Tag: Positive

  • ಹಾಸನ ಜಿಲ್ಲೆಯಲ್ಲಿಂದು 165 ಮಂದಿಗೆ ಕೊರೊನಾ – ಮೂವರ ಸಾವು

    ಹಾಸನ ಜಿಲ್ಲೆಯಲ್ಲಿಂದು 165 ಮಂದಿಗೆ ಕೊರೊನಾ – ಮೂವರ ಸಾವು

    ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 165 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1673ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 778 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 851 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 44 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

    ಇಂದು ಹಾಸನ ತಾಲೂಕಿನ 3 ಜನ ಸೋಂಕಿತರು ಮೃತಪಟ್ಟಿದ್ದಾರೆ. ಜುಲೈ 15ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 65 ವೃದ್ಧರೊಬ್ಬರು ಕೂಡ ಸಾವನ್ನಪ್ಪಿದ್ದು, ಇವರು ಹೃದಯ ಸಂಬಂಧಿ ಹಾಗೂ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜುಲೈ 21ರಂದು ದಾಖಲಾಗಿದ್ದ 47 ವರ್ಷದ ಸೋಂಕಿತ ಹಾಗೂ ಜುಲೈ 22ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿಯು ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಇಂದು ಪತ್ತೆಯಾದ 165 ಪ್ರಕರಣಗಳಲ್ಲಿ 51 ಜನ ಅರಸೀಕೆರೆ ತಾಲೂಕಿನವರು, 16 ಮಂದಿ ಚನ್ನರಾಯಪಟ್ಟಣ ತಾಲೂಕಿನವರು, 27 ಜನ ಹಾಸನ ತಾಲೂಕು, 10 ಜನ ಹೊಳೆನರಸೀಪುರ ತಾಲೂಕು, ಆಲೂರು ತಾಲೂಕಿನಲ್ಲಿ 17 ಜನ, ಸಕಲೇಶಪುರ ತಾಲೂಕಿನಲ್ಲಿ 4 ಜನ, 36 ಜನ ಅರಕಲಗೂಡು ತಾಲೂಕು ಹಾಗೂ 4 ಜನ ಬೇಲೂರು ತಾಲೂಕಿನವರಾಗಿದ್ದಾರೆ.

  • ಸಚಿವ ಆನಂದ್ ಸಿಂಗ್‍ಗೆ ಕೊರೊನಾ ಪಾಸಿಟಿವ್

    ಸಚಿವ ಆನಂದ್ ಸಿಂಗ್‍ಗೆ ಕೊರೊನಾ ಪಾಸಿಟಿವ್

    ಬಳ್ಳಾರಿ: ಅರಣ್ಯ ಸಚಿವ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್‍ಗೆ ಕೊರೊನಾ ಸೋಂಕು ದೃಢವಾಗಿದೆ.

    ಸಚಿವ ಆನಂದ್ ಸಿಂಗ್ ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಅದರ ವರದಿ ಶನಿವಾರ ರಾತ್ರಿ ಬಂದಿದ್ದು, ವರದಿಯಲ್ಲಿ ಆನಂದ್ ಸಿಂಗ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಯಾವುದೇ ರೋಗ ಲಕ್ಷಣಗಳಿಲ್ಲದೇ ಆನಂದ್ ಸಿಂಗ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಆನಂದ್ ಸಿಂಗ್ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಹೊಸಪೇಟೆ ನಿವಾಸದಲ್ಲಿ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆನಂದ್ ಸಿಂಗ್ ಆರೋಗ್ಯವಾಗಿದ್ದಾರೆ, ಪಾಸಿಟಿವ್ ಬಂದಿರುವುದು ನಿಜ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಇತ್ತೀಚೆಗೆ ಆನಂದ್ ಸಿಂಗ್ ಕೊರೊನಾ ಸೋಂಕಿತರ ವಾರ್ಡ್ ಒಳಗೆ ಹೋಗಿ ಬಂದಿದ್ದರು. ಅಲ್ಲದೇ ಅವರ ಕಾರು ಚಾಲಕನಿಗೂ ಕೊರೊನಾ ದೃಢವಾಗಿತ್ತು. ಇದರಿಂದ ಆನಂದ್ ಸಿಂಗ್‍ಗೂ ಕೊರೊನಾ ಬಂದಿದೆ ಎಂದು ಹೇಳಾಗುತ್ತಿದೆ.

  • ಮರಳಿ ಗೂಡಿಗೆ ಮೊದಲಿಗಿಂತಲೂ ಆರೋಗ್ಯವಾಗಿ ಹಿಂದಿರುಗಿದ ಅಮ್ಮ- ಖುಷಿ ಹಂಚಿಕೊಂಡ ಪ್ರೇಮ್

    ಮರಳಿ ಗೂಡಿಗೆ ಮೊದಲಿಗಿಂತಲೂ ಆರೋಗ್ಯವಾಗಿ ಹಿಂದಿರುಗಿದ ಅಮ್ಮ- ಖುಷಿ ಹಂಚಿಕೊಂಡ ಪ್ರೇಮ್

    ಬೆಂಗಳೂರು: ನಟ ನೆನಪಿರಲಿ ಪ್ರೇಮ್ ಅವರ ತಾಯಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಬಗ್ಗೆ ಸ್ವತಃ ಪ್ರೇಮ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ನಟ ಪ್ರೇಮ್ ಅವರ ತಾಯಿ ಕೆಲವು ದಿನಗಳ ಹಿಂದೆ ಕೋವಿಡ್ ಟೆಸ್ಟ್ ಮಾಡಿದ್ದರು. ಆಗ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಪ್ರೇಮ್ ತಾಯಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಖುಷಿಯ ವಿಚಾರವನ್ನು ಪ್ರೇಮ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಆ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಕೆಲವು ದಿನಗಳ ಹಿಂದೆ ನನ್ನ ತಾಯಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಹಾಗಾಗಿ ಆಸ್ಪತ್ರೆ ಸೇರಿದ್ದರು. ಈಗ ಸಂತೋಷದ ವಿಚಾರವೆಂದರೆ ಅವರು ಮೊದಲಿಗಿಂತಲೂ ಹೆಚ್ಚು ಆರೋಗ್ಯವಂತರಾಗಿ ಮತ್ತೆ ಮನೆಗೆ ಮರಳಿದ್ದಾರೆ ಎಂದು ಪ್ರೇಮ್ ಸಂತಸದಿಂದ ಹೇಳಿದ್ದಾರೆ.

    ನಮ್ಮ ತಾಯಿ ಇಷ್ಟುಬೇಗ ಗುಣಮುಖರಾಗುವಂತೆ ವೈದ್ಯರು ಚೆನ್ನಾಗಿ ನೋಡಿಕೊಂಡಿದ್ದಾರೆ. ಅಲ್ಲದೇ ತಮ್ಮ ತಾಯಿಗೆ ಆರೈಕೆ ಮಾಡಿ, ಔಷಧ ನೀಡಿ ಗುಣಪಡಿಸಿದ ವೈದ್ಯರಿಗೆ ಧನ್ಯವಾದಗಳು. ಜೊತೆಗೆ ನಮ್ಮ ತಾಯಿ ಆರೋಗ್ಯವಂತರಾಗಿ ಬರುವಂತೆ ಹಾರೈಕೆ ಮಾಡಿದ ಎಲ್ಲ ಮನಸುಗಳಿಗೂ ಧನ್ಯವಾದ ಎಂದಿದ್ದಾರೆ.

    ಕೊರೊನಾ ವೈರಸ್ ಕುರಿತಂತೆ ಎಲ್ಲೆಡೆ ಕೆಲವು ವದಂತಿ ಹರಡಿವೆ. 60 ವರ್ಷ ಮೇಲ್ಪಟ್ಟವರು, ಬಿಪಿ, ಶುಗರ್ ಇರುವವರಿಗೆ ಕೊರೊನಾ ಬಂದರೆ ಅವರು ಮತ್ತೆ ವಾಪಸ್ ಜೀವಂತವಾಗಿ ಬರುವುದಿಲ್ಲ ಎಂದು ವದಂತಿ ಹರಡಿದೆ. ಆದರೆ ಇದೆಲ್ಲವೂ ಸುಳ್ಳು ಸುದ್ದಿ. ನನ್ನ ತಾಯಿಗೆ 66 ವರ್ಷ, ಅವರಿಗೂ ಬಿಪಿ, ಶುಗರ್ ಇದೆ. ಆದರೂ ಧೈರ್ಯವಾಗಿ ಕೊರೊನಾ ಎದುರಿಸಿ ಮನೆಗೆ ನಗು ನಗುತ್ತಾ ವಾಪಸ್ ಬಂದಿದ್ದಾರೆ ಎಂದು ಎಲ್ಲರಿಗೂ ಧೈರ್ಯ ತುಂಬಿದರು.

    ಬಿಪಿ, ಶುಗರ್ ಇರುವವರು ಮತ್ತು ಹಿರಿಯರು ದಯವಿಟ್ಟು ಯಾವುದೇ ರೀತಿಯ ಆತಂಕ, ಭಯಪಡಬೇಡಿ. ಧೈರ್ಯವಾಗಿರಿ, ನಿಮ್ಮ ಆತ್ಮಸ್ಥೈರ್ಯ ನಿಮ್ಮನ್ನು ನಗು ನಗುತ್ತಾ ವಾಪಸ್ ಮನೆಗೆ ಬರುವಂತೆ ಮಾಡುತ್ತದೆ. ಆದ್ದರಿಂದ ಯಾವುದೇ ವದಂತಿಗಳಿಗೂ ಕಿವಿ ಕೊಡಬೇಡಿ. ಯಾರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರೆಲ್ಲರೂ ಶೀಘ್ರವೇ ಗುಣಮುಖರಾಗಿ ಬರುವಂತೆ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

    https://www.instagram.com/tv/CDDxEYSjRrF/?igshid=1olm4em13leeg

  • ಬೈಕ್ ಅಪಘಾತದಲ್ಲಿ ಎಎಸ್‍ಐ ಸಾವು – ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ದೃಢ

    ಬೈಕ್ ಅಪಘಾತದಲ್ಲಿ ಎಎಸ್‍ಐ ಸಾವು – ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ದೃಢ

    ಕೋಲಾರ: ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಎಎಸ್‍ಐ ಸಾವನ್ನಪ್ಪಿದ್ದ ಘಟನೆ ಕೋಲಾರದಲ್ಲಿ ನಡೆದಿತ್ತು. ಈ ಎಎಸ್‍ಐಗೆ ಮರಣೋತ್ತರ ಪರೀಕ್ಷೆ ವೇಳೆ ಕೊರೊನಾ ಇರುವುದು ದೃಢಪಟ್ಟಿದ್ದು, ಕೋಲಾರದ ಶ್ರೀನಿವಾಸಪುರ ಪೊಲೀಸರಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಕಳೆದ ರಾತ್ರಿ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಶ್ರೀನಿವಾಸಪುರ ಪೊಲೀಸ್ ಠಾಣೆಯ ಎಎಸ್‍ಐ 52 ವರ್ಷದ ಮಂಜುನಾಥ್ ಮೃತಪಟ್ಟಿದ್ದರು. ನಿನ್ನೆ ರಾತ್ರಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಸದ್ಯ ಮೃತನಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಪೊಲೀಸ್ ಸಿಬ್ಬಂದಿಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಮರಣೋತ್ತರ ಪರೀಕ್ಷೆ ವೇಳೆ ಆತನ ಗಂಟಲು ಮಾದರಿ ಸಂಗ್ರಹ ಮಾಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಎಎಸ್‍ಐಗೆ ಕೊರೊನಾ ಸೋಂಕು ಇರುವುದನ್ನು ಇಂದು ದೃಢಪಡಿಸಿದ್ದಾರೆ. ಹಾಗಾಗಿ ಮೃತನ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆಗೆ ರಾಸಾಯನಿಕ ಸಿಂಪಡಣೆ ಮಾಡಿ ಸೀಲ್‍ಡೌನ್ ಮಾಡಲಾಗಿದೆ.

    ಅಪಘಾತ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋವಿಡ್ ಗೈಡ್‍ಲೈನ್ಸ್ ಅನ್ವಯ ಶವ ಸಂಸ್ಕಾರಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

  • ಮಂಡ್ಯದ ಆಧುನಿಕ ಭಗೀರಥ ಕಾಮೇಗೌಡರಿಗೆ ಕೊರೊನಾ ಪಾಸಿಟಿವ್

    ಮಂಡ್ಯದ ಆಧುನಿಕ ಭಗೀರಥ ಕಾಮೇಗೌಡರಿಗೆ ಕೊರೊನಾ ಪಾಸಿಟಿವ್

    ಮಂಡ್ಯ: ಆಧುನಿಕ ಭಗೀರಥ ಎಂದೇ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಕಾಮೇಗೌಡರಿಗೆ ಕೊರೊನಾ ವೈರಸ್ ಬಂದಿದೆ.

    ಸ್ವತಃ ಖರ್ಚಿನಿಂದ ಕೆರೆಗಳನ್ನು ನಿರ್ಮಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಇಂದು ಧೃಡವಾಗಿದೆ. ಇದನ್ನೂ ಓದಿ: ಕೊರೊನಾ ಪಾಸಿಟಿವ್‍ಅನ್ನು ನಿಮ್ಮ ಪಾಸಿಟಿವ್ ಆಲೋಚನೆಯ ಮೂಲಕ ಗೆಲ್ಲಿ: ಸುಮಲತಾ

    ಕಾಮೇಗೌಡರು ಕಳೆದ 15 ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆರಂಭದಲ್ಲಿ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣಮುಖವಾಗದ ಕಾರಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕಾಮೇಗೌಡ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಸದ್ಯ ಕಾಮೇಗೌಡ ಅವರು ಮಂಡ್ಯದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಪತ್ನಿ, ಮಗನಿಗೆ ಸೋಂಕು- ಕೊರೊನಾ ಅವಮಾನಕ್ಕೆ ವ್ಯಕ್ತಿ ನೇಣಿಗೆ ಶರಣು

    ಪತ್ನಿ, ಮಗನಿಗೆ ಸೋಂಕು- ಕೊರೊನಾ ಅವಮಾನಕ್ಕೆ ವ್ಯಕ್ತಿ ನೇಣಿಗೆ ಶರಣು

    ಬೆಂಗಳೂರು: ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರದ ನಿವಾಸಿ ನಾಗರಾಜು (56) ಮೃತ ವ್ಯಕ್ತಿ. ಹೆಸರುಘಟ್ಟ ಕೆರೆಯ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತ ನಾಗರಾಜು ಮಗನಿಗೆ ಮೊದಲು ಪಾಸಿಟಿವ್ ಬಂದಿತ್ತು. ನಂತರ ಪತ್ನಿ ಕೊರೊನಾ ಟೆಸ್ಟ್ ಮಾಡಿಸಿದ್ದು, ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಪೊಲೀಸರು ಅವರು ವಾಸವಿದ್ದ ಏರಿಯಾವನ್ನು ಸೀಲ್‍ಡೌನ್ ಮಾಡಿದ್ದಾರೆ.

    ಸೀಲ್‍ಡೌನ್ ವೇಳೆ ಅಕ್ಕಪಕ್ಕದ ಮನೆಯವರು ಮೃತ ನಾಗರಾಜ್ ಕುಟುಂಬಸ್ಥರನ್ನು ಅವಮಾನಿಸಿದ್ದರು. ನಿಮ್ಮಿಂದ ನಮಗೆಲ್ಕಾ ಸಮಸ್ಯೆ ಆಗುತ್ತಿದೆ. ಎಲ್ಲಾದರೂ ದೂರು ಹೋಗಿ ಎಂದು ಗಲಾಟೆ ಮಾಡಿದ್ದರಂತೆ. ಇದರಿಂದ ತೀವ್ರ ಬೇಸತ್ತ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಸನದಲ್ಲಿ ಮುಂದುವರಿದ ಸಾವಿನ ಸರಣಿ – ಓರ್ವ ಸಾವು, 41 ಜನರಿಗೆ ಕೊರೊನಾ

    ಹಾಸನದಲ್ಲಿ ಮುಂದುವರಿದ ಸಾವಿನ ಸರಣಿ – ಓರ್ವ ಸಾವು, 41 ಜನರಿಗೆ ಕೊರೊನಾ

    ಹಾಸನ: ಜಿಲ್ಲೆಯಲ್ಲಿ ಇಂದು ಒಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಹಾಗೂ ಹೊಸದಾಗಿ 41 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 886ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.

    ಇದುವರೆಗೆ 553 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 305 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 28 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 16 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ|| ಸತೀಶ್ ಮಾಹಿತಿ ನೀಡಿದರು.

    ಹೊಸದಾಗಿ ಇಂದು ಪತ್ತೆಯಾದ 41 ಪ್ರಕರಣಗಳಲ್ಲಿ 21 ಜನ ಹಾಸನ ತಾಲೂಕಿನವರು, ಒಬ್ಬರು ಆಲೂರು ತಾಲೂಕಿನವರು, 8 ಜನ ಅರಸೀಕೆರೆ ತಾಲೂಕಿನವರು, ಬೇಲೂರು ತಾಲೂಕಿನಲ್ಲಿ ಇಬ್ಬರು, ಚನ್ನರಾಯಪಟ್ಟಣ ತಾಲೂಕಿನ 5 ಮಂದಿ, ಸಕಲೇಶಪುರ ತಾಲೂಕಿನ 2 ಜನ, ಹೊಳೆನರಸೀಪುರ ತಾಲೂಕಿನಲ್ಲಿ ಒಬ್ಬರು ಮತ್ತು ಒಬ್ಬರು ಅರಕಲಗೂಡು ತಾಲೂಕಿಗೆ ಸೇರಿದವರಾಗಿದ್ದಾರೆ. ಒಟ್ಟಾರೆ 41 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

  • ಹಾಸನದಲ್ಲಿ ಇಂದು ಅರ್ಧ ಶತಕ ಬಾರಿಸಿದ ಕೊರೊನಾ- ಇಬ್ಬರು ಸಾವು

    ಹಾಸನದಲ್ಲಿ ಇಂದು ಅರ್ಧ ಶತಕ ಬಾರಿಸಿದ ಕೊರೊನಾ- ಇಬ್ಬರು ಸಾವು

    ಹಾಸನ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಇಂದು ಹಾಸನದಲ್ಲಿ ಕೊರೊನಾ ಅರ್ಧ ಶತಕ ಬಾರಿಸಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

    ಇಬ್ಬರು ಬಿಎಂಟಿಸಿ ಚಾಲಕರು ಸೇರಿದಂತೆ ಹಾಸನದಲ್ಲಿ ಇಂದು 53 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಳವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇಂದು ಪಾಸಿಟಿವ್ ಬಂದಿರುವವರ ಕೆಲವರ ಟ್ರಾವೆಲ್ ಹಿಸ್ಟರಿ ಕೂಡ ಇನ್ನೂ ಪತ್ತೆಯಾಗಿಲ್ಲ.

    ಹಾಸನ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾಗೆ 27 ಜನ ಮೃತಪಟ್ಟಂತಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 845 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 543 ಜನ ಗುಣಮುಖರಾಗಿದ್ದಾರೆ. 275 ಪ್ರಕರಣಗಳು ಜಿಲ್ಲೆಯಲ್ಲಿ ಇನ್ನೂ ಸಕ್ರಿಯವಾಗಿವೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಹಾಸನದಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿರುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

  • ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿಗೆ ಸೀಲ್‍ಡೌನ್

    ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿಗೆ ಸೀಲ್‍ಡೌನ್

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಪೊಲೀಸ್ ಠಾಣೆ ಸೀಲ್‍ಡೌನ್ ಆಗಿದೆ. ಮೂರು ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಠಾಣೆಯನ್ನು ಎರಡನೇ ಬಾರಿಗೆ ಸೀಲ್‍ಡೌನ್ ಮಾಡಲಾಗಿದೆ.

    ಬೈಂದೂರು ಠಾಣೆಯ ಎಎಸ್‍ಐ, ಓರ್ವ ಮಹಿಳಾ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗೆ ಕೊರೊನಾನ ಪಾಸಿಟಿವ್ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಹಿಂದೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಬೈಂದೂರು ಠಾಣೆಯಲ್ಲಿ ಕೊರೊನಾ ಬಂದಿದ್ದರಿಂದ ಠಾಣೆಯನ್ನು ಸೀಲ್ ಮಾಡಲಾಗಿತ್ತು. ಎರಡು ದಿನಗಳ ಕಾಲ ನಿರಂತರ ಸ್ಯಾನ್‍ಟೈಸ್ ಪ್ರಕ್ರಿಯೆ ನಡೆದಿತ್ತು. ಇದೀಗ ಮತ್ತೆ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಇಂದು ಎರಡು ಬಾರಿ ಸ್ಯಾನಿಟೈಸ್ ಮಾಡುವುದಾಗಿ ಎಸ್‍ಐ ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಸಂಪರ್ಕಕ್ಕೆ ಬಂದ ಎಲ್ಲರನ್ನು ಕ್ವಾರಂಟೈನ್ ಮಾಡುವುದಾಗಿ ಅವರು ತಿಳಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯ ಗಂಟಲು ದ್ರವದ ಪರೀಕ್ಷೆ ಈ ಹಿಂದೆ ಒಮ್ಮೆ ನಡೆಸಿದ್ದು, ಇದೀಗ ಮತ್ತೆ ಕೋವಿಡ್ ಟೆಸ್ಟ್ ಮಾಡುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ ಇನ್ಸ್‌ಪೆಕ್ಟರ್‌ಗೆ ಕೊರೊನಾ ಸೋಂಕು ದೃಢ – ಖಾಕಿ ಪಡೆ ಹೈರಾಣ

    ಹುಬ್ಬಳ್ಳಿಯಲ್ಲಿ ಇನ್ಸ್‌ಪೆಕ್ಟರ್‌ಗೆ ಕೊರೊನಾ ಸೋಂಕು ದೃಢ – ಖಾಕಿ ಪಡೆ ಹೈರಾಣ

    ಹುಬ್ಬಳ್ಳಿ: ಜಿಲ್ಲೆಯ ಘಂಟಿಕೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಕೊರೊನಾ ಸೋಂಕು ದೃಢಪಟ್ಟಿದೆ. ಮೊದಲು ತಪಾಸಣೆ ಮಾಡಿದಾಗ ನೆಗೆಟಿವ್ ಬಂದಿದ್ದು, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಮತ್ತೊಮ್ಮೆ ತಪಾಸಣೆಗೆ ಒಳಪಟ್ಟಾಗ ಸೋಂಕು ದೃಢಪಟ್ಟಿದೆ.

    ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಖಾಕಿ ಪಡೆಗೆ ಕೊರೊನಾ ಕಂಟಕ ಬೆನ್ನು ಬಿಡದೇ ಕಾಡುತ್ತಿದೆ. ಘಂಟಿಕೇರಿ ಠಾಣೆಯಲ್ಲಿ ಈಗಾಗಲೇ 6 ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟ ನಂತರ ಇದೀಗ ಇನ್ಸ್‌ಪೆಕ್ಟರ್‌ ಅವರಿಗೂ ಸೋಂಕು ಕಾಣಿಸಿಕೊಂಡಿದೆ.

    ಜುಲೈ 2ರಂದು ಠಾಣೆಯ ಗೃಹರಕ್ಷಕಿಗೆ ಮೊದಲು ವೈರಸ್ ಕಾಣಿಸಿಕೊಂಡಿತ್ತು. ನಂತರ ಮಹಿಳಾ ಕಾನ್ಸ್‌ಟೇಬಲ್‌ ಸೇರಿ ಐವರು ಸಿಬ್ಬಂದಿಗೆ ಸೋಂಕು ಹರಡಿತ್ತು. ಇದೀಗ ಇನ್ಸ್‌ಪೆಕ್ಟರ್‌ ಸೇರಿ ಠಾಣೆಯ 7 ಜನರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಸೋಂಕು ಕಾಣಿಸಿಕೊಂಡ ಪ್ರಥಮ ಪ್ರಕರಣವಾಗಿದೆ.

    ಹುಬ್ಬಳ್ಳಿಯ ಘಂಟಿಕೇರಿ ಠಾಣೆಯ 7 ಸಿಬ್ಬಂದಿ. ಸಬರಬನ್ ಠಾಣೆಯ 6 ಸಿಬ್ಬಂದಿ, ಶಹರ, ಅಶೋಕ ನಗರ, ಬೆಂಡಿಗೇರಿ, ಟ್ರಾಫಿಕ್ ಸೇರಿದಂತೆ ವಿವಿಧ ಠಾಣೆಗಳ ಸುಮಾರು 20ಕ್ಕೂ ಹೆಚ್ಚು ಪೊಲೀಸರಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ಪೊಲೀಸರಲ್ಲಿ ಆತಂಕ ಮತ್ತಷ್ಟು ಹೆಚ್ಚಳವಾಗಿದೆ.