Tag: poorest cm

  • ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

    ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

    ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾಮ್ರ್ಸ್ ಸೋಮವಾರದಂದು ವರದಿಯೊಂದನ್ನ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಭಾರತದ 35 ಮುಖ್ಯಮಂತ್ರಿಗಳಲ್ಲಿ 25 ಜನ ಕೋಟ್ಯಾಧಿಪತಿಗಳಾಗಿದ್ದಾರೆ.

    ಇವರಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು 177 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದು, ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಅರುಣಾಚಲಪ್ರದೇಶ ಸಿಎಂ ಪ್ರೇಮಾ ಖಾಂಡು ಇದ್ದು, 129 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮೂರನೇ ಅತ್ಯಂತ ಶ್ರೀಮಂತ ಸಿಎಂ ಪಂಜಾಬ್ ನ ಅಮರೀಂದರ್ ಸಿಂಗ್ 48 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

    ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 13.61 ಕೋಟಿ ರೂ. ಆಸ್ತಿ ಹೊಂದಿದ್ದು, ದೇಶದ ಮುಖ್ಯಮಂತ್ರಿಗಳ ಶ್ರೀಮಂತಿಕೆಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

    ವರದಿಯಲ್ಲಿ ಅತ್ಯಂತ ಬಡ ಸಿಎಂ ಗಳ ಬಗ್ಗೆಯೂ ಹೇಳಲಾಗಿದೆ. ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ 26 ಲಕ್ಷ ರೂ ಆಸ್ತಿಯೊಂದಿಗೆ ಅತ್ಯಂತ ಬಡವ ಸಿಎಂಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 30 ಲಕ್ಷ ರೂ ಆಸ್ತಿಯೊಂದಿಗೆ ಎರಡನೇ ಸ್ಥಾನ ಹಾಗೂ ಜಮ್ಮು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ 55 ಲಕ್ಷ ರೂ. ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

    ಮುಖ್ಯಮಂತ್ರಿಗಳ ಸರಾಸರಿ ಆಸ್ತಿ 16.18 ಕೋಟಿ ರೂ. ಎಂದು ವರದಿಯಲ್ಲಿ ಹೇಳಲಾಗಿದೆ. ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತುತ ಮುಖ್ಯಮಂತ್ರಿಗಳು ಸ್ವತಃ ಘೋಷಿಸಿಕೊಂಡಿರುವ ಅಫಿಡವಿಟ್‍ಗಳ ಆಧಾರದ ಮೇಲೆ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾಮ್ರ್ಸ್(ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್(ಎನ್‍ಇಡಬ್ಯೂ) ಸಿಎಂಗಳ ಆದಾಯವನ್ನ ವಿಶ್ಲೇಷಿಸಿದೆ.

    31 ಸಿಎಂಗಳಲ್ಲಿ 8 ಅಥವಾ 26% ಸಿಎಂಗಳ ಮೇಲೆ ಕೊಲೆ, ಕೊಲೆ ಯತ್ನ, ವಂಚನೆ ಮುಂತಾದ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿ ಹೇಳಿದೆ. 31 ಸಿಎಂಗಳಲ್ಲಿ ಮೂವರು ಮಾತ್ರ ಮಹಿಳೆಯರಿದ್ದಾರೆ. ರಾಜಸ್ಥಾನ ಸಿಎಂ ವಸುಂಧರಾ ರಾಜೆ ಸಿಂಧಿಯಾ, ಜಮ್ಮು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ.

    ಅತ್ಯಂತ ಕಿರಿಯ ಸಿಎಂ ಅರುಣಾಚಲ ಪ್ರದೇಶದ ಪ್ರೇಮಾ ಖಾಂಡು ಅವರಿಗೆ 35 ವರ್ಷ ವಯಸ್ಸು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಅವರಿಗೆ 44 ವರ್ಷ ವಯಸ್ಸು ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 45 ವರ್ಷ ವಯಸ್ಸು. ಹಾಗೇ ಅತ್ಯಂತ ಹಿರಿಯ ಸಿಎಂಗಳ ಪೈಕಿ ಮೊದಲಿಗಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರಿಗೆ 74 ವರ್ಷ ವಯಸ್ಸು, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ 72 ವರ್ಷ ಹಾಗೂ ಮಿಜೋರಾಮ್ ಸಿಎಂ ಲಾಲ್ ತನ್ಹಾವ್ಲಾ ಅವರಿಗೆ 71 ವರ್ಷ ವಯಸ್ಸು.

    ಶೈಕ್ಷಣಿಕ ಅರ್ಹತೆಯಲ್ಲಿ ಮೂವರು ಸಿಎಂಗಳು 12ನೇ ತರಗತಿ ಪಾಸ್ ಆಗಿದ್ದರೆ, 12 ಸಿಎಂಗಳು ಪದವೀಧರರು ಹಾಗೂ 10 ಸಿಎಂಗಳು ಪದವಿ ವೃತ್ತಿಪರರಾಗಿದ್ದು, ಐವರು ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಒಬ್ಬರು ಮುಖ್ಯಮಂತ್ರಿ ಮಾತ್ರ ಡಾಕ್ಟರೇಟ್ ಪದವಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.