Tag: poverty

  • ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿ ಪಡೆದ ಚಿತ್ರದುರ್ಗದ ಗೌಸಿಯಾಗೆ ವೈದ್ಯಳಾಗೋ ಕನಸು, ಬೇಕಿದೆ ನೆರವು

    ಜಿಲ್ಲಾ ಯುವವಿಜ್ಞಾನಿ ಪ್ರಶಸ್ತಿ ಪಡೆದ ಚಿತ್ರದುರ್ಗದ ಗೌಸಿಯಾಗೆ ವೈದ್ಯಳಾಗೋ ಕನಸು, ಬೇಕಿದೆ ನೆರವು

    ಚಿತ್ರದುರ್ಗ: ಈಕೆಯ ಹೆಸರು ಗೌಸಿಯಾ ಭಾನು. ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ನಿವಾಸಿ. ತಂದೆ ಆಟೋಚಾಲಕ. ಗಳಿಸೋ ಅಷ್ಟೋ ಇಷ್ಟೋ ಹಣವೇ ಮನೆಗೆ ಆಧಾರ. ಅಪ್ಪನ ಕನಸಿನಂತೆ ಮಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಬಾರಿ ಹತ್ತನೇ ತರಗತಿಯಲ್ಲಿ ಶೇ 95 ರಷ್ಟು ಅಂಕಗಳನ್ನ ಪಡೆದುಕೊಂಡಿದ್ದಾಳೆ. ಆದ್ರೆ ಪೋಷಕರ ಬಡತನ ಇದೀಗ ಗೌಸಿಯಾಳ ವೈದ್ಯಳಾಗೋ ಕನಸಿಗೆ ಅಡ್ಡಿಯಾಗಿದೆ.

    ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು, ರಾಷ್ಟ್ರೀಯ ಎನ್‍ಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹಳಾಗಿದ್ದಾಳೆ. ಇದರ ಜೊತೆಗೆ ಈ ಪ್ರತಿಭಾವಂತೆ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಯನ್ನೂ ಕೂಡ ತನ್ನ ಮುಡಿಗೇರಿಸಿಕೊಂಡಿದ್ದಾಳೆ.

    ಆದ್ರೆ ಮಗಳ ಈ ಸಾಧನೆಯ ಸಂತಸದ ನಡುವೆಯೇ ಮುಂದೆ ಓದಿಸಲು ಆಗ್ತಾ ಇಲ್ಲವಲ್ಲಾ ಅನ್ನೋ ಕೊರಗು ಪೋಷಕರನ್ನ ಕಾಡುತ್ತಿದೆ. ಬಡತನವೇ ಮುಂದಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡುವಂತೆ ಮಾಡಿದೆ. ಈಕೆಗೆ ಯಾರಾದ್ರೂ ಸಹಾಯ ಮಾಡಿದ್ರೆ ಉತ್ತಮ ಶಿಕ್ಷಣದ ಅವಕಾಶ ಸಿಕ್ಕರೆ ತನ್ನ ಕನಸು ನನಸು ಮಾಡಿಕೊಳ್ಳಲಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಓದಲು ಆಸಕ್ತಿ ಇರುವ ಈಕೆಗೆ ದಾನಿಗಳ ನೆರವಿನ ಹಸ್ತ ಬೇಕಿದೆ.

    https://www.youtube.com/watch?v=ew_jzXoIeD4

  • ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಕಣ್ಣೂರು: ಕೇರಳದ ಪ್ಲಸ್ ಟು ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ತೆಗೆದು ಪಾಸಾಗಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಹೌದು. ಕಣ್ಣೂರು ಜಿಲ್ಲೆಯ ಮಾಲೂರಿನ ಶಿವಪುರಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಫ್ಸೀನಾ(17) ಪ್ಲಸ್ ಟು ತರಗತಿಯಲ್ಲಿ ಒಟ್ಟು 1200 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ  1180 ಅಂಕಗಳಿಸಿ ಪಾಸಾಗಿದ್ದಳು. ಈಕೆಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಅಭಿನಂದನೆಗಳ ಸ್ವೀಕರಿಸಿದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬುಧವಾರ ನೇಣಿಗೆ ಶರಣಾಗಿದ್ದಾಳೆ.

    ತನ್ನ ಮರಣ ಪತ್ರದಲ್ಲಿ ರಫ್ಸಿನಾ, ನನ್ನ ಜೀವನ ನನ್ನ ಆಯ್ಕೆ, ನನ್ನ ಜೀವನದಲ್ಲಿ ಬೇರೆಯವರು ಮಧ್ಯಪ್ರವೇಶಿಸುವುದು ನನಗೆ ಇಷ್ಟ ಇಲ್ಲ ಎಂದು ಬರೆದಿದ್ದಳು.

    ಮಾಧ್ಯಮಗಳ ವರದಿಯಿಂದ ಆತ್ಮಹತ್ಯೆ?
    ತೀವ್ರ ಬಡತನದಲ್ಲಿ ಓದಿ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ ರಫ್ಸೀನಾ ಬಡತನದ ವಿಷಯವನ್ನು ತನ್ನ ಸ್ನೇಹಿತರಲ್ಲೂ ಹೇಳಿರಲಿಲ್ಲ. ಮಾಧ್ಯಮಗಳು ತನ್ನ ಸಾಧನೆ ವಿಚಾರಕ್ಕಿಂತಲೂ ಬಡತನದ ವಿಚಾರವನ್ನೇ ಮುಂದಿಟ್ಟುಕೊಂಡು ಸುದ್ದಿಯನ್ನು ಪ್ರಕಟಿಸಿದ್ದಕ್ಕೆ ಬೇಸರಗೊಂಡಿದ್ದಳು.

    ಈಕೆಯ ಬಡತನವನ್ನು ನೋಡಿ ಹಲವು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಸಹಕಾರವನ್ನು ನೀಡಲು ಮುಂದೆ ಬಂದಿತ್ತು. ಬುಧವಾರ ಶಿವಪುರಂ ಹೈಯರ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಕೆಯ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಅಭಿನಂದನೆ ಸ್ವೀಕರಿಸಿದ ಬಳಿಕ ಆಕೆ ನೇಣಿಗೆ ಶರಣಾಗಿದ್ದಾಳೆ.

    ಮಾಧ್ಯಮಗಳು ಈಕೆಯ ಶಿಕ್ಷಣಕ್ಕೆ ಜನರು ಮುಂದೆ ಸಹಕಾರ ನೀಡಲಿ ಎನ್ನುವ ದೃಷ್ಟಿಯಿಂದ, ರಫ್ಸೀನಾಗೆ ಹಣಕಾಸಿನ ಸಹಾಯ ನೀಡಿದವರ ಫೋಟೋಗಳನ್ನು ಸಹ ಸುದ್ದಿಯಲ್ಲಿ ಪ್ರಸಾರ ಮಾಡಿತ್ತು. ಮಾಧ್ಯಮಗಳು ಈಕೆಯ ಸುದ್ದಿಯನ್ನು ಕವರ್ ಮಾಡಿದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.

  • ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಉಡುಪಿ: ಈಕೆ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಹುಡುಗಿ. ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ಚಿಕ್ಕಂದಿನಲ್ಲೇ ಪರಿಣತಿ ಪಡೆದಾಕೆ. ಇಷ್ಟೆಲ್ಲಾ ಇದ್ರೂ ಆಕೆಯ ಮನೆಯಲ್ಲಿ ಮಾತ್ರ ಕಿತ್ತು ತಿನ್ನುವ ಬಡತನ. ಇದರಿಂದ ಭರತನಾಟ್ಯಮತ್ತು ಕಲೆಯನ್ನು ಮುಂದುವರಿಸಲಾಗದ ಸ್ಥಿತಿ ಆಕೆಯದ್ದು. ಉಡುಪಿಯ ಕೋಟದಿಂದ ಬಂದಿರುವ ನಿಶಾ ಇದೀಗ ಬೆಳಕಿನ ನಿರೀಕ್ಷೆಯಲ್ಲಿದ್ದಾಳೆ.

    ನಿಶಾ ಉಡುಪಿ ಜಿಲ್ಲೆಯಲ್ಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಊರಿನವಳು. ಈಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಲೇ ನೋವುಂಡವಳು. ನಿಶಾಳ ತಾಯಿ ಶಾರದಾಗೆ ಎರಡೂ ಕಿಡ್ನಿ ಫೇಲಾಗಿತ್ತು. ತನ್ನ ದೊಡ್ಡಮ್ಮ ಕಿಡ್ನಿ ನೀಡಿ ನಿಶಾಳ ಅಮ್ಮನನ್ನು ಬದುಕಿಸಿದ್ದರು. ದೊಡ್ಡಮ್ಮ, ಅಜ್ಜಿ, ಮಾವ ಸೇರಿ ಮನೆಯಲ್ಲಿ ಒಟ್ಟು ಏಳು ಜನ. ಎಲ್ಲರನ್ನು ಸಾಕುವ ಜವಾಬ್ದಾರಿ ನಿಶಾಳ ಅಪ್ಪ ರಾಘುವಿನ ಹೆಗಲ ಮೇಲಿದೆ. ಮೇಸ್ತ್ರಿ ಕೆಲಸ ಮಾಡುವ ರಾಘುವಿಗೆ ಸಂಸಾರ ಸಾಗರವನ್ನು ಹೊತ್ತು ಈಜಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಿಶಾ ಚಿಕ್ಕಂದಿನಿಂದಲೇ ಕಷ್ಟದ ಜೊತೆಯಾಗಿ ಬೆಳೆದವಳು.

    ನಿಶಾ ಕೋಟ ವಿವೇಕ ಬಾಲಕಿಯರ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸ್ ವಿದ್ಯಾರ್ಥಿನಿ. ಓದಿನಲ್ಲಿ ಶಾಲೆಗೆ ಮುಂದಿರುವ ಈಕೆ ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ. ತನ್ನ ತಂಡದ ಜೊತೆ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾಳೆ. ಭರತನಾಟ್ಯ ಕ್ಲಾಸಿಗೆ ತಿಂಗಳಿಗೆ 300 ರೂಪಾಯಿ ಫೀಸ್ ಕೊಡೋದಕ್ಕೂ ಈಕೆಗೆ ಕಷ್ಟವಾಗುತ್ತಿದೆ. ಭರತನಾಟ್ಯ ಕಾರ್ಯಕ್ರಮಗಳಿದ್ದರೆ ನಿಶಾ ಬಳಿ ಸರಿಯಾದ ಕಾಸ್ಟ್ಯೂಮ್‍ಗಳಿಲ್ಲ. ವಿಶೇಷ ದಿನಗಳಲ್ಲಿ ತೊಡಲು ಒಳ್ಳೆಯ ಬಟ್ಟೆಗಳಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ನಿಶಾ ಸಹಾಯ ಅಪೇಕ್ಷಿಸಿದ್ದಾಳೆ.

    ಎಷ್ಟೇ ಬಡತನ ಇದ್ರೂ ಈಕೆಯಲ್ಲಿರುವ ಪ್ರತಿಭೆಗೆ ಕೊರತೆಯಾಗಿಲ್ಲ. ವಿದ್ಯೆಗೆ ಹಣ ಅಡ್ಡಿಯಾಗಿಲ್ಲ. ಇಷ್ಟರವರೆಗೆ ಹೇಗೋ ಆಗಿದೆ. ಮುಂದೆ ಪಿಯೂಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ವರ್ಷಕ್ಕೆ 15 ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಅನ್ನೋ ಕನಸು ಇಟ್ಟುಕೊಂಡಿದ್ದಾಳೆ ನಿಶಾ.