Tag: poster

  • ಅರಣ್ಯ ಇಲಾಖೆ ಎಡವಟ್ಟು – ಪೋಸ್ಟರಿನಲ್ಲಿ ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ರಮಾನಾಥ್ ರೈ

    ಅರಣ್ಯ ಇಲಾಖೆ ಎಡವಟ್ಟು – ಪೋಸ್ಟರಿನಲ್ಲಿ ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ರಮಾನಾಥ್ ರೈ

    ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯ ಅವರ ಯಡಿಯೂರಪ್ಪನವರ ಎಂಬ ಅನುಮಾನವನ್ನು ಶಿವಮೊಗ್ಗದ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಹುಟ್ಟಿಸಿದೆ.

    ಶಿವಮೊಗ್ಗದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಪ್ರವೇಶದಲ್ಲಿಯೇ ಹಸಿರು ಕರ್ನಾಟಕ ಅಭಿಯಾನ ನೀರಿಗಾಗಿ ಅರಣ್ಯ ಎಂಬ ಪೋಸ್ಟರ್ ಹಾಕಿದ್ದಾರೆ. ಈ ಪೋಸ್ಟರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅರಣ್ಯ ಸಚಿವ ರಮಾನಾಥ್ ರೈ ಎನ್ನುವ ಭಾವಚಿತ್ರ ಹಾಕಿದ್ದಾರೆ.

    ಬಹುಶಃ ಈ ಪೋಸ್ಟರ್ ಹಳೆಯದ್ದು ಇರಬಹುದು. ಆದರೆ ಪ್ರತಿನಿತ್ಯ ಅರಣ್ಯ ಕಚೇರಿಗೆ ನೂರಾರು ಮಂದಿ ಸಾರ್ವಜನಿಕರು ಬರುತ್ತಿರುತ್ತಾರೆ. ಈ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದ್ದು, ಸಾರ್ವಜನಿಕರಿಗೆ ಗೊಂದಲ ಉಂಟು ಮಾಡುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹಳೆಯ ಪೋಸ್ಟರ್ ತೆಗೆದು ಹಾಕಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಬಿಜೆಪಿ ಸಂಸದ ಗೌತಮ್ ಗಂಭೀರ್ ಕಾಣೆ!

    ಬಿಜೆಪಿ ಸಂಸದ ಗೌತಮ್ ಗಂಭೀರ್ ಕಾಣೆ!

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ನವದೆಹಲಿಯ ಐಟಿಒ ಇಲಾಖೆಯ ಗೋಡೆ ಹಾಗೂ ಮರಗಳ ಮೇಲೆ ಅಂಟಿಸಲಾಗಿದೆ.

    ಪೋಸ್ಟರ್ ನಲ್ಲಿ, “ನೀವು ಗೌತಮ್ ಗಂಭೀರ್ ಅವರನ್ನು ಎಲ್ಲಿಯಾದರೂ ನೋಡಿದ್ದೀರಾ. ಇವರು ಕೊನೆಯ ಬಾರಿಗೆ ಇಂದೋರ್ ನಲ್ಲಿ ಜಿಲೇಬಿ ತಿನ್ನುವಾಗ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಇವರು ಕಾಣೆಯಾಗಿದ್ದಾರೆ. ಇಡೀ ದೆಹಲಿಯಲ್ಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ” ಎಂದು ಬರೆಯಲಾಗಿದೆ.

    ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಬಗ್ಗೆ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ಗೌತಮ್ ಗಂಭೀರ್ ಭಾಗವಹಿಸಬೇಕಿತ್ತು. ಆದರೆ ಅವರು ಆ ದಿನ ಇಂದೋರ್ ನಲ್ಲಿ ಇದ್ದರು. ಅಲ್ಲಿ ಅವರು ಭಾರತ ಮತ್ತು ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನೀಡುತ್ತಿದ್ದರು.

    ಈ ನಡುವೆ ಗಂಭೀರ್ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅವರ ಜೊತೆ ಜಿಲೇಬಿ ತಿನ್ನುತ್ತಿರುವ ಫೋಟೋ ವೈರಲ್ ಆಗಿತ್ತು. ಇದಾದ ಬಳಿಕ, ಮಾಲಿನ್ಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಗೆ ಗೈರಾದ ಕಾರಣ ಆಮ್ ಆದ್ಮಿ ಪಕ್ಷ ಗೌತಮ್ ವಿರುದ್ಧ ಕಿಡಿಕಾರಿತ್ತು.

    ಅಲ್ಲದೆ ಮಾಲೀನ್ಯದ ಬಗ್ಗೆ ರಾಜಕೀಯ ಬಂದಾಗ ಗೌರಮ್ ಗಂಭೀರ್ ಯಾವಾಗಲೂ ಮುಂದಿರುತ್ತಾರೆ. ಆದರೆ ಮಾಲೀನ್ಯವನ್ನು ನಿಭಾಯಿಸುವ ಕ್ರಮಗಳ ಚರ್ಚೆಯಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

  • ಕುರಿ ಕಡಿದು ಸುದೀಪ್ ಪೋಸ್ಟರ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ

    ಕುರಿ ಕಡಿದು ಸುದೀಪ್ ಪೋಸ್ಟರ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ

    ದಾವಣಗೆರೆ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕುರಿ ಕಡಿದು ಸುದೀಪ್ ಅವರ ಪೋಸ್ಟರ್‌ಗೆ ರಕ್ತಾಭಿಷೇಕ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.

    ಜಿಲ್ಲೆಯ ಜಗಳೂರು – ಚಳ್ಳಕೆರೆ ತಾಲೂಕುಗಳ ನಡುವೆ ಇರುವ ಮಲೇ ಬೋರನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳು ಸುದೀಪ್ ಅವರ ಪೋಸ್ಟರ್‌ಗೆ ಕುರಿ ಕಡಿದು ರಕ್ತಾಭಿಷೇಕ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ಈ ಹಿಂದೆ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅವರು ನಟಿಸಿದ ‘ದಿ-ವಿಲನ್’ ಚಿತ್ರದ ಬಿಡುಗಡೆ ಆಗಿದ್ದಾಗ ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟಿದ್ದರು. ಅಲ್ಲದೆ ಸುದೀಪ್ ಅವರ ಕಟೌಟ್ ಹಾಗೂ ಪೋಸ್ಟರ್‌ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:  ಅಭಿಮಾನಿಗಳ ಪೈಶಾಚಿಕ ಕೃತ್ಯಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಅಭಿಮಾನಿಗಳು ನಡೆಸಿದ್ದ ಈ ಕೃತ್ಯಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ, “ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಇದನ್ನು ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಸುದೀಪ್ ಅಂದೇ ಮನವಿ ಮಾಡಿಕೊಂಡಿದ್ದರೂ ಈ ಚಿತ್ರದ ಬಿಡುಗಡೆಯ ಸಂದರ್ಭದಲ್ಲೂ ಕುರಿ ಕಡಿದಿದ್ದಾರೆ.

    ದಾವಣಗೆರೆಯ ಗೀತಾಂಜಲಿ, ವಸಂತ ಚಿತ್ರಮಂದಿರದಲ್ಲಿ ಪೈಲ್ವಾನ್ ಚಿತ್ರ ಪ್ರದರ್ಶನ ಆಗುತ್ತಿದೆ. ಸುದೀಪ್ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಬೃಹತ್ ಕಟೌಟ್‍ಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಲ್ಲದೆ ಸುದೀಪ್ ಅಭಿಮಾನಿ ಸಂಘ ದಾವಣಗೆರೆಯ ಪ್ರಮುಖ ಪೈಲ್ವಾನ್‍ಗಳನ್ನು ಚಿತ್ರಮಂದಿರಕ್ಕೆ ಕರೆಸಿ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.

  • ಬಿಗ್ ನ್ಯೂಸ್ ಜೊತೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್

    ಬಿಗ್ ನ್ಯೂಸ್ ಜೊತೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ -2’ ಚಿತ್ರತಂಡ ಇಂದು ಬಿಗ್ ನ್ಯೂಸ್ ಕೊಡುವುವಾಗಿ ಹೇಳಿತ್ತು. ಅದರಂತೆಯೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿ ಅಭಿಮಾನಿಗಳಿಗೆ ತಿಳಿಸಿದೆ.

    ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ಮತ್ತೊಂದು ಬಿಗ್ ನ್ಯೂಸ್‍ಗೆ ಕಾಯುವಂತೆ ಅಭಿಮಾನಿಗಳಿಗೆ ತಿಳಿಸಿದೆ. ಇಂದು ಕೆಜಿಎಫ್ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದೆ. ಅದರಲ್ಲಿ ಎರಡು ಕೈಗಳನ್ನು ಹಿಂದೆ ಹಿಡಿದಿರುವ ಅಧೀರನ ಪೋಸ್ಟರ್ ಆಗಿದೆ. ಜುಲೈ 29ಕ್ಕೆ ಚಿತ್ರದ ಪ್ರಮುಖ ಪಾತ್ರಧಾರಿ ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದೆ.

    ಯಾರು ಈ ಅಧೀರ?
    ಕೆಜಿಎಫ್ ಸಿನಿಮಾದಲ್ಲಿ ಖಳನಾಯಕ ಸೂರ್ಯವರ್ಧನ್ ಬರುತ್ತಾನೆ. ಆತನ ಸಹೋದರನೇ ಅಧೀರ. ಆದರೆ ಮೊದಲ ಭಾಗದಲ್ಲಿ ಅಧೀರನ ಪಾತ್ರ ಕೆಲವೇ ನಿಮಿಷವಿತ್ತು. ಅಷ್ಟೇ ಅಲ್ಲದೇ ಆತನ ಮುಖವನ್ನು ತೋರಿಸಿರಲಿಲ್ಲ. ಸೂರ್ಯವರ್ಧನ್ ಸಾವಿನ ನಂತರ ಗರುಡ ಅಧಿಕಾರಕ್ಕೆ ಬರುತ್ತಾನೆ. ಆಗ ರಾಕಿ ಭಾಯ್‍ಗೆ ಸುಪಾರಿ ಕೊಟ್ಟು ಗರುಡನನ್ನು ಕೊಲೆ ಮಾಡಿಸಿದ್ದನು. ಇದೀಗ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದಲ್ಲಿ ಅಧೀರ ಬರುತ್ತಾನೆ. ಅಧೀರನ ಪಾತ್ರಧಾರಿಯ ಪೋಸ್ಟರನ್ನು ಜುಲೈ 29ಕ್ಕೆ ಚಿತ್ರತಂಡ ರಿಲೀಸ್ ಮಾಡಲಿದೆ.

    ಅಧೀರನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈಗಾಗಲೇ ‘ಕೆಜಿಎಫ್ ಚಾಪ್ಟರ್-2’ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಹೀಗಾಗಿ ಅಧೀರನ ಪಾತ್ರದಲ್ಲಿ ಸಂಜಯ್ ದತ್ ಅಭಿನಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಯಾಕೆಂದರೆ ಚಿತ್ರತಂಡ ಜುಲೈ 29ಕ್ಕೆ ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದೆ. ಅಂದೇ ಸಂಜಯ್ ದತ್ ಹುಟ್ಟುಹಬ್ಬವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಚಿತ್ರತಂಡ ಗಿಫ್ಟ್ ನೀಡುತ್ತಿದೆ ಎನ್ನಲಾಗಿದೆ. ಸದ್ಯಕ್ಕೆ ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

  • ಬೆತ್ತಲಾಗಿದ್ದಕ್ಕೆ ನಟಿ ಅಮಲಾ ವಿರುದ್ಧ ದೂರು ದಾಖಲು

    ಬೆತ್ತಲಾಗಿದ್ದಕ್ಕೆ ನಟಿ ಅಮಲಾ ವಿರುದ್ಧ ದೂರು ದಾಖಲು

    ಚೆನ್ನೈ: ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ‘ಅದಾಯಿ’ ಚಿತ್ರದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಬೆತ್ತಲಾಗಿ ನಟಿಸಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

    ಅದಾಯಿ ಚಿತ್ರದಲ್ಲಿ ಅಮಲಾ ಪೌಲ್ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ದೂರು ದಾಖಲಿಸಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ನಗ್ನ ಫೋಟೋ ಹಾಕುವ ಮೂಲಕ ಚಿತ್ರವನ್ನು ಪ್ರಮೋಟ್ ಮಾಡಲಾಗುತ್ತಿದೆ ಎಂದು ವಿರೋಧಿಸಿದ್ದಾರೆ.

    ದೂರು ದಾಖಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಶ್ವರಿ ಪ್ರಿಯಾ ಅವರು, ನಾನು ಡಿಜಿಪಿ ಅವರನ್ನು ಭೇಟಿ ಮಾಡಿ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬೇಡಿಕೆ ಇಟ್ಟಿದ್ದೇನೆ. ಚಿತ್ರದ ಪ್ರಮೋಶನ್‍ಗಾಗಿ ನಗ್ನ ಪೋಸ್ಟರ್ ಗಳನ್ನು ಬಳಸಲಾಗುತ್ತಿದೆ. ಇದರಿಂದ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ.

    ಬಳಿಕ ಮಾತನಾಡಿದ ಅವರು, ನಾನು ಈ ಸಿನಿಮಾ ರಿಲೀಸ್ ಆಗಲು ತಡೆಯುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ‘ಎ’ ಸರ್ಟಿಫಿಕೇಟ್ ನೀಡಿದೆ. ಆದರೆ ನಾನು ಈ ಚಿತ್ರದ ಪ್ರಚಾರದ ವಿರುದ್ಧ ಇದ್ದೇನೆ. ಈ ಚಿತ್ರದ ಟ್ರೈಲರ್ ನೋಡಿ ಯುವಕರ ಮನಸ್ಸಿನಲ್ಲಿ ನೆಗೆಟಿವ್ ಆಗಿ ಪ್ರಭಾವ ಬೀರುತ್ತದೆ ಎಂದರು.

    ಅಮಲಾ ತಮಿಳು ಸಂಸ್ಕೃತಿ ಬಗ್ಗೆ ಹೆದರುವುದಿಲ್ಲ. ಏಕೆಂದರೆ ಅವರು ಈ ರಾಜ್ಯದವರು ಅಲ್ಲ. ಅಮಲಾ ಹಣ ಹಾಗೂ ಪ್ರಸಿದ್ಧಿಗಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ರಾಜೇಶ್ವರಿ ಪ್ರಿಯಾ ನಟಿ ಅಮಲಾ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

  • ಸಾಹೋ ಟೀಸರ್ ರಿಲೀಸ್ ದಿನಾಂಕ ಅನೌನ್ಸ್

    ಸಾಹೋ ಟೀಸರ್ ರಿಲೀಸ್ ದಿನಾಂಕ ಅನೌನ್ಸ್

    ಹೈದರಾಬಾದ್: ನಟ ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಆರಂಭದಿಂದಲೂ ಸದ್ದು ಮಾಡುತ್ತಿದ್ದು, ಇದೀಗ ನಟಿ ಶ್ರದ್ಧಾ ಕಪೂರ್ ಅವರ ಸಿನಿಮಾ ಪೋಸ್ಟರ್ ಹಾಕಿ ಅಭಿಮಾನಿಗಳಿಗೆ ಒಂದು ಗುಡ್‍ನ್ಯೂಸ್ ನೀಡಿದ್ದಾರೆ.

    ನಟ ಪ್ರಭಾಸ್ ಅವರು, ಶ್ರದ್ಧಾ ಕಪೂರ್ ಗನ್ ಹಿಡುದಿರುವ ಪೋಸ್ಟರ್ ಹಾಕಿ ಸಿನಿಮಾ ಟೀಸರ್ ಬಗ್ಗೆ ತಿಳಿಸಿದ್ದಾರೆ. ‘ಹೇ ಡಾರ್ಲಿಂಗ್ಸ್, ಇದೇ ಜೂನ್ 13 ರಂದು ‘ಸಾಹೋ’ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಜೊತೆಗೆ ಜೂನ್ 14 ರಂದು ಥಿಯೇಟರ್ ಗಳಲ್ಲಿ ಇದನ್ನು ನೀವು ನೋಡಬಹುದು’ ಎಂದು ಇನ್​​​ಸ್ಟಾಗ್ರಾಂನಲ್ಲಿ ಬರೆದು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

    ಸುಜಿತ್ ನಿರ್ದೇಶಿರುವ ಸಿನಿಮಾ ಇದ್ದಾಗಿದ್ದು, ಸುಮಾರು 300 ಕೋಟಿ ಬಜೆಟ್‍ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಯೂವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಿಸಿದೆ.

    ನಟ ಪ್ರಭಾಸ್ ಅವರು ಕೆಲವು ದಿನ ಹಿಂದೆಯಷ್ಟೆ ಇನ್‍ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದು, ‘ಸಾಹೋ’ ಸಿನಿಮಾ ಒಂದೊಂದೆ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್‍ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಅಭಿನಯಿಸಿದ್ದಾರೆ.

    https://www.instagram.com/p/ByhqMDHHIvX/

  • ನನ್ನ ವಾಂಟೆಡ್ ಪೋಸ್ಟರ್‌ಗೆ 15 ಸಾವಿರ ಲೈಕ್ ಕೊಡಿಸಿ – ಪೊಲೀಸರಿಗೆ ಆರೋಪಿ ಸವಾಲು

    ನನ್ನ ವಾಂಟೆಡ್ ಪೋಸ್ಟರ್‌ಗೆ 15 ಸಾವಿರ ಲೈಕ್ ಕೊಡಿಸಿ – ಪೊಲೀಸರಿಗೆ ಆರೋಪಿ ಸವಾಲು

    ವಾಷಿಂಗ್ಟನ್: ತನ್ನ ವಾಂಟೆಡ್ ಪೋಸ್ಟರ್‌ಗೆ 15 ಸಾವಿರ ಲೈಕ್ ಕೊಡಿಸಿ. ನಾನೇ ಬಂದು ಶರಣಾಗುತ್ತೇನೆ ಎಂದು ಆರೋಪಿಯೊಬ್ಬ ಪೊಲೀಸರಿಗೆ ಬೇಡಿಕೆ ಇಟ್ಟಿರುವ ವಿಚಿತ್ರ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ.

    ಈ ಘಟನೆ ಟೊರಿಂಗ್ಟನ್ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸುವ ಸಲುವಾಗಿ ಜೋಸ್ ಸಿಮ್ಸ್ (29) ಆರೋಪಿಯ ವಾಂಟೆಡ್ ಪೋಸ್ಟರ್ ಅನ್ನು ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿತ್ತು.

    https://www.facebook.com/TorringtonPD/posts/2188826954506060

    ಆದರೆ ಇದಕ್ಕೆ ಯಾರು ಕೂಡ ಲೈಕ್ ಮಾಡಿರಲಿಲ್ಲ. ಇದನ್ನು ಕಂಡ ಆರೋಪಿ ಜೋಸ್ ಸಿಮ್ಸ್ ಫೇಸ್‍ಬುಕ್ ಮೂಲಕವೇ ಟೊರಿಂಗ್ಟನ್ ಪೊಲೀಸರನ್ನು ಸಂಪರ್ಕಿಸಿ, ನನ್ನ ವಾಂಟೆಡ್ ಪೋಸ್ಟರ್‌ಗೆ ನೀವು 15 ಸಾವಿರ ಲೈಕ್ ಕೊಡಿಸಿದರೆ ನಾನೇ ಬಂದು ಶರಣಾಗುತ್ತೇನೆ ಎಂದು ಸವಾಲು ಹಾಕಿದ್ದಾನೆ.

    ಇದಕ್ಕೆ ಒಪ್ಪಿಕೊಂಡಿರುವ ಟೊರಿಂಗ್ಟನ್ ಪೊಲೀಸರು ಮತ್ತೆ ತಮ್ಮ ಖಾತೆಯಲ್ಲಿ ಜೋಸ್ ಸಿಮ್ಸ್‍ನ ವಾಂಟೆಡ್ ಪೋಸ್ಟರ್ ಅನ್ನು ಹಾಕಿ ಇದಕ್ಕೆ ಸಾರ್ವಜನಿಕರು ಲೈಕ್ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೋಸ್ ವಿರುದ್ಧ ಏಳು ವಾರೆಂಟ್ ದಾಖಲಾಗಿದ್ದು, ಹಲವಾರು ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

    ಈಗ ಜೋಸ್ ಸಿಮ್ಸ್ ವಾಂಟೆಡ್ ಪೋಸ್ಟರ್ ಗೆ 24 ಸಾವಿರ ಲೈಕ್ ಮತ್ತು 26 ಸಾವಿರ ಪ್ರತಿಕ್ರಿಯೆಗಳು ಬಂದಿದೆ. ಆದರೆ ಆರೋಪಿ ಇನ್ನೂ ಪೊಲೀಸರಿಗೆ ಶರಣಾಗಿಲ್ಲ. ಈ ಮಧ್ಯೆ ಕೆಲವರು ಅವನನ್ನು ಫೇಸ್‍ಬುಕ್ ಮೂಲಕ ಸಂಪರ್ಕಿಸಿದ್ದಾರೆ. ಈ ವೇಳೆ ಅವನು ನಾನೊಬ್ಬ ಪ್ರಚಾರಪ್ರಿಯ ಎಂದು ಹೇಳಿಕೊಂಡಿದ್ದಾನೆ.

  • ‘ನಿಖಿಲ್ ಎಲ್ಲಿದ್ದೀಯಪ್ಪಾ’ ಪೋಸ್ಟರ್ ವೈರಲ್

    ‘ನಿಖಿಲ್ ಎಲ್ಲಿದ್ದೀಯಪ್ಪಾ’ ಪೋಸ್ಟರ್ ವೈರಲ್

    ಬೆಂಗಳೂರು: ‘ನಿಖಿಲ್ ಎಲ್ಲಿದ್ದೀಯಪ್ಪಾ’ ಟೈಟಲ್ ನಲ್ಲಿ ಸಿನಿಮಾ ಮಾಡುತ್ತೇನೆ ಎಂಬ ನಿಖಿಲ್ ಹೇಳಿಕೆಯ ಬೆನ್ನಲ್ಲೇ ಅಭಿಮಾನಿಗಳು ಮತ್ತು ಬೆಂಬಲಿಗರು ಖುಷಿಯಾಗಿದ್ದು, ಇದೀಗ ಸಿನಿಮಾದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಪ್ತಗಿರಿ ಕ್ರಿಯೇಷನ್ಸ್, ಕೃಷ್ಣೇಗೌಡ ನಿರ್ಮಾಪಕ, ಅಶೋಕ್ ಕೆ. ಕಡಬ ನಿರ್ದೇಶನ ಎಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದರಲ್ಲಿ ಇಂಡಿಯಾ ಗೇಟ್ ಬಳಿ ನಿಖಿಲ್ ಕುಮಾರಸ್ವಾಮಿ ನಡೆದು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಸಂಸತ್ತಿನ ಪೋಟೋ ಹಾಕಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

    ಈ ಮೂಲಕ ನಿಖಿಲ್ ಕುಮಾರಸ್ವಾಮಿ ಅವರು ಇಂಡಿಯಾ ಗೇಟ್‍ನಿಂದ ಸಂಸತ್ತಿಗೆ ಹೋಗುತ್ತಿದ್ದಾರೆ ಎಂಬಂತೆ ಬಿಂಬಿಸಿ ಸಿನಿಮಾ ಪೋಸ್ಟರ್ ತಯಾರು ಮಾಡಿದ್ದಾರೆ. ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ.

    ಈಗಾಗಲೇ ‘ನಿಖಿಲ್ ಎಲ್ಲಿದ್ದೀಯಪ್ಪಾ?’, ‘ಜೋಡೆತ್ತು’ ಹಾಗೂ ‘ಕಳ್ಳೆತ್ತು’ ಟೈಟಲ್‍ಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿವೆ. `ಎಲ್ಲಿದ್ದೀಯಪ್ಪಾ?’ ಟೈಟಲ್ ನಿರ್ಮಾಪಕ ಎ.ಗಣೇಶ್ ಅವರ ಪಾಲಾಗಿದೆ. ಅವರು ಶ್ರೀಚಾಮುಂಡೇಶ್ವರಿ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕ ವಿಜಯ್ ಕುಮಾರ್ ಅವರು `ಕಳ್ಳೆತ್ತು’ ಟೈಟಲ್‍ಗೆ ನೋಂದಣಿ ಮಾಡಿಸಿದ್ದರು.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಇತ್ತೀಚೆಗಷ್ಟೇ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರು, `ನಿಖಿಲ್ ಎಲ್ಲಿದ್ದೀಯಪ್ಪಾ?’ ಸಿನಿಮಾಗೆ ನಾನೇ ಹೀರೋ, ಸಚಿವ ಸಿ.ಎಸ್.ಪುಟ್ಟರಾಜು ಅವರೇ ಪ್ರೊಡ್ಯೂಸರ್. ಈ ಟೈಟಲ್ ಅನ್ನು ಯಾರಿಗೂ ಕೊಡದಂತೆ ಚಿತ್ರಮಂಡಳಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು.

  • ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

    ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷೆಯ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾಗೆ ಭರ್ಜರಿ ಸ್ವಾಗತ ದೊರೆತಿದೆ. ಆದರೆ ಅಭಿಮಾನಿಯೊಬ್ಬ ಪುನೀತ್ ಅವರ ಪೋಸ್ಟರ್‌ಗೆ ಬಿಯರ್ ಅಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ.

    ಈ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪ್ರತಿಕ್ರಿಯಿಸಿ, “ಆ ರೀತಿ ಮಾಡುವುದು ಬೇಡ. ಸಿನಿಮಾದಲ್ಲಿ ನಾವು ಏನೇನೋ ಮಾಡುತ್ತೇವೆ. ನಾವು ಚಿತ್ರದಲ್ಲಿ ಕೊಲೆ ಮಾಡುತ್ತೇವೆ. ಹಾಗಂತ ನೀವು ನಿಜಜೀವನದಲ್ಲಿ ಕೊಲೆ ಮಾಡಿ ಎಂದು ಹೇಳುವುದಿಲ್ಲ. ಇದು ಕೇವಲ ಒಂದು ಹಾಡು ಅಷ್ಟೇ. ಆ ಹಾಡಿನಲ್ಲಿ ಒಂದು ಥ್ರಿಲ್ ಇದೆ. ಸಮಾಜಕ್ಕೆ ಸಂದೇಶ ನೀಡುವ ಕೆಲವು ಸಿನಿಮಾದಲ್ಲಿ ಇರುತ್ತದೆ. ಅದನ್ನು ಉಪಯೋಗಿಸಿ. ಹಾಗಂತ ಬಿಯರ್ ಉಪಯೋಗಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

    ಒಟ್ಟು 500ಕ್ಕೂ ಹೆಚ್ಚಿನ ಸ್ಕ್ರೀನ್‍ಗಳಲ್ಲಿ ನಟಸಾರ್ವಭೌಮ ರಿಲೀಸ್ ಆಗಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಬೆಂಗಳೂರು: ಇಂದು ಕೃಷ್ಣ ಅಜೇಯ್ ರಾವ್ ಜನ್ಮ ದಿನ. ತಾಯಿಗೆ ತಕ್ಕ ಮಗ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅವರ ಮುಂದಿನ ಚಿತ್ರದ ಬಗೆಗಿನ ವಿವರಗಳೂ ಈ ಸಂದರ್ಭದಲ್ಲಿಯೇ ಜಾಹೀರಾಗಿವೆ. ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರಲಿರೋ ಅಜೇಯ್ ರಾವ್ ಇಪ್ಪತ್ತೇಳನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

    ಈಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ನಿಜಕ್ಕೂ ಆಕರ್ಷಕವಾಗಿದೆ. ಅಜೇಯ್ ರಾವ್ ಅರ್ಧ ಖಾಕಿ ಮತ್ತು ಮತ್ತರ್ಧ ಕೃಷ್ಣಾವತಾರದ ಗೆಟಪ್ಪಿನಲ್ಲಿರೋ ಈ ಪೋಸ್ಟರ್ ಅಭಿಮಾನಿಗಳನ್ನೂ ಖುಷಿಗೊಳಿಸಿದೆ. ಆದರೆ ಇದರ ಟೈಟಲ್ ಇನ್ನೂ ಬಿಡುಗಡೆಯಾಗಿಲ್ಲ.

    ಇದು ಗುರುದೇಶಪಾಂಡೆ ಪ್ರೊಡಕ್ಷನ್ಸ್ ಬ್ಯಾನರಿನ ಎರಡನೇ ಚಿತ್ರ. ಇದನ್ನು ರಾಜ್ ವರ್ಧನ್ ಶಂಕರ್ ನಿರ್ದೇಶನ ಮಾಡಲಿದ್ದಾರೆ. ಜಡೇಶ್ ಕುಮಾರ್ ಜೊತೆ ಸೇರಿ ಗುರುದೇಶಪಾಂಡೆಯವರೇ ಕಥೆ ಚಿತ್ರಕಥೆಯನ್ನೂ ರಚಿಸಿದ್ದಾರೆ. ಆರೂರು ಸುಧಾಕರ್ ಛಾಯಾಗ್ರಾಹಕರಾಗಿಯೂ ಆಯ್ಕೆಯಾಗಿದ್ದಾರೆ. ಉಳಿಕೆ ತಾರಾಗಣ, ತಾಂತ್ರಿಕ ವರ್ಗದ ಮಾಹಿತಿ ಟೈಟಲ್ ಲಾಂಚ್ ವೇಳೆಗೆ ಜಾಹೀರಾಗಲಿದೆ.

    ಆದಷ್ಟು ಬೇಗನೆ ಟೈಟಲ್ ಲಾಂಚ್ ಮಾಡಿ ಅದೇ ಸಂದರ್ಭದಲ್ಲಿ ಚಿತ್ರದ ಬಗೆಗಿನ ಉಳಿಕೆ ಮಾಹಿತಿ ಕೊಡುವ ಆಲೋಚನೆ ಗುರುದೇಶಪಾಂಡೆ ಅವರದ್ದು. ಅಂತೂ ಬೇಗನೆ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv