Tag: Poulomi Pavini

  • ಅನಾಥ ಮಕ್ಕಳ ಶಿಕ್ಷಣಕ್ಕಾಗಿ 11 ರಾಜ್ಯಗಳಿಗೆ ಅಲೆದಾಟ- ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ವಕೀಲೆ ಪೌಲೋಮಿ ಹೆಸರು

    ಅನಾಥ ಮಕ್ಕಳ ಶಿಕ್ಷಣಕ್ಕಾಗಿ 11 ರಾಜ್ಯಗಳಿಗೆ ಅಲೆದಾಟ- ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ವಕೀಲೆ ಪೌಲೋಮಿ ಹೆಸರು

    – ಮಕ್ಕಳ ಉದ್ಧಾರಕ್ಕಾಗಿ ಸುಪ್ರೀಂ ಕೋರ್ಟ್‍ನಲ್ಲಿ ಸಹ ಅರ್ಜಿ
    – ಕೋರ್ಟ್‍ನಲ್ಲಿನ ಅರ್ಜಿ ಪರಿಗಣಿಸಿ ಕೇಂದ್ರ ಬಜೆಟ್‍ನಲ್ಲಿ ಅನುದಾನ ಹೆಚ್ಚಳ

    ಲಕ್ನೋ: ಅನಾಥ ಮಕ್ಕಳ ಹಿತಕ್ಕಾಗಿ ಶ್ರಮಿಸಿದಕ್ಕೆ ಲಕ್ನೋ ಮೂಲದ ವಕೀಲೆ ಹಾಗೂ ಬರಹಗಾರ್ತಿ ಪೌಲೋಮಿ ಪಾವಿನಿ ಶುಕ್ಲಾ ಅವರು ‘ಫೋರ್ಬ್ಸ್ ಇಂಡಿಯಾ 30 ಅಂಡರ್ 30′ 2021 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಅನಾಥ ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕಾಗಿ ಪೌಲೋಮಿ ಅವರು ಫೋಬ್ರ್ಸ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪೌಲೋಮಿ, ಫೋರ್ಬ್ಸ್ಇಂಡಿಯಾ 30 ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅಲ್ಲದೆ ಗೌರವ ಸಿಕ್ಕಂತಾಗಿದೆ. ಆದರೆ ಇದಕ್ಕಿಂತ ಹೆಚ್ಚಾಗಿ ಅನಾಥ ಮಕ್ಕಳ ಅವಸ್ಥೆ ಹೆಚ್ಚು ಮುನ್ನೆಲೆಗೆ ಬರಬೇಕಿದೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಧ್ವನಿ ಇಲ್ಲ, ಹೀಗಾಗಿ ಈ ಅಭಿಯಾನದಲ್ಲಿ ಹೆಚ್ಚು ಜನ ತೊಡಗಬೇಕೆಂದು ಈ ಮೂಲಕ ನಾನು ವಿನಂತಿಸಿಕೊಳ್ಳುತ್ತೇನೆ. ಈ ಮೂಲಕ ಅನಾಥ ಮಕ್ಕಳಿಗೆ ಶಕ್ತಿಯಾಗಿ ನಿಲ್ಲಬೇಕು. ಶಿಕ್ಷಣ ನೀಡುವ ಮೂಲಕ ಅನಾಥ ಮಕ್ಕಳ ಧ್ವನಿಯನ್ನು ಬೆಳಕಿಗೆ ತರುವುದೇ ನನ್ನ ಉದ್ದೇಶ ಎಂದಿದ್ದಾರೆ.

    ನಮ್ಮ ದೇಶದಲ್ಲಿ ಸುಮಾರು 2 ಕೋಟಿ ಅನಾಥ ಮಕ್ಕಳಿದ್ದಾರೆ. ಈ ಪೈಕಿ 1 ಲಕ್ಷಕ್ಕೂ ಕಡಿಮೆ ಜನ ಅನಾಥಾಶ್ರಮದಲ್ಲಿದ್ದಾರೆ. ಹೀಗಾಗಿ ಇಂತಹ ಅನಾಥ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸಲು ಏನಾದರೂ ಮಾಡಬೇಕು ಎಂದೆನಿಸಿತು. ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಶಾಸಕರು, ಸಂಸದರು, ಮುಖ್ಯಮಂತ್ರಿಗಳು, ಸಚಿವರು ಹಾಗೂ ಇತರೆ ರಾಜಕೀಯ ನಾಯಕರನ್ನು ಭೇಟಿಯಾದೆ ಎಂದು ಹೇಳುವ ಮೂಲಕ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಅವರು ಎಷ್ಟು ಬದ್ಧರಾಗಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.

    ಉತ್ತರಾಖಂಡ್ ನಲ್ಲಿ ಅನಾಥ ಮಕ್ಕಳಿಗಾಗಿ ಶೇ.5ರಷ್ಟು ಮೀಸಲಾತಿ ನೀಡಲಾಗಿದೆ. ಮಹಾರಾಷ್ಟ್ರ, ಗೋವಾ ಹಾಗೂ ದೆಹಲಿ ಸರ್ಕಾರಗಳು ಶಿಕ್ಷಣ ಹಕ್ಕಿನಡಿ ಗುರುತಿಸಿವೆ. ನಾನು ಅರ್ಜಿ ಸಲ್ಲಿಸಿದ ಬಳಿಕ ಕೇಂದ್ರ ಬಜೆಟ್‍ನಲ್ಲಿ ಅನಾಥ ಮಕ್ಕಳಿಗೆ ನೀಡುವ ಅನುದಾನವನ್ನು ಡಬಲ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

    ಜರ್ನಿ ಆರಂಭವಾಗಿದ್ದು ಹೇಗೆ, ಏಕೆ?
    ಈ ಕುರಿತು ತಮ್ಮ ಹೋರಾಟದ ಆರಂಭಿಕ ಜರ್ನಿ ಬಗ್ಗೆ ವಿವರಿಸಿರುವ ಅವರು, ಈ ಕಥೆ 2011ರಲ್ಲಿ ನಾನು 9 ವರ್ಷದವಳಿರುವಾಗಲೇ ಆರಂಭವಾಗಿದ್ದು, ಈ ಸಂದರ್ಭದಲ್ಲಿ ನಮ್ಮ ತಾಯಿ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು. ಆ ವರ್ಷ ಗುಜರಾತ್‍ನ ಭುಜ್‍ನಲ್ಲಿ ದೊಡ್ಡ ಭೂಕಂಪ ಸಂಭವಿಸಿತ್ತು. ಈ ನೈಸರ್ಗಿಕ ವಿಕೋಪದಲ್ಲಿ ಹಲವು ಮಕ್ಕಳು ಅನಾಥವಾದವು. ಕೆಲ ಮಕ್ಕಳು ಎನ್‍ಜಿಒ ಮೂಲಕ ಹರಿದ್ವಾರಕ್ಕೆ ಬಂದಿದ್ದರು. ಈ ವೇಳೆ ಅಮ್ಮ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ನಾನು ಆ ಮಕ್ಕಳೊಂದಿಗೆ ಸಂಪರ್ಕ ಬೆಳೆಸಿ, ಅವರೊಂದಿಗೆ ಸ್ನೇಹಿತೆಯಾಗಿದ್ದೆ.

    ನಾನು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭುಜ್‍ನಲ್ಲಿ ಸಂಭವಿಸಿದ ಭೂಕಂಪದಲ್ಲಿ ತಂದೆ, ತಾಯಿ, ಕುಟುಂಬಸ್ಥರನ್ನು ಕಳೆದುಕೊಂಡು ಅನಾಥವಾಗಿದ್ದ ಹುಡುಗಿ ನಾನು ಕಾಲೇಜಿಗೆ ಹೋಗಬೇಕೆಂದು ನನ್ನ ಬಳಿ ಹೇಳಿಕೊಂಡಳು. ಬಳಿಕ ನಾನು ಅವಳಿಗೆ ಶಿಕ್ಷಣ ನೀಡುವ ಯಾವುದಾದರೂ ಸರ್ಕಾರದ ಯೋಜನೆ ಇದೆಯೇ, ಸ್ಕಾಲರ್‍ಶಿಪ್ ಇದೆಯಾ ಎಂದು ಹುಡುಕಿದೆ. ಆದರೆ ಆಶ್ಚರ್ಯವೆಂಬಂತೆ ಈ ರೀತಿಯ ಯಾವುದೇ ಸೌಲಭ್ಯ ಇರಲಿಲ್ಲ. ಈ ಘಟನೆ ಬಳಿಕ ನಾನು 11 ರಾಜ್ಯಗಳಿಗೆ ಭೇಟಿ ನೀಡಿದೆ. ಈ ಕುರಿತು ಪುಸ್ತಕವನ್ನೂ ಬರೆದೆ. ಈ ಮೂಲಕ ಅನಾಥ ಮಕ್ಕಳ ದುಃಸ್ಥಿಯ ಕುರಿತು ವಿವರಿಸಿದೆ ಎಂದು ಲ್ಕನೋ ಮೂಲದ ವಕೀಲೆ ವಿವರಿಸಿದ್ದಾರೆ.

    ಈ ಹೋರಾಟ ಇಂದಿಗೇ ಮುಗಿಯುವುದಿಲ್ಲ. ಇನ್ನೂ ಸಾಕಷ್ಟು ಹೋರಾಟ ಮಾಡುವುದು ಬಾಕಿ ಇದೆ. ಈ ಮಕ್ಕಳನ್ನೂ ಜನಗಣತಿಯಡಿ ತರಬೇಕೆಂದು ನಾನು ಭಾವಿಸುತ್ತೇನೆ. ಈ ಬಗ್ಗೆ ಸರ್ಕಾರಗಳು ಸರಿಯಾದ ಯೋಜನೆಗಳನ್ನು ತರಬೇಕು. ಸ್ಕಾಲರ್‍ಶಿಪ್ ಹಾಗೂ ಶಿಕ್ಷಣ ಹಕ್ಕಿನಡಿ ಇವರನ್ನು ಗುರುತಿಸುವ ಕೆಲಸವಾಗಬೇಕು. ಆಗ ಮಾತ್ರ ಅವರು ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಪೌಲೋಮಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.