Tag: Positive

  • ಚಿಂತಾಮಣಿ ನಗರಕ್ಕೂ ವಕ್ಕರಿಸಿದ ಕೊರೊನಾ – 71 ವರ್ಷದ ವೃದ್ಧನಿಗೆ ಸೋಂಕು

    ಚಿಂತಾಮಣಿ ನಗರಕ್ಕೂ ವಕ್ಕರಿಸಿದ ಕೊರೊನಾ – 71 ವರ್ಷದ ವೃದ್ಧನಿಗೆ ಸೋಂಕು

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರಕ್ಕೂ ಕೊರೊನಾ ವೈರಸ್ ವ್ಯಾಪಿಸಿದ್ದು, ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಗೂ ಈಗ ಕೊರೊನಾ ಆತಂಕ ಶುರುವಾಗಿದೆ.

    ಇಷ್ಟು ದಿನ ಕೊವೀಡ್-19 ಮುಕ್ತವಾಗಿದ್ದ ಚಿಂತಾಮಣಿ ನಗರದಲ್ಲೂ ಈಗ ಹೊಸದೊಂದು ಕೊರೊನಾ ಸೋಂಕು ವರದಿಯಾಗಿದೆ. ಅಂದಹಾಗೆ ಚಿಂತಾಮಣಿ ನಗರದ ಎನ್ ಆರ್ ಎಕ್ಸ್ ಟೆನ್ಷಂನ್‍ನ ನಿವಾಸಿ 71 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದೆ. ಪ್ರತಿಷ್ಠಿತ ಕುಟುಂಬ ಹಾಗೂ ಜ್ಯುವೆಲ್ಲರಿ ಶಾಪ್ ಮಾಲೀಕರಾಗಿರುವ 71 ವರ್ಷದ ಸೋಂಕಿತ ವ್ಯಕ್ತಿ ಹಾಗೂ ಈತನ ಸರಿ ಸುಮಾರು 65 ವರ್ಷದ ಪತ್ನಿ ಬೆಂಗಳೂರಿನ ವಿಜಯನಗರದ ಮಗಳ ಮನೆಯಿಂದ ಚಿಂತಾಮಣಿಗೆ ವಾಪಾಸ್ಸಾಗಿದ್ದರು.

    ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಒಳಗಾಗಿ ಮಗಳ ಮನೆಯಲ್ಲಿ ಕೆಲ ದಿನಗಳ ವಿಶ್ರಾಂತಿ ಪಡೆದು ಚಿಂತಾಮಣಿ ನಗರದ ನಿವಾಸಕ್ಕೆ ಏಪ್ರಿಲ್ 26ರಂದು ವಾಪಾಸ್ಸಾಗಿದ್ದರು. ಆದರೆ ಈ ಮಧ್ಯೆ ಕಳೆದ 4 ದಿನಗಳ ಹಿಂದೆ ಅಂದರೆ ಮೇ 4ರ ರಾತ್ರಿ ಸೋಂಕಿತನ ಪತ್ನಿ ವೃದ್ಧೆ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮೇ 5ರಂದು ಅಂತ್ಯಕ್ರಿಯೆ ನೇರವೇರಿಸಿದ್ದರು.

    ಅಂತ್ಯಕ್ರಿಯೆಯಲ್ಲಿ ಪ್ರತಿಷ್ಡಿತ ಕುಟುಂಬದವರಾದ ಕಾರಣ ಸಂಬಂಧಿಕರು ಬಂಧು ಬಳಗ ಎಂದು ನೂರಾರು ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಅಜ್ಜಿ ಸಾವಿನ ನಂತರ ಬೆಂಗಳೂರಿನಿಂದ ಬೇರೆ ಬಂದಿದ್ದರು ಎಂಬ ಕಾರಣಕ್ಕೆ ಅನುಮಾನಗೊಂಡ ಆರೋಗ್ಯ ಇಲಾಖೆಯವರು ಮನೆಯಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿದ್ದರು. ಈ ವೇಳೆ ವೃದ್ಧನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ವೃದ್ಧನಿಗೆ ಕೊರೊನಾ ಸೋಂಕು ಬಂದಿದ್ದು ಹೇಗೆ?
    ಈ ಪ್ರಶ್ನೆ ಈಗ ಆರೋಗ್ಯ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಕಾಡುತ್ತಿದೆ. ಪ್ರಕರಣದಲ್ಲಿ ಎರಡು ಸಾಧ್ಯತೆಗಳಿದ್ದು, ಮೊದಲನೆಯದು ಸೋಂಕಿತನ ಮೊಮ್ಮಗ ಜ್ಯುವೆಲ್ಲರಿ ಡಿಸೈನ್ ಮೇಕಿಂಗ್ ಕಲೆ ಕಲಿಯಲು ಎಂದು ಲಂಡನ್‍ಗೆ ಹೋಗಿ ಬಂದಿದ್ದ. ಆದರೆ ಈತ ಮಾರ್ಚ್ 2ರಂದೇ ವಾಪಾಸ್ಸಾಗಿದ್ದು, ಇಂದಿಗೆ ಬರೋಬ್ಬರಿ 69 ದಿನಗಳಾಗಲಿವೆ. 28 ದಿನಗಳ ಹೋಂ ಕ್ವಾರಂಟೈನ್‍ಗೂ ಸಹ ಈತ ಒಳಗಾಗಿದ್ದ. ಹೀಗಾಗಿ ಇಷ್ಟು ದಿನ ಆದ ಮೇಲೆ ಈತನಿಂದ ಸೋಂಕು ಬಂದಿರಲು ತೀರಾ ಸಾಧ್ಯತೆ ಕಡಿಮೆ ಎನ್ನುತ್ತಿದ್ದಾರೆ ಆರೋಗ್ಯ ಇಲಾಖಾಧಿಕಾರಿಗಳು.

    ಎರಡನೇ ಸಾಧ್ಯತೆ ಈ ರೀತಿಯಿದ್ದು, ಮೇ 4ರಂದು ಮೃತಪಟ್ಟ ಸೋಂಕಿತನ ಪತ್ನಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಆಸ್ಪತ್ರೆಯಲ್ಲಿ ಸೋಂಕು ಹರಡಿತಾ ಅಥವಾ ಬೆಂಗಳೂರಿನ ವಿಜಯನಗರದ ಮಗಳ ಮನೆಯಲ್ಲಿ ವಿಶ್ರಾಂತಿಗೆ ಎಂದು ಹೋಗಿ ವಾಸ್ತವ್ಯ ಹೂಡಿದ್ದಾಗ ವಿಜಯನಗರದ ಭಾಗದಲ್ಲಿ ಒಡಾಡಿದಾಗ ಅಲ್ಲಿ ಏನಾದರೂ ವೃದ್ಧನಿಗೆ ಸೋಂಕು ಬಂದಿರಬಹುದಾ ಎಂಬ ಅನುಮಾನವೂ ಮೂಡುತ್ತಿದೆ.

  • ಚಿಕ್ಕಬಳ್ಳಾಪುರದಲ್ಲಿ ಮತ್ತೊಬ್ಬರಿಗೆ ಕೊರೊನಾ – ಮೂವರು ಸೋಂಕಿನಿಂದ ಗುಣಮುಖ

    ಚಿಕ್ಕಬಳ್ಳಾಪುರದಲ್ಲಿ ಮತ್ತೊಬ್ಬರಿಗೆ ಕೊರೊನಾ – ಮೂವರು ಸೋಂಕಿನಿಂದ ಗುಣಮುಖ

    ಚಿಕ್ಕಬಳ್ಳಾಪುರ: ನಗರದಲ್ಲಿ ಇಂದು ಸಹ 54 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ. ನಗರದ 17ನೇ ವಾರ್ಡಿನಲ್ಲೇ ಇಂದು ಸಹ ಕೊರೊನಾ ಸೋಂಕು ಪತ್ತೆಯಾಗಿದೆ.

    ಅಂದಹಾಗೆ ಇದೇ ಏರಿಯಾದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ಪಿ-250 ರ ದ್ವೀತಿಯ ಸಂಪರ್ಕಿತ ವ್ಯಕ್ತಿಯಾದ ಈ 54 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ನಿನ್ನೆ ಸಹ ಇದೇ 17ನೇ ವಾರ್ಡಿನಲ್ಲಿ 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿತ್ತು. ಇಂದು ಕೊರೊನಾ ಧೃಡಪಟ್ಟ ಪಿ-593, ಹಾಗೂ ನಿನ್ನೆ ದೃಢವಾದ ಪಿ-586, 40 ವರ್ಷದ ಮಹಿಳೆ ಇಬ್ಬರು ಸಂಬಂಧಿಕರಾಗಿದ್ದು, ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದಾರೆ.

    ಸದ್ಯ ಪಿ-593ರ 54 ವರ್ಷದ ವ್ಯಕ್ತಿಯ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಅಕ್ಕ ಸೇರಿದಂತೆ 08 ಮಂದಿಯನ್ನ ಹಾಸ್ಪಿಟಲ್ ಐಸೊಲೇಷನ್‍ಗೆ ಒಳಪಡಿಸಲಾಗಿದೆ. ಜಿಲ್ಲೆಯಾದ್ಯಾಂತ ಕೊರೊನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

    ಮೂವರು ಡಿಸ್ಚಾರ್ಜ್:
    ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್-19 ಜಿಲ್ಲಾಸ್ಪತ್ರೆಯಿಂದ ಇಂದು ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಪಿ-338, 339, 340 ಮೂವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಮೂವರು ಯುವಕರಲ್ಲಿ ಓರ್ವ ಕೊರೊನಾ ಸೋಂಕಿಗೆ ಬಲಿಯಾದ ಪಿ-250ರ 65 ವರ್ಷದ ವೃದ್ಧನ ಮಗನಾಗಿದ್ದು, ಉಳಿದ ಇಬ್ಬರು ಆತನ ಇಬ್ಬರ ಸ್ನೇಹಿತರಾಗಿದ್ದಾರೆ.

    ಸದ್ಯ ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದ 4 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೂವರೆಗೂ ಜಿಲ್ಲೆಯಲ್ಲಿ ಸರಿಸುಮಾರು 2000 ಮಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇನ್ನೂ 400 ಮಂದಿಯ ವರದಿಯ ನೀರಿಕ್ಷೆಯಲ್ಲಿದ್ದೇವೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.

  • ಕಲಬುರಗಿಯಲ್ಲಿ ಇಂದು ಒಂದೇ ದಿನ 8 ಜನರಿಗೆ ಕೊರೊನಾ ಸೋಂಕು

    ಕಲಬುರಗಿಯಲ್ಲಿ ಇಂದು ಒಂದೇ ದಿನ 8 ಜನರಿಗೆ ಕೊರೊನಾ ಸೋಂಕು

    ಕಲಬುರಗಿ: ಕಲಬುರಗಿಯ ಮೋಮಿನಪುರ ಪ್ರದೇಶದ 8 ಜನರಿಗೆ ಬುಧವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

    ನಗರದ ರೋಗಿ ಸಂಖ್ಯೆ-395ರ ಸಂಪರ್ಕಕ್ಕೆ ಬಂದ 4 ವರ್ಷದ ಹೆಣ್ಣು ಮಗು, ರೋಗಿ ಸಂಖ್ಯೆ-515ರ ಸಂಪರ್ಕಕ್ಕೆ ಬಂದ 28 ವರ್ಷದ ಯುವಕ, ಮೃತ ರೋಗಿ ಸಂಖ್ಯೆ-205ರ ಸಂಪರ್ಕಕ್ಕೆ ಬಂದ 20 ಮತ್ತು 22 ವರ್ಷದ ಯುವಕರು ಹಾಗೂ ರೋಗಿ ಸಂಖ್ಯೆ-425 ಸಂಪರ್ಕಕ್ಕೆ ಬಂದ 12, 14 ಮತ್ತು 17 ವರ್ಷದ ಬಾಲಕಿ ಮತ್ತು 40 ವರ್ಷದ ಯುವತಿಗೆ ಇಂದು ಕೊರೊನಾ ಸೋಂಕು ತಗುಲಿದೆ.

    ಸೋಂಕು ಪೀಡಿತ ಮತ್ತು ಶಂಕಿತರಿಗೆ ಜಿಲ್ಲೆಯ ನಿಗದಿತ ಅಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೊನಾ ಪಾಸಿಟಿವ್ ಪತ್ತೆಯಾದ 52 ಜನರಲ್ಲಿ ಒಟ್ಟು 7 ಜನ ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 40 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ಮಾಹಿತಿ ನೀಡಿದ್ದಾರೆ.

  • ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಗೆ ಶಾಕ್ – ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ

    ಗ್ರೀನ್ ಝೋನ್‍ನಲ್ಲಿದ್ದ ದಾವಣಗೆರೆಗೆ ಶಾಕ್ – ಜಿಲ್ಲೆಯಲ್ಲಿ ಮೊದಲ ಸೋಂಕು ಪತ್ತೆ

    ದಾವಣಗೆರೆ: ಗ್ರೀನ್ ಝೋನ್‍ನಲ್ಲಿ ಇದ್ದ ದಾವಣಗೆರೆಗೂ ಕೊರೊನಾ ಮಹಾಮಾರಿ ಎಂಟ್ರಿಕೊಟ್ಟಿದೆ. ಜಿಲ್ಲೆಯ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

    ನಾವು ಗ್ರೀನ್ ಝೋನ್‍ನಲ್ಲಿ ಇದ್ದೇವೆ ಎಂದು ನೆಮ್ಮದಿಯಯಲ್ಲಿದ್ದ ದಾವಣಗೆರೆ ಜಿಲ್ಲೆಯ ಜನತೆ ಭಯದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದೆ.

    ದಾವಣಗೆರೆ ನಗರದ ಭಾಷಾ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವ ಮತ್ತು ಬ್ಲಡ್ ಅನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ರವಾನೆ ಮಾಡಲಾಗಿತ್ತು. ಆದರೆ ಇಂದು ಬಂದ ವರದಿಯಲ್ಲಿ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ.

    ಸೋಂಕಿತ ಮಹಿಳೆಗೆ ಪತಿ ಹಾಗೂ 18 ವರ್ಷದ ಪುತ್ರ ಇದ್ದು, ಜಿಲ್ಲಾಧಿಕಾರಿಗಳು ಆಕೆ ವಾಸವಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರ ಮಾಹಿತಿ ಸಂಗ್ರಹಿಸಿ, ಆ ಪ್ರದೇಶವನ್ನು ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ. ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಸೋಂಕಿತೆ ಸೇವೆ ಸಲ್ಲಿಸಿದ್ದು, ಆಸ್ಪತ್ರೆಗೆ ಬರುವ ರೋಗಿಗಳ ಸಂಪರ್ಕದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಜೊತೆ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕಕ್ಕೆ ಬಂದವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹ ಮಾಡುತ್ತಿದೆ.

  • ನರ ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್

    ನರ ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್

    – ಆರೈಕೆ ಮಾಡುತ್ತಿದ್ದ ಮಗನಿಗೂ ಸೋಂಕು

    ಮಂಗಳೂರು: ಕೊರೊನಾ ಸೋಂಕಿತ ವೃದ್ಧೆಯ ಸಾವಿನ ಬಳಿಕ ಕೊರೊನಾ ಹಾಟ್‍ಸ್ಪಾಟ್ ಆಗಿ ಬದಲಾಗಿರುವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ತಗಲಿದೆ.

    ವೃದ್ಧೆಯ ಪಕ್ಕದ ಬೆಡ್ ನಲ್ಲಿದ್ದ 80 ವರ್ಷದ ತಾಯಿ ಮತ್ತು ಆಕೆಯ ಆರೈಕೆಗೆ ಬಂದಿದ್ದ 45 ವರ್ಷದ ಮಗನಿಗೆ ಸೋಂಕು ಕಾಣಿಸಿಕೊಂಡಿದೆ. ಇವರು ಮಂಗಳೂರಿನ ಶಕ್ತಿನಗರದ ನಿವಾಸಿಗಳಾಗಿದ್ದು, ಆ ಏರಿಯಾವನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲಾಗಿದೆ.

    ನರ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ವತಃ ಮಗನೇ ಜೊತೆಗಿದ್ದು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಇವರಿಬ್ಬರಿಗೂ ಸೋಂಕು ತಗಲಿದ್ದು ಮತ್ತೊಂದು ರೀತಿಯ ಆತಂಕಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 23ರಂದು ಇದೇ ಆಸ್ಪತ್ರೆಯಲ್ಲಿದ್ದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದರು. ಆ ಬಳಿಕ ಖಾಸಗಿ ಆಸ್ಪತ್ರೆಯನ್ನು ವಶಕ್ಕೆ ಪಡೆದು ಎಲ್ಲ ಸಿಬಂದಿ ಮತ್ತು ರೋಗಿಗಳನ್ನು ತಪಾಸಣೆಗೆ ಒಳಪಡಿಸಿತ್ತು. ಇದನ್ನು ಓದಿ: ತಾಯಿ, ಮಗನಿಗೆ ಕೊರೊನಾ – ಮಂಗ್ಳೂರು ನಗರ ಸೀಲ್ ಡೌನ್

    ಮೃತ ಪಟ್ಟ ಸೋಂಕಿತೆಯ ಸಂಪರ್ಕದಲ್ಲಿ ಇದ್ದ 190ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಈಗ ದಿನದಿಂದ ದಿನಕ್ಕೆ ಆಸ್ಪತ್ರೆಯಲ್ಲಿ ಇದ್ದವರಿಗೆ ಕಪರೊನಾ ಪಾಸಿಟಿವ್ ಬಂದಿದೆ. ನಿನ್ನೆಯಷ್ಟೆ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಮೂಲಕ ಆಸ್ಪತ್ರೆಗೆ ಬಂದು ಹೋದವರಿಗೆಲ್ಲ ಆತಂಕ ಶುರುವಾಗಿದೆ.

  • ಲಾಕ್‍ಡೌನ್ ಬಳಿಕ ಮುಂಬೈನಿಂದ ಟ್ರಕ್, ಬೈಕ್‍ಗಳಲ್ಲಿ ಪ್ರಯಾಣ – ಮಂಡ್ಯ ವ್ಯಕ್ತಿಗೆ ಸೋಂಕು

    ಲಾಕ್‍ಡೌನ್ ಬಳಿಕ ಮುಂಬೈನಿಂದ ಟ್ರಕ್, ಬೈಕ್‍ಗಳಲ್ಲಿ ಪ್ರಯಾಣ – ಮಂಡ್ಯ ವ್ಯಕ್ತಿಗೆ ಸೋಂಕು

    – ಈಗ ಸಾತೇನಹಳ್ಳಿ ಗ್ರಾಮ ಸೀಲ್‍ಡೌನ್

    ಮಂಡ್ಯ: ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು 8 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 511ಕ್ಕೆ ಏರಿದೆ. ಇಂದು ಜಿಲ್ಲೆಯ ನಾಗಮಂಗಲದ 50 ವರ್ಷದ ಪುರುಷನಿಗೆ ಕೊರೊನಾ ದೃಢಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿಂದ ಮಂಡ್ಯ ಜನತೆ ಆತಂಕಗೊಂಡಿದ್ದಾರೆ.

    ಮುಂಬೈನಿಂದ ಬಂದ ನಾಗಮಂಗಲ ಮೂಲದ ವ್ಯಕ್ತಿಗೆ ಸೋಂಕು ದೃಢವಾಗಿದೆ. ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿಗೆ (ರೋಗಿ 505) ಸೋಂಕು ಬಂದಿದೆ. ಈ ವ್ಯಕ್ತಿ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಆದರೆ ಲಾಕ್‍ಡೌನ್ ಇದ್ದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಏಪ್ರಿಲ್ 22ಕ್ಕೆ ಗ್ರಾಮಕ್ಕೆ ಆಗಮಿಸಿದ್ದಾರೆ.

    ಕೊರೊನಾ ಸೋಂಕಿತ ಅಗತ್ಯ ಸೇವೆಗಳ ಟ್ರಕ್, ಬೈಕ್ ಸಹಾಯ ಪಡೆದು ಮುಂಬೈನಿಂದ ಸಾತೇನಹಳ್ಳಿಗೆ ಬಂದಿದ್ದಾರೆ. ಇತ್ತ ಮುಂಬೈನಿಂದ ವ್ಯಕ್ತಿ ಬರುತ್ತಿದ್ದಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ತಕ್ಷಣ ಏಪ್ರಿಲ್ 24ರಂದು ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ರಿಪೋರ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬರುತ್ತಿದ್ದಂತೆ ಸಾತೇನಹಳ್ಳಿಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಸೋಂಕಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳು ಕುಟುಂಬಸ್ಥರನ್ನು ಕ್ವಾರೆಂಟೈನ್ ಮಾಡಿದ್ದಾರೆ. ಇದು ನಾಗಮಂಗಲದ ಮೊದಲ ಪಾಸಿಟಿವ್ ಪ್ರಕರಣ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೇರಿದೆ. ಮಳವಳ್ಳಿ (ತಬ್ಲಿಘಿಗಳು) -14, ಮಂಡ್ಯ ನಗರ (ಜುಬಿಲಿಯಂಟ್) -2 ಮತ್ತು ನಾಗಮಂಗಲ (ಮುಂಬೈ ಮೂಲ)- ಓರ್ವನಿಗೆ ಸೋಂಕು ಬಂದಿದೆ.

  • ಮೃತ ಸೋಂಕಿತನ ಬಳಿ ದಿನಸಿ ಕಿಟ್ ಪಡೆದ ಮಹಿಳೆಗೆ ಕೊರೊನಾ ಪಾಸಿಟಿವ್

    ಮೃತ ಸೋಂಕಿತನ ಬಳಿ ದಿನಸಿ ಕಿಟ್ ಪಡೆದ ಮಹಿಳೆಗೆ ಕೊರೊನಾ ಪಾಸಿಟಿವ್

    – ಚಿಕ್ಕಬಳ್ಳಾಪುರ ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಮತ್ತೋರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. 39 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

    ಮಾರ್ಚ್ 5ರಂದು ಈಕೆ ಕೊರೊನಾ ಸೋಂಕಿಗೆ ಬಲಿಯಾದ ವೃದ್ಧ ರೋಗಿ-250ರ ಮನೆಗೆ ತೆರಳಿ ದಿನಸಿ ಕಿಟ್ ಪಡೆದುಕೊಂಡಿದ್ದರು. ಸದ್ಯ ದಿನಸಿ ಕಿಟ್ ಪಡೆದುಕೊಂಡಿರುವ ಈಕೆಗೆ ಕೊರೊನಾ ಸೋಂಕು ದೃಢವಾಗಿದ್ದು, ದಿನಸಿ ಕಿಟ್ ಪಡೆದ ನೂರಾರು ಮಂದಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.

    ಸೋಂಕಿತೆ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ರೇಷ್ಮೆ ನೂಲು ಬಿಚ್ಚಣಿಕೆ ಕೆಲಸ ಮಾಡುತ್ತಿದ್ದು, ರೇಷ್ಮೆ ನೂಲು ಕಾರ್ಖಾನೆಯ ಮಾಲೀಕ, ಮಾಲೀಕನ ಹೆಂಡತಿ-ಮಕ್ಕಳು, ಕಾರ್ಖಾನೆಯಲ್ಲಿ ಕೆಲಸ ಮಾಡುವ 6 ಮಂದಿ ಕಾರ್ಮಿಕರು, ಸೋಂಕಿತೆಯ ಅಕ್ಕ-ಭಾವ ಹಾಗೂ ಮಕ್ಕಳು ಸೇರಿದಂತೆ ಒಟ್ಟು 22 ಮಂದಿಯನ್ನು ಪ್ರಥಮ ಸಂಪರ್ಕಿತರೆಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

    ಇವರೆಲ್ಲರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿ ಆರ್.ಲತಾ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗುವ ಮುನ್ನ ಈ ಏರಿಯಾದಲ್ಲಿ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡಿದ್ದ. ಈ ಪಿ-250 65 ವರ್ಷದ ವೃದ್ಧ ಏಪ್ರಿಲ್ 15 ರಂದು ಮೃತಪಟ್ಟಿದ್ದರು.

  • ಕೊರೊನಾಗೆ ದಕ್ಷಿಣ ಕನ್ನಡದಲ್ಲಿ ಮೊದಲ ಬಲಿ – ಬಂಟ್ವಾಳ ಮೂಲದ ಮಹಿಳೆ ಸಾವು

    ಕೊರೊನಾಗೆ ದಕ್ಷಿಣ ಕನ್ನಡದಲ್ಲಿ ಮೊದಲ ಬಲಿ – ಬಂಟ್ವಾಳ ಮೂಲದ ಮಹಿಳೆ ಸಾವು

    ಮಂಗಳೂರು: ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿವೆ. ಇಂದು ಮಂಗಳೂರಿನಲ್ಲೂ ಕೂಡ ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟದ್ದಾರೆ.

    ಮಂಗಳೂರಿನ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಶನಿವಾರ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಕೊರೊನಾ ರೋಗದ ಲಕ್ಷಣ ಕಂಡುಬಂದ ಹಿನ್ನೆಲೆ ಅಲ್ಲಿಂದ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.

    ನಂತರ ರೋಗಿಯ ಗಂಟಲು ದ್ರವ ಮತ್ತು ಬ್ಲಡ್ ಅನ್ನು ತೆಗೆದು ಶನಿವಾರವೇ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಮಹಿಳೆ ಸಾವನ್ನಪ್ಪಿದ್ದು, ಈಗ ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ 15 ಮಂದಿ ಮೃತಪಟ್ಟಿದ್ದಾರೆ.

    ಈಗ ಮೃತಳ ಪತಿ ಮತ್ತು ಮಗನನ್ನು ಕ್ವಾರಂಟೈನ್ ಮಾಡಲಾಗಿದೆ. ಮೃತಳ ಅತ್ತೆಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೂವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದೆ. ಮೃತ ಮಹಿಳೆ ಮಗ ಮಾರ್ಚ್ 16 ರಂದು ದುಬೈನಿಂದ ಬಂದಿದ್ದು, ಈತನಿಂದಲೇ ಸೋಂಕು ಬಂದಿರಬಹುದಾ ಎಂದು ಶಂಕಿಸಲಾಗುತ್ತಿದೆ,

    ಕೊರೊನಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆ ಸೀಲ್‍ಡೌನ್ ಮಾಡಲಾಗಿದೆ. ಸೀಲ್ ಡೌನ್ ಆಗಿದೆ, ಯಾರು ಮನೆಯಿಂದ ಹೊರಬರಬೇಡಿ ಎಂದು ಪೊಲೀಸರು ಜೀಪ್ ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ 12 ದಿನದ ಬಳಿಕ ಕೊರೊನಾ

    ದಕ್ಷಿಣ ಕನ್ನಡದಲ್ಲಿ 12 ದಿನದ ಬಳಿಕ ಕೊರೊನಾ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ 39 ವರ್ಷದ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ 13ನೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    ಸೋಂಕು ದೃಢಪಟ್ಟ ವ್ಯಕ್ತಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾಗಿದ್ದು ಸುಪ್ರೀಂ ಕೋರ್ಟ್ ವಕೀಲರಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದರು. ಮಾರ್ಚ್ 21ರಂದು ನಿಜಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದು, ಮನೆಯಲ್ಲೇ ಇದ್ದರು.

    ದಕ್ಷಿಣ ಕನ್ನಡ ಜಿಲ್ಲಾಡಳಿತ ವ್ಯಕ್ತಿಯ ಫೋನ್ ಟವರ್ ಲೊಕೇಶನ್ ಆಧಾರದಲ್ಲಿ ಪತ್ತೆ ಮಾಡಿ, ವಕೀಲರನ್ನು ಮಾರ್ಚ್ 23 ರಿಂದಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ನಂತರ ಸೋಂಕಿನ ಲಕ್ಷಣ ಕಂಡು ಬಂದಿರುವುದರಿಂದ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಂತೆ ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ತಬ್ಲಿಘಿಗೆ ತೆರಳಿದ ಮತ್ತು ಆ ಪ್ರದೇಶದಲ್ಲಿ ಸುತ್ತಾಡಿದ ಜಿಲ್ಲೆಯ 29 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಇವರ ಜೊತೆ ತೆರಳಿದ್ದ ತುಂಬೆ ಗ್ರಾಮದ ವ್ಯಕ್ತಿಗೆ ಏಪ್ರಿಲ್ 4ರಂದೇ ಕೊರೊನಾ ಪಾಸಿಟಿವ್ ಬಂದಿತ್ತು. ಕಳೆದ 12 ದಿನದಿಂದ ಒಂದೇ ಒಂದು ಕೇಸ್ ಇಲ್ಲದೇ ಹಾಗೂ ಪಾಸಿಟಿವ್ ಕಂಡು ಬಂದ 9 ಮಂದಿ ಗುಣಮುಖರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

  • ಚಿಕ್ಕಬಳ್ಳಾಪುರ ನಗರ ಸಂಪೂರ್ಣ ಸೀಲ್‍ಡೌನ್: ಡಿಸಿ ಆರ್.ಲತಾ

    ಚಿಕ್ಕಬಳ್ಳಾಪುರ ನಗರ ಸಂಪೂರ್ಣ ಸೀಲ್‍ಡೌನ್: ಡಿಸಿ ಆರ್.ಲತಾ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ಚಿಕ್ಕಬಳ್ಳಾಪುರ ನಗರವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

    ಇಂದು ಹೊಸದಾಗಿ ಮೂರು ಕೊರೊನಾ ಕೇಸ್ ದೃಢವಾದ ಹಿನ್ನಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಡಿಸಿ ಆರ್.ಲತಾ, 17 ನೇ ವಾರ್ಡಿನಲ್ಲಿ ಕೊರೊನಾ ಗೆ ಮೃತನಾದ ವೃದ್ಧನ ಕೊನೆಯ ಮಗ ಹಾಗೂ ಎದುರುಗಡೆ ಮನೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.

    ಮುನ್ನೆಚ್ಚರಿಕೆ ಕ್ರಮವಾಗಿ ವೃದ್ಧ ಮೃತಪಟ್ಟಾಗ 17ನೇ ವಾರ್ಡು ಸೇರಿದಂತೆ ಅಕ್ಕ ಪಕ್ಕದ ಮೂರ್ನಾಲ್ಕು ವಾರ್ಡುಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗಿತ್ತು. ಈಗ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಇಡೀ ಚಿಕ್ಕಬಳ್ಳಾಪುರ ನಗರವನ್ನೇ ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ. ಆಯಾ ವಾರ್ಡುವಾರು ಸ್ವಯಂಸೇವಕರ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಸದ್ಯ ಚಿಕ್ಕಬಳ್ಳಾಪುರ ನಗರದ ಜನತೆ ಇನ್ನೂ ಮುಂದೆ ಅಗತ್ಯ ವಸ್ತುಗಳ ಖರೀದಿ ನೆಪದಲ್ಲೂ ಹೊರಗೆ ಬರುವಂತಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 16ಕ್ಕೆ ಏರಿದ್ದು, 8 ಮಂದಿ ಗುಣಮುಖರಾಗಿದ್ದಾರೆ. ಜೊತೆಗೆ ಇಬ್ಬರು ಮೃತಪಟ್ಟಿದ್ದಾರೆ. ಉಳಿದ 06 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.