Tag: Positive

  • ಕೋಟಾ ಶ್ರೀನಿವಾಸ್ ಪೂಜಾರಿಗೆ ಕೊರೊನಾ ಸೋಂಕು ದೃಢ

    ಕೋಟಾ ಶ್ರೀನಿವಾಸ್ ಪೂಜಾರಿಗೆ ಕೊರೊನಾ ಸೋಂಕು ದೃಢ

    ಬೆಂಗಳೂರು: ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಟ್ವಿಟ್ಟರ್ ಮೂಲಕ ಖಚಿತಪಡಿಸಿರುವ ಅವರು ಕೊರೊನಾ ಪಾಸಿಟಿವ್ ಬಂದ ಕಾರಣಕ್ಕೆ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಅನಿವಾರ್ಯವಾದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು. ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

    ಕೋಟ ಶ್ರೀನಿವಾಸ್ ಪೂಜಾರಿ ಅವರು, ಇತ್ತೀಚೆಗಷ್ಟೇ ಭಾಗಮಂಡಲ, ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಸುನೀಲ್ ಸುಬ್ರಮಣಿ ಸಹ ಈ ವೇಳೆ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಎಚ್‌ಡಿ ದೇವೇಗೌಡ, ಪತ್ನಿ ಚನ್ನಮ್ಮಗೆ ಕೊರೊನಾ ದೃಢ

    ಎಚ್‌ಡಿ ದೇವೇಗೌಡ, ಪತ್ನಿ ಚನ್ನಮ್ಮಗೆ ಕೊರೊನಾ ದೃಢ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಪತ್ನಿ ಚನ್ನಮ್ಮ ಅವರಿಗೆ ಕೋವಿಡ್‌ 19 ಸೋಂಕು ಬಂದಿದೆ.

    ಆರೋಗ್ಯ ಸಚಿವ ಸುಧಾಕರ್‌ ಅವರು ಟ್ವೀಟ್‌ ಮಾಡಿ ಈ ವಿಚಾರವನ್ನು ತಿಳಿಸಿದ್ದು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಹಿರಿಯರು, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಹಾಗೂ ಅವರ ಧರ್ಮಪತ್ನಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಸುದ್ದಿ ತಿಳಿಯಿತು. ವೈದ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅವರ ಆರೋಗ್ಯದ ಬಗ್ಗೆ ಖುದ್ದಾಗಿ ಮಾಹಿತಿ ಪಡೆಯಲಿದ್ದೇನೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿ ಎಚ್‌ಡಿ ದೇವೇಗೌಡ ಮತ್ತು ಪತ್ನಿ ಬೇಗ ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

  • ಬೆಂಗಳೂರಿನ ಮೂವರು ಸೇರಿ ದೇಶದ 7 ಮಂದಿಗೆ ಬ್ರಿಟನ್‌ ಸೋಂಕು

    ಬೆಂಗಳೂರಿನ ಮೂವರು ಸೇರಿ ದೇಶದ 7 ಮಂದಿಗೆ ಬ್ರಿಟನ್‌ ಸೋಂಕು

    – ದಕ್ಷಿಣ ಭಾರತದ ರಾಜ್ಯಗಳ ವ್ಯಕ್ತಿಗಳಲ್ಲಿ ಕೊರೊನಾ
    – ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಐಸೋಲೇಟ್‌
    – ಮೃತರ ಪೈಕಿ ಶೇ.70ರಷ್ಟು ಪುರುಷ ಸೋಂಕಿತರು ಬಲಿ

    ನವದೆಹಲಿ: ಹೊಸ ವರ್ಷದ ಕೊನೆಯಲ್ಲಿ ಮತ್ತೊಂದು ಕಹಿಸುದ್ದಿ. ಬ್ರಿಟನ್‍ನಲ್ಲಿ ಉದ್ಭವಿಸಿ ಇಡೀ ಜಗತ್ತನ್ನು ಕಂಗೆಡಿಸಿರುವ ಹೊಸ ಬಗೆಯ ಕೊರೊನಾ ಇದೀಗ ಭಾರತಕ್ಕೂ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.

    ಇತ್ತೀಚಿಗೆ ಬ್ರಿಟನ್‍ನಿಂದ ಭಾರತಕ್ಕೆ ವಾಪಸ್ಸಾದ 7 ಮಂದಿಯಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಮೂವರು, ಹೈದರಾಬಾದಿನ ಇಬ್ಬರು, ಆಂಧ್ರಪ್ರದೇಶದ  ರಾಜಮಹೇಂದ್ರವರಂನ ಒಬ್ಬರು, ಹಾಗೂ ಚೆನ್ನೈನ ಒಬ್ಬರಲ್ಲಿ ಹೊಸ ವೈರಸ್ ಪತ್ತೆಯಾಗಿದೆ.

    ಎಲ್ಲಾ ಪ್ರಕರಣಗಳು ವರದಿ ಆಗಿರುವುದು ದಕ್ಷಿಣ ಭಾರತದಲ್ಲಿಯೇ ಎನ್ನುವುದು ಗಮನಿಸಬೇಕಾದ ವಿಚಾರ. ಅದರಲ್ಲೂ ಕರ್ನಾಟಕದ್ದೇ ಸಿಂಹಪಾಲು. ಎಲ್ಲರನ್ನು ಆಯಾಯಾ ರಾಜ್ಯಗಳ ಕೊರೊನಾ ಕೇರ್ ಸೆಂಟರ್‌ಗಳಲ್ಲಿ ಐಸೊಲೇಟ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು, ಆಪ್ತರು, ಅಕ್ಕಪಕ್ಕದ ಮನೆಯವರನ್ನು ಟ್ರೇಸ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದ್ದು ಕ್ವಾರಂಟೈನ್‌ ಮಾಡಲಾಗಿದೆ.

    ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆ ನೀಡಿದೆ. ಹೊಸ ತಳಿಯ ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಗುಣಮಟ್ಟದ ಚಿಕಿತ್ಸೆ ಪಡೆದಲ್ಲಿ ಮಾತ್ರ ಅಪಾಯದಿಂದ ಪಾರಾಗಲು ಸಾಧ್ಯ ಎಂದು ತಿಳಿಸಿದೆ.

    ಹೊಸ ತಳಿಯನ್ನು ಈಗಿನ ಲಸಿಕೆಯಿಂದ ನಿಯಂತ್ರಿಸಬಹುದು. ಆದರೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ನಿಯಂತ್ರಣ ಸಾಧ್ಯ ಅಂತ ಎಚ್ಚರಿಕೆ ಕೊಟ್ಟಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಿದರೆ ಸೋಂಕು ಮತ್ತಷ್ಟು ಹೆಚ್ಚಬಹುದು. ಹೀಗಾಗಿ ರಾಜ್ಯ ಸರ್ಕಾರಗಳು ರಾತ್ರಿ ಕರ್ಫ್ಯೂ ಹಾಕಿಕೊಳ್ಳಬಹುದು ಎಂದು ಕೇಂದ್ರ ಕೋವಿಡ್ ಟಾಸ್ಕ್ ಫೋರ್ಸ್ ಸೂಚನೆ ನೀಡಿದೆ.

    ನೂತನ ತಳಿಯ ವೈರಸ್ ಮೇಲೆ ಹೆಚ್ಚು ಪ್ರತಿರೋಧಕ ಶಕ್ತಿ ಹಾಕಬಾರದು. ಹೆಚ್ಚು ಒತ್ತಡ ಹಾಕಿದಂತೆಲ್ಲಾ ವೈರಸ್ ಇನ್ನಷ್ಟು ರೂಪಾಂತರ ಹೊಂದುವ ಸಾಧ್ಯತೆ ಇದೆ ಎಂದು ಐಸಿಎಂಆರ್ ತಿಳಿಸಿದೆ.

    ಡಿಸೆಂಬರ್ 9 ರಿಂದ 22 ವರೆಗೂ ವಾಪಸ್ ಆದ ಪ್ರಯಾಣಿಕರಿಗೆ ಕೊರೊನಾ ರೋಗದ ಗುಣಲಕ್ಷಣಗಳು ಕಂಡು ಬಂದಿದ್ದು, ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಎಲ್ಲ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್‌ ವಂಶವಾಹಿ ರಚನೆ( ಜಿನೋಮ್‌)ಯ ಪರೀಕ್ಷೆ ಮಾಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

    ದೇಶಾದ್ಯಂತ ಹತ್ತು ಲ್ಯಾಬ್‍ಗಳನ್ನು ಜೀನೋಮ್ ಪರೀಕ್ಷೆಗೆಂದು ನಿಯೋಜನೆ ಮಾಡಲಾಗಿದ್ದು, ಈವರೆಗೂ 5 ಸಾವಿರ ಜನರಿಗೆ ಜೀನೋಮ್ ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 2.7 ಲಕ್ಷಗಳಿಗಿಂತ ಕಡಿಮೆ ಇದೆ. ಕಳೆದ ವಾರ ದೇಶದಲ್ಲಿ ಧನಾತ್ಮಕ ಪ್ರಮಾಣವು ಕೇವಲ 2.25% ಇತ್ತು. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ 55% ರಷ್ಟು ಜನ ಮರಣ ಹೊಂದಿದ್ದು, 45 ರಿಂದ 60 ವಯಸ್ಸಿನವರಲ್ಲಿ 33% ಮರಣ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಈವರೆಗೂ 70% ಪುರುಷರು ಮತ್ತು 30% ಮಹಿಳೆಯರು ಕೊರೊನಾದಿಂದ ಮರಣ ಹೊಂದಿದ್ದಾರೆ. ಮೊದಲಿಗೆ ಹೋಲಿಸಿದರೆ ಈಗ ಮರಣ ಹೊಂದುತ್ತಿರುವ ಸಂಖ್ಯೆ ಕಡಿಮೆಯಾಗಿದೆ.

    ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಆರಂಭದಲ್ಲಿಯೇ ಎಚ್ಚೆತ್ತುಕೊಂಡರೆ ಮಾತ್ರ ಅಪಾಯದಿಂದ ಪಾರಾಗಬಹುದು. ಇಲ್ಲದಿದ್ದರೆ ರೂಪಾಂತರಿ ವೈರಸ್ ದೇಶಕ್ಕೆ ಮತ್ತೆ ಹೆಚ್ಚು ಹಾನಿ ಮಾಡಲಿದೆ. ರೂಪಾಂತರಿ ವೈರಸ್ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಜ್ಞರಿಂದ ಚಿಕಿತ್ಸೆ ಪಡೆಯಿರಿ. ಇಲ್ಲದಿದ್ದರೆ ಬ್ರಿಟನ್ ಗತಿ ಭಾರತಕ್ಕೂ ಬರಬಹುದು. ಈಗಾಗಲೇ ಬ್ರಿಟನ್ ನಲ್ಲಿ ಪ್ರತಿನಿತ್ಯ 40 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ. ಬ್ರಿಟನ್ ಜನ ಸಂಖ್ಯೆ ಹೋಲಿಸಿದ್ರೆ 40 ಸಾವಿರ ಪ್ರಕರಣಗಳು ಅಧಿಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಜುಲೈ – ಆಗಸ್ಟ್‌ ವೇಳೆಗೆ ಭಾರತದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುವ ಸುಳಿವು ಸಿಕ್ಕಿದ್ದು, ವ್ಯಾಕ್ಸಿನ್ ಬರುವರೆಗೂ ಎಲ್ಲರೂ ಎಚ್ಚರಿಕೆಯಿಂದ ಇರಲೇಬೇಕು. ವೈರಸ್‍ನಿಂದ ಪಾರಾಗಲು ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಅಲ್ಲದೇ ನಿರಂತರವಾಗಿ ಆಗಾಗ ಕೈ ತೊಳೆದುಕೊಳ್ಳಬೇಕು. ಇದರ ಜೊತೆಯಲ್ಲಿ ಕೊರೊನಾ ಹಳೆಯ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದೆ.

    ಈಗಾಗಲೇ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸೋಂಕು ವಿಜೃಂಭಿಸಿದ್ದು, ಲಂಡನ್ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಆಮ್ಲಜನಕ ಕೊರತೆ ಎದುರಾಗಿದೆ. ಇದುವರೆಗೂ ಬ್ರಿಟನ್‍ನಿಂದ ಭಾರತಕ್ಕೆ 33 ಸಾವಿರ ಮಂದಿ ಬಂದಿದ್ದಾರೆ. ಈ ಪೈಕಿ 5 ಸಾವಿರ ಮಂದಿಗೆ ಜಿನೋಮ್‌ ಪರೀಕ್ಷೆ ನಡೆಸಲಾಗಿದೆ.

  • ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್

    ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್

    ಚಂಡೀಗಢ: ಪ್ರಯೋಗಾತ್ಮಕ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್‍ಗೆ ಕೊರೊನಾ ಪಾಸಿಟಿವ್ ಬಂದಿದೆ.

    ಕಳೆದ ನವೆಂಬರ್ 20ರಂದು ಅನಿಲ್ ವಿಜ್ ಅವರು ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಪರೀಕ್ಷೆಯಲ್ಲಿ ಸ್ವಯಃ ಸೇವಕರಾಗಿ ತೊಡಗಿಸಿಕೊಂಡಿದ್ದರು. ಅನಿಲ್ ವಿಜ್ ಅವರಿಗೆ ಹರಿಯಾಣದ ಅಂಬಾಲದಲ್ಲಿ ನಡೆದ 3ನೇ ಹಂತದ ಪ್ರಯೋಗಾರ್ಥ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ಹಾಕಲಾಗಿತ್ತು. ಆದರೆ ಇಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅನಿಲ್ ವಿಜ್, ನನಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ನಾನು ಅಂಬಾಲದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯನ್ನು ಮೂರನೇ ಹಂತದಲ್ಲಿ ಸುಮಾರು 26 ಸಾವಿರ ಜನಕ್ಕೆ ನೀಡಲಾಗುವುದು ಎನ್ನಲಾಗಿದೆ.

    ಈ ಕೋವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತಯಾರು ಮಾಡುತ್ತಿದೆ. ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, 28 ದಿನಗಳಲ್ಲಿ ಎರಡು ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ. ಲಸಿಕೆಯ ಪರಿಣಾಮ 14 ದಿನಗಳ ನಂತರ ಎರಡನೇ ಡೋಸ್ ನೀಡಿದಾಗ ಗೊತ್ತಾಗಲಿದೆ ಎಂದು ತಿಳಿಸಿದೆ. ಜೊತೆಗೆ ಲಸಿಕೆ ಅಭಿವೃದ್ಧಿಯ ವೇಳೆ ಸುರಕ್ಷತೆ ನಮ್ಮ ಪ್ರಾಥಮಿಕ ಮಾನದಂಡವಾಗಿದೆ ಎಂದು ಹೇಳಿದೆ.

    ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಈ ಸಂಸ್ಥೆಗೆ ಭೇಟಿ ನೀಡಿದ್ದು, ಕೋವ್ಯಾಕ್ಸಿನ್ ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಶುಕ್ರವಾರ ನಡೆದ ಸಭೆಯಲ್ಲಿ ಮುಂದಿನ ಎರಡು ವಾರದಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ 96 ಲಕ್ಷ ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಅಮೆರಿಕಾ ನಂತರ ಅತೀ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡ ದೇಶವಾಗಿದೆ.

  • ಕೊರೊನಾ ಬಂದಿರೋ ಕಾರಣ ಬಿಚ್ಚಿಟ್ಟ ಮೆಗಾಸ್ಟಾರ್ ಚಿರಂಜೀವಿ

    ಕೊರೊನಾ ಬಂದಿರೋ ಕಾರಣ ಬಿಚ್ಚಿಟ್ಟ ಮೆಗಾಸ್ಟಾರ್ ಚಿರಂಜೀವಿ

    – ಮೊದ್ಲು ಕೊರೊನಾ ಪಾಸಿಟಿವ್, 3 ಬಾರಿ ನೆಗೆಟಿವ್

    ಹೈದರಾಬಾದ್: ಇತ್ತೀಚೆಗೆ ಮೆಗಾಸ್ಟಾರ್ ಜಿರಂಜೀವಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದರೆ ನನಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಜಿರಂಜೀವಿಯವರೇ ಸ್ಪಷ್ಟಪಡಿಸಿದ್ದಾರೆ.

    ಕಳೆದ ನಾಲ್ಕು ದಿನಗಳ ಹಿಂದೆ ಮೆಗಾಸ್ಟಾರ್ ಜಿರಂಜೀವಿಯವರಿಗೆ ಕೊರೊನಾ ಸೋಂಕು ಬಂದಿದೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯ ಹಿಂದಿನ ಕಾರಣವನ್ನು ಸ್ವತಃ ಜಿರಂಜೀವಿಯವರೇ ರೀವಿಲ್ ಮಾಡಿದ್ದು, ದೋಷಪೂರಿತ ಆರ್.ಟಿ-ಪಿ.ಸಿ.ಆರ್ ಕಿಟ್‍ನಿಂದ ನನ್ನ ಕೊರೊನಾ ವರದಿ ತಪ್ಪಾಗಿ ಬಂದಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಿರಂಜೀವಿಯವರು, ನನಗೆ ವೈದ್ಯರ ತಂಡ ಮೂರು ಬಗೆಯ ಕೊರೊನಾ ಟೆಸ್ಟ್ ಮಾಡಿದ್ದು, ಈ ವೇಳೆ ನನಗೆ ಕೊರೊನಾ ನೆಗೆಟಿವ್ ಇದೆ ಎಂದು ಖಚಿತವಾಗಿದೆ. ಇದಕ್ಕೂ ಮೊದಲು ಬಂದ ವರದಿ ಸುಳ್ಳಾಗಿದ್ದು, ದೋಷಪೂರಿತ ಆರ್.ಟಿ-ಪಿ.ಸಿ.ಆರ್ ಕಿಟ್ ಬಳಕೆಯಿಂದ ನನಗೆ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಈ ಕಠಿಣ ಸಮಯದಲ್ಲಿ ನನ್ನ ಆರೋಗ್ಯದ ಮೇಲೆ ಕಾಳಜಿ ಮತ್ತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    ಟೈಮ್ ಮತ್ತು ಕೊರೊನಾ ವೈರಸ್ ಕಳೆದ ನಾಲ್ಕು ದಿನದಿಂದ ನನ್ನ ಜೊತೆ ಆಟವಾಡುತ್ತಿದೆ. ಕಳೆದ ಭಾನುವಾರ ಕೊರೊನಾ ಪಾಸಿಟಿವ್ ಎಂದು ತಿಳಿದು ನಾನು ಕ್ವಾರಂಟೈನ್ ಆಗಿದ್ದೆ. ಆದರೆ ಎರಡು ದಿನವಾದರೂ ಕೊರೊನಾದ ಯಾವುದೇ ಗುಣಲಕ್ಷಣ ಕಾಣಿಸಿಕೊಳ್ಳಲಿಲ್ಲ. ಈ ವೇಳೆ ಮತ್ತೆ ಪರೀಕ್ಷೆ ಮಾಡಿಸೋಣ ಎಂದು ಅಪೋಲೋ ಆಸ್ಪತ್ರೆ ವೈದ್ಯರನ್ನು ಭೇಟಿ ಮಾಡಿದೆ. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೊರೊನಾ ಸೋಂಕು ಇಲ್ಲ ಎಂಬುದು ತಿಳಿಯಿತು. ನಂತರ ಮತ್ತೆ ಮೂರು ಬಾರಿ ಕೊರೊನಾ ಟೆಸ್ಟ್ ಮಾಡಿಸಿದ್ದು, ಅಲ್ಲಿಯೂ ಕೂಡ ನನಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಚಿರಂಜೀವಿ ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸದ್ಯ ಚಿರಂಜೀವಿಯವರು ತಮ್ಮ ಪುತ್ರ ರಾಮ್‍ಚರಣ್ ನಿರ್ಮಾಣ ಮಾಡುತ್ತಿರುವ ಆಚಾರ್ಯ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‍ಗೆ ಹೋಗುವ ಮುನ್ನ ಚಿರಂಜೀವಿಯವರು ಕೊರೊನಾ ಟೆಸ್ಟ್ ಮಾಡಿಸಿದ್ದು, ಈ ವರದಿಯಲ್ಲಿ ಅವರಿಗೆ ಮೊದಲ ಬಾರಿ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಆಚಾರ್ಯ ಸಿನಿಮಾದ ಶೂಟಿಂಗ್ ಅನ್ನು ಮುಂದೂಡಲಾಗಿತ್ತು.

  • ಮೈಸೂರಿನಲ್ಲಿ ಮತ್ತೆ ಕೊರೊನಾ ಪಾಸಿಟಿವ್ ರೇಟ್ ಹೆಚ್ಚಾಗುವ ಸಾಧ್ಯತೆ: ರೋಹಿಣಿ ಸಿಂಧೂರಿ

    ಮೈಸೂರಿನಲ್ಲಿ ಮತ್ತೆ ಕೊರೊನಾ ಪಾಸಿಟಿವ್ ರೇಟ್ ಹೆಚ್ಚಾಗುವ ಸಾಧ್ಯತೆ: ರೋಹಿಣಿ ಸಿಂಧೂರಿ

    ಮೈಸೂರು: ದಸರಾ ಸರಳ ಆಚರಣೆಯ ನಡುವೆಯೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ದಸರಾಗೆ ಪ್ರವಾಸಿತಾಣಗಳನ್ನು ಓಪನ್ ಮಾಡಿರುವ ಪರಿಣಾವನ್ನು ನಾವು ಎದುರಿಸಲೇಬೇಕು. ಆದ್ದರಿಂದ ಇದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಇನ್ನು 15 ದಿನದ ನಂತರ ನಾವು ಮತ್ತಷ್ಟು ಹೆಚ್ಚಿನ ಪ್ರಕರಣಗಳು ನಿರೀಕ್ಷಿಸಿದ್ದೇವೆ. ಆದ್ದರಿಂದ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಪಾಲನೆ ಮಾಡಬೇಕಿದೆ ಎಂದು ಮನವಿ ಮಾಡಿದರು.

    ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಜಿಲ್ಲಾಡಳಿತ ವ್ಯವಸ್ಥಿತವಾಗಿ ಸಿದ್ಧತೆ ನಡೆಸಲಾಗಿತ್ತು. ಈಗ ಯಾವುದೇ ಬೆಡ್ ಸಮಸ್ಯೆ ಇಲ್ಲ. ಆಕ್ಸಿಜನ್ ಹಾಗೂ ಟೆಸ್ಟಿಂಗ್ ನಲ್ಲೂ ಯಾವುದೇ ಕೊರತೆ ಇಲ್ಲ. ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ 50 ಬೆಡ್, ಆಕ್ಸಿಜನ್ ಬೆಡ್, ಐಸಿಯುಗಳು ಲಭ್ಯವಿದೆ ಎಂದು ಹೇಳಿದರು. ಮೊದಲು ಕೊರೊನಾವನ್ನು ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಿದ್ದರು. ಆದರೆ ಆ ಬಳಿಕ ಕೆಲ ಕಾರಣಗಳಿಂದ ಸೋಂಕು ಹೆಚ್ಚಾಗಿತ್ತು. ಈಗ ನಾವು ಮತ್ತೆ ಎಲ್ಲವನ್ನು ಹಿಡಿತಕ್ಕೆ ತಂದಿದ್ದೇವೆ. ಈಗ ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಮುಂದಿನ 10 ಮತ್ತು 20 ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

    ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಜನರಿಗೆ ಬರಬೇಡಿ ಎಂದು ಹೇಳಲು ಆಗುವುದಿಲ್ಲ. ಈಗ ಮೈಸೂರಿನ ಎಲ್ಲಾ ಹೋಟೆಲ್, ರೆಸಾರ್ಟ್ ಗಳು ತುಂಬಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಎಲ್ಲೋ ಒಂದು ಸ್ಥಳದಲ್ಲಿ ಕೊರೊನಾ ಟೆಸ್ಟ್ ನಡೆಯಬೇಕು ಎಂಬುವುದು ನಮ್ಮ ಉದ್ದೇಶ. ಆದ್ದರಿಂದ ಮೃಗಾಲಯ ಮತ್ತು ಬೆಟ್ಟದ ಮೇಲೆ ಕೊರೊನಾ ಟೆಸ್ಟ್ ನಡೆಸುವಷ್ಟು ಸ್ಥಳಾವಕಾಶ ಲಭ್ಯವಾಗದ ಕಾರಣ ಅರಮನೆ ಆವರಣದಲ್ಲಿ ಸ್ಕ್ರೀನಿಂಗ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

  • ಉಡುಪಿ ಶಾಸಕ ರಘುಪತಿ ಭಟ್‍ಗೆ ಕೊರೊನಾ ಪಾಸಿಟಿವ್

    ಉಡುಪಿ ಶಾಸಕ ರಘುಪತಿ ಭಟ್‍ಗೆ ಕೊರೊನಾ ಪಾಸಿಟಿವ್

    ಉಡುಪಿ: ಬಿಜೆಪಿ ಶಾಸಕ ರಘುಪತಿ ಭಟ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಶಾಸಕರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತನ್ನ ಟ್ವಿಟ್ಟರ್ ಖಾತೆಯಲ್ಲಿ ಜನರಿಗೆ ಈ ಮಾಹಿತಿಯನ್ನು ನೀಡಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದು, ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಥಮ ಸಭೆ ಶನಿವಾರ ಶಿವಮೊಗ್ಗದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ಪಾಲ್ಗೊಂಡಿದ್ದರು.

    ಜ್ವರ, ಮೈಕೈನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿರುವ ಶಾಸಕ ರಘುಪತಿ ಭಟ್ ಅವರ ವರದಿ ಪಾಸಿಟಿವ್ ಬಂದಿದೆ. ಚಿಕಿತ್ಸೆ ಪಡೆಯುತ್ತಿರುವ ಕಾರಣ ಕೆಲ ದಿನಗಳ ಕಾಲ ಸಾರ್ವಜನಿಕ ಸಂಪರ್ಕಕ್ಕೆ ಸಿಗಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಟ್ವೀಟ್ ಮಾಡಿದ್ದಾರೆ. ಶಿವಮೊಗ್ಗದ ಸಭೆಯಲ್ಲಿ ಪಾಲ್ಗೊಂಡು, ಹತ್ತಿರ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.

  • ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಕೊರೊನಾ ಪಾಸಿಟಿವ್

    ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಕೊರೊನಾ ಪಾಸಿಟಿವ್

    ಶಿವಮೊಗ್ಗ: ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

    ಕಾಗೋಡು ತಿಮ್ಮಪ್ಪ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗಿತ್ತು. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಗೋಡು ಅವರು ರ‍್ಯಾಪಿಡ್ ಡೆಸ್ಟ್ ಮಾಡಿಸಿಕೊಂಡಿದ್ದಾರೆ. ರ‍್ಯಾಪಿಡ್ ಟೆಸ್ಟ್ ನಲ್ಲಿ ಕೊರೊನಾ ಸೋಂಕು ದೃಢವಾಗಿದೆ.

    ಕೂಡಲೇ ಅವರನ್ನು ಸಾಗರದಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಸದ್ಯಕ್ಕೆ ಕಾಗೋಡು ತಿಮ್ಮಪ್ಪ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಿಮ್ಮಪ್ಪ ಅವರಿಗೆ ಕೊರೊನಾ ದೃಢವಾಗಿರುವ ಬಗ್ಗೆ ತಿಳಿದ ಯು.ಟಿ.ಖಾದರ್ ಟ್ವೀಟ್ ಮಾಡುವ ಮೂಲಕ ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದ್ದಾರೆ. “ನಮ್ಮ ಪ್ರೀತಿಯ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕು” ಎಂದು ಖಾದರ್ ಹಾರೈಸಿದ್ದಾರೆ.

  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಪಾಸಿಟಿವ್

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇತ್ತೀಚೆಗೆ ಕೊರೊನಾ ಸೋಂಕು ರಾಜಕಾರಣಿಗಳನ್ನು ಬೆನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಕೇಂದ್ರ ಸಚಿವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ತಮಗೆ ಕೊರೊನಾ ಸೋಂಕು ತಗಲಿರುವ ಸುದ್ದಿಯನ್ನು ಸ್ವತಃ ಸಚಿವರೇ ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ.

    ಸೋಂಕು ತಗುಲಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಹ್ಲಾದ್ ಜೋಶಿಯವರು, ಆತ್ಮೀಯರೇ ಕೋವಿಡ್ ಪರೀಕ್ಷೆಯಲ್ಲಿ ನನಗೆ ಸೋಂಕು ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕೂಡ ಕೊರೊನಾ ಚಿಕಿತ್ಸೆ ಫಲಿಸದೇ ವಿಧವಶರಾಗಿದ್ದರು.

    ಈ ಹಿಂದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸಂಸದ ಡಿಕೆ ಸುರೇಶ್ ಸೇರಿದಂತೆ ರಾಜ್ಯದ ಹಲವಾರು ರಾಜಕೀಯ ಗಣ್ಯರಿಗೆ ಕೊರೊನಾ ಸೋಂಕು ತಗುಲಿದೆ.

  • ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್

    ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್

    ತುಮಕೂರು: ಉಪಚುನಾವಣೆಯಲ್ಲಿ ಶಿರಾ ಜೆಡಿಎಸ್ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ಮಧ್ಯಾಹ್ನವೇ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ದಿವಂಗತ ಶಾಸಕ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಪಕ್ಷದಿಂದ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಅಮ್ಮಾಜಮ್ಮ ಅವರಿಗೆ ಇಂದೇ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಪಡೆಯುತ್ತಿದ್ದಾರೆ.

    ತಾಯಿಗೆ ಕೊರೊನಾ ಬಂದ ವಿಚಾರವಾಗಿ ಮಾತನಾಡಿರುವ ಅಮ್ಮಾಜಮ್ಮ ಪುತ್ರ ಸತ್ಯ ಪ್ರಕಾಶ್, ವಿಧಿ ನಮ್ಮ ಕುಟುಂಬದ ಜೊತೆ ಚೆಲ್ಲಾಟ ಆಡುತಿದೆ. ಎರಡು ತಿಂಗಳ ಹಿಂದೆ ತಂದೆ ತೀರಿಸಿಕೊಂಡರು. ಈಗ ತಾಯಿಗೆ ಕೊರೊನಾ ಬಂದಿದೆ. ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿರೋದು ಸಂತಸ ತಂದಿದೆ. ನಮ್ಮ ತಾಯಿ ಕೊರೊನಾ ಗೆದ್ದು ಬಂದು ಚುನಾವಣೆನೂ ಗೆಲ್ಲುತ್ತಾರೆ. ಇನ್ನು ಐದು ದಿನದಲ್ಲಿ ಡಿಸ್ಚಾರ್ಜ್ ಆಗಿ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದ್ದಾರೆ.

    ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದ ಹಿನ್ನೆಲೆ, ನವೆಂಬರ್ 3 ರಂದು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಟಿ.ಬಿ ಜಯಚಂದ್ರ ಸ್ಪರ್ಧಿಸಲಿದ್ದಾರೆ. ಈಗ ಜೆಡಿಎಸ್ ಪಕ್ಷ ಕೂಡ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ಮೊದಲು ಸತ್ಯನಾರಾಯಣ ಅವರ ಮಗ ಸತ್ಯ ಪ್ರಕಾಶ್‍ಗೆ ಟಿಕೆಟ್ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಇಂದು ದೇವೇಗೌಡರು ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.