Tag: Positive

  • ಪ್ರವಾಸ ಮಾಡದಿದ್ರೂ ಕಿರಾಣಿ ಅಂಗಡಿಯವನಿಗೂ ಕೊರೊನಾ ಪಾಸಿಟಿವ್

    ಪ್ರವಾಸ ಮಾಡದಿದ್ರೂ ಕಿರಾಣಿ ಅಂಗಡಿಯವನಿಗೂ ಕೊರೊನಾ ಪಾಸಿಟಿವ್

    ಬಾಗಲಕೋಟೆ: ಯಾವುದೇ ದೇಶ, ರಾಜ್ಯ, ಜಿಲ್ಲೆ ಪ್ರವಾಸ ಮಾಡದಿದ್ದರೂ ಜಿಲ್ಲೆಯಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದಿದೆ.

    70 ವರ್ಷದ ವೃದ್ಧ ಕಿರಾಣಿ ವ್ಯಾಪಾರಸ್ಥನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈತ ಜ್ವರ, ನೆಗಡಿ, ಕೆಮ್ಮು ಅಂತ ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಮೂರು ದಿನದ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ನಂತರ ಬುಧವಾರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.

    ಇದೀಗ ಗಂಟಲು ದ್ರವ ಪರೀಕ್ಷೆಯಿಂದ ಕೊರೊನಾ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ. ಬುಧವಾರ ಮೂರು ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೂರು ಸ್ಯಾಂಪಲ್ ವರದಿಗಳ ಪೈಕಿ ಒಂದು ಪಾಸಿಟಿವ್ ಧೃಡಪಟ್ಟಿದೆ. ಉಳಿದ ಎರಡು ಸ್ಯಾಂಪಲ್ ನೆಗೆಟಿವ್ ಎಂದು ವರದಿಯಾಗಿದೆ. ಸದ್ಯ ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಧೃಡಪಟ್ಟ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಮನೆಯ ಹಾಗೂ ಏರಿಯಾ ಕ್ವಾರಂಟೈನ್ ಮಾಡಲಾಗುತ್ತಿದೆ. ಜೊತೆಗೆ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಯಾರೂ ಹೊರಗೆ, ಒಳಗೆ ಬರಲಾರದ ಹಾಗೆ ಜಾಗೃತಿ ವಹಿಸಲಾಗಿದೆ.

    ಇಂದಿನಿಂದ ಮಾರ್ಕೆಟ್, ವ್ಯಾಪಾರ ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ. ಸೋಂಕಿತ ವ್ಯಕ್ತಿ ಎಲ್ಲಿಯೂ ಹೋಗಿರುವ ಇತಿಹಾಸವಿಲ್ಲ. ಆದರೆ ಸೋಂಕಿತ ವ್ಯಕ್ತಿಯ ಮಗ ಎಂಟು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮಗನ ಬಗ್ಗೆ, ಬೆಂಗಳೂರಲ್ಲಿ ಆತ ಓಡಾಡಿರುವ ಜಾಗದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಎಸ್.ಪಿ ಲೋಕೇಶ್ ಜಗಲಾಸರ್ ಆಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

  • ಸರ್ಕಾರಿ ವೈದ್ಯೆಗೆ ಕೊರೊನಾ ಸೋಂಕು – ದೆಹಲಿ ಆಸ್ಪತ್ರೆ ಲಾಕ್

    ಸರ್ಕಾರಿ ವೈದ್ಯೆಗೆ ಕೊರೊನಾ ಸೋಂಕು – ದೆಹಲಿ ಆಸ್ಪತ್ರೆ ಲಾಕ್

    ನವದೆಹಲಿ: ಸರ್ಕಾರಿ ವೈದ್ಯೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಕಾರಣ ದೆಹಲಿ ಸರ್ಕಾರ ಸರ್ಕಾರಿ ಆಸ್ಪತ್ರೆಯೊಂದನ್ನು ಸಂಪೂರ್ಣವಾಗಿ ಲಾಕ್ ಮಾಡಿದೆ.

    ಕೊರೊನಾ ಸೋಂಕು ತಗುಲಿರುವ ವೈದ್ಯೆ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಆಸ್ಪತ್ರೆಯ ಕಟ್ಟಡದ ಒಪಿಡಿ, ಕಚೇರಿಗಳು ಮತ್ತು ಪ್ರಯೋಗಾಲಯಗಳನ್ನು ಮುಚ್ಚಲಾಗಿದ್ದು, ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ವೈದ್ಯರೊಂದಿಗೆ ಸಂಪರ್ಕದಲ್ಲಿ ಇದ್ದರವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಇತ್ತೀಚೆಗಷ್ಟೇ ಯುಕೆಯಿಂದ ವಾಪಸ್ ಆಗಿದ್ದ ವೈದ್ಯರ ಸಹೋದರ ಮತ್ತು ಅತ್ತಿಗೆಯಿಂದ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ವೈದ್ಯೆ ಅಣ್ಣ ಅತ್ತಿಗೆ ಯುಕೆಯಿಂದ ವಾಪಸ್ ಬಂದ ನಂತರ ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಕೂಡ ದೆಹಲಿ ಸರ್ಕಾರದ ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ದಂಪತಿಗೆ ಕೊರೊನಾ ವೈರಸ್‍ಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ರೋಗಿಯನ್ನು ಚಿಕಿತ್ಸೆ ಮಾಡಿದ್ದರಿಂದ ಅವರು ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿತ್ತು. ಇದಾದ ನಂತರ ಮತ್ತೆ ದೆಹಲಿಯಲ್ಲಿ ಸರ್ಕಾರಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಕೊರೊನಾ ವೈರಸ್ ಮಹಾಮಾರಿ ದೇಶದಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಲ್ಲಿವರೆಗೆ ದೆಹಲಿಯಲ್ಲಿ 121 ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿವೆ. ಕೊರೊನಾ ವೈರಸ್ ನಿಂದ ಎರಡು ಜನ ಸಾವನ್ನಪ್ಪಿದ್ದಾರೆ. ದೆಹಲಿ ಸೋಂಕಿತರಲ್ಲಿ 24 ಜನರು ಮಾರ್ಚ್ 1ರಿಂದ 15ರವರೆಗೆ ನಡೆದಿದ್ದ ತಬ್ಲಿಘಿ ಜಮಾತ್‍ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದವರು ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 146 ಹೊಸ ಪ್ರಕರಣಗಳು ವರದಿಯಾದ ನಂತರ ಭಾರತದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 1,719ಕ್ಕೆ ಏರಿದೆ.

  • ಹೊಸಪೇಟೆಯ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು

    ಹೊಸಪೇಟೆಯ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು

    ಬಳ್ಳಾರಿ: ಜಿಲ್ಲೆಯ ಹೊಸಪೇಟೆಯ ಎಸ್.ಆರ್ ನಗರದ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ಕೊರೊನಾ ಗುಣಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಮೂವರನ್ನು ಬಳ್ಳಾರಿಯ ವಿಮ್ಸ್ ಗೆ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಇಂದು ಮೂವರ ವರದಿ ಬಂದಿದ್ದು, ಮೂವರಲ್ಲೂ ಸೋಂಕು ಇರುವುದು ದೃಢವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.

    ಸೋಂಕಿತರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು, ಈ ಮೂವರು ಇತ್ತೀಚೆಗೆ ಬೆಂಗಳೂರಿನಿಂದ ವಾಪಸ್ಸಾಗಿದ್ದರು. ಬಳಿಕ ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಈ ಮೂವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ರಕ್ತ ಪರೀಕ್ಷೆ ವರದಿ ಕೊರೊನಾ ಪಾಸಿಟಿವ್ ಬಂದಿದೆ. ಇತ್ತ ವಿಷಯ ಗೊತ್ತಾದ ನಂತರ ಇಡೀ ಬಡಾವಣೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಸೋಂಕು ಇರುವುದು ದೃಢಪಟ್ಟಿದ್ದರಿಂದ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆಯಿಂದಲೇ ನಿಯಮ ಜಾರಿಗೆ ಬರುವಂತೆ, ಒಳ ಹಾಗೂ ಹೊರಹೋಗುವ ಎಲ್ಲಾ ರೀತಿಯ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 9ರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಕುಟುಂಬದ ಒಬ್ಬ ಸದಸ್ಯರು ಹೊರಬರಲು ಅವಕಾಶವಿದೆ.

    ಇಡೀ ನಗರದಾದ್ಯಂತ ಔಷಧ ಸಿಂಪಡಿಸಲಾಗುವುದು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುವರು. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಮಾಡಿದ್ದಾರೆ.

  • 2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕೊರೊನಾ

    2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕೊರೊನಾ

    – ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ 325 ಜನರಿಗೆ ನಿರ್ಬಂಧ

    ಮುಂಬೈ: 2 ವರ್ಷದ ಗಂಡು ಮಗು ಸೇರಿ ಒಂದೇ ಕುಟುಂಬದ 25 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಈ ಕುಟುಂಬದ ನಾಲ್ಕು ಜನರು ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಹೋಗಿ ವಾಪಸ್ ಆಗಿದ್ದರು. ಈ ನಾಲ್ವರಿಗೆ ಮಾರ್ಚ್ 19ರಂದು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆಗ ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ನಾಲ್ವರನ್ನು ಮಾರ್ಚ್ 19ರಂದು ಮೀರಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಇದಾದ ನಂತರ ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದರಿಂದ ಭಯಬಿದ್ದ ಸರ್ಕಾರ ಕುಟುಂಬದ ಎಲ್ಲಾ ಸದಸ್ಯರನ್ನು ಚಿಕಿತ್ಸೆಗೆ ಒಳಪಡಿಸಿದ್ದರು. ಈ ವೇಳೆ ಮಾರ್ಚ್ 27 ಇದೇ ಕುಟುಂಬದ ಮೂವರಿಗೂ ಮತ್ತೆ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿತ್ತು. ಈ ಮೂಲಕ ಕುಟುಂಬದ 12 ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು.

    ಈ 12 ಜನ ಆದ ಮೇಲೆ ಪರೀಕ್ಷೆ ಮಾಡಿದ ಕುಟುಂಬ ಉಳಿದ 13 ಜನರಲ್ಲೂ ಇಂದು ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇದರಲ್ಲಿ ಎರಡು ವರ್ಷದ ಗಂಡು ಮಗುವಿದೆ. ಹೀಗಾಗಿ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಸುಮಾರು 325 ಜನರನ್ನು ಸರ್ಕಾರ ಹೋಂ ಕ್ವಾರೆಂಟೈನ್ ಇರುವಂತೆ ಸೂಚಿಸಿದ್ದು, ಜೊತೆಗೆ ಸೋಂಕಿತರನ್ನು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ವೈದ್ಯಾಧಿಕಾರಿ ಸುಲಿಂಖೆ, ಈ ಕುಟುಂಬದವರು ಪರಸ್ಪರ ಒಟ್ಟಿಗೆ ಇದ್ದರು. ಕುಟುಂಬದವರೆಲ್ಲ ಒಟ್ಟಿಗೆ ಇದ್ದ ಕಾರಣ ಕೊರೊನಾ ಎಲ್ಲರಿಗೂ ಹಬ್ಬಿದೆ. ಕೊರೊನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದರೆ ಆ ಜಾಗದಲ್ಲಿ ವೈರಸ್ ಬಿದ್ದಿರುತ್ತದೆ. ಅದನ್ನು ಮನೆಯವರು ಮಟ್ಟಿದರೆ ಅವರಿಗೂ ಸೋಂಕು ಹರಡುತ್ತದೆ. ಹೀಗಾಗಿ ಈಗ ಕುಟುಂಬದ ಎಲ್ಲರಿಗೂ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿಜೀತ್ ಚೌಧರಿ, 25 ಸೋಂಕಿತರು ದೊಡ್ಡ ಕುಟುಂಬಕ್ಕೆ ಸೇರಿದವರು ಎಂದು ದೃಢಪಟ್ಟಿದೆ. ಈ ಕುಟುಂಬ ಸಾಂಗ್ಲಿಯ ಇಸ್ಲಾಂಪುರ್ ತಹಸಿಲ್ನಲ್ಲಿ ಇರುವ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದೆ. ಇತ್ತೀಚೆಗೆ ಈ ಕುಟುಂಬದ ನಾಲ್ಕು ಜನರು ವಿದೇಶಕ್ಕೆ ಹೋಗಿ ಸೋಂಕಿಗೆ ಒಳಗಾಗಿದ್ದಾರೆ. ಈ ನಾಲ್ವರು ವಾಪಸ್ ಬಂದಾಗ ಮನೆಯವರು ಇವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಕಾರಣ ಎಲ್ಲರಿಗೂ ರೋಗ ತಗುಲಿದೆ ಎಂದು ತಿಳಿಸಿದ್ದಾರೆ.

  • ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

    ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

    – ಆತಂಕದಲ್ಲಿ ಚಿಕ್ಕಬಳ್ಳಾಪುರದ ಜನತೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಹೊಸದಾಗಿ 5 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬರೂ ಸಾವನ್ನಪ್ಪಿದ್ದರು. ಮೆಕ್ಕಾ ಪ್ರವಾಸ ಕೈಗೊಂಡು ವಾಪಸ್ ಆಗಿದ್ದ ನಂತರ ಮೊದಲು ಕೊರೊನಾ ಪತ್ತೆಯಾಗಿದ್ದ 31 ವರ್ಷದ ವ್ಯಕ್ತಿಯ ತಾಯಿ ಹಾಗೂ ಚಿಕ್ಕಮ್ಮ ಸೇರಿ ಮೂವರಿಗೆ ಸೋಂಕು ಧೃಢವಾಗಿತ್ತು. ಈ ಮೂವರು ಸಹ ಮೆಕ್ಕಾ ಪ್ರವಾಸದಿಂದ ವಾಪಸ್ ಬಂದಿದ್ದರು.

    ಈಗ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ತಂದೆಗೂ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಗೌರಿಬಿದನೂರು ನಗರದಲ್ಲೇ ಮೆಕ್ಕಾ ಪ್ರವಾಸದಿಂದ ವಾಪಸ್ ಆಗಿದ್ದ ಮಹಿಳೆ ಕೊರೊನಾಗೆ ಬಲಿಯಾಗಿದ್ದರು. ಈಗ ಮೃತ ಮಹಿಳೆಯ ಮಗ ಹಾಗೂ ಸೊಸೆ, ಅವರ ಮೊಮ್ಮಗ ಸೇರಿದಂತೆ ಸೊಸೆಯ ತಮ್ಮನಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಹೀಗಾಗಿ ಈ ಮೊದಲ 4 ಪ್ರಕರಣಗಳ ಜೊತೆಗೆ ಇಂದು ಹೊಸದಾಗಿ 5 ಪ್ರಕರಣಗಳು ಸೇರಿ ಒಟ್ಟು 09 ಪಾಸಿಟಿವ್ ಪ್ರಕರಣಗಳಾಗವೆ.

    ಇದಲ್ಲದೇ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ಸಹೋದರಿಯರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೂ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಅವರಿಬ್ಬರ ಅಂತಿಮ ವರದಿಗಾಗಿ ಕಾಯುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಹೊಸದಾಗಿ ಇಂದು ದೃಢಪಟ್ಟಿರುವ 05 ಮಂದಿ ಸೇರಿದಂತೆ ಶಂಕಿತ ಇಬ್ಬರನ್ನೂ ಸಹ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

  • ಯುಕೆ ಪ್ರಧಾನಿಗೆ ಕೊರೊನಾ ಪಾಸಿಟಿವ್- ವಿಡಿಯೋ ಕಾಲ್‍ನಲ್ಲಿ ಸರ್ಕಾರ ಚಾಲನೆ

    ಯುಕೆ ಪ್ರಧಾನಿಗೆ ಕೊರೊನಾ ಪಾಸಿಟಿವ್- ವಿಡಿಯೋ ಕಾಲ್‍ನಲ್ಲಿ ಸರ್ಕಾರ ಚಾಲನೆ

    ಲಂಡನ್: ಕೊರೊನಾ ಮಹಾಮಾರಿ ಯಾರನ್ನು ಬಿಡುವಂತೆ ಕಾಣುತ್ತಿಲ್ಲ. ಈಗ ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಅವರೇ ಪ್ರತ್ಯೇಕವಾಗಿ ಇರಲು ಆರಂಭಿಸಿದ್ದಾರೆ.

    ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಈ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ವಿಶ್ವದ ಅನೇಕ ನಗರಗಳು ಲಾಕ್‍ಡೌನ್ ಆಗಿದೆ. ಈಗ ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಕೂಡ ಈ ಮಹಾಮಾರಿ ಸೋಂಕಿಗೆ ತುತ್ತಾಗಿದ್ದು, ಮನೆಯಲ್ಲೇ ಕುಳಿತು ವಿಡಿಯೋ ಕಾಲ್ ಮೂಲಕ ಸರ್ಕಾರ ನಡೆಸುತ್ತಿದ್ದಾರೆ.

    ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಬೋರಿಸ್ ಜಾನ್ಸನ್, ನನಗೆ ಸ್ವಲ್ಪ ಪ್ರಮಾಣದಲ್ಲಿ ಕೆಮ್ಮು ಮತ್ತು ದೇಹದ ಉಷ್ಣಾಂಶ ಜಾಸ್ತಿ ಇತ್ತು. ಆಗ ನಾನು ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದೇನೆ. ಜೊತೆಗೆ ತಂತ್ರಜ್ಞಾನ ಬಳಸಿ ವಿಡಿಯೋ ಕಾಲ್ ಮೂಲಕ ಸರ್ಕಾರ ನಡೆಸುತ್ತಿದ್ದೇನೆ. ನಾವು ಕೊರೊನಾ ವೈರಸ್ ವಿರುದ್ಧ ಹೊರಾಡೋಣ. ಆದಷ್ಟೂ ಮನೆಯಲ್ಲೇ ಇರಿ ಎಂದು ತಿಳಿಸಿದ್ದಾರೆ.

    ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಈ ಕೊರೊನಾ ವೈರಸ್ ಇಂದು ವಿಶ್ವದ್ಯಾಂತ ಹರಡಿದೆ. ಈಗ ಈ ಕೊರೊನಾ ವೈರಸ್‍ಗೆ ವಿಶ್ವದಲ್ಲಿ 20,000 ಜನರು ಸಾವನ್ನಪ್ಪಿದ್ದರೆ, 5 ಲಕ್ಷ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಭಾರತದಲ್ಲಿ 20 ಜನರು ಸಾವನ್ನಪ್ಪಿದ್ದರೆ, ಸುಮಾರು 761 ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.

  • ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

    ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

    – ಮನೆ ಮಂದಿಯೆಲ್ಲಾ ಆಸ್ಪತ್ರೆಗೆ ದಾಖಲು

    ಮುಂಬೈ: ಒಂದೇ ಕುಟುಂಬದ 12 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ನಡೆದಿದೆ.

    ಈ ಕುಟುಂಬದ ನಾಲ್ಕು ಜನಕ್ಕೆ ಮೊದಲು ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಅವರನ್ನು ಮಾರ್ಚ್ 19ರಂದು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಾಲ್ವರು ಸೌದಿ ಅರೇಬಿಯಾದಲ್ಲಿರುವ ಹಜ್‍ಗೆ ಭೇಟಿ ನೀಡಿ ವಾಪಸ್ ಬಂದಿದ್ದರು ಎಂದು ತಿಳಿದು ಬಂದಿತ್ತು.

    ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದಾದ ನಂತರ ಗುರುವಾರ ಇದೇ ಕುಟುಂಬದ ಉಳಿದ ಮೂವರಿಗೂ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ. ಈ ಮೂಲಕ ಮೊದಲ ನಾಲ್ಕು ಜನ ಮತ್ತು ನಂತರ ಐದು ಜನ ನೆನ್ನೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 12 ಜನ ಕೊರೊನಾದಿಂದ ಆಸ್ಪತ್ರೆ ಸೇರಿದ್ದಾರೆ.

    ಈ 12 ಜನರಲ್ಲಿ 11 ಜನ ಮೂಲತಃ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದವರಾಗಿದ್ದು, ಇದೇ ಕುಟುಂಬದ ಮತ್ತೋರ್ವ ಹೆಣ್ಣು ಮಗಳು ಮದುವೆಯಾಗಿ ಕೊಲ್ಹಾಪುರ ಜಿಲ್ಲೆಯ ಪೆಥ್ವಾಡ್ಗಾಂವ್ ಊರಲ್ಲಿ ಇದ್ದರು. ಆದರೆ ಕುಟುಂಬವರು ಹಜ್‍ಗೆ ಹೋಗಿ ಬಂದಿದ್ದಾರೆ ಎಂದು ಆಕೆಯು ಕೂಡ ತವರು ಮನೆಗೆ ಬಂದು ಹೋಗಿದ್ದಳು. ಈ ಕಾರಣದಿಂದ ಆಕೆಗೆ ಕೂಡ ವೈರಸ್ ತಗುಲಿದ್ದು, ಆಕೆಯೂ ಈಗ ಆಸ್ಪತ್ರೆ ಪಾಲಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಾಂಗ್ಲಿ ಜಿಲ್ಲೆಯ ಆರೋಗ್ಯಾಧಿಕಾರಿ ಸಂಜಯ್ ಸಲುಂಖೆ, ಈ ಕೊರೊನಾ ಪೀಡಿತ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಅವರ 11 ಜನ ಸಂಬಂಧಿಕರ ಬ್ಲಡ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿಯ ಫಲಿತಾಂಶ ನಮಗೆ ಇಂದು ಸಂಜೆ ಸಿಗುತ್ತದೆ. ನಮ್ಮ ಇನ್ನೊಂದು ವೈದ್ಯರ ತಂಡವನ್ನು ಇಸ್ಲಾಂಪುರ ಕಳುಹಿಸಿದ್ದೇವೆ. ಅವರು ಆ ಗ್ರಾಮದಲ್ಲಿ ಈ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದ 23 ಜನರ ಬ್ಲಡ್ ಸ್ಯಾಂಪಲ್ ತರುತ್ತಿದ್ದಾರೆ. ಈ 23 ಜನರನ್ನು ಆಗಾಲೇ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

    ಮೊದಲು ಈ ಕುಟುಂಬದ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದ ತಕ್ಷಣ ಅವರ ಕುಟುಂಬದ 27 ಜನರನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿತ್ತು. ಈ 27 ಜನರಲ್ಲಿ 7 ಜನರ ಸ್ಯಾಂಪಲ್ ಅನ್ನು ಮಾರ್ಚ್ 23ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಐವರಿಗೆ ಪಾಸಿಟಿವ್ ಬಂದರೆ ಇಬ್ಬರಿಗೆ ನೆಗೆಟಿವ್ ಬಂದಿತ್ತು. ಈಗ ಈ ಕುಟುಂಬದ 12 ಜನರನ್ನು ಮೀರಾಜ್‍ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಸ್ಲಾಂಪುರ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ ಎಂದು ಸಲುಂಖೆ ಮಾಹಿತಿ ನೀಡಿದ್ದಾರೆ.

  • ಮಂಗ್ಳೂರಿನಲ್ಲಿ ಇಂದು ಒಂದೇ ದಿನ 4 ಕೊರೊನಾ ಪ್ರಕರಣ ಪತ್ತೆ

    ಮಂಗ್ಳೂರಿನಲ್ಲಿ ಇಂದು ಒಂದೇ ದಿನ 4 ಕೊರೊನಾ ಪ್ರಕರಣ ಪತ್ತೆ

    – ಕರಾವಳಿಯಲ್ಲಿ ಐದಕ್ಕೇರಿದ ಕೊರೊನಾ ಪೀಡಿತರ ಸಂಖ್ಯೆ

    ಮಂಗಳೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ ನಾಲ್ಕು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಹಿಂದಿನ ಒಂದು ಕೊರೊನಾ ಪಾಸಿಟಿವ್ ಪ್ರಕರಣವೂ ಸೇರಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಐದಕ್ಕೇರಿದೆ.

    ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಭಟ್ಕಳ ಮೂಲದ 22 ವರ್ಷದ ವ್ಯಕ್ತಿಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಇಂದು ಒಂದೇ ದಿನ ನಾಲ್ಕು ಕೊರೊನಾ ಪ್ರಕರಣಗಳು ಪಾಸಿಟಿವ್ ಬಂದಿವೆ. ಇಂದು ಪಾಸಿಟಿವ್ ಬಂದು 4 ಜನರಲ್ಲಿ ಮೂವರು ಮಂಗಳೂರಿನ ಮೊದಲ ಪ್ರಕರಣದ ವ್ಯಕ್ತಿಯ ಜೊತೆಯಲ್ಲಿ ಒಂದೇ ವಿಮಾನದಲ್ಲಿ ಬಂದವರಾಗಿದ್ದಾರೆ. ಇದರ ಜೊತೆ ಮಾರ್ಚ್ 19ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿದ್ದ ಓರ್ವನಿಗೂ ಸೋಂಕು ಪತ್ತೆಯಾಗಿದೆ.

    ಮಾರ್ಚ್ 20ರಂದು ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಮೂವರು ಬಂದಿದ್ದಾರೆ. ಈ ಮೂವರಲ್ಲಿ ಮೊದಲಿಗೆ ಭಟ್ಕಳ ಮೂಲದ ವ್ಯಕ್ತಿಗೆ ಮೊದಲು ಸೋಂಕು ಪತ್ತೆಯಾಗಿತ್ತು. ನಂತರ ಇಂದು ಅವರ ಜೊತೆ ಬಂದ ಮೂವರಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಮೂವರನ್ನು ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊತ್ತೋರ್ವ ಸೋಂಕಿತ ರೋಗಿಗೆ ಕೆಂಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇಂದು ಪಾಸಿಟಿವ್ ಬಂದಿರುವ ನಾಲ್ಕು ಪ್ರಕರಣದಲ್ಲಿ ಎಲ್ಲಾ ಸೋಂಕಿತರು ಕೇರಳದವರು ಆಗಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಮತ್ತು ಮೂವರು ಗಂಡಸರು ಇದ್ದಾರೆ. ಸೋಂಕಿತ ಮಹಿಳೆಗೆ 70 ವರ್ಷ ಹಾಗೂ ಗಂಡಸರಿಗೆ ಕ್ರಮವಾಗಿ 32, 47 ಮತ್ತು 23 ವರ್ಷವಾಗಿದೆ.

  • ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಕಲಬುರಗಿಯಲ್ಲಿ ಮತ್ತೋರ್ವನಿಗೆ ಕೊರೊನಾ ವೈರಸ್- ದೃಢಪಡಿಸಿದ ಶ್ರೀರಾಮುಲು

    ಬೆಂಗಳೂರು: ಕಲಬುರಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ದೃಢವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ಕಲಬುರಗಿಯ 4 ಕೊರೊನಾ ಶಂಕಿತರಲ್ಲಿ 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ ಕೊರಾನಾ ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

    ಮುಂಜಾಗ್ರತ ಕ್ರಮವಾಗಿ ಈಶಾನ್ಯ ಸಾರಿಗೆಯ 90 ಬಸ್‍ಗಳ ಸೇವೆಯನ್ನು ನಿನ್ನೆಯಿಂದಲ್ಲೆ ನಿಲ್ಲಿಸಲಾಗಿತ್ತು. ಇದಾದ ಬಳಿಕ ಇಂದು ಸಹ 100ಕ್ಕು ಹೆಚ್ಚು ಬಸ್‍ಗಳ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ, ಕಲಬುರಗಿಯ ಬಸ್ ನಿಲ್ದಾಣ ಬಹುತೇಕ ಸಬ್ಧವಾಗಿತ್ತು. ಪ್ರಯಾಣಿಕರಿಲ್ಲದೆ ಇಡೀ ಕಲಬುರಗಿಯ ರೈಲ್ವೇ ನಿಲ್ದಾಣವೇ ಖಾಲಿ ಖಾಲಿಯಾಗಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೇ ಹೋಗುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಪ್ರತಿ ಒಬ್ಬರ ಆರೋಗ್ಯ ತಪಾಸಣೆ ಮಾಡಿ, ಏನೂ ಸಮಸ್ಯೆ ಇಲ್ಲ ಅಂದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗ್ತಿದೆ. ಜೊತೆಗೆ ಇಡೀ ರೈಲು ನಿಲ್ದಾಣವನ್ನು ಫಿನಾಯಿಲ್ ನಿಂದ ಸ್ವಚ್ಛ ಮಾಡಲಾಗಿದೆ.

    ಕಲಬುರಗಿ ನಗರದಲ್ಲಿ ನಿನ್ನೆಯಿಂದ ವಾಸ್ತವ್ಯ ಹೂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಜೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಐಸೋಲೆಟೆಡ್ ವಾರ್ಡ್‍ಗಳನ್ನು ಪರಿಶೀಲಿಸಿದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸರ್ಕಾರ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿದ್ದು, ಜನರು ಭಯಪಡಬೇಕಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

  • ಇಂಗ್ಲೆಂಡಿನಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಬಂತು ಸೋಂಕು

    ಇಂಗ್ಲೆಂಡಿನಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಸಚಿವೆಗೆ ಬಂತು ಸೋಂಕು

    ಲಂಡನ್: ದೇಶದ ಜನತೆಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಬಂದಿರುವುದು ಹೆಲ್ತ್ ಚೆಕಪ್ ವೇಳೆ ದೃಢಪಟ್ಟಿದೆ.

    ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್‍ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವಿಷಯ ತಿಳಿದು ಬಂದ ಕೂಡಲೇ ಸ್ವತಃ ನಾಡಿನ್ ಡೋರಿಸ್ ಅವರೇ ಮನೆಯಿಂದ ಹೊರಗೆ ಬರೆದೇ ಗೃಹ ಬಂಧನದಲ್ಲಿದ್ದಾರೆ.

    ನಾಡಿನ್ ಡೋರಿಸ್ ಅವರಿಗೆ ಕಳೆದ ಗುರುವಾರ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ರೋಗದ ಲಕ್ಷಣ ಕಾಣಿಸಿಕೊಂಡ ದಿನವೇ ನಾಡಿನ್ ಅವರು ಇಂಗ್ಲೆಂಡ್ ಪ್ರಧಾನ ಮಂತ್ರಿಯವರು ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರ ಬಳಿ ಸಂಪರ್ಕದಲ್ಲಿ ಇದ್ದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನಾಡಿನ್ ಡೋರಿಸ್ ಅವರು, ನನಗೆ ಕೊರೊನಾ ಇರುವುದು ತಿಳಿದ ನಂತರ ಗುಣಮುಖರಾಗಿ ಎಂದು ಶುಭಕೊರಿದ ಎಲ್ಲರಿಗು ಧನ್ಯವಾದಗಳು. ಮುಂದೆ ಎಲ್ಲ ಸರಿ ಹೋಗುತ್ತದೆ. ಆದರೆ ನನ್ನ ಜೊತೆಯಲ್ಲೇ ಇದ್ದ ನನ್ನ 84 ವರ್ಷದ ಅಮ್ಮನಿಗೆ ಕೂಡ ಇಂದು ಕೆಮ್ಮು ಕಾಣಿಸಿಕೊಂಡಿದೆ. ಆಕೆಯನ್ನು ನಾಳೆ ವೈದ್ಯರು ಪರೀಕ್ಷಿಸಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಿ ಮತ್ತು ಎಲ್ಲರೂ ಸದಾ ಕೈಗಳನ್ನು ತೊಳಿದುಕೊಳ್ಳುತ್ತಿರಿ ಎಂದು ಬರೆದುಕೊಂಡಿದ್ದಾರೆ.

    ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್ ಈಗ ವಿಶ್ವದೆಲ್ಲೆಡೆ ಕಾಣಿಸಿಕೊಂಡಿದೆ. ಚೀನಾದಲ್ಲಿ 80,778 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಸುಮಾರು 61 ಮಂದಿಗೆ ಕೊರೊನಾ ತಗುಲಿದ್ದು, ಕರ್ನಾಟಕದಲ್ಲಿ 4 ಮಂದಿ ಕೊರೊನಾ ತುತ್ತಾಗಿರುವುದು ದೃಢಪಟ್ಟಿದೆ. ಇತ್ತ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು 14 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

    ಇತ್ತ ಇರಾನ್‍ನಲ್ಲಿ ಕೂಡ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. 291 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, 8,042 ಮಂದಿಗೆ ಸೋಂಕು ತಗುಲಿದೆ. ಈ ಮಧ್ಯೆ ಇರಾನ್‍ನಲ್ಲಿ ಇದ್ದ 58 ಭಾರತೀಯರನ್ನು ಭಾರತೀಯ ವಾಯುಪಡೆ ತಾಯ್ನಾಡಿಗೆ ವಾಪಸ್ ಕರೆತಂದಿದೆ. ಮಹಾಮಾರಿ ಕೊರೊನಾಗೆ ಭಾರತೀಯರೊಬ್ಬರು ಸಾವನ್ನಪ್ಪಿದ್ದಾರೆ. ಭಾರತೀಯ ಮೂಲದ ಬ್ರಿಟನ್‍ನಲ್ಲಿದ್ದ ಮನೋಹರ್ ಕೃಷ್ಣ ಪ್ರಭು(80) ಮೃತರಾಗಿದ್ದಾರೆ. ಇವರು ವ್ಯಾಟ್‍ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.