Tag: Positive

  • ಮೂರು ದಿನದಲ್ಲಿ ನಾಲ್ಕು ಸಾವು – ಕಾಫಿನಾಡಿಗರು ಕಂಗಾಲು

    ಮೂರು ದಿನದಲ್ಲಿ ನಾಲ್ಕು ಸಾವು – ಕಾಫಿನಾಡಿಗರು ಕಂಗಾಲು

    ಚಿಕ್ಕಮಗಳೂರು: ಸೋಮವಾರ ಎರಡು, ಮಂಗಳವಾರ ಒಂದು, ಬುಧವಾರ ಒಂದು ಎಂಬಂತೆ ಜಿಲ್ಲೆಯಲ್ಲಿ ಮೂರು ದಿನದಲ್ಲಿ ಕೊರೊನಾಗೆ ನಾಲ್ಕು ಜನ ಪ್ರಾಣ ತೆತ್ತಿದ್ದು ಜಿಲ್ಲೆಯ ಜನ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು ಜಿಲ್ಲೆಯ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯ 72 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಪ್ರಾಣ ತೆತ್ತವರ ಸಂಖ್ಯೆ ಏಳಕ್ಕೆ ಏರಿದೆ.

    ಜಿಲ್ಲೆಯಲ್ಲಿ ಪ್ರಸ್ತುತ 170 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. 170ರಲ್ಲಿ ಏಳು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಲ್ಲಿ ಮೂರೇ ದಿನಕ್ಕೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು ಜಿಲ್ಲೆಯ ಜನ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ತಮಗೆ ತಾವೇ ವಿಮರ್ಶೆ ಮಾಡಿಕೊಂಡು ಭಯದಲ್ಲಿ ಬದುಕುವಂತಾಗಿದೆ. ಜಿಲ್ಲೆಯಲ್ಲಿ ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರಲಿಲ್ಲ.

    ಆದರೆ ಮೇ 19ಕ್ಕೆ ಆರಂಭವಾದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 55 ದಿನಕ್ಕೆ 176 ಗಡಿ ತಲುಪಿದೆ. ಆ 170 ಪ್ರಕರಣಗಳಲ್ಲಿ ಏಳು ಜನ ಪ್ರಾಣ ಕಳೆದುಕೊಂಡಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಗುಣಮುಖವಾಗುತ್ತಿರುವ ಪ್ರಕರಣಗಳ ಸಂಖ್ಯೆಯು ಹೆಚ್ಚಿದೆ. ಆದರೆ ಈ ಮಧ್ಯೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.

  • ಸಚಿವ ಸಿ.ಟಿ.ರವಿಗೆ ಕೊರೊನಾ- ಪತ್ನಿ, ಆಫೀಸ್ ಸಿಬ್ಬಂದಿಗೆ ನೆಗೆಟಿವ್

    ಸಚಿವ ಸಿ.ಟಿ.ರವಿಗೆ ಕೊರೊನಾ- ಪತ್ನಿ, ಆಫೀಸ್ ಸಿಬ್ಬಂದಿಗೆ ನೆಗೆಟಿವ್

    – ಗನ್ ಮ್ಯಾನ್, ಕಾರ್ ಚಾಲಕನಿಗೂ ನೆಗೆಟಿವ್

    ಬೆಂಗಳೂರು: ಸಚಿವ ಸಿ.ಟಿ.ರವಿ ಅವರು ಕೋವಿಡ್ 19 ಟೆಸ್ಟ್ ಮಾಡಿಸಿದ್ದು, ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಶನಿವಾರ ಸಿ.ಟಿ.ರವಿ, ಅವರ ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಭಾನುವಾರ ಸಂಜೆ ವರದಿ ಬಂದಿದ್ದು, ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿಗೆ ನೆಗೆಟಿವ್ ಬಂದಿದೆ. ಆದರೆ ಸಿ.ಟಿ.ರವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಸಿ.ಟಿ.ರವಿ ಈ ಬಗ್ಗೆ ಟ್ವೀಟ್ ಮಾಡಿದ್ದು, “ನಿನ್ನೆ ನಾನು, ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದೆವು. ಪಲ್ಲವಿ ಹಾಗೂ ನನ್ನ ಗನ್-ಮ್ಯಾನ್, ಚಾಲಕ ಸೇರಿ ಆಫೀಸ್ ಸಿಬ್ಬಂದಿ ಎಲ್ಲರದ್ದು ನೆಗೆಟಿವ್ ಬಂದಿದೆ” ಎಂದು ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ. “ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸಲಿದ್ದು, ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ” ಎಂದು ತಮಗೆ ಕೊರೊನಾ ಇರುವುದನ್ನ ದೃಢಪಡಿಸಿದ್ದಾರೆ.

  • ಒಂದು ವಾರ ಸಚಿವ ಬಿ.ಸಿ.ಪಾಟೀಲ್ ಕ್ವಾರಂಟೈನ್

    ಒಂದು ವಾರ ಸಚಿವ ಬಿ.ಸಿ.ಪಾಟೀಲ್ ಕ್ವಾರಂಟೈನ್

    ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಕೆಲ ರಾಜಕೀಯ ನಾಯಕರು ಕೂಡ ಕ್ವಾರಂಟೈನ್ ಆಗಿದ್ದಾರೆ. ಇದೀಗ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೂಡ ಒಂದು ವಾರಗಳ ಕಾಲ ಕ್ವಾರಂಟೈನ್ ಆಗಿದ್ದಾರೆ.

    ಬಿ.ಸಿ.ಪಾಟೀಲ್ ಅವರ ಸಂಬಂಧಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಬೆಂಗಳೂರಿನ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿದ್ದರು. ಈ ಹಿನ್ನೆಲೆಯಲ್ಲಿ ಬಿ.ಸಿ.ಪಾಟೀಲ್ ಒಂದು ವಾರ ಕ್ವಾರಂಟೈನ್ ಆಗಿದ್ದಾರೆ. ಬಿ.ಸಿ.ಪಾಟೀಲ್ ಮಾತ್ರವಲ್ಲದೇ ಅವರ ಕುಟುಂಬಸ್ಥರು ಮತ್ತು ಸಿಬ್ಬಂದಿ ವರ್ಗ ಕೂಡ ಕ್ವಾರಂಟೈನ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಸಚಿವರೇ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

    ಬಿ.ಸಿ.ಪಾಟೀಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಬೆಂಗಳೂರಿನ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿ ನನ್ನ ಸಂಬಂಧಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಅವರ ಜೊತೆ ಸಂಪರ್ಕದಲ್ಲಿ ಇದ್ದ ನಾನು ಮತ್ತು ನನ್ನ ಕುಂಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗದವರು ಒಂದು ವಾರಗಳ ಕಾಲ ಕ್ವಾರಂಟೈನ್ ಆಗುತ್ತಿದ್ದೇವೆ” ಎಂದು ಜನರಿಗೆ ತಿಳಿಸಿದ್ದಾರೆ.

    ಈಗಾಗಲೇ ಕೊರೊನಾ ಭೀತಿಯಿಂದ ಸಿಎಂ ಯಡಿಯೂರಪ್ಪ ಅವರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಅಧಿಕೃತ ನಿವಾಸ ಕಾವೇರಿ ಮತ್ತು ಅವರ ಧವಳಗಿರಿಯ ನಿವಾಸದಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಯಡಿಯೂರಪ್ಪನವರು ಶುಕ್ರವಾದಿಂದ ಐದು ದಿನಗಳ ಕಾಲ ತಮ್ಮ ಕಾವೇರಿ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ.

  • ಐದು ದಿನ ಸಿಎಂ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್- ಅಧಿಕೃತವಾಗಿ ಪ್ರಕಟ

    ಐದು ದಿನ ಸಿಎಂ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್- ಅಧಿಕೃತವಾಗಿ ಪ್ರಕಟ

    ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೆ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದಿನಿಂದ ಕೆಲ ದಿನಗಳ ಕಾಲ ಮನೆಯಲ್ಲಿ ಉಳಿಯಲು ತೀರ್ಮಾನ ಮಾಡಿದ್ದಾರೆ.

    ಸಿಎಂ ಯಡಿಯೂರಪ್ಪ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

    ಯಾರೂ ಆತಂಕ ಪಡುವ ಅಗತ್ಯವಿಲ್ಲ ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ ಎಂದು ಸೆಲ್ಫ್ ಕ್ವಾರಂಟೈನ್ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.  ಈಗಾಗಲೇ ಸಿಎಂ ಕಾವೇರಿ ನಿವಾಸಕ್ಕೆ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಕಾವೇರಿ ನಿವಾಸದ ಮುಖ್ಯ ಗೇಟ್, ಮನೆ, ಹಾಗೂ ಗೃಹ ಕಚೇರಿ ಕೃಷ್ಣಾಗೆ ಸ್ಯಾನಿಟೈಸ್ ಮಾಡುತ್ತಿದ್ದಾರೆ.

  • ಸಿಎಂ ಗೃಹ ಕಚೇರಿ ಸಿಬ್ಬಂದಿಗೂ ಸೋಂಕು- ಬಿಎಸ್‍ವೈಗೆ ಕೊರೊನಾತಂಕ

    ಸಿಎಂ ಗೃಹ ಕಚೇರಿ ಸಿಬ್ಬಂದಿಗೂ ಸೋಂಕು- ಬಿಎಸ್‍ವೈಗೆ ಕೊರೊನಾತಂಕ

    – ಕಾರ್ಯಕ್ರಮ ರದ್ದುಗೊಳಿಸಿ ಮನೆಯಲ್ಲೇ ಉಳಿದ ಸಿಎಂ

    ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೆ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಭೀತಿ ಶುರುವಾಗಿದೆ.

    ತಮ್ಮ ಕಚೇರಿಯಲ್ಲೇ ಸೋಂಕು ಕಾಣಿಸಿಕೊಂಡ ಕಾರಣ ಸಿಎಂ ಬಿಎಸ್‍ವೈ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ಮನೆಯಲ್ಲೇ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಿವೃತ್ತಿ ಹೊಂದಿರುವ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮಲ್ಲಿ ಸಿಎಂ ಗೈರು ಹಾಜರಾಗಲಿದ್ದಾರೆ. ಇಂದು ಇಡೀ ದಿನ ಸಿಎಂ ತಮ್ಮ ಕಾವೇರಿ ನಿವಾಸದಲ್ಲೇ ಇರಲಿದ್ದಾರೆ.

    ಸದ್ಯ ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಸರ್ಕಾರಿ ನಿವಾಸ ಕಾವೇರಿ ಮತ್ತು ಅಧಿಕೃತ ನಿವಾಸ ಧವಳಗಿರಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದಲೂ ಮೂರೂ ನಿವಾಸಗಳಲ್ಲಿರುವ ಸಿಬ್ಬಂದಿಗೆ ಸೋಂಕು ಪಾಸಿಟಿವ್ ಪತ್ತೆ ಆಗುತ್ತಿದ್ದು, ಸಿಎಂಗೆ ಕೊರೊನಾಂತಕ ಎದುರಾಗಿದೆ. ಈ ನಡುವೆ ಸಿಎಂ ಸಚಿವಾಲಯದಿಂದ ಮಾಹಿತಿ ಮುಚ್ಚಿಡುವ ಪ್ರಯತ್ನ ನಡೆಯುತ್ತಿದ್ಯಾ? ಎಂಬ ಅನುಮಾನಗಳು ಮೂಡಿವೆ.

    ಸಿಎಂ ಕಾರು ಚಾಲಕನಿಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಧವಳಗಿರಿ ನಿವಾಸದ ಅಡುಗೆ ನೌಕರನಿಗೂ ಸೋಂಕು ಇರುವುದು ದೃಢಪಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಲವು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಕೃಷ್ಣಾದಲ್ಲಿ ಹಲವು ಸಭೆಗಳು ನಡೆದಿವೆ. ಸೆಂಟ್ರಲ್ ಟೀಂ ಜತೆ ಸಿಎಂ ಕಳೆದ ಮಂಗಳವಾರ ಸಭೆ ನಡೆಸಿದ್ದಾರೆ. ಸಾಕಷ್ಟು ಸಚಿವರು, ಶಾಸಕರು, ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಇಷ್ಟದರೂ ಈ ಮಾಹಿತಿಯನ್ನು ಸಚಿವಾಲಯ ಮುಚ್ಚಿಟ್ಟಿದ್ದು, ಯಾಕೆ ಎಂಬ ಪ್ರಶ್ನೆ ಎದ್ದಿದೆ.

  • ಹಾಸನದಲ್ಲಿ ಇಂದು ಕೊರೊನಾಗೆ ಮೂವರು ಬಲಿ – 21 ಹೊಸ ಪಾಸಿಟಿವ್ ಪ್ರಕರಣ

    ಹಾಸನದಲ್ಲಿ ಇಂದು ಕೊರೊನಾಗೆ ಮೂವರು ಬಲಿ – 21 ಹೊಸ ಪಾಸಿಟಿವ್ ಪ್ರಕರಣ

    ಹಾಸನ: ಹಾಸನದಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದು, ಇಂದು ಒಟ್ಟು 21 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

    ಮೃತರಲ್ಲಿ ಇಬ್ಬರು ಪುರುಷರಾಗಿದ್ದು, ಒಬ್ಬರು ಮಹಿಳೆಯಾಗಿದ್ದಾರೆ. ಒಬ್ಬರಿಗೆ 55 ವರ್ಷ ವಯಸ್ಸಾಗಿದ್ದರೆ ಮತ್ತೊಬ್ಬರಿಗೆ 76 ವರ್ಷ ವಯಸ್ಸಾಗಿದೆ. ಮತ್ತೊಬ್ಬರಿಗೆ 75 ವರ್ಷ ವಯಸ್ಸಾಗಿದೆ. ಮೂವರಿಗೂ ಕೊರೊನಾ ಜೊತೆಗೆ ಕಿಡ್ನಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಹಾಸನದಲ್ಲಿ ಇದುವರೆಗೂ 615 ಪಾಸಿಟಿವ್ ಕೇಸ್ ಕಂಡು ಬಂದಿದೆ. ಒಟ್ಟು 390 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 210 ಸಕ್ರಿಯ ಪ್ರಕರಣಗಳು ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನದಲ್ಲಿ ಇದುವರೆಗೂ ಕೊರೊನಾದಿಂದ 15 ಜನ ಮೃತಪಟ್ಟಂತಾಗಿದೆ ಎಂದು ಡಿಎಚ್‍ಒ ಸತೀಶ್ ಮಾಹಿತಿ ನೀಡಿದ್ದಾರೆ.

  • ಶಾಸಕ ಯು.ಟಿ ಖಾದರ್ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್

    ಶಾಸಕ ಯು.ಟಿ ಖಾದರ್ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್

    ಮಂಗಳೂರು: ಶಾಸಕ ಯು.ಟಿ ಖಾದರ್ ಅವರ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು ದೃಢಪಟ್ಟಿದೆ.

    ಯು.ಟಿ ಖಾದರ್ ಅವರಿಗೆ ಗನ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಡಿಎಆರ್ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಭಯಗೊಂಡ ಖಾದರ್ ಅವರು ನಾಲ್ಕು ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ್ದು, ನಾಲ್ಕು ಬಾರಿಯೂ ವರದಿ ನೆಗೆಟಿವ್ ಬಂದಿದೆ.

    ಇಂದು ಕೊರೊನಾ ಪಾಸಿಟಿವ್ ಬಂದ ಗನ್‍ಮ್ಯಾನ್ ಖಾದರ್ ಜೊತೆ ಬೆಂಗಾವಲು ವಾಹನದಲ್ಲಿದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಹತ್ತು ದಿನದ ಹಿಂದೆ ಅನಾರೋಗ್ಯ ಎಂದು ಮನೆಯಲ್ಲಿದ್ದ ಪೊಲೀಸ್ ಪೇದೆಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತನ ಜೊತೆ ಕಾರ್ಯನಿರ್ವಹಿಸುತ್ತಿದ್ದ ಉಳಿದ ಮೂವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

  • ಬೀದರಿನಲ್ಲಿ ಇಂದು ಕೊರೊನಾಗೆ 5 ಬಲಿ – ಜಿಲ್ಲೆಯಲ್ಲಿ 850ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರಿನಲ್ಲಿ ಇಂದು ಕೊರೊನಾಗೆ 5 ಬಲಿ – ಜಿಲ್ಲೆಯಲ್ಲಿ 850ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಕೊರೊನಾ ಮರಣ ಕೇಕೆ ಮುಂದುವರಿದಿದೆ. ಬೀದರ್‍ನಲ್ಲಿ ಇಂದು 5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.

    ಬೀದರಿನಲ್ಲಿ 4 ಹಾಗೂ ಬಸವಕಲ್ಯಾಣದಲ್ಲಿ ಒಬ್ಬರನ್ನು ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್‍ನಲ್ಲಿ ಸೇರಿ ಒಟ್ಟು 51 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಅಸ್ತಮಾ, ಉಸಿರಾಟ, ಜ್ವರ, ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಇಂದು ಸಾವನ್ನಪ್ಪಿದ್ದಾರೆ.

    ಇಂದು 51 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ಇದರಲ್ಲಿ 561 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ್ದಾರೆ. 240 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಈ ಚೀನಾ ಮಹಾಮಾರಿ ದಿನೇ ದಿನೇ ಬಲಿಯನ್ನು ಪಡೆಯುತ್ತಿರುವ ವೇಗ ನೋಡಿ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.

  • ನಾಲ್ವರು KSRTC ನಿರ್ವಾಹಕರಿಗೆ ಕೊರೊನಾ ಪಾಸಿಟಿವ್: ಹಾಸನದಲ್ಲಿ ಹೆಚ್ಚಾದ ಆತಂಕ

    ನಾಲ್ವರು KSRTC ನಿರ್ವಾಹಕರಿಗೆ ಕೊರೊನಾ ಪಾಸಿಟಿವ್: ಹಾಸನದಲ್ಲಿ ಹೆಚ್ಚಾದ ಆತಂಕ

    – ಇಂದು 25 ಜನರಿಗೆ ಕೊರೊನಾ, 1 ಸಾವು

    ಹಾಸನ: ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಹಾಸನದಲ್ಲಿ ಇಂದು 25 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ನಾಲ್ವರು ನಿರ್ವಾಹಕರು ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗದ ಬಸ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸೋಂಕಿತ ಕಂಡಕ್ಟರ್ ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ 25 ಜನರಲ್ಲಿ ಓರ್ವ ಪೊಲೀಸ್, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಇಂದು ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.

    ಇಂದು ಓರ್ವ 36 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದುವರೆಗೂ ಹಾಸನದಲ್ಲಿ 479 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 255 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗ ಸದ್ಯ ಜಿಲ್ಲೆಯಲ್ಲಿ 217 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

  • ಮೂವರು ಆರೋಪಿಗಳಿಗೆ ಸೋಂಕು- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್

    ಮೂವರು ಆರೋಪಿಗಳಿಗೆ ಸೋಂಕು- ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್

    ಬೆಂಗಳೂರು: ಮೂವರು ಕೊಲೆ ಆರೋಪಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಸಿಲಿಕಾನ್ ಸಿಟಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸೀಲ್‍ಡೌನ್ ಮಾಡಲು ರೆಡಿಯಾಗಿದೆ.

    ಈ ಮೂಲಕ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಮತ್ತೊಂದು ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧತೆ ನಡೆದಿದೆ. ಪಶ್ಚಿಮ ವಿಭಾಗದ ಪೊಲೀಸರಿಗೆ ಕೊರೊನಾ ಕಂಟಕವಾಗಿದೆ. ಡಿಸಿಪಿ ಕಚೇರಿ, ಎಸಿಪಿ ಕಚೇರಿ, ಉಪ್ಪಾರಪೇಟೆ, ಮಾರ್ಕೆಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಜೆಜೆ ಆರ್ ನಗರ, ಕಾಮಾಕ್ಷಿಪಾಳ್ಯ, ಕೆಪಿ ಅಗ್ರಹಾರ, ಕೆಂಗೇರಿ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿದ್ದವು. ಇದೀಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ ಸೀಲ್‍ಡೌನ್‍ಗೆ ಸಿದ್ಧವಾಗಿದೆ.

    ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸರು 9 ಜನ ಕೊಲೆ ಆರೋಪಿಗಳನ್ನು ಬಂಧಿಸಿ ಸೆಲ್‍ನಲ್ಲಿ ಇಟ್ಟಿದ್ದರು. ಈ 9 ಜನರ ಪೈಕಿ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಮೂವರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲು ತೀರ್ಮಾನ ಮಾಡಿದ್ದು, ಸಂಪರ್ಕದಲ್ಲಿದ್ದ ಪೊಲೀಸರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ.