ಬಳ್ಳಾರಿ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಏಳು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ 13ಕ್ಕೆ ತಲುಪಿದೆ.
ಜಿಲ್ಲೆಯ ಹೊಸಪೇಟೆ ನಗರದಲ್ಲಿ ಈ ಹಿಂದೆ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಏಳು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಹೊಸಪೇಟೆ ನಗರದಲ್ಲಿಯೇ 11 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ.
ಹೊಸಪೇಟೆ ಎಸ್.ಆರ್. ನಗರದ ಒಂದೇ ಕುಟುಂಬದ ನಾಲ್ವರಿಗೆ ಈ ಕೊರೊನಾ ಪಾಸಿಟಿವ್ ಬಂದಿತ್ತು. ಅದೇ ಕುಟುಂಬದ ಪ್ರಾಥಮಿಕ ಸಂಪರ್ಕ ಹೊಂದಿದ್ದ 25 ಮಂದಿಯನ್ನೂ ಸೇರಿದಂತೆ ಸುಮಾರು 125 ಮಂದಿಯನ್ನು ಕಳೆದ 14 ದಿನಗಳಿಂದ ಜಿಲ್ಲಾಡಳಿತ ಹೊಸಪೇಟೆ ಹೊಟೇಲೊಂದರಲ್ಲಿ ಕ್ವಾರಂಟೈನ್ ಮಾಡಿತ್ತು. 12ನೇಯ ದಿನಕ್ಕೆ ಟೆಸ್ಟ್ ಮಾಡಿದಾಗ 7 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಅಲ್ಲದೆ ಹೊಸಪೇಟೆ ಎಸ್.ಆರ್.ನಗರದ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೆಷಂಟ್ ಸಂಖ್ಯೆ 89, 90, 91 ರೋಗಿಗಳನ್ನ ಜಿಲ್ಲಾಸ್ಪತ್ರೆಯ ಕೋವಿಡ್-19 ಐಸೊಲೇಷನ್ ವಾರ್ಡಿನಲ್ಲಿ ಇರಿಸಲಾಗಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಏಳು ಮಂದಿಯಲ್ಲಿ ಈಗ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಹತ್ತು ಜನರಲ್ಲಿ ಸೋಂಕು ತಗುಲಿದೆ.
ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಮಗನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಎಸ್‍ಐ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 40 ಮಂದಿ ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.
ಎಸ್‍ಐ ಮಗನಿಗೆ ಕೊರೊನಾ ಪರೀಕ್ಷೆ ಮಾಡಿದ್ದು, ಆತನಿಗೆ ಸೋಂಕು ಇರುವುದು ಬುಧವಾರ ದೃಢಪಟ್ಟಿತ್ತು. ಈ ಕಾರಣದಿಂದ ಮುಂಜಾಗೃತಾ ಕ್ರಮವಾಗಿ ಎಸ್‍ಐ ಜೊತೆ ಕೆಲಸ ಮಾಡುತ್ತಿದ್ದ ಸುಮಾರು 40 ಮಂದಿ ಪೊಲೀಸರನ್ನು ಹೋಂ ಕ್ವಾರಂಟೈನ್ ಅಲ್ಲಿ ಇರುವಂತೆ ಸೂಚಿಸಲಾಗಿದೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಅಲ್ಲಿನ ಆರೋಗ್ಯಾಧಿಕಾರಿ, ಎಸ್‍ಐ ಕುಟುಂಬವನ್ನು ಕುಪ್ವಾರದ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಇದರ ಜೊತೆ ಎಸ್‍ಐ ಗಂಟಲ ದ್ರವ ಮತ್ತು ಬ್ಲಡ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಎಸ್‍ಐ ಜೊತೆ ಸೇವೆ ಸಲ್ಲಿಸುತ್ತಿದ್ದ ಪೊಲೀಸರಿಗೆ ಹೋಂ ಐಸೊಲೇಷನ್‍ನಲ್ಲಿ ಇರಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಶ್ರೀನಗರದ ಬೆಮಿನಾದಲ್ಲಿರುವ ಇಂಡಿಯಾ ರಿಸರ್ವ್ ಪೊಲೀಸ್ (ಐ.ಆರ್.ಪಿ) 3 ನೇ ಬೆಟಾಲಿಯನ್‍ನಲ್ಲಿ ಪೋಸ್ಟ್ ಮಾಡಲಾಗಿರುವ ಪೇದೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶ್ರೀನಗರ ಮಸೀದಿಯಲ್ಲಿರುವ ತಬ್ಲಿಘಿ ಜಮಾತ್ ಸದಸ್ಯರೊಡನೆ ಸಂಪರ್ಕಕ್ಕೆ ಬಂದ ನಂತರ ಬುಡ್ಗಾಮ್‍ನ ರತ್ಸುನಾದಿಂದ ಬಂದ ಪೇದೆ ವೈರಸ್‍ಗೆ ತುತ್ತಾಗಿರಬಹುದು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ಸದ್ಯ ನಾವು ಈ ಪೊಲೀಸ್ ಪೇದೆಯನ್ನು ಕ್ವಾರಂಟೈನ್ ಮಾಡಿದ್ದೇವೆ. ಜೊತೆಗೆ ಅವರ ಸಂಪರ್ಕದಲ್ಲಿ ಇದ್ದ ಜನರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಗುರುವಾರ ಒಂದೇ ದಿನ ಕಾಶ್ಮೀರದಲ್ಲಿ 14 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 314ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೋಪಾಲ್: ಕೊರೊನಾ ವಿರುದ್ಧ ಹೋರಾಡುತ್ತಿರುವ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ತಮ್ಮ ಜೀವನದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗೂ ಕೊರೊನಾ ಮಹಾಮಾರಿ ಕಾಡುತ್ತಿದೆ. ಭೋಪಾಲ್‍ನಲ್ಲಿ ಈವರೆಗೂ 94 ಆರೋಗ್ಯಾಧಿಕಾರಿಳು ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸುಮಾರು 166 ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರಿಗೆ ಕಳೆದ ಮಂಗಳವಾರ ಕೊರೊನಾ ಪಾಸಿಟಿವ್ ಬಂದಿತ್ತು. ಆರೋಗ್ಯ ಇಲಾಖೆ ಮೊದಲ ಪ್ರಕರಣ ಏಪ್ರಿಲ್ 2ರಂದು ಬೆಳಕಿಗೆ ಬಂದಿತ್ತು. ರಾಷ್ಟ್ರೀಯ ಆರೋಗ್ಯ ಮಿಷನ್‍ನ ವ್ಯವಸ್ಥಾಪಕ ನಿರ್ದೇಶಕರು ಮೊದಲಿಗೆ ಕೊರೊನಾ ವೈರಸ್‍ಗೆ ತುತ್ತಾಗಿದ್ದರು. ಇದಾದ ಎರಡು ದಿನಗಳ ನಂತರ ಮತ್ತೊಬ್ಬ ಐಎಎಸ್ ಅಧಿಕಾರಿ ವೈರಸ್‍ಗೆ ತುತ್ತಾಗಿದ್ದರು.
ಮಧ್ಯಪ್ರದೇಶದ ಅರೋಗ್ಯ ಇಲಾಖೆಯ ವಿದೇಶದಿಂದ ಮರಳಿದ ಇಬ್ಬರು ಹೆಚ್ಚುವರಿ ನಿರ್ದೇಶಕರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದರ ಜೊತಗೆ ಮಗನ ಯುಎಸ್ ಪ್ರವಾಸದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಬಚ್ಚಿಟ್ಟಿದ್ದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಕೂಡ ಕೊರೊನಾ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ಎಲ್ಲರನ್ನೂ ಸೇರಿ ಸುಮಾರು 94 ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಮಧ್ಯಪ್ರದೇಶದಲ್ಲಿ ಮಂಗಳವಾರ ಒಂದೇ ದಿನ 197 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 938 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬರೋಬ್ಬರಿ 544 ಪ್ರಕರಣಗಳು ಇಂದೋರ್ ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಸುಮಾರು 58% ಸೋಂಕಿತರು ಈ ಪ್ರದೇಶದಲ್ಲೇ ಇದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಸುಲೇಮಾನ್ ಅವರು, ಮಧ್ಯಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಪರೀಕ್ಷೆಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ದೇಶದಲ್ಲೇ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆಯನ್ನು ಮಾಡಲು ನಿರ್ಧಾರ ಮಡಿದ್ದೇವೆ ಎಂದು ತಿಳಿಸಿದ್ದಾರೆ.
– ಸಂಪರ್ಕಕ್ಕೆ ಬಂದಿದ್ದ 20 ಮಂದಿಗೆ ಕ್ವಾರಂಟೈನ್
– ಟಾಯ್ಲೆಟ್‍ನಲ್ಲೇ ಕುಸಿದು ಬಿದ್ದಿದ್ದ ವೃದ್ಧ
– ಸೋಮವಾರ ಸಂಜೆ ಕೊರೊನಾ ದೃಢ
ಬೆಂಗಳೂರು: ಕೊರೊನಾ ಸೋಂಕಿತರ ಸಾವು ಕರ್ನಾಟಕದಲ್ಲಿ 8ಕ್ಕೆ ಏರಿದ್ದು, ಕಳೆದ ದಿನವೇ ಇಬ್ಬರು ಒಂದೇ ದಿನ ಮೃತಪಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯ 65 ವರ್ಷದ ವೃದ್ಧ ಮೂರು ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಮೃತಪಟ್ಟಿದ್ದಾರೆ.
ಭಾನುವಾರ ಮೃತ ವೃದ್ಧ ಕಫ, ಕೆಮ್ಮು ಎಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಆತನಿಗೆ ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡಿದೆ ಅಂತ ವೈದ್ಯರು ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಈ ವೇಳೆ ವೈದ್ಯರು ವೃದ್ಧನಿಗೆ ಅಡ್ಮಿಟ್ ಆಗಿ ಎಂದು ತಿಳಿಸಿದ್ದಾರೆ. ಆದರೆ ವೃದ್ಧ ಅಡ್ಮಿಟ್ ಆಗಲ್ಲ, ನಾನು ಜಯದೇವ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾರೆ.
ವೃದ್ಧ ಜಯದೇವದ ರೆಗ್ಯೂಲರ್ ರೋಗಿ ಆಗಿದ್ದರು. ಆದರೆ ಜಯದೇವ ಆಸ್ಪತ್ರೆಯಲ್ಲೂ ರಾಜೀವ್ ಗಾಂಧಿಗೆ ಹೋಗಿ ಎಂದು ರೆಫರ್ ಮಾಡಿದ್ದಾರೆ. ಆದರೂ ವೃದ್ಧ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಬಳಿಕ ಅಲ್ಲಿಯೂ ರಾಜೀವ್ ಗಾಂಧಿಗೆ ರೆಫರ್ ಮಾಡಿದ್ದಾರೆ. ಕೊನೆಗೆ ವೃದ್ಧ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಎರಡನೇ ಬಾರಿ ಆಸ್ಪತ್ರೆಗೆ ಬಂದಾಗ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಕೊನೆಗೆ ವೃದ್ಧ ಭಾನುವಾರ ರಾತ್ರಿ 8:30 ರ ವೇಳೆಗೆ ಅಡ್ಮಿಟ್ ಆಗಿದ್ದಾರೆ.
ಅಡ್ಮಿಟ್ ಆದ ಬಳಿಕ ವೃದ್ಧ ಸೋಮವಾರ ಬೆಳಗ್ಗೆ ವಾರ್ಡಿನಲ್ಲಿದ್ದ ಟಾಯ್ಲೆಟ್‍ಗೆ ತೆರಳಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ವೈದ್ಯರು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ದಾಖಲಾದ 65 ವರ್ಷದ ವ್ಯಕ್ತಿಯೊಬ್ಬರು ಇಂದು ಮೃತರಾಗಿದ್ದಾರೆ. ಇವರು ಹೃದ್ರೋಗದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಇವರನ್ನು ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಿ, #Covid19 ಪರೀಕ್ಷೆ ಮಾಡಲಾಗಿ, ವರದಿಯಲ್ಲಿ ಸೋಂಕು ದೃಢಪಟ್ಟಿದೆ.
ವೃದ್ಧ ವಾರ್ಡ್ ನಂಬರ್ 132ರ ನಿವಾಸಿಯಾಗಿದ್ದು, ಸೋಮವಾರ ಸಂಜೆ ಪರೀಕ್ಷಾ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಸದ್ಯಕ್ಕೆ ವೃದ್ಧ ಭೇಟಿ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ಆತ ಯಾವುದರಲ್ಲಿ ಪ್ರಯಾಣ ಬೆಳೆಸಿದ್ದ ಎಂಬ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಕೊರೊನಾಗೆ 65 ವರ್ಷದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಜೊತೆ 20 ಜನ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವವರನ್ನ ಕ್ವಾರಂಟೈನ್‍ನಲ್ಲಿ ಇಡಲು ಬಿಬಿಎಂಪಿ ಮುಂದಾಗಿದೆ. ಅಲ್ಲದೇ ವೃದ್ಧ ಮೃತಪಟ್ಟ ಬೆನ್ನಲ್ಲೇ ಟಿಪ್ಪು ನಗರದ ಮನೆಗೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೃತ ವೃದ್ಧ ಸೀಲ್‍ಡೌನ್ ಆಗಿರುವ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಗಳ ಪಕ್ಕದಲ್ಲೇ ನೆಲೆಸಿದ್ದು ಆತಂಕ ಹೆಚ್ಚಾಗಿದೆ.
ESI ಆಸ್ಪತ್ರೆ ಕಲಬುರ್ಗಿಯಲ್ಲಿ #COVID19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು (P-205) ನಿಧನ ಹೊಂದಿದ್ದಾರೆ. ಅವರು ತೀವ್ರ ಉಸಿರಾಟದ ತೊಂದರೆಯಿಂದಾಗಿ (Severe acute respiratory illness) ಏಪ್ರಿಲ್ 7ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಮೊದಲು ಮೊದಲು ಎದೆನೋವು ಬಂದಾಗ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೆ ಅಸಡ್ಡೆ ತೋರಿ, ಸಾವಿನ ಅಂಚಿನಲ್ಲಿದ್ದಾಗ ಕೊರೊನಾ ಟೆಸ್ಟ್ ಮಾಡಲಾಗಿದೆ. ಸಾವಿಗೂ ಮುನ್ನ ಹಲವರನ್ನು ಸಂಪರ್ಕಿಸಿರುವುದರಿಂದ ಇದೀಗ ವೃದ್ಧನ ಸಾವು ತಲೆನೋವಾಗಿದೆ. ಸದ್ಯಕ್ಕೆ ಆರೋಗ್ಯ ಇಲಾಖೆ ಮನೆಯಲ್ಲಿರುವ ಮಕ್ಕಳು ಸೇರಿದಂತೆ ಅಕ್ಕಪಕ್ಕದವರ ಮೇಲೆ ನಿಗಾ ಇಟ್ಟಿದೆ.
ಹೃದಯಸಂಬಂಧಿ ಕಾಯಿಲೆ ಇರುವಲ್ಲಿ ಈಗ ಕೊರೊನಾ ಪಾಸಿಟಿವ್ ಹೆಚ್ಚಾಗಿ ಕಾಣಿಸುತ್ತಿದೆ. ಉಸಿರಾಟದ ತೊಂದರೆಯಂತೆ ಹೃದಯ ಸಂಬಂಧಿ ಕಾಯಿಲೆ ಕೂಡ ಈಗ ಅಪಾಯಕಾರಿಯಾಗುತ್ತಿದೆ ಎಂದು ಜಯದೇವ ನಿರ್ದೇಶಕ ಡಾ ಮಂಜುನಾಥ್ ಸರ್ಕಾರದ ಗಮನಕ್ಕೆ ತಂದಿದ್ದರು. ಬಹುತೇಕರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರೋರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಭಾನುವಾರ ದಾಖಲಾಗಿ ಸೋಮವಾರ ಸಾವನ್ನಪ್ಪಿದ ವೃದ್ಧ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಒಂದು ವಾರದ ಒಳಗಾಗಿ ಕೊರೊನಾ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಅಂದಹಾಗೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಗೆ ಆಗಮಿಸಿದ ಸುಧಾಕರ್, ನಗರ ಹೊರವಲಯದ ಕ್ಯಾಂಪಸ್ ಬಳಿ ಪರ್ಯಾಯ ಎಪಿಎಂಸಿ ಜಾಗಕ್ಕೆ ಭೇಟಿ ನೀಡಿ, ಕೊರೊನಾ ಹರುಡುವಿಕೆಯನ್ನು ತಡೆಯುವ ಸಲುವಾಗಿ ನಿರ್ಮಾಣ ಮಾಡಲಾಗಿರುವ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿ, ಸರ್ಕಾರ ಪರಿಣಿತ ವೈದ್ಯರ ಟಾಸ್ಕ್ ಫೋರ್ಸ್ ಕಮಿಟಿ ರಚನೆ ಮಾಡಿದ್ದು, ತಂಡ ವರದಿ ನೀಡಿದೆ. ಆದರೆ ವರದಿಯನ್ನು ಸರ್ಕಾರ ಪಾಲನೆ ಮಾಡಬೇಕಾಗಿಲ್ಲ. ರಾಜ್ಯದ ಪ್ರಮುಖ ಸಂಘಟನೆಗಳ ಮುಖಂಡರ ಜೊತೆ ಸಾಧಕ ಬಾಧಕಗಳ ಜೊತೆ ಸಿಎಂ ಚರ್ಚೆ ಮಾಡಲಿದ್ದಾರೆ. ನಾಳೆ ಪ್ರಧಾನಮಂತ್ರಿ ಮೋದಿಯವರ ಜೊತೆ ಎಲ್ಲ ರಾಜ್ಯಗಳ ಸಿಎಂಗಳ ವಿಡಿಯೋ ಕಾನ್ಫೆರೆನ್ಸ್ ಇದ್ದು, ಏಪ್ರಿಲ್ 12ರಂದು 14ರ ನಂತರ ಏನು ಮಾಡ್ತೇವೆ ಅನ್ನೋದನ್ನು ತಿಳಿಸಲಿದ್ದೇವೆ ಎಂದರು.
ಜೊತೆಗೆ ಜಿಲ್ಲೆಯಲ್ಲಿ 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೂ ಮೂವರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 8 ಮಂದಿಯೂ ಸಹ ಶಿಘ್ರವೇ ಗುಣಮುಖರಾಗಲಿದ್ದು, ಜಿಲ್ಲೆ ಕೊರೊನಾ ಮುಕ್ತವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಆದರೆ ಕಳೆದ ವಾರ ನೆಗೆಟಿವ್ ಬಂದ ಮಹಿಳೆಗೆ ಈಗ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಗೌರಿಬಿದನೂರಿನ 48 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದೆ. ಈಕೆಯ ಸಹೋದರನಿಂದ (ರೋಗಿ 94) ಮತ್ತು ರೋಗಿ 19ರ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಬಂದಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೆಕ್ಕಾದಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದ ಮೊದಲ ರೋಗಿ 19 ಆಗಿದ್ದು, 19 ರ ತಾಯಿ, ತಂದೆ ಮತ್ತು ಇಬ್ಬರೂ ಸಹೋದರಿಯರಿಗೆ ಸೋಂಕು ಕಂಡುಬಂದಿತ್ತು. ಕಳೆದ ವಾರ ಇಬ್ಬರ ಸಹೋದರಿಯರಲ್ಲಿ ಓರ್ವಳಿಗೆ ಪಾಸಿಟಿವ್ ಬಂದಿದ್ದು, ಮತ್ತೊಬ್ಬಳಿಗೆ ನೆಗೆಟಿವ್ ಬಂದಿತ್ತು. ಅನುಮಾನ ಬಂದು ಮತ್ತೆ ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 6 ಜನರಿಗೂ ಸೋಂಕು ಧೃಡವಾಗಿದೆ.
6 ಮಂದಿಯಲ್ಲಿ ಮಗ, ತಾಯಿ ಹಾಗೂ ಚಿಕ್ಕಮ್ಮ ಮೆಕ್ಕಾದಿಂದ ವಾಪಸ್ಸಾಗಿದ್ದರು. ತಂದೆ ಹಾಗೂ ಇಬ್ಬರು ಸಹೋದರಿಯರಿಗೂ ಸೋಂಕು ಬಂದಿದೆ. ಈ ಆರು ಮಂದಿಯಲ್ಲಿ ಮೂವರು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ ತಾಯಿ ಡಿಸ್ಚಾರ್ಜ್ ಆಗಿದ್ದು, ಇಂದು ತಂದೆ ಹಾಗೂ ಚಿಕ್ಕಮ್ಮ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಿಸಿ ಆರ್.ಲತಾ ಸ್ಪಷ್ಟನೆ ನೀಡಿದ್ದಾರೆ.
ಇವತ್ತು ರಾಜ್ಯದಲ್ಲಿ 10 ಕೊರೊನಾ ಪ್ರಕರಣ ದಾಖಲಾಗಿದೆ. ಬಾಗಲಕೋಟೆಯಲ್ಲಿ ಮೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ 2, ಬೆಳಗಾವಿ, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಮತ್ತೊಂದು ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಅಂದಹಾಗೆ ಈಗಾಗಲೇ ಗೌರಿಬಿದನೂರು ನಗರದ 10 ಮಂದಿಗೆ ಸೋಂಕು ದೃಢವಾಗಿ ಓರ್ವ ವೃದ್ಧೆ ಮೃತಪಟ್ಟಿದ್ದರು.
ಈಗ ದೆಹಲಿಯಿಂದ ವಾಪಸ್ ಆದ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಈ ಹೊಸ ಪ್ರಕರಣದಿಂದ ಗೌರಿಬಿದನೂರಿನಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮಾರ್ಚ್ 6 ರಂದು ದೆಹಲಿಯ ನಿಜಾಮುದ್ದೀನ್ ನಿಂದ ರೈಲಿನ ಮೂಲಕ ಗೌರಿಬಿದನೂರು ಗಡಿಭಾಗ ಆಂಧ್ರದ ಹಿಂದೂಪುರಕ್ಕೆ ಆಗಮಿಸಿ, ಅಲ್ಲಿಂದ ಬಸ್ ಮೂಲಕ ಗೌರಿಬಿದನೂರು ನಗರಕ್ಕೆ ಆಗಮಿಸಿದ್ದಾನೆ.
ತನ್ನ ಮನೆಗೆ ಬಂದು ತನ್ನ ತಾಯಿ ಜೊತೆ ವಾಸವಾಗಿದ್ದ ಯುವಕನ ಮನೆಗೆ ಈತನ ಅಕ್ಕ-ಬಾವ ಹಾಗೂ ಇಬ್ಬರು ಮಕ್ಕಳ ಸಹ ಬಂದು ಹೋಗಿದ್ದಾರೆ. ಮತ್ತೊಂದೆಡೆ ಈತ ತನ್ನ ಸ್ನೇಹಿತನ ಜೊತೆಗೂಡಿ ಆಂಧ್ರದ ಹಿಂದೂಪುರಕ್ಕೆ ನಾಲ್ಕೈದು ಬಾರಿ ಹೋಗಿ ಬಂದಿದ್ದಾನೆ. ದೆಹಲಿಯ ನಿಜಾಮುದ್ದೀನ್ ಪ್ರಕರಣ ಬಯಲಾದ ನಂತರ ಈತನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇಂದು ಈತನ ವರದಿ ಲಭ್ಯವಾಗಿದ್ದು ಪಾಸಿಟಿವ್ ಬಂದಿದೆ.
ಹೀಗಾಗಿ ಯುವಕನ ತಾಯಿ, ಅಕ್ಕ-ಬಾವ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಸ್ನೇಹಿತ ಹಾಗೂ ಸ್ನೇಹಿತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಯುವಕ ಸೇರಿದಂತೆ 8 ಮಂದಿ ದೆಹಲಿಯ ಜಮಾತ್ ಗೆ ಹೋಗಿ ಬಂದಿದ್ದು, ಇವರಲ್ಲಿ ಈತನಿಗೆ ಬಿಟ್ಟು ಬೇರೆ ಯಾರಿಗೂ ಸೋಂಕು ತಗುಲಿಲ್ಲ. ಹೀಗಾಗಿ ಈತನಿಗೆ ದೆಹಲಿಯಲ್ಲೇ ಸೋಂಕು ತಗಲಿದೆಯಾ ಅಥವಾ ಹಿಂದೂಪುರದಲ್ಲಿ ಸಹ ಸಾಕಷ್ಟು ಪಾಸಿಟಿವ್ ಪ್ರಕರಣಗಳಿದ್ದು ಅಲ್ಲಿ ಏನಾದ್ರೂ ಸೋಂಕು ತಗುಲಿದೆಯಾ ಅನ್ನೋ ಅನುಮಾನ ಜಿಲ್ಲಾಡಳಿತಕ್ಕೆ ಮೂಡಿದೆ.
ಹೀಗಾಗಿ ಪೇಷೆಂಟ್ ನಂಬರ್ 180ರ ಮತ್ತಷ್ಟು ಟ್ರಾವೆಲ್ ಹಿಸ್ಟರಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.
ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಕುಡಚಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.
ಲಾಕ್‍ಡೌನ್ ಆದಗಿನಿಂದ ಜನರು ಹೊರ ಬರದೆ ಮನೆಯಲ್ಲಿಯೇ ಇದ್ದಾರೆ. ಆದರೂ ಕುಡಚಿ ಪಟ್ಟಣದ ಮೂವರು ಮಹಿಳೆಯರಿಗೆ ಹಾಗೂ ಓರ್ವ ಪುರುಷನಿಗೆ ಕೊರೊನಾ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಸೋಂಕಿತರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತ 4 ಜನರ ಪ್ರೈಮರಿ ಹಂತದ ಸಂಪರ್ಕದಲ್ಲಿದ್ದವರ ಸ್ಥಳಾಂತರ ಮಾಡಲಾಗಿದ್ದು, ಕುಡಚಿ ಪಟ್ಟಣದ ಸರ್ಕಾರಿ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಗೆ 64 ಜನರಿಗೆ ಕ್ವಾರಂಟೈನ್ ಮಾಡುವ ಜವಾಬ್ದಾರಿ ವಹಿಸಲಾಗಿದೆ. ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮಕ್ಕೆ ಎರಡು ಕುಟುಂಬಗಳು ಸೇರಿ ತೆರಳಿದ್ದರು. ಅದರಲ್ಲಿ 4 ಜನರ ಸೋಂಕು ದೃಢವಾಗಿದ್ದು, ಇನ್ನೂ 4 ಜನರ ವರದಿ ಬರಬೇಕಿದೆ. ಒಟ್ಟು ಕುಡಚಿ ಪಟ್ಟಣದಿಂದ 23 ಜನ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯಕ್ಕೆ 19 ಜನರ ವರದಿಗಾಗಿ ಕಾಯಲಾಗುತ್ತಿದೆ.
ಶೇ.85 ರಷ್ಟು ಮುಸ್ಲಿಂ ಸಮುದಾಯ ಇರುವ ಕುಡಚಿ ಪಟ್ಟಣದಲ್ಲಿ ಈಗಾಗಲೇ ಬಫರ್ ಝೋನ್ ನಿರ್ಮಾಣ ಮಾಡಲಾಗಿದ್ದು, ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕುಡಚಿ ಪಟ್ಟಣದ ಅಕ್ಕಪಕ್ಕದ ಗ್ರಾಮಗಳಲ್ಲೂ ಹೈ ಅಲರ್ಟ್ ವಾತಾವರಣ ನಿರ್ಮಾಣವಾಗಿದೆ.
ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕಿನಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದರು, ದಿನೇ ದಿನೇ ಸೋಂಕು ಜಾಸ್ತಿಯಾಗುತ್ತಾನೆ ಇದೆ. ಹಾಗೇಯೇ ಇಂದು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಬ್ಬರು ದೆಹಲಿಯಲ್ಲಿ ನಡೆದ ಧಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಬಂದಿದ್ದರು ಎಂದು ತಿಳಿದು ಬಂದಿದೆ.
ತೊಕ್ಕೊಟ್ಟು ಮೂಲದ ಆಟೋ ಚಾಲಕನೋರ್ವ ಇತ್ತೀಚೆಗೆ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಾಲಕ ಇದ್ದ ವಸತಿ ಸಂಕೀರ್ಣವನ್ನು ಪೂರ್ತಿ ಲಾಕ್ ಡೌನ್ ಮಾಡಲು ಉಳ್ಳಾಲ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಸ್ಥಳೀಯರಿಂದ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಏಮ್ಸ್ ಆಸ್ಪತ್ರೆ ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ ಸೋಂಕು ಧೃಡಪಟ್ಟಿದೆ.
9 ತಿಂಗಳ ತುಂಬು ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿದೆ. ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯನಿಗೆ ಕೊರೊನಾ ಸೋಂಕು ಕಂಡು ಬಂದಿತ್ತು. ಹೀಗಾಗಿ ವಿಶೇಷ ವಾರ್ಡಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿಯನ್ನು ತಪಾಸಣೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದೀಗ ಗರ್ಭಿಣಿಯನ್ನು ಎಮರ್ಜೆನ್ಸಿ ವಾರ್ಡಿನಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಎರಡು ಮೂರು ದಿನಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಆದರೆ ಇದೇ ವೇಳೆ ಗರ್ಭಿಣಿಗೂ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆ ವೈದ್ಯೆಗೆ ಕೊರೊನಾ ಇರುವುದು ಸ್ಪಷ್ಟವಾಗಿತ್ತು. ಇದಕ್ಕೂ ಮುನ್ನ ಮೊಹಲ್ಲಾ ಕ್ಲೀನಿಕ್ ವೈದ್ಯನಿಗೆ ಕೊರೊನಾ ಪಾಸಿಟಿವ್ ಆಗಿತ್ತು.