Tag: Power Plant

  • ಉಕ್ರೇನ್ ಪವರ್ ಪ್ಲಾಂಟ್‍ನಲ್ಲಿ ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ

    ಉಕ್ರೇನ್ ಪವರ್ ಪ್ಲಾಂಟ್‍ನಲ್ಲಿ ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ

    ಮಾಸ್ಕ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ತನ್ನ ರಾಷ್ಟ್ರ ಧ್ವಜವನ್ನು ಉಕ್ರೇನ್‍ನಲ್ಲಿರುವ ಕಾಖೋವ್ಕಾ ಜಲವಿದ್ಯುತ್ ಸ್ಥಾವರದ ಮೇಲೆ ಹಾರಿಸಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಉಕ್ರೇನ್‍ನ ಕಾಖೋವ್ಕಾದಲ್ಲಿರುವ ಡ್ನೀಪರ್ ನದಿಗೆ ಅಡ್ಡಲಾಗಿ ಡ್ಯಾಮ್ ಕಟ್ಟಿ ಜಲ ವಿದ್ಯತ್ ಸ್ಥಾವರವನ್ನು ಸ್ಥಾಪಿಸಿತ್ತು. ಈ ವಿದ್ಯುತ್ ಸ್ಥಾವರದಿಂದ ಉಕ್ರೇನ್‍ನ ಸಾಕಷ್ಟು ಭಾಗಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತಿತ್ತು. ಇದೀಗ ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮಿಲಿಟರಿ ಪಡೆ ಪವರ್ ಪ್ಲಾಂಟ್ ವಶಪಡಿಸಿಕೊಂಡು ರಷ್ಯಾದ ರಾಷ್ಟ್ರ ಧ್ವಜವನ್ನು ಹಾರಿಸಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಈಗಾಗಲೇ ರಷ್ಯಾ, ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಬಾಂಬ್ ಮತ್ತು ಇತರ ಯುದ್ಧೋಪಕರಣಗಳೊಂದಿಗೆ ರಷ್ಯಾದ ಮಿಲಿಟರಿ ಪಡೆ ಕಾಖೋವ್ಕಾದ ನಗರ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಇದುವರೆಗೆ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿ 137 ಮಂದಿ ಹತರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಈ ಯುದ್ಧದ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಮೃತರನ್ನು ಹೀರೋಗಳು ಎಂದು ಕರೆದಿದ್ದಾರೆ. ರಷ್ಯಾ ದಾಳಿ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

  • ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

    ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

    ರಾಯಚೂರು: ದೇಶದಲ್ಲಿಯೇ ಹಿಂದುಳಿದಿರುವ ರಾಯಚೂರು ನಗರಕ್ಕೆ ನಾಗರಿಕ ವಿಮಾನ ನಿಲ್ದಾಣ ಆರಂಭದ ಕನಸು ಚಿಗುರೊಡೆದಿದೆ. ಇಂದು ವಿಮಾನ ನಿಲ್ದಾಣಕ್ಕಾಗಿ ತಜ್ಞರ ತಂಡ ರಾಯಚೂರಿಗೆ ಆಗಮಿಸಿ ಸ್ಥಳ ಪರಿಶೀಲಿಸಿದೆ. ಆದರೆ ಈಗ ಗುರುತಿಸಿರುವ ಸ್ಥಳದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಚಿಮಣಿ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಯೋಜನೆ ಕೈತಪ್ಪುತ್ತಾ ಎನ್ನುವ ಅನುಮಾನ ಶುರುವಾಗಿದೆ.

    ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲಿಯೇ ಅತ್ಯಂತ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಕೃಷಿಯೊಂದಿಗೆ ಕೈಗಾರಿಕೆಗೆ ವಿಫುಲ ಅವಕಾಶಗಳಿವೆ. ಅಲ್ಲದೆ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ಸ್ಥಾವರಗಳು ಇಲ್ಲಿವೆ. ಆದರೆ ಇಲ್ಲಿ ಬೃಹತ್ ಕೈಗಾರಿಕೆಗಳಿಗೆ ವಿಮಾನ ನಿಲ್ದಾಣ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದಿನಿಂದ ನೆನೆಗುದಿಗೆ ಬಿದ್ದ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.

    ಇಂದು ವಿಮಾನ ತಜ್ಞರಾಗಿರುವ ಕ್ಯಾಪ್ಟನ್ ಶಾಮಂತ ನೇತ್ರತ್ವದ ತಂಡ ಭೇಟಿ ನೀಡಿತು. ಈ ತಂಡವು ಈಗಾಗಲೇ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿದ ವೈಟಿಪಿಎಸ್ ಪಕ್ಕದ ಭೂಮಿ ಪರಿಶೀಲಿಸಿದ್ದು, ಇಲ್ಲಿಯ ಚಿಮಣಿ ಹಾಗು ವಿದ್ಯುತ್ ಲೈನ್‍ಗಳು ಹಾಗು ಜುರಾಲಾದಿಂದ ಹೈ ಟೆನ್ಶನ್ ವಿದ್ಯುತ್ ಹಾಯ್ದು ಹೋಗುವುದರಿಂದ ಈ ಸ್ಥಳ ಎಷ್ಟು ಸೂಕ್ತ ಎಂಬ ಬಗ್ಗೆ ಪರಿಶೀಲಿಸಿತು.

    ಈ ಹಿಂದೆ ಯರಮರಸ್ ಏಗನೂರು ಸೀಮಾಂತರದಲ್ಲಿ ವೈಟಿಪಿಎಸ್ ನಿರ್ಮಾಣವಾಗದ ಮುನ್ನ ವಿಮಾನ ನಿಲ್ದಾಣಕ್ಕಾಗಿ 420 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ವೈಟಿಪಿಎಸ್ ನಿರ್ಮಾಣದ ನಂತರ ಈ ಸ್ಥಳ ಸೂಕ್ತವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವೇಳೆ ರಾಯಚೂರು ತಾಲೂಕಿನ ಸಿಂಗನೋಡಿ ಬಳಿಯಲ್ಲಿ ಸುಮಾರು 600 ಎಕರೆ ಭೂಮಿ ಗುರುತಿಸಲಾಗುದ್ದು, ಇವುಗಳಲ್ಲಿ ಯಾವುದು ಸೂಕ್ತ ಹಾಗೂ ಆರ್ಥಿಕ ಹೊರೆ ಕಡಿಮೆಯಾಗಬಹುದು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

    ಅಲ್ಲದೆ, ವೈಟಿಪಿಎಸ್ ಪಕ್ಕ ಗುರುತಿಸಿರುವ ಸ್ಥಳವು ಒಂದಿಷ್ಟು ಐತಿಹಾಸಿಕ ಮಹತ್ವ ಪಡೆದುಕೊಂಡಿದ್ದು, 1954ರಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ರಾಯಚೂರು ಮಾರ್ಗವಾಗಿ ಹೋಗುವಾಗ ವಿಮಾನದಲ್ಲಿ ತಾಂತ್ರಿಕ ತೊಂದರೆಯಾಗಿ ಇದೇ ಸ್ಥಳದಲ್ಲಿ ವಿಮಾನ ಇಳಿಸಲಾಗಿತ್ತು. ಇದೇ ಕಾರಣಕ್ಕೆ ಇಲ್ಲಿಯೇ ವಿಮಾನ ನಿಲ್ದಾಣವಾಗಲಿ ಎಂಬ ವಾದವು ಇದೆ. ಇನ್ನೂ ಕೆಲವರು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದೆ. ಕಲಬುರಗಿಗಿಂತ ಮೊದಲೇ ಪ್ರಸ್ತಾಪಿತವಾದ ರಾಯಚೂರು ವಿಮಾನ ನಿಲ್ದಾಣ ಎಲ್ಲಿಯಾದರೂ ಆಗಲಿ ಬೇಗ ಆರಂಭವಾಗಲಿ ಎಂದು ಜನರು ಆಶಿಸುತ್ತಿದ್ದಾರೆ.

  • ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ

    ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರವು 766 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ನಡೆಸುವ ಮೂಲಕ ದೇಶದಲ್ಲೇ ಮೊದಲ ನಿರಂತರ ವಿದ್ಯುತ್ ಉತ್ಪಾದನಾ ಘಟಕವಾಗಿದ್ದು, ವಿಶ್ವದಲ್ಲೇ ನಾಲ್ಕನೇ ಕೇಂದ್ರ ಎಂಬ ಹೊಸ ದಾಖಲೆ ನಿರ್ಮಿಸಿದೆ.

    ಕೈಗಾದಲ್ಲಿ ಸೆಪ್ಟೆಂಬರ್ 2000 ನೇ ಇಸವಿಯಲ್ಲಿ ಮೊದಲ ಯೂನಿಟ್ ಪ್ರಾರಂಭವಾಗಿದ್ದು, ಪ್ರಸಕ್ತ ನಾಲ್ಕು ಯೂನಿಟ್ ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಯೂನಿಟ್ 220 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯ ವಿದ್ದು, 2016 ರಿಂದ 4019 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. 2000 ನೇ ಇಸವಿಯಲ್ಲಿ ಪ್ರಾರಂಭವಾದ ಮೊದಲ ಯೂನಿಟ್, ಈವರೆಗೆ 25 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದೆ.

    ಯೂನಿಟ್ 2,3 ಸತತ 464 ದಿನ, 4ನೇ ಯೂನಿಟ್ 525 ದಿನಗಳ ಕಾಲ ಕಾರ್ಯನಿರ್ವಹಿಸಿವೆ. ಮೊದಲ ಯೂನಿಟ್ 2016ರ ಮೇ 13 ರಂದು ಬೆಳಗ್ಗೆ 9:20 ಕ್ಕೆ ವಿದ್ಯುತ್ ಉತ್ಪಾದನೆಗೆ ಪ್ರಾರಂಭಿಸಿದ್ದು, ಅಂದಿನಿಂದ ನಿರಂತರವಾಗಿ ಚಾಲನೆಯಿದೆ. ಈ ಮೂಲಕ ರಾಜಸ್ಥಾನದ ರಾವತ್ ಭಾಟದಲ್ಲಿರುವ ಅಣು ವಿದ್ಯುತ್ ಕೇಂದ್ರದ ದಾಖಲೆಯನ್ನು ಹಿಂದಿಕ್ಕಿದೆ. ರಾವತ್ ಭಾಟದ ಕೇಂದ್ರದ 5ನೇ ಘಟಕವು 2012ರ ಆಗಸ್ಟ್ 2 ರಿಂದ 2014 ರ ಸೆಪ್ಬೆಂಬರ್ 17ರವರೆಗೆ ಒಟ್ಟು 765 ದಿನ ನಿರಂತರ ಚಾಲನೆಯಲ್ಲಿತ್ತು.

    ದೇಶದಲ್ಲಿ ಅಣು ಶಕ್ತಿ ಆಧರಿಸಿ ಅತೀ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಮೂರನೇ ದೊಡ್ಡ ಕೇಂದ್ರ ಎಂಬ ಹೆಗ್ಗಳಿಕೆಗೆ ಕೈಗಾ ಪಾತ್ರವಾಗಿದೆ. ಈ ಕೇಂದ್ರವನ್ನು ದಕ್ಷಿಣ ಪವರ್ ಗ್ರಿಡ್ ಗೆ ಸಂಪರ್ಕಿಸಲಾಗಿದ್ದು, ನಮ್ಮ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಹಾಗೂ ಪುದುಚೇರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

    767 ದಿನಗಳ ಕಾಲ ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನ ಮಾಡಿದ ಮೊದಲ ಘಟಕ ಎನ್ನುವ ಹೆಗ್ಗಳಿಕೆ ಪಡೆದಿದೆ. ಪ್ರಪಂಚದಲ್ಲಿಯೇ ನಾಲ್ಕನೇ ಘಟಕ ಅನ್ನುವ ದಾಖಲೆಯನ್ನ ಸಹ ಇದೀಗ ಕೈಗಾ ಪಡೆದಿದೆ. ಇಂಗ್ಲೆಂಡ್ ನ ಹೇಶಮ್ ಸ್ಥಾವರದಲ್ಲಿ 940 ದಿನಗಳ ಕಾಲ ವಿದ್ಯುತ್ ಉತ್ಪಾದಿಸಿ ಮೊದಲ ಸ್ಥಾನದಲ್ಲಿ ಇದ್ದರೆ, ಕೆನಡಾದ ಒಂಟಾರಿಯಾದಲ್ಲಿರುವ ಪಿಕರಿಕ್ ಸ್ಥಾವರದಲ್ಲಿ 894 ದಿನ ಉತ್ಪಾದಿಸಿ ಎರಡನೇ ಸ್ಥಾನ ಪಡೆದಿತ್ತು. ಸ್ಕಾಟ್ಲೆಂಡ್ ನ ಟೋರ್ನೆಸ್ ಸ್ಥಾವರದಲ್ಲಿ 825 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿ ಮೂರನೇ ಸ್ಥಾನದಲ್ಲಿತ್ತು. ಇದೀಗ ನಾಲ್ಕನೇ ಸ್ಥಾನದಲ್ಲಿ ಕೈಗಾ ಸೇರ್ಪಡೆಯಾಗಿದೆ. ಇನ್ನು ಒಟ್ಟು ಸುಮಾರು 1530 ಸಿಬ್ಬಂದಿಗಳು ಈ ಸಾಧನೆಯಲ್ಲಿ ಕಾರ್ಯನಿರ್ವಹಿಸಿದ್ದು, ಇದು ಇಡೀ ದೇಶಕ್ಕೆ ಹೆಮ್ಮೆಯನ್ನ ತಂದಿದೆ ಎಂದು ಕೈಗಾ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೈಗಾದಲ್ಲಿ ನಾಲ್ಕು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದ್ದು, ಮೊದಲ ಸ್ಥಾವರ 767 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿದರೆ, ಎರಡನೇ ಸ್ಥಾವರ, 464 ದಿನ, ಮೂರನೇ ಸ್ಥಾವರ 467ದಿನ ಹಾಗೂ ನಾಲ್ಕನೇ ಸ್ಥಾವರ 550 ದಿನಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದೆ. ಪ್ರತಿ ಘಟಕದಲ್ಲಿ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನ ಮಾಡುತ್ತಿದ್ದು, ದೇಶದಲ್ಲಿಯೇ ಪ್ರಮುಖ ಘಟಕದ ಸಾಲಿಗೆ ಕೈಗಾ ಅಣು ವಿದ್ಯುತ್ ಸ್ಥಾವರ ಸೇರ್ಪಡೆಯಾಗಿದೆ.

  • ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

    ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

    ನವದೆಹಲಿ: 30 ವರ್ಷ ಹಳೆಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ(ಎನ್‍ಟಿಪಿಸಿ) ಬಾಯ್ಲರ್ ಸ್ಫೋಟಗೊಂಡ ಪರಿಣಾಮ 10 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.

    ಉಚಾಹಾರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಬಾಯ್ಲರ್ ಪೈಪ್ ಒಡೆದು ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

    ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಗಾಯಗೊಂಡವರ ಪೈಕಿ ಹಲವರ ದೇಹ ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.

    ಗಾಯಗೊಂಡವರನ್ನು ಎನ್‍ಟಿಪಿಸಿ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಯ್ಲರ್ ಪೈಪ್ ಒಡೆದ ಬಳಿಕ ಘಟಕವನ್ನು ಈಗ ಮುಚ್ಚಲಾಗಿದೆ. 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊದಿರುವ 5 ಘಟಕ 1988ರಲ್ಲಿ ಆರಂಭಗೊಂಡಿತ್ತು. 500 ಮೆಗಾ ವ್ಯಾಟ್ ಸಾಮರ್ಥ್ಯದ  6ನೇ ಘಟಕ ಈ ವರ್ಷವೇ ಆರಂಭಗೊಳ್ಳಬೇಕಿತ್ತು.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.