Tag: Positive

  • ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‍ಗೆ ಕೊರೊನಾ ಪಾಸಿಟಿವ್

    ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‍ಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಈಗಾಗಲೇ ಸಚಿವರಾದ ಕೆಎಸ್ ಈಶ್ವರಪ್ಪ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೊನಾ ಪಾಸಿಟವ್ ಕಾಣಿಸಿಕೊಂಡಿದೆ. ಈಗ ಮತೋರ್ವ ಬಿಜೆಪಿ ಪಕ್ಷದ ಸಚಿವ ಪ್ರಭು ಚೌಹಾಣ್‍ಗೆ ಕೊರೊನಾ ತಗುಲಿದ್ದು, ಅವರು ಕೂಡ ಹೋಂ ಕ್ವಾಂರಟೈನ್ ಆಗಿದ್ದಾರೆ.

    ಕೊರೊನಾ ಕಾಣಿಸಿಕೊಂಡ ಕಾರಣ ಪ್ರಭು ಚೌಹಾಣ್ ಅವರು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಸಚಿವರ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಭು ಚೌಹಾಣ್ ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿದ್ದರು. ಆದರೆ ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರ ಜೊತೆಗೆ ಬೆಂಗಳೂರಿನ ಆಪ್ತ ಸಹಾಯಕ ಹಾಗೂ ಬೀದರಿನಲ್ಲಿರುವ ಸಚಿವರ ಗನ್‍ಮ್ಯಾನ್‍ಗೂ ಸೋಂಕು ದೃಢಪಟ್ಟಿದೆ.

    ಇತ್ತೀಚೆಗಷ್ಟೆ ಸಿಎಂ ಯಡಿಯೂರಪ್ಪ ಅವರಿಗೂ ಸೋಂಕು ಕಾಣಿಸಿಕೊಂಡಿತ್ತು. ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿತ್ತು, ಅವರು ಕೂಡ ಗುಣಮುಖರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೂ ಕೊರೊನಾ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಹಲವಾರು ರಾಜಕೀಯ ಗಣ್ಯರಿಗೆ ಕೊರೊನಾ ಕಾಣಿಸಿಕೊಂಡಿದೆ.

  • ಗೆಳೆಯ ಅರ್ಜುನ್ ನಂತರ ಮಲೈಕಾ ಅರೋರಾಗೆ ಕೊರೊನಾ ಪಾಸಿಟಿವ್

    ಗೆಳೆಯ ಅರ್ಜುನ್ ನಂತರ ಮಲೈಕಾ ಅರೋರಾಗೆ ಕೊರೊನಾ ಪಾಸಿಟಿವ್

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಮಲೈಕಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ಬೆಳಗ್ಗೆ ಮಲೈಕಾ ಅವರ ಪ್ರಿಯಕರ ಅರ್ಜುನ್ ಕಪೂರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನು ಸ್ವತಃ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ದೃಢಪಡಿಸಿದ್ದರು. ಈಗ ಅರ್ಜುನ್ ಜೊತೆ ಇದ್ದ ಮಲೈಕಾ ಅರೋರಾ ಅವರಿಗೂ ಕೊರೊನಾ ವೈರಸ್ ದೃಢಪಟ್ಟಿದೆ.

    ಈಗ ಸಂಜೆ ಮಲೈಕಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರ ಸಹೋದರಿ ಅಮೃತ ಅರೋರಾ ಅವರು ರಾಷ್ಟ್ರೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಲೈಕಾ ಆರೋರ ಇತ್ತೀಚೆಗೆ ಹಿಂದು ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗುವ ಇಂಡಿಯನ್ ಬೆಸ್ಟ್ ಡ್ಯಾನ್ಸರ್ ಎಂಬ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇವರ ಜೊತೆ ನಟಿ ನೋರಾ ಫತೇಹಿಯವರು ಕೂಡ ಕಾಣಿಸಿಕೊಂಡಿದ್ದರು.

    ತನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಇಂದು ಬೆಳಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಅರ್ಜುನ್ ಕಪೂರ್, ನನಗೆ ಕೊರೊನಾ ಸೋಂಕು ತಗುಲಿರೋದು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ಸದ್ಯ ನಾನು ಆರೋಗ್ಯವಾಗಿದ್ದು, ಕೆಲ ಕೊರೊನ ಗುಣಲಕ್ಷಣಗಳು ಕಾಣಿಸಿಕೊಂಡಿವೆ. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಶನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಆರೋಗ್ಯದ ಅಪ್‍ಡೇಟ್ ನೀಡುತ್ತಿರುತ್ತೇನೆ ಎಂದು ಬರೆದುಕೊಂಡಿದ್ದರು.

    ಇದಕ್ಕೂ ಮುನ್ನ ಕಳೆದ ಮೇ ತಿಂಗಳಿನಲ್ಲಿ ಅರ್ಜುನ್ ಕಪೂರ್ ಅವರ ತಂದೆ ಬೋನಿ ಕಪೂರ್ ಮತ್ತು ಅವರ ಮನೆಯ ಸಿಬ್ಬಂದಿಗೆ ಸಹ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಸದ್ಯ ಬೋನಿ ಕಪೂರ್ ಮತ್ತು ಅವರ ಮಕ್ಕಳಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕೊರೊನಾದಿಂದ ಗುಣಮುಖರಾಗಿದ್ದಾರೆ. ನಂತರ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ಅವರ ಮಗಳಿಗೂ ಕೊರೊನಾ ವೈರಸ್ ತಗುಲಿತ್ತು.

  • ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‍ಗೆ ಕೊರೊನಾ ಪಾಸಿಟಿವ್

    ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‍ಗೆ ಕೊರೊನಾ ಪಾಸಿಟಿವ್

    ನವದೆಹಲಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇತ್ತೀಚೆಗೆ ಕೊರೊನಾ ತನ್ನ ವರಸೆಯನ್ನು ಬದಲಿಸಿದ್ದು, ತನ್ನ ಲಕ್ಷಣವೇ ತೋರದೆ ಸೋಂಕು ತಗಲುತ್ತಿದೆ. ಈಗ ಯಾವುದೇ ಲಕ್ಷಣವಿಲ್ಲದಿದ್ದರೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

    ತನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸ್ವತಃ ತಾವೇ ಟ್ವೀಟ್ ಮಾಡಿ ತಿಳಿಸಿರುವ ಫೋಗಟ್, ಕೊರೊನಾ ಪರೀಕ್ಷೆ ವೇಳೆ ನನಗೆ ಪಾಸಿಟಿವ್ ಬಂದಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲ. ಆದರೂ ನಾನು ಐಸೊಲೇಶನ್ ಆಗಿದ್ದೇನೆ. ನನ್ನ ಜೊತೆ ನನ್ನ ಕುಟುಂಬದ ಸದಸ್ಯರು ಐಸೊಲೇಶನ್ ಆಗಿದ್ದಾರೆ. ನನ್ನ ಜೊತೆ ಇತ್ತೀಚೆಗೆ ಸಂಪರ್ಕಕ್ಕೆ ಬಂದಿದ್ದವರು ಕೂಡ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಫೋಗಟ್ ಟ್ವೀಟ್ ಮಾಡಿದ್ದಾರೆ.

    ವಿನೇಶ್ ಫೋಗಟ್ ಅವರು, 2018ರಲ್ಲಿ ನಡೆದ ಏಷ್ಯಿಯಾನ್ ಗೇಮ್ಸ್ ನಲ್ಲಿ ಮತ್ತು ಕಾಮನ್‍ವೇಲ್ತ್ ಕ್ರೀಡಾಕೂಟ ಎರಡರಲ್ಲೂ ಚಿನ್ನದ ಪದಕ ಗೆದ್ದಿದ್ದರು. ಇವರು ಕುಸ್ತಿಪಟು ಕುಟುಂಬದಿಂದ ಬಂದಿದ್ದು, ಇವರ ಸಹೋದರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರು ಕೂಡ ಕುಸ್ತಿಪಟುಗಳಗಿದ್ದಾರೆ. ಇವರಿಗೆ ಇತ್ತೀಚೆಗಷ್ಟೇ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಲಭಿಸಿತ್ತು.

  • ತಮನ್ನಾ ಪೋಷಕರಿಗೆ ಕೊರೊನಾ ಪಾಸಿಟಿವ್

    ತಮನ್ನಾ ಪೋಷಕರಿಗೆ ಕೊರೊನಾ ಪಾಸಿಟಿವ್

    ಮುಂಬೈ: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರ ತಂದೆ ಮತ್ತು ತಾಯಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ.

    ಈ ವಿಚಾರವನ್ನು ಸ್ವತಃ ತಮನ್ನಾ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಜೊತೆಗೆ ಕೊರೊನಾ ಟೆಸ್ಟ್ ಗೆ ಅವರು ಕೂಡ ಒಳಗಾಗಿದ್ದು, ನನ್ನ ವರದಿ ನೆಗೆಟಿವ್ ಬಂದಿದೆ. ಆದರೆ ನನ್ನ ತಂದೆ ಸಂತೋಷ್ ಭಾಟಿಯಾ ಮತ್ತು ತಾಯಿ ರಜನಿ ಭಾಟಿಯಾ ಅವರ ವರದಿ ಪಾಸಿಟಿವ್ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಮನ್ನಾ ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ತಮನ್ನಾ, ಕಳೆದ ವಾರದಿಂದ ನನ್ನ ಪೋಷಕರಿಗೆ ಅಲ್ಪ ಪ್ರಮಾಣದ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಮುಂಜಾಗ್ರತ ಕ್ರಮವಾಗಿ ನಮ್ಮ ಮನೆಯವರೆಲ್ಲ ತಕ್ಷಣ ಕೊರೊನಾ ಟೆಸ್ಟ್‍ಗೆ ಒಳಗಾದೆವು. ಈಗ ತಾನೇ ವರದಿ ಬಂದಿದ್ದು, ನನ್ನ ಪೋಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಂಬಂಧಪಟ್ಟ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ನಾವು ಐಸೊಲೇಷನ್‍ಗೆ ಒಳಗಾಗಿದ್ದೇವೆ ಎಂದು ತಮನ್ನಾ ಮಾಹಿತಿ ನೀಡಿದ್ದಾರೆ.

    ನಾನು ಮತ್ತು ನನ್ನ ಸಿಬ್ಬಂದಿ ಸೇರಿದಂತೆ ನಮ್ಮ ಮನೆಯ ಉಳಿದ ಎಲ್ಲ ಸದಸ್ಯರಿಗೂ ಕೊರೊನಾ ನೆಗೆಟಿವ್ ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ಪೋಷಕರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಮನವಿ ಮಾಡುತ್ತೇನೆ. ನೀವು ಕೂಡ ನನ್ನ ಪೋಷಕರಿಗಾಗಿ ಪ್ರಾರ್ಥಿಸಿ ಎಂದು ತಮನ್ನಾ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

  • ಡಿಕೆಶಿ ಸೋಂಕಿಗೆ ತುತ್ತಾಗಿರೋ ಸುದ್ದಿ ತಿಳಿದು ಬೇಸರವಾಯಿತು: ಸಿದ್ದರಾಮಯ್ಯ

    ಡಿಕೆಶಿ ಸೋಂಕಿಗೆ ತುತ್ತಾಗಿರೋ ಸುದ್ದಿ ತಿಳಿದು ಬೇಸರವಾಯಿತು: ಸಿದ್ದರಾಮಯ್ಯ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕೊರೊನಾ ಸೋಂಕಿಗೆ ತುತ್ತಾಗಿರುವುದಕ್ಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

    ಡಿಕೆ ಶಿವಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಸದ್ಯ ಡಿಕೆಶಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಡಿಕೆಶಿ ಶೀಘ್ರವೇ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕೊರೊನಾ ಸೋಂಕಿಗೆ ತುತ್ತಾಗಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಬೇಗ ಸೋಂಕಿನಿಂದ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    “ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರು ಶೀಘ್ರದಲ್ಲಿ ಕೊರೊನಾ ಸೋಂಕಿನಿಂದ ಪೂರ್ಣ ಗುಣಮುಖರಾಗಿ, ಮತ್ತೆ ಎಂದಿನಂತೆ ತಮ್ಮ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳಲಿ” ಎಂದು ಸಿಎಂ ಯಡಿಯೂರಪ್ಪ ಹಾರೈಸಿದ್ದಾರೆ.

    ಡಿ.ಕೆ. ಶಿವಕುಮಾರ್ ಅವರಿಗೆ ಕೋವಿಡ್ ಇರುವುದಾಗಿ ತಿಳಿಯಿತು. ಕೊರೊನಾ ವೈರಸ್ ಸೋಂಕಿನಿಂದ ಅವರು ಶೀಘ್ರ ಗುಣಮುಖರಾಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೂ ಡಿಕೆಶಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ವಿಷಯ ತಿಳಿದು ನೋವಾಗಿದೆ. ಅವರು ಶೀಘ್ರವಾಗಿ ಗುಣಾಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.

    “ಮಾಜಿ ಸಚಿವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಆತ್ಮೀಯರಾದ ಡಿ.ಕೆ. ಶಿವಕುಮಾರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಾರ್ವಜನಿಕ ಜೀವನದಲ್ಲಿ ಸದಾ ಚಟುವಟಿಕೆಯಿಂದ ಇರುವ ಶಿವಕುಮಾರ್ ಅವರು ಶೀಘ್ರವಾಗಿ ಗುಣಮುಖರಾಗಲಿ” ಸಚಿವ ಶ್ರೀರಾಮುಲು ಹಾರೈಸಿದ್ದಾರೆ.

  • ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್

    ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್

    ಮೈಸೂರು: ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್‍ಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ಮೈಸೂರು ನಿವಾಸದಲ್ಲಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಕೊರೊನಾ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ ಅವರು ನಿನ್ನೆ ತಾನೇ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಶಾಸಕ ಪ್ರೀತಂ ಗೌಡ ಭೇಟಿ ಮಾಡಿದ್ದರು.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಹಿರಿಯ ನಾಯಕರು, ಸಂಸತ್ ಸದಸ್ಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ರವರು ಶೀಘ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರ ಸಂಪರ್ಕಕ್ಕೆ ಬಂದಿದ್ದರಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಗೃಹ ಕ್ವಾರಂಟೈನ್ ನಲ್ಲಿದ್ದೇನೆ. ಜೊತೆಗಿದ್ದವರು ಎಲ್ಲ ಮುಂಜಾಗ್ರತೆ ವಹಿಸಬೇಕು ಎಂದು ಈ ಮೂಲಕ ಕೋರುತ್ತೇನೆ ಎಂದಿದ್ದಾರೆ.

    ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ಟ್ವೀಟ್ ಮಾಡಿ, ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಶ್ರೀನಿವಾಸ ಪ್ರಸಾದ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ನೋವುಂಟು ಮಾಡಿದೆ. ಅವರು ಶ್ರೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಹಿರಿಯ ರಾಜಕಾರಣಿ ಹಾಗೂ ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್‍ಗೆ ಕೊರೊನಾ ಸೋಂಕು ತಗುಲಿರುವುದು ಅತ್ಯಂತ ನೋವಿನ ಸಂಗತಿ. ಶ್ರೀಯುತರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿಯವರು ಕೂಡ ಟ್ವೀಟ್ ಮಾಡಿದ್ದಾರೆ.

  • ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೊನಾ ಪಾಸಿಟಿವ್

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೊನಾ ಪಾಸಿಟಿವ್

    ಮಂಗಳೂರು: ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

    ಇತ್ತೀಚೆಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಸಿಎಂ ಯಡಿಯೂರಪ್ಪ ಅವರ ಜೊತೆ ಹರೀಶ್ ಪೂಂಜಾ ಅವರು ಪ್ರಾಥಮಿಕ ಸಂಪರ್ಕದಲ್ಲಿದ್ದರು. ಬೆಂಗಳೂರಿಗೆ ಬಂದಿದ್ದ ಹರೀಶ್ ಪೂಂಜಾ ಸಿಎಂ ಅವರ ಜೊತೆಗೆ ಇದ್ದ ಕಾರಣ ಅವರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಹರೀಶ್ ಪೂಂಜಾ ಕ್ವಾರೆಂಟೈನ್ ಆಗಿದ್ದರು.

    ತನಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಹರೀಶ್ ಪೂಂಜಾ, ಸಣ್ಣ ಮಟ್ಟಿನ ಜ್ವರ ಇದ್ದ ಕಾರಣ ಮಾಡಿಸಿದ ಕೋವಿಡ್-19 ಪರೀಕ್ಷೆಯಲ್ಲಿ ನನಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಸಣ್ಣ ಮಟ್ಟಿನ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳಿಲ್ಲದೆ ಇರುವುದರಿಂದ ಮನೆಯಲ್ಲಿಯೇ ಇದ್ದು ಶುಶ್ರೂಷೆ ಪಡೆಯುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್‍ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದಿದ್ದಾರೆ.

    https://www.facebook.com/Haripoonja/posts/3130481333688242

  • ಜೆಡಿಎಸ್ ಹಿರಿಯ ಶಾಸಕ ನಾಗನಗೌಡ ಕಂದಕೂರ, ಪುತ್ರನಿಗೆ ಕೊರೊನಾ

    ಜೆಡಿಎಸ್ ಹಿರಿಯ ಶಾಸಕ ನಾಗನಗೌಡ ಕಂದಕೂರ, ಪುತ್ರನಿಗೆ ಕೊರೊನಾ

    ಯಾದಗಿರಿ: ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಹಿರಿಯ ಶಾಸಕ ನಾಗನಗೌಡ ಕಂದಕೂರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಅವರ ಕಿರಿಯ ಪುತ್ರ ಶರಣಗೌಡ ಕಂದಕೂರ ಫೇಸ್‍ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.

    ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕರಾದ ನಾಗನಗೌಡ ಕಂದಕೂರ ಮತ್ತು ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ರೆಡ್ಡಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಶರಣಗೌಡ ಕಂದಕೂರ ಫೇಸ್‍ಬುಕ್ ಮೂಲಕ ತಮ್ಮ ತಂದೆ ಹಾಗೂ ಸಹೋದರನಿಗೆ ಸೋಂಕು ತಗುಲಿದ ವಿಷಯವನ್ನು ತಿಳಿಸಿದ್ದಾರೆ.

    “ನನ್ನ ತಂದೆ ನಾಗನಗೌಡ ಕಂದಕೂರ ಹಾಗೂ ಸಹೋದರ ಮಲ್ಲಿಕಾರ್ಜುನ ರೆಡ್ಡಿ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಶಾಸಕರ ಸಂಪರ್ಕಕ್ಕೆ ಬಂದ ಎಲ್ಲರೂ ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕು. ಜೊತೆಗೆ ಕೋವಿಡ್ ಪರೀಕ್ಷೆ ಮಾಡಿಸಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.

    ಶೀಘ್ರದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗುಣಮುಖರಾಗಿ ಜನ ಸೇವೆಗೆ ಬರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಪ್ರಕರಣದಲ್ಲಿ ಜೆಡಿಎಸ್ ಯುವ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಸದ್ದು ಮಾಡಿದ್ದರು.

  • ರ‍್ಯಾಪಿಡ್ ಟೆಸ್ಟ್‌ನಲ್ಲಿ ಪಾಸಿಟಿವ್, ಮೆಸೇಜ್‍ನಲ್ಲಿ ನೆಗೆಟಿವ್- ಸಹಾಯಕ್ಕಾಗಿ ಯುವಕನ ಕಣ್ಣೀರು

    ರ‍್ಯಾಪಿಡ್ ಟೆಸ್ಟ್‌ನಲ್ಲಿ ಪಾಸಿಟಿವ್, ಮೆಸೇಜ್‍ನಲ್ಲಿ ನೆಗೆಟಿವ್- ಸಹಾಯಕ್ಕಾಗಿ ಯುವಕನ ಕಣ್ಣೀರು

    ಬೆಂಗಳೂರು: ಕೊರೊನಾ ರ‍್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ ಎಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತನ ಮೊಬೈಲ್‍ಗೆ ನೆಗೆಟಿವ್ ಎಂದು ಸಂದೇಶ ಕಳುಹಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲದಲ್ಲಿ ಜುಲೈ 24 ರಂದು ನಡೆಸಿದ್ದ ರ‍್ಯಾಪಿಡ್ ಟೆಸ್ಟ್ ನಲ್ಲಿ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ ಅಂದೇ ಆತನನ್ನು ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್‍ನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್ ಮಾಡಿದ್ದರು. ಆದರೆ ಮರುದಿನ ಜುಲೈ 25 ರಂದು ಆತನ ಮೊಬೈಲ್‍ಗೆ ನಿಮ್ಮ ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಸಂದೇಶ ಬಂದಿದೆ.

    ಸದ್ಯ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿರುವ ಯುವಕ, ನನಗೆ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿ ಮಾಹಿತಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಲು ತಿಳಿಸುತ್ತಾರೆ. ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೆ ನಿಮ್ಮ ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂದು ಹೇಳುತ್ತಾರೆ.

    ನಾನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿರುವುದರಿಂದ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕ ಮಾಡಲು ಆಗುತ್ತಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ 1,500ಕ್ಕೂ ಹೆಚ್ಚು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೊಮ್ಮೆ ನನಗೆ ಸೋಂಕು ಇಲ್ಲದಿದ್ದರೂ ಇಲ್ಲಿ ಒಂದೇ ಬಾತ್ ರೂಂ ಬಳಕೆ ಮಾಡುವುದರಿಂದ ಸೋಂಕು ಹರಡುವ ಭಯವಿದೆ. ಮನೆಯಲ್ಲಿ 6 ತಿಂಗಳ ಗರ್ಭಿಣಿ ಪತ್ನಿ ಇದ್ದು, ಆಕೆಯೂ ಇದರಿಂದ ಸಾಕಷ್ಟು ನೊಂದಿದ್ದಾರೆ. ದಯವಿಟ್ಟು ನನ್ನ ಸಮಸ್ಯೆಯನ್ನ ಬಗೆಹರಿಸಿ ಎಂದು ಯುವಕ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

  • ರಾಜ್ಯದಲ್ಲಿ 1 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – ಇಂದು 5,324 ಮಂದಿಗೆ ಸೋಂಕು, 75 ಸಾವು

    ರಾಜ್ಯದಲ್ಲಿ 1 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – ಇಂದು 5,324 ಮಂದಿಗೆ ಸೋಂಕು, 75 ಸಾವು

    ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ದಿನಗಳಿಂದ 5 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಬರುತ್ತಿದೆ. ಇಂದು ಕೂಡ ಒಟ್ಟು 5,324 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ.

    ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಕೋವಿಡ್ ಸೋಂಕಿತರ ಸಂಖ್ಯೆ 1,01,465ಕ್ಕೆ ಏರಿದೆ. ಇಂದು 75 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 1,953 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,847 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1,01,465 ಸೋಂಕಿತರ ಪೈಕಿ 61,819 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 37,685 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 9,708 ರ‍್ಯಾಪಿಡ್ ಟೆಸ್ಟ್, 18,516 ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 28,224 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 71,268 ಮಂದಿಗೆ ರ‍್ಯಾಪಿಡ್ ಟೆಸ್ಟ್, 11,33,783 ಮಂದಿಗೆ ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 12,05,051 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಇಂದು 1,470, ಬಳ್ಳಾರಿಯಲ್ಲಿ 840, ಮೈಸೂರು 296, ಉಡುಪಿ 225, ಧಾರವಾಡ 193, ಬೆಳಗಾವಿ 155, ಕೋಲಾರ 142, ಬೆಂಗಳೂರು ಗ್ರಾಮಾಂತರ 138, ರಾಯಚೂರು 120, ದಕ್ಷಿಣ ಕನ್ನಡ 119, ವಿಜಯಪುರ ಮತ್ತು ದಾವಣಗೆರೆಯಲ್ಲಿ 110 ಮಂದಿಗೆ ಸೋಂಕು ಬಂದಿದೆ.

    ಬೆಂಗಳೂರಿನಲ್ಲಿ 884, ಉತ್ತರ ಕನ್ನಡ 89, ಬಳ್ಳಾರಿ 43, ಉಡುಪಿ, 51, ಧಾರವಾಡ 55, ರಾಯಚೂರು 142, ದಕ್ಷಿಣ ಕನ್ನಡ 80, ಕಲಬುರಗಿ ಮತ್ತು ಮೈಸೂರು 73 ಮಂದಿ ಬಿಡುಗಡೆಯಾಗಿದ್ದಾರೆ.