ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲು ಚಿಂತನೆ ನಡೆದಿದೆ. ಕೇಂದ್ರ ಗೃಹ ಇಲಾಖೆ ಈ ಬಗ್ಗೆ ತಯಾರಿ ಆರಂಭಿಸಿದ್ದು, ಮುಂದಿನ ಒಂದು ವಾರದಲ್ಲಿ ಸಂಘಟನೆ ನಿಷೇಧವಾಗುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಮೂಲಗಳು ಹೇಳಿವೆ.
ಹಲವು ದೂರುಗಳ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಪಿಎಫ್‌ಐ ದೇಶದಲ್ಲಿ ಶಾಂತಿ ಕದಡುವುದು, ವೈಷಮ್ಯ ಭಿತ್ತುವುದು, ಭಯೋತ್ಪಾದನೆಗೆ ಬೆಂಬಲ ಹಾಗೂ ಕೋಮು ಪ್ರಚೋದನೆ ನೀಡುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕ್ರೇಜ್
ಈ ಸಂಬಂಧ ಅಜಯ್ ಭಲ್ಲಾ ವರದಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳದಿಂದಲೂ ಮಾಹಿತಿ ಕೋರಲಾಗಿದೆ. ಕೇರಳದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಣೆ ಹಾಗೂ ಬೆಂಗಳೂರಿನಲ್ಲಿ ಹಲವು ಗಲಭೆಗಳ ಹಿಂದೆ ಪಿಐಎಫ್ ಪಾತ್ರ ಇರುವ ಬಗ್ಗೆ ರಾಜ್ಯ ಸರ್ಕಾರಗಳಿಂದ ಗೃಹ ಇಲಾಖೆ ಮಾಹಿತಿ ತರಿಸಿಕೊಂಡಿದೆ.
ಈ ಎಲ್ಲ ವರದಿಗಳನ್ನು ಆಧರಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಭಾರತದಲ್ಲಿ ಬ್ಯಾನ್ ಮಾಡಲು ತಯಾರಿ ನಡೆಯುತ್ತಿದೆ. ಈವರೆಗೂ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೇರಣೆ ನೀಡುವ 42 ಮತ್ತು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥಿತೆ ಹದಗೆಡಿಸುವ 11 ಸಂಘಟನೆಗಳನ್ನು ಗೃಹ ಇಲಾಖೆ ನಿಷೇಧಿಸಿದೆ. ಇದನ್ನೂ ಓದಿ: RSS ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ ಎಂಬ ರತನ್ ಟಾಟಾ ಪ್ರಶ್ನೆಗೆ ಗಡ್ಕರಿ ಉತ್ತರ ಹೀಗಿತ್ತು
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿ ತಿಂಗಳು ಕಳೆದರೂ, ಇದರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಘ ಪರಿವಾರ ನಾಯಕರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಿ ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.
ಯುವಕರಿಗೆ ತ್ರಿಶೂಲ ವಿತರಣೆ ಮಾಡಿದ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದಾಗ ಮಂಗಳೂರು ಪೊಲೀಸ್ ಕಮಿಷನರ್ ಅವರು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಕಮಿಷನರ್ ಅವರು ಇದರ ಕುರಿತಾದ ಯಾವುದೇ ವಿಚಾರವನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!
ಈ ಬಗ್ಗೆ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಪರಿವಾರದ ಕೋಮು ಪ್ರಚೋದನೆಯಿಂದಾಗಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಿಂಸಾಕೃತ್ಯಗಳು ನಡೆದಾಗ ತ್ರಿಶೂಲದ ವಿಚಾರವೂ ಚರ್ಚೆಗೆ ಬರುತ್ತಿದೆ. ಸಂಘಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಮತ್ತು ಇತರ ನಾಯಕರ ಪ್ರಚೋದನೆಯ ಬಳಿಕ ಪುತ್ತೂರಿನ ಕೊಂಬೆಟ್ಟು ಕಾಲೇಜಿನಲ್ಲಿ ಎ.ಬಿ.ವಿ.ಪಿ ವಿದ್ಯಾರ್ಥಿಗಳು ಮುಸ್ಲಿಮ್ ವಿದ್ಯಾರ್ಥಿಗಳಿಗೆ ತ್ರಿಶೂಲದಿಂದ ಇರಿದಿರುವ ವಿಚಾರ ಕೇಳಿಬಂದಿದೆ. ಸಂಘಪರಿವಾರದ ಪ್ರಚೋದನೆಯಿಂದ ಕೊಂಬೆಟ್ಟು ಕಾಲೇಜಿನಲ್ಲಿ ಮುಸ್ಲಿಮ್ ಯುವಕರನ್ನು ಗುರಿಪಡಿಸಿಕೊಂಡು ನಿರಂತರ ದಾಳಿಗಳನ್ನು ನಡೆಸಲಾಗುತ್ತಿದ್ದು, ಇದು ವಾರದೊಳಗೆ ನಡೆದ ನಾಲ್ಕನೇ ದಾಳಿಯಾಗಿದೆ. ಅದೇ ರೀತಿ, ತ್ರಿಶೂಲ ದೀಕ್ಷೆಯನ್ನು ತಾವು ಸಾಂಕೇತಿಕವಾಗಿ ನಡೆಸಿದ್ದೇವೆ ಎಂದು ಸಂಘಪರಿವಾರದ ಮುಖಂಡರು ಹೇಳಿಕೆ ನೀಡಿದ್ದರಾದರೂ, ಆ ನಂತರದ ದಿನಗಳಲ್ಲಿ ಉಪ್ಪಿನಂಗಡಿಯ ವಳಾಲ್ ಸಮೀಪ ನಡೆದ ಅಪಘಾತದ ವೇಳೆ ದ್ವಿಚಕ್ರವಾಹನದ ಸೀಟಿನ ಹಿಂಬದಿ ತ್ರಿಶೂಲ ಇಟ್ಟಿರುವುದು ಬಹಿರಂಗವಾಗಿತ್ತು. ವಾಹನದಲ್ಲಿ ತ್ರಿಶೂಲವಿಟ್ಟು ಸಾರ್ವಜನಿಕವಾಗಿ ತಿರುಗಾಡುತ್ತಿದ್ದ ಯುವಕರ ದುರುದ್ದೇಶದ ಬಗ್ಗೆ ತನಿಖೆಯಾಗಬೇಕಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಅಂತಹ ಬೆಳವಣಿಗೆ ಕಂಡು ಬರಲಿಲ್ಲ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ
ಅನೈತಿಕ ಪೊಲೀಸ್ ಗಿರಿಯ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಸೆಕ್ಷನ್ ಹಾಕಿ ಜೈಲಿಗೆ ತಳ್ಳುವ ಬದಲು ಅವರಿಗೆ ದುರ್ಬಲ ಸೆಕ್ಷನ್ ಹಾಕಿ ಠಾಣೆಯಲ್ಲಿಯೇ ಜಾಮೀನು ದೊರಕುವಂತೆ ಮಾಡಲಾಯಿತು. ತ್ರಿಶೂಲ ದೀಕ್ಷೆಯ ಬಳಿಕ ಹಿಂಸಾಕೃತ್ಯಗಳಲ್ಲಿ ತ್ರಿಶೂಲ ಬಳಕೆಯ ವಿಚಾರವೂ ಕೇಳಿ ಬಂತು. ಇದೀಗ ಹಿಂದೂ ಜಾಗರಣ ವೇದಿಕೆಯ ಪ್ರಾಂತಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಸಾಂವಿಧಾನಿಕ ಹುದ್ದೆಯಲ್ಲಿರುವ ಜಿಲ್ಲಾಧಿಕಾರಿಯವರನ್ನು ಕೊರಳಪಟ್ಟಿ ಹಿಡಿದು ಥಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಆ ನಂತರ ಹಿಂಜಾವೇ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಪುಂಜಲ್ ಕಟ್ಟೆ ಸಬ್ ಇನ್ಸ್ ಪೆಕ್ಟರ್ ಕಾಲು ಮುರಿಯುತ್ತೇನೆಂದು ಬೆದರಿಯೊಡ್ಡಿದ. ಈ ರೀತಿ ಸರ್ಕಾರಿ ಅಧಿಕಾರಿಗಳ ಮೇಲೆ ಬೆದರಿಕೆಯೊಡ್ಡುವಾಗಲೂ, ಸಂಘಪರಿವಾರ ನಾಯಕರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟುವ ಪ್ರಕ್ರಿಯೆ ಕಂಡು ಬರುತ್ತಿಲ್ಲ. ಇಂತಹ ಬೆಳವಣಿಗೆಗಳು ಸಾರ್ವಜನಿಕರು ಕಾನೂನು ಸುವ್ಯಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಲಿದೆ. ಇದನ್ನೂ ಓದಿ: ಪೊಲೀಸರಿಗೆ ತ್ರಿಶೂಲಗಳನ್ನು ಕೊಟ್ಟು ಹಿಂಸೆಯ ದೀಕ್ಷೆ ಕೊಡಿ: ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಸಾಮಾಜಿಕ ಸಾಮರಸ್ಯಕ್ಕೆ ಮಾರಕವಾಗಿರುವ ತ್ರಿಶೂಲ ವಿತರಣೆಯ ವಿರುದ್ಧ ದೂರು ನೀಡಿದ್ದರೂ, ಇನ್ನೂ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡು ಸಂಘಪರಿವಾರದ ಕಾರ್ಯಕರ್ತರಿಗೆ ನಡೆಸಲಾಗಿರುವ ತ್ರಿಶೂಲ ವಿತರಣೆಯ ಹಿಂದಿನ ಪಿತೂರಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಗಲಭೆ ಹರಡುವ ನಿಟ್ಟಿನಲ್ಲಿ ಹಿಂಸಾಕೃತ್ಯಗಳಿಗೆ ಬಳಸಲಾಗುತ್ತಿರುವ ತ್ರಿಶೂಲಗಳನ್ನು ಪೊಲೀಸರು ಕೂಡಲೇ ವಶಪಡಿಸಿಕೊಳ್ಳಬೇಕು. ಒಂದು ವೇಳೆ ತ್ರಿಶೂಲ ದೀಕ್ಷೆ ಕಾನೂನುಬದ್ಧವಾಗಿದ್ದರೆ, ಆತ್ಮ ರಕ್ಷಣೆಗಾಗಿ ಅಂತಹ ಮಾರಕಾಸ್ತ್ರಗಳನ್ನು ಜೊತೆಗಿಟ್ಟುಕೊಳ್ಳಲು ಸಾರ್ವಜನಿಕರಿಗೂ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಡಬೇಕೆಂದರು.
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಅತ್ಯಂತ ಭೀಕರವಾಗಿತ್ತು. ಈ ಹಿಂದೆ ಕೊರೊನಾದಿಂದ ಮೃತಪಟ್ಟರೆ ಜೆಸಿಬಿಯಿಂದ ಶವವನ್ನು ತಂದು, ಗುಂಡಿಗಳಿಗೆ ಎಳೆದು ತಂದು ಬಿಸಾಕುವ ಮೂಲಕ ನಿರ್ಲಕ್ಷ್ಯವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ ಇದೀಗ ಕೊರೊನಾ ರೋಗಿಗಳಿಗೆ ಮರ್ಯಾದೆಯ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.
ಹೌದು. ಫ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ದಿಂದ ಕೊರೊನಾದಿಂದ ಮೃತಪಟ್ಟವರ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸುವ ಕಾರ್ಯ ಮಾಡುತ್ತಿದೆ. ಪಿಎಫ್‍ಐ ಯುವಕರ ತಂಡ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿದೆ. ಈ ತಂಡ ಇದುವರೆಗೆ 47 ಶವಗಳನ್ನು ಕರ್ನಾಟಕದಲ್ಲಿ ಅಂತ್ಯಸಂಸ್ಕಾರ ಮಾಡಿದೆ.
ಈ ತಂಡ ಮಾಡುತ್ತಿರುವ ಕೆಲಸ ನೋಡಿದರೆ ಭಯನೂ ಆಗುತ್ತೆ. ಮನಸ್ಸು ಭಾರನೂ ಆಗುತ್ತೆ. ಕೊರೊನಾದಿಂದ ಸಾವನ್ನಪ್ಪಿದರೆ ಮನೆಯವರೇ ಹತ್ತಿರ ಬಾರದ ಪರಿಸ್ಥಿತಿಯಲ್ಲೂ ಅಪರಿಚಿತರ ಶವಕ್ಕೆ ಯುವಕರು ಹೆಗಲು ಕೊಡುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮುನ್ನಚ್ಚರಿಕೆಯೊಂದಿಗೆ, ಪಿಪಿಇ ಕಿಟ್ ಧರಿಸಿ ಸೋಂಕಿತರ ಅಂತ್ಯಕ್ರಿಯೆ ಮಾಡಿದ್ದಾರೆ.
ಶಿವಮೊಗ್ಗ, ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗದಲ್ಲಿ ಅಂತಿಮಸಂಸ್ಕಾರ ಮಾಡುತ್ತಿದ್ದಾರೆ. ಈ ತಂಡ ವೈಜ್ಞಾನಿಕವಾಗಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತಿಮ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ಮಂಗಳೂರು: ಕೊರೊನಾ ಸೋಂಕಿಗೆ ಬಲಿಯಾದ ಮಂಗಳೂರಿನ ಎರಡನೇ ಮೃತ ದೇಹದ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಇಂದು ಕೊರೊನಾ ಸೋಂಕಿನಿಂದ ಮೃತರಾದ ಉಳ್ಳಾಲ ನಿವಾಸಿ ಮಹಿಳೆಯ ದಫನ್ ಕಾರ್ಯವನ್ನು ರಫೀಕ್ ಉಳ್ಳಾಲರವರ ನೇತೃತ್ವದಲ್ಲಿ ಉಳ್ಳಾಲದ ಮಸೀದಿಯಲ್ಲಿ ನೆರವೇರಿಸಲಾಯಿತು. ಉಳ್ಳಾಲದ ಸ್ಥಳೀಯ ಯುವಕರು ಸ್ವಯಂಪ್ರೇರಿತರಾಗಿ ಸಹಕರಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸ್ಥಳೀಯ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಮೊದಲು ಜೂನ್ 23ರಂದು ಮಂಗಳೂರಿನಲ್ಲಿ ಮೃತರಾದ ವ್ಯಕ್ತಿಯ ದಫನ್ ಕಾರ್ಯವನ್ನೂ ಪಿಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಮುಝೈರ್ ಕುದ್ರೋಳಿಯವರ ತಂಡ ಮಂಗಳೂರಿನ ಬೋಳಾರದ ಮಸೀದಿಯಲ್ಲಿ ನೆರವೇರಿಸಲಾಯಿತು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಪಿಎಫ್‍ಐ ವತಿಯಿಂದ ಆಯ್ದ 30 ಮಂದಿ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೊರೊನಾ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರದ ಮಾಹಿತಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ.ನವೀನ್ ಕುಮಾರ್ ಅವರಿಂದ ತರಬೇತಿ ನೀಡಲಾಗಿತ್ತು. ಇಲ್ಲಿ ತರಬೇತಿ ಪಡೆದ ಪಿಎಫ್‍ಐ ಕಾರ್ಯಕರ್ತರ ತಂಡ ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆಯ ನಿರ್ದೇಶನದಂತೆ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸುತ್ತಿದೆ. ಮುಂದೆಯೂ ಈ ತಂಡ ಇಂತಹ ಕೆಲಸಕ್ಕೆ ಸನ್ನದ್ದವಾಗಿದ್ದು, ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರವಾಗಿದೆ.