Tag: Positive

  • ಸಂಸದ ಡಿಕೆ ಸುರೇಶ್‍ಗೆ ಕೊರೊನಾ ಪಾಸಿಟಿವ್

    ಸಂಸದ ಡಿಕೆ ಸುರೇಶ್‍ಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಈ ಹಿಂದೆ ಡಿಕೆ ಶಿವಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದಾದ ನಂತರ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಈಗ ಅವರ ತಮ್ಮ ಡಿ.ಕೆ ಸುರೇಶ್ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದನ್ನು ಸ್ವತಃ ಸುರೇಶ್ ಅವರೇ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಇದನ್ನು ಓದಿ: ಎರಡು ಮನೆಯಿಂದ ಸೇರಿ ಒಟ್ಟು 6.78 ಲಕ್ಷ ಸಿಕ್ಕಿದೆ – ಡಿ.ಕೆ.ಸುರೇಶ್ ಸ್ಪಷ್ಟನೆ

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುರೇಶ್ ಅವರು, ಕೋವಿಡ್ ಪರೀಕ್ಷೆಯಲ್ಲಿ ನನಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯಕ್ಕೆ ನನ್ನ ಆರೋಗ್ಯ ಸ್ಥಿರವಾಗಿದೆ ಹಾಗೂ ಸುರಕ್ಷಿತವಾಗಿ ಇದ್ದೇನೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿ ಇದ್ದ ಸ್ನೇಹಿತರು, ಬಂಧುಗಳು ಹಾಗೂ ನನ್ನ ಜೊತೆಗೆ ಇದ್ದ ಸಿಬಿಐ ಅಧಿಕಾರಿಗಳು, ಮಾಧ್ಯಮ ಮಿತ್ರರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  • ಕೊರೊನಾ ಪಾಸಿಟಿವ್ ವರದಿ ನೀಡಿದ ವಾರಿಯರ್‌ಗೆ ಸೋಂಕಿತನಿಂದ ಹಲ್ಲೆ

    ಕೊರೊನಾ ಪಾಸಿಟಿವ್ ವರದಿ ನೀಡಿದ ವಾರಿಯರ್‌ಗೆ ಸೋಂಕಿತನಿಂದ ಹಲ್ಲೆ

    – ದುಡ್ಡಿಗಾಗಿ ಪಾಸಿಟಿವ್ ವರದಿ ನೀಡ್ತೀರಿ
    – ವಾರಿಯರ್ಸ್‍ಗೆ ಈಗ ಜೀವ ಭಯ

    ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವಾರು ಜನ ವಿರೋಧ ಪಕ್ಷದ ಶಾಸಕರು ಕೂಡ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

    ಈ ಆರೋಪವೇ ಈಗ ಹಾಸನದಲ್ಲಿ ಮನೆಮನೆಗೆ ಹೋಗಿ ಹಗಲು ರಾತ್ರಿಯೆನ್ನದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್‍ಗಳಿಗೆ, ಆಶಾಕಾರ್ಯಕರ್ತೆಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ಕೇಳಿ ಬಂದ ಆರೋಪಕ್ಕೆ ಪ್ರತಿಯಾಗಿ ಮನೆ ಮನೆಗೆ ಹೋಗಿ ಕೊರೊನಾ ಪರೀಕ್ಷೆ ಮಾಡುತ್ತಾ, ಕೊರೊನಾ ಜಾಗೃತಿ ಮೂಡಿಸುತ್ತಿರುವ ವಾರಿಯರ್ಸ್ ಗೆ ಜೀವ ಭಯ ಶುರುವಾಗಿದೆ.

    ನೀವು ಹಣ ದೋಚುವ ಉದ್ದೇಶದಿಂದ ನಮಗೆ ಕೊರೊನಾ ಇಲ್ಲದಿದ್ದರೂ ಕೊರೊನಾ ಪಾಸಿಟಿವ್ ಎಂದು ವರದಿ ಕೊಡುತ್ತಿದ್ದೀರ. ನೀವು ಕೊರೊನಾ ಪಾಸಿಟಿವ್ ಎಂದು ಹೆಚ್ಚು ಹೆಚ್ಚು ವರದಿ ಕೊಟ್ಟಷ್ಟು, ನಿಮಗೆ ಹೆಚ್ಚು ಹೆಚ್ಚು ಕಮಿಷನ್ ಬರುತ್ತಿದೆ. ಹೀಗಾಗಿ ನಮಗೆ ಕೊರೊನಾನೂ ಇಲ್ಲ ಏನೂ ಇಲ್ಲ. ಇದೆಲ್ಲ ನಿಮ್ಮ ಸುಳ್ಳು ರಿಪೋರ್ಟ್ ಎಂದು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ಬಗ್ಗೆ ಕೊರೊನಾ ವಾರಿಯರ್ಸ್ ಗಳೇ ಆತಂಕ ತೋಡಿಕೊಂಡಿದ್ದು, ನಮಗೆ ಜೀವ ಭಯವಿದೆ. ದಯವಿಟ್ಟು ರಕ್ಷಣೆ ಕೊಡಿ ಅಂತಿದ್ದಾರೆ.

    ಈ ಮೇಲಿನ ಹೇಳಿಕೆಗೆ ಪುಷ್ಟಿ ನೀಡುವಂತೆ ಸೆಪ್ಟೆಂಬರ್ 17ರಂದು ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಗ್ರಾಮದ ಮಂಜುನಾಥ್‍ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತನ ಸ್ಲ್ಯಾಬ್ ಟೆಸ್ಟ್ ಮಾಡಿದ್ದ ಲ್ಯಾಬ್ ಟೆಕ್ನೀಷಿಯನ್ ಮೇಲೆ ಮಂಜುನಾಥ್ ಗಂಭೀರ ಹಲ್ಲೆ ಮಾಡಿದ್ದಾನೆ. ನನಗೆ ಕೊರೊನಾ ಇಲ್ಲದಿದ್ದರೂ ಹಣ ದೋಚಲು ಪಾಸಿಟಿವ್ ಅಂತಾ ವರದಿ ಬರುವ ಹಾಗೆ ಮಾಡಿದ್ದೀಯಾ ಎಂದು ಹಲ್ಲೆ ಮಾಡಿದ್ದಾನೆ. ಇದೀಗ ಕೊರೊನಾ ವಾರಿಯರ್ಸ್ ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ.

    ಸದ್ಯ ಹಲ್ಲೆ ಮಾಡಿದವರ ಮೇಲೆ ಈಗಾಗಲೇ ಕೇಸ್ ದಾಖಲಾಗಿದೆ. ಒಂದು ಕಡೆ ರಾಜಕಾರಣಿಗಳು ಹಲ್ಲೆ ಮಾಡಿದವರನ್ನು ತಮ್ಮ ಪ್ರಭಾವ ಬಳಸಿ ರಕ್ಷಿಸಲು ಮುಂದಾಗುತ್ತಿರುವುದು ಕೂಡ ವಾರಿಯರ್ಸ್ ನೋವಿಗೆ ಕಾರಣವಾಗಿದೆ. ಮತ್ತೊಂದೆಡೆ ಸರ್ಕಾರದ ಮೇಲೆ ಬಂದ ಕೊರೊನಾ ಹಗರಣದ ಆರೋಪದಿಂದಾಗಿ ಫೀಲ್ಡ್ ನಲ್ಲಿ ಕೆಲಸ ಮಾಡುವ ನರ್ಸ್, ಆಶಾಕಾರ್ಯಕರ್ತೆಯಂತವರು ಜನಸೇವೆ ಮಾಡುವುದರ ಜೊತೆಗೆ ಜೀವ ಭಯದಲ್ಲೂ ಕೆಲಸ ಮಾಡುವಂತಾಗಿದೆ.

  • ಕೋವಿಡ್ ಬಂದ್ರೆ ನಾನು ಮಮತಾ ಬ್ಯಾನರ್ಜಿಯನ್ನ ತಬ್ಬಿಕೊಳ್ತೇನೆ: ಬಿಜೆಪಿ ಕಾರ್ಯದರ್ಶಿ

    ಕೋವಿಡ್ ಬಂದ್ರೆ ನಾನು ಮಮತಾ ಬ್ಯಾನರ್ಜಿಯನ್ನ ತಬ್ಬಿಕೊಳ್ತೇನೆ: ಬಿಜೆಪಿ ಕಾರ್ಯದರ್ಶಿ

    ಕೋಲ್ಕತ್ತಾ: ಕೋವಿಡ್ -19 ಸೋಂಕಿಗೆ ಒಳಗಾಗಿದರೆ ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುವುದಾಗಿ ನೂತನವಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ಈ ಹೇಳಿಕೆಯನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಹಜ್ರಾ ಮತ್ತು ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕೂಡ ಕಾಪಾಡಲಿಲ್ಲ. ಈ ಬಗ್ಗೆ ಅನುಪಮ್ ಹಜ್ರಾ ಬಳಿ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಹಜ್ರಾ, “ನಮ್ಮ ಪಕ್ಷದ ಕಾರ್ಯಕರ್ತರು ಕೊರೊನಾಕ್ಕಿಂತ ದೊಡ್ಡ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ” ಎಂದಿದ್ದಾರೆ.

    ಒಂದು ವೇಳೆ ನನಗೆ ಕೊರೊನಾ ವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ. ಕೋವಿಡ್ ರೋಗಿಗಳ ಕುಟುಂಬಗಳ ನೋವನ್ನು ಅನುಭವಿಸುವಂತೆ ಮಾಡಲು ಈ ಮಾಡುವುದಾಗಿ ಹಜ್ರಾ ತಿಳಿಸಿದ್ದಾರೆ.

    ಕೋವಿಡ್‍ಗೆ ಬಲಿಯಾದವರ ಅಂತ್ಯಕ್ರಿಯೆ ನಡೆಯುವ ರೀತಿ ಕರುಣಾಜನಕವಾಗಿದೆ. ಅವರ ದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಯಿತು. ನಾವು ಸತ್ತ ಬೆಕ್ಕುಗಳನ್ನು ಅಥವಾ ನಾಯಿಗಳನ್ನು ಸಹ ಆ ರೀತಿ ಪರಿಗಣಿಸುವುದಿಲ್ಲ. ಅಲ್ಲದೇ ಕೊರೊನಾನಿಂದ ಮೃತಪಟ್ಟವರ ಮುಖವನ್ನು ಕೂಡ ಅವರ ಕುಟುಂಬದವರಿಗೆ ತೋರಿಸುತ್ತಿಲ್ಲ ಎಂದು ಹಜ್ರಾ ಹೇಳಿದ್ದಾರೆ.

    ಟಿಎಂಸಿಯ ಹಿರಿಯ ಮುಖಂಡ ಸೌಗತಾ ರಾಯ್ ಈ ಹೇಳಿಕೆಯನ್ನು ಖಂಡಿಸಿದ್ದು, ಇಂತಹ ಮಾತುಗಳು ಮತ್ತು ಹೇಳಿಕೆಗಳು ಬಿಜೆಪಿ ಮುಖಂಡರಿಂದ ಮಾತ್ರ ಬರಬಹುದು. ಇದು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

    ಟಿಎಂಸಿ ಹಜ್ರಾ ಹೇಳಿಕೆಯ ವಿರುದ್ಧ ಸಿಲಿಗುರಿಯಲ್ಲಿ ಪೊಲೀಸ್ ದೂರು ದಾಖಲಿಸಿದೆ. ನಾವು ಅನುಪಮ್ ಹಜ್ರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

  • ಕಾಂಗ್ರೆಸ್ಸಿನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ಪಾಸಿಟಿವ್

    ಕಾಂಗ್ರೆಸ್ಸಿನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ಪಾಸಿಟಿವ್

    ಗದಗ: ಕಾಂಗ್ರೆಸ್‍ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ.

    ಗದಗ ಮತಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ್ ಸದ್ಯಕ್ಕೆ ಬೆಂಗಳೂರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಾ ಕ್ವಾರಂಟೈನ್ ಆಗಿದ್ದಾರೆ. ಎಚ್.ಕೆ.ಪಾಟೀಲ್ ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಮಹಾರಾಷ್ಟ್ರದ ಮುಂಬೈ ಪ್ರವಾಸ ನಂಟಿನಿಂದ ಕೊರೊನಾ ಬಂದಿರಬಹುದು ಎಂದು ಶಂಕಿಸಲಾಗಿದೆ.

    ಸದ್ಯಕ್ಕೆ ಎಚ್.ಕೆ.ಪಾಟೀಲ್ 10 ದಿನಗಳ ಕಾಲ ಕ್ವಾರಂಟೈನ್ ಆಗಲಿದ್ದಾರೆ. ತಮಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಜೊತೆಗೆ ತಮ್ಮ ಸಂಪರ್ಕದಲ್ಲಿ ಇದ್ದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

    “ನಾನು ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ನನಗೆ ಯಾವುದೇ ಕೊರೊನಾ ರೋಗಲಕ್ಷಣಗಳಿಲ್ಲ. ಆದರೂ 10 ದಿನಗಳ ಕಾಲ ಕಾರಂಟೈನ್ ಆಗಿರಲು ನಿರ್ಧರಿಸಿದ್ದೇನೆ. ನಿಮ್ಮ ಪ್ರೀತಿಯಿಂದ ನಾನು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖನಾಗುತ್ತೇನೆ ಅಂತ ಭರವಸೆ ಇದೆ” ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೇ ಕಳೆದ ಎರಡು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಮುನ್ನಚ್ಚರಿಕೆಯಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳವಂತೆ ವಿನಂತಿಸಿಕೊಂಡಿದ್ದಾರೆ. ಕೊನೆಯಲ್ಲಿ ಎಲ್ಲರೂ ಸುರಕ್ಷಿತರಾಗಿರಿ ಎಂದು ಹೇಳಿದ್ದಾರೆ.

  • ಪತಿ ನಿಧನದ ಮರುದಿನವೇ ಪತ್ನಿ ಸಾವು – ಓರ್ವ ಮಗನಿಗೂ ಕೊರೊನಾ ಸೋಂಕು

    ಪತಿ ನಿಧನದ ಮರುದಿನವೇ ಪತ್ನಿ ಸಾವು – ಓರ್ವ ಮಗನಿಗೂ ಕೊರೊನಾ ಸೋಂಕು

    – ಹಾಸನ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ

    ಹಾಸನ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು, ಗಂಡ ಕೊರೊನಾಗೆ ಬಲಿಯಾದ ಮರುದಿನವೇ ಪತ್ನಿಯೂ ಸೋಂಕಿನಿಂದ ಮೃತಪಟ್ಟಿರುವ ಮನಕಲಕುವ ಘಟನೆ ಹಾಸನದಲ್ಲಿ ನಡೆದಿದೆ.

    ಇದಿಷ್ಟೇ ಅಲ್ಲದೇ ದಂಪತಿಯ ಏಕೈಕ ಪುತ್ರ ಕೂಡ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಇಡೀ ಕುಟುಂಬ ಕೊರೊನಾದಿಂದ ನಲುಗಿ ಹೋಗಿದೆ. ದೇವಾಲಯವೊಂದರ ಅರ್ಚರಾಗಿದ್ದ ಮಂಜುನಾಥ ಮತ್ತು ಅವರ ಪತ್ನಿ ಸ್ವರ್ಣ ಮೃತ ದುರ್ದೈವಿಗಳು. ಸ್ವರ್ಣ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಈ ದಂಪತಿಯ ಒಬ್ಬನೇ ಮಗನಿಗು ಕೂಡ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.

    ದಂಪತಿಗಳ ನಿಧನಕ್ಕೆ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲರೂ ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಮಗನಿಗೆ ಬೇಗ ಗುಣಮುಖವಾಗಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನೊಂದ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಧಾವಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

  • ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

    ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ ಕೊರೊನಾ ಪಾಸಿಟಿವ್ ಗರ್ಭಿಣಿಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಗೋರಖ್‍ಪುರ ಜಿಲ್ಲೆಯ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 26 ವರ್ಷದ ಕೊರೊನಾ ಸೋಂಕಿತೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ ನಾಲ್ಕನೇ ನವಜಾತ ಶಿಶುವಿನ ಸ್ಥಿತಿ ಗಂಭೀರವಾಗಿದ್ದು, ಮಗುವನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ.

    ಅನಾರೋಗ್ಯದ ಕಾರಣ ಡಿಯೋರಿಯಾ ಜಿಲ್ಲೆಯ ಗೌರಿಬಜಾರ್ ಮೂಲದ ಮಹಿಳೆಯೊಬ್ಬರು ಮಂಗಳವಾರ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ಗರ್ಭಿಣಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ವೈದ್ಯರು ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಟೆಸ್ಟ್ ಮಾಡಿಸಿದ್ದರು.

    ಈ ವೇಳೆ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಕೂಡಲೇ ಗರ್ಭಿಣಿಯ ಸ್ಥಿತಿಯನ್ನು ನೋಡಿದ ಮಹಿಳಾ ವೈದ್ಯರು ಅಲ್ಲಿಯೇ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ. ನಂತರ ಸ್ತ್ರೀರೋಗ ತಜ್ಞರು ಸಿಸೇರಿಯನ್ ಮಾಡಿದ್ದಾರೆ.

    ಇಂದೊಂದು ಸವಾಲಿನ ಕೆಲಸವಾಗಿದೆ. ಆದರೂ ಹೆರಿಗೆಯ ಬಳಿಕ ನಾಲ್ಕು ನವಜಾತ ಶಿಶುಗಳ ಮಾದರಿಯನ್ನು ಕೋವಿಡ್ ಟೆಸ್ಟ್‌ಗೆ ಕಳುಹಿಸಲಾಗಿದೆ. ಮಹಿಳೆ ಮತ್ತು ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಒಂದು ಶಿಶುವಿನ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಗಣೇಶ್ ಕುಮಾರ್ ತಿಳಿಸಿದ್ದಾರೆ.

  • ಹೋರಾಟಗಳ ಹೆಸರಿನಲ್ಲಿ ಜನಸಂದಣಿ, 101 ಪೊಲೀಸರಿಗೆ ಸೋಂಕು: ಕೇರಳ ಸಿಎಂ ಕಿಡಿ

    ಹೋರಾಟಗಳ ಹೆಸರಿನಲ್ಲಿ ಜನಸಂದಣಿ, 101 ಪೊಲೀಸರಿಗೆ ಸೋಂಕು: ಕೇರಳ ಸಿಎಂ ಕಿಡಿ

    – ಪ್ರತಿಪಕ್ಷಗಳ ಪ್ರತಿಭಟನೆಯಿಂದ ಕೊರೊನಾ ಹೆಚ್ಚಳ
    – ಪ್ರತಿಭಟನೆಗೆ ಇತರ ಮಾರ್ಗಗಳಿವೆ

    ತಿರುವನಂತಪುರಂ: ಹೋರಾಟಗಳ ಹೆಸರಿನಲ್ಲಿ ಪ್ರತಿಪಕ್ಷಗಳು ಕೋವಿಡ್ ನಿಯಂತ್ರಣಗಳನ್ನು ದಿಕ್ಕುತಪ್ಪಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ವಾಗ್ದಾಳಿ ನಡೆಸಿದ್ದಾರೆ.

    ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ತಿರುವನಂತಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಕೋವಿಡ್ ರಕ್ಷಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೋವಿಡ್ ಆರಂಭದ ಹಂತದಲ್ಲಿದ್ದ ಜಾಗರೂಕತೆಗಳನ್ನು ಇದೀಗ ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಹೇಳಿದರು.

    ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮತ್ತು ಸರ್ಕಾರದ ವಿರುದ್ಧ ವಿವಿಧ ಸರಣಿ ಪ್ರತಿಭಟನೆಗಳು ತಿರುವನಂತಪುರದಲ್ಲಿ ಹಲವು ದಿನಗಳಿಂದ ನಡೆಯುತ್ತಿವೆ. ಈ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ಕೋವಿಡ್‌ 19 ನಿಯಂತ್ರಿಸಲು ಜನಸಂದಣಿಯನ್ನು ತಪ್ಪಿಸುದೇ ಅತೀ ಮುಖ್ಯವಾಗಿದೆ. ಆದರೆ ಮಾಸ್ಕ್‌ ಧರಿಸದೇ ಜನರು ಗುಂಪಾಗಿ ಸೇರಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು.

    ಪ್ರತಿಭಟನಾಕಾರರನ್ನು ಎದುರಿಸಲು ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಕೋವಿಡ್‌ಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರನ್ನು ಎದುರಿಸಲು ನಿಯೋಜಿಸಲಾದ 101 ಮಂದಿ ಪೊಲೀಸರಿಗೆ ಸೋಂಕು ಬಂದಿದೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಎಲ್ಲಿ ಲಾಕ್‌ಡೌನ್‌, 144 ಸೆಕ್ಷನ್‌ ಜಾರಿಯಾಗಿದೆ?

    ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ಆದರೆ ರಾಜಕೀಯ ಪಕ್ಷಗಳು ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿಭಟನಾಕಾರರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದರೆ ಸಮಾಜಕ್ಕೆ ಅಪಾಯವಿದೆ. ಪ್ರತಿಭಟನೆಗೆ ಇತರ ಮಾರ್ಗಗಳಿವೆ. ಕೊರೊನಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ಕೇರಳದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 39,258 ಆಗಿದ್ದು, ಅದರಲ್ಲಿ 7,047 ಪ್ರಕರಣಗಳು ತಿರುವನಂತಪುರ ಜಿಲ್ಲೆಯಲ್ಲಿವೆ. ರಾಜ್ಯದಲ್ಲಿ ಸಕ್ರಿಯವಾಗಿರುವ ಶೇ.18 ಪ್ರಕರಣಗಳು ತಿರುವನಂತಪುರದಲ್ಲಿವೆ. ಒಟ್ಟು ರಾಜ್ಯದಲ್ಲಿ 553 ಸಾವುಗಳು ವರದಿಯಾಗಿದ್ದರೆ, ತಿರುವನಂತಪುರ ಒಂದೇ ಜಿಲ್ಲೆಯಲ್ಲಿ ಮಾತ್ರ 175 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನಡೆಯತ್ತಿರುವ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.

  • ಶಿವಶರಣ ಮಾದಾರ ಚನ್ನಯ್ಯ ಸ್ವಾಮೀಜಿಗೆ ಕೊರೊನಾ ಪಾಸಿಟಿವ್

    ಶಿವಶರಣ ಮಾದಾರ ಚನ್ನಯ್ಯ ಸ್ವಾಮೀಜಿಗೆ ಕೊರೊನಾ ಪಾಸಿಟಿವ್

    ಚಿತ್ರದುರ್ಗ: ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶಿವಶರಣ ಮಾದಾರ ಚನ್ನಯ್ಯ ಸ್ವಾಮೀಜಿಯವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಸ್ವಾಮೀಜಿಯವರ ಆರೋಗ್ಯ ಸ್ಥಿರವಾಗಿದೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾದಾರ ಚನ್ನಯ್ಯ ಟ್ರಸ್ಟಿನ ಕೋಶಾಧ್ಯಕ್ಷ ಬಿ.ಎನ್.ಚಂದ್ರಪ್ಪ ತಿಳಿಸಿದ್ದಾರೆ.

    ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ತೆರಳಿದ್ದ ಶ್ರೀಗಳು ಆರೋಗ್ಯವಾಗಿದ್ದರು. ಆದರೆ ಸದಾಶಿವ ಆಯೋಗದ ಒಳ ಮೀಸಲಾತಿ ವರದಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯದ ಮುಖಂಡರ ಜೊತೆ ಸಮಾಲೋಚನೆ ನಡೆಸಲು ರಾಜ್ಯದ ವಿವಿಧೆಡೆಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸ್ವಾಮೀಜಿಯವರಿಗೆ ಸೋಂಕು ತಗುಲಿದೆ ಎಂದು ಕೋಶಾಧ್ಯಕ್ಷರು ಹೇಳಿದ್ದಾರೆ.

    ನಾಲ್ಕೈದು ದಿನಗಳಲ್ಲಿ ಸ್ವಾಮೀಜಿಯವರು ಗುರುಪೀಠಕ್ಕೆ ವಾಪಸ್ ಆಗಲಿದ್ದಾರೆ. ಗುರುಪೀಠದ ಭಕ್ತರು, ಹಿತೈಷಿಗಳು ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಆಸ್ಪತ್ರೆಯಿಂದ ವಾಪಸ್ ಬಂದ ನಂತರ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ಹಾಗೂ ಪ್ರವಾಸ ಮುಂದುವರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

  • ಹಾಸನ ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಶ್ವೇತಾ ದೇವರಾಜ್‍ಗೆ ಕೊರೊನಾ ಪಾಸಿಟಿವ್

    ಹಾಸನ ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಶ್ವೇತಾ ದೇವರಾಜ್‍ಗೆ ಕೊರೊನಾ ಪಾಸಿಟಿವ್

    ಹಾಸನ: ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸ್ವಲ್ಪ ತಲೆನೋವು ಬಂದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಹೊಳೆನರಸೀಪುರ ಶಾಸಕ ಹೆಚ್‍ಡಿ ರೇವಣ್ಣ ಹಾಗೂ ಬೇಲೂರು ಶಾಸಕ ಲಿಂಗೇಶ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು.

    ತಮಗೆ ಪಾಸಿಟಿವ್ ಬಂದಿರುವ ಬಗ್ಗೆ ಮಾಹಿತಿ ನೀಡಿರುವ ಅಧ್ಯಕ್ಷೆ ಶ್ವೇತಾ ದೇವರಾಜ್, ತಲೆನೋವು ಬಿಟ್ಟು ಬೇರೆ ರೋಗದ ಲಕ್ಷಣ ಇಲ್ಲದ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಕೊರೊನಾ ಸುರಕ್ಷತಾ ನಿಯಮ ಪಾಲಿಸಿ. ಯಾವುದೇ ಆತಂಕಕ್ಕೆ ಕಾರಣ ಇಲ್ಲ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹಾಗೂ ಕ್ವಾರಂಟೈನ್‍ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಮನವಿ ಮಾಡಿದ್ದಾರೆ.

  • ಸಚಿವ ಗೋಪಾಲಯ್ಯಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು

    ಸಚಿವ ಗೋಪಾಲಯ್ಯಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು

    ಹಾಸನ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

    ಇತ್ತೀಚೆಗಷ್ಟೇ ಜೆಡಿಎಸ್ ಶಾಸಕ ಹೆಚ್‍ಡಿ ರೇವಣ್ಣ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈಗ ಗೋಪಾಲಯ್ಯ ಅವರಿಗೆ ಸೋಂಕು ತಗುಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಗೋಪಾಲಯ್ಯ, ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ ಅಂತಾ ಹೇಳಿದ್ದಾರೆ.

    ನನಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹಾಗೂ ಕ್ವಾರಂಟೈನ್‍ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಮನವಿ ಮಾಡಿದ್ದಾರೆ.