Tag: poverty

  • ಹೊಸ ತಂತ್ರಜ್ಞಾನ ಮಾಡೋ ಕನಸಿಗೆ ಅಡ್ಡಿ ಆಯ್ತು ಬಡತನ- ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡ್ತೀರಾ?

    ಹೊಸ ತಂತ್ರಜ್ಞಾನ ಮಾಡೋ ಕನಸಿಗೆ ಅಡ್ಡಿ ಆಯ್ತು ಬಡತನ- ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡ್ತೀರಾ?

    ಬೆಳಗಾವಿ: ಈ ವಿದ್ಯಾರ್ಥಿಗೆ ಏನಾದ್ರೂ ಸಾಧನೆ ಮಾಡಬೇಕೆಂಬ ಆಸೆ. ಹೊಸ ಹೊಸ ತಂತ್ರಜ್ಞಾನಗಳು ಗ್ರಾಮದ ಎಲ್ಲ ರೈತರಿಗೂ ಕಡಿಮೆ ಖರ್ಚಿನಲ್ಲಿ ದೊರೆಯಬೇಕೆಂಬುದು ಈ ವಿದ್ಯಾರ್ಥಿ ಕನಸು. ಆದರೆ ಬಡತನದ ಬೇಗೆಗೆ ಸಿಲುಕಿಕೊಂಡಿರುವ ಈ ಯುವಕ ಹೊಸ ಆವಿಷ್ಕಾಕರಗಳಿಗೆ  ಹಣ ಇರದ ಕಾರಣ ಕೈ ಚೆಲ್ಲಿ ಕುಳಿತುಕೊಂಡಿದ್ದಾನೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದ ರಾಜುವಿನ ಸಂಶೋಧನೆಗಳಿಗೆ ಬಡತನ ಅಡ್ಡಿಯಾಗಿದೆ. ಕೈಗಾರಿಕಾ ತರಬೇತಿ ಕೇಂದ್ರ ಐಟಿಐ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ರಾಜು ಸಣ್ಣ ವಯಸ್ಸಿನಲ್ಲಿಯೇ ತಂತ್ರಜ್ಞಾನ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ರಾಜುವಿಗೆ ಹೊಸ ಹೊಸ ಉಪಕರಣಗಳನ್ನು ಆವಿಷ್ಕಾರ ಮಾಡುವ ಆಸೆ. ಈಗ ಕೇವಲ 10 ಸಾವಿರ ಖರ್ಚು ಮಾಡಿ ಬೈಸಿಕಲ್‍ನ್ನೇ ಬೈಕ ಮಾಡಿ ಈ ಯುವಕ ಯಶಸ್ವಿಯಾಗಿದ್ದಾನೆ. ಇನ್ನೂ ಬ್ಯಾಟರಿ ಚಾಲಿತ ಬೈಕ್, ಡೈನೋಮೋ ಚಾಲಿತ ಬೈಕ್ ಸೇರಿದಂತೆ ಬ್ಯಾಟರಿ ಅಳವಡಿತ ರೈತರಿಗೆ ಅನುಕೂಲವಾಗುವಂಥ ಕೃಷಿ ಉಪಕರಣಗಳನ್ನು ತಯಾರಿಸಬೇಕೆಂದ ಆಸೆಯನ್ನು ಹೊಂದಿದ್ದಾನೆ.

    ರಕ್ಷಿ ಗ್ರಾಮದಲ್ಲಿ ಸಣ್ಣ ಮನೆಯಲ್ಲಿ ವಾಸವಾಗಿರುವ ಈ ಯುವಕನ ಕುಟುಂಬ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ತಂದೆ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಕುಟುಂಬ ನಡೆಸಬೇಕು. ಇಷ್ಟೆಲ್ಲ ಬಡತನವಿದ್ದರೂ ಈ ಯುವಕನ ಉತ್ಸಾಹ ಕಡಿಮೆಯಾಗದೇ ಯಾವತ್ತೂ ಹೊಸ ಹೊಸ ಆಲೋಚನೆಗಳಲ್ಲಿ ರಾಜು ತೊಡಗಿಕೊಂಡಿರುತ್ತಾನೆ. ಬಡತನದ ಬೇಗೆಯಲ್ಲಿ ಬಾಡುತ್ತಿರುವ ಇಂಥ ವಿಶೇಷ ಆಸಕ್ತಿ ಹೊಂದಿರುವ ಯುವನಿಗೆ ಪ್ರೋತ್ಸಾಹದ ಅಗತ್ಯವಿದೆ.

    ರೈತರ ಬಗೆಗಿನ ಕೃಷಿ ಉಪಕರಣಗಳು ಸೇರಿದಂತೆ ಕಡಿಮೆ ಖರ್ಚಿನಲ್ಲಿ ಈತ ಮಾಡುತ್ತಿರುವ ಆವಿಷ್ಕಾರಗಳು ಯಶಸ್ವಿಯಾಗಿ ಜನರ ಉಪಯೋಗಕ್ಕೆ ಬರುವಂತಾಗಲಿ ಎಂಬುವುದೇ ಪಬ್ಲಿಕ್ ಟಿವಿ ಆಶಯ.

     

    https://www.youtube.com/watch?v=YEll1DdE79k

  • ಹಸಿವು, ಬಡತನ- 200 ರೂ. ಗಾಗಿ 8 ತಿಂಗಳ ಹಸುಗೂಸನ್ನ ಮಾರಿದ್ರು

    ಹಸಿವು, ಬಡತನ- 200 ರೂ. ಗಾಗಿ 8 ತಿಂಗಳ ಹಸುಗೂಸನ್ನ ಮಾರಿದ್ರು

     

    ಅಗರ್ತಲಾ: ಹಸಿವು, ಬಡತನದ ಬೇಗುದಿ ತಾಳಲಾರದೇ ಕುಟುಂಬವೊಂದು ಕೇವಲ 200 ರೂಪಾಯಿಗೆ ತಮ್ಮ 8 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ಮನಕಲಕುವ ಘಟನೆ ತ್ರಿಪುರ ದ ಪೆಲಿಯಾಮೋರಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದು, ರಾಜ್ಯ ಆಡಳಿತ ಈ ಬಗ್ಗೆ ಮಾಹಿತಿ ಪಡೆಯಲು ಗ್ರಾಮಕ್ಕೆ ಅಧಿಕಾರಿಗಳ ತಂಡವನ್ನ ಕಳಿಸಿದೆ. ಹಸಿವಿನಿಂದ ಬಳಲಿ 8 ತಿಂಗಳ ಹೆಣ್ಣುಮಗುವನ್ನ ಮಾರಿಕೊಂಡ ಈ ಬುಡಕಟ್ಟು ಕುಟುಂಬಕ್ಕೆ ಸ್ಥಳೀಯ ಅಧಿಕಾರಿಗಳು ಊಟ ಹಾಗೂ ಬಟ್ಟೆಯನ್ನ ನೀಡಿದ್ದಾರೆ. ಮುಂದೆ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ. ಹಸುಗೂಸನ್ನು ಕುಟುಂಬಕ್ಕೆ ಹಿಂದಿರುಗಿಸಲಾಗಿದೆ.

    ನವಜಾತ ಶಿಶುವನ್ನ ಹೊರತುಪಡಿಸಿ ತಂದೆಗೆ ಈಗಾಗಲೇ 4 ಮಕ್ಕಳಿದ್ದರು. ಹಸಿವು ಹಾಗೂ ಬಡತನ ತಾಳಲಾರದೆ ಮಗಳನ್ನ ಮಾರಾಟ ಮಾಡಬೇಕಾಯಿತು ಎಂದು ಅವರು ಸ್ಥಳೀಯ ಅಧಿಕಾರಿಗಳಿಗೆ ಹೇಳಿದ್ದಾರೆ. ಅಲ್ಲದೆ ಬಡವರಿಗಾಗಿ ಇರುವ ಸರ್ಕಾರಿ ಯೋಜನೆಗಳು ತನ್ನ ಗ್ರಾಮವನ್ನ ತಲುಪಿಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಖೋವೈನ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಿಎಸ್ ಮಹಾತಮೇ, ಗ್ರಾಮದಲ್ಲಿರುವ ನಮ್ಮ ತಂಡ ಇದ್ದು, ಬುಡಕಟ್ಟು ಕುಟುಂಬಕ್ಕೆ ಅಗತ್ಯ ನೆರವು ಒದಗಿಸುತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

    ಈ ನಡುವೆ ಹಸಿವಿನಿಂದ ಬಳಲಿರೋ ಈ ಕುಟುಂಬದವರ ಹೆಸರು ಬಿಪಿಎಲ್ ಪಟ್ಟಿಯಲ್ಲಿ ಯಾಕಿಲ್ಲ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ವಿರೋಧ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.

    ಇದೊಂದು ನಾಚಿಗೆಗೇಡಿನ ಸಂಗತಿ. ಸರ್ಕಾರ ಬಡವರಿಗಾಗಿ ಏನೂ ಮಾಡಿಲ್ಲ. ಹೀಗಾಗಿ ಅವರು ಮಕ್ಕಳನ್ನ ಮಾರಾಟ ಮಾಡ್ತಿರೋದನ್ನ ನೋಡ್ತಿದ್ದೀರ. ಸ್ಥಳೀಯ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತ್ರಿಪುರಾದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ಮೇ ನಲ್ಲಿ ಮಹಿಳೆಯೊಬ್ಬರು 200 ರೂ. ಗಾಗಿ ಮಗುವನ್ನ ಆಟೋ ಚಾಲಕನಿಗೆ ಮಾರಿದ್ದರು ಎಂದು ತ್ರಿಪುರಾ ಬಿಜೆಪಿ ಅಧ್ಯಕ್ಷ ಬಿಪ್ಲಬ್ ದಾಸ್ ಹೇಳಿದ್ದಾರೆ.

  • ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

    ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

    ಭುವನೇಶ್ವರ: ಒಂದೇ ಕುಟುಂಬದ ಐವರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಧರಣಿಧರ್ ಪಾಂಡ, ಪತ್ನಿ ಸಂಗೀತಾ, ಮಕ್ಕಳಾದ ಅಪರಾಜಿತಾ, ಅನನ್ಯಾ ಮತ್ತು ಸಿದ್ಧಿ ಸಾವನ್ನಪ್ಪಿದ ದುರ್ದೈವಿಗಳು. ಅನನ್ಯ 12ನೇ ತರಗತಿಯಲ್ಲಿ ಮತ್ತು ಸಿದ್ಧಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

    ಮೂಲತಃ ಬರ್‍ಗಢ ಜಿಲ್ಲೆಯ ಬುರುಡಾದವರಾದ ಧರಣಿಧರ್, ಮದನಬತಿ ಪಬ್ಲಿಕ್ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಜಗನ್ನಾಥ್ ಕಾಲೋನಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.

    ಬಾಡಿಗೆ ನೀಡಲು ಹಣವಿರಲಿಲ್ಲ: ಧರಣಿಧರ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಅವರು ವಾಸವಿದ್ದ ಮನೆ ಧರಣಿಧರ ಅವರ ಸ್ನೇಹಿತರದ್ದು. ಮನೆಯ ಬಾಡಿಗೆಯನ್ನು ನೀಡಲು ಅವರ ಬಳಿ ಹಣ ಇರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

    ಮಂಗಳವಾರ ರಾತ್ರಿ ಆಗಿದ್ದೇನು?: ಮಂಗಳವಾರ ರಾತ್ರಿ ಸುಮಾರು 8.30ಕ್ಕೆ ಐವರು ಸಂಬಲ್‍ಪುರ-ಝಾರ್‍ಸುಗುದಾ ಡಿಎಂಯು ರೈಲು ಬರುವಾಗ ಅದರ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ರೈಲ್ವೆ ಚಾಲಕ ಘಟನೆ ಬಗ್ಗೆ ಜಿಆರ್‍ಪಿ (ಸರ್ಕಾರಿ ರೈಲ್ವೆ ಪೊಲೀಸ್)ಗೆ ಮಾಹಿತಿ ನೀಡಿದ್ದರು. ಬಳಿಕ ಜಿಆರ್‍ಪಿ ಮತ್ತು ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಶವಗಳನ್ನ ಅಲ್ಲಿಂದ ತೆರವುಗೊಳಿಸಿದ್ದಾರೆ.

    ಮೃತ ದೇಹಗಳನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಸಾಮೂಹಿಕ ಆತ್ಮಹತ್ಯೆ ಎಂದು ಕಾಣಿಸುತ್ತಿದೆ ಎಂದು ಜಿಆರ್‍ಪಿ ಅಧಿಕಾರಿ ಜಿ.ಡುಂಗ್ ಡುಂಗ್ ತಿಳಿಸಿದ್ದಾರೆ.

    ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಈ ಕುರಿತು ಸತ್ಯ ತಿಳಿಯಲು ಸರಿಯಾದ ತನಿಖೆ ನಡೆಯಬೇಕು ಎಂದು ಸಂಬಲ್‍ಪುರ ಶಾಸಕಿ ರಾಸೇಶ್ವರಿ ಪನಿಗ್ರಾಹಿ ಹೇಳಿದ್ದಾರೆ .

  • ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ರು ಹೆಣ್ಮಕ್ಕಳ ಕಟ್ಟಿಕೊಂಡು ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ತಂದೆಗೆ ಬೇಕಿದೆ ನೆರವು

    ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ರು ಹೆಣ್ಮಕ್ಕಳ ಕಟ್ಟಿಕೊಂಡು ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ತಂದೆಗೆ ಬೇಕಿದೆ ನೆರವು

    ಮಂಡ್ಯ: ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ಬರು ಪುಟಾಣಿ ಮಕ್ಕಳನ್ನು ಕಟ್ಟಿಕೊಂಡು ಊರೂರು ಸುತ್ತುತ್ತಾ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಇವರು ಬೆಳಕು ಕಾರ್ಯಕ್ರಮಕ್ಕೆ ಬಂದು ಸಹಾಯವನ್ನು ಕೇಳಿಕೊಳ್ಳುತ್ತಿದ್ದಾರೆ.

    ಶಿವಕುಮಾರ್ ಅಸಹಾಯಕರಾಗಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೀದಿ ಬೀದಿ ಅಲೆಯುತ್ತಾ ಬದುಕುತ್ತಿದ್ದಾರೆ. ಇವರು ಬೆಂಗಳೂರಿನ ಸ್ವತಂತ್ರ್ಯಪಾಳ್ಯ ನಿವಾಸಿ ಲಕ್ಷ್ಮಿದೇವಿ ಎಂಬವರೊಡನೆ ಮದುವೆಯಾಗಿತ್ತು. ಅವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಸ್ವಾತಿ ಮತ್ತು ಸಂಗೀತ ಎಂಬ ಇಬ್ಬರು ಹೆಣ್ಣು ಮಕ್ಕಳು. ಈಗ ಸ್ವಾತಿಗೆ ಆರು ವರ್ಷ ಸಂಗೀತಾಗೆ ಐದು ವರ್ಷ. ಶಿವಕುಮಾರ್ ಫಾಸ್ಟ್ ಫುಡ್ ಅಂಗಡಿ ಹಾಕಿಕೊಂಡು ಜೀವನಕ್ಕೆ ಬೇಕಾದ ದುಡಿಮೆ ಮಾಡುತ್ತಿದ್ದರು. ಸಿನಿಮಾ ಆಸಕ್ತಿಯೂ ಇದ್ದುದ್ದರಿಂದ ಸಹ ಕಲಾವಿದನಾಗಿ, ನಿರ್ದೇಶಕರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಶಿವಕುಮಾರ್ ಒಂದು ದಿನ ಬೈಕ್‍ನಿಂದ ಬಿದ್ದು ಕೋಮ ಸ್ಥಿತಿಗೆ ತಲುಪುತ್ತಾರೆ. ಜೊತೆಗೆ ಟಿಬಿ ಖಾಯಿಲೆಯು ಬರುತ್ತದೆ. ಆದರೆ ಪತ್ನಿ ಲಕ್ಷ್ಮಿದೇವಿ ಗಂಡನ ಅನಾರೋಗ್ಯ ನೋಡಿ ಕರುಣೆ ಇಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಹೊರಟು ಹೋಗಿದ್ದಾಳೆ. ಇತ್ತ ಶಿವಕುಮಾರ್ ತಂದೆ ತಾಯಿಯೂ ಕೂಡ ಅವರನ್ನು ದೂರ ಮಾಡಿದ್ದಾರೆ. ಇದರಿಂದ ಕಂಗಾಲಾಗಿರುವ ಶಿವಕುಮಾರ್ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ಊರೂರು ಅಲೆಯುತ್ತಿದ್ದಾರೆ ಎಂದು ಬಪ್ಪನಪುರ ಗ್ರಾಮಸ್ಥರು ಕಾಂತರಾಜು ತಿಳಿಸಿದ್ದಾರೆ.

    ಸದ್ಯಕ್ಕೆ ನಾನು ಜಿಲ್ಲೆಯ ಮಳವಳ್ಳಿ ತಾಲೂಕಿನ ಬಪ್ಪನಪುರದಲ್ಲಿರುವ ಮಠದಲ್ಲಿ ಆಶ್ರಯ ಪಡೆದಿದ್ದೇನೆ. ಒಂದಷ್ಟು ಗಾರೆ ಕೆಲಸ ಮಾಡಿ ಬರುವ ಹಣದಲ್ಲಿ ಮಕ್ಕಳಿಗೆ ಬಟ್ಟೆ, ಆಹಾರ ಒದಗಿಸುತ್ತಿದ್ದೇನೆ. ನನಗೆ ಪಾಸ್ಟ್ ಫುಡ್ ತಯಾರಿಸಲು ಬರುತ್ತದೆ, ಆದರೆ ನನ್ನ ಬಳಿ ನಯಾ ಪೈಸೆ ಹಣವಿಲ್ಲ. ಯಾರಾದ್ರು ಸಹಾಯ ಮಾಡಿ ಫಾಸ್ಟ್ ಫುಡ್ ಅಂಗಡಿಗೆ ಬೇಕಾದ ವಸ್ತುಗಳನ್ನು ಒದಗಿಸಿದರೆ. ನಾನು ವ್ಯಾಪಾರದಿಂದ ಬರುವ ಹಣದಿಂದ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ. ಜೊತೆಗೆ ನಾನು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಶಿವಕುಮಾರ್ ಸಹಾಯ ಕೇಳುತ್ತಿದ್ದಾರೆ.

  • ಬಡತನದಲ್ಲಿ ಹುಟ್ಟಿ ಬೆಳೆದು, ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿಗೆ ಬೇಕಿದೆ ಆರ್ಥಿಕ ಸಹಾಯ

    ಬಡತನದಲ್ಲಿ ಹುಟ್ಟಿ ಬೆಳೆದು, ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿಗೆ ಬೇಕಿದೆ ಆರ್ಥಿಕ ಸಹಾಯ

    ಹಾಸನ: ಬಡತನದಲ್ಲಿ ಸಾಕಷ್ಟು ಕಷ್ಟ ಪಟ್ಟು ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿ ಇಂದು ಬೆಳಕು ಕಾರ್ಯಕ್ರಮಕ್ಕೆ ತನ್ನ ಉನ್ನತ ಶಿಕ್ಷಣದ ಸಹಾಯ ಕೋರಿ ಬೆಳಕು ಕಾರ್ಯಕ್ರಮ ಬಂದಿದ್ದಾರೆ.

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಮ್ಮರಹಟ್ಟಿ ಗ್ರಾಮದ ಉಮೇಶ್ ಎಂಬವರು ಕನ್ನಡ ಮಾಧ್ಯಮದಲ್ಲಿ ಓದಿದ್ದ ಮಗಳು ಉನ್ನತ ಶಿಕ್ಷಣ ಕಾಣುವ ಕನಸನ್ನು ಕಾಣುತ್ತಿದ್ದಾಳೆ. ಉಮೇಶರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದಾಳೆ. ಇನ್ನೋಬ್ಬಳೆ ಭೂಮಿಕಾ.

    ಗ್ರಾಮದ ಸಮೀಪದ ಶಿವೇನಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಭೂಮಿಕ, ಹೈಸ್ಕೂಲ್ ಓದಿದ್ದು 5 ಕಿಲೋಮೀಟರ್ ದೂರದ ಜಾವಗಲ್‍ನಲ್ಲಿ. ಕುಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ಭೂಮಿಕ ಪ್ರತಿದಿನ ಸೈಕಲ್ ಮೂಲಕ 5 ಕಿಲೋಮೀಟರ್ ಹೋಗಿ ಎಸ್‍ಎಸ್‍ಎಲ್‍ಸಿಯಲ್ಲಿ ಗ್ರಾಮಕ್ಕೆ ಹೆಮ್ಮೆಯಾಗುವಂತೆ ಶೇಕಡ 95 ಅಂಕಗಳನ್ನು ಪಡೆದಿದ್ದಾಳೆ. ಮುಂದೆ ದಕ್ಷಿಣ ಕನ್ನಡದ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಕೊಡಿಸಿದ್ದಾರೆ. ಅಲ್ಲಿಯೂ ಕೂಡ ತಮ್ಮ ಗ್ರಾಮ ಮತ್ತು ಪೋಷಕರಿಗೆ ಹೆಮ್ಮೆಯಾಗುವಂತೆ ಅಂಕಗಳನ್ನು ಪಡೆದ ಭೂಮಿಕ ಶೇಕಡ 91 ಅಂಕಗಳನ್ನು ಪಡೆದು ಪೋಷಕರ ಪ್ರೀತಿಗೆ ಪಾತ್ರವಾಗಿದ್ದಾಳೆ.

    ಕಳೆದ ಮೂರು ವರ್ಷಗಳಿಂದ ಬರಪರಿಸ್ಥಿತಿ ಇರೋದ್ರಿಂದ ಸರಿಯಾಗಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಟ್ರಾಕ್ಟರ್ ಡ್ರೈವಿಂಗ್ ಕೆಲಸ ಮಾಡಿ ಅಷ್ಟೋ ಇಷ್ಟೋ ಬಂದಿದ್ದರಲ್ಲಿ ಜೀವನ ಸಾಗಿಸುವ ಉಮೇಶ್ ಕುಟುಂಬಕ್ಕೆ ದುಬಾರಿ ಶಿಕ್ಷಣ ವ್ಯವಸ್ಥೆ ಆತಂಕ ಸೃಷ್ಟಿಸಿದೆ.

    ಪಿಯುಸಿಯಲ್ಲಿ ಭೂಮಿಕಾ ಒಟ್ಟು 540 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಈಗಾಗಲೆ ಸಿಇಟಿ ಪರಿಕ್ಷೆ ಬರೆದು ಇಂಜಿನಿಯರಿಂಗ್ ಸೀಟ್ ಸಿಕ್ಕಿದೆ. ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದ್ರೂ ಕೂಡ ಅದನ್ನ ಈಗಾಗಲೇ ಆರ್ಥಿಕ ಕೊರತೆಯಿಂದಾಗಿ ಕೈಬಿಟ್ಟಿದ್ದಾರೆ. ತಮ್ಮ ಮಗಳಿಗೆ ಮೆಡಿಕಲ್ ಓದಿಸಬೇಕು ಎನ್ನುವ ಆಸೆ ಪೋಷಕರಿಗಿದ್ದು, ಜೊತೆಗೆ ಭೂಮಿಕಾ ಈಗಾಗಲೇ ಯಾವುದೇ ಕೋಚಿಂಗ್ ಇಲ್ಲದೆ ನೀಟ್ ಪರಿಕ್ಷೆ ಕೂಡ ಬರೆದು ಫಲಿತಾಂಶಕ್ಕೆ ಕಾಯುತಿದ್ದಾಳೆ. ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿಯಲ್ಲಿ ಇಂಗ್ಲೀಷ್‍ನಲ್ಲಿಯೇ ಪಾಸ್ ಮಾಡುವ ಮೂಲಕ ಸಾಧನೆ ಮಾಡಿರುವ ಭೂಮಿಕಾಗೆ ಈಗ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

    ಮೆಡಿಕಲ್ ಓದಬೇಕು ಎನ್ನುವ ಭೂಲಿಕಾಳ ಆಸೆಗೆ ನೀಟ್ ಪರಿಕ್ಷೆಯ ಫಲಿತಾಂಶ ಉತ್ತರ ನೀಡಲಿದೆ. ಮೆಡಿಕಲ್ ಸಿಗದಿದ್ದಲ್ಲಿ ಇಂಜಿನಿಯರಿಂಗ್ ಓದುವೆ ಎನ್ನುವ ಭೂಮಿಕ ಮತ್ತು ಆಕೆಯ ಕುಟುಂಬಸ್ಥರು ಆಕೆಯ ವಿದ್ಯಾಭ್ಯಾಸಕ್ಕಾಗಿ ಸಹಾಯಕ್ಕಾಗಿ ಕೇಳಿಕೊಂಡಿದ್ದಾರೆ.

    https://www.youtube.com/watch?v=e502cCeXTvE

  • ನಲಿಯುತ್ತಾ ಆಡಬೇಕಿದ್ದ ಕಂದನಿಗೆ ಬ್ಲಡ್ ಕ್ಯಾನ್ಸರ್- ಚಿಕಿತ್ಸೆಗೆ ಬೇಕಿದೆ ಸಹಾಯ

    ನಲಿಯುತ್ತಾ ಆಡಬೇಕಿದ್ದ ಕಂದನಿಗೆ ಬ್ಲಡ್ ಕ್ಯಾನ್ಸರ್- ಚಿಕಿತ್ಸೆಗೆ ಬೇಕಿದೆ ಸಹಾಯ

    ವಿಜಯಪುರ: ಎಲ್ಲ ಮಕ್ಕಳಂತೆ ಕಲಿಯುತ್ತಾ, ನಲಿಯುತ್ತಾ ಆಡಬೇಕಿದ್ದ ಮಗನಿಗೆ ಬ್ಲಡ್ ಕ್ಯಾನ್ಸರ್ ರೋಗ ಬಂದು ಮನೆಯಲ್ಲಿ ಕೂರುವಂತೆ ಮಾಡಿದೆ. ಇರುವ ಓರ್ವ ಮಗನನ್ನು ಬದುಕಿಸಿಕೊಳ್ಳಲು ಬಡ ಪೋಷಕರು ಶಕ್ತಿಮೀರಿ ಪ್ರಯತ್ನ ಮಾಡ್ತಾಯಿದ್ದಾರೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಡಕೋಳ ಗ್ರಾಮದ ಮೀನಪ್ಪ ಮಾದರ ಮತ್ತು ಲಗಮವ್ವ ಎಂಬವರ ಮಗ ಮಡಿವಾಳಪ್ಪ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾನೆ. ಮೂರನೇ ತರಗತಿ ವರೆಗೂ ಚೆನ್ನಾಗಿಯೇ ಇದ್ದ ಮಡಿವಾಳಪ್ಪ ಏಕಾಏಕಿ ಒಂದು ದಿನ ಅಸ್ವಸ್ಥನಾಗಿದ್ದಾನೆ. ಆಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬೆಂಗಳೂರು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಮಡಿವಾಳಪ್ಪನನ್ನು ಪರೀಕ್ಷಿಸಿದಾಗ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದಿದೆ.

    ನಾಲ್ಕು ತಿಂಗಳು ಚಿಕಿತ್ಸೆ ನೀಡಿದರೆ ಮಡಿವಾಳಪ್ಪ ಆರೋಗ್ಯ ಸರಿ ಹೋಗುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಗದ ಕೆಲ ಔಷಧಿಗಳನ್ನು ಹೊರಗಡೆಯಿಂದ ತರಬೇಕಾಗುತ್ತದೆ. ಆದ್ರೆ ತೀವ್ರ ಬಡ ಕುಟುಂಬವಾದ ಕಾರಣ ಇವರ ಹತ್ತಿರ ಹೊರಗಿನಿಂದ ಔಷದಿಯನ್ನು ತರಲು ಆಗುತ್ತಿಲ್ಲ. ಈಗ ಅಲ್ಲಿ ಇಲ್ಲಿ ಸಾಲ ಮಾಡಿ ಒಂದು ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

    ಯಾರಾದರು ಸಹಾಯ ಮಾಡಿದ್ದಲ್ಲಿ ಒಂದು ಸಣ್ಣ ಜೀವ ಬದುಕಿಕೊಳ್ಳುತ್ತದೆ. ಈಗ ಸಹಾಯ ಹಸ್ತಕ್ಕಾಗಿ ಮಡಿವಾಳಪ್ಪ ಮತ್ತು ಕುಟುಂಬಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=91rZJHXOods

  • ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಬೆಳಗಾವಿ: ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ ಇವರು. ಗುರು ರಾಮದೇವ ಬಾಬಾ ಅವರ ಯೋಗಾಸನವನ್ನು ಟಿವಿಯಲ್ಲಿ ನೋಡಿ ಕಲಿತಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗುರಗೊಳದ ಅನಕ್ಷರಸ್ಥ ಯುವಕ ಬುಡನ್ ಇತರರಿಗೆ ಯೋಗಾಭ್ಯಾಸ ಹೇಳಿಕೊಡಲು ಸಹಾಯ ಹಸ್ತ ಚಾಚಿದ್ದಾರೆ.

    ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರಿಗೆ ಯೋಗಾಸನ ಮಾಡುವದೆಂದರೆ ಎಲ್ಲಿಲ್ಲದ ಖುಷಿ. ನಿರಂತರ ಯೋಗ ಅಭ್ಯಾಸ ಮಾಡುವುದು, ಮುರ್ನಾಲ್ಕು ದಿನಗಳ ಕಾಲ ಅನ್ನ ನೀರು ಸೇವಿಸದೆ ಇರುವುದು ಬುಡನ್ ಹವ್ಯಾಸ. ದಿನಕ್ಕೆರಡು ಬಾರಿ ಯೋಗಾಸನ ಮಾಡುವ ಕಾರಣ ಅತ್ಯಂತ ಕ್ಲಿಷ್ಟಕರ ಆಸನಗಳೂ ಬುಡನ್ ಗೆ ಒಲಿದಿವೆ.

    ಅನಕ್ಷರಸ್ಥರಾದ ಇವರು ಉತ್ತಮ ಆರೋಗ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಯೋಗಾಭ್ಯಾಸವನ್ನು ಜನರಿಗೆ ಹೇಳಿಕೊಡಬೇಕು ಎಂಬ ಇಚ್ಛೆಯಿದೆ. ಆದರೆ ನಾನು ಅನಕ್ಷರಸ್ಥ ಎಂಬ ಆತಂಕ ಮನದಲ್ಲಿ ಭೀತಿ ಹುಟ್ಟಿಸಿದೆ. ಅದಕ್ಕಾಗಿ ಇರಲು ಒಂದು ಸೂರು, ಜೊತೆಗೆ ವ್ಯಕ್ತಿತ್ವ ವಿಕಾಸನದ ತರಬೇತಿ ಬೇಕಾಗಿದೆ ಎಂದು ಬುಡನ್ ಹೇಳುತ್ತಾರೆ.

    ಕಲಿಯುವ, ಕಲಿಸುವ ಹುಮ್ಮಸ್ಸು, ಶ್ರಮ ಜೊತೆಗೆ ಕಠಿಣ ಪರಿಶ್ರಮಪಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂಬುದು ಇವರ ಜೀವನದ ಗುರಿ. ಆದರೆ ಕಿತ್ತು ತಿನ್ನುವ ಬಡತನ ಗುರಿ ತಲುಪಲು ಬೀಡುತ್ತಿಲ್ಲ. ಸೂಕ್ತ ಮಾರ್ಗದರ್ಶಕರು ಸಿಕ್ಕಲ್ಲಿ ಯೋಗದಲ್ಲಿಯೇ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬುವ ತವಕ ಬುಡನ್ ಹೊಂದಿದ್ದಾರೆ.

     

  • ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

    ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

    ಕೊಪ್ಪಳ: ಓದಬೇಕೆನ್ನುವ ಹಂಬಲದಿಂದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಯುವಕನಿಗೆ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಸೇರಲು ಬಡತನ ಅಡ್ಡಿಯಾಗಿದೆ. ಇದ್ದೊಬ್ಬ ಮಗನಿಗೆ ಬಡತನದಲ್ಲಿಯೂ ತಾಯಿ ಕಷ್ಟಪಟ್ಟು ಓದಿಸ್ತಾಯಿದ್ದಾರೆ. ಆದ್ರೀಗ ಎಂಜಿನಿಯರಿಂಗ್ ಓದೋ ಆಸೆಗೆ ಹಣಕಾಸಿನ ತೊಂದ್ರೆ ಆಗಿದೆ. ಸದ್ಯ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ನೆರವಿಗೆ ಬಂದಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಮುಷ್ಟೂರ ಗ್ರಾಮದ ಮಲ್ಲಯ್ಯ ಹಾಗೂ ನಾಗಮ್ಮ ದಂಪತಿಯ ಪುತ್ರ ಮಂಜುನಾಥ್ ಬಡತನದಿಂದಾಗಿ ಶಿಕ್ಷಣವನ್ನು ಬಿಡುವ ಹಂತ ತಲುಪಿದ್ದಾರೆ. ಮಂಜುನಾಥ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಸಾವನ್ನಪ್ಪಿದ್ರು. ಇದ್ದೊಬ್ಬ ತಾಯಿಯನ್ನ ಸಾಕೋ ಜವಾಬ್ದಾರಿ ಈತನ ಹೆಗಲಿಗೆ ಬಿದ್ದಿದೆ. ಜೊತೆಗೆ ತಾಯಿಯ ಪ್ರೋತ್ಸಾಹದಿಂದ ತನ್ನ ಓದಿಗೆ ಬ್ರೇಕ್ ಹಾಕದೇ ಕೂಲಿ ನಾಲಿ ಮಾಡಿ ಸಂಸಾರದ ನೊಗ ನೂಕ್ತಾ ತನ್ನ ಓದನ್ನ ಮುಂದುವರೆಸಿದ್ದಾರೆ. ಯಾವುದೇ ಟ್ಯೂಷನ್‍ಗೆ ಹೋಗ್ದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 82.5 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.

     

     

    ನೀಟ್ ಪರೀಕ್ಷೆಯಲ್ಲಿ 40 ಸಾವಿರ ಸ್ಥಾನ ಪಡೆದುಕೊಂಡಿದ್ದಾರೆ. ಮಂಜುನಾಥ್ ನೀಟ್ ಪರೀಕ್ಷೆಗಾಗಿ ಯಾವುದೇ ಟ್ಯೂಷಿನ್‍ಗೆ ಹೋಗಿಲ್ಲ ಅನ್ನೋದು ಇನ್ನೊಂದು ವಿಶೇಷ. ಇವರಿಗೆ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿಕೊಳ್ಳೋ ಆಸೆಯಿದೆ. ಆದ್ರೆ ಮುಂದಿನ ಓದಿಗೆ ಇವರ ಬಳಿ ಹಣವಿಲ್ಲ.

    ನಿತ್ಯ ಬೆಳಿಗ್ಗೆ ಕಾಲೇಜು ಮುಗಿಸಿ ಆ ಬಳಿಕ ಕೂಲಿ ಮಾಡಿದ್ದಾರೆ. ಜೊತೆಗೆ ಮಗನಿಗೆ ಸಾಥ್ ನೀಡೋಕೆ ತಾಯಿ ನಾಗಮ್ಮ ಕೂಡಾ ಕೂಲಿ ಮಾಡ್ತಿದ್ದಾರೆ. ಇನ್ನು ಮಂಜುನಾಥ್ ಪ್ರತಿಭಾವಂತ ವಿದ್ಯಾರ್ಥಿ. ಎಸ್‍ಎಸ್‍ಎಲ್‍ಸಿ ಯಲ್ಲಿ ಶೇಕಡಾ 70.40 ರಷ್ಟು ಅಂಕ ಗಳಿಸಿದ್ದಾರೆ. ಗಂಗಾವತಿ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.

    ಬಡತನದಲ್ಲೂ ಮಂಜುನಾಥ ಪಿಯುಸಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರೋದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಮುಂದಿನ ಓದಿಗೆ ಸಹಾಯ ಹಸ್ತ ಚಾಚೋಕೆ ದಾನಿಗಳು ಮುಂದೆ ಬರಬೇಕಿದೆ.