತಾಯವಿದೆ. ಇದಕ್ಕಾಗಿ ತಕ್ಷಣ 50 ಲಕ್ಷ ರೂ. ಬಿಡುಗಡೆ ಮಾಡುತ್ತೇವೆ. ತಿಂಗಳೊಳಗೆ ಕೆಲಸ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

  • ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡ್ಬೇಕೋ  ಮಾಡ್ತೀವಿ: ಬಿಜೆಪಿ ಶಾಸಕ

    ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡ್ಬೇಕೋ ಮಾಡ್ತೀವಿ: ಬಿಜೆಪಿ ಶಾಸಕ

    ದಾವಣಗೆರೆ: ಉಪಚುನಾವಣೆಯಲ್ಲಿ ಗೆಲ್ಲೋದಕ್ಕೆ ಏನೇನು ತಂತ್ರ, ಕುತಂತ್ರ ಮಾಡಬೇಕೋ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಾವಣಗೆರೆಯ ಗುಂಡಿ ಸರ್ಕಲ್‍ನಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ರವೀಂದ್ರನಾಥ್ ಅವರು ಮಾತನಾಡಿದರು. ಬಿಜೆಪಿ ಪಕ್ಷ ಈಗಲೂ ಅಧಿಕಾರದಲ್ಲಿ ಇದೆ. ಹೀಗೆ ಅಧಿಕಾರದಲ್ಲಿ ಉಳಿಯಬೇಕಾದರೆ ಉಪಚುನಾವಣೆಯಲ್ಲಿ ನಾವು ಹೆಚ್ಚಿನ ಸೀಟು ಗೆಲ್ಲಬೇಕು. ಗೆಲ್ಲುವುದಕ್ಕೆ ಏನೇನು ಕುತಂತ್ರ, ತಂತ್ರ ಮಾಡಬೇಕೋ ಮಾಡುತ್ತೇವೆ ಗೆಲ್ಲುತ್ತೇವೆ ಎಂದು ಹೇಳಿದರು.

    ಈಗಾಗಲೇ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಪಕ್ಷ ಚುನಾವಣೆಯನ್ನು ಎದುರಿಸುತ್ತದೆ. ನಮಗೆ ಪಕ್ಷದಿಂದ ಎಲ್ಲಿ ಚುನಾವಣಾ ಪ್ರಚಾರ ಮಾಡಲು ಹೇಳುತ್ತಾರೋ ಅಲ್ಲಿಗೆ ನಾವು ಹೋಗುತ್ತೇವೆ, ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.

    ಸದ್ಯ ರವೀಂದ್ರನಾಥ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದು, ಉಪಚುನಾವಣೆ ಎದುರು ಇರುವಾಗ ಈ ರೀತಿ ಶಾಸಕ ಹೇಳಿಕೆ ಕೊಟ್ಟಿರುವುದು ಪ್ರತಿಪಕ್ಷ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.

  • ಯಾವ ಕಾರಣಕ್ಕೆ ನನ್ನ ಡಿಸಿಎಂ ಮಾಡಿದ್ದಾರೆಂದು ಗೊತ್ತಿಲ್ಲ: ಲಕ್ಷ್ಮಣ ಸವದಿ

    ಯಾವ ಕಾರಣಕ್ಕೆ ನನ್ನ ಡಿಸಿಎಂ ಮಾಡಿದ್ದಾರೆಂದು ಗೊತ್ತಿಲ್ಲ: ಲಕ್ಷ್ಮಣ ಸವದಿ

    – ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ

    ಮೈಸೂರು: ಪಕ್ಷದ ವರಿಷ್ಠರು ಹಲವು ದೂರದೃಷ್ಟಿಯಿಂದ ಅಧಿಕಾರ ನೀಡಿದ್ದಾರೆ. ಅದು ಯಾವ ಕಾರಣಕ್ಕೆ ಅನ್ನೋದು ನನಗೂ ಗೊತ್ತಿಲ್ಲ. ಇದು ಬಯಸದೇ ಬಂದ ಭಾಗ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ. ಅಲ್ಲಿನ 6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಪ್ರತಿಪಕ್ಷಗಳು ಸವದಿಯ ಬಗ್ಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

    ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ. ದಂಡ ಹಾಕುವುದು ರಸ್ತೆ ಸರಿಯಿಲ್ಲ ಎಂದು ಅಲ್ಲ. ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡ ಹಾಕುವುದು. ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧ ಕಲ್ಪಿಸಬೇಡಿ. ಯಾರು ತಪ್ಪು ಮಾಡುತ್ತಾರೆ ಅವರಿಗೆ ದಂಡ ಹಾಕುತ್ತಾರೆ. ಅದರಲ್ಲಿ ಹೆಚ್ಚು ಕಮ್ಮಿ ಏನು ಇಲ್ಲ. ಸಂಚಾರ ನಿಯಮ ಪಾಲಿಸಿದರೆ ದಂಡ ಕಟ್ಟುವ ಪ್ರಶ್ನೆಯೇ ಇರುವುದಿಲ್ಲ ಎಂದು ಸವದಿ ಹೇಳಿದರು.

    ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್ ಸಂಚಾರ ಜಾರಿಗೆ ಚಿಂತನೆ ಮಾಡಲಾಗಿದೆ. ಹೊರದೇಶಗಳಿಂದ ಪ್ರಪೋಸಲ್ ಬಂದಿದೆ. ಶೂನ್ಯ ಬಂಡವಾಳ ಹೂಡಿಕೆ ಮಾಡಿ 40% ಮತ್ತು 60% ರಂತೆ ಆದಾಯದಲ್ಲಿ ನಮಗೆ ಕೊಡುತ್ತಾರೆ. ಬಸ್‍ಗಳನ್ನು ಅವರೇ ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಾರೆ. ಈ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ತೈಲ ಬೆಲೆ ಹೆಚ್ಚಳವಾದ ಹಿನ್ನೆಲೆ ಬಸ್ ದರ ಏರಿಸುವ ಪ್ರಸ್ತಾವಣೆ ನನ್ನ ಮುಂದಿದೆ. ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳದ ಉದ್ದೇಶ ಇಲ್ಲ ಎಂದು ತಿಳಿಸಿದರು.

  • ಮೋದಿಯಷ್ಟೇ ಅಧಿಕಾರ ಅಮಿತ್ ಶಾಗೂ ಇದೆ- ಮಾಧುಸ್ವಾಮಿ

    ಮೋದಿಯಷ್ಟೇ ಅಧಿಕಾರ ಅಮಿತ್ ಶಾಗೂ ಇದೆ- ಮಾಧುಸ್ವಾಮಿ

    ಹಾಸನ: ಪ್ರಧಾನಿ ಮೋದಿಯಷ್ಟೇ ಅಧಿಕಾರ ಕೇಂದ್ರ ಗೃಹಮಂತ್ರಿ ಅಮಿತ್ ಶಾಗೂ ಇದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

    ಇಂದು ಹಾಸನದಲ್ಲಿ ರಾಜ್ಯ ನೆರೆ ಹಾವಳಿ ವೀಕ್ಷಣೆಗೆ ಮೋದಿ ಬರಲಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೋದಿಯಷ್ಟೇ ಅಧಿಕಾರ ಅಮಿತ್ ಶಾಗೆ ಪ್ರಧಾನಿ ಮೋದಿ ನೀಡಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋದರೂ ಮೋದಿಯಷ್ಟೇ ಪರಿಣಾಮ ಇದೆ. ಜೊತೆಗೆ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹೀಗಾಗಿ ಯಾರೇ ಬಂದರೂ ಒಳ್ಳೆದಾಗಬೇಕು ಅನ್ನೋದು ನಮ್ಮ ಉದ್ದೇಶ ಎಂದು ತಿಳಿಸಿದರು.

    ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅರೆಸ್ಟ್ ಆದರೆ ಪಬ್ಲಿಕ್ ಸಿಂಪತಿ ಪಡೆಯುತ್ತಾರೆ ಎಂದು ಗೊತ್ತಿತ್ತು. ತನಿಕೆಗೆ ಸಹಕರಿಸಿಲ್ಲ ಎಂದು ಇಡಿ ಬಂಧಿಸಿದ್ದಾರೆ. ಹಣದ ದಾಖಲೆ ಕೊಡಿ ಎಂದು ಕೇಳಿದ್ದಾರೆ, ಅದಕ್ಕೆ ಮಾಹಿತಿ ನೀಡಲಿ ಬಿಡಿ. ಅವರು ತನಿಖೆಗೆ ಸರಿಯಾಗಿ ವರ್ತಿಸಿಲ್ಲ ಎಂದು ಕಾಣುತ್ತದೆ. ಮೊದಲ ಬಾರಿ ಡಿಕೆಶಿ ಮನೆ ಮೇಲೆ ದಾಳಿಯಾದಾಗ ನಮ್ಮ ಬಿಜೆಪಿ ಸರ್ಕಾರವೇ ಇರಲಿಲ್ಲ ಎಂದು ಅವರು ಹೇಳಿದರು.

    ಇದೇ ವೇಳೆ ಕೆಎಂಎಫ್ ವಿಚಾರದಲ್ಲಿ ರೇವಣ್ಣನ ವಿರುದ್ಧ ಕಿಡಿಕಾರಿದ ಮಾಧುಸ್ವಾಮಿ, ರೇವಣ್ಣನಿಗೆ ಅಧ್ಯಕ್ಷ ಪಟ್ಟ ಬೇಡ ಎಂದರೆ ಹೆದರಿಸಿ ನಾಮಿನೇಷನ್ ಫೈಲ್ ಮಾಡಿದ್ದೇಕೆ? ಅವರನ್ನು ವಿರೋಧಿಸುವರನ್ನು ಮತ ಪಟ್ಟಿಗೆ ಸೇರಿಸದಂತೆ ಮಾಡಿದರು. ಕೆಎಂಎಫ್ ಚುನಾವಣಾ ಅಧಿಕಾರಿಯನ್ನೇ ರೇವಣ್ಣ ಹೆದರಿಸಿದ್ದರು ಎಂದು ಗಂಭೀರ ಆರೋಪ ಮಾಡಿದರು.

  • ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

    ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

    ವಿಜಯಪುರ: ಅಮಾವಾಸ್ಯೆ ಕಳೆದ ಮೇಲೆ ಅಧಿಕಾರ ತೆಗೆದುಕೊಳ್ತೇನೆ. ಅಮಾವಾಸ್ಯೆ ಕಾರಣ ಆರೋಗ್ಯ ಸಚಿವ ಸ್ಥಾನದ ಚಾರ್ಜ್ ತೆಗೆದುಕೊಂಡಿಲ್ಲ ಎಂದು ನೂತನ ಆರೋಗ್ಯ ಸಚಿವ ಶ್ರೀರಾಮುಲು ವಿಜಯಪುರದಲ್ಲಿ ಹೇಳಿದರು.

    ಈ ಹೇಳಿಕೆಯಿಂದ ಸಚಿವ ಶ್ರೀರಾಮುಲುಗೆ ಅಮವಾಸ್ಯೆ ಭಯ ಕಾಡುತ್ತಿದಿಯಾ ಎಂಬ ಮಾತುಗಳು ಎಲ್ಲಡೆ ಈಗ ದಟ್ಟವಾಗಿದ್ದು, ಮೂಢ ನಂಬಿಕೆಗೆ ಶ್ರೀರಾಮುಲು ಮೊರೆ ಹೋದರಾ ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.

    ಇದೇ ವೇಳೆ ರಾಮುಲು 4 ಸಾವಿರ ಬೆಲೆಯ ರೋಟೋ ಔಷಧಿ ಇನ್ನು ಮುಂದೆ ಉಚಿತ ಎಂದು ಘೋಷಣೆ ಮಾಡಿದರು. ಹೆರಿಗೆ ನಂತ್ರ ಮಗುವಿಗೆ ನೀಡುವ ಓರಲ್ ಔಷಧಿ ರೋಟೊ ಆಗಿದ್ದು, ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಟೋ ಉಚಿತವಾಗಿ ಹಾಕಲಾಗುತ್ತದೆ. ಸಾವಿರಾರು ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ರೋಟೋ ಔಷಧಿ ಹಾಕಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

  • ರಾಜಕೀಯವಾಗಿ ಬಿಜೆಪಿ ಪಾಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರ ಲಕ್ಕಿ

    ರಾಜಕೀಯವಾಗಿ ಬಿಜೆಪಿ ಪಾಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರ ಲಕ್ಕಿ

    ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ರಾಜಕೀಯವಾಗಿ ಲಕ್ಕಿ ಎನ್ನಿಸಿದೆ. ಯಾಕಂದರೆ ಇಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸುತ್ತದೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.

    ಪ್ರತಿ ಬಾರಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷ, ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಅಲ್ಲದೆ ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಡಿ. ಸುಧಾಕರ್ ಶಾಸಕರಾಗಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಳ್ವಿಕೆ ನಡೆಸಿತ್ತು.

    ಈ ಬಾರಿ ನಡೆದ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮ ಶ್ರೀನಿವಾಸ್ ಜಯಭೇರಿ ಬಾರಿಸಿದ್ದರು. ಹೀಗಾಗಿ ಬಿಜೆಪಿ ಸರ್ಕಾರದ ಆಳ್ವಿಕೆ ಖಚಿತ ಎನ್ನುವಷ್ಟರಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರ ಆಡಳಿತ ನಡೆಸುವ ಮೂಲಕ ಜನರ ನಂಬಿಕೆಗೆ ಬ್ರೇಕ್ ಹಾಕಿತ್ತು. ಆದರೆ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಮತ್ತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗುವ ಮೂಲಕ ಹಳೆಯ ಮಾತು ಸತ್ಯವೆನಿಸಿದೆ.

    ಆಡಳಿತ ನಡೆಸುತ್ತಿರುವ ಸರ್ಕಾರದ ಪಾಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರ ಮತ್ತೆ ಲಕ್ಕಿ ಅನ್ನಿಸಿದೆ. ಹೀಗಾಗಿ ಈ ಬಾರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ಸಹ ಖಚಿತವೆಂಬ ಮಾತುಗಳು ಸಹ ಕೇಳಿಬಂದಿದೆ.

    ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶ್ರೀರಾಮುಲು, ಹೊಸದುರ್ಗದ ಗೂಳಿಹಟ್ಟಿ ಡಿ.ಶೇಖರ್, ಹೊಳಲ್ಕೆರೆಯ ಚಂದ್ರಪ್ಪ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ತಿಪ್ಪಾರೆಡ್ಡಿ ಸೇರಿದಂತೆ ಐದು ಜನ ಶಾಸಕರು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದ್ದರಿಂದ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದ್ದಾರೆಂಬ ಚರ್ಚೆಗಳು ಶುರುವಾಗಿವೆ. ಜಾತಿ ಲೆಕ್ಕಾಚಾರ ಹಾಗೂ ಮಹಿಳಾ ಕೋಟಾದಡಿಯಲ್ಲಿ ಅಂತಿಮವಾಗಿ ಪೂರ್ಣಿಮಾಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ಮಾತುಗಳು ಹಿರಿಯೂರು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

  • ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

    ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

    ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟಿನ ತೀರ್ಪು ಯಾರ ಪರವೂ ಇಲ್ಲ ಯಾರ ವಿರುದ್ಧವೂ ಅಲ್ಲ. ನ್ಯಾಯಾಲಯ ಸ್ಪೀಕರ್ ಅವರ ಪರಮೋಚ್ಛ ಅಧಿಕಾರವನ್ನು ಎತ್ತಿ ಹಿಡಿದಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಶ್ಲೇಷಿಸಿದ್ದಾರೆ.

    ದೇವನಹಳ್ಳಿ ಬಳಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸುಪ್ರೀಂ ಕೋರ್ಟ್ ಕಾಲ ಮಿತಿಯೊಳಗೆ ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥ ಮಾಡಿ ಎಂದು ಹೇಳಿದೆ ಹೊರತು ಇಂತಿಷ್ಟೇ ದಿನದಲ್ಲಿ ಮಾಡಿ ಎಂದು ಹೇಳಿಲ್ಲ. ಇನ್ನೂ ಅತೃಪ್ತ ಶಾಸಕರ ಮೇಲೆ ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ ಎಂದು ಹೇಳಿದೆ. ಆದರೆ ವಿಪ್ ನೀಡಬಾರದು ಎಂದೂ ಎಲ್ಲೂ ಹೇಳಿಲ್ಲ ಎಂದರು.

    ಸಂವಿಧಾನ ದತ್ತವಾಗಿ ಶಾಸಕರಿಗೆ ವಿಪ್ ಜಾರಿ ಮಾಡಲಾಗುವುದು. ವಿಪ್ ಜಾರಿ ಮಾಡಿದ ನಂತರ ಸದನಕ್ಕೆ ಹಾಜರಾಗದಿದ್ದರೆ ಅನರ್ಹತೆ ಪ್ರಶ್ನೆ ಎದುರಾಗುತ್ತದೆ. ಆಗ ಸಹಜವಾಗಿ ಪಕ್ಷದಿಂದ ಅನರ್ಹತೆ ಮಾಡಿ ಅಂತ ಸ್ಪೀಕರ್ ಅವರಿಗೆ ದೂರು ನೀಡುತ್ತೇವೆ. ಆಗ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅನರ್ಹತೆಯನ್ನು ಮಾಡಲೇಬೇಕಾಗುತ್ತೆ. ಹೀಗಾಗಿ ಇದು ಅತೃಪ್ತ ಶಾಸಕರ ಪರದ ತೀರ್ಪು ಅಲ್ಲ. ನ್ಯಾಯಾಲಯ ಸ್ಪೀಕರ್ ಅವರಿಗೆ ಎಲ್ಲಾ ಅಧಿಕಾರವನ್ನು ಅವರ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದರು.

    ಸ್ಪೀಕರ್ ಯಾವಾಗ ಬೇಕಾದರೂ ತಮ್ಮ ತೀರ್ಮಾನಗಳನ್ನು ಕೈಗೊಳ್ಳಬಹುದು. ಈ ಹಿಂದೆ ಈ ರೀತಿ ಆದಂತಹ ಹಲವು ಉದಾಹರಣೆಗಳೂ ಇವೆ. ನಾಳೆ ವಿಶ್ವಾಸ ಮತಯಾಚನೆ ಮಾಡಲಿದ್ದೇವೆ. ಅದರ ಮೇಲೆ ಚರ್ಚೆ ನಡೆಯಲಿದ್ದು ನಾಳೆ ಅಥವಾ ನಾಡಿದ್ದು ಬೇಕಾದರೂ ನಾವು ಬಹುಮತ ಸಾಬೀತುಪಡಿಸುತ್ತೇವೆ. ಸದನದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸಿದವರ ಎಲ್ಲಾ ಮಾಹಿತಿಗಳನ್ನು ಬಿಚ್ಚಡಲಿದ್ದೇವೆ ಎಂದು ಗರಂ ಆದರು.