Tag: power station

  • ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ

    ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ

    ರಾಯಚೂರು: ನಗರದ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹಾರೋಬೂದಿ ಸಾಗಣೆ ಮಾರ್ಗದ ಸಂಗ್ರಹ ಟ್ಯಾಂಕ್ ಕುಸಿದು ಕೋಟ್ಯಾಂತರ ರೂ. ಹಾನಿಯಾಗಿದೆ.

    ಘಟನೆಯಿಂದ ವಿದ್ಯುತ್ ಕೇಂದ್ರದ ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತವಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಾಮರ್ಥ್ಯಕ್ಕಿಂತ ಹೆಚ್ಚು ಭಾರವನ್ನ ಹೊತ್ತಿದ್ದರಿಂದ ಕುಸಿತವಾಗಿದ್ದು, ನಿಗದಿತವಾಗಿ ಹಾರೋಬೂದಿ ವಿಲೆವಾರಿ ನಡೆಯದೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಆರೋಪ – ವಿಚಾರಣೆ ನಡೆಸಲು ಹೈಕೋರ್ಟ್‍ಗೆ ಸುಪ್ರೀಂ ಸೂಚನೆ

    Raichuru

    ಹೀಗಾಗಿ 800 ಮೆ.ವ್ಯಾ ಸಾಮರ್ಥ್ಯ ವಿದ್ಯುತ್ ಘಟಕ ಸಂಪೂರ್ಣ ಸ್ಥಗಿತವಾಗಿದೆ. ಟ್ಯಾಂಕ್ ರಿಪೇರಿಯಾಗುವವರೆಗೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಈ ಮೊದಲು ಇಂತಹ ಘಟನೆ ನಡೆದಿದ್ದರು ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆ ಅವಘಡ ಪುನರಾವರ್ತನೆಯಾಗಿದೆ. ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭವಾಗಲು ಇನ್ನೂ ಮೂರು ದಿನಗಳು ಬೇಕಾಗಬಹುದು ಅಂತ ವೈಟಿಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮೀರ್ ಅತ್ಯಂತ ಚಿಲ್ಲರೆ, ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ : ಪ್ರಹ್ಲಾದ್ ಜೋಶಿ

  • ಕೊರೊನಾ ಭೀತಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು – ಸುರಕ್ಷತೆಗಾಗಿ ಕಾರ್ಮಿಕರ ಹೋರಾಟ

    ಕೊರೊನಾ ಭೀತಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು – ಸುರಕ್ಷತೆಗಾಗಿ ಕಾರ್ಮಿಕರ ಹೋರಾಟ

    – ಈಗಲೂ ಬಯೋಮೆಟ್ರಿಕ್ ಬಳಕೆ

    ರಾಯಚೂರು: ಜಿಲ್ಲೆಯ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಸೋಂಕು ಪೀಡಿತ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆತಂಕದಲ್ಲೇ ಉದ್ಯೋಗಕ್ಕೆ ಬರುತ್ತಿರುವ ಕಾರ್ಮಿಕರು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದು, ಅಗತ್ಯ ಕೋವಿಡ್ ಸುರಕ್ಷತಾ ಕ್ರಮ ಕೈಗೊಳ್ಳಲು ಆಗ್ರಹಿಸಿ ಹೋರಾಟ ನಡೆಸಿದ್ದಾರೆ.

    ಕೋವಿಡ್-19 ಎರಡನೇ ಅಲೆಯಿಂದ ವಿದ್ಯುತ್ ಕೇಂದ್ರದಲ್ಲಿ ಸೂಕ್ತ ರಕ್ಷಣೆ ನೀಡಲು ಆಗ್ರಹಿಸಿ ಆರ್.ಟಿ.ಪಿಎಸ್ ಕಾರ್ಮಿಕರು ಹೋರಾಟ ನಡೆಸಿದ್ದಾರೆ. ಶೇಕಡಾ 50 ರಷ್ಟು ನೌಕರರನ್ನು ರೊಟೇಶನ್ ಮಾದರಿ ಜಾರಿ ತಂದು ಕೆಲಸ ಮಾಡಿಸಿಕೊಳ್ಳಬೇಕು, ಬಯೋಮೆಟ್ರಿಕ್ ಪದ್ದತಿಯನ್ನು ನಿಯಮಾನುಸಾರ ನಿಲ್ಲಿಸಬೇಕು ಎಂದು ಉದ್ಯೋಗಿಗಳು ಆಗ್ರಹಿಸಿದ್ದಾರೆ.

    ಕೊರೊನಾ ಸೋಂಕಿನಿಂದ ಆರ್.ಟಿ.ಪಿಎಸ್‍ನ ಐದು ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈವರೆಗೆ ಶಕ್ತಿನಗರದಲ್ಲಿ 12ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಕಾರ್ಮಿಕರು ಆರೋಪಿಸಿಸಿದ್ದು, ಆರ್.ಟಿ.ಪಿಎಸ್ ನ 70 ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರು ಸೇರಿ 200 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವೈಟಿಪಿಎಸ್ ನ 50 ಕ್ಕೂ ಹೆಚ್ಚು ನೌಕರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಆತಂಕಗೊಂಡಿರುವ ಕಾರ್ಮಿಕರು ರಕ್ಷಣೆಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

    ಆರ್.ಟಿ.ಪಿಎಸ್ ನಲ್ಲಿ ಒಟ್ಟು 2000 ಜನ ಮತ್ತು ವೈಟಿಪಿಎಸ್ ನಲ್ಲಿ ಒಟ್ಟು 1500 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಕಾರ್ಮಿಕರಿಗಾಗಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕು. ಕೆಪಿಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ದೊರಕಿಸಬೇಕು. ಶಕ್ತಿನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು ಎಂದು ಕಾರ್ಮಿಕರು ಪಟ್ಟುಹಿಡಿದಿದ್ದಾರೆ.

    ವಿದ್ಯುತ್ ಬೇಡಿಕೆ ಕುಸಿತವಾಗಿರುವುದರಿಂದ ಆರ್.ಟಿ.ಪಿಎಸ್ ನ ಎಂಟು ಘಟಕಗಳಲ್ಲಿ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ವೈಟಿಪಿಎಸ್‍ನ ಎರಡು ಘಟಕಗಳಲ್ಲಿ ಒಂದು ಘಟಕ ಮಾತ್ರ ಕೆಲಸ ಮಾಡುತ್ತಿದೆ. ಹೀಗಿದ್ದರೂ ಗರ್ಭಿಣಿಯರು, ವಯಸ್ಸಾದವರು, ಅಂಗವಿಕಲರಿಗೆ ಬಯೋಮೆಟ್ರಿಕ್ ನಿಂದ ವಿನಾಯಿತಿ ನೀಡಿಲ್ಲ. ಎಷ್ಟೇ ಬಾರಿ ಪತ್ರ ವ್ಯವಹಾರ ಮಾಡಿದರೂ ಸರ್ಕಾರ, ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.

  • ರಾಜ್ಯದಲ್ಲಿ ಕುಸಿದ ವಿದ್ಯುತ್ ಬೇಡಿಕೆ: ಲಾಕ್‍ಡೌನ್ ನಡುವೆ ಆರ್‍ಟಿಪಿಎಸ್‍ನ 68 ಕಾರ್ಮಿಕರ ವಜಾ

    ರಾಜ್ಯದಲ್ಲಿ ಕುಸಿದ ವಿದ್ಯುತ್ ಬೇಡಿಕೆ: ಲಾಕ್‍ಡೌನ್ ನಡುವೆ ಆರ್‍ಟಿಪಿಎಸ್‍ನ 68 ಕಾರ್ಮಿಕರ ವಜಾ

    – ಕೆಲಸದಿಂದ ತಗೆಯದಂತೆ ಕಾರ್ಮಿಕರಿಂದ ಹೋರಾಟ

    ರಾಯಚೂರು: ಅಂಫಾನ್ ಚಂಡಮಾರುತ ಹಿನ್ನೆಲೆ ವಿದ್ಯುತ್ ಬೇಡಿಕೆ ತಗ್ಗಿದ್ದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ಕೇವಲ ಎರಡು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.

    ವಿದ್ಯುತ್ ಬೇಡಿಕೆ ಕುಸಿತವಾಗಿರುವುದು ಕಾರ್ಮಿಕರ ಕೆಲಸವನ್ನೂ ಕಸಿದುಕೊಂಡಿದೆ. ಇಲ್ಲಿನ ಶಕ್ತಿನಗರದಲ್ಲಿರುವ ಆರ್‍ಟಿಪಿಎಸ್ ವಿದ್ಯುತ್ ಕೇಂದ್ರಕ್ಕೆ ಒಟ್ಟು 8 ಘಟಕಗಳಿಂದ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದು, ಈಗ ಎರಡು ಘಟಕಗಳಿಂದ ಕೇವಲ 282 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಸದ್ಯ 9,270 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಜಲ ಹಾಗೂ ಪವನ ಶಕ್ತಿಯಿಂದ ಉತ್ಪಾದನೆ ಹೆಚ್ಚಳವಾಗಿದೆ. ಹೀಗಾಗಿ ಶಾಖೋತ್ಪನ್ನ ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಕಡಿತಗೊಂಡಿದೆ.

    ವಿದ್ಯುತ್ ಬೇಡಿಕೆ ಕುಸಿತದಿಂದಾಗಿ ಆರ್‍ಟಿಪಿಎಸ್ 8ನೇ ಘಟಕದಲ್ಲಿ ಕೆಲಸಮಾಡುತ್ತಿದ್ದ 68 ಜನ ಕೆಲಸ ಕಳೆದುಕೊಂಡಿದ್ದಾರೆ. ಗುತ್ತಿಗೆಯ ಅವಧಿ ಮುಗಿದಿದ್ದು, ಇದೇ ವೇಳೆ ವಿದ್ಯುತ್ ಬೇಡಿಕೆ ಕುಸಿದಿದ್ದರಿಂದ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗಿದೆ. ಇದರಿಂದ ಕಾರ್ಮಿಕರು ಹೋರಾಟ ನಡೆಸಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸದಿಂದ ವಜಾ ಮಾಡಿರುವುದಕ್ಕೆ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸದಿಂದ ತೆಗೆಯಬಾರದು, ವೇತನ ಕಡಿಮೆ ಮಾಡಬಾರದು ಎಂಬ ನಿಯಮವಿದ್ದರೂ ಆರ್‍ಟಿಪಿಎಸ್ ಕಾರ್ಮಿಕರನ್ನು ಕೆಸಲದಿಂದ ತೆಗೆದಿದೆ.

  • ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಫೋಟ – ತಪ್ಪಿದ ಮಹಾ ದುರಂತ

    ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಫೋಟ – ತಪ್ಪಿದ ಮಹಾ ದುರಂತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರದಲ್ಲಿ ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ಕಾಳಿ ವಿದ್ಯುತ್‍ಗಾರದ ವಿದ್ಯುತ್ ಸಂಗ್ರಹಣಾಗಾರದಲ್ಲಿ  ಟ್ರಾನ್ಸ್‌ಫಾರ್ಮ್‌ ಸ್ಫೋಟಗೊಂಡಿದೆ.

    ಸ್ಫೋಟದ ತೀವ್ರತೆಗೆ ಹಲವು ಟ್ರಾನ್ಸ್‌ಫಾರ್ಮ್‌ಗಳು ಸಂಪೂರ್ಣ ನಾಶವಾಗಿದ್ದು, ಅದೃಷ್ಟವಶಾತ್ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಇಂಜಿನಿಯರ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾನ್ಸ್‌ಫಾರ್ಮ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಈ ಸ್ಟೋಟ ನಡೆದಿದೆ ಎನ್ನಲಾಗಿದ್ದು, ಸೋಮವಾರ ಸಂಜೆ ವೇಳೆ ಘಟನೆ ನಡೆದಿದ್ದು, ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಸ್ಫೋಟಗೊಂಡ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು.

    ಸ್ಫೋಟಗೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಈ ಹಿಂದೆ ಜೋಗಾದ ಮಹಾತ್ಮ ಗಾಂಧಿ ವಿದ್ಯುತ್‍ಗಾರದಲ್ಲಿ ಬೆಂಕಿ ಅನಾಹುತವಾಗಿ ಕೋಟಿಗಟ್ಟಲೆ ರೂ. ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಇದೇ ಮಾದರಿಯಲ್ಲಿ ಕಾಳಿ ವಿದ್ಯುತ್‍ಗಾರದಲ್ಲೂ ಅಗ್ನಿ ಅವಗಡ ನಡೆದಿದೆ.

  • ಜೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರ ಜಲಾವೃತ

    ಜೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರ ಜಲಾವೃತ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ 24 ಗಂಟೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು, ವ್ಯಾಪಾರಸ್ಥರು ಪರದಾಡುತ್ತಿದ್ದಾರೆ.

    ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ 33 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರ ಜಲಾವೃತವಾಗಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಮಳೆಯ ಆರ್ಭಟದ ಜೊತೆಗೆ ಎನ್ ಆರ್‌ಬಿಸಿ ಕಾಲುವೆ ನೀರು ವಿದ್ಯುತ್ ಕೇಂದ್ರಕ್ಕೆ ನುಗ್ಗಿದೆ. ಇದರಿಂದ ಸುಮಾರು 5 ಅಡಿಯಷ್ಟು ನೀರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿಂತಿದ್ದು, ಹೈವೊಲ್ಟೇಜ್ ಟ್ರಾನ್ಸ್ ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ. ಪರಿಣಾಮ ವಿದ್ಯುತ್ ವಿತರಣೆ ಸ್ಥಗಿತಗೊಳಿಸಲಾಗಿದೆ.

    ಹೀಗಾಗಿ ಕಳೆದ 24 ಗಂಟೆಯಿಂದ ಕರೆಂಟ್ ಇಲ್ಲದೆ ಜಾಲಹಳ್ಳಿ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಜೆಸ್ಕಾಂ ಅಧಿಕಾರಿಗಳು ತಕ್ಷಣ ಎಚ್ಚೆತ್ತು ವಿದ್ಯುತ್ ಪೂರೈಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ಇತ್ತ ಕೃಷ್ಣಾ ನದಿ ಪ್ರವಾಹ ಇಳಿಕೆಯಾದರೂ ಅದರ ಪರಿಣಾಮಗಳು ಮಾತ್ರ ಮುಂದುವರಿದಿವೆ. ಪ್ರವಾಹ ಇಳಿಕೆ ಹಿನ್ನೆಲೆಯ ಗ್ರಾಮಗಳಿಗೆ ನುಗ್ಗಿದ್ದ ನೀರು ಹರಿದು ಹೋಗಿದೆ. ಆದರೆ ಗ್ರಾಮಗಳು ಈಗ ಕೆಸರಿನಿಂದ ತುಂಬಿಕೊಂಡಿದ್ದು ಜನ ಓಡಾಡಲು ಕಷ್ಟವಾಗಿದೆ. ಲಿಂಗಸುಗೂರಿನ ಕಡದರಗಡ್ಡೆ ಶಾಲಾ ಆವರಣ ಕೆಸರುಗದ್ದೆಯಂತಾಗಿದೆ.

    ದೇವದುರ್ಗದ ಹೂವಿನಹೆಡಗಿ ಸೇತುವೆ ಬಳಿ ಇದ್ದ ನಾಲ್ಕು ಹೋಟೆಲ್‍ಗಳು ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದ್ದು, ಅವಶೇಷಗಳು ಮಾತ್ರ ಉಳಿದಿವೆ. ಜಿಲ್ಲೆಯ ಹೂವಿನ ಹೆಡಗಿ, ಜಲದುರ್ಗಾ ಹಾಗೂ ಯರಗೋಡಿಯ ಸೇತುವೆಗಳು ಈಗ ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಸತತ ಹದಿನೈದು ದಿನಗಳ ನೀರಿನ ರಭಸಕ್ಕೆ ಸೇತುವೆಗಳು ಅಲ್ಲಲ್ಲಿ ಶಿಥಿಲಗೊಂಡಿದ್ದು, ತಾತ್ಕಾಲಿಕ ರಿಪೇರಿ ಕಾರ್ಯ ನಡೆಯುತ್ತಿದೆ.

  • ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ರಾಯಚೂರು: ವಿದ್ಯುತ್ ಅವಘಡದಿಂದಾಗಿ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್)ನಲ್ಲಿ ನಡೆದಿದೆ.

    ಸ್ವಿಚ್ ಗೇರ್ ನಲ್ಲಿ ಬೋರ್ಡ್ ಬದಲಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಕೆಎಎಸ್‍ಎಲ್ ಕಂಪನಿ ಗುತ್ತಿಗೆ ಕಾರ್ಮಿಕ ಮಹೇಶ್ ಗಾಯಗೊಂಡಿದ್ದಾರೆ. ಹೊಟ್ಟೆ, ತೊಡೆ, ಕಾಲಿನ ಭಾಗ ಭಾಗಶ: ಸುಟ್ಟಿದ್ದು, ಮಹೇಶ್ ಸ್ಥಿತಿ ಗಂಭೀರವಾಗಿದೆ.

    ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಮಹೇಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಸೌಲಭ್ಯ ಹಾಗೂ ವೈದ್ಯರಿಲ್ಲದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ವೈಟಿಪಿಎಸ್ ಹಾಗೂ ಉಪ ಗುತ್ತಿಗೆ ಪಡೆದಿರುವ ಕೆಎಎಸ್‍ಎಲ್ ಕಂಪನಿ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕನಿಷ್ಠ ಮಟ್ಟದ ಸುರಕ್ಷತೆಯೂ ಇಲ್ಲದೆ ವಿದ್ಯುತ್ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಗಾಯಗಳಾಗಿವೆ.

    ಘಟನೆಯಿಂದ ಭಯಭೀತರಾಗಿರುವ ವೈಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.