Tag: porsche car

  • ಪೋರ್ಷೆ ಕಾರು ಅಪಘಾತ- ಅಪ್ರಾಪ್ತನ ತಂದೆ, ಅಜ್ಜನಿಗೆ ಜಾಮೀನು ಮಂಜೂರು

    ಪೋರ್ಷೆ ಕಾರು ಅಪಘಾತ- ಅಪ್ರಾಪ್ತನ ತಂದೆ, ಅಜ್ಜನಿಗೆ ಜಾಮೀನು ಮಂಜೂರು

    ಪುಣೆ: ಕಿಡ್ನ್ಯಾಪ್ ಮತ್ತು ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ಅಪ್ರಾಪ್ತನ ತಂದೆ ಮತ್ತು ಅಜ್ಜನಿಗೆ ಮಂಗಳವಾರ ಪುಣೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ಜಾಮೀನು ಆದೇಶವನ್ನು ಕೋರ್ಟ್ ನೀಡಿದ ನಂತರ ಬಾಲಾಪರಾಧಿಯ ಅಜ್ಜ ಎಸ್‍ಕೆ ಅಗರ್ವಾಲ್ ಬಿಡುಗಡೆಯಾಗಲಿದ್ದಾರೆ. ಆದಾಗ್ಯೂ ಬ್ಲಡ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಪೊಲೀಸರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗಿರುವುದರಿಂದ ಅಪ್ರಾಪ್ತ ಆರೋಪಿಯ ತಂದೆ ವಿಶಾಲ್ ಅಗರ್ವಾಲ್ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

    ಮೇ 19 ರ ಮಧ್ಯರಾತ್ರಿ ಅಪಘಾತದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್, ಚಾಲಕನನ್ನು ಅಪಹರಿಸಿ ತನ್ನ ಬಂಗಲೆಗೆ ಕರೆದೊಯ್ದಿದ್ದಾನೆ. ಬಳಿಕ ಆ ದಿನ ರಾತ್ರಿ ಚಾಲಕ ಕಲ್ಯಾಣಿನಗರದಲ್ಲಿರುವ ಅಗರ್ವಾಲ್ ಮನೆಯಲ್ಲಿ ತಂಗಿದ್ದನು. ಆತನ ಹೆಂಡತಿ ಮತ್ತು ಮಕ್ಕಳನ್ನು ಸಹ ಇಲ್ಲಿಗೆ ಕರೆತರಲಾಗಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು

    ಈ ನಿಟ್ಟಿನಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಅಗರ್ವಾಲ್ ಅವರ ಬಂಗಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಕೀಲ ಪ್ರಶಾಂತ್ ಪಾಟೀಲ್, ಚಾಲಕ ಸ್ವಯಂ ಪ್ರೇರಿತವಾಗಿ ಬಂಗಲೆಗೆ ಬಂದಿದ್ದಾನೆ. ಘಟನಾ ಸ್ಥಳದಲ್ಲಿದ್ದ ಜನಸಮೂಹ ಕಂಡು ಭಯದಿಂದ ಆ ರಾತ್ರಿ ಅಗರ್ವಾಲ್ ಅವರ ಬಂಗಲೆಯಲ್ಲಿ ಚಾಲಕ ತನ್ನ ಕುಟುಂಬದೊಂದಿಗೆ ಉಳಿದುಕೊಂಡಿದ್ದಾನೆ ಎಂದು ಕೋರ್ಟ್‍ಗೆ ಪಾಟೀಲ್ ತಿಳಿಸಿದರು.

    ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್‍ಗೆ ಜಾಮೀನು ನೀಡಲಾಯಿತು. ಈ ನಡುವೆ ವಿಶಾಲ್ ಅಗರ್ವಾಲ್ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಆದರೆ ಅವರ ಕಸ್ಟಡಿಯು ಮುಂದುವರಿಯುತ್ತದೆ. ಹಿಂದಿನ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ವಿಶಾಲ್ ಅಗರ್ವಾಲ್ ಇತರ ಮೂರು ಪ್ರಕರಣಗಳಿಂದಾಗಿ ಯರವಾಡ ಕೇಂದ್ರ ಕಾರಾಗೃಹದಲ್ಲಿಯೇ ಇದ್ದರು.

    ಒಂದು ಪ್ರಕರಣವು ಕುಟುಂಬದ ಚಾಲಕನ ಅಪಹರಣ ಮತ್ತು ಅಕ್ರಮ ಬಂಧನವನ್ನು ಒಳಗೊಂಡಿತ್ತು. ಅಗರ್ವಾಲ್ ಕಾರನ್ನು ಚಾಲನೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದು ಪ್ರಕರಣವು ಸಂಭಾವ್ಯ ಸಾಕ್ಷ್ಯವನ್ನು ತಿದ್ದಿರುವುದಕ್ಕೆ ಸಂಬಂಧಿಸಿದೆ. ಆಲ್ಕೋಹಾಲ್ ಸೇವನೆಯ ಕುರಿತು ಪತ್ತೆಹಚ್ಚುವುದನ್ನು ತಪ್ಪಿಸಲು ಅಪ್ರಾಪ್ತನ ರಕ್ತದ ಮಾದರಿಯನ್ನು ಬದಲಾಯಿಸಲಾಗಿದೆ. ಆರೋಪಿಯ ರಕ್ತದ ಮಾದರಿ ಬದಲಿಸಿ ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಲಾಗಿತ್ತು ಎಂಬ ಆರೋಪವಿದೆ.

  • Viral Video: ಬಾನೆಟ್‌ ಮೇಲೆ ವ್ಯಕ್ತಿಯನ್ನ ಮಲಗಿಸಿ BMW ಕಾರು ಚಲಾಯಿಸಿದ ಅಪ್ರಾಪ್ತ!

    Viral Video: ಬಾನೆಟ್‌ ಮೇಲೆ ವ್ಯಕ್ತಿಯನ್ನ ಮಲಗಿಸಿ BMW ಕಾರು ಚಲಾಯಿಸಿದ ಅಪ್ರಾಪ್ತ!

    ಮುಂಬೈ: ಪೋರ್ಶೆ ಕಾರು ಅಪಘಾತದ ಬೆನ್ನಲ್ಲೇ ಮುಂಬೈನ 17 ವರ್ಷದ ಹುಡುಗನೊಬ್ಬ ವ್ಯಕ್ತಿಯೊಬ್ಬನನ್ನು BMW ಕಾರಿನ ಮೇಲೆ ಮಲಗಿಸಿಕೊಂಡು ಕಲ್ಯಾಣ್‌ನ ಜನನಿಬಿಡ ರಸ್ತೆಯಲ್ಲಿ ಪರವಾನಗಿ ಇಲ್ಲದೆ ಓಡಿಸಿದ ಘಟನೆ ಬೆಳಕಿಗೆ ಬಂದಿದೆ.

    ಪುಣೆ ಪೋರ್ಶೆ ಕಾರು ಅಪಘಾತದಲ್ಲಿ (Pune Porsche Car Accident) ಅಪ್ರಾಪ್ತ ತನ್ನ ಐಷಾರಾಮಿ ಕಾರನ್ನು ಬೈಕ್‌ಗೆ ಡಿಕ್ಕಿಯಾಗಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದನು. ಈ ಘಟನೆಯ ಬಗ್ಗೆ ಭಾರೀ ಆಕ್ರೋಶದ ನಡುವೆ ಈ ಘಟನೆ ಬೆಳಕಿಗೆ ಬಂದಿದೆ. ಈ ಸ್ಟಂಟ್‌ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ವೈರಲ್ ಆದ ತಕ್ಷಣ, ಪೊಲೀಸರು ಕಾರಿನ ಬಾನೆಟ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಸುಭಮ್ ಮಿಥಿಲಾ ಎಂದು ಗುರುತಿಸಿದ್ದಾರೆ. ಕಾರು ಚಾಲಕ 17 ವರ್ಷದ ಹುಡುಗ ಮತ್ತು ಅವನ ತಂದೆ, ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಅಪ್ರಾಪ್ತರು ಶನಿವಾರ ಥಾಣೆ ಜಿಲ್ಲೆಯ ಕಲ್ಯಾಣ್ ನಗರದ ಜನನಿಬಿಡ ಶಿವಾಜಿ ಚೌಕ್ ಪ್ರದೇಶದಲ್ಲಿ ಕಾರನ್ನು ಚಲಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಹನಿಮೂನ್ ಪೀರಿಯೆಡ್ ಮುಗಿದಿದ್ರೂ ಇನ್ನೂ ಅಭಿವೃದ್ಧಿ ಕೆಲಸ ಮಾಡ್ತಿಲ್ಲ: ವಿಜಯೇಂದ್ರ

    ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಗುಂಡ್ ಮಾತನಾಡಿ, ಸಾಮಾಜಿಕ ಮಾಧ್ಯಮದ ರೀಲ್ಸ್‌ಗಳಿಂದ ಪ್ರೇರಿತನಾಗಿ ಅಪ್ರಾಪ್ತ ತಂದೆ 5 ಲಕ್ಷ ರೂ.ಗೆ ಸೆಕೆಂಡ್ ಹ್ಯಾಂಡ್ ಬಿಎಂಡಬ್ಲ್ಯು ಕಾರನ್ನು ಖರೀದಿಸುವಂತೆ ಹಠ ಹಿಡಿದಿದ್ದಾನೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಯಲ್ಲಿ ಓಡಿಸಿದ್ದಾನೆ. ಇನ್ನು ಕಾರಿನ ಕಾರಿನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.‌

  • ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಪುಣೆ: ಪೋರ್ಶೆ ಕಾರು (Porsche Car Aciident) ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ವೈದ್ಯರನ್ನು ಪುಣೆ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

    ಸಾಸೂನ್ ಆಸ್ಪತ್ರೆಯ ಡಾ. ಶ್ರೀಹರಿ ಹಾರ್ಲರ್ ಮತ್ತು ಡಾ. ಅಜಯ್ ತಾವ್ರೆ ಬಂಧಿತರು. ಡಾ. ಅಜಯ್ ತಾವ್ರೆ, ಸಸೂನ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಮುಖ್ಯಸ್ಥನಾದರೆ, ಡಾ. ಶ್ರೀಹರಿ ಹರ್ಲೋಲ್ ಅವರು ತುರ್ತು ವಿಭಾಗದಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ.

    ಪುಣೆಯ ಸಸೂನ್ ಆಸ್ಪತ್ರೆಯ ವೈದ್ಯರು ಅಪ್ರಾಪ್ತರ ರಕ್ತದ ಮಾದರಿ ವರದಿ ತಿರುಚಿರುವ ಆರೋಪ ಕೇಳಿ ಬಂದಿತ್ತು. ಅಪಘಾತಕ್ಕೆ ಕಾರಣನಾದ ಅಪ್ರಾಪ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆತನ ಕುಟುಂಬಸ್ಥರು ವೈದ್ಯರಿಗೆ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಬ್ಬರ ಸುದೀರ್ಘ ವಿಚಾರಣೆಯ ನಂತರ ಬಂಧಿಸಲಾಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಮೇ 19 ರಂದು ಮುಂಜಾನೆ 3:30 ರ ಸುಮಾರಿಗೆ ಕುಡಿದ ಅಮಲಿನಲ್ಲಿ ಅಪ್ರಾಪ್ತ ಆರೋಪಿಯು ತನ್ನ ಐಷಾರಾಮಿ ಪೋರ್ಶೆ ಕಾರಿನಿಂದ ಇಬ್ಬರ ಹತ್ಯೆಗೆ ಕಾರಣವಾದನು. ಆರಂಭದಲ್ಲಿ ಆರೋಪಿ ಮದ್ಯ ಸೇವಿಸಿಲ್ಲ ಎಂದು ತಿಳಿದು ಬಂದಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಈ ಪ್ರಕರಣದಲ್ಲಿ ಆರೋಪಿಯ ಅಜ್ಜ ಮತ್ತು ತಂದೆ ಮತ್ತು ಇಬ್ಬರು ವೈದ್ಯರು ಸೇರಿದಂತೆ ಒಟ್ಟು 9 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇವರಲ್ಲಿ ಪಬ್ ಮಾಲೀಕರು, ಇಬ್ಬರು ವ್ಯವಸ್ಥಾಪಕರು ಮತ್ತು ಇಬ್ಬರು ಸಿಬ್ಬಂದಿ ಸೇರಿದ್ದಾರೆ. ಅವರನ್ನು ಕೋಜಿ ರೆಸ್ಟೋರೆಂಟ್‌ನ ಮಾಲೀಕ ಪ್ರಹ್ಲಾದ್, ಅವರ ಮ್ಯಾನೇಜರ್ ಸಚಿನ್ ಕಾಟ್ಕರ್, ಬ್ಲಾಕ್ ಕ್ಲಬ್ ಹೋಟೆಲ್ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಮತ್ತು ಅವರ ಸಿಬ್ಬಂದಿ ಜಯೇಶ್ ಬೋಂಕರ್ ಮತ್ತು ನಿತೇಶ್ ಶೇವಾನಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಪ್ರಾಪ್ತ ಆರೋಪಿಗಳಿಗೆ ಮದ್ಯ ಬಡಿಸಿದ ಆರೋಪ ಹೊತ್ತಿದ್ದಾರೆ.

  • ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಪುಣೆ: ಪೋರ್ಶೆ ಕಾರು ಅಪಘಾತ (Pune Porsche crash) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಅಪ್ರಾಪ್ತನ ಅಜ್ಜನನ್ನು ಪುಣೆ ಪೊಲೀಸರು (Pune Police) ಇಂದು ಬಂಧಿಸಿದ್ದಾರೆ.

    ಸುರೇಂದ್ರ ಅಗರ್ವಾಲ್ ಬಂಧಿತ ಅಜ್ಜ. ಕಾರು ಅಪಘಾತ ಸಂದರ್ಭದಲ್ಲಿ ತಾನೇ ಪೋರ್ಶೆಯನ್ನು ಚಲಾಯಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಬೇಕು ಎಂದು ಚಾಲಕನಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುರೇಂದ್ರರನ್ನು ಬಂಧನ ಮಾಡಲಾಗಿದೆ.

    ಪುಣೆ ಕ್ರೈಂ ಬ್ರಾಂಚ್ ದಾಖಲಿಸಿದ ಹೊಸ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ಅವರನ್ನು ಅವರ ನಿವಾಸದಿಂದ ಮುಂಜಾನೆ 3 ಗಂಟೆಗೆ ಬಂಧಿಸಲಾಯಿತು. ಈ ಮೂಲಕ ಪುಣೆ ಪೋರ್ಶೆ ಅಪಘಾತ ಪ್ರಕರಣದಲ್ಲಿ ಇದು ಮೂರನೇ ಎಫ್‌ಐಆರ್ ಆಗಿದೆ.

    ಇದಕ್ಕೂ ಮೊದಲು ಸುರೇಂದ್ರ ಅಗರ್ವಾಲ್ ಅವರ ಮಗ ಮತ್ತು ಮೊಮ್ಮಗನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅಪಘಾತದ ದಿನದಂದು ನಡೆಸಿದ ಸಂಭಾಷಣೆಯನ್ನು ಬಯಲಿಗೆಳೆಯಲು ಪ್ರಶ್ನಿಸಿದ್ದರು. ಅಗರ್ವಾಲ್ ಮಾಲೀಕರಾಗಿದ್ದ ರಿಯಾಲ್ಟಿ ಸಂಸ್ಥೆಯ ಹೆಸರಿನಲ್ಲಿ ಪೋರ್ಶೆ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಹಣ ಪಾವತಿಸಿದ ಆರೋಪದ ಮೇಲೆ ಶೂಟೌಟ್ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

    ಏನಿದು ಪ್ರಕರಣ: ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು ಬೈಕ್‍ಗೆ ಡಿಕ್ಕಿಯಾಗಿ ಮಧ್ಯಪ್ರದೇಶ ಮೂಲದ ವರ್ಷದ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ (24) ಮತ್ತು ಅಶ್ವಿನಿ ಕೋಷ್ಟಾ ಅವರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಅಪ್ರಾಪ್ತನ ಬಳಿ ಪ್ರಬಂಧ ಬರೆಯುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಪೋಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದರು.

    ಸದ್ಯ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು, ಬಾಲಾಪರಾಧಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಮತ್ತು ರಿಮಾಂಡ್ ಹೋಮ್ಗೆ ಕಳುಹಿಸಲು ಬಾಲನ್ಯಾಯ ಮಂಡಳಿಯ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.

  • ಮದ್ಯ ಕುಡಿಯಲು 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ ಕಿಲ್ಲರ್‌ ಬಾಯ್‌ – ಮುಂದಾಗಿದ್ದೇನು ಗೊತ್ತೇ?

    ಮದ್ಯ ಕುಡಿಯಲು 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ ಕಿಲ್ಲರ್‌ ಬಾಯ್‌ – ಮುಂದಾಗಿದ್ದೇನು ಗೊತ್ತೇ?

    ಮುಂಬೈ: ಮದ್ಯದ ಅಮಲಿನಲ್ಲಿ ಐಷಾರಾಮಿ ಕಾರು ಚಲಾಯಿಸಿ ಇಬ್ಬರು ಟೆಕ್ಕಿಗಳ ಸಾವಿಗೆ (Pune Porsche horror) ಕಾರಣನಾದ ಆಪ್ರಾಪ್ತನಿಗೆ ಜಾಮೀನು ನೀಡಿದ್ದ ವಿಚಾರದಲ್ಲಿ ಇಡೀ ದೇಶದಲ್ಲೇ ಭಾರೀ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಪುಣೆ ಪೊಲೀಸ್ ಆಯುಕ್ತರಾದ (Pune Police commissioner) ಅಮಿತೇಶ್ ಕುಮಾರ್ ಸ್ಫೋಟಕ ಮಾಹಿತಿಯೊಂದನ್ನ ನೀಡಿದ್ದಾರೆ.

    ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್‌ ಆಯುಕ್ತರು, ಇಬ್ಬರು ಟೆಕ್ಕಿಗಳಿಗೆ (Techies) ಕಾರು ಡಿಕ್ಕಿ ಹೊಡೆಯುವ ಮುನ್ನ ಅಪ್ರಾಪ್ತ ಎರಡು ಬಾರ್‌ಗಳಿಗೆ ಹೋಗಿದ್ದ. ಅದರಲ್ಲಿ ಮೊದಲನೇ ಬಾರ್‌ಗೆ ಹೋಗಿದ್ದಾಗ ಮದ್ಯಕ್ಕಾಗಿ ಕೇವಲ 90 ನಿಮಿಷದಲ್ಲಿ 48 ಸಾವಿರ ರೂ. ಖರ್ಚು ಮಾಡಿದ್ದಾನೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ

    ಹೌದು. ಶನಿವಾರ ರಾತ್ರಿಯೇ ಅಪ್ರಾಪ್ತ ತನ್ನ ಸ್ನೇಹಿತರೊಟ್ಟಿಗೆ ರಾತ್ರಿ 10:40ರ ವೇಳೆಗೆ ಕೋಸಿ ರೆಸ್ಟೋರೆಂಟ್-ಪಬ್‌ಗೆ ಹೋಗಿದ್ದಾನೆ. ಅಲ್ಲಿ ಕೇವಲ 90 ನಿಮಿಷದಲ್ಲೇ 48 ಸಾವಿರ ರೂ. ಖರ್ಚು ಮಾಡಿದ್ದಾನೆ. ಅಲ್ಲಿ ಸೇವೆ ನೀಡಲು ನಿಲ್ಲಿಸಿದ ನಂತರ ತಡರಾತ್ರಿ 12:10ರ ವೇಳೆಗೆ ಬ್ಲ್ಯಾಕ್ ಮ್ಯಾರಿಯೊಟ್‌ ಪಬ್‌ಗೆ ತೆರಳಿದ್ದಾನೆ. ಆದ್ರೆ 48 ಸಾವಿರ ರೂ. ವೆಚ್ಚ ಆತನದ್ದೊಬ್ಬನದ್ದೇ ಅಲ್ಲ. ಸ್ನೇಹಿತರಿಗೂ ಕೊಡಿಸಿದ ವೆಚ್ಚ ಸೇರಿ ಆಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿರುವುದಾಗಿ ವರದಿಯಾಗಿದೆ.

    ಭಾನುವಾರ ಅಪ್ತಾಪ್ತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಆತನ ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಸದ್ಯ ಆರೋಪಿ ವಿರುದ್ಧ ಸೆಕ್ಷನ್‌ 304 ಮತ್ತು 304 (ಎ) ಅನ್ವಯ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್‌; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ

    ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ:
    ಪ್ರಭಾವಿ ಬಿಲ್ಡರ್ ಪುತ್ರನಿಗೆ ಪೊಲೀಸರು ಠಾಣೆಯಲ್ಲಿ ರಾಜ ಮರ್ಯಾದೆ ನೀಡಿದ್ರು. ಪಿಜ್ಜಾ, ಬರ್ಗರ್, ಬಿರಿಯಾನಿ ತಿನ್ನಿಸಿ ವಿವಿಐಪಿ ಆತಿಥ್ಯ ಕೊಟ್ಟಿದ್ರು ಎಂಬ ವಿಚಾರ ಬಯಲಾಗಿದೆ.

    ಇದು ಗೊತ್ತಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸಾಕಷ್ಟು ಟೀಕೆ, ಆಕ್ರೋಶದ ನಂತ್ರ ಎಚ್ಚೆತ್ತ ಪೊಲೀಸರು, 17 ವರ್ಷದ ಯುವಕನ ತಂದೆ, ಬಿಲ್ಡರ್ ವಿಶಾಲ್ ಅಗರ್ವಾಲ್‌ರನ್ನು ಬಂಧಿಸಿದ್ದಾರೆ. ಅಪ್ರಾಪ್ತ ಮಗನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿರುವುದು. ಅವರಿಗೆ ಮಾದಕವಸ್ತುಗಳನ್ನು ಸಿಗುವಂತೆ ಮಾಡಿದ ಆರೋಪದಡಿ ಅಪ್ರಾಪ್ತನ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ, ಅಪ್ರಾಪ್ತನಿಗೆ ಮದ್ಯ ಪೂರೈಸಿದ ಆರೋಪದ ಮೇರೆಗೆ ಕೋಸಿ ರೆಸ್ಟೋರೆಂಟ್ ಮಾಲಿಕ ಸಚಿನ್ ಕಾಟ್ಕರ್, ಹೋಟೆಲ್ ಬ್ಲಾಕ್ ಮ್ಯಾನೇಜರ್ ಸಂದೀಪ್ ಸಾಂಗ್ಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಮತಾಗೆ ನಿಮ್ಮ ಬೆಲೆ ಎಷ್ಟು ಎಂದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ 24 ಗಂಟೆ ಪ್ರಚಾರದಿಂದ ನಿಷೇಧ

    ಬೆಂಗಳೂರಿನ ಪೋರ್ಶೆ ಶೋರೂಂನಲ್ಲೇ ಈ ಕಾರು ಖರೀದಿ ಮಾಡಿದ್ದು, ನಂಬರ್ ಪ್ಲೇಟ್ ಇಲ್ಲದೇ 1,600 ಕಿಲೋಮೀಟರ್ ಸಂಚಾರ ಮಾಡಿರೋದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಮಧ್ಯೆ, ಅಪಘಾತ ಎಸಗಿದ ಅಪ್ರಾಪ್ತ ಬಾರ್‌ನಲ್ಲಿ ಮದ್ಯ ಸೇವಿಸುವ. ಮಾರ್ಗಮಧ್ಯೆ ಇಬ್ಬರು ಟೆಕ್ಕಿಗಳಿಗೆ ಕಾರನ್ನು ಡಿಕ್ಕಿ ಹೊಡೆಸುವ ದೃಶ್ಯಾವಳಿಗಳು ವೈರಲ್ ಆಗಿವೆ. 200 ಕಿಲೋಮೀಟರ್ ವೇಗದಲ್ಲಿ ಪೋರ್ಶೆ ಕಾರನ್ನು ಓಡಿಸಿದ್ದ ಅಪ್ರಾಪ್ತ, ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಅನಿಶ್ ಮತ್ತು ಅಶ್ವಿನಿ ಮೃತಪಟ್ಟಿದ್ದರು.

  • ಬೆಂಗ್ಳೂರಲ್ಲಿ ನಿಲ್ಲದ ದೊಡ್ಡವರ ಮಕ್ಕಳ ಆಕ್ಸಿಡೆಂಟ್ – Textile ಮಾಲೀಕನ ಮಗನ ಕಾರು ಅಪಘಾತ

    ಬೆಂಗ್ಳೂರಲ್ಲಿ ನಿಲ್ಲದ ದೊಡ್ಡವರ ಮಕ್ಕಳ ಆಕ್ಸಿಡೆಂಟ್ – Textile ಮಾಲೀಕನ ಮಗನ ಕಾರು ಅಪಘಾತ

    – ಕಾರಿಗೆ ಡಿಕ್ಕಿಯಾಗಿ ಆಸ್ಪತ್ರೆಗೆ ಗೇಟ್‍ಗೆ ಗುದ್ದಿದ ಪೋರ್ಶೆ ಕಾರ್

    ಬೆಂಗಳೂರು: ದೊಡ್ಡವರ ಮಕ್ಕಳು ಇತ್ತೀಚೆಗೆ ನಡೆದಿದ್ದ ಸರಣಿ ಅಪಘಾತದ ಬಳಿಕವು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೊಂದು ಐಷಾರಾಮಿ ಕಾರು ಅಪಘಾತ ನಡೆದಿದೆ.

    ಈ ಘಟನೆ ದೊಮ್ಮಲೂರು ರಸ್ತೆಯ ಮಿಲಿಟರಿ ಆಸ್ಪತ್ರೆ ಬಳಿ ನಡೆದಿದೆ. ಜಾವೆರ್ ಮೆವಾನಿ ಎಂಬಾತ ಕಾರು ಚಲಾಯಿಸುತ್ತಿದ್ದು, ಈತ ಟೆಕ್ಸ್ ಟೈಲ್ ಮಾಲೀಕ ಕರೀಂ ಮೆವಾನಿ ಪುತ್ರ. ಇಟಿಯೊಸ್ (Etios Car) ಕಾರಲ್ಲಿ ಕೇಶವಮೂರ್ತಿ, ಇಬ್ಬರು ಪ್ರಯಾಣಿಕರು ಪ್ರಯಾಣಿಸ್ತಿದ್ದರು. ಇದನ್ನೂ ಓದಿ: ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು

    ಇಂದಿರಾನಗರದಲ್ಲಿ ಮೋಜು ಮಸ್ತಿ ಮುಗಿಸಿ ಬರ್ತಿದ್ದ ಪೋರ್ಶೆ ಕಾರು (Porsche Car) ಅಪಘಾತಕ್ಕೀಡಾಗಿದೆ. ರೆಡ್ ಇಟಿಯೊಸ್ ಕಾರಿಗೆ ಹಿಂಬದಿಯಿಂದ ಪೋರ್ಶೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

    ಬಿಳಿ ಪೋರ್ಶೆ ಕಾರು 100 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿತ್ತು. ಜಾವೆರ್ ಮೆವಾನಿ ನಿರ್ಲಕ್ಷ್ಯದಿಂದ ಐಷಾರಾಮಿ ಕಾರು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.